ನಮ್ಮ ಲವ್ಲಿ ಬೆಂಗಳೂರು ಮತ್ತು ಲವ್ ಕೆನಾಲೂ...

February 20, 2018 ⊄   By: ರಾಧಾಕೃಷ್ಣ ಭಡ್ತಿ

ಸುಂದರ ಬದುಕಿನ ಕನಸುಗಳ ಗೋಪುರವನ್ನು ಎಂದಿಗೆ ಸರ್ವನಾಶಗೊಳ್ಳುತ್ತವೋ ಯಾರೊಬ್ಬರಿಗೂ ಗೊತ್ತಿಲ್ಲ. ಇದೆಲ್ಲವನ್ನೂ ಮರೆತು ವಿಸ್ಮತಿಗೆ ಬಿದ್ದವರಂತೆ ಸೈಟು ಕೊಂಡು ಮನೆ ಕಟ್ಟಿಸಿದ್ದೇ ಮಹಾನ್ ಸಾಹಸವೆಂಬಂತೆ ಬೀಗುತ್ತಾ ದೊಡ್ಡಸ್ಥಿಕೆಯಲ್ಲಿ ಮೆರೆದಾಡುತ್ತಿದ್ದೇವೆ. ಇನ್ನೂ ಒಂದೂ ಸೈಟು ಕೊಳ್ಳದ ‘ಪಾಪಿ’ಗಳತ್ತ ನಾವು ಕನಿಕರದ ನೋಟವನ್ನು ಬೀರುತ್ತಿದ್ದೇವೆ....

ನೂರು ವರ್ಷಗಳ ಹಿಂದೆ ಅಮೆರಿಕದಲ್ಲೊಂದು ಕಡೆ ಹೀಗೆಯೇ ಆಗಿತ್ತೆನ್ನುತ್ತದೆ ಇತಿಹಾಸ. ಇದ್ದಕ್ಕಿದ್ದ ಹಾಗೆಯೇ ಮನೆಗಳಡಿಯಿಂದ ಹೊಗೆ ಹೋರಸೂಸುತ್ತಿದ್ದರೆ ಒಳಗಿದ್ದವರಿಗೆ ಏನಾಗುತ್ತಿದೆ ಎಂಬುದು ಅರ್ಥವಾಗು–ವುದರೊಳಗೆ ಉಸಿರು ಕಟ್ಟಿ ನಿತ್ರಾಣರಾಗಿ ಬೀಳುತ್ತಿದ್ದರಂತೆ. ಇನ್ನೊಂದು ಮನೆಯಲ್ಲಿ ಮತ್ತಿನ್ನಾವುದೋ ವಿಚಿತ್ರ ದ್ರವ ಭೂಮಿಯೊಳಗಿಂದ ಚಿಲ್ಲನೆ ಚಿಮ್ಮಿ ಅಸಹನೀಯ ವಾಸನೆಯೊಂದಿಗೆ ಜೀವವನ್ನು ಆಪೋಶನ ತೆಗೆದುಕೊಳ್ಳುತ್ತಿತ್ತು. ಇವತ್ತು ಆರಾಮಾಗಿ ಓಡಾಡಿಕೊಂಡಿದ್ದ, ಜಬರ್ದಸ್ತ್ ತಿನ್ನುತ್ತಿದ್ದವನಿಗೆ ಇದ್ದಕ್ಕಿದ್ದಂತೆಯೇ ಬಾಯಿ ಮುಚ್ಚಲೂ ಆಗದ ಸ್ಥಿತಿ. ಆತನ ಉಸಿರಾಟ ಎಷ್ಟು ವೇಗವಾಗಿಬಿಟ್ಟಿತ್ತೆಂದರೆ ಅನ್ನದ ಅಗುಳು ನುಂಗಲೂ ಆತ ಬಾಯಿಮುಚ್ಚಲು ಆಗುತ್ತಿರ–ಲಿಲ್ಲ. ಇನ್ನೊಬ್ಬನ ಸ್ಥಿತಿ ಇನ್ನೂ ವಿಚಿತ್ರ. ಸಿಟಿ ಬಸ್ನಲ್ಲಿ ಬೆಳಗ್ಗೆ ಆರಾಮವಾಗಿ ಕಚೇರಿಗೆ ಹೊರಟವನು ದೆವ್ವ ಬಡಿದವನಂತೆ ಕೈಕಾಲು ಆಡಿಸುತ್ತಾ ಬಿದ್ದು ಎಚ್ಚರ ಕಳೆದುಕೊಳ್ಳುತ್ತಾನೆ. ಬಸುರಾಗಲೂ ಮಹಿಳೆಯರು ಭೀತಿಪಡು–ಲಾರಂಭಿಸಿದರು. ಏಕೆಂದರೆ ಹೇಗೇ ಆರೈಕೆ ಮಾಡಿಕೊಂಡರೂ, ಯಾವುದಾದರೊಂದು ಅಂಗ ಊನವಾಗಿದ್ದ ಮಗುವೇ ಜನಿಸುತ್ತಿತ್ತು. ಇಲ್ಲವೇ ಅದನ್ನು ಮನುಷ್ಯನ ಮಗುವೆಂದು ಕರೆಯಲೇ ಅನುಮಾನವಾಗುವ ವಿಚಿತ್ರ ಆಕಾರವನ್ನು ನವಜಾತ ಶಿಶುಗಳು ಪಡೆದಿರುತ್ತಿದ್ದವು. ಇವೆಲ್ಲವೂ ಆಗುತ್ತಿದ್ದುದು ಆ ನಿರ್ದಿಷ್ಟ ಪ್ರದೇಶದಲ್ಲಷ್ಟೇ.
ದೆವ್ವ ಬಡಕೊಂಡದ್ದೇ ಇರಬೇಕು ಎಂದು ತೀರ್ಮಾನಿಸಿಬಿಟ್ಟಿರಿ ತಾನೇ? ಅಥವಾ ಭಾನಾಮತಿಯ ಪ್ರಭಾವ! ಸರಿ ಬಿಡಿ, ಕೇರಳದ ಜ್ಯೋತಿಷಿಗಳಿಗೆ ಒಳ್ಳೆಯ ಕಮಾಯಿ. ಭಾರತದಲ್ಲಾಗಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ. ಬೆಳಗಾಗುವುದರೊಳಗೆ ‘ಹೀಗೂ ಉಂಟೆ’ ಎಂದುಕೊಂಡು ಇಡೀ ದಿನ ಚಾನೆಲ್ಗಳಲ್ಲಿ ಅದಕ್ಕಿಂತ ಚಿತ್ರವಿಚಿತ್ರ ಬಣ್ಣಗಳನ್ನು ಕಟ್ಟಿ ಟಿಆರ್ಪಿ ಹೆಚ್ಚಿಸಿಕೊಳ್ಳಬಹುದಿತ್ತೇನೊ. ಆದರೆ ಅದು ಅಮೆರಿಕ. ‘ಅತಿ ಬುದ್ಧಿವಂತ’ರ ರಾಷ್ಟ್ರ. ಇಂಥ ಅತಿ ಬುದ್ಧಿವಂತಿಕೆಯ ಅನಾಹುತಗಳಲ್ಲೇ ಇದೂ ಒಂದಾಗಿತ್ತು. ಅದೇನಾಗಿತ್ತು ಎಂಬುದನ್ನು ಆಮೇಲೆ ನೋಡೋಣ.

ನಮ್ಮ ಬೆಂಗಳೂರಿನ ಬಗ್ಗೆ ಸ್ವಲ್ಪ ಮಾತಾಡೋದಿದ್ದರೆ, ಇಲ್ಲಿ ನಾವು ಇನ್ನು ನಿವೇಶನಗಳನ್ನು ಕೊಳ್ಳಬೇಕೆಂದರೆ ಅದರ ವಿಸ್ತೀರ್ಣ ಹೇಗಿರುತ್ತದೆ ಗೊತ್ತೇ? ಮೂವತ್ತು ಅಡಿ, ನಲವತ್ತು ಅಡಿ, ನೂರು ಅಡಿ! ಅದು ಏಕೆ ವಿಚಿತ್ರವಾಗಿ ಮುಖ ಮಾಡುತ್ತೀರಿ. ಈಗೆಲ್ಲ ನಿವೇಶನವನ್ನು ಅಳತೆ ಮಾಡುವುದು ಹೀಗೆಯೇ, ನಿಮಗಿನ್ನೂ ಗೊತ್ತಿಲ್ಲವೇ? ಮೂವತ್ತು ಅಡಿ ಅಗಲ, ನಲವತ್ತು ಅಡಿ ಉದ್ದ- ಇದು ಸಾಮಾನ್ಯವಾಗಿ ನಿವೇಶನದ ಸುತ್ತಳತೆ. ಅದು ನಮಗೂ ಗೊತ್ತು; ಇದೇನಿದು ನೂರು ಅಡಿ; ಅಂದರೆ ನಿವೇಶನದ ಆಳ. ಹೌದು ಬೆಂಗಳೂರಿನ ನಿವೇಶನಗಳೆಲ್ಲ ಈಗ ತುಂಬಿದ ಗುಂಡಿಯ ಮೇಲಿನ ‘ಕಸಾತಳ’. ಇದ್ದ ಬದ್ದ ಸಮತಟ್ಟು ಪ್ರದೇಶಗಳನ್ನೆಲ್ಲಾ ಬಕಾಸುರನ ಭಯಂಕರ ಹಸಿವಿಗೆ ಬಿದ್ದ ಹಾಗೆ ಆಕ್ರಮಿಸಿಕೊಂಡಾಗಿದೆ. ಕೆರೆ ಅಂಗಳಗಳನ್ನೂ ನುಂಗಿ ನೀರು ಕುಡಿದಾಗಿದೆ. ಆದರೂ ದಾಹ ತೀರಿಲ್ಲ. ಜಿದ್ದಿಗೆ ಬಿದ್ದು ನೆಲವನ್ನೇ ಕಬಳಿಸುವ, ಜಲ ಮೂಲವನ್ನೇ ಆಪೋಶನಗೈಯುವ ರಕ್ಕಸ ಪ್ರವೃತ್ತಿಗೆ ಹೊಳೆದದ್ದು ವಿಕ್ಷಿಪ್ತ ಉಪಾಯ. ಆಳ ಗುಂಡಿಗಳು, ತಗ್ಗು ತಲಕಟ್ಟುಗಳು, ಕಮರಿ ಕಾಲುವೆಗಳಿನ್ನೂ ಉಳಿದುಕೊಂಡಿವೆಯಲ್ಲಾ? ಅವನ್ನು ಹಾಗೇ ಬಿಡಬೇಕೇಕೆ? ಆದರೆ ಹಾಗೆ ಕಂಡಕಂಡ ಗುಂಡಿಯಲ್ಲಿ ಬಿದ್ದು ಹೋರಳಾಡಲು ಯಾರು ಒಪ್ಪಿಯಾರು? ಕೊನೇಪಕ್ಷ ಅದನ್ನು ಮರೆಮಾಚಿಯಾದರೂ ತೋರಿಸಬೇಕಲ್ಲವೇ? ಅದಕ್ಕೂ ಇತ್ತು ಉಪಾಯ. ಹೇಗೂ ನಗರದ ರಕ್ಕಸ ಸಂತತಿ ತಿಂದು ಕಕ್ಕಿದ್ದನ್ನು ವಿಲೇವಾರಿ ಮಾಡಲು ಜಾಗ ಬೇಕೇಬೇಕಿತ್ತು. ಅದನ್ನೆಲ್ಲಾ ಇಲ್ಲೇ ತಂದು ತುಂಬಿಬಿಟ್ಟರೆ...? ಅದನ್ನೇ ಮಾಡಿದ್ದು. ಈಗ ಹೇಳಿ ನಿಮ್ಮ ನಿವೇಶನದ ಅಳತೆಯನ್ನು. ಹೀಗೆ ನೂರಡಿ ಆಳದಿಂದ ತುಂಬಿಕೊಂಡು ಬಂದ ಕೊಳಕಿನ ರಾಶಿಯ ಮೇಲೆಯೇ ನಿಮ್ಮ ಮೂವತ್ತು-ನಲವತ್ತು ಸೈಟ್ ಇರುವುದಲ್ಲವೇ?

ಅಮೆರಿಕದಲ್ಲಿ ‘ದೆವ್ವದ ಕಾಟ’ಕ್ಕೆ ಸಿಲುಕಿದ್ದ ಪ್ರದೇಶವೂ ಹೀಗೆಯೇ ತುಂಬಿ ನಿಂತದ್ದು. ಅಲ್ಲಿ ಕಂಡ ಎಲ್ಲ ಅವಾಂತರಕ್ಕೂ ಈ ರೀತಿ ಸಿಕ್ಕಸಿಕ್ಕ ತ್ಯಾಜ್ಯಗಳನ್ನೂ ತುಂಬಿದ್ದೇ ಕಾರಣ. ಅಷ್ಟು ಹೇಳಿದ ಮೇಲೆ ನಮಗೆ ನೆನಪಾಗುವುದು ನಮ್ಮ ತಿಪ್ಪೆ ಗುಂಡಿಗಳೇ? ಹಾಗೂ ಬೇಕಿದ್ದರೆ ಬೆಂಗಳೂರಿನ ಹೊರವಲಯದ ದಾಬಸ್ಪೇಟೆ, ಹೊಸಕೋಟೆ, ಮೈಸೂರು ರಸ್ತೆಗಳಲ್ಲಿ ಅಡ್ಡಾಡಿ ಬನ್ನಿ. ಸಾಕ್ಷಾತ್ ನರಕ ದರ್ಶನ. ಅಲ್ಲಿ ಅನಾಥ ಶವಗಳನ್ನು ನೀವು ಕಂಡರೂ ಅಚ್ಚರಿ ಇಲ್ಲ. ಹಾಗೆನ್ನುತ್ತಿದ್ದಂತೆಯೇ, ಸರಿ ಮತ್ತೆ, ಇವನ್ನೆಲ್ಲಾ ತುಂಬಿದ ಪ್ರದೇಶದಲ್ಲಿ ದೆವ್ವದ ಚೇಷ್ಟೆ ಇದ್ದೇ ಇರುತ್ತದೆ’ ಎಂಬ ಜಡ್ಜ್ಮೆಂಟ್ ಕೊಟ್ಟುಬಿಡಬೇಡಿ. ಮೊದಲು ಅಮೆರಿಕದಲ್ಲಿ ಆದದ್ದು ಏನೆಂಬುದನ್ನು ನೋಡೋಣ.ನಯಾಗರ ಜಲಪಾತ ಗೊತ್ತಲ್ಲಾ? ವಿಶ್ವ ಪ್ರಸಿದ್ಧ, ರಮಣೀಯ ಈ ತಾಣದ ಪಕ್ಕದಲ್ಲೇ ಮಹಾನು ಭಾವನೊಬ್ಬ ದೋಣಿ ವಿಹಾರವೂ ಇದ್ದರೆ ಹೇಗಿದ್ದೀತು ಅಂತ ಯೋಚಿಸಿದ. ರಭಸದಲ್ಲಿ ಧುಮ್ಮಿಕ್ಕುವ ನೀರಿನ ರೌದ್ರ ಸೌಂದರ್ಯವನ್ನು ನೋಡುತ್ತಾ, ತುಂತುರು ಹನಿಗಳಿಗೆ ಮುಖವೊಡ್ಡಿ, ಯಾನಿಸುತ್ತಿದ್ದರೆ.... ವಾಹ್, ಸ್ವರ್ಗವೇ ಅದು. ಆದರೆ, ಜಲಪಾತದ ಸನ್ನಿಧಿಯಲ್ಲೇ ದೋಣಿಯನ್ನು ಹುಟ್ಟು ಹಾಕಲಾದೀತೇ? ಅದಕ್ಕಾಗಿ ಪಕ್ಕದಲ್ಲೇ ಕಾಲುವೆಯೊಂದನ್ನು ತೋಡಿದರೆ ಹೇಗೆ? ಆತನ ಹೆಸರು ವಿಲಿಯಮ್ ಲವ್. ಇಂಥ ಲವ್ಲಿ ಯೋಚನೆಯ ಬೆನ್ನು ಹತ್ತಿದ ಲವ್ ಕಾಲುವೆ ತೋಡಲು ಹೊರಟ. ಅದೇನಾಯಿತೋ, ಬೆಕ್ಕು ಅಡ್ಡ ಬಂದಿತೋ, ಗೂಬೆ ಕಾಣಿಸಿತೋ ಅಂತೂ ಕಾಲುವೆ ಪೂರ್ತಿಗೊಳ್ಳಲೇ ಇಲ್ಲ. ಅರ್ಧಕ್ಕೆ ಬಾಯ್ದೆರೆದು ಕುಳಿತುಬಿಟ್ಟಿತು ಕಂದಕ. ನಯಾಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಲ್ಲವೇ ಈ ಕಂದಕ! ಹಾಗೆ ಬಿಟ್ಟರೆ ಏನು ಚಂದ ಹೇಳಿ? ಅದಕ್ಕಾಗಿಯೇ ಈವತ್ತು ವರ್ಷಗಳ ಬಳಿಕ ರಾಸಾಯನಿಕ ಕಂಪನಿಯೊಂದು ಅಲ್ಲಿಗೆ ತನ್ನ ಕಾರ್ಖಾನೆಯ ತ್ಯಾಜ್ಯವನ್ನು ತಂದು ಸುರಿಯಲು ಆರಂಭಿಸಿತು. ಮನುಷ್ಯರ ಸ್ವಭಾವ ನೋಡಿ, ಒಬ್ಬರು ಕಸ ಎಸೆದರೆ ಹತ್ತು ಮಂದಿ ಅದನ್ನು ನೋಡಿ ಎತ್ತಿ ಹಾಕುವ ಬದಲು, ತಾವೂ ಅದಕ್ಕೆ ಕೊಡುಗೆ ನೀಡಿ, ಕಸದ ರಾಶಿ ನಿರ್ಮಿಸುತ್ತಾರೆ. ಲವ್ ಕೆನಾಲ್ನಲ್ಲಿ ಆದದ್ದೂ ಅದೇ. ಪ್ಲಾಸ್ಟಿಕ್, ಮಣ್ಣು-ಮಶಿ ಎಲ್ಲವೂ ಬಂದು ಬೀಳಲು ಶುರುವಾಯಿತು. ನೋಡನೋಡುತ್ತಿದ್ದಂತೆಯೇ ಕಂದಕ ಮುಚ್ಚಿ ಹೋಗಿತ್ತು.

ಮತ್ತಿನ್ನೇಕೆ ತಡ ಮೇಲಿಂದ ಒಂದಷ್ಟು ಜೇಡಿ ಮಣ್ಣು ಮೆತ್ತಿ ಸಪಾಟು ಮಾಡಿ, ಬಡಾವಣೆ ತಲೆ ಎತ್ತಿಯೇ ಬಿಟ್ಟಿತು. ಅದಕ್ಕೆ ಇಟ್ಟ ಹೆಸರೂ ಲವ್ಲಿ. ವಿಲಿಯಂ ಲವ್ ತೋಡಿದ ಕೆನಾಲ್ ಮೇಲೆ ಅದಿದ್ದುದರಿಂದ ಅದು ‘ಲವ್ಕೆನಾಲ್ ಬಡಾವಣೆ’. ಇಂಥ ಅತಿ ಸುಂದರ ಬಡಾವಣೆಯಲ್ಲೇ ಭೂತ ಚೇಷ್ಟೆ ಆರಂಭವಾದ್ದು. ಇನ್ನಿಲ್ಲದ ಕಾಯಿಲೆಗಳೆಲ್ಲಾ ಅಲ್ಲೇ ಹುಟ್ಟಿಕೊಂಡದ್ದು. ಇಪ್ಪತ್ತು, ಇಪ್ಪತ್ತೈದು ವರ್ಷಗಳಲ್ಲಿ ಸರ್ವ ರೋಗ-ರುಜಿನಗಳ ಕೊಂಪೆಯಾಗಿ ಅದು ಮಾರ್ಪಟ್ಟಿತ್ತು. ಅಮೆರಿಕದ ಎಲ್ಲ ಮಾಧ್ಯಮಗಳಲ್ಲೂ ಅದರದ್ದೇ ಸುದ್ದಿಯ ಅಬ್ಬರ. ಕೊನೆಗೂ ಆಗಿನ ಅಮೆರಿಕನ್ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅಲ್ಲಿನ ತುರ್ತು ಸ್ಥಿತಿ ಘೋಷಿಸಿ, ಎಲ್ಲರನ್ನೂ ಸ್ಥಳಾಂತರಿಸಿದ. ರಾಸಾಯ ನಿಕಗಳು, ತ್ಯಾಜ್ಯಗಳು ಅಷ್ಟರಮಟ್ಟಿಗಿನ ಪರಿಣಾಮವನ್ನು ಬೀರಿತ್ತು. ಜಗತ್ತಿನ ಅತಿದೊಡ್ಡ ದುರಂತವೊಂದಕ್ಕೆ ಲವ್ ಕೆನಾಲ್ ಭಾಷ್ಯ ಬರೆದಿತ್ತು.ಸಾಕ್ಷಿ ನಮ್ಮ ಮುಂದಿದೆ. ಏನಾಗಬಹುದು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ನಮಗೆ ಬೇರೆ ಅಗತ್ಯವಿದೆಯೇ? ಅಮೆರಿಕಕ್ಕಿಂತ ಕರಾಳ ಅಧ್ಯಾಯಗಳನ್ನು ಬರೆದಿಟ್ಟಿರುವ, ಅದಕ್ಕಿಂತ ಭಯಂಕರ ಇತಿಹಾಸವನ್ನು ಹೊಂದಿರುವ ಭಾರತದ ನಗರಗಳಿಗೆ ಏನಾಗಿದೆ? ಬೆಂಗಳೂರು ಒಂದೇ ಅಲ್ಲ. ಕರ್ನಾಟಕದ ಎಲ್ಲ ನಗರ-ಪಟ್ಟಣಗಳಲ್ಲೂ ಹುಡುಕಿದರೆ ಒಂದಲ್ಲಾ ಹತ್ತಾರು ಇಂಥ ಲವ್ ಕೆನಾಲ್ಗಳು ಅಂತರ್ಗತವಾಗಿ ಕುಳಿತಿವೆ. ಯಾವುದೇ ಕ್ಷಣದಲ್ಲೂ ಸ್ಫೋಟಿಸಲು, ವಿಷ ಗಾಳಿಯನ್ನು ಹೊಮ್ಮಿಸಲು ಸಜ್ಜಾಗಿ ಒಳಗೊಳಗೇ ಮರಳುತ್ತಿವೆ. ಅತ್ಯಂತ ಅಪಾಯಕಾರಿ ಕ್ಯಾಡ್ಮಿಯಂ, ಲಿಥಿಯಂ, ಸೀಸಗಳಿಂದ ಹಿಡಿದು ಎಲ್ಲ ರೀತಿಯ ರಾಸಾಯನಿಕಗಳು, ಜೈವಿಕ ತ್ಯಾಜ್ಯ, ಎಲೆಕ್ಟ್ರಾನಿಕ್ ತ್ಯಾಜ್ಯ, ಉದ್ಯಮ ತ್ಯಾಜ್ಯ ಇತ್ಯಾದಿಗಳು ನಾವು ಸುರಕ್ಷಿತ ಎಂದುಕೊಳ್ಳುವ ನಮ್ಮ ನೆಚ್ಚಿನ ವಾಸತಾಣಗಳ ಅಡಿಗಡಿಗೇ ಭುಸುಗುಡುತ್ತಿವೆ. ಜ್ವಾಲಾಮುಖಿಯಾಗಿ ಅವು ಯಾವತ್ತು ಕೆನ್ನಾಲಗೆಯನ್ನು ಚಾಚುತ್ತವೋ, ಬಾಯ್ದೆರೆದು ಯಾವತ್ತು ನಮ್ಮನ್ನೇ ನುಂಗಿ ಹಾಕುತ್ತವೋ, ಕುಸಿದು ಕುಳಿತು ಯಾವತ್ತು ನಮ್ಮನ್ನೇ ಬುಡಮೇಲು ಮಾಡುತ್ತವೋ, ಸುಂದರ ಬದುಕಿನ ಕನಸುಗಳ ಗೋಪುರವನ್ನು ಎಂದಿಗೆ ಸರ್ವನಾಶಗೈಯುತ್ತವೋ ಯಾರೊಬ್ಬರಿಗೂ ಗೊತ್ತಿಲ್ಲ. ಇದೆಲ್ಲವನ್ನೂ ಮರೆತು ವಿಸ್ಮತಿಗೆ ಬಿದ್ದವರಂತೆ ಸೈಟು ಕೊಂಡು ಮನೆ ಕಟ್ಟಿಸಿದ್ದೇ ಮಹಾನ್ ಸಾಹಸವೆಂಬಂತೆ ಬೀಗುತ್ತಾ ದೊಡ್ಡಸ್ಥಿಕೆಯಲ್ಲಿ ಮೆರೆದಾಡುತ್ತಿದ್ದೇವೆ. ಇನ್ನೂ ಒಂದೂ ಸೈಟು ಕೊಳ್ಳದ ‘ಪಾಪಿ’ಗಳತ್ತ ನಾವು ಕನಿಕರದ ನೋಟವನ್ನು ಬೀರುತ್ತಿದ್ದೇವೆ. ಮೂರ್ನಾಲ್ಕು ಸೈಟು ಕೊಂಡವರನ್ನು ಕಂಡು ಕರುಬುತ್ತಿದ್ದೇವೆ. ಮತ್ತೆ ಮತ್ತೆ ಕಲ್ಮಶ ಕಕ್ಕುವುದನ್ನು ನಿರ್ಭೀಡೆಯಿಂದ ಮುಂದುವರಿಸಿದ್ದೇವೆ. ಅದರ ಮೇಲೆ ಮಹಲುಗಳನ್ನು ಎಬ್ಬಿಸುತ್ತಲೇ ಇದ್ದೇವೆ. ಕೆರೆಗಳನ್ನು ಕದಿಯುತ್ತಲೇ ಇದ್ದೇವೆ. ಭಲೇ, ಬೆಂಗಳೂರು ಬದುಕೇ !

ಇತಿಹಾಸದಿಂದ ನಾವು ಪಾಠ ಕಲಿಯುವುದೇ ಇಲ್ಲ. ನಮ್ಮ ಆಸಕ್ತಿಗಳೇನಿದ್ದರೂ ಹೊಸ ಇತಿಹಾಸವನ್ನು ಬರೆಯುವುದರಲ್ಲೇ!Share This :
 •  
 •  

RELATED ARTICLES 

Readers Comments (1) 

 • ನಾಗರಾಜ ಎಸ್


  19/03/2018
  "ನಮ್ಮ ಲವ್ಲಿ ಬೆಂಗಳೂರು ಮತ್ತು ಲವ್ ಕೆನಾಲೂ..."
  ಈ ಲೇಖನ ಓದಿ ದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ತಿಳಿದು ತಿಳಿಯದೆ ಈ ರೀತಿಯ ಕಸದ ರಾಸಿಯಾಗಲು ನಾನು ಒಂದು ಕಾರಣ ವಾಗಿರುವೆ ಅನಿಸಿತು. ಎಚ್ಚರಿಕೆ ಯಿಂದಿರುವೆ.

  ಧನ್ಯವಾದಗಳು

  ನಾಗರಾಜ ಎಸ್‌
  ನಾಗೂರ
  ಬಾಗಲಕೋಟ

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos