ತಾರಸಿಯಲ್ಲಿ ತೊಗರಿ, ಅಲಸಂದ್ರೆ, ಜೋಳ: ಭರ್ಜರಿ ಕೃಷಿ

June 15, 2019 ⊄   By: - ಪ.ರಾಮಕೃಷ್ಣ ಶಾಸ್ತ್ರಿ

ಮಂಗಳೂರಿನ ಮರೊಳಿಯ ಲಾಲ್ಬಹಾದ್ದೂರ್ ಶಾಸ್ತ್ರಿ ಬಡಾವಣೆಯ ಮನೆಯೊಂದರ ತಾರಸಿ ದರ್ಶನ ಮಾಡಿದರೆ ಅಲ್ಲಿ ಹಸಿರು ಸಿರಿ ಕಾಣಿಸುತ್ತದೆ. ನಾಲ್ಕೂವರೆ ಸೆಂಟ್ಸ್ ಜಾಗದ ಮನೆಯ ಆವರಣಕ್ಕೆ ಕಾಲಿಡುವಾಗಲೇ ವೈವಿಧ್ಯ ಸಸ್ಯಕಾಶಿ ಸ್ವಾಗತಿಸುತ್ತದೆ.ಅದು ಸುಳ್ಯದ ಅಜ್ಜಾವರದ ಕೃಷ್ಣಪ್ಪಗೌಡ ಪಡ್ಡಂಬೈಲು ಅವರ ಮನೆ.

ಕೃಷಿ ಕುಟುಂಬದ ಹಿನ್ನೆಲೆಯ ಕೃಷ್ಣಪ್ಪಗೌಡರು 1987ರಲ್ಲಿ ಶಿಕ್ಷಣ ಇಲಾಖೆಯಲ್ಲಿ ನೌಕರಿಗೆ ಸೇರಿದರು. ಸದ್ಯ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ ಬೆಳಗ್ಗೆ ನಾಲ್ಕೂವರೆ ಗಂಟೆಗೆ ಎದ್ದು ಗಿಡಗಳ ಆರೈಕೆ ಮಾಡುತ್ತಾರೆ. ಸಂಜೆ 6 ಗಂಟೆಗೆ ಮನೆಗೆ ಬರುತ್ತಾರೆ. ರಾತ್ರಿ ಒಂಭತ್ತರವರೆಗೂ ಗಿಡಗಳಿಗೆ ನೀರು ಹಾಕುವುದು, ಗೊಬ್ಬರ ಹಾಕುವುದರಲ್ಲಿ ತಲ್ಲೀನರಾಗುತ್ತಾರೆ. 2001ರಲ್ಲಿ ಕಟ್ಟಿಸಿದ ಮನೆಯ ತಾರಸಿ 1200 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಅಲ್ಲಿ ಒಂದಿಂಚೂ ಜಾಗ ಉಳಿಸದೇ ಗಿಡಗಳನ್ನು ನೆಟ್ಟು ಬೆಳೆಸಿರುವ ಕಾಯಕ ಯೋಗಿ, ಆವರಣ ಗೋಡೆಯ ಮೇಲೂ ಗಿಡಗಳ ಕುಂಡಗಳನ್ನಿರಿಸಿದ್ದಾರೆ. ಛಾವಣಿಯಲ್ಲಿ ಬೆಳೆದ ಆರ್ಕಿಡ್ ಗಿಡಗಳು ತಲೆದೂಗುತ್ತವೆ.

ಸಗಣಿ ಸಂಗ್ರಹ: ಕೃಷ್ಣಪ್ಪಗೌಡರು ತಾರಸಿ ಕೃಷಿ ಮಾಡಲು ಮುಖ್ಯ ಕಾರಣ ಮನೆಯ ಆವರಣದಲ್ಲಿ ಗಿಡಗಳನ್ನು ನೆಟ್ಟರೆ ಬೀದಿ ದನಗಳು ಬಂದು ತಿನ್ನ್ನುವುದು. ಗೌಡರು ಸ್ಕೂಟರಿನಲ್ಲಿ ಎಲ್ಲಿಗಾದರೂ ಹೋಗುವಾಗ ಖಾಲಿ ಗೋಣಿಚೀಲಗಳು ಇರುತ್ತವೆ. ದಾರಿಯಲ್ಲಿ ಸಗಣಿ ಸಿಕ್ಕಿದರೆ ಯಾವ ಅಳುಕೂ ಇಲ್ಲದೆ ಚೀಲ ತುಂಬಿಸಿಕೊಳ್ಳುತ್ತಾರೆ. ಒಳ್ಳೆಯ ಮಣ್ಣು ಸಿಕ್ಕಿದರೆ ಅದನ್ನೂ ತರುತ್ತಾರೆ. ಅವರು ಟೀವಿ ನೋಡುವುದೇ ಇಲ್ಲ. ರಜಾ ದಿನಗಳಲ್ಲಿ ಹೈನುಗಾರರ ಮನೆಗೆ ಹೋಗಿ ಸಗಣಿ ಸಂಗ್ರಹಿಸುತ್ತಾರೆ.

ಒಂದು ದೊಡ್ಡ ಪ್ಲಾಸ್ಟಿಕ್ ಡ್ರಮ್ಮಿನೊಳಗೆ ತರಗೆಲೆ, ಸಗಣಿ, ತರಕಾರಿಗಳ ತ್ಯಾಜ್ಯ, ಗಂಜಲ, ಪಾತ್ರೆ ತೊಳೆದ ನೀರು ಎಲ್ಲವನ್ನು ಹಾಕಿ ಮುಚ್ಚಳ ಹಾಕುತ್ತಾರೆ. ಡ್ರಮ್ಮಿನ ಬುಡದಲ್ಲಿರಿಸಿದ ಕೊಳವೆಯಲ್ಲಿ ಜಿನುಗುವ ನೀರು ಮತ್ತು ಕೆಲವು ವಾರಗಳಲ್ಲಿ ಹದವಾಗುವ ಈ ಗೊಬ್ಬರವೇ ಗೌಡರ ತಾರಸಿ ಕೃಷಿಗೆ ಸಂಪನ್ಮೂಲ. ಗೋಣಿಚೀಲದ ತಳದಲ್ಲಿ ಒಂದು ಪದರ ಫಲವತ್ತಾದ ಮಣ್ಣು ತುಂಬಿಸಿ ಅದರ ಮೇಲಿಂದ ತೆಂಗಿನಕಾಯಿ ಸಿಪ್ಪೆ ಹರಡುತ್ತಾರೆ. ಸಿಪ್ಪೆ ನೀರನ್ನು ಹೀರಿಕೊಂಡು ಬೇರುಗಳಿಗೆ ಕೊಡುವ ಕಾರಣ ನೀರಿನ ಉಳಿತಾಯ ಆಗುತ್ತದೆ. ಇದರ ಮೇಲಿಂದ ಗೊಬ್ಬರ ಮತ್ತೆ ತೆಳುವಾಗಿ ಮಣ್ಣು ಹರಡಿ ಬೀಜ ಬಿತ್ತನೆ ಅಥವಾ ಗಿಡದ ನಾಟಿ ಮಾಡುತ್ತಾರೆ. ಪ್ರತಿ ಗಿಡಕ್ಕೂ ಬೇಕಾದಷ್ಟು ನೀರು ಹನಿಸಲು ಪತ್ನಿ ಮೀನಾಕ್ಷಿ, ಪದವಿ ಓದುತ್ತಿರುವ ಪುತ್ರ ಅಮೋದ್ ಕುಮಾರ್, ಪದವಿ ಅಂತಿಮ ಹಂತದಲ್ಲಿರುವ ಪುತ್ರಿ ಗಹನ ನೆರವಾಗುತ್ತಾರೆ.

ಫಲ ಭಾರ: ಕೃಷ್ಣಪ್ಪಗೌಡರು ಕೇವಲ ಗೋಣಿಚೀಲಗಳಲ್ಲಿ ಗಿಡಗಳನ್ನು ಬೆಳೆದಿಲ್ಲ ಹಳೆಯ ಹೆಲ್ಮೆಟ್, ಕ್ಯಾನು, ಬಾಟಲಿ, ಗಡಿಯಾರದ ತಳಭಾಗ, ತೆಂಗಿನ ಸಿಪ್ಪೆ ಎಲ್ಲದರಲ್ಲಿಯೂ ವೈವಿಧ್ಯಮಯ ಗಿಡಗಳಿವೆ. ಸಿಮೆಂಟ್ ಮತ್ತು ಫೈಬರ್ ಕುಂಡಗಳನ್ನೂ ಬಳಸಿದ್ದಾರೆ. ಮನೆಯ ಬುಡದಲ್ಲಿ ಬೆಳೆದ ತೊಂಡೆಯ ಬಳ್ಳಿಯಿಂದ ತಾರಸಿಯಲ್ಲಿ ನಿಂತು ಕಾಯಿ ಕೊಯ್ಯಬಹುದು. ಪಪ್ಪಾಯಿ ಹಣ್ಣು ಕೀಳಬಹುದು. ತಾರಸಿಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ ಅನೇಕ ಗಿಡಗಳು ಫಲ ಹೊತ್ತು ಬಾಗುತ್ತಿವೆ. ಬದನೆ, ಬೆಂಡೆ, ಪಡುವಲ, ಕುಂಬಳ, ಹಾಗಲ, ಸೌತೆಯಂತಹ ತರಕಾರಿಗಳಿವೆ. ಪೊನ್ನಾಚಿಯಿಂದ ತಂದ ಗೆಣಸಿನ ಬಳ್ಳಿ ಭರ್ಜರಿ ಗಡ್ಡೆಗಳನ್ನು ಕೈಗಿಟ್ಟಿದೆ. ಒಂದೇ ಒಂದು ಮರಗೆಣಸಿನ ಗೆಡ್ಡೆ ಐದೂವರೆ ಕಿಲೋ ತೂಗಿತೆಂಬುದನ್ನು ಗೌಡರು ವರ್ಣಿಸುತ್ತಾರೆ. ಇಲ್ಲಿ ಬೆಳೆಯುವುದಿಲ್ಲ ಎಂದೇ ತಿಳಿದಿದ್ದ ಬೀಟ್ರೂಟ್, ಮೂಲಂಗಿ, ಕಾಲಿಫ್ಲವರ್ ಕೂಡ ಯಶಸ್ವಿಯಾಗಿ ಫಲ ಕೊಡುತ್ತಿವೆ.

ಪಟ್ಟಿ ಮಾಡುವುದಾದರೆ ಗೌಡರು ತಾರಸಿಯಲ್ಲಿ ಬೆಳೆಯುವ ಗಿಡಗಳ ಹೆಸರು ನೂರಾರು ಆಗುತ್ತದೆ. ದಾಳಿಂಬೆ, ಸೀಬೆ, ಸೇಬು, ಸೀತಾಫಲ, ನೆಲ್ಲಿ, 17 ಬಗೆಯ ಲಿಂಬೆ, ಕಸಿ ಅಂಬಟೆ, ನೇರಳೆ, ಅಂಜೂರ, ಅನಾನಸು, ಚಕೋತ, ಚಿಕ್ಕು, ಬೆಣ್ಣೆಹಣ್ಣು, ಮೊಟ್ಟೆಹಣ್ಣು, ಸೀತಾಫಲ, ಲಕ್ಷ್ಮಣ ಫಲ, ಗೇರು, ಸ್ಟಾರ್ಫ್ರುಟ್, ಮೂರು ವಿಧದ ಮಾವು, ಹಲಸು, ಡ್ರಾಗನ್ ಹಣ್ಣು ಇನ್ನೂ ಹಲವಾರಿವೆ. ನೆಲ ಬಸಳೆ, ಹರಿವೆ, ಬಿಳಿ ಎಳ್ಳು, ನೆಲ ಹರಿವೆ, ಟೊಮೆಟೊ, ಅವರೆ, ಮುಸುಕಿನ ಜೋಳ, ಅರಾರೂಟ್, ದ್ರಾಕ್ಷಿ, ಖರ್ಜೂರ, ತೊಗರಿ, ಸೀಮೆ ಬದನೆ, ಮಾದಳ, ಬಟಾಟೆ, ಆರೇಳು ವಿಧದ ಮೆಣಸಿನಕಾಯಿ, ಕಾಳುಮೆಣಸು, ನಾಲ್ಕು ಜಾತಿಯ ಅಲಸಂದೆ ಗಿಡಗಳೂ ಇಲ್ಲಿ ಫಲ ನೀಡುತ್ತಿವೆ. ನುಗ್ಗೆ ಗಿಡ ಕಾಯಿ ಕೊಡಲಾರಂಭಿಸಿದೆ.

ಹಲವು ಅಪರೂಪದ ಔಷಧ ಗಿಡಗಳೂ ಗೌಡರ ಮನೆಯ ಆವರಣದಲ್ಲಿ ಜಾಗ ಪಡೆದಿವೆ. ಶ್ರೀಲಂಕಾದಿಂದ ತಂದ ಅಪ್ಪಟ ಒಂದೆಲಗವಿದೆ. ಇನ್ಸುಲಿನ್ ಗಿಡ, ಬೇವು, ಲಾವಂಚ, ದರ್ಬೆ, ತುಂಬೆ, ಪಂಚಪತ್ರೆ, ಗರಿಕೆ, 6 ವಿಧದ ತುಳಸಿ, ಆಷಾಢದಲ್ಲಿ ಪಾಯಸ ಮಾಡಿ ತಿನ್ನುವ ಆಟಿ ಸೊಪ್ಪು, ಪಂಚವಳ್ಳಿ ವೀಳ್ಯದೆಲೆ ಗಿಡಗಳಿವೆ. ಹತ್ತು ಬಗೆಯ ಗುಲಾಬಿ, 30 ವಿಧದ ದಾಸವಾಳಗಳಿವೆ. ಕಾಡಿನ ಹಣ್ಣುಗಳಿವೆ. ಐದು ವಿಧದ ಬಾಳೆಗಳು ಗೊನೆ ಬಿಟ್ಟಿವೆ. ಎರಡು ಜಾತಿಯ ಕಬ್ಬು ತಾರಸಿಯಲ್ಲಿ ಬೆಳೆಯುತ್ತಿವೆ. ಇಷ್ಟೇ ಸಾಲದೆಂಬಂತೆ ಆಸ್ಪ್ರೇಲಿಯಾದ ಎಲಿಗೇಟರ್ ಮೀನನ್ನೂ ಸಾಕುತ್ತಿದ್ದಾರೆ.

ಔಷಧವಾಗಿ ಕಷಾಯ: ಗಿಡಗಳಿಗೆ ಕೀಟ, ರೋಗ ಬಾಧೆ ಕಾಡಿದರೆ ಗೌಡರು ತಮ್ಮದೇ ಆದ ಕ್ರಮದಲ್ಲಿ ಪರಿಹರಿಸುತ್ತಾರೆ. ಬೇವು, ಅರಿಶಿನ, ಕರಿಮೆಣಸುಗಳಿಂದ ತಯಾರಿಸಿದ ಕಷಾಯಕ್ಕೆ ಗೋಮೂತ್ರ ಬೆರೆಸಿ ಕತ್ತಲಾಗುವ ಹೊತ್ತಿಗೆ ಸಿಂಪಡಿಸಿದರೆ ಕೀಟಗಳು ನಾಪಕ್ಕೆ ಎನ್ನುತ್ತಾರೆ ಅವರ. ಬೆಳೆದ ಫಲಗಳನ್ನು ತಾವು ಬಳಸಿ ಮಿಕ್ಕಿದ್ದನ್ನು ಗೆಳೆಯರಿಗೆ, ನೆರೆಹೊರೆಯವರಿಗೆ ಉಚಿತವಾಗಿ ಹಂಚಿ ಸಂತೋಷಪಡುತ್ತಾರೆ.
ಅಲ್ಪ ಸ್ಥಳದಲ್ಲಿ ಬಹಳಷ್ಟು ಬೆಳೆಯುತ್ತಿರುವ ಗೌಡರ ಸಾಧನೆಯನ್ನು ನೋಡಲು ಬಂರುವ ಗಣ್ಯರು ಬೆನ್ನುತಟ್ಟಿದ್ದಾರೆ. ಸಾವಿರಾರು ಸಂಶೋಧನಾ ವಿದ್ಯಾರ್ಥಿಗಳು ಭೇಟಿ ಕೊಟ್ಟಿದ್ದಾರೆ. ಜರ್ಮನ್ ದೇಶದ ಮ್ಯಾಕ್ಸಿಂ ಎಂಬುವರು ಭೇಟಿ ನೀಡಿದ್ದರು. ಮಂಡ್ಯ, ಬಳ್ಳಾರಿ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಯ ಆಸಕ್ತರು ಭೇಟಿ ನೀಡಿದ್ದರು.

ಕೃಷ್ಣಪ್ಪಗೌಡರ ಈ ಸಾಧನೆ ಮೆಚ್ಚದವರಿಲ್ಲ. 75 ಗೌರವ ಪುರಸ್ಕಾರಗಳು ಸಂದಿವೆ. ಆರ್ಯಭಟ ಪ್ರಶಸ್ತಿ, ಕರ್ನಾಟಕ ಸೌರಭ ಪ್ರಶಸ್ತಿ, ತೋಟಗಾರಿಕೆ ಇಲಾಖೆಯ ಪ್ರಶಸ್ತಿ, ಸಮಾಜರತ್ನ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳು ಬಂದಿವೆ. ಮಾಜಿ ಪ್ರಧಾನಿ ದೇವೇಗೌಡರು ಗೌರವಿಸಿದ್ದಾರೆ. ದೂರದರ್ಶನ ವಾಹಿನಿಗಳಲ್ಲದೆ ಆಸ್ಪ್ರೇಲಿಯಾದ ಆಕಾಶವಾಣಿಯೂ ಇವರ ಸಾಧನೆಯ ಮಾಹಿತಿ ಪ್ರಸಾರ ಮಾಡಿದೆ. ಕೇಂದ್ರ ಸರಕಾರದ ಕೃಷಿ ವಿಕಾಸ ಯೋಜನೆ ನಗದು ಪುರಸ್ಕಾರ ಅವರಿಗೆ ಲಭಿಸಿದೆ. ಆದರೆ, ತಾರಸಿ ಕೃಷಿಕ ಕೃಷ್ಣಪ್ಪಗೌಡರು ಇದಾವುದಕ್ಕೂ ಬೀಗದೆ ತಮ್ಮ ಪಾಡಿಗೆ ತಾವು ಕಾಯಕ ಮಾಡುತ್ತಾರೆ.
ಹೆಚ್ಚಿನ ಮಾಹಿತಿಗೆ ಮೊ. 9342990975Share This :
  •  
  •  

RELATED ARTICLES 

Readers Comments (1) 

  • B Narsinga Rao


    11/05/2018
    I am proud of Sree Krishnappa Gowda for his novel.experiment in agriculture.Where there is a will, passion, perseverance success follows the effort.
    May he inspire more urbanites to venture out the way he did

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.

Photos

ರೆಕ್ಕೆ ಇದ್ದರೆ ಸಾಕೇ...

Videos