ಮಂಜುಗಡ್ಡೆಯ ತಣ್ಣನೆಯ ಕ್ರೌರ್ಯ

April 16, 2018 ⊄   By: ರಾಧಾಕೃಷ್ಣ ಎಸ್ ಭಡ್ತಿ

ಮತ್ತೊಂದು ಜಲ ದಿನ ನಮ್ಮ ಮುಂದಿದೆ. ನಮ್ಮ ಭೂಮಂಡಲವನ್ನು ಶೇ.... ರಷ್ಟು ನೀರು ಮಂಜುಗಡ್ಡೆಯ ರೂಪದಲ್ಲೇ ಇದೆ. ಹಲವಾರು ಕೌತುಕಗಳ ಆಗರವಾದ ಈ ಮಂಜುಗಡ್ಡೆ ಹುಟ್ಟಿದ್ದು ಹೇಗೆ? ಒಂದೊಮ್ಮೆ ಈ ನಮ್ಮ ‘ಐಸ್ಬೇಬಿ’ ಇಲ್ಲದೇ ಇರುತ್ತಿದ್ದರೆ ಏನಾಗುತ್ತಿತ್ತು... ಎಂಬಿತ್ಯಾದಿ ಕುತೂಹಲಕ್ಕೆ ಉತ್ತರ ಹುಡುಕುವ ಯತ್ನ ಈ ಬಾರಿಯ ಅಂಕಣದಲ್ಲಿ

ಅದನ್ನು ತಣ್ಣನೆಯ ಕ್ರೌರ್ಯ ಎನ್ನದೇ ವಿಧಿ ಇಲ್ಲ. ಹಾಗೊಂದೊಮ್ಮೆ ಭೂಮಂಡಲದ ಮೇಲಿನ ಎಲ್ಲ ಮಂಜುಗಡ್ಡೆಗಳೂ ತಮ್ಮ ಗಟ್ಟಿತನವನ್ನು ಕಳೆದುಕೊಂಡು, ತಮ್ಮ ಮೈ ಬಿಸಿ ಏರಿಸಿಕೊಂಡು ಕರಗಲಾರಂಭಿಸಿದರೆ ಮನುಕುಲದ ಮೇಲೆ, ಅಷ್ಟೇಕೆ ಇಡೀ ಭೂಮಂಡಲದ ಮೇಲೆ ಆಗಬಹುದಾದ ಅನಾಹುತದ ಅರ್ಥ ವ್ಯಾಪ್ತಿಯನ್ನು ಈ ಪದದಷ್ಟು ಸಮರ್ಥವಾಗಿ ಕಟ್ಟಿಕೊಡುವುದು ಬೇರಿನ್ನಾವ ಬಣ್ಣನೆಯಿಂದಲೂ ಸಾಧ್ಯವಿಲ್ಲವೆನಿಸುತ್ತದೆ.

ಹಾಗೆಂದು ಇದೇನು ನಮಗೆ ಹೊಸ ಪದವೇನಲ್ಲ. ಬೀಭತ್ಸ ಘಟನೆಯೊಂದಕ್ಕೆ ಸಂಬಂಧಿಸಿದಂತೆ, ಅತಿ ವಿಕ್ಷಿಪ್ತ ಮನಸ್ಸಿನ ವಿಕೃತಿಗಳ ಫಲವನ್ನು ಗಮನಿಸಿದಾಗ ಈ ಹೋಲಿಕೆ ಸಹಜವಾಗಿಯೇ ಬಂದುಬಿಡುತ್ತದೆ. ‘ಅಬ್ಬಾ, ಅದೆಂಥ ತಣ್ಣನೆಯ ಕ್ರೌರ್ಯವಿರಬಹುದು’ ಎಂಬ ಉದ್ಘಾರದ ಹಿಂದೆ ತಣ್ಣನೆಯ ಭೌತಿಕ ಗುಣ ಮತ್ತು ಆಂತರ್ಯದಲ್ಲಿನ ಕ್ರೌರ್ಯ ಮನೋಭಾವ ಎರಡೂ ವ್ಯಕ್ತವಾಗುತ್ತದೆ. ಸದ್ದಿಲ್ಲದೇ ಜರುಗಿ ಹೋಗುವ ಅನಾಹುತ, ಗೊತ್ತಾಗದಂತೆ ಅನುಭವಿಸಿದ ಅಸಾಧ್ಯ ನೋವಿನ ಕೊನೆ, ಮೇಲ್ನೋಟಕ್ಕೆ ಕಾಣ ಸಿಗದ ವಿಕೃತಿಗಳೆಲ್ಲವನ್ನೂ ನಾವು ಈ ಒಂದು ಪದದಿಂದ ಗುರುತಿಸುತ್ತ ಬಂದಿದ್ದೇವೆ. ಇದನ್ನು ಪರೀಕ್ಷಿಸಬೇಕೆಂದಿದ್ದರೆ ಒಂದೇ ಒಂದು ಐಸ್ ಪೀಸ್ ಅನ್ನು ಅಂಗೈನ ಮೇಲೆ ಇಟ್ಟುಕೊಂಡು ಅದನ್ನೇ ಗಮನಿಸುತ್ತ ಇರಿ. ಶುದ್ಧ ಸ್ಫ್ಪಟಿಕದಂತೆ ಹೊಳೆಯುವ, ತನ್ನೊಳ ಮೈಯಲ್ಲಿ ಅದೆಂಥದೋ ಅಸಂಗತ ಚಿತ್ತಾರಗಳನ್ನು ಮೂಡಿಸಿಕೊಂಡು ನಿಂತಿರಬಹುದಾದ ಮಜುಗಡ್ಡೆಯ ನುಣುಪುತನ ಎಷ್ಟೊಂದು ಸುಂದರ ಎನಿಸದೇ ಇರುವುದೇ ಇಲ್ಲ. ಎಂಥ ರುಚಿಗೆಟ್ಟವನೂ ಒಮ್ಮೆ ಅದನ್ನು ಬಾಯಲ್ಲಿಟ್ಟುಕೊಂಡು ಸೀಬಿಬಿಡುವ ಭಯಕೆಯನ್ನು ಹತ್ತಿಕ್ಕಿಕೊಳ್ಳುವಷ್ಟು ಆಕರ್ಷಣೆ ಆ ಮಂಜುಗಡ್ಡೆಯದ್ದು. ಒಂದೆರಡು ಕ್ಷಣಗಳಷ್ಟೇ ಅಂಥ ಬಯಕೆ, ಆ ಸೌಂದರ್ಯ ನೀಡುತ್ತಿರುವ ಪ್ರಸನ್ನತೆಯನ್ನೂ ಮೀರಿಸಿದ ಅವ್ಯಕ್ತ ನೋವು ನೀವು ಅದನ್ನು ಹಿಡಿದ ಕೈಯ್ಯ ನರನಾಡಿಗಳಲ್ಲಿ ಇಮ್ಮಡಿಸಲಾರಂಭಿಸುತ್ತದೆ. ಎಷ್ಟು ಹೊತ್ತು ಹಾಗೆ ಮಂಜುಗಡ್ಡೆಯನ್ನು ಹಿಡಿದು ನಿಂತಿರಲಾದೀತು? ಆ ಕೊರೆವ ಶೈತ್ಯ ಕ್ಷಣದಲ್ಲಿ ನೀವು ಕೈಕೊಡವಿ ಅದನ್ನು ಚೆಲ್ಲುವಂತೆ ಪ್ರೇರೇಪಿಸುತ್ತದೆ. ಹಾಗೆಂದು ಮಂಜುಗಡ್ಡೆಯನ್ನು ಮುಟ್ಟಿದ ತಕ್ಷಣ ಬಿಸಿಯ ಪದಾರ್ಥವನ್ನು ಮುಟ್ಟಿದ ರೀತಿಯಲ್ಲಿ ಯಾವುದೇ ನೋವೂ ನಿಮ್ಮ ಅನುಭವಕ್ಕೆ ಬರುವುದೇ ಇಲ್ಲ. ಬಹುಶಃ ಮಂಜುಗಡ್ಡೆಯ ಅದೇ ಗುಣವೇ ‘ತಣ್ಣನೆಯ ಕ್ರೌರ್ಯ’ ಎಂಬ ವಿಶೇಷಣಯುಕ್ತ ಪದವನ್ನು ಹುಟ್ಟುಹಾಕಿರಬಹುದು.

ಹೋಗಲಿಬಿಡಿ, ನಾವೇನು ಪದವಿತ್ಪತ್ತಿ, ವ್ಯಾಕರಣಗಳನ್ನು ಕಲಿಯುತ್ತಿಲ್ಲವಲ್ಲಾ? ಹೇಗಾದರೂ ಇದ್ದುಕೊಳ್ಳಲಿ. ಆದರೆ ಇಂಥ ಮಂಜುಗಡ್ಡೆಯ ಅಸ್ತಿತ್ವ ಈ ಭೂಮಂಡಲದಲ್ಲಿ ಇರದೇ ಹೋಗಿದ್ದರೆ ಮಾತ್ರ ಬಹುಶಃ ಜೀವಿಗಳ ಅಸ್ತಿತ್ವವೂ ಇರುತ್ತಲೇ ಇರಲಿಲ್ಲ. ನೀರಿಲ್ಲದಿದ್ದರೆ ಬದುಕಲಾಗದು, ಆಹಾರ-ಗಾಳಿಗಳಿಲ್ಲದಿದ್ದರೆ ಜೀವವಿರದು. ಆದರೆ, ಬದುಕಲು ಮಂಜುಗಡ್ಡೆಯೂ ಏಕೆ ಬೇಕು. ನಾವು ಯಾವತ್ತೂ ಐಸ್ ತಿಂದೇ ಇಲ್ಲ. ಅದನ್ನು ಬಳಸಿಯೂ ಇಲ್ಲ ಎಂದು ನೀವು ಹೇಳುತ್ತೀರೇನೋ? ಅದೂ ನಿಜವಿರಬಹುದು. ಆದರೆ ಅದಕ್ಕಿಂತ ಅಚ್ಚರಿಯ ಸಂಗತಿಯೆಂದರೆ ಹಾಗೆ ನೀವು ಬದುಕಲು ಸಾಧ್ಯವಾಗುತ್ತಿದ್ದರೆ ಅದು ಈ ಭೂಂಡಲವನ್ನು ನಮ್ಮ ‘ಐಸ್ ಬೇಬಿ’ ಕಟ್ಟೆಚ್ಚರದಿಂದ ರಕ್ಷಿಸುತ್ತಿರುವುದರಿಂದಲೇ!

ಇಂಥ ಮಂಜು ಹಲವಾರು ಕೌತುಕಗಳ ಆಗರ ಎಂಬುದು ನಿಮಗೆ ಗೊತ್ತೇ? ಎಲ್ಲ ದ್ರವಗಳೂ ಘನರೂಪಕ್ಕೆ ತಿರುಗಿದರೆ ಅದು ತನ್ನ ಆಘಾರವನ್ನು ಕಳೆದುಕೊಳ್ಳುವ ಜತೆಗೆ ಭಾರ ಹೆಚ್ಚಿಸಿಕೊಂಡು ಗಾತ್ರವನ್ನು ಕುಗ್ಗಿಸಿಕೊಳ್ಳುವುದು ಸಾಮಾನ್ಯ. ದ್ರಾವಣ ಗಟ್ಟಿಯಾಗುತ್ತ ಹೋದಂತೆಲ್ಲ ಗಾತ್ರ ಕಡಿಮೆಯಾಗುತ್ತದೆ. ಏಕೆಂದರೆ ಅದರಲ್ಲಿನ ತೇವಾಂಶ ಘನೀಭವಿಸಿ ಸಂಯುಕ್ತಗೊಳ್ಳುತ್ತದೆ. ಆದರೆ ನೀರಿನ ಗುಣ ವಿಭಿನ್ನ. ಅದು ಗಟ್ಟಿ ಆದಂತೆಲ್ಲ ತನ್ನ ಭಾರವನ್ನು ಕಳೆದುಕೊಂಡು, ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಅಂದರೆ ನೀರು ಕಡಿಮೆ ಉಷ್ಣಾಂಶದಲ್ಲಿ ಮಂಜುಗಡ್ಡೆಯಾಗಿ ರೂಪುಗೊಳ್ಳುತ್ತಿದ್ದಂತೆಯೇ ಹಗುರವಾಗುತ್ತದೆ. ಹೂಗಾಗಿಯೇ ನೀರಿನಲ್ಲಿ ಮಂಜುಗಡ್ಡೆ ತೇಲುತ್ತದೆ. ಒಂದು ಪ್ರಮಾಣದ ನೀರು ಮಂಜುಗಡ್ಡೆಯಾಗಿ ಪರಿವರ್ತಿತವಾದರೆ ಅದರ ಗಾತ್ರ ಒಂಬತ್ತು ಪಟ್ಟು ವೃದ್ಧಿಯಾಗುತ್ತದೆ. ಇದೇ ಗುಣ ಭೂಮಿಯ ಮೇಲೆ ಜೀವಿಗಳ ನಿರಾತಂಕ ಬದುಕಿಗೆ ಪೂರಕವಾಗಿದೆ ಎಂಬುದು ವಿಚಿತ್ರ ಸತ್ಯ. ಅತ್ಯಂತ ಚಳಿಯ ದಿನಗಳಲ್ಲಿ ನದಿ, ಸಮುದ್ರದಂಥ ಪ್ರದೇಶದಲ್ಲಿ ನೀರಿನ ಹರಿವು ನಿಧಾನಗೊಂಡು ಅದರ ಮೇಲ್ಮೈ ಉಷ್ಣಾಂಶ ಕಳೆದುಕೊಂಡು ಹೆಪ್ಪುಗಟ್ಟುತ್ತದೆ. ಅದು ಕಳೆ ಭಾಗಕ್ಕೆ ರಕ್ಷಣಾ ಕವಚದಂತೆ, ಮುಚ್ಚುಗೆಯಾಗಿ ಕೆಲಸ ಮಾಡುತ್ತದೆ. ಇದರಿಂದ ನೀರ ಹರಿವಿನ ಒಳಭಾಗ ಗಡ್ಡೆಗಟ್ಟದಂತೆ ತಡೆಯುತ್ತದೆ. ಹಿಗಾಗಿ ನೀರಿನ ಮೇಲ್ಮೈ ವಾತಾವರಣದ ಶೈತ್ಯವನ್ನು ಅಲ್ಲಿಯೇ ತಡೆದು, ಒಳಭಾಗದ ಜೀವಿಗಳು, ಸಸ್ಯ ಪ್ರಭೇದಗಳನ್ನು ರಕ್ಷಿಸುತ್ತದೆ. ಅವು ಮಂಜಿನಡಿಯಲ್ಲಿ ನಿರಾತಂಕವಾಗಿ ಜೀವಿಸುತ್ತವೆ. ಇದೊಂದು ರೀತಿಯಲ್ಲಿ ನಾವು ಗಾಯಗೊಂಡಾಗ ಹೊರಬರುವ ರಕ್ತ ಅಲ್ಲಿಯೇ ಹೆಪ್ಪುಗಟ್ಟಿ ಇನ್ನಷ್ಟು ಸ್ರಾವ ಆಗದಂತೆ ತಡೆಯುವ ರೀತಿಯಲ್ಲಿಯೇ.ಒಂದೊಮ್ಮೆ ಮಂಜುಗಡ್ಡೆ ನೀರಿಗಿಂತ ಭಾರವಾಗಿದ್ದರೆ ಅದು ನದಿ, ಸಮುದ್ರದ ಕೆಳಭಾಗಕ್ಕೆ ಹೋಗಿ ಕುಳಿತುಕೊಳ್ಳುತ್ತಿತ್ತು. ಹಾಗೆಯೇ ಅದು ಹಿಗ್ಗುತ್ತಾ ಸಾಗಿ, ಮೇಲಿನವರೆಗಿನ ನೀರೂ ಗಟ್ಟಿಯಾಗುತ್ತ ಬಂದು ಇಡೀ ಹರಿವೇ ಘನೀಭವಿಸುತ್ತಿತ್ತು. ಒಂದೊಮ್ಮೆ ಹೀಗಾಗಿ ಬಿಟ್ಟರೆ ಅದರ ಪರಿಣಾಮ ಊಹೆಗೂ ನಿಲುಕದ್ದು. ಭೂಮಂಡಲದ ವಾತಾವರಣದ ಮೇಲೆ ಇದು ಭೀಕರ ಪರಿಣಾಮ ಬೀರುತ್ತದಲ್ಲದೇ ವಾತಾವರಣದಲ್ಲಿ ಅನಿರೀಕ್ಷಿತ ಬದಲಾವಣೆಗೆ ಕಾರಣವಾಗುತ್ತದೆ. ಇದ್ದಕ್ಕಿಂದಂತೆ ನೀರಿನ ಹಾಹಾಕಾರವೆದ್ದುಬಿಡಬಹುದು. ಬರಕ್ಕಿಂತಲೂ ಭೀಕರ ದೃಶ್ಯಗಳು ಸಾಮಾನ್ಯವಾಗಿಬಿಡಬಹುದು. ಜಲಚರಗಳು, ಜಲಸಸ್ಯಗಳ ಸಮೂಹವೇ ಮರಗಟ್ಟಿಹೋಗಿಬಿಡಬಹುದು. ಇಡೀ ಜೀವಜಾಲವೇ ನೀರಿಲ್ಲದೇ ನಾಶವಾಗಿಬಿಡುವ ಅಪಾಯಗಳೂ ಇಲ್ಲದಿಲ್ಲ.ಇದು ಮಂಜುಗಡ್ಡೆಯ ಒಂದು ಮುಖವಾದರೆ, ಇನ್ನೊಂದು ಮುಖ ಭೂಮಿಯ ಮೇಲ್ಮೈಯನ್ನು ಶೇ೧೨ರಷ್ಟು ಭಾಗವನ್ನು ಆವರಿಸಿಕೊಂಡಿರುವ ಮಂಜುಗಡ್ಡೆಗಳ ನಾಶದ್ದು. ಒಂದೊಮ್ಮೆ ಅವಷ್ಟೂ ಕರಗಿ ನೀರಾಗಿ ಹರಿದರೆ ಮತ್ತೊಂದು ಬೃಹತ್ ಪ್ರಳಯ ಈ ಭೂಮಿಯನ್ನು ನುಂಗಿ ನೀರುಕುಡಿದುಬಿಡುತ್ತದೆ. ಏಕೆಂದರೆ ಈ ಭೂಮಿಯ ಮೇಲಿನ ಶುದ್ಧನೀರಿನ ಶೇ ೮೦ರಷ್ಟು ಭಾಗ ಹಿಮರಾಶಿಯ ಸ್ವರೂಪದಲ್ಲಿಯೇ ನೆಲೆಸಿದೆ ಎಂಬುದನ್ನು ನಾವು ಮರೆಯಲಾಗದು. ಅವಷ್ಟೂ ಒಮ್ಮೆಲೆ ಕರಗಿ ಹೋದರೆ...? ಊಹಿಸಿಕೊಳ್ಳಿ ಪರಿಣಾಮವನ್ನು. ಇಲ್ಲಿ ಮಂಜುಗಡ್ಡೆಯ ಇನ್ನೊಂದು ವಿಶೇಷ ಗುಣ ಗಮನಾರ್ಹ. ಸಾಮಾನ್ಯವಾಗಿ ಒಂದು ಕಪ್ ನೀರಿನಲ್ಲಿ ಮಂಜುಗಡ್ಡೆ ಹಾಕಿದಾಗ ಎಲ್ಲ ನೀರು ತಣ್ಣಗಾಗುತ್ತದೆ. ಏಕೆಂದರೆ ಮಂಜುಗಡ್ಡೆ ತಾನು ಕರಗುವಾಗ ತನ್ನ ಸುತ್ತಲ ನೀರಿನಲ್ಲಿಯ ಉಷ್ಣಾಂಶವನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಶಾಖವನ್ನು ಕಳೆದುಕೊಂಡ ನೀರೂ ತಣ್ಣಗಾಗುತ್ತದೆ. ಅದೇ ರೀತಿ ವಾತಾವರಣದಲ್ಲಿನ ಉಷ್ಣಾಂಶವನ್ನು ಈ ಭೂಮಿಯ ಮೇಲಿನ ಹಿಮಪದರ ಹೀರಿಕೊಂಡು ಕರಗುತ್ತಲೇ ಇರುತ್ತದೆ. ಜತೆಗೆ ವಾತಾವರಣದ ಸಮತೋಲನವನ್ನು ಕಾಪಿಡುತ್ತದೆ. ಒಂದೊಮ್ಮೆ ಹಿಮಪದರವೇ ಇಲ್ಲದಿದ್ದರೆ ತಕ್ಷಣ ಭೂಮಿಯ ಉಷ್ಣಾಂಶದಲ್ಲಿ ಗಣನೀಯ ಏರಿಕೆ ಕಂಡುಬಂದು ಜೀವಿಗಳ ವಾಸಕ್ಕೇ ಸಮಸ್ಯೆ ತಲೆದೋರುತ್ತದೆ.

ಭೂಮಿ ಬಿಸಿಯಾಗುತ್ತಿದೆ ಎಂಬ ಕೂಗು ಕಳೆದೆರಡು ದಶಕಗಳಿಂದಲೂ ಸಾಮಾನ್ಯವಾಗಿ ಕಿವಿಗಪ್ಪಳಿಸುತ್ತಲೇ ಬರುತ್ತಿದೆ. ಹಾಗೆಂದು ಇದ್ದಕ್ಕಿದ್ದಂತೆ ಸೂರ್ಯ ಪ್ರಖರವಾಗಿಬಿಟ್ಟಿದ್ದಾನೆಂದು ಅರ್ಥವಲ್ಲ. ಅಥವಾ ಬಿಸಿಲಿನ ಪ್ರಮಾಣ ಹೆಚ್ಚಿಯೂ ಇಲ್ಲ. ಆಗ ಎಷ್ಟು ಸೂರ್ಯನ ಶಾಖ ಇತ್ತೋ ಅಷ್ಟೇ ಈಗಲೂ ಇದೆ. ಆದರೆ ಈ ಭೂಮಿ ಹೀರಿಕೊಳ್ಳುತ್ತಿದ್ದ ಉಷ್ಣಾಂಶದ ಪ್ರಂಮಾದಲ್ಲಿ ಏರುಪೇರಾಗಿದೆ. ಬಿಸಿಲನ್ನು ಭೂಮಿ ಹೀರಿಕೊಳ್ಳುವುದು ಸಹಜ ಪ್ರಕ್ರಿಯೆ, ಉಳಿದ್ದದು ಭಾಹ್ಯಾಕಾಶಕ್ಕೆ ಮರಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಕೈಗಾರಿಕೀಕರಣ, ವಾಹನಗಳ ದಟ್ಟಣೆಯಿಂದ ಇಂಗಾಲದ ಡೈ ಆಕ್ಸೈಡ್ ಪ್ರಂಆಣ ಹೆಚ್ಚಿ ಭೂಮಿಯೇ ತನ್ನ ಮೈ ಬಿಸಿ ಏರಿಸಿಕೊಂಡಿದೆ. ಹೀಗಾಗಿ ಅದು ಹೀರಿಕೊಳ್ಳುವ ಬಿಸಿಲಿನ ಪ್ರಮಾಣವೂ ಕುಸಿದಿದೆ. ಪರಿಣಾಮ ವಾತಾವರಣಕ್ಕೆ ಮರಳುತ್ತಿರುವ ಶಾಖ ಹೆಚ್ಚಿದೆ. ಪರಿಣಾಮ ನಮ್ಮನ್ನು ಪೊರೆಯುತ್ತಿರುವ ಹಿಮಪದರ ನಿಧಾನಕ್ಕೆ ಕರಗುತ್ತಿದೆ. ಅದರಲ್ಲೂ ಉತ್ತರ ಧ್ರುವ ಪ್ರದೇಶದ ಹಿಮಕವಚ ದಿನದಿಂದ ದಿನಕ್ಕೆ ತೆಳ್ಳಗಾಗುತ್ತಿದೆ.ಇದು ಈಗಾಗಲೇ ಗಮನಿಸಿದಂತೆ ಎರಡು ರೀತಿಯ ಪರಿಣಾಮಕ್ಕೆ ಕಾರಣವಾಗುತ್ತದೆ. ಮೊದಲನೆಯದಾಗಿ ಹಿಮ ಕರಗಿದಂತೆ ಬಟ್ಟೆ ಕಳಚಿಟ್ಟ ದೇಹದಂತೆ ಭೂಮಿಯ ಭಾಗ ಬೆತ್ತಲಾಗುತ್ತದೆ. ಆಗ ಉಷ್ಣಾಂಶವನ್ನು ಹೀರಿಕೊಳ್ಳುವ ಪ್ರಮಾಣವೂ ಹೆಚ್ಚುತ್ತದೆ. ಭೂಮಿಯ ಮೈ ಬಿಸಿಯಾಗುತ್ತಿದ್ದಂತೆಯೇ ಅದರ ಹಿಮ ಕರಗಿ ಇನ್ನಷ್ಟು ಬೆವರಲಾರಂಭಿಸುತ್ತದೆ. ಇದರ ಇನ್ನೊಂದು ಪರಿಣಾಮವೆಂದರೆ ಈ ರೀತಿ ಕರಗಿದ ಹಿಮ, ಇನ್ನಷು ಜಾರಿಕೆಯನ್ನು ಸೃಷ್ಟಿಸಿ ಹಿಮದ ಬೃಹತ್ ಬಂಡೆಗಳನ್ನೇ ಜಾರಿಸಿ ಕೊಂಡೊಯ್ದು ಸಮುದ್ರಕ್ಕೆ ಸೇರಿಸುತ್ತದೆ. ಆಗ ಸಮುದ್ರ ಮಟ್ಟದಲ್ಲಿ ಏರುಪೇರಾಗಿ ಅದು ಭೂಭಾಗವನ್ನು ಕಬಳಿಸಲಾರಂಭಿಸುತ್ತದೆ.ಮತ್ತೆ ಬಿಸಿಲು ಹೆಚ್ಚುತ್ತದೆ. ಹೆಚ್ಚೇನು ಮತ್ತೊಂದು ಸಮುದ್ರವೇ ಸೃಷ್ಟಿಯಾದರೂ ಅಚ್ಚರಿಯಿಲ್ಲ. ಸಮುದ್ರದಿಂದ ಬಿಡುಗಡೆಯಾಗುವ ಬಿಸಿ ಮತ್ತೆ ದ್ವಿಗುಣ. ಮತ್ತೆ ಹಿಮಕರಗುತ್ತದೆ. ಒಟ್ಟಾರೆ ಇಡೀ ಭೂಮಿಯ ಚಟುವಟಿಕೆಯೇ ನಿಯಂತ್ರಣ ತಪ್ಪಿ ಜಾರುತ್ತದೆ. ಏಕೆಂದರೆ ಇಡೀ ಭೂಮಂಡಲದ ಉಷ್ಣ ಪ್ರವಾಹ ದಿಕ್ಕೆಟ್ಟು ಕೆಲಕಾಲ ತಂಪಾಗಿಬಿಡುತ್ತದೆ. ಜೀವಿಗಳೂ ತಣ್ಣಗಾಗಿಬಿಡಲು ಇನ್ನೇನುಬೇಕು?

ಇದನ್ನೇ ವಿಜ್ಞಾನಿಗಳು ‘ರನ್ ಅವೇ ಪರಿಣಾಮ’ ಎಂದು ಕರೆದಿದ್ದಾರೆ. ಇಂದು ಬಿಟ್ಟೂಬಿಡದೇ ಹುಡುಕಿದರೂ ಮಂಗಳನ ಅಂಗಳದಲ್ಲಿ ಒಂದಿನಿತೂ ನೀರಿನ ಸುಳಿವು ದೊರಕಿದಿದ್ದುದಕ್ಕೆ ಇಂಥ ಹಿಮದ ಓಟವೇ ಕಾರಣವೆನ್ನುತ್ತಾರೆ ತಜ್ಞರು. ಮೊದಲೊಮ್ಮೆ ಮಂಗಳನಲ್ಲಿ ನೀರಿದ್ದುದು ನಿಜ. ಆದರೆ ತಾಪಮಾನದಲ್ಲಿ ವ್ಯತ್ಯಾಸದಿಂದ ಇದೇ ರೀತಿ ಅದರ ಮೇಲ್ಮೈನ ಹಿಮಹೊದಿಕೆ ಕರಗಿ ಆರಿಹೋಗಿ, ಕ್ರಮೇಣ ಇಡೀ ಗ್ರಹವೇ ಕಾದು ಕೆಂಪಗಾಗತೊಡಗಿದ್ದಂತೆ. ಇಡೀ ಜೀವಕುಲವೇ ನಾಶವಾಗಿ ಕೊನೆಗೊಮ್ಮೆ ಇಡೀ ಮಂಗಳನ ನೆಲ ಬರಡಾಗಿ ಮಾರ್ಪಟ್ಟಿದೆ. ಮುಂದೊಂದು ದಿನ ಭೂಮಿಯೂ ಅಂಥ ಸ್ಥಿತಿ ತಲುಪಿದರೆ?
ಅಷ್ಟು ಅಂಜಬೇಕಿಲ್ಲ. ಏಕೆಂದರೆ ಭೂಮಿಯ ಸರಾಸರಿ ಉಷ್ಣಾಂಶ ಐದು ಡಿಗ್ರಿಯಷ್ಟು ಹೆಚ್ಚಲು ಕನಿಷ್ಠ ಒಂದು ಶತಮಾನವಾದರೂ ಬೇಕು. ಅಷ್ಟರೊಳಗೆ ಭೂಮಿಯನ್ನು ತಂಪಾಗಿಸಿಬಿಡುವ ಮಾರ್ಗದಲ್ಲಿ ವೇಗವಾಗಿ ಹೆಜ್ಜೆ ಹಾಕಬಹುದಲ್ಲವೇ? ಬುದ್ಧಿಯವೇಗಕ್ಕೆ ಕೊಂಚ ಕಡಿವಾಣ ಹಾಕಿ, ಪ್ರಕೃತಿಯ ವಿಷಯದಲ್ಲಿ ಭಾವನೆಗಳಿಗೆ ಬೆಲೆಕೊಟ್ಟರೆ ಇದು ಸಾಧ್ಯ.Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos