ಜಗತ್ತೇ ತುದಿಗಾಲಲ್ಲಿ ನಿಂತಿದೆ ನಮ್ಮನ್ನನುಸರಿಸಲು - ಭಾಗ-1

March 10, 2018 ⊄   By: ರಾಧಾಕೃಷ್ಣ ಭಡ್ತಿ

ಮ್ಯಾಗ್ಸೆಸ್ಸೆ ಪುರಸ್ಕೃತ, ರಾಜ್ಯದ ಹೆಮ್ಮೆಯ ಉದ್ಯಮಿ, ಅಭಿವೃದ್ಧಿ ಚಿಂತಕ ಹರೀಶ್ ಹಂದೆಯವರ ಸೆಲ್ಕೋ ಎಂಬ ವಿಶಿಷ್ಟ ಸಂಸ್ಥೆಗೆ ಇತ್ತೀಚೆಗಷ್ಟೇ ಪ್ರತಿಷ್ಠಿತ ‘ಜಾಗತಿಕ ಜಾಯೆದ್ ಫ್ಯೂಚರ್ ಎನರ್ಜಿ’ ಪ್ರಶಸ್ತಿ ಸಿಕ್ಕಿದೆ. ದೇಶದ ಸನ್ನಿವೇಶ, ಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿ, ಅಭಿವೃದ್ಧಿ ಹೆಸರಿನ ಅವಾಂತರ, ಯುವ ಮನಸ್ಥಿತಿ, ಪ್ರಾಕೃತಿಕ ದುಂದು...ಇತ್ಯಾದಿಗಳ ಬಗೆಗೆ ಅವರ ಜತೆಗಿನ ಮಾತುಕತೆ ಇಲ್ಲಿದೆ.

ಹಿಂದೊಮ್ಮೆ, ಅವರೇ ನನ್ನೆದುರು ನನ್ನ ನೀರಿನ ಪರವಾದ ಕೆಲಸಗಳ ಬಗ್ಗೆ ಹೆಮ್ಮೆಯ ಮಾತನಾಡುತ್ತಲೇ ಸೂರ್ಯ ಶಕ್ತಿಯ ಅಪವ್ಯಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು -
‘ಒಂದೊಮ್ಮೆ ನೀರು ಇಲ್ಲವೆಂದರೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಈ ಭೂಮಿಯ ಮೇಲೆ ಅಂದಿನಿಂದ ಇಂದಿನವರೆಗೂ ಮಳೆ ಬೀಳುತ್ತಲೇ ಇದೆ. ಭೂಮಿಯಲ್ಲಿ ನೀರು ಖಾಲಿಯಾದರೆ ಮಳೆಯಿಂದ ಅದನ್ನು ಮತ್ತೆ ದಕ್ಕಿಸಿಕೊಳ್ಳ–ಬಹುದು. ಆದರೆ ಬಿಸಿಲು, ಸೂರ್ಯ ಶಕ್ತಿ ಹಾಗಲ್ಲ. ಅದಕ್ಕೆ ಪರ್ಯಾಯವೆಂಬುದೇ ಇಲ್ಲ. ದಟ್ಟ ಅಮೇಜಾನ್ನಂಥ ಕಾಡಿನೊಳಕ್ಕೆ ಹೋದಾಗ ಮಾತ್ರ ಬಿಸಿಲಿನ ಕೊರತೆಯ ‘ಬಿಸಿ’ ಅನುಭವಕ್ಕೆ ಬರುತ್ತದೆ. ಒಂದೇ ಒಂದು ದಿನ ಸೂರ್ಯನ ಬೆಳಕೇ ಈ ಭೂಮಿಯ ಮೇಲೆ ಬೀಳಲಿಲ್ಲವೆಂದಾದರೆ ಜಗತ್ತು ಅಲ್ಲೋಲ –ಕಲ್ಲೋಲವಾಗಿ ಬಿಡುತ್ತದೆ. ದುರ ದೃಷ್ಟವೆಂದರೆ ಅಂಥ ಶಕ್ತಿಯ ಮೌಲ್ಯ ಈವರೆಗೆ ಅರ್ಥ ಆಗಿಲ್ಲ...’
ಬಹುಶಃ ಆ ಸಂದರ್ಭದಲ್ಲಿ ಅವರ ಮಾತಿನ ಅರ್ಥ ಪೂರ್ತಿಯಾಗಿ ಆಗಿರಲಿಲ್ಲವೇನೋ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯವನ್ನು ಬಿಡದೇ ಕಾಡುತ್ತಿರುವ ವಿದ್ಯುತ್ ಕೊರತೆಯ ಸನ್ನಿವೇಶದಲ್ಲಿ ನೆನಪಾದದ್ದು ಹಂದೆ ಯವರು. ಹೌದು, ರಾಜ್ಯ ಹೆಮ್ಮೆಪಡಬಹುದಾದ ಉದ್ಯಮಿ, ಸಾಮಾಜಿಕ ಅಭಿವೃದ್ಧಿಯ ಚಿಂತಕ, ಸೆಲ್ಕೋ ಎಂಬ ವಿಶಿಷ್ಟ ಸಂಸ್ಥೆಯ ರೂವಾರಿ ಡಾ. ಹರೀಶ್ ಹಂದೆಯವರ ಜತೆ ಮೊನ್ನೆ ಮೊನ್ನೆ ಭರ್ತಿ ಎರಡೂವರೆ ತಾಸು ಹರಟೆಗೆ ಕುಳಿತಿದ್ದೆ. ಕೇಂದ್ರ ಸರಕಾರ ಘೋಷಿಸಿದ ಸೌಭಾಗ್ಯ ಯೋಜನೆಯ ಸಾಧ್ಯಾಸಾಧ್ಯತೆ ಸಂಬಂಧ ‘ಹಸಿರುವಾಸಿ’ಗಾಗಿ ಸಂದರ್ಶನ ಒಂದು ನೆಪವಷ್ಟೆ. ಅದನ್ನು ಮಿರಿ ಬಹಳ ದಿನಗಳ ನಂತರ ದೇಶದ ಇಂದಿನ ಸನ್ನಿವೇಶ, ಇಲ್ಲಿನ ಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿ, ಅಭಿವೃದ್ಧಿ ಹೆಸರಿನ ಅವಾಂತರಗಳು, ಯುವ ಜನರ ಮನಸ್ಥಿತಿ, ಪ್ರಾಕೃತಿಕ ಸಂಪನ್ಮೂಲಗಳ ದುಂದು... ಹೀಗೆ ಹತ್ತಾರು ವಿಚಾರಗಳ ಬಗ್ಗೆ ಮೌಲ್ಯಯುತ ಸಂವಾದ ನಮ್ಮಿಬ್ಬರದಾಯಿತು.
ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿರುವ ನೀರು- ವಿದ್ಯುತ್–ಗಳಂಥ ಸೌಲಭ್ಯದ ಕೊರತೆ, ಶೈಕ್ಷಣಿಕ ಕ್ಷೇತ್ರದಲ್ಲಿನ ಹಿನ್ನೆಡೆ, ಉದ್ಯೋಗ- ಗ್ರಾಮೀಣಾಭಿ–ವೃದ್ಧಿಯ ಹೆಸರಿನಲ್ಲಿ ರಾಜಕಾರಣಿಗಳು ನಡೆಸುತ್ತಿರುವ ಪ್ರಹನ, ದೇಶದ ಮೂಲಭೂತ ಸಮಸ್ಯೆಗಳನ್ನು ಅದನ್ನು ಸಂಭಾಳಿಸಲಾರದೇ ಪರದಾಡುತ್ತಿರುವ ಆಡಳಿತ ವ್ಯವಸ್ಥೆಯನ್ನು ಗಮನಿಸಿದಾಗ ತಂತ್ರಜ್ಞಾನದಲ್ಲಿ ಅಪಾರ ಸುಧಾರಣೆಯನ್ನು ಸಾಧಿಸಿದ್ದೇವೆಂದು ಹೇಳಿಕೊಳ್ಳುತ್ತಿ–ರುವ ನಾವು ಅದೆಂಥಾ ಭ್ರಮೆಯಲ್ಲಿದ್ದೇವೆ ಎಂಬುದು ಅರಿವಾಗಿ ನಾಚಿಕೆಯಾಗುತ್ತದೆ.

ಪರಿಗಣಿಸಿದ ಸಂಪನ್ಮೂಲ
ದೇಶದ ನಿವ್ವಳ ಆದಾಯ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ ನಾವು ಅಭಿವೃದ್ಧಿ ಹೊಂದುತ್ತಲೇ ಇದ್ದೇವೆ ಎಂಬ ಅಂಕಿ ಅಂಶಗಳ ಮಾರುದ್ದದ ಪಟ್ಟಿ ಬಿಡುಗಡೆ ಮಾಡುತ್ತಲೇ ಬರುತ್ತಿದ್ದೇವೆ. ಆದರೆ ಅದೇ ಸಮಯಕ್ಕೆ ದೇಶದ ಬಡವರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರುತ್ತಿದೆ. ಏಕೆ ಹೀಗೆ ಎಂಬುದಕ್ಕೆ ಕಾರಣ ಹುಡುಕುತ್ತಾ ಹೋದರೆ ಬಡವರ ಹೆಸರಿನ ಸಬ್ಸಿಡಿಯಲ್ಲಿ ಶ್ರೀಮಂತ ಬದುಕುತ್ತಿದ್ದಾನೆ. ಆತನ ಬೊಕ್ಕಸ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ಅದಕ್ಕೆ ತಕ್ಕಂತೆ ಅಂಥ ಶ್ರೀಮಂತರ ವ್ಯವಹಾರಗಳಲ್ಲಿ, ಅವರು ನಡೆಸುತ್ತಿರುವ ಉದ್ದಿಮೆಗಳಲ್ಲಿ ನಿಸರ್ಗ ಸಿಲುಕಿ ನಲುಗುತ್ತಿದೆ. ಜೀವವೈವಿಧ್ಯ ಕಣ್ಮರೆಯಾಗುತ್ತಿದೆ. ದೇಶದ ಸಂಪತ್ತಿನ ಲೆಕ್ಕಕ್ಕೆ ಕುಳಿತರೆ, ಅಭಿವೃದ್ಧಿಯ ಮಾನದಂಡದ ಸಂದರ್ಭದಲ್ಲಿ ಇಲ್ಲಿನ ನಿಸರ್ಗದ ನಾಶ, ಶಕ್ತಿಯ ಅಪವ್ಯಯವನ್ನು ಪರಿಗಣಿಸುತ್ತಲೇ ಇಲ್ಲ. ಅಭಿವೃದ್ಧಿ ಯೆಂದರೆ ನಮ್ಮಲ್ಲಿ ಅದು ನಗರ ಕೇಂದ್ರಿತ. ಬೆಳವಣಿಗೆ ಎಂದರೆ ಅದು ಶ್ರೀಮಂತ ಕಾರ್ಪೋರೇಟ್ ಕಂಪನಿಗಳ ವಾರ್ಷಿಕ ಗ್ರಾಫ್ನಲ್ಲಿನ ಏರಿಕೆ. ಸೌಲಭ್ಯಗಳ ಪೂರೈಕೆ ಎಂದರೆ ಅದು ಸೀಮಿತ ವ್ಯಕ್ತಿಗಳ ಭಾಗ್ಯ. ಇದನ್ನುಳಿದು ಮಣ್ಣಿನ ಪೂಷಕಾಂಶಗಳ ಹಾನಿ, ಅರಣ್ಯ ನಾಶ, ನೀರಿನ ಮಾಲಿನ್ಯ, ಬಿಸಿಲಿನ ಪೋಲು, ಪವನ ಶಕ್ತಿಯ ಅಪವ್ಯಯ ಹಾಗೂ ಇವೆಲ್ಲದರ ಜತೆಗೆ ಕನಿಷ್ಠ ಮೂಲ ಸೌಕರ್ಯಕ್ಕಾಗಿ ಹೆಣಗಾಡುವ ಬಡವನ ಶ್ರಮ ಇವ್ಯಾವು ವನ್ನೂ ನಾವು ನಮ್ಮ ನಿವ್ವಳ ಆದಾಯ ಅಥವಾ ನಷ್ಟದಲ್ಲಿ ಪರಿಗಣಿಸುತ್ತಲೇ ಇಲ್ಲ.
ಇಂಥ ವಿಚಾರಗಳನ್ನು ಡಾ.ಹಂದೆಯವರು ಕಳೆದ ಹದಿನೈದಿಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ನಿರರ್ಗಳವಾಗಿ ಹೇಳುತ್ತಲೇ ಬಂದಿದ್ದಾರೆ. ಬರೀ ಮಾತನಾಡಿಲ್ಲ. ತಾವು ಸ್ಥಾಪಿಸಿದ, ನಾಡಿನ ಬಡವರು, ಗ್ರಾಮೀಣರ ಬದುಕಿನ ಆಶಾಕಿರಣವೆನಿಸಿದ ಸೆಲ್ಕೊ ಸೋಲಾರ್ ಸಂಸ್ಥೆಯ ಮೂಲಕ ಬಹಳಷ್ಟನ್ನು ‘ನೋಡಿ ಅಭಿವೃದ್ಧಿ ಎಂದರೆ ಇದು’ ಎಂದು ನಮ್ಮ ಕಣ್ಣೆದುರೇ ಮಾಡಿ ತೋರಿಸು ತ್ತಲೂ ಬಂದಿದ್ದಾರೆ. ಇಂದಿನವರೆಗೂ ಅವರು ಏನು ಹೇಳುತ್ತಿದ್ದಾರೆಂಬುದು ನಮಗೆ ಅರ್ಥವಾಗುತ್ತಲೇ ಇರಲಿಲ್ಲ. ಏಕೆಂದರೆ ನಮ್ಮ ಕಿವಿಗಳು ಬಿಸಿಲ ತಾಪವನ್ನು ‘ತಣಿಸುವ’ ಏರ್ ಕಂಡೀಶನರ್ಗಳ ಶಬ್ದದಲ್ಲಿ ಕಿವುಡಾ ಗಿವೆ. ನಮ್ಮ ದೃಷ್ಟಿ ಸೋಮಾರಿತನವನ್ನು ಪೋಷಿಸು ತ್ತಿರುವ ಫ್ರಿಜ್ನಿಂದ ಮರಗಟ್ಟಿ ಹೋಗಿವೆ. ನಮ್ಮ ಬುದ್ಧಿ ಐಷಾರಾಮಿಯ ಪ್ರತೀಕವಾದ ಕಾರಿನ ದಟ್ಟ ಹೊಗೆ ಯಿಂದ ಮಂದವಾಗಿದೆ. ವಿಕಿರಣಗಳನ್ನು ಹೊರ ಸೂಸುತ್ತಿರುವ ಇಂಥವೇ ಅತ್ಯಾಧುನಿಕ ಉಪಕರಣಗಳ ಅಬ್ಬರದಲ್ಲಿ ‘ನೀರು ಉಳಿಸಿ, ಬಿಸಿಲು ಬಳಸಿ’ ಎಂಬಿತ್ಯಾದಿ ಮಾತುಗಳನ್ನು ಕೇಳಲು ವ್ಯವಧಾನವಾದರೂ ಎಲ್ಲಿದೆ?

ಹೆಮ್ಮೆಯ ಕನ್ನಡಿಗ
ಕರ್ಣಾಟಕದ ಮೂಲದ ಈ ವ್ಯಕ್ತಿ ಹುಟ್ಟಿ ಬೆಳೆದದ್ದೆಲ್ಲ ಒರಿಸ್ಸಾದಲ್ಲಿ. ವಿದ್ಯಾಭ್ಯಾಸವೂ ಅಲ್ಲಿಯೇ. ಒರಿಯಾ ವನ್ನು ಚೆನ್ನಾಗಿ ಬಲ್ಲರು. ಕನ್ನಡ ಮಾತನಾಡಬಲ್ಲರು. ಐಐಟಿ ಖರಗಪುರದಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವರ ಹಿರಿಯ ಸಹಪಾಠಿ. ಗೂಗಲ್ನ ಸಿಇಒ ಸುಂದರ್ ಪಿಚಾಯ್ ಇವರ ಜೂನಿಯರ್. ಎಂಜಿನಿಯರಿಂಗ್ನಲ್ಲಿ ಪದವಿ ಪಡೆದು, ಮುಂದಿನ ವಿದ್ಯಾಭ್ಯಾಸಕ್ಕೆ ಹೋದದ್ದು ಅಮೆರಿಕದ ಬೋಸ್ಟ್ನ್ನ ಎಂಐಟಿಗೆ. ಅಲ್ಲಿ ಎಂ.ಎಸ್. ಮುಗಿಸಿ ನವೀಕರಿಸಬಹುದಾದ ಇಂಧನದ ಕುರಿತಂತೆ ಪಿಎಚ್ಡಿ ಯಲ್ಲಿ ಸೌರ ವಿದ್ಯುತ್ನತ್ತ ಆಕರ್ಷಿತರಾದರು.
ತಮ್ಮ ೨೪ನೇ ವಯಸ್ಸಿನಲ್ಲಿಯೇ ಸೌರವಿದ್ಯುತ್ ಅನ್ನು ಸಂಶೋಧನಾ ವಿಷಯವಾಗಿ ಆಯ್ದು–ಕೊಂಡು ಅಧ್ಯಯನ ಮಾಡಿದ ಹಂದೆಯವರು ಸೌರ ಶಕ್ತಿಯ ಸಮಗ್ರ ಮಾಹಿತಿ ಕಲೆಹಾಕುತ್ತಾರೆ. ಸೆಲ್ಕೊ ಇಂಡಿಯಾ ಮೂಲಕ ಕರ್ನಾಟಕ, ಕೇರಳ, ಗುಜರಾತ್ ರಾಜ್ಯಗಳ ಬಡ ಕುಟುಂಬಗಳ ಮನೆಗಳಿಗೆ ಸೂರ್ಯನ ಶಕ್ತಿಯನ್ನು ಬಳಸಿಕೊಂಡು, ಕಡಿಮೆ ಖರ್ಚಿನಲ್ಲಿ ಬೆಳಕು ಹರಿಸಿ ಬೆಳಗಿದವರು. ಹಂದೆಯವರಿಗೆ ಮ್ಯಾಗ್ಸೆಸ್ಸೆ ಸಂದಿದೆ. ಇತ್ತೀಚೆಗಷ್ಟೇ ಪ್ರತಿಷ್ಠಿತ ‘ಜಾಗತಿಕ ಜಾಯೆದ್ ಫ್ಯೂಚರ್ ಎನರ್ಜಿ’ (ಪ್ರಶಸ್ತಿ ಮೊತ್ತ ೯ ಕೋಟಿ ರೂ.ಗಳು) ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪಡೆದ ಭಾರತದ ಮೊದಲ ಸಂಸ್ಥೆ ಸೆಲ್ಕೊ. ಅವರಂಥ ವ್ಯಕ್ತಿಯ ಜ್ಞಾನವನ್ನು ಬಳಸಿಕೊಳ್ಳು ವಲ್ಲಿ ನಮ್ಮ ಸ್ಥಳೀಯ ಸರಕಾರಗಳು ವಿಫಲವಾಗಿವೆ ಏಕೆಂದರೆ ಅವರ ಸಲಹೆ ಸೂಚನೆಗಳು ನಮ್ಮ ನಾಯಕ ರಿಗೆ ರಾಜಕೀಯ ಲಾಭವನ್ನು ತಂದು ಕೊಡುವುದಿಲ್ಲ. ಗ್ರಾಮೀಣರ ಜೀವನ ಸುಧಾರಣೆ, ಬಡವರ ಸ್ವಾವಲಂಬನೆ, ಪರಿಸರ ಪೂರಕ ಹೆಜ್ಜೆಗಳು ಇತ್ಯಾದಿ ದೃಷ್ಟಿಕೋನದಿಂದ ನೋಡಿದಾಗ ಹಂದೆಯವರ ಬಗ್ಗೆ ಇನ್ನಿಲ್ಲದ ಹೆಮ್ಮೆ ಮೂಡುತ್ತದೆ. ಅವರ ದೂರದರ್ಶಿ ಚಿಂತನೆಗಳು ಹಾಗೂ ಯೋಚನಾ ಮಟ್ಟದ ಅರಿವು ಈವರೆಗೆ ನಮಗಾಗಲೀ ನಮ್ಮ ಸರಕಾರಕ್ಕಾಗಲೀ ಆಗದಿರುವುದು ದುರಂತ. ಹಾಗೆ ನೋಡಿದರೆ ಜಗತ್ತಿನ ದೊಡ್ಡಣ್ಣ ಅಮೆರಿಕ ಹಂದೆಯವರ ಜ್ಞಾನ ಸಂಪತ್ತಿನ ಪ್ರಯೋಜನ ಪಡೆದಿದೆ. ಈಗಾಗಲೇ ವಿಶ್ವದ ೩೦ಕ್ಕೂ ಹೆಚ್ಚು ದೇಶವನ್ನು ಅವರು ಸುತ್ತಿ ತಮ್ಮ ಅಮೂಲ್ಯ ಸಲಹೆಗಳನ್ನು ಧಾರೆ ಎರೆದಿದ್ದಾರೆ.
ಇವತ್ತಿಗೂ ಅಮೆರಿಕ ಅಧ್ಯಕ್ಷ, ಮಾಜಿ ಅಧ್ಯಕ್ಷರನ್ನು ನೇರವಾಗಿ ದೂರವಾಣಿಯಲ್ಲಿ ಸಂಪರ್ಕಿಸುವಷ್ಟು ಸಲುಗೆ ಇದೆ. ಓಬಾಮ ಅಮೆರಿಕದ ಅಧ್ಯಕ್ಷರಾಗಿದ್ದಾಗ ಭಾರತಕ್ಕೆ ಬಂದಿದ್ದ ಸಂದರ್ಭದಲ್ಲಿ ಆಹ್ವಾನಿಸಿದ್ದ ದೇಶದ
ಆಯ್ದ ೧೦೦ ಗಣ್ಯರಲ್ಲಿ ಹಂದೆಯವರೂ ಒಬ್ಬರಾಗಿದ್ದರು. ಮಾತ್ರವಲ್ಲ, ಓಬಾಮ ಎದುರು ಮೂರು ನಿಮಿಷಗಳ ಕಾಲ ತಮ್ಮ ವಿಚಾರವನ್ನು ಮಂಡಿಸಲು ಅವಕಾಶ ಪಡೆದ ೨೦ ಅತಿ ಪ್ರಮುಖ ಮೇಧಾವಿಗಳಲ್ಲಿ ಹಂದೆಯವರ ಹೆಸರು ಮೊದಲ ಸಾಲಿನಲ್ಲಿತ್ತು. ಆ ಮೂರು ನಿಮಿಷ ವನ್ನು ಅವರು ಅತ್ಯಂತ ಅರ್ಥಪೂರ್ಣವಾಗಿ ಬಳಸಿ ಕೊಂಡು ‘ಭಾರತದ ಇಂಥ ದೂರದರ್ಶಿ ಯೋಜನೆ ಗಳನ್ನು ಅನುಷ್ಠಾನಗೊಳಿಸಲು ಅಮೆರಿಕವೂ ಮುಂದಾ ಗಬೇಕು’ ಎಂದು ಪ್ರತಿಪಾದಿಸಿದ್ದರು. ಆ ಮೂಲಕ ಎರವಲು ಜ್ಞಾನವನ್ನಷ್ಟೇ ಪಡೆಯಲು ಭಾರತೀಯರು ಇರುವುದಲ್ಲ ಎಂಬ ಮಹತ್ವದ ವಿಷಯವನ್ನು ಅತ್ಯಂತ ದಿಟ್ಟವಾಗಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ಗ್ರಾಮೀಣ ಸೇವೆಗೆ ಮೀಸಲು
ಭಾರತದ ಗ್ರಾಮೀಣ ಪ್ರದೇಶದಲ್ಲಿನ ಬಡಜನರ ಬೆಳಕಿನ ಬವಣೆಯನ್ನು ಅರಿತು, ಇದಕ್ಕೊಂದು ಶಾಶ್ವತ ಪರಿಹಾರವನ್ನು ಹುಡುಕಲೇಬೇಕೆಂಬ ದೃಢ ನಿರ್ಧಾರ ತಳೆದು ಹೊರಟವರು ಹಂದೆಯವರು. ಇಂಥ ಗುರಿ ಸಾಧನೆಗೆ ಅವರು ೧೯೯೫ರಲ್ಲಿ ಹುಟ್ಟು ಹಾಕಿದ್ದೇ ಸೆಲ್ಕೋ ಸೋಲಾರ್ ಸಂಸ್ಥೆಯನ್ನು. ಅಮೆರಿಕದ ಮೆಸಾಚುಸೆಟ್ಸ್ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ನಿರತರಾಗಿ ದ್ದಾಗಲೇ ಸೌರ ವಿದ್ಯುತ್ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಂಡರು. ಅಮೆರಿಕ ಮತ್ತು ಶ್ರೀಲಂಕಾದಲ್ಲೂ ಸಂಶೋಧನೆ ಮುಂದುವರಿಯಿತು. ಆಗ ಅವರಿಗನಿಸಿದ್ದು ಭಾರತದ ಬಡವರ ಬದುಕಿನ ಕತ್ತಲೆಯನ್ನು ನೀಗಿಸಲೇಬೇಕೆಂಬುದು. ಸೆಲ್ಕೋದಿಂದ ಅದನ್ನು ಆಂದೋಲನವಾಗಿಸಿದರು. ಕರ್ನಾಟಕ, ಕೇರಳ, ಗುಜರಾತ್ ರಾಜ್ಯದಲ್ಲಿ ಸುಮಾರು ೨ ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳನ್ನು ಈಗ ಬೆಳಗಿಸಿದೆ ಸೆಲ್ಕೊ. ಗ್ರಾಮೀಣ ವಿದ್ಯುತ್ ಸ್ವಾವಲಂಬನೆಯ ನಿಟ್ಟಿನಲ್ಲಿ ಇವತ್ತಿನ ಸನ್ನಿವೇಶದಲ್ಲಿ ಅವರ ಸಾಧನೆ ಕಡಿಮೆಯೇನಲ್ಲ.
ಒಂದೆಡೆ ವಿದ್ಯುತ್ ಕೊರತೆ ಮತ್ತೊಂದೆಡೆ ಉತ್ಪಾದನಾ ಮಾರ್ಗಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪರಿಸರಕ್ಕೆ ಮಾರಕವಾಗಿವೆ. ಜಲವಿದ್ಯುತ್ ಕೇಂದ್ರಗಳು ನಮ್ಮ ಅರಣ್ಯ ಸಂಪತ್ತನ್ನು ನುಂಗಿ ಹಾಕು ತ್ತಿವೆ. ಇನ್ನು ಪರಮಾಣು ಸ್ಥಾವರಗಳಿಂದ ಹೊರಸೂಸುವ ವಿಕಿರಣ ವಾಯುಮಂಡಲವನ್ನೇ ಮಲಿನಗೊಳಿಸುತ್ತಿದೆ. ಪ್ಲುಟೋನಿಯಂನಂಥ ದ್ರವ್ಯಗಳು ಅತ್ತ ಕರಗದೇ, ಇತ್ತ ಉಳಿಯದೇ ಸಾವಿರಾರು ವರ್ಷಗಳವರೆಗೆ ವಿಕಿರಣ ವನ್ನು ಹೊರಸೂಸುತ್ತಲೇ ಇರುತ್ತವೆ. ಕ್ಯಾನ್ಸರ್ನಂಥ ಮಾರಕ ಕಾಯಿಲೆಗಳು ಇದರ ಫಲಶ್ರುತಿಯೇ. ಇನ್ನು ಪರಮಾಣು ತ್ಯಾಜ್ಯಗಳ ವಿಲೇವಾರಿಯಿಂದ ಆಗುತ್ತಿ ರುವ ಹಾನಿಯನ್ನು ಲೆಕ್ಕ ಹಾಕಲೇ ಸಾಧ್ಯವಿಲ್ಲ. ಯೂರೇನಿಯಂ, ಥೋರಿ–ಯಂಗಳ ಪರಿಣಾಮ ಏನೆಂಬುದು ಈಗಾಗಲೇ ಜಗತ್ತಿಗೆ ಮನವರಿಕೆಯಾಗಿದೆ. ಇಂಧನ ಸಂಸ್ಕರಣಾ ಘಟಕಗಳ ಕೊಡುಗೆಗಳಿವು. ಈ ಹಿನ್ನೆಲೆಯಲ್ಲಿ ನೋಡಿ–ದಾಗ ಹಂದೆಯವರು ಸೌರಶಕ್ತಿ ಕ್ಷೇತ್ರದಲ್ಲಿ ನಡೆಸಿರುವ ಕ್ರಾಂತಿ ಖಂಡಿತಾ ಯಾವುದೇ ದೂರದೃಷ್ಟಿಯ ಯುವ ನಾಯಕನಿಗೆ
ಕಡಿಮೆಯದ್ದಲ್ಲ. ೨೧ನೇ ಶತಮಾನದ ಪುರೋಗಾಮಿ
ಉದ್ಯಮಿಗಳಲ್ಲಿ ಹಂದೆಯವರು ಖಂಡಿತಾ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ವಿಚಾರಧಾರೆಗಳು ಹಾಗೂ ಅವರೊಂದಿಗೆ ವೈಯಕ್ತಿಕವಾಗಿ ನಾನು ನಡೆಸಿದ ಸಂವಾದವನ್ನು ಯಥಾವತ್ ಇಲ್ಲಿ ದಾಖಲಿಸಿದ್ದೇನೆ. ನಿಜಕ್ಕೂ ಅದು ನಮ್ಮಲ್ಲಿ ಕೆಲವರ, ಅದರಲ್ಲೂ ಯುವಕರ ಕಣ್ಣು ತೆರೆಸಿದರೆ ಅದಕ್ಕಿಂಥ ಸಾರ್ಥಕ್ಯ ಮತ್ತೊಂದಿಲ್ಲ.
***
ಹಾಗೆ ನೋಡಿದರೆ ಭಾರತಕ್ಕೆ ಹೋಲಿಸಿದರೆ ಆಫ್ರಿಕಾ ನಮಗಿಂತ ಹತ್ತು ಹೆಜ್ಜೆ ಹಿಂದೆ ಇದೆ. ಲ್ಯಾಟಿನ್ ಅಮೆರಿಕ ದವರು ನಲವತ್ತು ನಲವತ್ತೈದು ಹೆಜ್ಜೆ ಹಿಂದಿದ್ದಾರೆ. ಸೌತ್ಈಸ್ಟ್ ರಾಷ್ಟ್ರಗಳು ಮೂರ್ನಾಲ್ಕು ಹೆಜ್ಜೆ ಹಿಂದಿವೆ. ಸಂಪನ್ಮೂಲದ ದೃಷ್ಟಿಯಿಂದ ನಾವು ಸಮೃದ್ಧವಾಗಿದ್ದೇವೆ. ಇಡೀ ಜಗತ್ತಿಗೆ ನಾಯಕನಾಗಿ ನಿಲ್ಲುವ ಎಲ್ಲ ಅರ್ಹತೆ, ಸಾಧ್ಯತೆಗಳೂ ನಮಗಿವೆ. ಭಾರತ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಇಡೀ ಜಗತ್ತಿಗೇ ಮಾದರಿಯಾಗ ಬಲ್ಲುದು. ಇಲ್ಲಿನ ಭೌಗೋಳಿಕ ಮತ್ತು ಸಾಮಾಜಿಕ ವೈವಿಧ್ಯ ಇಡೀ ಜಗತ್ತನ್ನು ಪ್ರತಿನಿಧಿಸುತ್ತವೆ. ಒಂದು ಭಾರತದಲ್ಲಿ ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳೂ ಅಡಗಿವೆ. ನಾವು ಮಾದರಿಯಾದರೆ ಇಡೀ ಜಗತ್ತೇ ನಮ್ಮನ್ನು ಅನುಸರಿಸಲು ಸಿದ್ಧವಿದೆ. ಆದರೆ ನಾವು ಅದನ್ನು ಬಿಟ್ಟು ಅಮೆರಿಕ-ಯೂರೋಪ್ ರಾಷ್ಟ್ರಗಳನ್ನು ಅನುಸರಿ
ಸುತ್ತಿದ್ದೇವೆ. ಇದಕ್ಕಿಂತ ದುರಂತ ಮತ್ತೊಂದಿಲ್ಲ.ಬದಲಾಗಲಿ ವ್ಯಾಖ್ಯಾನ
ವಿದ್ಯುತ್ ಕ್ಷೇತ್ರದ ಉದಾಹರಣೆಯನ್ನೇ ತೆಗೆದು ಕೊಂಡರೆ ಭಾರತದ ೫೦ ಕೋಟಿ ಜನರಿಗೆ ಮಾತ್ರ ವಿದ್ಯುತ್ ಇಲ್ಲ. ನಾವು ಇದನ್ನು ಮಾತ್ರ ಗಮನಿಸುತ್ತಿ ದ್ದೇವೆ. ದೇಶದ ಎಲ್ಲರಿಗೂ ವಿದ್ಯುತ್ ನೀಡಿದ ಮಾತ್ರಕ್ಕೆ ಅಭಿವೃದ್ಧಿ ಸಾಧಿಸಿದಂತಾಗುವುದಿಲ್ಲ. ಅಭಿವೃದ್ಧಿಯ ವ್ಯಾಖ್ಯಾನ ಬೇರೆಯದೇ ಇದೆ. ವಿದ್ಯುತ್ ಅದರ ಭಾಗ ವಷ್ಟೆ. ಒಂದೊಮ್ಮೆ ವಿದ್ಯುತ್ ನೀಡಿದ ಮಾತ್ರಕ್ಕೆ ಅಭಿವೃದ್ಧಿ ಸಾಧಿಸಿದಂತಾಗುವುದಿದ್ದರೆ ನಗರಗಳ ಎಲ್ಲ ಮಕ್ಕಳೂ ಅತಿ ಬುದ್ಧಿವಂತರೂ, ಸ್ಮಾರ್ಟ್ ವ್ಯಕ್ತಿಗಳೂ ಆಗಿರ ಬೇಕಿತ್ತು. ಆದರೆ ಹಾಗಾಗಿಲ್ಲವಲ್ಲ? ಹಾಗೆ ನೋಡಿದರೆ ಜಗತ್ತಿನ ೧೬೦ ಕೋಟಿ ಜನರು ವಿದ್ಯುತ್ ಅನ್ನೇ ಕಂಡಿಲ್ಲ. ಈ ಹಂತದಲ್ಲಿ ನಾವು ಇಡೀ ಜಗತ್ತನ್ನು ಗಮನದಲ್ಲಿಟ್ಟು ಕೊಂಡು ವಿದ್ಯುತ್ ಮಾದರಿಯನ್ನು ರೂಪಿಸುವ ಅಗತ್ಯ ವಿದೆ. ಮಣಿಪುರ, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾ ಟಕ ಹೀಗೆ ಇಡೀ ವಿಶ್ವದ ಮರುಮಾದರಿಗಳೇ ಇಲ್ಲಿ ರಾಜ್ಯಗಳ ರೂಪದಲ್ಲಿವೆ. ಕರ್ನಾಟಕದ ಸಮಸ್ಯೆಗೆ ರೂಪಿಸುವ ಪರಿಹಾರ ಫಿಲಿಪ್ಪೀನ್ಸ್ಗೆ ಹೊಂದಿಕೆಯಾಗ ಬಲ್ಲುದು. ಮಣಿಪುರದ ಮಾದರಿ ಸೂಡಾನ್ಗೂ ಸೂಕ್ತ. ನಮಗೆ ಇನ್ಸರ್ಜನ್ಸಿ ಇದೆ, ನೀಡ್ ಇದೆ. ನಿಜಕ್ಕೂ ನಾವು ಇಡೀ ವಿಶ್ವದ ಸಂಶೋಧನಾ(ಆರ್-ಡಿ) ಕೇಂದ್ರ ವಿದ್ದಂತೆ.ಇನ್ನು ನಮ್ಮಲ್ಲಿ ಬೃಹತ್ ಮಾನವ ಸಂಪನ್ಮೂಲವಿದೆ. ಆದರೆ ಅದು ಸೂಕ್ತ ರೀತಿಯಲ್ಲಿ, ಸೂಕ್ತ ಸಂದರ್ಭದಲ್ಲಿ ಬಳಕೆಯಾಗುತ್ತಿಲ್ಲ. ಅಭಿವೃದ್ಧಿಯ ಸಮಾನ ಹಂಚಿಕೆ ಯಾಗುತ್ತಿಲ್ಲ. ಒರಿಸ್ಸಾದ ಕೆಲ ಭಾಗ ಕರ್ನಾಟಕಕ್ಕಿಂತ ಇನ್ನೂ ಹತ್ತು ಪಟ್ಟು ಹಿಂದಿದೆ. ಈಶಾನ್ಯ ರಾಜ್ಯಗಳಲ್ಲಿ ಇಡೀ ರಾತ್ರಿ ಪಯಣಿಸಿದರೂ ಒಂದು ಕಡೆ ವಿದ್ಯುತ್ ದೀಪಗಳನ್ನು ಕಾಣಲು ಸಾಧ್ಯವಿಲ್ಲ. ಹೀಗಾಗಿ ಅಭಿವೃದ್ಧಿ ಎಂದರೆ ಜನರ ಜೀವನ ಮಟ್ಟದ ಸುಧಾರಣೆಯಾಗಿ ಬದಲಾಗಬೇಕು. ಸಾಮಾನ್ಯ ಜನಜೀವನದ ಗುಣಮಟ್ಟ ಸುಧಾರಣೆಯ ಮೊದಲ ಹಂತ ಆರೋಗ್ಯ ಮತ್ತು ಶಿಕ್ಷಣ. ಸಮಾಜವೊಂದರ ಅಭಿವೃದ್ಧಿಯ ಮಾನದಂಡ ಇವೆರಡೇ ಹೊರತೂ ಆರ್ಥಿಕತೆ, ಯಾಂತ್ರಿಕತೆ, ಕೈಗಾರಿಕೆ, ತಂತ್ರಜ್ಞಾನಗಳಲ್ಲ. ಈ ಹಂತದಲ್ಲಿ ‘ಡೆಲವರಿ ಮಾಡೆಲ್’ ಅನ್ನು ಯಾವ ರೀತಿ ಬದಲಿಸಬೇಕು ಎಂಬುದನ್ನು ಚಿಂತಿಸುವ ನಾಯಕತ್ವ ಅಗತ್ಯ.

ಉದಾಹರಣೆಗೆ ಆರೋಗ್ಯ ಕ್ಷೇತ್ರದಲ್ಲಿ ನಾವು ಇನ್ನಿಲ್ಲದ ಪ್ರಗತಿ ಸಾಧಿಸಿದ್ದೇವೆ. ದೇಶ ವಿದೇಶಗಳಿಂದ ಜನ ಚಿಕಿತ್ಸೆೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಹೆಮ್ಮೆ ಪಡುತ್ತಿದ್ದೇವೆ. ಸೌಲಭ್ಯಗಳಿವೆ ನಿಜ. ಆದರೆ ನಿಜಕ್ಕೂ ಇಲ್ಲಿನ ಚಿಕಿತ್ಸಾ ವೆಚ್ಚ ಸಾಮಾನ್ಯನ ಕೈಗೆಟುಕದಷ್ಟು ಹೆಚ್ಚಿದೆ. ಹಾಗೂ ಗ್ರಾಮೀಣರು ಇಂದಿಗೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ದೂರದ ಪಯಣವನ್ನೇ ಅವಲಂಬಿಸ ಬೇಕಾದ ಸ್ಥಿತಿ ಇದೆ. ಗ್ರಾಮೀಣ ಜನಜೀವನದ ಆರೋಗ್ಯ ಮಟ್ಟ ಇಂದಿಗೂ ಸುಧಾರಿಸಿಲ್ಲ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಸಹ ಇದೇ ಆಗಿದೆ. ಬಡವರ ಮಕ್ಕಳು ಹಣವಿಲ್ಲದ ಕಾರಣಕ್ಕೆ ಗುಣಮಟ್ಟದ ಶಾಲೆ, ಶಿಕ್ಷಣದಿಂದ ವಂಚಿರಾಗುತ್ತಲೇ ಬರುತ್ತಿದಾರೆ. ಒಬ್ಬ ಪಿಚಾಯ್, ಒಬ್ಬ ಕೇಜ್ರಿವಾಲ್, ಒಬ್ಬ ಹರೀಶ್ ಹಂದೆ ಈ ಮಟ್ಟ ತಲುಪಿ ದ್ದಾನೆಂದರೆ ಅದು ಆತನಿಗೆ ಶಿಕ್ಷಣದಲ್ಲಿ ಸಿಕ್ಕ ಅವಕಾಶವೇ ಹೊರತು, ಕೇವಲ ಆತನ ಬುದ್ಧಿಮತ್ತೆಯಲ್ಲ. ಇಂಥ ಬುದ್ಧಿವಂತ ಅದೆಷ್ಟೋ ಮಕ್ಕಳು ನಮ್ಮ ಹಳ್ಳಿಗಳಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ನಗರ ಕೇಂದ್ರಿತ ಏಕಸ್ವಾಮ್ಯದಿಂದಾಗಿ ಸಾಮಾನ್ಯರು ಇವೆರಡರಿಂದಲೂ ದೂರವೇ ಉಳಿದಿ ದ್ದಾರೆ. ಇವೆರಡೂ ಪ್ರಜಾಶೀಲಗೊಂಡಾಗ ಬಡಮಕ್ಕಳ ಬುದ್ಧಿವಂತಿಕೆ, ಗ್ರಾಮೀಣರ ಸಾಮರ್ಥ್ಯದ ದರ್ಶನ ಆಗಲು ಸಾಧ್ಯ. ಸೌಲಭ್ಯಗಳ ವಿಕೇಂದ್ರೀಕರಣವೊಂದೇ ಇದಕ್ಕಿರುವ ಪರಿಹಾರ. ಊಟ, ಬಟ್ಟೆಗೇ ಇಲ್ಲದ ವ್ಯಕ್ತಿಗೆ ವಿದ್ಯುತ್, ಕಂಪ್ಯೂಟರ್, ಹೈಟೆಕ್ ಸೌಲಭ್ಯಗಳನ್ನು ಕೊಟ್ಟು ಏನು ಪ್ರಯೋಜನ? ನಮ್ಮಲ್ಲಿನ ಬಡವ, ಕಡು ಬಡವ, ಅತಿ ಕಡು ಬಡವ ಎಂಬ ಮೂರು ವರ್ಗಗಳಿವೆ. ಆಧುನಿಕ ಮಜ್ಜಿಗೆ ಕಡೆಯುವ ಯಂತ್ರಗಳಾಗಲೀ ಸ್ಮಾರ್ಟ್ ಪೋನ್ಗಳಾಗಲಿ, ವೈಫೈ ಸೌಲಭ್ಯವಾಗಲಿ ಇವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಸಂಗತಿ. ಅವರಿಗೆ ಉಪ್ಪು-ಗಂಜಿಯ ಪ್ರಶ್ನೆಯೇ ಮುಖ್ಯ. ನಮ್ಮ ಆದ್ಯತೆ ಗಳು ಖಂಡಿತಾ ಬದಲಾಗಬೇಕು.Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.

Photos

ರೆಕ್ಕೆ ಇದ್ದರೆ ಸಾಕೇ...

Videos