ಮರಳಕುಂಟೆಯಲ್ಲಿ ಡ್ರ್ಯಾಗನ್ ಹಣ್ಣಿನ ಸಾಮ್ರಾಜ್ಯ

June 15, 2019 ⊄   By: -ಶೋಭಾ ವೆಂಕಟೇಶ್

ಬರದ ನಾಡು ಚಿಕ್ಕಬಳ್ಳಾಪುರದ ಮರಳಕುಂಟೆಯಲ್ಲಿ ಪ್ರಗತಿ ಪರ ರೈತ ನಾರಾಯಣಸ್ವಾಮಿ ಅವರು ವಿದೇಶಿ ಹಣ್ಣನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಈ ಮೂಲಕ ತೋಟಗಾರಿಕೆಯಲ್ಲಿ ಉಳಿದವರಿಗೂ ಮಾದರಿಯಾಗಿದ್ದಾರೆ. ಅವರ ಯಶೋಗಾಥೆ ಇಲ್ಲಿದೆ...

ಚಿಕ್ಕಬಳ್ಳಾಪುರ ಮೊದಲೇ ಬರದನಾಡು, ಕುಡಿಯುವುದಕ್ಕೂ ಯೋಗ್ಯ ನೀರಿಲ್ಲ, ಇನ್ನು ಕೃಷಿಗೆ ಎಲ್ಲಿಂದ ನೀರು ಹಾಯಿಸುವುದು? ಹಾಘೆಂದು ಇಲ್ಲಿನ ರೈತರು ಮಳೆಗೆ ಎದುರು ನೋಡುತ್ತ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅದಿಲ್ಲದಿದ್ದರೆ ಇದು, ಇದಿಲ್ಲದಿದ್ದರೆ ಮತ್ತೊಂದು... ಹೀಗೆ ಏನಾದರೊಂದು ಕೃಷಿ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ ಇಲ್ಲಿನ ಬಹುತೇಕ ರೈತರು. ಇರುವ ಅಲ್ಪ ಸ್ವಲ್ಪ ನೀರನ್ನು ಬಳಸಿಕೊಂಡೇ ಹನಿ ನೀರಾವರಿ ಮೂಲಕ ಸಮೃದ್ಧ ಫಸಲನ್ನು ಪಡೆಯುತ್ತಾರೆ. ಉಳಿದವರಿಗೂ ಮಾದರಿಯಾಗುತ್ತಿದ್ದಾರೆ. ನಿಮಗೆ ಗೊತ್ತೇ? ಹೈನೋದ್ಯಮದ ಜತೆಗೆ ಅತಿ ಹೆಚ್ಚು ತರಕಾರಿ, ಹಣ್ಣು, ಹೂವು ಬೆಳೆಯುವ ರಾಜ್ಯದ ಪ್ರದೇಶವೆಂದರೆ ಚಿಕ್ಕಬಳ್ಳಾಪುರ. ಇವೆಲ್ಲದರ ನಡುವೆ ಇಲ್ಲೊಬ್ಬರು ರೈತರು ದೇಶಿ ತಳಿಯಲ್ಲದೇ ವಿದೇಶಿ ಹಣ್ಣನ್ನು ಕೂಡ ಬೆಳೆಯಬಹುದು ಎಂಬುದನ್ನು ಸಾಧಿಸಿ ತೋರಿಸಿ ಅಚ್ಚರಿ ಮೂಡಿಸಿದ್ದಾರೆ.
ಸಾಲು ಸಾಲಾಗಿ ನಿಂತಿರುವ ಕಂಬಗಳು, ಅದರಲ್ಲಿ ಬಳುಕಿರುವ ಮುಳ್ಳಿನ ಬಳ್ಳಿ, ಬಳ್ಳಿಯ ತುಂಬ ಬಿಳಿ ಬಣ್ಣದ ಹೂವು ಹಾಗೂ ಗುಲಾಬಿ ಬಣ್ಣದ ಹಣ್ಣು. ಬಹುತೇಕರು ನೋಡಿಯೂ ರಲಿಕ್ಕಿಲ್ಲ. ಆಕಾರದಲ್ಲಿ ಥಟ್ಟನೆ ನಮ್ಮ ರಾಮಫಲವನ್ನು ನೆನಪಿಸಿದರೂ ಅದಕ್ಕಿಂತ ಸಂಪೂರ್ಣ ವಿಭಿನ್ನ . ಹೀಗಿದ್ದರೂ ತಿನ್ನುವುದಕ್ಕೆ ಮಾತ್ರ ಬಲು ರುಚಿ. ಮಾತ್ರವಲ್ಲ, ಆರೋಗ್ಯಕ್ಕೂ ಬಲು ಉಪಯುಕ್ತ. ಇದರ ಹೆಸರು ‘ಡ್ರ್ಯಾಗನ್ ಫ್ರೂಟ್’. ಚೀನೀಯರ ಪೌರಾಣಿಕ ಕಲ್ಪನೆಯ ಪ್ರಾಣಿ ಡ್ರಾಗನ್ನಂತೆಯೇ ಇರುವುದರಿಂದ ಇದನ್ನು ಆ ಹೆಸರಿನಿಂದಲೇ ಕರೆಯುವುದು. ರಾಜ್ಯದಲ್ಲೇ ಮೊದಲ ಬಾರಿಗೆ ವಿದೇಶಿ ತಳಿಯ ಬಹುಬೇಡಿಕೆಯ ಈ ವಿಶಿಷ್ಟ ಹಣ್ಣನ್ನು ಬೆಳೆಯುವಲ್ಲಿ ಪ್ರಗತಿಪರ ರೈತ ಚಿಕ್ಕಬಳ್ಳಾಪುರದ ಮರಳಕುಂಟೆ ನಾರಾಯಣಸ್ವಾಮಿ ಸೈ ಎನಿಸಿಕೊಂಡಿದ್ದಾರೆ

ಏನಿದು ಡ್ರ್ಯಾಗನ್ ಫ್ರೂಟ್?
ಅಮೆರಿಕ ಮೂಲದ ಡ್ರ್ಯಾಗನ್ ಫ್ರೂಟ್ ಅನ್ನು ರಷ್ಯಾ, ಜಪಾನ್ಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕಿವಿ ಹಣ್ಣಿನ ಮಾದರಿಯಲ್ಲೇ ಬಹುಪಯೋಗಿಯಾಗಿರುವ ಈ ಹಣ್ಣಿಗೆ ಬಹುಬೇಡಿಕೆ ಇದೆ. ಒಂದು ಕೆ.ಜಿಗೆ ೧೨೦ರಿಂದ ೧೫೦ ರೂಗಳವರೆಗೂ ಮಾರಾಟವಾಗುತ್ತಿದೆ. ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಬೆಂಗಳೂರಿನ ಮಾಲ್ಗಳಲ್ಲಿ ಸಿಗುವ ಈ ಹಣ್ಣುಗಳನ್ನು ಸಾಮಾನ್ಯವಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಮಹಾರಾಷ್ಟ್ರ, ಪಂಜಾಬ್ಗಳಲ್ಲಿ ಮಾತ್ರವೇ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ಆದರೆ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿಲ್ಲ. ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿರುವುದು ಚಿಕ್ಕಬಳ್ಳಾಪುರದಲ್ಲಿ ಮಾತ್ರ.ರೈತನ ಸಾಧನೆ
ಮರಳುಕುಂಟ್ಟೆ ನಾರಾಯಣಸ್ವಾಮಿ ಅವರು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸೋಲರ್ ರೂಫ್ ಟಾಪ್ ಯೋಜನೆಯ ಮೂಲಕ ಸೌರ ವಿದ್ಯುತ್ ಉತ್ಪಾದನೆ ಮಾಡಿ ಮಾದರಿಯಾಗಿದ್ದವರು. ಸರ್ಕಾರವನ್ನು ನಂಬಿ ಸೋಲಾರ್ ರೂಫ್ ಟಾಪ್ ಯೋಜನೆಗೆ ಕೋಟಿ ಕೋಟಿ ಬಂಡವಾಳ ಹೂಡಿ ಕೈ ಸುಟ್ಟುಕೊಂಡರೂ ಹಿಂಜರಿಯದೆ ಮತ್ತೇನಾದರೂ ಹೊಸದನ್ನು ಶುರು ಮಾಡಬೇಕು ಎಂದು ಹೊರಟವರು. ಯೂಟ್ಯೂಬ್ನಲ್ಲಿ ವೀಡಿಯೋ ವೀಕ್ಷಿಸಿ ವಿದೇಶದಲ್ಲಿ ಬೆಳೆಯಲಾಗುತ್ತಿದ್ದ ಡ್ರ್ಯಾಗನ್ ಫ್ರೂಟ್ ಅನ್ನು ನಾನೇಕೆ ಬೆಳೆಯಬಾರದು ಎಂದು ಯೋಚಿಸಿದರು. ಮಾತ್ರವಲ್ಲ ಅದನ್ನು ಕಾರ್ಯರೂಪಕ್ಕಿಳಿಸಿ ದೊಡ್ಡ ಮಟ್ಟದ ಸಾಧನೆಗೆ ಕೈ ಹಾಕಿದರು. ಇದಕ್ಕಾಗಿ ಮಹಾರಾಷ್ಟ್ರದ ಪಿಲ್ವೈ, ಪಂಜಾಬ್ ಭಾಗಗಳಲ್ಲಿ ಪ್ರವಾಸ ಮಾಡಿ ಸಸಿ ತಳಿಗಳನ್ನು ಸಂಗ್ರಹಿಸಿದ್ದಾರೆ. ಒಟ್ಟು ೯ ಎಕರೆಯಲ್ಲಿ ೨ ವರ್ಷಗಳ ನಿರಂತರ ಪರಿಶ್ರಮದಿಂದ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಒಂದು ಕಂಬದಲ್ಲಿ ೪ ಬಳ್ಳಿಯಂತೆ ಹಬ್ಬಿಸಿ ಸುಮಾರು ೩೦ ಲಕ್ಷಕ್ಕೂ ಹೆಚ್ಚಿನ ಹಣ ತೊಡಗಿಸಿದ್ದರು. ಈಗಾಗಲೇ ೧೮ ಸಾವಿರ ಗಿಡಗಳಲ್ಲಿ ಇಳುವರಿ ಪಡೆದಿದ್ದು, ಮಾರುಕಟ್ಟೆಗೆ ಬರಲು ಮತ್ತೊಂದು ಕ್ರಾಪ್ ಸಿದ್ಧಗೊಂಡಿದೆ ಎನ್ನುತ್ತಾರೆ ನಾರಾಯಣಸ್ವಾಮಿ.

ಹಣ್ಣಿನ ಮೂಲ
ಈ ಹಣ್ಣನ್ನು ಕನ್ನಡದಲ್ಲಿ ೞಪಿಟಾಹಾಯ ಹಣ್ಣುೞ ಎಂದು ಕರೆಯಲಾಗುತ್ತದೆ. ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಹಣ್ಣಿದು. ಏಷ್ಯನ್ ಮೂಲದ ಜನರಿಗೆ ಈ ಹಣ್ಣು ಅಚ್ಚುಮೆಚ್ಚು. ಕಿವಿ ಫ್ರೂಟ್ನ ಒಳತಿರುಳಿನ ರೀತಿಯೇ ಇದು ಸಹ ಕಾಣಸಿಗುತ್ತದೆ. ಸಾಮಾನ್ಯವಾಗಿ ಉಷ್ಣವಲಯದ ಸೂಪರ್ ಫುಡ್ ಎಂದು ಸಹ ಕರೆಯಲಾಗಿದೆ. ಆದರೆ ನಿಜವಾದ ಡ್ರ್ಯಾಗನ್ ಹಣ್ಣು ಕ್ಯಾಕ್ಟಸ್ ಜಾತಿ ಹೈಲೋಕೇರಿಯಸ್ ಹಣ್ಣು. ಇದು ತಂಬಾ ಹತ್ತಿರವಾದ ಸ್ಟೆನೊಗ್ರಾಫ್ಗಳ ಕುಲದಿಂದ ಬಂದಲ್ಲಿ ಪಿಟಯಾ ಎಂದು ಕರೆಯಲ್ಪಡುತ್ತದೆ. ಇದು ಮೆಕ್ಸಿಕೋ, ದಕ್ಷಿಣ ಅಮೆರಿಕ ಮತ್ತು ಮಧ್ಯ ಅಮೆರಿಕದಲ್ಲಿ ತನ್ನ ಮೂಲವನ್ನು ಹೊಂದಿದೆ. ಆದರೆ ಡ್ರ್ಯಾಗನ್ ಹಣ್ಣುಗಳು ಮೂಲತಃ ದಕ್ಷಿಣ ಅಮೆರಿಕದಿಂದ ಬಂದಿವೆ.ನೀವೂ ಬೆಳೆಯಬಹುದು
ಒಮ್ಮೆ ಬೆಂಗಳೂರಿನಲ್ಲಿ ಪ್ರತಿಷ್ಠಿತರ ಮದುವೆಯ ಔತಣ ಕೂಟದಲ್ಲಿ ಈ ಹಣ್ಣನ್ನು ತಿಂದು ಹಣ್ಣಿನ ಬಗ್ಗೆ ವಿಚಾರಿಸಿದೆ. ನಂತರ ಯೂಟ್ಯೂಬ್ಗಳಲ್ಲಿ ಇವನ್ನು ನೋಡಿದೆ. ನಮ್ಮ ರಾಜ್ಯದಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದ ಪಂಜಾಬ್, ಮಹಾರಾಷ್ಟ್ರಗಳಲ್ಲಿ ಪ್ರವಾಸ ಮಾಡಿ ಈ ತಳಿ ತಂದಿದ್ದೇನೆ. ಒಂದು ಕಡ್ಡಿ ೨೫ ರೂ.ನಂತೆ ಖರೀದಿಸಲಾಗಿದೆ. ಆಗಸ್ಟ್ ಮುಗಿದ ಮೇಲೆ ಒಂದು ಎಕರೆಗೆ ಎಷ್ಟು ಇಳುವರಿ ಬರುತ್ತದೆ ಎಂಬುದನ್ನು ಖಚಿತವಾಗಿ ಹೇಳಬಹುದು. ಇತ್ತೀಚೆಗೆ ಮೊದಲ ಬಾರಿ ಕೊಯ್ಲು ಮಾಡಿದಾಗ ೨ ಟನ್ ಹಣ್ಣು ಸಿಕ್ಕಿದೆ. ನಮ್ಮ ಸ್ಥಳಿಯರಿಗೂ ಈ ಹಣ್ಣಿನ ರುಚಿ ಸಿಗಲಿ ಎಂದು ಕರಪತ್ರಗಳಲ್ಲಿ ಹಣ್ಣಿನ ವಿಶೇಷಗಳ ಬಗ್ಗೆ ಮುದ್ರಿಸಿ ಹಂಚಲಾಗಿತ್ತು. ಹಣ್ಣು ಸಿಗುವ ಜಾಗದ ವಿಳಾಸವನ್ನು ಸಹ ಇದರಲ್ಲಿ ಮುದ್ರಿಸಲಾಗಿದೆ. ಒಂದು ಕೆ.ಜಿ ಹಣ್ಣಿಗೆ ೧೨೦ ರಿಂದ ೧೫೦ ರೂಗಳವೆರೆಗೆ ಮಾರಾಟವಾಗುತ್ತಿದೆ. ಒಂದು ಕೆಜಿಯಲ್ಲಿ ೩ ಹಣ್ಣು ಒಳಗೊಂಡಿರುತ್ತದೆ. ಆರೋಗ್ಯ ದೃಷ್ಟಿಯಿಂದಲೂ ಇದು ಹೆಚ್ಚು ಉಪಯೋಗವಿದೆ.
-ನಾರಾಯಣಸ್ವಾಮಿ, ರೈತ ಮರಳಕುಂಟೆ

ಹೆಚ್ಚಿನ ಮಾಹಿತಿಗೆ: ೯೪೪೯೬೫೨೭೨೦


ಹಲವು ರೋಗಕ್ಕೆ ರಾಮಬಾಣ
ಡ್ರ್ಯಾಗನ್ ಫ್ರೂಟ್ ರುಚಿಯಷ್ಟೇ ಅಲ್ಲ, ಹೆಚ್ಚು ಔಷಧೀಯ ಗುಣಗಳನ್ನೂ ಹೊಂದಿದೆ. ಕ್ಯಾನ್ಸರ್ಗೆ ರಾಮಬಾಣ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರಕ್ತ ಹೀನತೆ ದೂರ ಮಾಡುತ್ತದೆ. ಮಧುಮೇಹ ನಿಯಂತ್ರಣ, ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶ, ವಿಟಮಿನ್ ಸಿ ಹಾಗೂ ಎ ಅಂಶಗಳು ಹೆಚ್ಚಿದ್ದು, ಮೆದುಳು ಚುರುಕುಗೊಳಿಸುತ್ತದೆ. ಹೃದಯ ಮತ್ತು ರಕ್ತನಾಳಗಳ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯಾಘಾತ ಪ್ರಮಾಣ ಕುಗ್ಗಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೇ, ಬಿಳಿಯ ರಕ್ತಕಣಗನ್ನು ಹೆಚ್ಚಿಸುವ ಈ ಹಣ್ಣು, ಡೆಂಘೀ ಜ್ವರಕ್ಕೆ ಸಿದ್ಧ ಔಷಧವಂತೆ.
Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.

Photos

ರೆಕ್ಕೆ ಇದ್ದರೆ ಸಾಕೇ...

Videos