ಇಂದಿಗೆ ಚಿಪ್ಕೋಕೆ 45: ಹಿಮಾಲಯದ ಉಳಿವಿಗೆ ಚಂಡಿ ಹಿಡಿದಿದ್ದ ಭಟ್

March 26, 2018 ⊄   By: madhava ithal

ಮಾ.26 ಇಂದಿಗೆ ಚಿಪ್ಕೋ ಚಳುವಳಿ ಪ್ರಾರಂಭವಾಗಿ 45ನೇ ವರ್ಷಕ್ಕೆ ಕಾಲಿಡುತ್ತಿದೆ. ಅರಣ್ಯ ನಾಶದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಣೆಕಟ್ಟು, ಕಾರ್ಖಾನೆಗಳು ಮತ್ತು ರಸ್ತೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ಮಾಡುತ್ತಿರುವುದನ್ನು ವಿರೋಧಿಸಿ ಪರಿಸರ ಹೋರಾಟಗಾರ ಸುಂದರಲಾಲ್ ಬಹುಗುಣ ಅವರ ನೇತೃತ್ವದಲ್ಲಿ 1973ರಲ್ಲಿ ಉತ್ತರ ಪ್ರದೇಶದಲ್ಲಿ ಚಿಪ್ಕೋ ಚಳುವಳಿಯನ್ನು ಆರಂಭಿಸಲಾಯಿತು. ಈ ಚಳುವಳಿಯಲ್ಲಿ ಹೋರಾಟಗಾರರು ಪರಸ್ಪರರ ಕೈ ಹಿಡಿದು ಮರವನ್ನು ಅಪ್ಪಿ ನಿಲ್ಲುತ್ತಿದ್ದರು.

ಈ ಸಂದರ್ಭದಲ್ಲಿ ಹಸಿರುವಾಸಿ ಸಂಚಿಕೆಯಲ್ಲಿ ಪ್ರಕಟಿಸಿರುವ ಮಾಧವ್ ಐತಾಳ್ ಅವರ ವಿಶೇಷ ಲೇಖನ

ಒಂದು ಹಿನ್ನೋಟ

ಬ್ರಿಟಿಷ್ ರಿಯರ್ ಅಡ್ಮಿರಲ್ ಸರ್ ಎಡ್ಮಂಡ್ ಸ್ಲೇಡ್ ಅವರ ಪುತ್ರಿ, ಮ್ಯಾಡಲೀನ್ ಸ್ಲೇಡ್, ನವೆಂಬರ್ ೧೯೨೫ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿ, ಮುಂದಿನ ೩೪ ವರ್ಷ ಇಲ್ಲಿಯೇ ಕಳೆದರು. ೧೯೪೬ರಲ್ಲಿ ಅವರನ್ನು ಉತ್ತರ ಪ್ರದೇಶ ಸರಕಾರವು ಕೃಷಿ ಉತ್ಪಾದನೆ ವಿಸ್ತರಿಸಲು ವಿಶೇಷ ಸಲಹೆಗಾರರನ್ನಾಗಿ ನೇಮಿಸಿತು.

ಗಾಂಧೀಜಿಯ ಈ ಶಿಷ್ಯೆ ಮೀರಾ ಬೆಹನ್, ೧೯೪೭ರಲ್ಲಿ ಋಷಿಕೇಶದ ಬಳಿ ಆಶ್ರಮವೊಂದನ್ನು ಸ್ಥಾಪಿಸಿದರು. ಓಕ್ ಸೇರಿದಂತೆ ಹಲವು ಪ್ರಭೇದದ ಮರಗಳಿರುವ ಕಾಡನ್ನು ಪೈನ್(ಸೂಚಿಪರ್ಣ)ನ ಏಕ ತಳಿ ಕಾಡನ್ನಾಗಿಸುವ ಅರಣ್ಯ ಇಲಾಖೆಯ ಪ್ರಯತ್ನ ಅವರಿಗೆ ಸರಿ ಕಾಣಲಿಲ್ಲ. ಸೂಚಿಪರ್ಣ ಕೈಗಾರಿಕೆಗೆ ಬೇಕಾದ ಮರ. ಆದರೆ, ಸ್ಥಳೀಯರಿಗೆ ಉರುವಲು ಮತ್ತು ಮೇವಿಗೆ ಬೇಕಾದ್ದು ಓಕ್ನಂಥ ಮರಗಳು.
೧೯೫೨ರಲ್ಲಿ ತಮ್ಮ ಲೇಖನ ‘ಸಮ್ತಿಂಗ್ ರಾಂಗ್ ಇನ್ ಹಿಮಾಲಯ’ದಲ್ಲಿ ಅವರು ಬರೆಯುತ್ತಾರೆ,

‘ಓಕ್ನಿಂದ ಉದುರುವ ಎಲೆಗಳು ಮಳೆಗಾಲದಲ್ಲಿ ನೀರು ಹೀರಿಕೊಂಡು, ಜನರ ನೀರಿನ ಮುಖ್ಯ ಮೂಲವಾಗುತ್ತದೆ. ಆದರೆ, ಪೈನ್ನ ಚೂಪು ಎಲೆಗಳ ಮೇಲೆ ಹರಿಯುವ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗಿ ಪ್ರವಾಹಕ್ಕೆ ಕಾರಣವಾಗುತ್ತದೆ. ಹೀಗಾಗಿ ಅರಣ್ಯ ಇಲಾಖೆ ತನ್ನ ಕಾರ್ಯಿನೀತಿಯನ್ನು ಬದಲಿಸಿಕೊಳ್ಳಬೇಕು. ಹಿಮಾಲಯದ ದಕ್ಷಿಣ ಇಳಿಜಾರುಗಳ ಪರಿಸರದ ಆರ್ಥಿಕ ವೃತ್ತದ ಕೇಂದ್ರಗಳು ಈ ಕಾಡುಗಳು. ಇವುಗಳನ್ನು ನಾಶಪಡಿಸಿದಲ್ಲಿ, ಹೃದಯವೇ ಕತ್ತರಿಸಿದಂತೆ ಆಗಿ ಇಡೀ ನಿರ್ಮಿತಿ ಕುಸಿದು ಬೀಳುತ್ತದೆ’.

ಇದಕ್ಕೆ ಅರಣ್ಯ ಇಲಾಖೆ ಪ್ರತಿಕ್ರಿಯಿಸಿದ್ದು ಸಾರಾಸಗಟಾಗಿ ಅರಣ್ಯ ಹನನಕ್ಕೆ ಮುಂದಾಗುವ ಮೂಲಕ. ೧೯೫೦-೭೦ರ ಅವಧಿಯಲ್ಲಿ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತಿದ್ದ ಓಕ್ ಮರಮುಟ್ಟು ಪ್ರಮಾಣ ೮೭ಸಾವಿರ ಘನ ಮೀಟರ್ನಿಂದ ೨ ಲಕ್ಷ ಘನ ಮೀಟರ್ಗೆ ಹೆಚ್ಚಳಗೊಂಡಿತು.

ಇದಕ್ಕೆ ಅಂತಿಮವಾಗಿ ಉತ್ತರ ನೀಡಿದ್ದು-ಪ್ರಕೃತಿ. ೧೯೭೦ರಲ್ಲಿ ಅದುವರೆಗೆ ಕಂಡುಕೇಳರಿಯದ ಪ್ರವಾಹ ಸಂಭವಿಸಿತು. ಜುಲೈ ತಿಂಗಳಿನ ಮೂರನೇ ವಾರ ಮೇಘಸ್ಫೋಟದಿಂದ ೨೭೫ ಮಿಮೀ ಮಳೆ ಸುರಿಯಿತು. ರಸ್ತೆ ನಿರ್ಮಾಣ ಮತ್ತು ಅರಣ್ಯ ನಾಶದಿಂದ ಅಲಕನಂದೆಯ ಉಪನದಿಗಳಲ್ಲಿ ಹೂಳು-ಕಸ ಕಡ್ಡಿ ತುಂಬಿಕೊಂಡಿತ್ತು. ಇವುಗಳಲ್ಲಿ ಸಣ್ಣ ಸಣ್ಣ ಕೊಳಗಳು ನಿರ್ಮಾಣಗೊಂಡಿದ್ದವು. ಇವು ಮಳೆಯಿಂದ ಬಂದ ಹೆಚ್ಚುವರಿ ನೀರಿನಿಂದ ಒಡೆದು, ಅಲಕನಂದೆ ಸೊಕ್ಕಿ ಹರಿದಳು. ೧೦೦ ಚದರ ಕಿಮೀ ಪ್ರದೇಶಕ್ಕೆ ನೀರು ನುಗ್ಗಿತು. ಸೇತುವೆ, ರಸ್ತೆಗಳು ಕೊಚ್ಚಿ ಹೋದವು. ಮನೆಗಳು, ಬೆಳೆ ನೀರಿನ ಪಾಲಾಯಿತು. ಇದರ ಪರಿಣಾಮ ಬಯಲಿನಲ್ಲಿ ಆಯಿತು. ಗಂಗಾ ನಾಲೆ ಕಟ್ಟಿಕೊಂಡು ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ೯.೫ ದಶ ಲಕ್ಷ ಎಕರೆ ಭೂಮಿ ಕೃಷಿಗೆ ನಿರುಪಯುಕ್ತವಾಗಿ ಬಿಟ್ಟಿತು. ಅರಣ್ಯ ಸಂಪೂರ್ಣ ಬರಿದಾದ ಪ್ರದೇಶದಲ್ಲೇ ಭೂಕುಸಿತ ಹೆಚ್ಚು ಸಂಭವಿಸಿದ್ದನ್ನು ಜನ ಗುರುತಿಸಿದರು. ಯಥಾ ಪ್ರಕಾರ, ಹೇಳಿಕೆಗಳು ಹಾಗೂ ಆರ್ಥಿಕ ನೆರವು ಸುರಿಯಿತು. ಜನ ಕಷ್ಟಪಟ್ಟು ಮತ್ತೊಮ್ಮೆ ಬದುಕು ಕಟ್ಟಿಕೊಂಡರು.

ಭೂಕುಸಿತ/ಪ್ರವಾಸಿಗಳ ಹೆಚ್ಚಳ

೧೯೭೦, ೧೯೮೦ರಲ್ಲಿ ಹಿಮಾಲಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಿತು. ಇವರ್ಯಾರೂ ಕಾಲ್ನಡಿಗೆಯ ಯಾತ್ರಿಗಳಲ್ಲ. ಬದಲಿಗೆ ಬಸ್, ಕಾರು ಮತ್ತು ಎಸ್ಯುವಿಗಳಲ್ಲಿ ಆಗಮಿಸುವ ಪ್ರವಾಸಿಗಳು. ಇವರಿಗೆ ಉಣಿಸಲು, ತಣಿಸಲು, ಮೋಜು ಮಸ್ತಿಗೆ ನದಿಪಾತ್ರದಲ್ಲೇ ಹೋಟೆಲ್ಗಳು, ವಸತಿ ಗೃಹಗಳು, ರೆಸಾರ್ಟ್ಗಳು ತಲೆಯೆತ್ತಿದವು. ಪ್ಲಾಸ್ಟಿಕ್, ಘನ-ದ್ರವ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ, ರಸ್ತೆ ನಿರ್ಮಾಣಕ್ಕೆ ಡೈನಮೈಟ್ ಸ್ಫೋಟ-ಇನ್ನಿತರ ಅಪಸವ್ಯ ಹೆಚ್ಚಿತು. ಇವು ನದಿಗಳನ್ನು ತುಂಬಿಕೊಂಡವು.

೧೯೯೮ರಲ್ಲಿ ಉತ್ತರಾಖಂಡ ರಾಜ್ಯ ನಿರ್ಮಾಣವಾಯಿತು. ೨ ವರ್ಷಗಳ ಬಳಿಕ ಕೇಂದ್ರ ಕೃಷಿ ಮಂತ್ರಾಲಯವು ಹಿಮಾಲಯದಲ್ಲಿ ಭೂಕುಸಿತಕ್ಕೆ ಕಾರಣ ಕಂಡುಹಿಡಿಯಲು ಅಹ್ಮದಾಬಾದ್ನ ಇಸ್ರೋದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಎಂ ಎ ಕಿಮೋತಿ, ಫಿಸಿಕಲ್ ರಿಸರ್ಚ್ ಪ್ರಯೋಗಾಲಯದ ನವೀನ್ ಜುಯೆಲ್ ಮತ್ತು ಗೋಪೇಶ್ವರದ ದಶೋಲಿ ಗ್ರಾಪಂ ಸ್ವರಾಜ್ಯ ಮಂಡಳಿಯ ಓಂಪ್ರಕಾಶ್ ಭಟ್ ಅವರ ಸಮಿತಿಯನ್ನು ನೇಮಿಸಿತು. ಕ್ಷೇತ್ರ ಕಾರ್ಯಳ ಮತ್ತು ಉಪಗ್ರಹ ನಕ್ಷೆಗಳನ್ನು ಬಳಸಿ ೬೦ ಪುಟಗಳ ವರದಿಯನ್ನು ಸಿದ್ಧಪಡಿಸಿತು.

ಸಮಿತಿ ತನ್ನ ವರದಿಯಲ್ಲಿ, ಉತ್ತರಾಖಂಡ ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶವಾಗಿದ್ದು, ಇಲ್ಲಿ ಭೂಕಂಪದ ಸಾಧ್ಯತೆ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಇದೆ. ಕಳೆದ ೨೦೦ ವರ್ಷದಲ್ಲಿ ೧೨೨ ಬಾರಿ ಭೂಕಂಪ ಸಂಭವಿಸಿದೆ. ಜತೆಗೆ, ಮೇಘವರ್ಷ, ಕಾಡಿನ ಬೆಂಕಿ, ಪ್ರಕೃತಿ ಸಹಜ ಹಾಗೂ ಮನುಷ್ಯ ನಿರ್ಮಿತ ಭೂ ಕುಸಿತವೂ ಇದೆ. ಅರಣ್ಯ ನಾಶದಿಂದ ಇಳಿಜಾರಿನ ಮಣ್ಣು ಮಳೆಯೊಂದಿಗೆ ನದಿಯನ್ನು ಸೇರುತ್ತದೆ. ನಿರ್ಲಕ್ಷ್ಯದ ರಸ್ತೆ ನಿರ್ಮಾಣ ಮತ್ತು ಬಂಡೆಗಳನ್ನು ಸಿಡಿಸಲು ಡೈನಮೈಟ್ ಬಳಕೆಯಿಂದ ಕಲ್ಲುಗಳಲ್ಲಿ ಛಿದ್ರತೆ ಹೆಚ್ಚಿದೆ. ಹೀಗೆ ಕ್ರೋಡೀಕರಣಗೊಂಡ ಎಲ್ಲ ತ್ಯಾಜ್ಯಗಳು ನದಿಯನ್ನು ಸೇರಿ, ಅದರ ಹರಿವಿಗೆ ತಡೆಯೊಡ್ಡುತ್ತಿವೆ. ನದಿಗಳಲ್ಲಿ ತಾತ್ಕಾಲಿಕ ಕೊಳಗಳು ಸೃಷ್ಟಿಯಾಗುತ್ತವೆ. ಹೆಚ್ಚು ಮಳೆಯಾದಾಗ ಇವುಗಳು ಒಡೆದು, ಕೆಳ ಹಂತದಲ್ಲಿ ಮನೆ, ರಸ್ತೆ, ಗದ್ದೆಗಳಿಗೆ ನುಗ್ಗಿ ಸರ್ವನಾಶ ಮಾಡುತ್ತವೆ ಎಂದಿತು.
‘ಮುಂದೆಯೂ ಹಠಾತ್ ಪ್ರವಾಹಗಳಿಂದ ಹೆಚ್ಚು ನಷ್ಟ ಸಂಭವಿಸಲಿದೆ. ನದಿ ತೀರದಲ್ಲಿ ವಸತಿ ಮತ್ತು ವಾಣಿಜ್ಯಿಕ ನಿರ್ಮಾಣಗಳಿಗೆ ಅನುಮತಿ ನೀಡಬಾರದು. ನದಿ ಪಾತ್ರದಲ್ಲಿ ರೆಸಾರ್ಟ್ಗೆ ಅನುಮತಿ ಕೂಡದು. ಒಂದು ವೇಳೆ ೧೯೭೦ರ ಪ್ರವಾಹ ಮರುಕಳಿಸಿದರೆ, ನದಿ ಪಾತ್ರದ ೫ ಮುಖ್ಯ ನಗರಗಳು ಮತ್ತು ಹಲವು ಸಣ್ಣ ವಸತಿ ಪ್ರದೇಶಗಳು ಹಾನಿಗೊಳಗಾಗಲಿವೆ’ ಎಂದು ಹೇಳಿತು.

ಸಮಿತಿಯ ಶಿಫಾರಸುಗಳೆಂದರೆ
೧.ಭೂಕುಸಿತ, ಭೂಮಿಯಲ್ಲಿ ಸೀಳು ಮತ್ತು ನದಿಯ ಓಟಕ್ಕೆ ತಡೆಯೊಡ್ಡಬಲ್ಲ ಸ್ಥಳಗಳನ್ನು ಗುರುತಿಸಿ, ಮಳೆಗೆ ಮುನ್ನ ಹಾಗೂ ಬಳಿಕ ಉಪಗ್ರಹ ತಂತ್ರಜ್ಞಾನ ಬಳಸಿ ತೀವ್ರ ನಿಗಾ ಇರಿಸಬೇಕು.
೨.ಹಾನಿಗೀಡಾಗಿರುವ ಇಳಿಜಾರುಗಳನ್ನು ಗುರುತಿಸಿ,ದೇಸಿ ಮರಗಳನ್ನು ನೆಡುವ ಮೂಲಕ ಭೂಮಿಯನ್ನು ಸ್ಥಿರಗೊಳಿಸಬೇಕು. ಚೆಕ್ ಡ್ಯಾಂ ಮತ್ತು ತಡೆಗೋಡೆಗಳನ್ನು ನಿರ್ಮಿಸಬೇಕು.
೩.ಪರಿಹಾರ ಮತ್ತು ರಕ್ಷಣಾ ಕಾರ್ಯ್ಗಳ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡಬೇಕು. ಇದರಿಂದ ಗ್ರಾಮ ಪಂಚಾಯಿತಿ,ಯುವ ಮತ್ತು ಮಹಿಳಾ ಸಂಘಟನೆಗಳನ್ನು ಸನ್ನದ್ಧಗೊಳಿ–ಸಬಹುದು.
ಯಥಾಪ್ರಕಾರ ಈ ವರದಿಯೂ ಸರ್ಕಾರದ ಕಡತದ ರಾಶಿಯಲ್ಲಿ ಸೇರಿಹೋಯಿತು.

ಇನ್ನೊಂದು ಭೀಕರ ಅವಘಡ
ಸರಕಾರವನ್ನು ಜಡ ನಿದ್ರೆಯಿಂದ ಎಚ್ಚರಿಸಲು ದೇಶ ಇನ್ನೊಂದು ಕಂಡರಿಯದ ಇನ್ನೊಂದು ಭೀಕರ ಅವಘಡ ಎದುರಿಸ ಬೇಕಾಯಿತು. ಅದು ನಡೆದದ್ದು: ೧೪ ರಿಂದ ೧೭, ಜೂನ್ ೨೦೧೩ರಲ್ಲಿ. ಡಿಸೆಂಬರ್ ೨೦೦೪ರ ಸುನಾಮಿ ಬಳಿಕ ಸಂಭವಿಸಿದ ಅತ್ಯಂತ ಭಯಾನಕ ಪ್ರಾಕೃತಿಕ ವಿಕೋಪದಲ್ಲಿ ಸುಮಾರು ೫,೭೦೦ ಮಂದಿ, ಇವರಲ್ಲಿ ೯೩೪ ಮಂದಿ ಸ್ಥಳೀಯರು ಮೃತಪಟ್ಟರು. ೪೨೦೦ ಹಳ್ಳಿಗಳಿಗೆ ಹಾನಿಯಾಯಿತು.
ಜೂನ್ ೧೩ರಿಂದ ೧೭ರ ಅವಧಿಯಲ್ಲಿ ವಾಡಿಕೆಗಿಂತ ಶೇ ೩೭೫ರಷ್ಟು ಹೆಚ್ಚು ಮಳೆಯಾಯಿತು. ೩೮೦೦ ಮೀಟರ್ ಎತ್ತರದಲ್ಲಿ ಚೋರ್ಬಾರಿ ಹಿಮನದಿ ಕರಗಿ, ಮಂದಾಕಿನಿ ನದಿಗೆ ನೀರು ಹರಿದು, ಗೋವಿಂದಘಾಟ್, ಕೇದಾರಧಾಮ, ರುದ್ರಪ್ರಯಾಗ್ ಸೇರಿದಂತೆ ಇನ್ನಿತರ ಕಡೆ ಭೀಕರ ಪ್ರವಾಹ ಉಂಟಾಯಿತು. ಜತೆಗೆ, ಹಿಮಾಚಲ ಪ್ರದೇಶ, ಪಶ್ಚಿಮ ನೇಪಾಳ, ದಿಲ್ಲಿ,ಹರಿಯಾಣ, ಉತ್ತರ ಪ್ರದೇಶ ಮತ್ತು ಟಿಬೆಟ್ನ ಕೆಲ ಭಾಗದಲ್ಲೂ ಭಾರಿ ಮಳೆಯಾಯಿತು.
ಗೌರಿಕುಂಡವಲ್ಲದೆ, ಕೇದಾರನಾಥಕ್ಕೆ ತೆರಳುವ ಮಾರ್ಗದಲ್ಲಿನ ರಾಮ್ಘಡ ಸಂಪೂರ್ಣ ಕೊಚ್ಚಿಹೋಯಿತು. ಸೋನ್ಪ್ರಯಾಗಕ್ಕೆ ತೀವ್ರ ಧಕ್ಕೆ ತಗುಲಿತು. ಚಾರ್ಧಾಮ(ಗಂಗೋತ್ರಿ,ಯಮುನೋತ್ರಿ,ಕೇದಾರನಾಥ,ಬದರೀನಾಥ) ಯಾತ್ರೆಗೆ ಬಂದಿದ್ದ ೭೦ಸಾವಿರ ಪ್ರಯಾಣಿಕರು ಎಲ್ಲೆಂದರಲ್ಲಿ ಸಿಕ್ಕಿಕೊಂಡರು. ಹೂವಿನ ಕಣಿವೆ(ವ್ಯಾಲಿ ಆಫ್ ಫ್ಲವರ್),ರೂಪ್ಕುಂಡ ಮತ್ತು ಸಿಖ್ಖರ ಪವಿತ್ರ ಸ್ಥಳ ಹೇಮಕುಂಡದಲ್ಲೂ ಜನ ಸಿಕಲುಕಿಕೊಂಡರು. ಜೋಶಿ ಮಠ ಸೇರಿದಂತೆ ಹಲವೆಡೆ ರಾ ಹೆ ೫೮ ಕೊಚ್ಚಿಹೋಯಿತು.

ಕೇದಾರನಾಥ ಮಂದಿರಕ್ಕೆ ಹೆಚ್ಚು ಹಾನಿ ಆಗಲಿಲ್ಲ. ಆದರೆ,ಕೇದಾರನಾಥ ಪರ್ವತದಲ್ಲಿನ ಹಿಮ ಕರಗಿ, ೬ ಕಿಮೀ ದೂರದಲ್ಲಿದ್ದ ದೇವಳವನ್ನು ಸುತ್ತುವರಿಯಿತು. ದೇವಾಲಯವನ್ನು ಮತ್ತೆ ತೆರೆದಿದ್ದು-ಮೇ ೪, ೨೦೧೪ರಂದು.
ಜನರ ರಕ್ಷಣೆಯಲ್ಲಿ ಸೇನೆ ತೋರಿದ ಅಪ್ರತಿಮ ಶ್ರದ್ಧೆ ಅವರ್ಣನೀಯ. ಸೇನೆಯ ೧೦ಸಾವಿರ ಸೈನಿಕರು ಮತ್ತು ೧೧ ಹೆಲಿಕಾಪ್ಟರ್, ವಾಯುದಳದ ೩೬ ಹೆಲಿಕಾಪ್ಟರ್ ಸೇರಿದಂತೆ ೪೩ ವಿಮಾನ, ನೌಕಾದಳದ ೪೫ ಮುಳುಗುಗಾರರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜೂನ್ ೧೭-೩೦ರ ಅವಧಿಯಲ್ಲಿ ಐಎಎಫ್ ೧೮,೪೨೪ ಜನರನ್ನು ಸ್ಥಳಾಂತರಿಸಿತ್ತು.
ಜೂನ್ ೨೫ರಂದು ಗೌರಿಕುಂಡದ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ವಾಯುದಳದ ಅಧಿಕಾರಿಗಳು, ಎನ್ಡಿಆರ್ಎಫ್ನ ೯ ಮತ್ತು ಐಟಿಬಿಪಿಯ ೬ ಮಂದಿ ಮರಣಹೊಂದಿದರು. ಬೆಟ್ಟ ಗುಡ್ಡಗಳಲ್ಲಿ ಕಾರ್ಯಾಚರಣೆ ನಡೆಸಿ ಅನುಭವವಿದ್ದ ಐಟಿಬಿಪಿಯ ೨ಸಾವಿರ ಸೈನಿಕರು ೧೫ ದಿನದಲ್ಲಿ ೩೩ಸಾವಿರ ಜನರನ್ನು ರಕ್ಷಿಸಿದರು.
ಎಂದಿನಂತೆ ದೇಶ, ವಿದೇಶದಿಂದ ನೆರವಿನ ಮಹಾಪೂರವೇ ಹರಿಯಿತು. ಉದ್ದುದ್ದ ಭಾಷಣಗಳು ಉದುರಿದವು. ಆದರೆ, ಹಿಮಾಲಯದ ಮೇಲೆ ಹಲ್ಲೆ ನಿಲ್ಲಲಿಲ್ಲ. ಈ ಪ್ರಾಕೃತಿಕ ಅವಘಡದ ಗಾಯ ಇನ್ನೂ ಮಾಸಿಲ್ಲ.

ಅಪ್ಪಿಕೋ, ಮ್ಯಾಡಲೀನ್ ಸ್ಲೇಡ್ ಮತ್ತು ಚಂಡಿಪ್ರಸಾದ್ ಭಟ್ ಅವರನ್ನು ಹೆಣೆಯುವ ಸಾಮಾನ್ಯ ಎಳೆಯೊಂದಿದೆ. ಅದು ಚಿಪ್ಕೋ ಚಳವಳಿ.
ಬಡವರ ಪರಿಸರ ಚಳವಳಿ ಎಂದೇ ಕರೆಸಿಕೊಳ್ಳುವ ಚಿಪ್ಕೋ ಆರಂಭವಾಗಿದ್ದು ೧೯೭೩ರಲ್ಲಿ. ಆಗ ೨೪/೭ ಸುದ್ದಿ ಚಾನೆಲ್ಗಳಿರಲಿಲ್ಲ. ಘಡವಾಲ್ನ ಒಳನಾಡಿಗೆ ವೃತ್ತಪತ್ರಿಕೆಗಳು ತಲುಪಲು ೩-೪ ದಿನ ಬೇಕಾಗುತ್ತಿತ್ತು. ೧೯೭೦ರ ಪ್ರವಾಹದ ವಿನಾಶಕರ ಹೆಜ್ಜೆ ಗುರುತುಗಳು ಇನ್ನೂ ಮಾಸಿರಲಿಲ್ಲ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಂಡಲ ಗ್ರಾಮದಲ್ಲಿನ ೧೪ ಮರಗಳನ್ನು ಅಹ್ಮದಾಬಾದ್ನ ಕ್ರೀಡೋಪಕರಣ ತಯಾರಿಕೆ ಸಂಸ್ಥೆ ಸೈಮಂಡ್ಸ್ ಕಂಪನಿಗೆ ಗುತ್ತಿಗೆ ಕೊಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಕಂಪನಿಯ ಮರ ಕಡುಕರನ್ನು ದಶೋಲಿ ಗ್ರಾಮ ಸ್ವರಾಜ್ಯ ಮಂಡಳ ಮತ್ತು ಚಂಡಿಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಹಿಮ್ಮೆಟ್ಟಿಸಲಾಯಿತು. ಇದು ನಡೆದಿದ್ದು ಏಪ್ರಿಲ್ ೨೪ ರಂದು. ಗೋಪೇಶ್ವರದಿಂದ ೬೦ ಕಿಮೀ ದೂರದ ಫಟಾ-ರಾಂಪುರ ಕಾಡಿಗೆ ಇದೇ ಕಂಪನಿಯ ಮಂದಿ ಕಾಲಿಟ್ಟಾಗ ಅಲ್ಲಿಂದಲೂ ಅವರನ್ನು ಓಡಿಸಲಾಯಿತು.

೧೯೭೪ರಲ್ಲಿ ಜೋಶಿ ಮಠ ವಲಯದ ರೇಣಿ ಗ್ರಾಮದ ಪೆಂಗ್ ಮುರೇಂದ್ರ ಕಾಡಿನಲ್ಲಿನ ಮರಗಳ ಕಟಾವಿಗೆ ಅರಣ್ಯ ಇಲಾಖೆ ಗುರುತು ಹಾಕಿತ್ತು. ಇದು ೧೯೭೦ರ ಪ್ರವಾಹದಲ್ಲಿ ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದು. ಋಶಿಕೇಶದ ಗುತ್ತಿಗೆದಾರ ಜಗಮೋಹನ್ ಭಲ್ಲಾ ಎಂಬಾತ ೬೮೦ ಹೆಕ್ಟೇರ್ನ್ನು ೪.೭ ಲಕ್ಷ ರೂ.ಗೆ ಗುತ್ತಿಗೆ ಪಡೆದುಕೊಂಡಿದ್ದ. ೫೦ ವರ್ಷದ ಗೌರಾದೇವಿಯ ಮುಂದಾಳತ್ವದಲ್ಲಿ ಮಹಿಳೆಯರು ಒಟ್ಟಾಗಿ, ಗುತ್ತಿಗೆದಾರನ ಕಡೆಯವರನ್ನು ಓಡಿಸಿ ಬಿಟ್ಟರು. ಮಹಿಳೆಯರು ನೇರ ಕ್ರಿಯೆಯಲ್ಲಿ ಪಾಲ್ಗೊಂಡು, ಜಯ ಸಾಧಿಸಿದ ಇದು ಚಿಪ್ಕೋ ಆಂದೋಲನದ ಪ್ರಮುಖ ಘಟ್ಟ. ಘಟನೆಯಿಂದ ಎಚ್ಚೆತ್ತ ಸರ್ಕಾರ ಸಮಿತಿಯೊಂದನ್ನು ನೇಮಿಸಿತು. ೨ ವರ್ಷದ ಬಳಿಕ ವರದಿ ನೀಡಿದ ಸಮಿತಿಯ ಶಿಫಾರಸು ಆಧರಿಸಿ,ಅಲಕಾನಂದೆಯ ಮೇಲಿನ ಜಲಾನಯನ ಪ್ರದೇಶದ ೧೨೦೦ ಚದರ ಕಿಮೀ ಪ್ರದೇಶದಲ್ಲಿ ವಾಣಿಜ್ಯ ಅರಣ್ಯಗಾರಿಕೆಯನ್ನು ನಿಷೇಧಿಸಲಾಯಿತು. ಬಳಿಕ ನಿಷೇಧವನ್ನು ಮತ್ತೆ ೧೦ ವರ್ಷ ಮುಂದುವರಿ–ಸಲಾಯಿತು.

ಸಂವಹನ ಮಾಧ್ಯಮಗಳು ಇಲ್ಲದಿದ್ದರೂ, ಚಳವಳಿ ವ್ಯಾಪಿಸಿತು. ಜು.೨೫ ರಂದು ಉತ್ತರ ಕಾಶಿಯ ವ್ಯಾಲಿ ಅರಣ್ಯ ಪ್ರದೇಶದಲ್ಲಿ ಮರ ಕತ್ತರಿಸುವುದನ್ನು ಸ್ಥಳೀಯರು ಪ್ರತಿಭಟಿಸಿದರು. ಬಳಿಕ ನೈನಿತಾಳ್ನಲ್ಲಿ ನೇನಾದೇವಿ ಮೇಳದ ಮೂಲಕ ಕುಮಾಂವ್ ಪ್ರದೇಶವನ್ನು ಪ್ರವೇಶಿಸಿದ ಪ್ರತಿಭಟನೆ, ನೈನಿತಾಲ್, ರಾಮನಗರ್, ಕೊಟ್ದ್ವಾರ್ನಲ್ಲಿ ಅರಣ್ಯ ಹರಾಜನ್ನು ತಡೆಯಿತು. ೧೯೭೭ರಲ್ಲಿ ತವಾಘಾಟ್ನಲ್ಲಿ ಸಂಭವಿಸಿದ ಭೂಕುಸಿತದ ಬಳಿಕ, ಕುಮಾಂವ್ ಪ್ರದೇಶದಲ್ಲಿ ಪ್ರತಿಭಟನೆ ತೀವ್ರಗೊಂಡಿತು. ಅಕ್ಟೋಬರ್ ೬, ೧೯೭೭ರಲ್ಲಿ ನೈನಿತಾಲ್ನ ಶೈಲಿ ಹಾಲ್ನಲ್ಲಿ ನಡೆಯುತ್ತಿದ್ದ ಅರಣ್ಯ ಹರಾಜನ್ನು ವಿದ್ಯಾರ್ಥಿಗಳು ತಡೆದರು.
ತೆಹ್ರಿ ಘರ್ವಾಲ್ನಲ್ಲಿ ಸುಂದರಲಾಲ್ ಬಹುಗುಣ ಅವರ ನೇತೃತ್ವದಲ್ಲಿ ಹೆನ್ವಾಲ್ ಕಣಿವೆಯಲ್ಲಿ ಮರ ಕಡಿತವನ್ನು ವಿರೋಧಿಸಿ, ಪ್ರತಿಭಟನೆ. ಡಿಸೆಂಬರ್ ೧೯೭೭ರಲ್ಲಿ ಮಹಿಳೆಯರು ಸೇರಿದಂತೆ ೨೩ ಕಾರ್ಯನಕರ್ತರೊಂದಿಗೆ, ಅದ್ವಾನಿ ಮತ್ತು ಸಾಲೆಟ್ನ ಅರಣ್ಯ ಹರಾಜು ನಡೆಯುತ್ತಿದ್ದ ನರೇಂದ್ರ ನಗರದಲ್ಲಿ ಬಂಧನಕ್ಕೆ ಒಳಗಾದರು. ಬದ್ವಾರ್ಘರ್ ಅರಣ್ಯ ರಕ್ಷಣೆಗೆ ೧೯೭೯,ಜ.೯ ರಂದು ಉಪವಾಸ ಆರಂಭಿಸಿದ ಬಹುಗುಣ ಅವರನ್ನು ಬಂಧಿಸಲಾಯಿತು. ಬಯಂದರ್ ಕಣಿವೆಯಲ್ಲಿ ಮರ ಕಡಿತ ತಡೆಯಲು ಮುಂದಾದ ಪುಲ್ನಾದ ಮಹಿಳೆಯರ ಮೂಲಕ ಚಿಪ್ಕೋ ಮತ್ತೆ ಆರಂಭಗೊಂಡಿತು. ಏಪ್ರಿಲ್ ೧೯೮೧ರಲ್ಲಿ ಹಿಮಾಲಯದಲ್ಲಿ೧೦೦೦ ಮೀಗಿಂತ ಹೆಚ್ಚು ಎತ್ತರದಲ್ಲಿ ಮರ ಕಡಿತ ನಿಲ್ಲಿಸಬೇಕೆಂದು ಬಹುಗುಣ ಅರ್ನಿದಿಷ್ಟಾವಧಿ ನಿರಶನ ಆರಂಭಿಸಿದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪರಿಶೀಲನೆಗೆ ೮ ಮಂದಿ ಪರಿಣತರ ಸಮಿತಿ ರಚಿಸಿದರು. ಸಮಿತಿ ತನ್ನ ವರದಿಯಲ್ಲಿ ಅರಣ್ಯ ಇಲಾಖೆಯ ಕಾರ್ಯೆನೀತಿಯನ್ನು ದೂರಲಿಲ್ಲ. ಆದರೆ, ಇಂದಿರಾಗಾಂಧಿ ಅವರು ಉತ್ತರಾಖಂಡ ಹಿಮಾಲಯದಲ್ಲಿ ೧೫ ವರ್ಷ ಕಾಲ ಮರ ಕಡಿತಕ್ಕೆ ನಿಷೇಧ ಹೇರಿದರು.

ಈಗ ಪರಿಸ್ಥಿತಿ ಏನಿದೆ?
ಉತ್ತರಾಖಂಡ ಮಾತ್ರವಲ್ಲದೆ, ಹಿಮಾಲಯದ ತಪ್ಪಲಿನ ಎಲ್ಲ ರಾಜ್ಯಗಳಲ್ಲಿ ಅಸಂಖ್ಯ ಅಣೆಕಟ್ಟು-–ವಿದ್ಯುತ್ ಉತ್ಪಾದನೆ ಸ್ಥಾವರಗಳು ತಲೆಯೆತ್ತಿವೆ. ಜನರ ಪ್ರತಿರೋಧವನ್ನೂ ಲೆಕ್ಕಿಸದೆ, ಪರಿಸರ ರಕ್ಷಣೆಯ ಕನಿಷ್ಠ ಕಾಳಜಿ ಇಲ್ಲದೆ ಈ ಯೋಜನೆಗಳನ್ನು ರೂಪಿಸಲಾಗಿದೆ. ನಾನಾ ಕಾರಣಗಳಿಂದ ಕೃಷಿಯನ್ನು ತೊರೆಯುವವರ ಸಂಖ್ಯೆ ಹೆಚ್ಚಿದ್ದು, ನಗರಗಳು ಕಿಕ್ಕಿರಿಯುತ್ತಿವೆ. ಉತ್ತರಾಖಂಡ ರಾಜ್ಯದ ಸುಮಾರು ೧೬,೭೯೩ ಹಳ್ಳಿಗಳಲ್ಲಿ ೩೬೦೦ ಗ್ರಾಮಗಳು ಬರಿದಾಗಿವೆ. ಚಿಪ್ಕೋ ಆಂದೋಲನದ ಮೂಲಸ್ಥಳವಾದ ಗೋಪೇಶ್ವರ ನಗರ ಮತ್ತು ಇದರಿಂದ ಸ್ವಲ್ಪ ಕೆಳಗೆ ಗೋಪೇಶ್ವರ ಗ್ರಾಮವಿದ್ದು, ಸುತ್ತ ಓಕ್ ಮರಗಳ ದಟ್ಟ ಕಾಡು ಇದೆ. ಕೇಂದ್ರ ಹಿಮಾಲಯದ ಸದಾ ಹಸುರಿನ ಮೂಲ ಮರವಿದು. ಗ್ರಾಮದ ಪಕ್ಕದಲ್ಲಿದ್ದ ಬಂಜರು ಭೂಮಿಯಲ್ಲಿ ೧೯೮೦ರಲ್ಲಿ ಹಚ್ಚಿದ್ದ ಸಸಿಗಳು ಈಗ ೧೨-೧೮ ಅಡಿ ಬೆಳೆದಿವೆ. ಆದರೆ, ಈ ವನದ ಉಸ್ತುವಾರಿಗೆ ನೇಮಿಸಿದ್ದ ಸಮಿತಿಯಲ್ಲಿ ಇದ್ದ ಯಾರೂ ಜೀವಂತವಿಲ್ಲ. ಯಾರು ಶಾಶ್ವತ ಎಂಬುದು ಇದರಿಂದ ಸ್ಪಷ್ಟ.ಈ ಕಿರು ಅರಣ್ಯ ೨೫ ವರ್ಷಗಳಿಂದ ಗ್ರಾಮದ ಎಲ್ಲ ಅಗತ್ಯಗಳನ್ನು ಪೂರೈಸುತ್ತಿದೆ. ಪಕ್ಕದ ಪಪ್ಡಿಯಾನಾ ಗ್ರಾಮದಲ್ಲೂ ಇಂಥದ್ದೇ ಕಾಡು ಇದೆ. ಚಿಪ್ಕೋದ ಇನ್ನೊಬ್ಬ ತಲೆಯಾಳು ಮುರಾರಿ ಲಾಲ್ ಇದರ ಮಾರ್ಗದರ್ಶಕ. ಓಕ್ ಮರವೇ ಏಕೆ ಎಂಬುದಕ್ಕೆ ನೀಡುವ ಕಾರಣ- ಅದರ ಎಲೆ ಪೊಷಕಾಂಶ ಭರಿತ, ನೀರು ಹೀರಿಕೊಳ್ಳುವ ಸೇಂದ್ರೀಯ ಮಣ್ಣು ನೀಡುತ್ತದೆ. ಓಕ್ ಕಾಡು ಮಳೆ ನೀರನ್ನು ಹಿಡಿದಿಟ್ಟು ಕೊಂಡು ನಿಧಾನವಾಗಿ ಬಿಡುವುದರಿಂದ ತೊರೆಗಳು, ಸಣ್ಣ ನದಿಗಳು ವರ್ಷವಿಡೀ ಹರಿಯುತ್ತವೆ.

ಅಹ್ಮದಾಬಾದ್ನ ಇಸ್ರೋದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ೧೯೯೪ರ ಅಧ್ಯಯನದ ಪ್ರಕಾರ, ೧೯೭೧-೯೨ರ ಅವಧಿಯಲ್ಲಿ ಅಲಕಾನಂದೆಯ ಜಲಾನಯನ ಪ್ರದೇಶಗಳಾದ ಕಲ್ಪಗಂಗಾ, ಮೆನಾಗಢ, ಅಮೃತಗಂಗಾ, ನಾಗೋಲ್ಗಢ ಇನ್ನಿತರ ಗ್ರಾಮಗಳಲ್ಲಿ ೫೧೧೩ ಹೆಕ್ಟೇರ್ ಅರಣ್ಯವನ್ನು ಬೆಳೆಸಲಾಗಿದೆ. ಇದರಲ್ಲಿ ೧೮೫೪ ಹೆಕ್ಟೇರ್ ಪ್ರದೇಶ ಸಂಪೂರ್ಣ ಬಂಜರು ಪ್ರದೇಶವಾಗಿತ್ತು.
ಆಂದೋಲನದ ಅತಿ ಮುಖ್ಯ ಯಶಸ್ಸೆಂದರೆ, ೧೯೨೭ರ ಭಾರತೀಯ ಅರಣ್ಯ ಕಾಯಿದೆಗೆ ತಿದ್ದುಪಡಿ ತಂದು ೧೯೮೦ರ ಅರಣ್ಯ ಸಂರಕ್ಷಣೆ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಇದರ ಪ್ರಕಾರ ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಂತಿಲ್ಲ.

ಚಮೋಲಿಯಲ್ಲಿ ದಶೋಲಿ ಗ್ರಾಮ ಸ್ವರಾಜ್ಯ ಮಂಡಳ ಈಗಲೂ ಬಂಜರು ಭೂಮಿಯಲ್ಲಿ ಗಿಡ ನೆಡುವ ಕಾರ್ಯಯಕ್ರಮ ನಡೆಸುತ್ತಿದೆ. ಅರಣ್ಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ಬಚೇರ್ನ ಸಸ್ಯತೋಟದಲ್ಲಿ ವಾಣಿಜ್ಯಿಕವಾಗಿ ಮುಖ್ಯವಾದ ಮರಗಳ ಸಸ್ಯಗಳನ್ನು ರೈತರಿಗೆ ಹಂಚುತ್ತಿದೆ. ೨೩ ಗ್ರಾಮಗಳಲ್ಲಿ ಮೇವಿಗೆ ನೇಪಿಯರ್ ಹುಲ್ಲು ಮತ್ತು ಉಳುಮೆಗೆ ಕಬ್ಬಣದ ನೇಗಿಲು ಪರಿಚಯಿಸಿದೆ.
ತೆಹ್ರಿಯಲ್ಲಿ ಈಗ ವಿಜಯ್ ಜರ್ದಾರಿ ನೇತೃತ್ವದ ಬೀಜ ಬಚಾವೋ ಆಂದೋಲನ (ಬಿಬಿಎ, ಹವಾಮಾನ ಬದಲಾವಣೆಯನ್ನು ತಡೆಯಬಲ್ಲ ಸಾಂಪ್ರದಾಯಿಕ ಬೀಜಗಳಿಗೆ ಉತ್ತೇಜನ ನೀಡುತ್ತದೆ. ಜರ್ದಾರ್ಗಾವ್ ಇದರ ಕೇಂದ್ರ) ಮತ್ತು ಅರಣ್ಯ ರಂಜನ್ ನೇತೃತ್ವದ ಯುಜೆಜೆಎಸ್(ಉತ್ತರಾಖಂಡ ಜನಜಾಗೃತಿ ಸಂಸ್ಥಾನ, ಕೃಷಿಯನ್ನು ಲಾಭದಾಯಕವಾಗಿಸುವ ಉದ್ದೇಶದ್ದು) ಹವಾ ಎದ್ದಿದೆ. ಡೆಹ್ರಾಡೂನ್ನಲ್ಲಿ ಚಿಪ್ಕೋ ಆಂದೋಲನ–ಕಾರರು ಹಿಮಾಲಯ ಆಕ್ಷನ್ ರಿಸರ್ಚ್ ಕೇಂದ್ರವನ್ನು ಆರಂಭಿಸಿದ್ದು, ರೈತರಿಗೆ ಸಾವಯವ ಕೃಷಿ ಮತ್ತು ಸಣ್ಣ ಉದ್ದಿಮೆ ನಡೆಸಲು ತರಬೇತಿ ನೀಡುತ್ತಿದ್ದಾರೆ.?ಯಾರಿವರು ಚಂಡಿಪ್ರಸಾದ್ ಭಟ್?
ಉತ್ತರಾಖಂಡದ ಗೋಪೇಶ್ವರದಲ್ಲಿ ೧೯೩೪ರಲ್ಲಿ ಅರ್ಚಕರ ಮನೆತನದಲ್ಲಿ ಜನನ. ಎಳವೆಯಲ್ಲೇ ಪಿತೃವಿಯೋಗ. ಸಾರಿಗೆ ಸಂಸ್ಥೆಯಲ್ಲಿ ಗುಮಾಸ್ತ ಕೆಲಸ. ೧೯೫೦ರಲ್ಲಿ ಮೊದಲ ಸಂಘರ್ಷ. ಘಡವಾಲ್ನ ಬಸ್ ಕಂಪನಿಗಳು ಬಯಲು ಪ್ರದೇಶದವರಿಂದ ಮನ ಬಂದ ಪ್ರಯಾಣ ಶುಲ್ಕ ವಸೂಲು ಮಾಡುತ್ತಿದ್ದರು. ಭಟ್ ಮತ್ತು ಸ್ನೇಹಿತರು ಇದನ್ನು ಪ್ರಶ್ನಿಸಿದಾಗ, ‘ಅವರು ಇಲ್ಲಿನವರಲ್ಲ. ಇದರಿಂದ ನಿನಗೇನು ಸಮಸ್ಯೆ?’ಎಂಬ ಉತ್ತರ ಎದುರಾಯಿತು. ಇದನ್ನು ಬಗೆಹರಿಸಲು ಸಣ್ಣ ಹೋರಾಟ ಅಗತ್ಯವಾಯಿತು.
೧೯೫೮ರಲ್ಲಿ ಜಯಪ್ರಕಾಶ ನಾರಾಯಣ್ ಭೇಟಿ ಬಳಿಕ ಬದುಕಿನಲ್ಲಿ ತಿರುವು. ೧೯೬೪ರಲ್ಲಿ ದಶೋಲಿ ಗ್ರಾಮ ಸ್ವರಾಜ್ಯ ಸಂಘ ಸ್ಥಾಪನೆ. ಸುಂದರಲಾಲ್ ಬಹುಗುಣ ಅವರ ಪ್ರಕಾರ, ಚಿಪ್ಕೋ ಆಂದೋಳನದ ಮುಖ್ಯ ಸಂಚಾಲಕ. ‘ಪರ್ವತ್ ಪರ್ವತ್ ಬಸ್ತಿ ಬಸ್ತಿ’(ಎನ್ಬಿಟಿ, ೨೦೧೧) ಜಗತ್ತಿನ ನದಿ ತೀರ ಮತ್ತು ಬೆಟ್ಟಸಾಲುಗಳಲ್ಲಿ ನಡೆಸಿದ ಪಾದಯಾತ್ರೆ ಕುರಿತ ಪುಸ್ತಕ. ರೇಮನ್ ಮ್ಯಾಗ್ಸೆಸೆ(೧೯೮೨),ಪದ್ಮಶ್ರೀ(೧೯೮೬), ಪದ್ಮಭೂಷಣ (೨೦೦೬),ಗಾಂಧಿ ಶಾಂತಿಪುರಸ್ಕಾರ(೨೦೧೫). ಎಲ್ಲ ಶ್ರೇಯ ಸಾಮೂಹಿಕ ಪ್ರಯತ್ನಕ್ಕೆ ಸಲ್ಲ ಬೇಕು ಎನ್ನುವ ಅವರು, ಪ್ರಶಸ್ತಿ ಯನ್ನು ಮಹಿಳಾ ದಳಕ್ಕೆ ಕೊಡಬೇಕೆಂದು ಹಠ ಹಿಡಿದು ಕೊಡಿಸಿದ್ದೂ ಇದೆ. ‘ದೇರ್ ಈಸ್ ಟೈಮ್ ಟು ಕನ್ಫ್ರಾಂಟ್ ಆ್ಯಂಡ್ ಎ ಟೈಮ್ ಟು ಕನ್ಸ್ಟ್ರಕ್ಟ್’ ಇದು ಚಂಡಿಪ್ರಸಾದ್ ಭಟ್ ಅವರ ಧ್ಯೇಯವಾಕ್ಯ. ಈ ಪರಿಸರ ಆಂದೋಲನದ ಮೊದಲ ಹೆಸರು ‘ಅಂಗಲ್ವಾಲ್ತಾ’ ಎಂದರೆ, ಅಪ್ಪಿಕೋ. ಬಳಿಕ ಅದು ಚಿಪ್ಕೋ ಎಂಬ ಹೆಸರು ಪಡೆದುಕೊಂಡಿತು.
ಅವರ ವಿಳಾಸ:
ಚಂಡಿ ಪ್ರಸಾದ್ ಭಟ್, ಸರ್ವೋದಯ ಕೇಂದ್ರ, ಗೋಪೇಶ್ವರ, ಚಮೋಲಿ ಜಿಲ್ಲೆ, ಉತ್ತರಾಖಂಡ- –೨೪೬೪೦೧.
Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos