ಗುಬ್ಬಿ ಮೇಲಷ್ಟೇ ಅಲ್ಲ, ಜೀವ ಕುಲಕ್ಕೇ ಬ್ರಹ್ಮಾಸ್ತ್ರ ಬಿಟ್ಟಿದ್ದೇವೆ!

April 03, 2018 ⊄   By: ರಾಧಾಕೃಷ್ಣ ಭಡ್ತಿ

ಪಕ್ಷಿ ಸಂಕುಲಗಳೇ ಇಲ್ಲವಾಗಿದ್ದರೆ ಒಬ್ಬೊಂಟಿಯಾಗಿ ಮನುಷ್ಯ ಈ ಜಗತ್ತಿನಲ್ಲಿ ಬದುಕಲು ಸಾಧ್ಯವಿರುತ್ತಿತ್ತೇ? ತೀರಾ ಸ್ವಾರ್ಥಕ್ಕೆ ಬಿದ್ದು ‘ನನ್ನದಷ್ಟೇ ಬದುಕು, ಈ ಪರಿಸರ ಪ್ರತಿಯೊಂದು ಸಂಪನ್ಮೂಲಗಳೂ ಇರುವುದು ನನಗಾಗಿಯೇ’ ಎಂಬ ಅಹಮಿಕೆಯೊಂದಿಗೆ ದಿಕ್ಕು ದೆಸೆಯಿಲ್ಲದೇ, ಬಿಡುಬೀಸಾಗಿ ಬದುಕುವ ನಮಗೆ ಜಾನಪದರ ಸಾಮರಸ್ಯ ಅರ್ಥವಾದೀತೇ?

ಆ ಸುಂದರ ನಸುಕು. ವಸಂತಾಗಮನದ ಹೊಂಬಿಸಿಲು ಹೊರಡುವ ಕ್ಷಣದ ನಿರೀಕ್ಷೆಯ ನಡುವೆಯೇ ಹೊದೆದ ಹಚ್ಚಡದೊಳಗೆ ಮತ್ತೆ ಮತ್ತೆ ನುಸುಳಿಕೊಳ್ಳುವ ಹಂಬಲ. ಮನದ ಬಯಕೆ, ಕನವರಿಕೆ, ಕಲ್ಪನೆಗಳೇ ಪರಸ್ಪರ ಹೆಣೆದುಕೊಂಡು ಬೆಳಗಿನ ಜಾವದ ಸುಂದರ ಕನಸುಗಳಾಗಿ ಕಾಡುತ್ತಿದ್ದರೆ ಆಗಷ್ಟೇ ಮೂಡಲು ಹವಣಿಸುತ್ತಿರುವ ಸೂರ್ಯನ ಎಳೆಯ ಕಿರಣಗಳು ಅವಕ್ಕೆ ಬಣ್ಣ ತುಂಬುತ್ತಿರುತ್ತವೆ. ಕಣ್ಣುಬಿಡಲೇನೋ ಆಲಸ್ಯ. ನಿಸರ್ಗ ನಲಿವಿಗೆ ಸಾಥ್ ನೀಡುವ ಗುಬ್ಬಿಗಳ ಚೀಂವ್ಚೀಂವ್ ಕಲರವ ಇಡೀ ದಿನದ ಹರ್ಷಕ್ಕೆ ಮುನ್ನುಡಿ ಬರೆಯುತ್ತದೆೆ. ಹಾಗೆ ಕಣ್ತೆರೆದು ಉಜ್ಜಿಕೊಳ್ಳುತ್ತ ಹೊರಗೆದ್ದು ಬಂದರೆ ಮುಂದಿನ ಮಾಮರದಲ್ಲಿ ಕುಹೂನಾದ. ಪಕ್ಕಕ್ಕೆ ಹೊರಳಿ ಅಂಗಳಕ್ಕೆ ಬಂದು ನಿಂತರೆ ಅತಿಥಿಗಳನ್ನು ಕರೆಯುತ್ತಿವೆಯೇನೋ ಎಂಬ ಅರ್ಥ ಹೊಮ್ಮಿಸುತ್ತ ‘ಕಾ’ ಗುಡುವ ಕಾಕ. ತಲೆಬಾಗಿಲಿನವರೆಗೂ ಬಂದು ಕತ್ತು ನೀಕಿದರೆ ಎಳೆಯ ಬಿಸಿಲಿನಲ್ಲಿ ಧೂಳೆಬ್ಬಿಸುತ್ತ ಹಳ್ಳಿಗೆ ಹೊಸ ಕಳೆ ತುಂಬುವ ಹುರುಪಿನಲ್ಲಿ ಹೊರಟ ಹಸುಗಳ ಮಂದೆಯನ್ನೇ ಹಿಂಬಾಲಿಸುವ, ಅವುಗಳ ಮೇಲಿನ ಗೊರವಂಕ. ಗಿಡದಿಂದ ಗಿಡಕ್ಕೆ ನೆಗೆಯುವ ಬಣ್ಣದ ಗಿಳಿಹಿಂಡು. ಹಿತ್ತಿಲಿಗೆ ಹೊರಟರೆ ಸ್ವಾಗತಿಸುವ ಕೆಂಬೂತ, ಬೆಳವ, ಗೀಜಗ, ಮಿಂಚುಳ್ಳಿ, ಹಾಲಕ್ಕಿ, ಪಾರಿವಾಳ, ಕಾಜಾಣ, ಬೆಳ್ಳಕ್ಕಿ, ಬಾವಲಿ, ಗೂಬೆ, ಗೊರವ ಹಕ್ಕಿಗಳು...

ಮುಂಜಾನೆಯಿಂದ ಮುಸ್ಸಂಜೆಯವರೆಗೆ, ಇಳಿಹೊತ್ತಿನಿಂದ ಇರುಳಿನವರೆಗೆ ಅನಾಯಾಸವಾಗಿ ಕಣ್ಣಿಗೆ ಬೀಳುವ, ಆಪ್ತವಾಗಿ ಆಲಾಪಗೈಯುವ, ಹಾರಾಡಿ ಹುಮ್ಮಸ್ಸು ತುಂಬುವ, ಶಂಕೆ-ಶಕುನಗಳಿಗೆ ಆಧಾರವಾಗುವ ಅಪರೂಪದ ಪಕ್ಷಿ ಸಂಕುಲಕ್ಕೆ ಅಲ್ಲಲ್ಲಿ ಆಹಾರವನಿತ್ತವನ ಜಾಣ್ಮೆ ಅಚ್ಚರಿ ಹುಟ್ಟಿಸುತ್ತದೆ. ಅದರ ಬೆನ್ನಲ್ಲೇ ಅವಕ್ಕೆಲ್ಲ, ಅವುಗಳ ಗುಣ ಧರ್ಮಗಳಿಗನುಗುಣವಾಗಿ ಹೊಂದುವ ಹೆಸರನ್ನಿಟ್ಟು, ಬದುಕುವ ಸ್ವಾತಂತ್ರ್ಯವನ್ನು ಕೊಟ್ಟು, ಸಹಜೀವನ ನಡೆಸುವ ಗ್ರಾಮೀಣರಲ್ಲಿರುವ ಪರಿಸರ ಪ್ರಜ್ಞೆಯ ಬಗ್ಗೆಯೂ ಹೆಮ್ಮೆ ಮೂಡುತ್ತದೆ. ಜಾನಪದ ಪರಂಪರೆ ಎಂಬುದು ಸುತ್ತಮುತ್ತಲ ಪರಿಸರದ ಎಲ್ಲ ಜೀವಜಾಲದ ಜೊತೆ ಒಂದಲ್ಲಾ ಒಂದು ವಿಧದಲ್ಲಿ ತನ್ನ ಸಂಬಂಧವನ್ನು ಕಲ್ಪಿಸಿಕೊಂಡಿದೆ. ಜಾನಪದರು ಯಾವತ್ತೂ ಮಾನವ ಕೇಂದ್ರಿತವಾದ ಜಗತ್ತನ್ನು ನಿರ್ಮಿಸಿಕೊಂಡಿದ್ದಿಲ್ಲ. ಗ್ರಾಮೀಣ ಸಂಸ್ಕೃತಿಯೆಂದರೆ ಅದು ಒಬ್ಬನ ಸುತ್ತಲೂ ಅನಾವರಣಗೊಳ್ಳುವ ಬದುಕಲ್ಲ. ನಿಸರ್ಗದ ಎಲ್ಲ ಅಂಗಗಳಿಗೂ ಅಲ್ಲಿ ಸಮಾನ ಆದ್ಯತೆ. ಎಲ್ಲದರೊಂದಿಗಿನ ನಿರಂತರ ಸಂಪರ್ಕ ಕಟ್ಟಿಕೊಳ್ಳುವ ವಿಶಾಲ ಪರಿಕಲ್ಪನೆಗೆ ಜನಪದರು ಪಾತ್ರರಾಗುತ್ತಾರೆ. ದೇಸಿ ಜೀವನದ ಕೆಲವು ನಂಬಿಕೆಗಳು, ಆಚರಣೆಗಳು ಆಧುನಿಕ ಜಗತ್ತಿಗೆ ವಿಚಿತ್ರವಾಗಿ ಕಂಡರೂ, ಎಲ್ಲ ಜೀವಿಗಳನ್ನೂ ಬದುಕಿಗೆ ಒಳಗೊಳ್ಳಿಸಿಕೊಳ್ಳುವ ಇದರ ಹಿಂದಿನ ಆಶಯವನ್ನು ನಾವು ಅಲ್ಲಗಳೆಯಲಾಗದು. ಜೀವಿಗಳೆಲ್ಲದರ ಅಭೇದ್ಯ ಕೂಟ ಜೀವನದ ವೈಶಾಲ್ಯವನ್ನು ಗೌರವಿಸದಿರಲಾಗದು. ತನ್ನ ಸುತ್ತಲಿನ ಜೀವ ಪ್ರಪಂಚದ ಬಗೆಗೆ ಗ್ರಾಮೀಣರು ಕಟ್ಟಿಕೊಂಡಿರುವ ಪಾಪ ಪುಣ್ಯಗಳ ಕಲ್ಪನೆಗಳೂ ಇದರ ಪ್ರತೀಕವೇ. ಅದು ಕಾಗೆ, ಗೂಬೆಗಳ ದರ್ಶನ, ಚಲನದ ಬಗೆಗೆ ಇರಬಹುದು, ಹಾಲಕ್ಕಿಯಂಥವುಗಳಿಂದ ಹೊಮ್ಮುವ ಕೂಗನ್ನು ಅರ್ಥೈಸಿಕೊಳ್ಳುವುದಿರಬಹುದು, ಪರಿಸರದ ಬದಲಾವಣೆಗೆ ಹೇಳುವ ಶಕುನಗಳ ವ್ಯಾಖ್ಯೆ ಇರಬಹುದು... ಇವೆಲ್ಲವೂ ಆ ಜೀವ ಪರಿಸರದ ಬಗೆಗಿನ ಕಾಳಜಿ, ಕಳಕಳಿಯ ಅಭಿವ್ಯಕ್ತಿಯೇ ಹೊರತು ಮೌಢ್ಯವೆಂದು ಸಾರಾಸಗಟು ತಳ್ಳಿಹಾಕಲಾಗದು. ಪುರಾಣ, ಜಾನಪದದ ಕಥಾ ಹಂದರದಲ್ಲೂ ಪಕ್ಷಿ ಸಂಕುಲಕ್ಕೆ ಪ್ರಾತಿನಿಧ್ಯ ನೀಡಿ ಅವಕ್ಕೆ ಮಾನವ ಗುಣ-ರೂಪಗಳನ್ನು ಸಂಯೋಜಿಸಿದ್ದು ಸಹ ಇದೇ ಕಾರಣಕ್ಕೆ. ಇನ್ನೂ ಮುಂದೆ ಹೋಗಿ ಕೆಲ ಬಲಶಾಲಿ, ಸುಂದರ ಹಕ್ಕಿಗಳಿಗೆ ದೈವಿಕ ಸ್ವರೂಪವನ್ನೂ ಕೊಟ್ಟು ಪೂಜಿಸಲಾಗಿದೆ. ಇವೆಲ್ಲವೂ ಆ ಸಮೂಹದ ಸಂರಕ್ಷಣಾ ಕ್ರಮವಾಗಿಯೇ ನಿಲ್ಲುತ್ತವೆ. ಅದಿಲ್ಲದೇ ಹೋಗಿದ್ದರೆ ಇಡೀ ಜೀವ ವೈವಿಧ್ಯ ಅಪಾಯಕ್ಕೆ ಸಿಲುಕಿರುತ್ತಿತ್ತು.

ಇವತ್ತು ಗುಬ್ಬಿಗಾದದ್ದೂ ಅದೇ. ಕುಟುಂಬಕ್ಕೆ ಅನ್ವರ್ಥವಾಗಿ ಸದಾ ಮನುಷ್ಯನೊಂದಿಗೆ ಆಪ್ತ ವಾಗಿಯೇ ಬದುಕಿರುತ್ತಿದ್ದ ಈ ಪುಟ್ಟ ಪಕ್ಷಿ ಸಂಕುಲವೇ ಬಹುತೇಕ ಮರೆಯಾಗಿ ಹೋಗಿದೆ. ಮನೆ ಮಕ್ಕಳು, ಸಂಸಾರವನ್ನು ಆಚ್ಚೆಯಿಂದ ಕಾಪಿಡುವವನನ್ನು ‘ಮನೆಗುಬ್ಬಿ’ ಎಂದೇ ಕರೆಯುವುದು ರೂಢಿ. ಗುಬ್ಬಿಯ ಮನೆಯಂತೆ ಎಂದು ಸುಂದರ, ಪುಟ್ಟ ಸಂಸಾರವನ್ನು ಇಂದಿಗೂ ಗುರುತಿಸುತ್ತಾರೆ. ಗುಬ್ಬಿಯ ಮೇಲೆ ಜಾನಪದರು ಇಟ್ಟ ವಿಶೇಷ ಪ್ರೀತಿಯ ದ್ಯೋತಕವದು. ವೃಥಾ ದಾಳಿ, ದುರ್ಬಲರ ಮೇಲಿನ ದೌರ್ಜನ್ಯವನ್ನು ‘ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ವೆಂದು ಟೀಕಿಸುವುದಿದೆ. ಗುಬ್ಬಿಯ ಬದುಕಿಗೆ, ಅದರ ಗೂಡಿಗೆ ಧಕ್ಕೆ ತಂದರೆ ಮುಂದಿನ ಜನ್ಮದಲ್ಲಿ ಕನಿಷ್ಠ ಸೂರೂ ಸಿಗದ ಸಂಕಷ್ಟಕ್ಕೆ ಒಳಗಾಗುತ್ತೇವೆಂಬ ನಂಬಿಕೆ ಗ್ರಾಮೀಣರಲ್ಲಿದೆ. ಹೀಗಾಗಿ ಗುಬ್ಬಿಗಾಗಿ ಪ್ರತಿ ಮನೆಯಲ್ಲೂ, ಜಂತಿಯ ಸಂದಿನಲ್ಲೋ, ಸೂರಿನ ಕೆಳಗೋ, ಗೋಡೆಯ ಮೇಲ್ಭಾಗದಲ್ಲೋ ಜಾಗವನ್ನು ಕಲ್ಪಿಸುವ ಪದ್ಧತಿ ಇತ್ತು. ಅವುಗಳಿಗೆ ಆಹಾರಕ್ಕಾಗಿ ಅಲೆದಾಟ ತಪ್ಪಲಿ ಎಂಬ ಉದ್ದೇಶದಿಂದ ಅಂಗಳದಲ್ಲಿ ಕಾಳುಗಳನ್ನು ಚೆಲ್ಲಿಡಲಾಗುತ್ತಿತ್ತು. ಕೆಲವೊಮ್ಮೆ ಮನೆಯ ಮುಂದಿನ ಆವರಣದಲ್ಲಿ, ಬುಟ್ಟಿ, ಪೆಟ್ಟಿಗೆಗಳನ್ನಿರಿಸಿ, ಕಾಳು, ಕಡ್ಡಿಗಳನ್ನು ಒಟ್ಟುಗೂಡಿಸಿ ಅನುವು ಮಾಡಿಕೊಡುವುದರ ಹಿಂದಿನ ಮಾನವತೆಯನ್ನು ಶ್ಲಾಘಿಸಲೇಬೇಕು. ಇನ್ನು ಮಕ್ಕಳು ಆಡುವ ಗುಬ್ಬಿ ಹಿಡಿಯುವ ಆಟವಂತೂ ಬಾಲ್ಯದ ಅವಿಸ್ಮರಣೀಯ ಸಂಗತಿಗಳಲ್ಲಿ ಒಂದಾಗಿತ್ತು. ಗುಬ್ಬಿ ಗೂಡುಕಟ್ಟಿದರೆ ಅಂಥ ಮನೆ ನೆಮ್ಮದಿಯ ತಾಣವೆಂತಲೂ, ಅಭಿವೃದ್ಧಿಯ ಸಂಕೇತವೆಂತಲೂ ಇಂದಿಗೂ ನಂಬಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಮನೆಯ ವಾತಾವರಣವನ್ನೇ ಸಂಭ್ರಮಕ್ಕೆ ತಿರುಗಿಸುವ ಅಂಥ ಕಲರವ ಈಗೆಲ್ಲಿ?

ಕಾಗೆಗಳ ವಿಚಾರಕ್ಕೆ ಬಂದರೆ, ಪಿತೃಗಳ ಸಮಾನವೆಂದು ಬಗೆಯುವ ಈ ಪಕ್ಷಿ ಸಮೂಹಕ್ಕೆ ವಿಶೇಷ ಗೌರವಾದರ ಇಂದಿಗೂ ಜಾನಪದರಲ್ಲಿದೆ. ಮನೆಯ ಸುತ್ತಮುತ್ತಲೇ ಸುಳಿದಾಡುತ್ತ, ಸಣ್ಣಪುಟ್ಟ ಹಾವು, ಹುಳುಗಳಿಂದ ಆವರಣವನ್ನು ರಕ್ಷಿಸುತ್ತಾ, ಒಂದು ರೀತಿಯಲ್ಲಿ ಸುತ್ತಲಿನ ಸ್ವಚ್ಛತೆಗೆ ಕಾರಣವಾಗುತ್ತಿದ್ದವುಗಳು ಕಾಗೆಗಳೇ. ಬಿಸಿಲಲ್ಲಿ ಒಣಗಿಸಿದ ಕಾಳು, ಆಹಾರ ಪದಾರ್ಥಗಳಿಗೆ ಹೊಂಚು ಹಾಕುವ ಸಂದರ್ಭದಲ್ಲಿ ಕಾಗೆಗಳ ಬಗ್ಗೆ ವಿಪರೀತ ಮುನಿಸು ಕಂಡರೂ, ಅವುಗಳ ಕೂಗಿಲ್ಲದ ದಿನಗಳಲ್ಲಿ ತೀರಾ ಒಂಟಿತನ ಕಾಡುವುದು ಸುಳ್ಳಲ್ಲ. ಕೋಗಿಲೆಯ ಮರಿಗಳನ್ನು ಸಾಕಿ ಆದರ್ಶ ಮೆರೆಯುವ ಕಾಗೆಗಳೆಂದರೆ ಶುಭ-ಅಶುಭ ಶಕುನಗಳ ಪ್ರತೀಕ. ತೀರಾ ಕರಗುಟ್ಟ ತೊಡಗಿದಾಗಲೇ ಹಳ್ಳಿಗರು ಬಂಧುಗಳನ್ನು ಕರೆಯುತ್ತಿದೆ ಎಂದೋ, ಮನೆಗೆ ಅಪಾಯ ಎರಗುತ್ತಿದೆ ಎಂದೋ ಅರ್ಥೈಸುತ್ತಿದ್ದರು. ಕಾಗೆಯಿಲ್ಲದ ಶ್ರಾದ್ಧ ಅಪರಿಪೂರ್ಣ. ಅದು ಮನೆಯೊಳಗೆ ಹೊಕ್ಕರೆ ಅಪಶಕುನ. ಹೇಗಿದ್ದರೂ ಕಾಗೆಯಿಲ್ಲದ ಗ್ರಾಮ ಭಣಭಣ.

ಪಾರಿವಾಳವಿಲ್ಲದ ಊರನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ವಿಶಾಲ ಬಯಲು, ದಟ್ಟ ಕಾಡಿದ್ದರೂ ಪಾರಿವಾಳಗಳು ಇರುವುದು ಮನುಷ್ಯನ ಜತೆಜತೆಗೇ. ಸೂರಿಗೇ ಗೂಡುಕಟ್ಟಿ, ಅಂಗಳದ ತುಂಬೆಲ್ಲ ಇಶ್ಶಿ ಮಾಡಿ, ಗಳಿಗೆಗೊಮ್ಮೆ ಗುರುಗುಟ್ಟುವ ಇವು ಇತಿಹಾಸದುದ್ದಕ್ಕೂ ಪ್ರಮುಖ ಸಂಪರ್ಕ ಮಾಧ್ಯಮವಾಗಿಯೂ ಗುರುತಿಸಿ ಕೊಂಡಿವೆ. ಜೂಜು, ಕ್ರೀಡೆಗಳಿಗೆ, ಹವ್ಯಾಸಕ್ಕಾಗಿ ಸಾಕು ಪಕ್ಷಿಯಾಗಿಯೂ ಇವು ನಮ್ಮ ಜತೆ ಬಂದಿವೆ. ಸ್ಥಳೀಯ ಔಷಧೀಯ ಪದ್ಧತಿಗಳಲ್ಲೂ ಪಾರಿವಾಳಗಳ ಮಾಂಸ ಬಳಕೆಯ ಉದಾಹರಣೆಗಳು ಸಿಗುತ್ತವೆ.

ಗೂಬೆ, ಬಾವಲಿಗಳನ್ನು ನಾವೆಷ್ಟೇ ದ್ವೇಷಿಸಿದರೂ ಅವುಗಳು ಮಾತ್ರ ಮನುಷ್ಯನ ಜತೆಜತೆಗೇ ವಾಸಿಸಿಕೊಂಡು ಬಂದಿವೆ. ವೈವಿಧ್ಯದ ದೃಷ್ಟಿಯಿಂದ ಮಾತ್ರವಲ್ಲ, ಕೆಲ ಅಪರೂಪದ ಉಪಕಾರಕ್ಕೂ ಇವು ಪಾತ್ರವಾಗಿವೆ. ಅವುಗಳ ಬಗೆಗಿನ ಅವ್ಯಕ್ತ ಭೀತಿಯಿಂದಾಗಿ ಪ್ರಯೋಜನಗಳು ನಮ್ಮ ಗಮನಕ್ಕೆ ಬಂದಿಲ್ಲ ಎಂಬುದನ್ನು ಬಿಟ್ಟರೆ ಪಾರಿಸಾರಿಕ ಸಮತೋಲನಕ್ಕೆ ಇವೆರಡರ ಕೊಡುಗೆ ಅಪಾರ. ನವಿಲು, ಗಿಳಿಗಳಂತೂ ನಮ್ಮ ಪಾಲಿಗೆ ಆಪ್ಯಾಯಮಾನ. ಪಾರಿವಾಳದಂತೆ ಆಹಾರವಾಗಿಯೂ ಈ ಎರಡು ಹಕ್ಕಿಗಳನ್ನು ಬಳಸುತ್ತಾರಾದರೂ ಇವಿಲ್ಲದ ಗ್ರಾಮೀಣ ಪರಿಸರ ಬಣ್ಣಗೆಟ್ಟಂತೆಯೇ ಸರಿ. ಕೃಷಿಯಲ್ಲಿ ಈ ಎರಡೂ ಸಂಕುಲದ ಪಾತ್ರ ಅಮೂಲ್ಯವಾದದ್ದು.

ಇನ್ನು ಗ್ರಾಮೀಣ ಕಾನನಕ್ಕೆ ತೀರಾ ಚಿರಪರಿಚಿರತವೆನಿಸುವ ಕೋಳಿ ಜಾತಿಗೆ ಸೇರಿದ ಗೌಜಲ, ಗೀಜಗ, ನಾಡಿನುದ್ದಕ್ಕೂ ಸಂತತಿಯನ್ನು ವಿಸ್ತರಿಸಿಕೊಂಡಿರುವ ಮಕ್ಕಳ ಇಷ್ಟದ ಬೆಳವ, ಸಿಹಿಯನ್ನದ ಪ್ರತೀತಿಗೆ ಪಾತ್ರವಾಗಿರುವ ಕೆಂಬೂತ, ಕಾಡಿನ ನೀರವ ಸೀಳುವ ಕಾಡುಕೋಳಿ, ನೀರ್ಕೋಳಿಗಳು, ಕೆರೆ, ಹೊಲದ ಪರಿಸರವನ್ನೂ ಚೇತೋಹಾರಿಯಾಗಿಸಿದ ಬಾತು, ಬೆಳ್ಳಕ್ಕಿ, ಬುಂಡುಬುಳುಕ, ಮಿಂಚುಳ್ಳಿ, ಕೊಕ್ಕರೆಗಳು, ದಟ್ಟ ಕಾಡನ್ನು ಸೀಳಿಕೊಂಡುಹೋಗುವ ಗ್ರಾಮೀಣ ರಸ್ತೆಗಳ ಅಕ್ಕಪಕ್ಕದಲ್ಲಿ ಗಮನ ಸೆಳೆಯುವ ಜುಟ್ಟಕ್ಕಿ, ಕುಂಡೆಕುಣಿತದ ಹಕ್ಕಿ, ತಿತ್ತಿ ಹಕ್ಕಿ, ಮರಕುಟಿಗ, ಗೊರಗೊಯಕ, ಕಾಜಾಣ, ಪುರ್ಲ ಹಕ್ಕಿ, ಶಿಳ್ಳೆಹಕ್ಕಿಗಳು ಊರಿನ ಗಡಿಯಲ್ಲೇ ತಮ್ಮ ಗಡುವನ್ನೂ ಗುರುತಿಸಿಕೊಂಡಿರುವ ಹದ್ದು, ಗಿಡುಗಗಳು...ಹೀಗೆ ಈ ಪಕ್ಷಿ ಸಂಕುಲಗಳೇ ಇಲ್ಲವಾಗಿದ್ದರೆ ಒಬ್ಬೊಂಟಿಯಾಗಿ ಮನುಷ್ಯ ಈ ಜಗತ್ತಿನಲ್ಲಿ ಬದುಕಲು ಸಾಧ್ಯವಿರುತ್ತಿತ್ತೇ? ತೀರಾ ಸ್ವಾರ್ಥಕ್ಕೆ ಬಿದ್ದು ‘ನನ್ನದಷ್ಟೇ ಬದುಕು, ಈ ಪರಿಸರ ಪ್ರತಿಯೊಂದು ಸಂಪನ್ಮೂಲಗಳೂ ಇರುವುದು ನನಗಾಗಿಯೇ’ ಎಂಬ ಅಹಮಿಕೆಯೊಂದಿಗೆ ದಿಕ್ಕು ದೆಸೆಯಿಲ್ಲದೇ, ಬಿಡುಬೀಸಾಗಿ ಬದುಕುವ ನಮಗೆ ಜಾನಪದರ ಸಾಮರಸ್ಯ ಅರ್ಥವಾದೀತೇ? ಜೀವಜಾಲದ ಆಂತರಿಕ ಮತ್ತು ಬಾಹ್ಯ ಸಂಬಂಧಗಳ ಮೌಲ್ಯವನ್ನು ದಕ್ಕಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿ ಉಳಿದಿದೆಯೇ? ಪಕ್ಷಿಗಳ ಚಲನವಲನಗಳಿಂದಲೇ ಸುತ್ತಲಿನ ಬೆಳವಣಿಗೆ, ಅಪಾಯ, ನಿಸರ್ಗದ ವ್ಯತ್ಯಾಸ, ವಾತಾವರಣದ ಮುನ್ಸೂಚನೆ, ಮಳೆ-ಬೆಳೆಯ ಅಂದಾಜು ಎಲ್ಲವನ್ನೂ ಪಡೆಯುತ್ತಿದ್ದ ಸೂಕ್ಷ್ಮತೆ ನಮ್ಮ ಆಧುನಿಕ ವಿಜ್ಞಾನದಲ್ಲಿ ಬೆಳೆದಿದೆಯೇ? ಎಲ್ಲ ತರ್ಕದ ಆಚೆಗೂ ಬೆಳೆದು ನಿಲ್ಲುವ ಈ ತಿಳಿವಳಿಕೆ, ಅರಿವನ್ನು ಉಳಿಸಿಕೊಳ್ಳುವ ಅಗತ್ಯ ಹೊಣೆಗಾರಿಕೆ ನಮಗಿಲ್ಲವೇ? ಹಾಗೊಮ್ಮೆ ಇದ್ದರೆ ಮೊದಲು ಉಳಿಯಬೇಕಾದದ್ದು ಇಂಥ ಅಪರೂಪದ ಪಕ್ಷಿ ಸಂಕುಲ.


ನಮ್ಮದು ಚಿತ್ರ ವಿಚಿತ್ರವಾದ ಕನಸು. ಬಹುಶಃ ಮನುಷ್ಯ ಹುಟ್ಟಿದ ದಿನದಂದೇ ಈ ಕನಸೂ ಹುಟ್ಟಿ ಕೊಂಡಿರಬೇಕು. ಆಕಾಶಕ್ಕೆ ಏಣಿ ಹಾಕುವ ಸಾಹಸದಲ್ಲಿ ನಾವೆಂದಿಗೂ ಹಿಂದೆ ಬಿದ್ದವರೇ ಅಲ್ಲ. ಭೂಮಿಯ ಮೇಲೆ ನಿಂತುಕೊಂಡೇ ಆಗಸದತ್ತ ದೃಷ್ಟಿ ನೆಟ್ಟಿರುತ್ತೇವೆ. ನಮ್ಮ ನೆಟ್ಟು, ಇಂಟರ್ನೆಟ್ಟು ಇತ್ಯಾದಿ ಇತ್ಯಾದಿ ಎಲ್ಲ ತಿರಸಟ್ಟುಗಳಿಗೂ ಆಗಸವೇ ವೇದಿಕೆ. ಆವತ್ತಿಂದ ಈವತ್ತಿನವರೆಗೂ ನಾವು ನಮ್ಮ ಕನಸಿನ ಮತ್ತೊಂದು ಭೂಮಿಯ ಹುಡುಕಾಟದಲ್ಲಿ ಲಕ್ಷಾಂತರ ಕೋಟಿಗಳನ್ನು ಆಗಸಕ್ಕೆ ಹಾರಿಸಿಬಿಟ್ಟಿದ್ದೇವೆ. ಬಾನಂಗಳದಲ್ಲಿ, ಅದರಿಂದಾಚೆಗೆ ಎಲ್ಲಾದರೂ ಒಂದೇ ಒಂದು ಪ್ರತಿಭೂಮಿ ಇದ್ದಿರಬಹುದೇ? ಅಲ್ಲೊಂದಿಷ್ಟು ನೀರು, ಗಾಳಿಯ ಸುಳಿವು ಸಿಕ್ಕೀತೆ ಎಂಬ ಹುಡುಕಾಟದಲ್ಲಿ ತಾಳ್ಮೆ ಕಳೆದುಕೊಂಡದ್ದೇ ಇಲ್ಲ. ಪ್ರತಿಭೂಮಿಯ ಕನಸಿಗೆ ಇನ್ನಷ್ಟು ಕಲ್ಪನೆಯನ್ನು ಕಟ್ಟಿ ಜೀವಿಗಳ ಲೋಕವೊಂದನ್ನು ಕಾಣಬೇಕು, ಅಲ್ಲಿ ಹೋಗಿ ನಾವು ನಮ್ಮದೇ ಸಾಮ್ರಾಜ್ಯ ವನ್ನು ನಿರ್ಮಿಸಬೇಕು. ಅದರ ಅಧಿಪತಿಗಳಾಗಿ ಮೆರೆಯಬೇಕೆಂದಿರುವ ಭೂಮಿಜರ ಆಸೆಯಲ್ಲಿ ಎಂದಿಗೂ ಪ್ರತಿಮಾನವನಿಗೆ ಜಾಗವಿಲ್ಲ. ಹೀಗಾಗಿಯೇ ಎಲ್ಲ ಸಿನೆಮಾಗಳಲ್ಲಿ, ಕಥೆಗಳ ಫ್ಯಾಂಟಸಿಯಲ್ಲಿ ನಮ್ಮ ಕಲ್ಪನೆ ಅನ್ಯಗ್ರಹಜೀವಿಗಳ ಸೃಷ್ಟಿಗೆ ಸೀಮಿತವೇ ಹೊರತೂ ಅಲ್ಲಿ ಮಾನವನಿಲ್ಲ.

ಪೈಟೋಟಿಗೆ ಸಿದ್ಧವಿಲ್ಲದ ನಮ್ಮ ಮನಃಸ್ಥಿತಿ ಮತ್ತೊಂದು ಗ್ರಹದ ಮಾನವನನ್ನು, ಅಲ್ಲಿ ನಮ್ಮಂಥದ್ದೇ ಬದುಕನ್ನು ಒಪ್ಪಿಕೊಳ್ಳಲು ಸಿದ್ಧವೇ ಇಲ್ಲ. ಅದರ ಬದುಲು ಉಳಿದೆಲ್ಲವೂ ಈ ಭೂಮಿಯ ಮೇಲಿ ದ್ದಂತೆಯೇ ಇರಲಿ, ಮನುಷ್ಯ ಮಾತ್ರ ಇಲ್ಲಿಂದಲೇ ಅಲ್ಲಿಗೆ ಪಯಣಿಸಲಿ ಎಂಬ ಹೆಬ್ಬಯಕೆ ಹೊತ್ತು ಮೇಲಿಂದ ಮೇಲೆ ಭಾನಯಾನ ನಡೆಸುತ್ತಲೇ ಬರುತ್ತಿದ್ದೇವೆ. ಅದೃಷ್ಟವೋ, ದುರದೃಷ್ಟವೋ ಅಂಥದ್ದು ಪತ್ತೆಯಾಗಿಲ್ಲ. ಚಂದ್ರನಲ್ಲಿ ನೀರಿತ್ತೋ, ಇಲ್ಲವೋ ಇನ್ನೂ ಖಚಿತವಾಗಿಲ್ಲ. ಸದ್ಯಕ್ಕೆ ನಮ್ಮ ಮುಗಿಯದ ಬಾನ ಯಾನಕ್ಕೆ ಅವನು ತಂಗುದಾಣವಾಗಿ ಪರಿಗಣಿತನಾಗಿ ದ್ದಾನೆ. ಮಂಗಳನ ವಿಚಾರದಲ್ಲಿ ತರ್ಕಕ್ಕೆ ಕೊನೆ ಸಿಕ್ಕಿಲ್ಲ. ಮತ್ತೆಲ್ಲೋ ಉಪಗ್ರಹವೊಂದು ಭೂಮಿಯನ್ನು ಹೋಲುತ್ತದೆ ಎಂಬ ಗುಲ್ಲು ವಿಜ್ಞಾನಿಗಳ ವಲಯದಲ್ಲಿ ಹಬ್ಬಿತ್ತು. ಸದ್ಯಕ್ಕಂತೂ ನಮಗೆ ಇರುವುದೊಂದೇ ಭೂಮಿ. ಹೀಗಾಗಿ ಕಳೆದುಕೊಂಡ ಬಾಲವನ್ನು ಮನುಷ್ಯ ಹೆಚ್ಚಿಗೆ ಬಿಚ್ಚಲು ಹೋಗುತ್ತಿಲ್ಲ. ಪ್ರತಿಭೂಮಿಯ ಬಗೆಗಿನ ಇಷ್ಟೆಲ್ಲ ಹುಡುಕಾಟಕ್ಕೆ ಕಾರಣವಾದರೂ ಏನು? ಇರುವ ಭೂಮಿಯಲ್ಲಿ ನಮಗೆ ಜಾಗ ಸಾಕಾಗುತ್ತಿಲ್ಲ. ಇದ್ದ ಜಾಗವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ.

ಸದ್ಯಕ್ಕಂತೂ ಸೌರ ಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ ನಮ್ಮ ಭೂಮಿ. ವಿಜ್ಞಾನಿಗಳು ಹೇಳುವ ಪ್ರಕಾರ ಈ ಭೂಮಿಯ ಮೇಲೆ ಜೀವಿಗಳ ಅಸ್ತಿತ್ವ ಕಾಣಿಸಿಕೊಂಡು ಸುಮಾರು ೩೦೦ ಶತಕೋಟಿ ವರ್ಷಗಳಾಯಿತಂತೆ. ಮೊಟ್ಟಮೊದಲು ಜೀವಿ ಅದ್ಯಾವುದೆಂದು ಗೊತ್ತಿಲ್ಲದಿದ್ದರೂ ಅವು ಹಾಗೆಯೇ ಬೆಳೆಯುತ್ತಾ ಸಾಗಿ, ವೈವಿಧ್ಯಮಯ ಆಕಾರವನ್ನು ಪಡೆದುಕೊಂಡವಂತೆ. ಅಂಥ ಬೆಳವಣಿಗೆ ನಿಲ್ಲಲೇ ಇಲ್ಲ. ನಿತ್ಯ ನಿರಂತರ ಸಾಗಿದ ಇಂಥ ಜೀವ ಅಭಿವೃದ್ಧಿ ಇಂದಿನ ಜೈವಿಕ ಲೋಕವನ್ನು ಸೃಷ್ಟಿಸಿತು. ಅಂದಾಜು ಇವತ್ತು ಭೂಮಿಯ ಮೇಲೆ ಏನಿಲ್ಲವೆಂದರೂ ೧೨ ರಿಂದ ೨೦ ಶತಕೋಟಿ ಜೀವಿಗಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಈ ವರೆಗೆ ಸ್ಪಷ್ಟವಾಗಿ ಅಭ್ಯಾಸಕ್ಕೆ ದಕ್ಕಿದ್ದು ಸುಮಾರು ೧೪ ಶತಕೋಟಿ ಜೀವಿಗಳು ಮಾತ್ರವೇ. ಅದರಲ್ಲೂ ೨,೨೫,೦೦೦ ಗಿಡಗಳು, ೨೩ ಸಾವಿರ ಶಿಲೀಂದ್ರಗಳು, ೨೫೦೦ ಅಲ್ಗೆಗಳು, ೯೦೦ ರೀತಿಯ ಬ್ರಯೋಪೈಟಗಳು, ೨೫೦ ರೀತಿಯ ಸಸ್ತನಿಗಳು, ೭೫,೦೦೦ ಕೀಟಗಳು, ೩೨,೦೦೦ ಮೀನುಗಳು. ೧೫,೦೦೦ ಇರುವೆಗಳು ೪೫೦ ಸರೀಸೃಪಗಳು ಹೀಗೆ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ.ಹಾಗೆ ನೋಡಿದರೆ ಇಂಥ ವೈವಿಧ್ಯಮಯ, ಸಮೃದ್ಧ ಜೀವ ರಾಶಿಯುಳ್ಳ ಮತ್ತೊಂದು ಭೂಮಿ ಈ ಸೃಷ್ಟಿಯಲ್ಲೇ ಇರಲಿಕ್ಕೆ ಸಾಧ್ಯ ಇಲ್ಲ. ಪ್ರಾಣಿಗಳು, ಅದಕ್ಕೆ ಪೂರಕ ಸಸ್ಯವರ್ಗ- ಹೀಗೆ ಪರಸ್ಪರ ಅವಲಂಬಿಗಳಾಗೇ ಬೆಳೆಯುತ್ತಾ ಬಂದಿವೆ. ವಿಕಾಸವೂ ಇಂಥ ಅವಲಂಬನೆಯನ್ನೇ ಪುಷ್ಟೀಕರಿಸುತ್ತದೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ನಾವು ಪ್ರಕೃತಿಯನ್ನು ಆರಾಧಿಸುತ್ತಲೇ ಬಂದಿದ್ದೇವೆ. ಅಲ್ಲಿ ವಿವೇಕ- ವಿಕಾಸ ಎರಡೂ ಮಿಳಿತಗೊಂಡಿದ್ದವು. ಬದುಕೂ ಹಾಗೆಯೇ ವಿಚಾರಪರವಾಗಿಯೇ ಸಾಗಿಕೊಂಡು ಬಂದಿತ್ತು. ಇವತ್ತು ವಿಚಾರ ಕಾಣೆಯಾಗಿದೆ, ವಿವೇಕ ಮರೆತಿದ್ದೇವೆ. ವಿಕಾಸ ನಿಂತಹೋಗಿದೆ. ಪ್ರಕೃತಿಯಿಂದ ಹೊರತಾದ ಮತ್ತಾವುದೇ ವಿಕಾಸಕ್ಕೆ ಅರ್ಥವೇ ಇಲ್ಲ. ಅತಿ ಅಸೆಯ ಜತೆಗೆ ಅಭಿವೃದ್ಧಿಯ ಹುಸಿ ನಂಬಿಕೆಗೆ ಜೋತು ಬಿದ್ದು ಭೂಮಿಯ ಸಮತೋಲನ ತಪ್ಪಿದೆ. ಮನುಷ್ಯ ತನ್ನ ವಿಕಾಸದ ಭರದಲ್ಲಿ ಪರಿಸರವನ್ನು ಮುರುಟಿಸಿದ್ದಾನೆ.

ಈ ಸೃಷ್ಟಿಯಲ್ಲಿ ಕಾಡು ಎಂಬ ಎರಡಕ್ಷರದ ಮೇಲೆಯೇ ಉಳಿದೆಲ್ಲ ಜೀವಿಗಳ ಬದುಕೂ ನಿಂತಿತ್ತು. ಅದನ್ನು ನಮ್ಮ ಹಿಂದಿನ ತಲೆಮಾರು ಅರ್ಥ ಮಾಡಿಕೊಂಡಷ್ಟು ನಾವು ಅರ್ಥ ಮಾಡಿಕೊಂಡಿಲ್ಲ. ಪರಿಣಾಮ ಕಾಡಿನೊಂದಿಗೆ ನಾಡೂ ವಿನಾಶದತ್ತ ಸಾಗುತ್ತಿದೆ. ಒಂದು ಉದಾಹರಣೆ ತೆಗೆದುಕೊಳ್ಳೋಣ. ಮಲೆನಾಡಿನ ಸಾಮಾನ್ಯ ಸೊಪ್ಪಿನ ಬೆಟ್ಟದಲ್ಲಿ ಮೊದಲ ಮಳೆಗೆ ಮುನ್ನ ಒಂದಷ್ಟು ಅಗೆತಗಳು ನಡೆಯುತ್ತಿದ್ದವು. ಹಾಗೆ ಅಗೆದುಬಿಟ್ಟ ಜಾಗದಲ್ಲಿ ಒಂದಷ್ಟು ಮುಳ್ಳು ಕಂಟಿಗಳು, ಪೊದೆ, ಕುರುಚಲು ಮೊಳೆಯುತ್ತಿದ್ದವು. ಅದರ ಸಾಂದ್ರತೆ ಯಡಿಯಲ್ಲಿ ಬೆಲೆಬಾಳುವ ಸಸ್ಯ ವೈವಿಧ್ಯವೂ ಸೃಷ್ಟಿಯಾಗುತ್ತಿದ್ದವು. ಸುತ್ತಲೂ ಮುಳ್ಳಿನ ನೈಸರ್ಗಿಕ ಬೇಲಿ. ಹೀಗಾಗಿ ಅದರ ನಡುವಿನ ಸಸ್ಯ ಪ್ರಭೇದ ಸುರಕ್ಷಿತ. ಒಂದು ಹಂತಕ್ಕೆ ಬೆಳೆದು ನಿಂತ ಮೇಲೆ ಅವು ಯಾವುದೇ ಸಂರಕ್ಷಣೆಯೂ ಇಲ್ಲದೇ ಸ್ವತಂತ್ರವಾಗಿ ಎದ್ದು ನಿಲ್ಲುತ್ತಿದ್ದವು. ಹಾಗೆ ಮಳೆಗಾಲಕ್ಕೆ ಮುನ್ನ ಅರಣ್ಯ ಪ್ರದೇಶದಲ್ಲಿ ಹೊಡೆಯುತ್ತಿದ್ದ ಟ್ರೆಂಚ್ಗಳಲ್ಲೀ ನೀರೂ ಇಂಗಿ ಅಂತರ್ಜಲವೂ ಸುಧಾರಣೆ ಕಾಣುತ್ತಿತ್ತು. ಇವತ್ತು ಅರಣ್ಯ ಭೂಮಿಗಳೆಲ್ಲವೂ ಬೆಂಕಿಯ ಬಾಯಿಗೆ ಸಿಕ್ಕು ಬರಡಾಗುತ್ತಿದೆ. ಮಲೆನಾಡಿನ ಕಾಡಿನಲ್ಲಿ ರಬ್ಬರ್, ಶುಂಠಿಯಂಥ ಬೆಳೆಗಳೂ ಅಕ್ರಮವಾಗಿ ನುಸುಳುತ್ತಿವೆ. ನೈಸರ್ಗಿಕ ಸಸ್ಯವರ್ಗ ಕಣ್ಮರೆಯಾಗುತ್ತಿದೆ. ನೀರು ಇಂಗುವ ಬದಲು ಬಸಿದು ಓಡುತ್ತಿದೆ.ಆದಿವಾಸಿ, ಗ್ರಾಮೀಣ ಸಂಸ್ಕೃತಿಯ ನಿಸರ್ಗದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿತ್ತು. ಜನರಿಗೆ ಪರಿಸರದ ಮೌಲ್ಯದ ಅರಿವಿತ್ತು. ಜನರ ಜೀವನ ವಿಧಾನವೂ ಪರಿಸರಕ್ಕೆ ಪೂರಕವಾಗಿಯೇ ಇತ್ತು. ಹಾಗೆಂದು ಕಾಡಿನ ನಡುವೆ ಕೃಷಿಯೇ ಇರಲಿಲ್ಲ ವೆಂದೇನೂ ಅಲ್ಲ. ಆದರೆ ಅಲ್ಲೇ ಪಾಳೆಯಗಾರಿಕೆಗೆ ಅವಕಾಶವಿರಲಿಲ್ಲ. ಆದಿವಾಸಿಗಳು ನಿರಂತರ ಕಾಡಿನಾದ್ಯಂತ ಅಲೆದಾಡುತ್ತಿದ್ದರು. ಒಂದೆರಡು ವರ್ಷ ನಿರ್ದಿಷ್ಟಪ್ರದೇಶದಲ್ಲಿ ನೆಲೆನಿಂತು ಅಲ್ಲಿನ ಸುತ್ತಮುತ್ತಲ ಭೂಮಿಯನ್ನು ಹಸನು ಮಾಡಿ ಬೇಸಾಯ ನಡೆಸುತ್ತಿದ್ದರು. ನಂತರ ಆ ಜಾಗ ತೆರವು ಮಾಡಿ ಬೇರೆಡೆಗೆ ತೆರಳುತ್ತಿದ್ದರು. ಮೊದಲಿನ ಜಾಗದಲ್ಲಿ ಅರಣ್ಯ ಮತ್ತೆ ಬೆಲೆಯುತ್ತಿತ್ತು. ಪ್ರಕೃತಿಯೇ ಅವರ ಆರಾಧನೆಯ ಕೇಮದ್ರಬಿಂದು. ಕಾಡಿನ ಮರಗಿಡಗಳು, ಪ್ರಾಣಿ- ಪಕ್ಷಿಗಳೇ ಅವರ ಪಾಲಿಗೆ ದೇವರು. ಅವರ ಕುಲಚಿಹ್ನೆಯೂ ಅರಣ್ಯದ ಭಾಗವೇ. ತಾವು ತಂತಮ್ಮ ಕುಲಕ್ಕೆ ಗುರುತಿಸಿಕೊಂಡ ಸಸ್ಯ ಅಥವಾ ಪ್ರಾಣಿ ವರ್ಗವನ್ನು ಪೂಜಿಸುವ ಜತೆಗೆ ಅವನ್ನು ಸಂರಕ್ಷಿಸುತ್ತಲೇ ಬಂದಿದ್ದರು. ನಾಗವನ, ಜಟ್ಟಿಗನ ಬನ, ಹುಲಿಬನ, ಭೂತದ ಕಾಡು ಇಂಥ ಪೂಜೆಯ ಪ್ರತೀಕ. ದೇವರ ಕಾಡಿನ ಕಲ್ಪನೆ ಹುಟ್ಟಿದ್ದೆ ಈ ರಿತಿ. ವಿಶೇಷವೆಂದರೆ ಈ ಎಲ್ಲ ಅರಾಧನಾ ಕೇಂದ್ರದ ಸುತ್ತಲು ಒಂದಿಲ್ಲೊಂದು ಜಲ ಮೂಲಗಳು ಇದ್ದೇ ಇರುತ್ತಿದ್ದವು. ಅಂಥ ನೀರಿನ ಪಾವಿತ್ರ್ಯ ರಕ್ಷಣೆಯೂ ಆರಾಧನೆಯ ಭಾಗವಾಗಿರುತ್ತಿತ್ತು. ನೀರು-ಕಾಡು ಯಾವತ್ತಿಗೂ ಪ್ರತ್ಯೇಕವಾಗಿ ಕಾಣಲೇ ಇಲ್ಲ ನಮ್ಮ ಪೂರ್ವಜರಿಗೆ.

ಇವತ್ತು ಅರಣ್ಯ ಸಂರಕ್ಷಣೆಗೆ ಪ್ರತ್ಯೇಕ ಇಲಾಖೆಯೇ ಇದೆ. ಸ್ವಾಭಾವಿಕ ಅರಣ್ಯಗಳು ನಾಶವಾದ ಜಾಗದಲ್ಲಿ (ನಾಶವಾಗದೇ ಇದ್ದಲ್ಲಿ ಅದನ್ನು ನಾಶ ಮಾಡಿ) ನೆಡು ತೋಪುಗಳನ್ನು ಸೃಷ್ಟಿಸಲಾಗುತ್ತಿದೆ. ನರ್ಸರಿಗಳಲ್ಲಿ ಬೆಳೆಸಿ ತಂದ ಒಂದೇ ಜಾತಿಯ, ಬೇಗನೆ ಬೆಳೆಯುವ ಸಸ್ಯಗಳನ್ನು ತಂದು ಬೆಟ್ಟ ಗುಡ್ಡಗಳೆನ್ನದೇ ನೆಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಅವು ಬೆಳೆದು ಪಕ್ಕಾ ಯೂನಿಫಾರಂ ತೊಟ್ಟ ನರ್ಸರಿ ಮಕ್ಕಳಂತೆಯೇ ಕಾಣುತ್ತಿವೆ. ಫಾರಂಗಳಲ್ಲಿ ಬೆಳೆದ ಸಸ್ಯಗಳಿಂದಾಗಿ ನಮ್ಮ ಸಸ್ಯವೈವಿಧ್ಯಕ್ಕೆ ಕುತ್ತು. ಇದಕ್ಕಿಂಥ ಅಪಾಯಕಾರಿ ಸಂಗತಿಯೆಂದರೆ ಅತಿ ಶೀಘ್ರವಾಗಿ ಬೆಳೆಯುವ ಸ್ಯಗಳೆಂದು ನಾವು ಯಾವುದನ್ನು ತಂದು ತುಂಬಿಸುತ್ತಿದ್ದೇವೋ ಅವು ಅಷ್ಟೇ ಶೀಘ್ರದಲ್ಲಿ ನೆಲದೊಡಲ ನೀರನ್ನೂ ಬರಿದು ಮಾಡುತ್ತಿವೆ. ಹೀಗಾಗಿ ಮಳೆ ಬಂದು ಭೂಮಿಯಲ್ಲಿ ಇಂಗಿ ಮತ್ತೆ ಅಂತರ್ಜಲ ತುಂಬಿಕೊಳ್ಳುವ ಪ್ರಮೇಯವೇ ಇಲ್ಲವಾಗಿದೆ.ಪ್ರಕೃತಿಯ ಆರಾಧನೆ ಎನ್ನುವುದನ್ನು ಕೇವಲ ನಂಬಿಕೆಯೆಂದು ಎಂದಿಗೂ ಪರಿಗಣಿಸಲಾಗದು. ಅದು ವೈಜ್ಞಾನಿಕ ಸಂರಕ್ಷಣಾ ವಿಧಾನ. ನಿಸರ್ಗ ಜನಪದರ ಮಾತೆ. ಆವರ ನಿತ್ಯದ ಬೆಳಗು ಆರಂಭವಾಗುವುದೇ ಆ ಮಾತೆಯ ಸ್ಮರಣೆಯಿಂದ. ಗ್ರಾಮೀಣ ಹಬ್ಬಗಳಲ್ಲಿ ಬಹುಪಾಲು ಪ್ರಕೃತಿ, ಪರಿಸರಗಳಿಗೆ ಸಂಬಂಧಿಸಿದ್ದೇ ಆಗಿರುತ್ತಿತ್ತು. ಕೃಷಿ, ಪರಿಸರ, ಪ್ರಾಣಿ- ಪಕ್ಷಿ ಸಂಕುಲಗಳೇ ಹಬ್ಬಕ್ಕೆ ಬುನಾದಿ. ಒಂದಲ್ಲಾ ಒಂದು ರೀತಿಯಲ್ಲಿ ಈ ಹಬ್ಬಗಳು ಪ್ರಕೃತಿಯ ಜೊತೆಗೆ ಸೌಹಾರ್ದಯುತ ಸ್ನೇಹ ಸಂಬಂಧವನ್ನು ಬೆಸೆಯುತ್ತಿದ್ದವು. ಒಂದು ರೀತಿಯಲ್ಲಿ ಪರ್ಯಾಯ ಜಗತ್ತು ಪ್ರಕೃತಿ, ಕಾಡೇ ಆಗಿತ್ತು. ನಮ್ಮ ಖಷಿ ಸಂಸ್ಕೃತಿ, ವಾನಪ್ರಸ್ಥದ ಕಲ್ಪನೆ ಎಲ್ಲದರ ಉದ್ದೇಶವೂ ನಾಡಿಗಾಗಿ ಕಾಡಿನ ಸಂರಕ್ಷಣೆಯ ಮತ್ತೊಂದು ಮಜಲೇ. ಮಾನವ ಇಂಥ ಅನ್ಯೋನ್ಯ ಪರಿಸರದಿಂದ ದೂರ ಸರಿಯುತ್ತ ಬಂದು, ತನ್ನ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ನಾಗರಿಕತೆಯ ಹೆಸರಿನಲ್ಲಿ ದಿನೇ ದಿನೇ ಸ್ವಾರ್ಥಿಯಾಗುತ್ತಿದ್ದೇವೆ ನಾವು. ಅಭಿವೃದ್ಧಿಯ ಅಹಂ ನಮ್ಮನ್ನು ಆವರಿಸಿಕೊಳ್ಳತೊಡಗಿದೆ. ಭೋಗಕ್ಕಾಗಿಯೇ ನಿಸರ್ಗ ಸಂಪತ್ತಿರುವುದೆಂಬ ಮನೋಭಾವ ಮೊಳೆತ ಕ್ಷಣದಲ್ಲಿಯೇ ಸಮುದಾಯದ ಆಸ್ತಿಯಾಗಿದ್ದ ನಿಸರ್ಗಕ್ಕೆ ಕೃತಕ ಕಾವಲು, ಅದಕ್ಕೊಂದು ಇಲಾಖೆ, ಅದರ ಸಂರಕ್ಷಣೆಗೆ ಕಾನೂನು ಸೃಷ್ಟಿಯಾಯಿತು. ಸಂಪತ್ತಿನ ಲೂಟಿಯೂ ಹೆಚ್ಚ ತೊಡಗಿತು.

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos