ಇದು ಗಂಧದ ಗುಡಿಯ ಗಜಪಡೆ!!

October 15, 2018 ⊄   By: - ವಲ್ಲೀಶ್ ಕೌಶಿಕ್

ದಸರಾ ಎಂದಾಕ್ಷಣ ನಮಗೆಲ್ಲ ನೆನಪಾಗುವುದೇ ಮೈಸೂರಿನ ವಿಶ್ವ ಪ್ರಸಿದ್ಧ ಚಿನ್ನದ ಅಂಬಾರಿ ಉತ್ಸವ. ಅದರ ಬೆನ್ನಲ್ಲೇ ಅದನ್ನು ಹೊತ್ತು ಗಂಭೀರ ಹೆಜ್ಜೆಗಳನ್ನಿಡುವ ಗಜಪಡೆ ಕಣ್ಣ ಮುಂದೆ ಬರುತ್ತದೆ. ಆನೆಗಳಿಲ್ಲದ ದಸರಾವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬಹುಶಃ ಆನೆಗಳಿಲ್ಲದೇ ಇದ್ದಿದ್ದರೆ ಮೈಸೂರ ದಸರಾ ಈಮಟ್ಟಿಗಿನ ಖ್ಯಾತಿಯನ್ನು ಪಡೆಯಲಿಕ್ಕೆ ಸಾಧ್ಯವಿರಲಿಲ್ಲವೇನೋ. ದುರಂತವೆಂದರೆ ನಾಡ ಹಬ್ಬದ ಸಂದರ್ಭದಲ್ಲಷ್ಟೇ ನೆನಪಾಗುವ, ಮಹತ್ವ ಪಡೆಯುವ, ರಾಜಾತಿಥ್ಯಕ್ಕೆ ಪಾತ್ರವಾಗುವ ಈ ಗಜಪಡೆಯನ್ನು ಬಹುತೇಕ ಉಳಿದ ಸಂದರ್ಭದಲ್ಲಿ ಮರತೇಬಿಡುತ್ತೇವೆ. ಇಂಥ ಗಜಪಡೆಯ ಸದಸ್ಯರಾಗಿ, ಉತ್ಸವಕ್ಕೊಂದು ಮೆರುಗು ತರುವ ಪ್ರಮುಖ ಆನೆಗಳ ವಿಶೇಷ ಕಿರುಪರಿಚಯ ನಿಮಗಾಗಿ ‘ಹಸಿರುವಾಸಿ’ಯಲ್ಲಿ ಕಂತುಗಳ ರೂಪದಲ್ಲಿ ಪ್ರಕಟಗೊಳ್ಳಲಿದೆ.

ಅಂಬಾರಿಯ ಬಲರಾಮ
ಗಾಂಭೀರ್ಯಕ್ಕೆ ಮತ್ತೊಂದು ಹೆಸರು. ವಯಸ್ಸು ೫೯, ತೂಕ ೪.೫ ಟನ್. ಸುಮಾರು ೬೦ ವರ್ಷದ ಕಟ್ಟುಮಸ್ತು ಆಳು. ಇವನು ಪ್ರಬುದ್ಧ ಜೀವಿ. ಅತ್ಯಂತ ಸಾಧು ಸ್ವಭಾವದ ಇವನು ಮೊದಲಿಂದಲೂ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಇವನು ಸೆರೆ ಸಿಕ್ಕು ಸುಮಾರು ೩೦ ವರ್ಷಗಳಾದವು. ಅಂಬಾರಿಯನ್ನು ಯಶಸ್ವಿಯಾಗಿ, ಜೋಪಾನವಾಗಿ ಹೊತ್ತು ನಾಡಿನ ಜನರ ಮೆಚ್ಚುಗೆಗೆ ಪಾತ್ರನಾಗಿರುವ ಇವನು ಸಿಕ್ಕಾಗ ಇನ್ನು ಹದಿಹರೆಯದ ಪೊಗರು ಮಾಸಿರಲಿಲ್ಲ. ಹತ್ತು ಜನ ಮಾವುತರು ಪಳಗಿದ ನಾಲ್ಕು ಆನೆಗಳೊಂದಿಗೆ ಬಂದು ಮುಖಾಮುಖಿಯಾದರೂ ಕ್ಯಾರೇ ಎನ್ನದೇ ತನ್ನದೆ ಹಾದಿ ತುಳಿಯಲು ಯತ್ನಿಸಿದ್ದ. ಅಸಾಧ್ಯ ಬಲ ಮೈಗೂಡಿಸಿಕೊಂಡು ದೃಷ್ಟಿಸುವ ಪರಿಯನ್ನು ಕಂಡು ಯಾರೂ ಇವನ ಬಳಿ ಹೋಗಿ ಪಳಗಿಸುವ ದೈರ್ಯ ಮಾಡಿರಲಿಲ್ಲ. ಇವನ ಪ್ರಚಂಡ ದೇಹಬಲವನ್ನು ಕಂಡೇ ‘ಬಲರಾಮ’ ಎಂದು ಹೆಸರಿಸಲಾಯಿತು.
ರಾಜ ಬೀದಿಯಲ್ಲಿ ಹೆಜ್ಜೆ ಹಾಕಿದರೆ ಅದರ ಕಳೆಯೆ ಬೇರೆ. ಗಜ ಗಾಂಭೀರ್ಯದ ನಡಿಗೆ, ದೇಹ ಸೌಂದರ್ಯ ಬೇರೆ ಎಲ್ಲಕ್ಕಿಂಥ ಭಿನ್ನ. ಕಣ್ಣು ಕೊರೈಸುವ ಶ್ವೇತ ವರ್ಣದ ದಂತಗಳು ನೋಡುಗರನ್ನು ಥಟ್ಟನೆ ಸೆಳೆಯುವಂಥದ್ದು. ಇಂಥ ಚಲುವ ಇನ್ನೊಬ್ಬ ಸಿಗುವುದು ಅಪರೂಪ. ಅಷ್ಟು ಒಳ್ಳೆಯ, ಅಪರೂಪದ ವ್ಯಕ್ತಿತ್ವ.
೧೩ ಬಾರಿ ಅಂಬಾರಿ ಹೊತ್ತ ಕೀರ್ತಿ ಬಲರಾಮನದ್ದು. ಬಲಗಣ್ಣು ಮಂಜಾದರೂ ಸಾಗುವ ಹಾದಿಯಲ್ಲಿ ಜನರ ಮದ್ಯ ಯಾರಿಗೂ ಕಿಂಚಿತ್ತು ದಕ್ಕೆಯಾಗದಂತೆ ತಾಯಿ ಚಾಮುಂಡೇಶ್ವರಿ ಉತ್ಸವವನ್ನು ಸಾಂಗಗೊಳಿಸಿದ್ದಾನೆ. ೭೫೦ ಕೆ.ಜಿ ತೂಕದ ಅಂಬಾರಿಯನ್ನು ಹೆಗಲ ಮೇಲೆ ಹೊತ್ತು ತಾಳ್ಮೆಯಿಂದ ನೊವನ್ನು ತೋರಿಸಿಕೊಳ್ಳದೆ ಯಶಸ್ವಿಯಾಗಿ ಇಷ್ಟು ವರ್ಷ ಪೊರೈಸಿದ್ದಾನೆ.
ಇದೀಗ ಇವನಿಗೆ ಉತ್ತರಾಧಿಕಾರಿಯಾಗಿ ಅರ್ಜುನ ನೆಮಿಸಲ್ಪಟ್ಟಿದ್ದಾನೆ.

ಉತ್ತರಾಧಿಕಾರಿ ಅರ್ಜುನ

ತೂಕ ೫ ಟನ್. ೧೯೭೨ರಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಸೆರೆಯಲ್ಲಿ ಸಿಕ್ಕಾಗ ಅರೆಳು ವರ್ಷದ ಮರಿ. ಇಗ ಪ್ರಬುದ್ಧ ಜೀವಿ. ದುಬಾರೆ ಕ್ಯಾಂಪ್ ಇವನ ವಾಸ. ಅಗಲವಾದ ಬುಜದಿಂದ ಇವನಿಗೆ ಅಂಬಾರಿಯ ಜವಾಬ್ದಾರಿ ಸಿಕ್ಕಿದೆ. ಸ್ವಲ್ಪ ಮುಂಗೋಪಿಯಾದರೂ ರಾಜಗಾಂಭೀರ್ಯದ ನಡಿಗೆ. ಇವನ ಸುತ್ತ ಎರಡು ಹೆಣ್ಣು ಆನೆ ಇಲ್ಲದಿದ್ದರೆ ಇವನನ್ನು ನಿಯಂತ್ರಿಸುವುದೇ ಕಷ್ಟ. ಯಾರನ್ನೂ ಸುಲಭವಾಗಿ ಹತ್ತಿರ ಬಿಟ್ಟು ಕೊಳ್ಳುವದಿಲ್ಲ. ಸುಮಾರು ೬ ವರ್ಷದಿಂದ ಅಂಬಾರಿಯನ್ನು ಯಶಸ್ವಿಯಾಗಿ ಹೊರುತ್ತಾ ದಸರಾ ನಡಿಸಿಕೊಂಡು ಬಂದಿದಾನೆ. ಇವನ ನಂತರದ ಉತ್ತರಾಧಿಕಾರಿ ಯಾರು ಎಂಬುದೇ ಇದೀಗ ಎಲ್ಲರನ್ನೂ ಕಾಡುತ್ತಿರುವ ಚಿಂತೆ.
ಆನೆಗಳ ಹೆಡ್ಮಾಸ್ಟರ್ ಅಭಿಮನ್ಯು
೧೯೭೭ ಬಲರಾಮ ಸಹಾಯದಿಂದ ಹೆಬ್ಬಾಳ ಸಮೀಪ ಮತ್ತಿಗೂಡು ಅರಣ್ಯದಲ್ಲಿ ಗುಂಡಿಗೆ ಬೀಳಿಸಿ ಸೆರೆ ಹಿಡಿದಾಗ ಅಭಿಮನ್ಯುವಿಗೆ ಸಮಾರು ಹತ್ತರ ಪ್ರಾಯ. ದಿನಕ್ಕೆ ೧.೫ ಟನ್ ಹುಲ್ಲು ತಿನ್ನುವ ಅಭಿಮನ್ಯು ೪.೫ ಟನ್ ತೂಗುತ್ತಾನೆ. ಹತ್ತನೆ ವಯಸ್ಸಿಗೆ ಬಾಳೆ, ತೆಂಗು ಅಡಿಕೆ ತೋಟಗಳು ಇವನ ಕಾಲಿಗೆ ಸಿಕ್ಕು ನುಜ್ಜು ಗಜ್ಜಗಿದ್ದವು ಬೆಸತ್ತ ರೈತರು ಅರಣ್ಯ ಇಲಾಖೆಗೆ ದೂರು ನೀಡಿದರು. ಸುಮಾರು ೬ ಆನೆಗಳ (ಪಳಗಿದ) ಸಹಾಯದಿಂದ ಅಭಿಮನ್ಯುವನ್ನು ಸುತ್ತುವರಿದು ಬಂಧಿಸಲು ೨ ಬಾರಿ ಪ್ರಯತ್ನ ಪಟ್ಟರು. ತನ್ನ ಎಲ್ಲಾ ಶಕ್ತಿ ಪ್ರದರ್ಶಿಸಿ ಸುತ್ತುನರಿದ ಆನೆಯ ಚಕ್ರವ್ಯಹವ್ನನು ಬೆದಿಸಿ ಕಾಡಿನೊಳಗೆ ಮಾಯವಾದ ಅದರಿಂದ ಅಭಿಮನ್ಯು ಎಲ್ಲಾ ಕೆಲಸ ಅಭಿಮನ್ಯು ಒಬ್ಬನೆ ಮಾಡಬಲ್ಲ, ಇವನು ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಹೋಗಿ ಕಾಡಾನೆಗಳನ್ನು ಹಿಡಿದುಕೊಟ್ಟು ಪಳಗಿಸಿ ಬಂದಿದ್ದಾನೆ. ಅರಣ್ಯ ಇಲಾಖೆ ಯಾವುದೇ ಕೆಲಸ ಹೇಳಿದರೂ ತಂಟೆತಕರಾರಿಲ್ಲದೇ ಕೆಲಸವನ್ನು ಮಾಡುತ್ತಾನೆ. ಅಭಿಮನ್ಯು ಇಲ್ಲದೇ ಅರಣ್ಯ ಇಲಾಖೆ ಆನೆ ಹಿಡಿಯುವ ಕೆಲಸಕ್ಕೆ ಹೋಗುವುದನ್ನು ನೆನೆಸಿಕೊಳ್ಳುವುದೂ ಕಷ್ಟ. ಸದ್ಯಕ್ಕೆ ಜಂಬೂ ಸವಾರಿಯಲ್ಲಿ ವಾದ್ಯಗೋಷ್ಠಿ ವಾಹನವನ್ನು ಶಿಸ್ತಿನಿಂದ ಸಾಗಿಸುತ್ತಿದ್ದಾನೆ. ಶಿಬಿರದಲ್ಲೂ ಅಷ್ಟೇ ಶಿಸ್ತು. ತುಂಟಾಟ, ಪುಂಡಾಟಿಕೆ ಮಾಡುವ ಆನೆಗಳಿಗೆ ಅಭಿಮನ್ಯುವೇ ಹೆಡ್ಮಾಸ್ಟರ್. ಮೈಸೂರಿನಲ್ಲಿ ಜನರನ್ನ ಕೊಂದು, ದಾಂದಲೆ ಸೃಷ್ಟಿ ಮಾಡಿದ್ದ ಆನೆಗೆ ಪಾಠ ಕಲಿಸಿದ ಕೀರ್ತಿ ಅಭಿಮನ್ಯುವಿಗೇ ಸಲ್ಲುತ್ತದೆ.

ಗಾಂಭೀರ್ಯದ ಗಜೇಂದ್ರ
೧೯೮೫ರಲ್ಲಿ ಹಾಸನ ಜಿಲ್ಲೆಯ ಆಲೂರು, ದೊಡ್ಡಬೆಟ್ಟ ಕಟ್ಟೆಪುರ ಹಾಗೂ ಇತರ ಗ್ರಾಮಗಳಲ್ಲಿ ಬೆಳೆ ಲೂಟಿಯಲ್ಲಿ ತೊಡಗಿದ್ದ ಆನೆ ಗುಂಪನ್ನು ಅರಣ್ಯ ಇಲಾಖೆ ಓಡಿಸಿದ್ದರು. ಗುಂಪಿನಿಂದ ಬೇರ್ಪಟ್ಟಿದ್ದ ಒಂಟಿಯಾನೆಯೊಂದು ಪುಂಡಾಟಿಕೆ ಮಾಡಲು ಶುರುಮಾಡಿತು. ನಾಗರಹೊಳೆಯಲ್ಲಿನ ಶಿಬಿರದ ಆನೆಗಳ ನೆರವಿನಿಂದ ಅದಕ್ಕೆ ಮದ್ದು ನೀಡಿ, ನಾಗರಹೊಳೆಯ ಶಿಬಿರಕ್ಕೆ ತಂದು ಪಳಗಿಸಲಾಯಿತು. ಆತನ ದಿಟ್ಟತನವನ್ನು ಕಂಡು ‘ಗಜೇಂದ್ರ’ ಎಂದು ನಾಮಕರಣ ಮಾಡಿದರು. ಪಳಗಿದ ಗಜೇಂದ್ರ ಮರದ ದಿಮ್ಮಿಗಳನ್ನು ಸಾಗಿಸುವುದು ಸೇರಿದಂತೆ ವಿವಿಧ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾನೆ. ನಾಗರಹೊಳೆಗೆ ಬರುವ ಪ್ರವಾಸಿಗಳಿಗೆ ಸಫಾರಿ ಮಾಡಿಸುತ್ತಿದ್ದ. ಅನಂತರ ಬಿಳಿಗಿರಿ ವನ್ಯಧಾಮ, ಕೆಮ್ಮಣ್ಣಗುಂಡಿಗೆ ಸ್ಥಳಾಂತರಗೊಂಡ. ಸುಮಾರು ೧೮ ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲುಗೊಳ್ಳುತ್ತಿದ್ದ ಗಜೇಂದ್ರನನ್ನು ಪಟ್ಟದ ಆನೆಯಾಗಿ ಒಡೆಯರ್ ಅವರು ನೇಮಿಸಿಕೊಂಡಿದ್ದರು. ಈ ಬಾರಿ ಗಜೇಂದ್ರ ದಸರೆಗೆ ಬರುವುದು ಅನುಮಾನ. ಕಾರಣ ಇತ್ತೀಚೆಗೆ ಗಜೇಂದ್ರನಿಗೆ ಮದವೇರಿತ್ತು. ಈ ಸಂದರ್ಭದಲ್ಲಿ ಮೊದಲು ತನ್ನನ್ನು ಸೆರೆ ಹಿಡಿದಿದ್ದ (೧೯೮೫ರಲ್ಲಿ) ಶ್ರೀರಾಮನ ಮೇಲೆ ಸೇಡು ತೀರಿಸಿಕೊಂಡನೋ ಎಂಬಂತೆ ದಂತದಿಂದ ತಿವಿದು ಕೊಂದ ಅಪಕೀರ್ತಿ ಗಜೇಂದ್ರನನ್ನು ಕಾಡುತ್ತಿದೆ.ವರಲಕ್ಷ್ಮಿ

ದಸರಾಕ್ಕೂ ಹಾಗೂ ಆನೆಗಳಿಗೂ ಹಿಂದಿನಿಂದಲೂ ಅವಿನಾಭಾವ ನಂಟು. ಅಂಬಾರಿ ಉತ್ಸವದ ಕ್ಯಾಪ್ಟನ್ ಅರ್ಜುನನ ಜತೆಗೆ ಪಟ್ಟದರಸಿಯರಂತೆ ಹೆಜ್ಜೆ ಹಾಕುತ್ತಿರುವವರ ಪಟ್ಟಿಯಲ್ಲಿ ವರಲಕ್ಷ್ಮಿ ಆನೆಯೂ ಸೇರಿದೆ. ನೋಡಲು ಸಹಜ ಸುಂದರವಾಗಿ, ದಷ್ಟ ಪುಷ್ಟವಾಗಿ ಕಾಣುವ ವರಲಕ್ಷ್ಮಿಗೆ ಈಗ ೬೨ ವರ್ಷ. ಮತ್ತಿಗೋಡು ಆನೆ ಶಿಬಿರದಲ್ಲಿ ಇದರ ವಾಸ. ೩,೧೨೦ ಕೆಜಿ ತೂಕ ಹೊಂದಿರುವ ವರಲಕ್ಷ್ಮಿ ಕಳೆದ ವರ್ಷಕ್ಕಿಂತ ಈ ಬಾರಿ ೨೧೦ ಕೆಜಿಯಷ್ಟು ಹೆಚ್ಚಾಗಿದೆ. ಶರೀರದ ಉದ್ದ ೩.೩೪ ಮೀ. ಎತ್ತರ ೨.೪೬ ಮೀ. ಈ ಆನೆ ತುಂಬಾ ಸಾಧು ಸ್ವಭಾವದಾಗಿದ್ದು, ಇದನ್ನು ೧೯೭೭ರಲ್ಲಿ ಕಾಕನಕೋಟೆಯಲ್ಲಿ ಸೆರೆಹಿಡಿಯಲಾಗಿತ್ತು. ಇದು ೯ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
ಮಾವುತ: ರವಿ.ಜೆ.ಕೆ.
ಕಾವಾಡಿ: ಮಾದೇಶ.

ಧನಂಜಯ

ದುಬಾರೆ ಶಿಬಿರದಲ್ಲಿ ಪಳಗಿರುವ ಧನಂಜಯ ಸಕಲೇಶಪುರದ ಯಸಳೂರು ಅರಣ್ಯ ವಲಯದವನು. ಈ ಭಾಗದ ತೋಟಗಳ ಮೇಲೆ ನಿರಂತರ ಧಾಳಿಯಿಂದ ಬೇಸತ್ತ ಜನರು ಇವನ ಪುಂಡಾಟ ತಾಳಲಾರದೆ ಈತನನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದರು. ಎರಡು ದಿನ ಕಾರ್ಯಾಚರಣೆ ನಡೆಸಿ ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, ಹರ್ಷ, ವಿಕ್ರಮ ಆನೆಗಳ ನೆರವಿನಿಂದ ೨೦೧೪ ಮಾರ್ಚ್ ೩ರಂದು ಅಂತೂ ಧನಂಜಯನನ್ನು ಸೆರೆಹಿಡಿಯಲಾಯಿತು.

ಸೆರೆಯಾದ ನಾಲ್ಕೇ ವರ್ಷದಲ್ಲಿ ಧನಂಜಯನ ಮುಂಗೋಪ ಮತ್ತು ಪುಂಡಾಟವೆಲ್ಲ ಮರೆಯಾಗಿ, ಶುದ್ಧ ಮೃದು ಸ್ವಭಾವಿಯಾಗಿದ್ದಾನೆ. ಆನೆ ಹಿಡಿಯುವುದು ಮತ್ತು ಪಳಗಿಸುವುದನ್ನೂ ಕಲಿತಿದ್ದಾನೆ. ಮೇವಿಗೆಂದು ಕಾಡಿಗೆ ಬಿಟ್ಟಾಗ ಶಿಬಿರ ಹತ್ತಿರವಿದ್ದರೆ ಸಮಯಕ್ಕೆ ಸರಿಯಾಗಿ ಬಂದು ಬಿಡುತ್ತಾನೆ. ೪ ಕಿ.ಮೀ ದೂರ ಹೋದನೆಂದರೆ ಅವನಿಗೆ ದಾರಿ ಗುರುತಿಸುವುದು ಕಷ್ಟ. ಇಂತಹ ಸಮಯದಲ್ಲಿ ಮಾವುತ ಮತ್ತು ಕಾವಾಡಿಗರೇ ಹುಡುಕಿ ಕರೆತರಬೇಕಾಗುತ್ತದೆ. ಸೋಮವಾರಪೇಟೆಯ ಆನೆಕಾಡು ಮತ್ತು ಮೊದೂರು ಎಸ್ಟೇಟ್ನಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾನೆ. ಇದೇ ಮೊದಲನೇ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಧನಂಜಯ ೩೫ ವರ್ಷದವನು. ಇವನ ತೂಕ ೩೯೦೦-೪೦೫೦ ಕೆ.ಜಿ ಇದ್ದು, ಶರೀರದ ಎತ್ತರ ೨.೭೮ ಮೀಟರ್, ಉದ್ದ ೩.೮೪ ಮೀಟರ್ ಹೊಂದಿದೆ.
ಮಾವುತ: ಬಾಸ್ಕರ್ ಜೆ.ಸಿ.
ಕವಾಡಿ: ಸೂನ್ಯ ಜೆ.ಬಿ.ವಿಕ್ರಮ

ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ವಿಕ್ರಮನಿಗೆ ೪೫ ವರ್ಷ. ೨.೬೦ ಮೀ ಎತ್ತರ, ೩.೪೩ ಮೀ ಉದ್ದ ಹಾಗೂ ೩೮೨೦ ಕೆ.ಜಿ ತೂಕವಿದೆ. ಇದನ್ನು ೧೯೯೦ರಲ್ಲಿ ಡೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧ ನೀಡುವ ಮೂಲಕ ಸೆರೆಹಿಡಿಯಲಾಗಿದೆ. ಇದು ೧೪ ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ೨೦೧೫ರಿಂದ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿಧಾನಗಳಲ್ಲೂ ಭಾಗವಹಿಸುತ್ತಿದೆ.
ಮಾವುತ: ಪುಟ್ಟ
ಕವಾಡಿ: ಹೇಮಂತ ಕುಮಾರ್ಭೀಮ

ದನಗಾಹಿಗಳ ಹಿಂಡಿನಲ್ಲಿ ಕಾಣಿಸಿಕೊಂಡ ಪುಟ್ಟ ಆನೆ ಮರಿ ಇದು. ಆನೆ ಶಿಬಿರಕ್ಕೆ ಕರೆತಂದು ಆಕಳ ಹಾಲಿನ ಪೋಷಣೆಯಲ್ಲೇ ಬೆಳೆಯಿತು.
ಭೀಮನ ಲಾಲನೆ ಪಾಲನೆ ಸರಳ ಸಜ್ಜನ ಸ್ವಭಾವದ ಬಲರಾಮನ ಸಾನಿಥ್ಯದಲ್ಲೇ ಬೆಳೆಯಿತು. ಒಬ್ಬರನ್ನೊಬ್ಬರು ಬಿಟ್ಟಿರುವುದಿಲ್ಲ. ಇವರು ಒಂದೆ ಕಡೆ ಇರುತ್ತಾರೆ. ಸ್ನಾನಕ್ಕೂ ಬಲರಾಮನೊಂದಿಗೆ ತೆರಳುತಿದ್ದ ಭೀಮ ಇಂದಿಗು ಬಲರಾಮನನ್ನು ಬಿಟ್ಟಿರುವುದಿಲ್ಲ. ಬಲರಾಮ ಏನು ತಿನ್ನುತ್ತಾನೋ ತನಗು ಅದೇ ಬೇಕೆಂದು ಬಲರಾಮನ ಬಾಯಲ್ಲಿ ತನ್ನ ಸೊಂಡಿಲು ಸೇರಿಸುತ್ತಾನೆ. ಬಲರಾಮನು ಕಿಂಚಿತ್ತು ಕೋಪಿಸಿಕೊಳ್ಳದೆ ಭೀಮನ ಚೇಷ್ಟೆ ಸಹಿಸಿಕೊಳ್ಳುತ್ತಾನೆ.
ಭೀಮನಿಗೆ ಈಗ ೧೮ ವರ್ಷ. ಜಂಬು ಸವಾರಿಯನ್ನು ಹೊರುವ ಎಲ್ಲಾ ಲಕ್ಷಣಗಳು ಈತನಲ್ಲಿದೆ. ಗಾಂಭೀರ್ಯು ನಡಿಗೆ, ಚೆಂದದ ದಂತ, ಸ್ವಭಾವವೂ ಕೂಡ ಬಲರಾಮನ ಹಾಗೆ.
ಮಾವುತ: ರಾಧಕೃಷ್ಣ
ಕಾವಡಿ: ರಾಜು

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos