ಹಾರುವ ರೋಬೋಗಳು ಹಗುರಾಗಿಸಿವೆ ಕೃಷಿ ಕಾಯಕ

February 02, 2018 ⊄   By: ರಾಧಾಕೃಷ್ಣ ಭಡ್ತಿ

ಕೃಷಿ ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಬೇಸಾಯ ಕ್ಷೇತ್ರದಲ್ಲಿ ನಿಜಕ್ಕೂ ಡ್ರೋನ್ ಬಳಕೆ ಪ್ರಯೋಗ ಹೊಸ ಭರವಸೆಯನ್ನು ಮೂಡಿಸಿದೆ. ರಿಮೋಟ್ ಮತ್ತು ಜಿಪಿಎಸ್ ಸಹಾಯದಿಂದ ಹಾರಾಡುವ ಡ್ರೋನ್ ಯಂತ್ರಕ್ಕೆ ಹೊಲದ ನಕ್ಷೆಯನ್ನು ಅಳವಡಿಸಿದರೆ ಸ್ವಯಂ ಚಾಲನ ಶಕ್ತಿಯಿಂದ ನಕ್ಷೆಯಲ್ಲಿ ನಿಗದಿಪಡಿಸಿದ ಜಾಗಗಳಲ್ಲಿ ಮಾತ್ರ ಔಷಧ ಸಿಂಪಡಿಸುತ್ತದೆ. ರೋಗಪತ್ತೆ, ಬೆಳೆ ಕೊಯ್ಲು, ನೀರು ಪೂರೈಕೆ, ಬಿತ್ತನೆಯಂಥ ಕಾರ್ಯವೂ ಪೂಟ್ಟ ಹಾರಾಡುವ ಈ ರೋಬೋಗಳಿಂದ ಸಾಧ್ಯವಿದೆ.

ಹೀಗೊಂದು ಕನಸನ್ನು ಕಾಣೋಣ, ಎತ್ತರದ ಅಡಕೆ ಮರವನ್ನು ಹತ್ತಿ ಬೋರ್ಡಸ್ ಸಿಂಪಡಣೆ ಮಾಡುವುದರ ಬದಲಿಗೆ ಮನೆಯಲ್ಲೇ ಕುಳಿತು ಜಿಪಿಎಸ್ ಮೂಲಕ ಮರಗಳನ್ನು ಗುರುತಿಸಿ ನಿಗದಿತ ಪ್ರಮಾಣದ ಕೊಳ ಮದ್ದನ್ನು ಸೂಕ್ತ ಮರಕ್ಕೆ ಹಾರಿಸುವಂತಿದ್ದರೆ! ತೆಂಗಿನ ಕಾಯಿ ಕೊಯ್ಯಲು ಮರವನ್ನೇ ಹತ್ತ ಬೇಕೆಂದೇನಿಲ್ಲ, ರಿಮೋಟ್ ನ ಮೂಲಕವೇ ಬೆಳೆದ ಕಾಯಿಗಳನ್ನು ಗುರುತಿಸಿ ಕೆಳಗೆ ಬೀಳಿಸುವಂತಿದ್ದರೆ! ವಿಶಾಲ ಕಬ್ಬಿನ ಗದ್ದೆಯಲ್ಲಿ ಯಾವ ಪಟ್ಟೆಗೆ ಎಷ್ಟು ನೀರು ಬೇಕೆಂಬುದನ್ನು ಗುರುತಿಸಿ ಮನೆಯಂಗಳದಿಂದಲೇ ನೀರು ಹರಿಸಲು ಸಾಧ್ಯವಾಗುವುದಿದ್ದರೆ! ಹತ್ತಾರು ಎಕರೆ ತೊಗರಿ ಬೆಳೆಯಲ್ಲಿ ಮಧ್ಯದಲ್ಲೆಲ್ಲೋ ಕಾಡುತ್ತಿರುವ ಕೀಟಬಾಧೆಯನ್ನು ಮನೆಯ ಕಂಪ್ಯೂಟರ್ನಲ್ಲೆ ಕಂಡು, ಅದೇ ಜಾಗಕ್ಕೆ ಕೀಟನಾಶಕವನ್ನು ಸಿಂಪಡಿಸಲು ಸಾಧ್ಯವಾಗುವುದಿದ್ದರೆ!!!
ಇವೆಲ್ಲವೂ ಕೇವಲ ರೇ ಸಾಮ್ರಾಜ್ಯವಷ್ಟೇ ಅಲ್ಲ. ಖಂಡಿತಾ ಆಧುನಿಕ ಕೃಷಿಯಲ್ಲಿ ಇಂಥವು ಸಾಧ್ಯವಿದೆ. ಇಷ್ಟರವರೆಗೆ ಬೃಹತ್ ಸಭೆ- ಸಮಾರಂಭಗಳಲ್ಲಿ ಫೋಟೋ ತೆಗೆಯಲು, ಸಿನೇಮಾದಲ್ಲಿ ಎತ್ತರದ ಗುಡ್ಡದ ಮೇಲಿಂದ ಜಿಗಿಯುವ ನಾಯಕನ ಭಂಗಿಯನ್ನು ಚಿತ್ರೀಕರಸಲು ಮಾತ್ರ ಬಳಕೆಯಾಗುತ್ತಿದ್ದ ಡ್ರೋನ್ಗಳೆಂಬ ಆಧುನಿಕ ಪುಟ್ಟ ರೆಕ್ಕೆಯ ಹಕ್ಕಿ ಇಂಥ ಎಲ್ಲ ಕೃಷಿ ಸಾಧ್ಯತೆಯ ಕನಸನ್ನು ನನಸಾಗಸಲು ನಿಂತಿದೆ.

ಹೌದು, ಡ್ರೋನ್ ಬಳಕೆಯ ವ್ಯಾಪ್ತಿ ಈಗ ಮತ್ತಷ್ಟು ವಿಸ್ತಾರವಾಗುತ್ತಿದೆ. ಕಣ್ಗಾವಲು, ಭದ್ರತೆ, ವನ್ಯಜೀವಿಗಳ ಸಂರಕ್ಷಣೆ ಹೀಗೆ ಈ ಮಾನವರಹಿತ ಹಾರುವ ಪುಟ್ಟ ಯಂತ್ರಗಳ ಉಪಯೋಗ ಅನ್ವಯದ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಹೊಲ-ಗದ್ದೆಗಳು, ಜಮೀನು-ತೋಟಗಳ ಮೇಲೆ ಹಾರಾಡುವ ಡ್ರೋನ್ ಬೆಳೆಗಳಲ್ಲಿ ಕಂಡುಬರುವ ವಿವಿಧ ರೋಗಗಳನ್ನು ಸುಲಭವಾಗಿ ಪತ್ತೆ ಮಾಡುವ ವಿನೂತನ ತಂತ್ರಜ್ಞಾನವನ್ನು ವೈಮಾಂತರಿಕ್ಷ ವಿಜ್ಞಾನಿಗಳು (ಭಾರತೀಯ ವಿಜ್ಞಾನ ಸಂಸ್ಥೆಯ ಐಐಎಸ್) ಅಭಿವೃದ್ಧಿಗೊಳಿಸಿ ಸಾಕಷ್ಟು ಸಮಯವಾಗಿದೆ. ಆದರೆ ಅವುಗಳ ಯಶಸ್ವಿ ಬಳಕೆ, ನಮ್ಮ ರಾಜ್ಯದ ಹೊಲಗಳಲ್ಲಿ ಅದರ ಅನುಷ್ಠಾನ ಕಾರ್ಯ ಇನ್ನೂ ಆಗಿಲ್ಲ. ಡ್ರೋನ್ ಅಥವಾ ಯುಎವಿ (ಅನ್ಮ್ಯಾನ್ಡ್ ಏರಿಯಲ್ ವೆಹಿಕಲ್)ಗಳ ಮೂಲಕ ರೈತರ ಹೊಲಗಳಲ್ಲಿನ ಚಿತ್ರಣವನ್ನು ಅತ್ಯಂತ ನಿಖರವಾಗಿ ಮತ್ತು ಸ್ಪಷ್ಟವಾಗಿ ಪಡೆಯಲು ಸಾಧ್ಯ. ಒಂದು ಡ್ರೋನ್ ಅಥವಾ ಯುಎವಿ ಮೂಲಕ ನೂರಾರು ಎಕರೆ ಅಥವಾ ಹೆಕ್ಟೇರ್ ಕೃಷಿ ಭೂಮಿಯಲ್ಲಿನ ನೈಜ ಚಿತ್ರಣ ಪಡೆಯಬಹುದಾಗಿದೆ. ಇದಕ್ಕೆ ಹೆಚ್ಚು ವೆಚ್ಚವೂ ಆಗುವುದಿಲ್ಲ ಮತ್ತು ಮಾನವ ಹಸ್ತಕ್ಷೇಪ ಕಡಿಮೆ. ಉಪಗ್ರಹಗಳು ನೀಡುವ ಚಿತ್ರಗಳಿಗಿಂತ ಅಧಿಕ ಸ್ಪಷ್ಟ ಚಿತ್ರಗಳನ್ನು ಇವು ನೀಡುತ್ತವೆ.

ರಾಜ್ಯದ ಹೆಮ್ಮೆಯ ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ಯಶಸಸ್ವಿಯಾದ ತೋಟಗಾರಿಕಾ ಮೇಳದಲ್ಲಿ ಹೀಗೆ ಕೃಷಿಯಲ್ಲಿ ಡ್ರೋನ್ ಗಳ ಪ್ರಾಯೋಗಿಕ ಬಳಕೆಯ ಪ್ರಾತ್ಯಕ್ಷಿಕೆಯೊಂದನ್ನು ಏರ್ಪಡಿಸಲಾಗಿತ್ತು. ಕೃಷಿಯಲ್ಲಿ ಅತ್ಯಂತ ಕ್ರಿಯಾಶೀಲ ವಿಜ್ಞಾನಿ, ಸ್ನೇಹಪರ ವ್ಯಕ್ತಿ ವಿಶ್ವವಿದ್ಯಾಲಯದ ಕುಲಪತಿ ಮಹೇಶ್ವರಪ್ಪ ಅವರ ಕನಸು ಸಾಕಾರವಾದರೆ ಇನ್ನೆರಡು ವರ್ಷಗಳಲ್ಲಿ ರಾಜ್ಯದ ಹೊಲ-ಗದ್ದೆಗಳನ್ನು ಕುಳಿತಲ್ಲಿಯೇ ಮ್ಯಾಪಿಂಗ್ ಮಾಡಬಹುದು. ಯಾವ ಹೊಲದ, ಯಾವ ಭಾಗದಲ್ಲಿ ಬೆಳೆಗಳು ರೋಗಪೀಡಿತವಾಗಿವೆ ಎಂಬುದುನ್ನು ಗುರುತಿಸುವುದು ಮಾತ್ರವಲ್ಲ ಡ್ರೋನ್ಗಳ ಸಹಾಯದಿಂದ ಇಡೀ ಹೊಲಕ್ಕೆ ಸೂಕ್ತ ಔಷಧ ಸಿಂಪಡಿಸಬಹುದು. ಈರುಳ್ಳಿಯಂಥ ಬೀಜಗಳ ಬಿತ್ತನೆಗೂ ಡ್ರೊನ್ ಬಳಸಬಹುದು. ಮಣ್ಣು ಪರೀಕ್ಷೆ, ನೀರಾವರಿ, ಬಿತ್ತನೆ, ರಸಗೊಬ್ಬರ ಪೂರೈಕೆ, ಒಂದು ಹಂತದಲ್ಲಿ ಕೊಯ್ಲಿಗೂ ಸಹ ಡ್ರೋನ್ ಗಳ ಬಳಕೆ ದಿನಗಳು ದೂರವಿಲ್ಲ.
ಮೊದಲೇ ಕೃಷಿ ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಬೇಸಾಯ ಕ್ಷೇತ್ರದಲ್ಲಿ ನಿಜಕ್ಕೂ ಡ್ರೋನ್ ಬಳಕೆ ಪ್ರಯೋಗ ಹೊಸ ಭರವಸೆಯನ್ನು ಮೂಡಿಸಿದೆ. ರಿಮೋಟ್ ಮತ್ತು ಜಿಪಿಎಸ್ ಸಹಾಯದಿಂದ ಹಾರಾಡುವ ಡ್ರೋನ್ ಯಂತ್ರಕ್ಕೆ ಹೊಲದ ನಕ್ಷೆಯನ್ನು ಅಳವಡಿಸಿದರೆ ಸ್ವಯಂ ಚಾಲನ ಶಕ್ತಿಯಿಂದ ನಕ್ಷೆಯಲ್ಲಿ ನಿಗದಿಪಡಿಸಿದ ಜಾಗಗಳಲ್ಲಿ ಮಾತ್ರ ಔಷಧ ಸಿಂಪಡಿಸುತ್ತದೆ. ಡ್ರೋನ್ ಸಹಾಯದಿಂದ ಔಷಧ ಸಿಂಪಡಿಸುವುದರಿಂದ ಹಲವು ಅನುಕೂಲಗಳಿವೆ. ಕೂಲಿ ಆಳುಗಳ ಸಮಸ್ಯೆಯಿಂದ ಬೇಸತ್ತ ರೈತರಿಗೆ ಇದು ವರದಾನವಾಗಲಿದೆ. ರೈತನೊಬ್ಬನೆ ಇದನ್ನು ನಿಯಂತ್ರಿಸಬಹುದಾಗಿದ್ದು ತನಗೆ ಬೇಕಾದ ನಿರ್ದಿಷ್ಟ ಎತ್ತರದಿಂದ ನಿರ್ದಿಷ್ಟ ಭಾಗಕ್ಕೆ, ನಿಗದಿತ ಪ್ರಮಾಣದ ಔಷಧ ಸಿಂಪಡಿಸಬಹುದಾಗಿದೆ. ಅಲ್ಲದೇ ಔಷಧ ಸಿಂಪಡಿಸುವ ವೇಳೆ ಮೈಮೇಲೆ ಕೀಟನಾಶಕ ಬಿದ್ದು ಕಾಯಿಲೆಗಳಿಗೆ ತುತ್ತಾಗುವುದು ತಪ್ಪುತ್ತದೆ.

ಡ್ರೊನ್ ಬಳಕೆಯಿಂದ ಕೃಷಿಯಲ್ಲಿ ಸಮಯದ ಉಳಿತಾಯ ಸಾಧ್ಯವಾಗಲಿದೆ. ಕಾರ್ಮಿಕರು ವಿಷದ ಗಾಳಿ ಸೇವಿಸುವ ಸಮಸ್ಯೆಯೂ ಇರುವುದಿಲ್ಲ. ಜಮೀನುಗಳಿಗೆ ಕೀಟನಾಶಕ ಸಿಂಪಡಣೆ ಎಂದರೆ ಬಹುತೇಕ ಕೃಷಿಕರಿಗೆ ಚಿಂತೆಯ ವಿಚಾರ. ಕೂಲಿ ಕಾರ್ಮಿಕರನ್ನು ಹುಡುಕಿ ಕಾರ್ಯ ಪೂರೈಸಬೇಕು. ಕೂಲಿ ಕಾರ್ಮಿಕರ ಕೊರತೆಯಿರುವ ಸಂದರ್ಭದಲ್ಲಿ ಅವರ ಸಂಭಾವನೆಯ ಮೊತ್ತವೂ ಹೆಚ್ಚಾಗುತ್ತದೆ. ಜತೆಗೆ ಕೈಯ್ಯಾರೆ ಔಷಧ ಸಿಂಪಡಣೆಯಿಂದ ಹಲವಾರು ರೈತ ಅಥವಾ ಕೃಷಿ ಕಾರ್ಮಿಕನ ಆರೋಗ್ಯಕ್ಕೆ ಇದು ಮಾರಕವಾಗುವ ಸಾಧ್ಯತೆಗಳೂ ಇವೆ. ಇಂತಹ ಸಮಸ್ಯೆ ಗಮನದಲ್ಲಿರಿಸಿಕೊಂಡರೆ ಕಡಿಮೆ ಸಮಯ, ಕಡಿಮೆ ಜನ ಹಾಗೂ ಆರೋಗ್ಯಕರ ಬೇಸಾಯದ ನಿಟ್ಟಿನಲ್ಲಿ ತೋಟಗಾರಿಕಾ ವಿವಿ ಅತ್ಯುತ್ತಮ ಪ್ರಯತ್ನಕ್ಕೆ ಕೈ ಹಾಕಿದೆ.

ಸಮಯ ಉಳಿತಾಯ
ಸದ್ಯಕ್ಕೆ ಒಂದು ಬಾರಿಗೆ 5 ರಿಂದ 10 ಲೀ. ಕೀಟನಾಶಕ ಸಿಂಪಡಿಸುವ ಸಾಮರ್ಥ್ಯದ ಡ್ರೋನ್ ಅಭಿವೃದ್ಧಿಪಡಿಸಲಾಗಿದೆ ಎನ್ನುವ ರಾಷ್ಟ್ರೀಯ ಕೃಷಿ ತಂತ್ರಜ್ಞಾನ ಸಲಸಾ ಮಂಡಳಿಯ ನಿರ್ದೇಶಕ ಡಾ. ರಾಮಚಂದ್ರ ಅವರು, ಈ ಸಾಮರ್ಥ್ಯವನ್ನು ಕನಿಷ್ಠ 50 ಲೀಟರ್ಗೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಇದಿಂದಾಗಿ ಇಷ್ಟೇ ಅವಧಿಯಲ್ಲಿ ಅತಿ ಹೆಚ್ಚು ಪ್ರದೇಶಕ್ಕೆ ಔಷಧ ಸಸಿಂಪಡಣೆ ಸಾಧ್ಯವಾಗುವುದು ಮಾತ್ರವಲ್ಲ, ವೆಚ್ಚವನ್ನೂ ಕಡಿಮೆ ಮಾಡಬಹುದು ಎನ್ನುತ್ತಾರೆ.

ಡೊಡ್ಡ ಪ್ರಮಾಣದಲ್ಲಿ ಜಮೀನು ಹೊಂದಿರುವ ರೈತರೊಬ್ಬರು 25 ಎಕರೆ ಭೂಮಿಗೆ ಕೀಟನಾಶಕ ಸಿಂಪಡಣೆಗೆ ಕನಿಷ್ಠ 8 ದಿನವಾದರೂ ಬೇಕಾಗುತ್ತದೆ. ಅದರಲ್ಲೂ ಕಾರ್ಮಿಕರು ಲಭ್ಯವಾಗದಿದ್ದರೆ ಅವಧಿ ಇನ್ನಷ್ಟು ವಿಳಂಬವಾಗಿ ಬೆಳೆಯೇ ನಾಶವಾಗುವ ಸಾಧ್ಯತೆಗಳಿರುತ್ತವೆ. ಆದರೆ ಡ್ರೊನ್ ಬಳಸಿದರೆ ಕೇವಲ ಮೂರು ದಿನಗಳಲ್ಲಿ ಕೀಟನಾಶಕ ಸಿಂಪಡಣೆ ಕಾರ್ಯ ಪೂರ್ಣಗೊಳ್ಳುತ್ತದೆ. ಇನ್ನು ರೈತ ಸ್ನೇಹಿ, ಬಳಕೆಗೆ ಸರಳ, ಸುಲಭ ನಿಯಂತ್ರಣ ಸಾಧ್ಯವಾಗುವಂತೆ ರಿಮೋಟ್ ಕಂಟ್ರೊಲರ್ ಸಹ ಸಿದ್ಧಪಡಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಡಿಸಿಎ (ಡೃರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅನಿಮತಿಯನ್ಯ ಡ್ರೋನ್ಗಳ ಹಾರಾಟದ ಮಿತಿಯನ್ನು 60 ಮೋಟರ್ಗಳಿಗೆ ಸೀಮಿತಗೊಳಿಸಲಾಗಿದೆ. ಇದನ್ನು ಹೆಚ್ಚಿಸಿದಲ್ಲಿ, ಕೃಷಿ ವ್ಯಾಪ್ತಿಗನುಗುಣವಾಗಿ ಡ್ರೋನ್ಗಳ ಗರಿಷ್ಠ ಬಳಕೆಯನ್ನು ಮಾಡಬಹುದು ಎಂಬುದು ಅವರ ಅಭಿಪ್ರಾಯ. ಡ್ರೋನ್ ಕಂಪನಿಗಳವರು ಹೇಳುವ ಪ್ರಕಾರ ಕೃಷಿ ಡ್ರೊನ್ಗಳು 800 ಮೀ. ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆಈ ಡ್ರೊನ್ನ ಬೆಲೆ ಸದ್ಯ ಅಂದಾಜು ೨ ಲಕ್ಷ ರೂ.ನಷ್ಟಿದೆ.

ಈ ಪುಟ್ಟ ಡ್ರೊನ್ ಗಳು ಜಮೀನಿನ ಯಾವ ಭಾಗದಲ್ಲಿ ನೀರಿನ ಕೊರತೆಯಿದೆ, ಬೆಳೆಯ ಸ್ಥಿತಿ ಹೇಗಿದೆ, ಮಣ್ಣಿನ ಗುಣ ಎಂಥದ್ದು, ಬೆಳೆಯ ಎರಡು ಸಾಲಿನ ನಡುವಿನ ಅಂತರ ಇತ್ಯಾದಿಗಳೆಲ್ಲವನ್ನೂ ಗುರುತಿಸಿ ದಾಖಲಿಸುತ್ತವೆ. ಅದರಲ್ಲಿ ಅಳವಡಿಸಲಾಆದ ಡಾಟಾ ಪ್ರೋಸೆಸರ್ನ ಮೂಲಕ ಎಲ್ಲ ಮಾಹಿತಿಗಳ ವಿಶ್ಲೇಷಣೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಮೀಕ್ಷೆಗೆ ಮೊದಲ ಬಾರಿಗೆ ಮೇಳದ ಸಂದರ್ಭದಲ್ಲಿ ವಿವ ಆವರಣದಲ್ಲಿನ ಬೆಳೆ ಕ್ಷೇತ್ರದಲ್ಲಿ ಆರು ಡ್ರೋನ್ ಬಳಸಲಾಗಿತ್ತು. ಪ್ರಾಥಮಿಕ ಪ್ರಯೋಗಾತ್ಮಕ ಹಾರಟದಿಂದ ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ಮ್ಯಾಪಿಂಗ್, ಸ್ಪ್ರೇಯಿಂಗ್ನ ಸಾಧ್ಯತೆಯನ್ನು ಇನ್ನಷ್ಟು ನಿಖರಗೊಳಿಸಲು ಡ್ರೋನ್ ಹಾರಾಟದ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಅಶೋಕ್ ಆಲೂರು.
ಸದ್ಯಕ್ಕೆ ಮಾವು, ಪೇರಲ, ದ್ರಾಕ್ಷಿ, ತೆಂಗು ಹಾಗೂ ದಾಳಿಂಬೆ ಬೆಳೆಯ ಕ್ಷೇತ್ರದಲ್ಲಿ ಪ್ರಾಯೋಗಿಕ ಡ್ರೋನ್ ಹಾರಾಟ ನಡೆಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಸತತ ಹಾರಾಟ, ಪ್ರಯೋಗದ ಮೂಲಕ ಆಗಸದಿಂದಲೇ ಎಲ್ಲ ಬೆಳೆಯ ವಿಮರ್ಶೆ ಮಾಡುವ ಹಂತಕ್ಕೆ ಯಶಸ್ವಿಯಾಗುತ್ತವೆ ಎಂಬ ವಿಶ್ವಾಸ ಡಾ. ಅಶೋಕ್ ಅವರದ್ದು.

ಜಿಪಿಎಸ್ ಅಳವಡಿಕೆ
ಇನ್ನು ಜಿಪಿಎಸ್ ಅಳವಡಿಕೆಯಿಂದಾಗಿ, ಮನೆಯಂಗಳದಲ್ಲಿ ಇಲ್ಲವೇ ಹೊಲದ ಬದುವಿನಲ್ಲೇ ಕುಳಿತು ರಿಮೋಟ್ ಕಂಟ್ರೋಲ್ ನಿಂದ ಇಡೀ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಬಹುದಾದ ಸಾಧ್ಯತೆಗಳೂ ಇವೆ. ಕ್ರಿಮಿನಾಶಕ ಮಿಶ್ರಣ ಬೆರಿಸಿ ಡ್ರೋನ್ಗೆ ಕ್ಯಾನ್ ಕಟ್ಟಿ, ಜಿಪಿಎಸ್ ಮೂಲಕ ಕೆಲಸ ನಿಗದಿ ಮಾಡಿದರೆ ಭತ್ತ, ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟ ಸೇರಿದಂತೆ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು. ಬೆಳೆಗಳು, ಗಿಡ-ಮರಗಳಲ್ಲಿ ಸೋಂಕು ರೋಗಗಳು ಇರಬಹುದಾದ ಸಾಧ್ಯತೆಯನ್ನು ತಿಳಿಯಲು ಡ್ರೋನ್ ಅತ್ಯಂತ ಉಪಯುಕ್ತ. ಸದ್ಯಕ್ಕೆ 20ರಿಂದ 30 ನಿಮಿಷಗಳ ಹಾರಾಟ ಮಾತ್ರ ನಡೆಯುತ್ತಿದೆ. ಇದನ್ನು ಒಂದು ಗಂಟೆಗೆ ಹೆಚ್ಚಿಸಿದಲ್ಲಿ 500 ಎಕರೆ ಪ್ರದೇಶವನ್ನು ಒಂದೇ ಹಂತದಲ್ಲಿ ಸಮೀಕ್ಷೆಗೆ ಒಳಪಡಿಸಬಹುದು ಎಂಬುದು ಡಾ. ರಾಮಚಂದ್ರ ಅಭಿಮತ.

ಮಾವು, ನಿಂಬೆ ಇನ್ನಿತರ ತೋಟಗಾರಿಕೆ ಬೆಳೆಗಳಲ್ಲಿ ಮಾನವ ಚಾಲಿತ ಸ್ಪ್ರೇಯರ್ ಅಥವಾ ಇತರ ಯಾವುದೇ ಸ್ಪ್ರೇಯರ್ ಯಂತ್ರದಿಂದ ಸಿಂಪಡಣೆ ಮಾಡುವುದು ಕಷ್ಟದಾಯಕವಾಗಿದೆ. ಆದರೆ ಈ ಡ್ರೋನ್ ಚಾಲಿತ ಸ್ಪ್ರೇಯರ್ನಿಂದ ಗಿಡಗಳ ಮೇಲ್ಭಾಗದಲ್ಲಿ ಹೋಗಿ ಪರಿಣಾಮಕಾರಿಯಾಗಿ ಬೇಕಾದಷ್ಟು ಪ್ರಮಾಣದಲ್ಲಿ ಜೌಷಧಿ ಸಿಂಪರಣೆ ಮಾಡಬಹುದು. ನೀರು ನಿಂತಿರುವ ಗದ್ದೆಯಲ್ಲಿ ಬದುವಿನ ಮೇಲೆ ಕುಳಿತುಕೊಂಡು ರಿಮೋಟ್ ಕಂಟ್ರೋಲ್ ಮುಖಾಂತರ ಇದನ್ನು ನಿಯಂತ್ರಿಸಿ ಔಷಧ ಸಿಂಪರಣೆ ಮಾಡಬಹುದು ಎಂಬುದು ಡಾ. ರಾಮಚಂದ್ರ ವಿವರಣೆ.

ವಿಶೇಷ ಸೇವಾ ಕೇಂದ್ರ
ಇದರಿಂದ ರೈತ ಸಮುದಾಯಕ್ಕೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗುತ್ತದೆ. ಬೆಳೆ ನಷ್ಟವನ್ನು ಕಡಿಮೆ ಮಾಡಲು ಮತ್ತು ಇಳುವರಿ ಹೆಚ್ಚಿಸಲು ಇದನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಕೃಷಿ ವಿಜ್ಞಾನಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ ಎನ್ನುತ್ತಾರೆ ಕುಲಪತಿ ಡಾ. ಮಹೇಶ್ವರಪ್ಪ.ಈವರೆಗೆ ಡ್ರೋನ್ಗಳನ್ನು ಎಂಜಿನಿಯರ್ಗಳು ಮಾತ್ರವೇ ಚಾಲಿಸುತ್ತಿದಾರೆ. ಇದನ್ನು ವಿಶೇಷ ತಜ್ಞತೆಯ ಅಗತ್ಯವಿದೆ. ಇದನ್ನು ಸರಳಗೊಳಿಸಿಸ, ರೈತರೇ ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಮತ್ತು ವೆಚ್ಚವನ್ನು ಕಡಿಮೆಗೊಳಿಸಿ, ಸಾಮರ್ಥ್ಯ ಹೆಚ್ಚಳ ಮಾಡುವ ದೃಷ್ಟಿಯಿಂದ ಸಾಕಷ್ಟು ಸಂಶೋಧನೆಗಳು ನಡೆಯಬೇಕಿದ್ದು, ಅದಕ್ಕಾಗಿ ವಿಶ್ವ ವಿದ್ಯಾಲಯದಿಂದ ವಿಶೇಷ ತಂಡವನ್ನು ರಚಿಸಲಾಗಿದೆ. ಇದರಲ್ಲಿ ತೋಟಗಾರಿಕಾ-ಕೃಷಿ ವಿಜ್ಞಾನಿಗಳು, ಕೀಟ ತಜ್ಞರು, ಹವಾಮಾನ ಮತ್ತು ಮಣ್ಣಿನ ತಜ್ಞರು ಹಾಗೂ ಎಂಜಿನಿಯರ್ಗಳಿದ್ದಾರೆ. ಇದಲ್ಲದೇ ವಿವಿಯಲ್ಲಿ ರೈತರಿಗೆ ವಿಶೇಷ ಮಾಹಿತಿ ನೀಡುವ ದೃಷ್ಟಿಯಿಂದ ‘ವಿಶೇಷ ಸೇವಾ ಕೇಂದ್ರ’ವನ್ನೂ ತೆರೆಯಲಾಗಿದೆ ಎಂದು ಡಾ. ಮಹೇಶ್ವರಪ್ಪ ವಿವರಿಸಿದರು.

ಡ್ರೋನ್ ನಲ್ಲಿ ಅಳವಡಿಸಲಾಗಿರುವ ಬಹು ಕೋನ ಕ್ಯಾಮೆರಾಗಳು ಕೃಷಿ ಭೂಮಿಯ ಎಲ್ಲ ಭಾಗಗಳ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಮ್ಯಾಪಿಂಗ್ಗೆ ಸಂಬಂಧಿಸಿದಂತೆ ಸದ್ಯಕ್ಕೆ ಸಾಮಾನ್ಯ ಆರ್ಜಿಬಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, ಥರ್ಮಲ್ ಮತ್ತು ಸ್ಪೆಕ್ಟ್ರಲ್ ಕ್ಯಾಮೆರಾಗಳ ಬಳಕೆಯಿಂದ ಅತ್ಯಂತ ಕರಾರುವಾಕ್ ಚಿತ್ರಣ ಪಡೆಯಲು ಸಾಧ್ಯ ಎಂಬುದು ಡ್ರೋನ್ ತಯಾರಿಕಾ ಕಂಪನಿ ಲೈಟಿಂಗ್ ಡ್ರೋನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಂಜಾನ್ ಪಠಾಣ್.

ವಿದೇಶಗಳಲ್ಲಿ ವ್ಯಾಪಕ
ವಿದೇಶಗಳಲ್ಲಿ ಈಗಾಗಲೇ ಕೃಷಿ ಕಾರ್ಯಕ್ಕೆ ಡ್ರೋನ್ಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಚೀನಾ ಡ್ರೋನ್ ಬಳಕೆಯಲ್ಲಿ ಅತಿ ಮುಂದಿದೆ. ಅಮೆರಿಕ, ಜಪಾನ್ಗಳಲ್ಲಿ ಸಾಕಷ್ಟು ತಂತ್ರಜ್ಞಾನ ಮುಮದುವರಿದಿದೆ. ಅಲ್ಲೆಲ್ಲ ಕೆಲವು ಪ್ರಗತಿಪರ ಕೃಷಿಕರು ಹಲವು ಯಾಂತ್ರಿಕ ಕಾರ್ಯಗಳನ್ನು ಮೊಬೈಲ್ ಅನ್ನು ರಿಮೋಟ್ನಂತೆ ಬಳಸಿ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಪಂಪ್ಸೆಟ್ಳಿಂದ ನೀರು ಹಾಯಿಸುವುದಕ್ಕೆ ಈ ತಂತ್ರಜ್ಞಾನ ಬಳಸಲಾಗುತ್ತಿದೆ.

ಭಾರತದಲ್ಲಿ ಈವರೆಗೆ ಸಭೆ ಸಮಾರಂಭಗಳನ್ನು ಅತಿ ಹೆಚ್ಚು ಡ್ರೋನ್ ಬಳಸಿದ್ದು, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ. ಕೃಷಿಯ ವಿಚಾರಕ್ಕೆ ಬಂದರೆ, ಮಹಾರಾಷ್ಟ್ರ ದ್ರಾಕ್ಷಿ ಬೆಳೆಯಲ್ಲಿ, ಪಂಜಾಬ್ನಲ್ಲಿ ಗೋಧಿ ಬೆಳೆಯ ಕೃಷಿಯಲ್ಲಿ ಹಾಗೂ ಕೇರಳದಲ್ಲಿ ತೆಂಗಿನ ಕೃಷಿಗೆ ಯಶಸ್ವಿಯಾಆಗಿ ಡ್ರೋನ್ ಬಳಸಲಾಗಿದೆ.ಸ್ಥಳೀಯ ಪ್ರಯತ್ನ

ಈ ಹಿಂದೆ 2016 ರಲ್ಲಿ ಮಂಗಳೂರಿನಲ್ಲಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ವಿಧಾನವನ್ನು ಪ್ರಯೋಗ ಮಾಡಲಾಗಿತ್ತು. ಐಟಿಐಇ, ಮಾರುತ್ ಹಾಗೂ ಬೀಳಗಿಯ ಎ.ಬಿ.ಹೊಸಗೌಡರ ಬಯೋ ರಿಸರ್ಚ್ ಸೆಂಟರ್ ಡ್ರೋನ್ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದವು. ಅಲ್ಲದೇ ಹಲವು ಕೃಷಿ ಮೇಳಗಳಲ್ಲಿ ಇದರ ಪ್ರಯೋಜನದ ಬಗ್ಗೆ ತಿಳಿಸಲಾಗಿತ್ತು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬರು ಸಹ ತೋಟಗಾರಿಕೆ ಬೆಳೆಗಳಲ್ಲಿ ಡ್ರೋನ್ ಬಳಕೆಯ ಯಶಸ್ವಿ ಪ್ರಯೋಗ ನಡೆಸಿದ್ದರು. ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲೂ ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಕೃಷಿ ಡ್ರೋನ್ ಬಳಕೆಯ ವ್ಯಾಪಕ ಪ್ರಯತ್ನ ನಡೆಯುತ್ತಿದೆ.

ಜಗದಗಲ ವ್ಯಾಪಿಸಿದ ಡ್ರೋನ್ ಧ್ಯಾನ

ಹಾರುವ ರೋಬೊ ಎಂದು ಕರೆಯಲ್ಪಡುವ ಡ್ರೋನ್ ಬಳಕೆ ತೀರ ಹೊಸದೇನಲ್ಲ. ಎರಡನೆಯ ವಿಶ್ವ ಯುದ್ಧದ ಸಂದರ್ಭದಲ್ಲಿಯೇ ಡ್ರೋನ್ಗಳನ್ನು ಬಳಸಲಾಗಿದೆ. ಆದರೆ ಇತ್ತೀಚಿನ ಇಲೆಕ್ಟ್ರಾನಿಕ್ಸ್ ಮತ್ತು ಸಿಲಿಕಾನ್ ವ್ಯಾಲಿಯಲ್ಲಿನ ತಂತ್ರಾಂಶ ಅಭಿವೃದ್ಧಿಯಿಂದ ಡ್ರೋನ್ ಬಳಕೆಗೆ ಹೊಸ ರೂಪ ಬಂದಿದೆ. ಬಳಕೆಯ ಕ್ಷೇತ್ರ ವಿಸ್ತಾರಗೊಂಡಿದೆ. ಡ್ರೋನ್ ಒಂದು ಹಾರಾಡುವ ರೋಬೊ ಎನ್ನಬಹುದು. ಇದನ್ನು ದೂರ ನಿಯಂತ್ರಣ ಸಾಧನದಿಂದ ನಿಯಂತ್ರಿಸಬಹುದು. ಸ್ವಯಂ ಚಾಲಿತ ಡ್ರೋನ್ಗಳನ್ನು ತಂತ್ರಾಂಶಗಳ ಅಳವಡಿಕೆಯಿಂದ ಕೂಡ ನಿಯಂತ್ರಿಸಬಹುದು. ಇದಕ್ಕೆ ಜಿಪಿಎಸ್, ಸಿಮ್, ಸೆನ್ಸಾರ್ಗಳನ್ನು ಅನುವುಗೊಳಿಸುವುದರಿಂದ ಮತ್ತಷ್ಟು ಕರಾರುವಾಕ್ಕು ಚಾಲನೆ ಸಿಗುತ್ತದೆ. ಡ್ರೋನ್ ತಂತ್ರಜ್ಞಾನವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳು ಡ್ರೋನ್ ಗಳ ಖರೀದಿಗೆ ಇಲ್ಲವೇ ತಯಾರಿಕೆಗೆ ಮುಂದಾಗಿವೆ. ಲಘು ತೂಕದ ವಸ್ತುವಿನಿಂದ ತಯಾರಾದ ನೌಕೆ, ಸರ್ಕ್ಯೂಟ್ ಬೋರ್ಡ್ ಹಾರಾಟ ಮಾಡಿಸಬಹುದು. ಆದರೆ ಇಳಿಸಲು ಲ್ಯಾಂಡಿಂಗ್ ಪ್ಯಾಡ್ ಅವಶ್ಯಕ. ವಿವಿಧ ಗುಣಮಟ್ಟದ ಆಕಾರದ ಲ್ಯಾಂಡಿಂಗ್ ಪ್ಯಾಡುಗಳು ಆನ್ಲೈನ್ ಮಾರುಕಟ್ಟೆಲ್ಲಿ ಸಿಗುತ್ತವೆ. ಮೇಲಿನ ಚಿತ್ರಗಳಲ್ಲಿ ತೋರಿಸಿರುವಂತೆ ಇದರ ಚಾಲನೆ ಕೂಡ ಸರಳ. ಸುರಕ್ಷಿತವಾಗಿ ಹಾರಾಡಿಸಲು ಮತ್ತು ಇಳಿಸಲು ಸ್ವಲ್ಪ ಅನುಭವ ಬೇಕಾಗುತ್ತದೆ. ಸ್ಮಾರ್ಟ್ ಫೋನ್ಗಳಿಂದ ಕೂಡ ನಿರ್ವಹಿಸಬಹುದಾದ ಡ್ರೋನ್ಗಳು ಮಾರುಕಟ್ಟೆಗೆ ಬಂದಿವೆ. ಆಟಿಕೆಗಳಂಥ ನ್ಯಾನೋ ಡ್ರೋನ್ ಗಳು ಒಂದೂವರೆ ಸಾವಿರ ರೂ.ಗೆ ಮಾರುಕಟ್ಟೆಲ್ಲಿ ಲಭ್ಯ.ಚೀನಾದ ಪ್ರಾಬಲ್ಯ
ಡ್ರೋನ್, ಕ್ವಾಡ್ಕಾಪ್ಟರ್ ತಯಾರಿಕೆಯಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಡಿ.ಜೆ.ಐ. ಕಂಪೆನಿಯು ಹವ್ಯಾಸಿ ಹಾಗೂ ವೃತ್ತಿಪರ ಡ್ರೋನ್ಗಳನ್ನು ತಯಾರಿಸುತ್ತಿದ್ದು, ಜನಪ್ರಿಯ ಫ್ಯಾಂಟಮ್-2,3,4 ಸರಣಿಯ ಡ್ರೋನ್ ಗಳು ಈ ಕಂಪೆನಿಯ ಉತ್ಪಾದನೆ. ಚೀನಾದ ಮತ್ತೊಂದು ಕಂಪೆನಿ ಯುನೀಕ್( Yuneec), ಪ್ರಪಂಚದಲ್ಲೇ ಮೊದಲ ಬಾರಿಗೆ ರೆಡಿ-ಟು-ಫ್ಲೈ ಡ್ರೋನ್ಗಳನ್ನು ಪರಿಚಯಿಸಿದ ಹಿರಿಮೆಯಿದೆ. ಟೈಫೂನ್ ಹೆಸರಿನ ಸರಣಿಯ ಡ್ರೋನ್ಗಳು ಅತ್ಯಂತ ಜನಪ್ರಿಯ. ಚೀನಾದ ಖಾಸಗಿ ಕಂಪೆನಿಗಳು ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಡ್ರೋನ್ ಗಳ ತಯಾರಿಸಿ ಮಾರಾಟ ಮಾಡುತ್ತಿವೆ.

ಬಹೂಪಯೋಗಿ

ಮೊದಮೊದಲು ಡ್ರೋನ್ ಗಳನ್ನು ಸೇನೆಯಲ್ಲಿ ಕಣ್ಗಾವಲಿಗೆ, ಗುಪ್ತಾಚಾರಿಕೆಗೆ ಪ್ರಮುಖವಾಗಿ ಬಳಲಾಗುತ್ತಿತ್ತು. ಭೂಕಂಪ, ನೆರೆ ಮುಂತಾದ ವಿಪತ್ತಿಗೊಳಗಾದ ಪ್ರದೇಶಗಳಲ್ಲಿ ರಕ್ಷಕರು ತಮ್ಮ ಪ್ರಾಣ ಪಣಕ್ಕೊಡ್ಡಿ ಮುನ್ನುಗ್ಗುವ ಅಪಾಯವನ್ನು ಡ್ರೋನ್ ಬಳಸಿ ನಿಯಂತ್ರಿಸಬಹುದು. ಬೃಹತ್ ಸೇತುವೆ, ಗಗನಚುಂಬಿ ಕಟ್ಟಡಗಳು, ವಿದ್ಯುತ್ ತಂತಿ, ವಿಂಡ್ ಟರ್ಬೈನ್ ಮುಂತಾದೆಡೆ ಮಾನವ ಪರಿವೀಕ್ಷಣೆ ಕಠಿಣವಾದದ್ದು. ಅಂಥ ಸಂದರ್ಭದಲ್ಲಿ ಡ್ರೋನ್ ಬಳಸಿ ಸುರಕ್ಷಿತವಾಗಿ ಮಾಪನ ಮಾಡಬಹುದು. ಏರಿಯಲ್ ವೀಡಿಯೊ, ಫೋಟೊಗ್ರಫಿಯಿಂದ ಮಾಧ್ಯಮದವರಿಗೂ ಅನುಕೂಲವಾಗಿದೆ. ವ್ಯವಸಾಯ ಕ್ಷೇತ್ರಕ್ಕೂ ಉಪಯೋಗವಾಗುತ್ತಿದೆ. ಕಾರ್ಗೋ ಕ್ಷೇತ್ರಕ್ಕೂ ಡ್ರೋನ್ ಬಳಕೆ ವರದಾನವಾಗಿದೆ. ಡ್ರೋನ್ ಬಳಕೆಯಂತೆ ದುರ್ಬಳಕೆಯೂ ಆಗುತ್ತಿದೆ. ವೈರಿಗಳ ಕಣ್ಗಾವಲಿಗೂ ಡ್ರೋನ್ ಬಳಕೆಗೆ ಬಂದಿದೆ.

ಅಮೆರಿಕ ಮುಂಚೂಣಿಯಲ್ಲಿ
ವಿಶೇಷ ಆಸ್ಥೆವಹಿಸಿ ಅಮೆರಿಕ ಡ್ರೋನ್ ತಂತ್ರಜ್ಞಾನದ ಅಭಿವೃದ್ಧಿಗೊಳಿಸಿ ಇತರ ದೇಶಗಳಿಗಿಂತ ಮುಂಚೂಣಿಯಲ್ಲಿದೆ. ಇಸ್ರೇಲ್ ಕೂಡ ಅಮೆರಿಕೆಗೆ ಸರಿಸಮಾನಾಗಿ ನಿಂತಿದೆ. ಚೀನಾ ತಡವಾಗಿ ಗಮನ ಹರಿಸಿಯೂ ಡ್ರೋನ್ ತಯಾರಿಕೆಯ ಪ್ರಮುಖ ದೇಶವಾಗಲು ಹೊರಟಿದೆ. ಡ್ರೋನ್ ರಫ್ತು ಮಾಡಲು ಬೃಹತ್ ಒಪ್ಪಂದವೊಂದಕ್ಕೆ ಚೀನಾ ಸಹಿ ಮಾಡಿ ದಾಖಲೆ ನಿರ್ಮಿಸಿದೆ.
ಡ್ರೋನ್ಗಳನ್ನು ಆಮದು ಮಾಡುಕೊಳ್ಳುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಸಾರ್ವಜನಿಕ ಡ್ರೋನ್ ಬಳಕೆ ಅನುಮತಿ ನಮ್ಮ ದೇಶದಲ್ಲಿಲ್ಲ. ಸರಕಾರ ನೀತಿ ನಿಯಮಗಳನ್ನು ನಿರೂಪಿಸುತ್ತಿದೆ. ಮದುವೆ, ಮುಂಜಿ, ಕ್ರೀಡೆಗಳ ಚಿತ್ರೀಕರಣಕ್ಕೆ ಡ್ರೋನ್ ಕ್ಯಾಮರಾಗಳು ಹೆಚ್ಚಾಗಿ ಬಳಕೆಯಾಗುತ್ತಿವೆ. ಚಲನಚಿತ್ರಗಳ ಚಿತ್ರೀಕರಣಗಳಲ್ಲಿ ಸಮರ್ಪಕವಾಗಿ ಬಳಸಲಾಗುತ್ತಿದೆ. ಹಲವಾರು ದೇಶಗಳು ತಮ್ಮ ಗಡಿ ಕಾಯಲು ಅತ್ಯಾಧುನಿಕ ಡ್ರೋನ್ಗಳನ್ನು ನೇಮಿಸಿಕೊಂಡಿವೆ. ಕನ್ನಡದ ಜನಪ್ರಿಯ ಚಲನಚಿತ್ರಗಳಲ್ಲೊಂದಾದ ಮುಂಗಾರು ಮಳೆ ಯಲ್ಲಿ ಜೋಗ್ ಜಲಪಾತವನ್ನು ತೋರಿಸಿರುವ ರೀತಿ ಕುತೂಹಲ ಹುಟ್ಟಿಸಿ ಮೆಚ್ಚುಗೆ ಗಳಿಸಿತ್ತು. ಆ ದೃಶ್ಯದ ಯಶಸ್ಸಿನ ಕ್ರೆಡಿಟ್ಟು ಡ್ರೋನಿಗೆ ಹೋಗಬೇಕು. ನಮಗೆ ಡ್ರೋನ್ ನೋಡುವ ಅವಕಾಶ ಸಿಕ್ಕಿದ್ದು 2009 ರಲ್ಲಿ ಬಿಡುಗಡೆಯಾದ 3 ಈಡಿಯೆಟ್ಸ್ ಚಿತ್ರದಲ್ಲಿ.


Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos