ನಮ್ಮೂರಿಗೆ ಬಂದ ಗೊರವನೆಂಬ ಏಡಿ ಬಾಕ

January 21, 2019 ⊄   By: ಷಣ್ಮುಖರಾಜ ಮುರೂರು

ಏಡಿಗೊರವ ಒಂದು ವಲಸೆ ಹಕ್ಕಿಯಾಗಿದ್ದು, ಭಾರತದಲ್ಲಿ ಹೆಚ್ಚಾಗಿ ಚಳಿಗಾಲದಲ್ಲಿ ಕಾಣಸಿಗುತ್ತದೆ. ಗೊರವ ಪ್ರಬೇಧದಲ್ಲಿ ಗುರುತಿಸಲ್ಪಡುವ ಈ ಹಕ್ಕಿ, ಮಂಗಳೂರಿಗೆ ಬಂದದ್ದನ್ನು ಗುರುತಿಸಿ ಇಲ್ಲಿ ದಾಖಲಿಸಲಾಗಿದೆ.

ಗೊರವಗಳು ಗೊತ್ತಲ್ಲಾ? ಅದೇ ಸಾಗರದಂಚಲ್ಲಿ ವಾಸಿಸುವ ಪಕ್ಷಿ, ಹೆಚ್ಚಾಗಿ ಗೊರವಗಳನ್ನು ನೋಡಬೇಕೆಂದರೆ ನದಿಯು ಸಾಗರ ಸೇರುವ ಅಳಿವೆ ಅಥವಾ ಹಿನ್ನೀರು ಪ್ರದೇಶವನ್ನು ಹುಡುಕುತ್ತಾ ಹೋಗಬೇಕು. ಸಾಗರದ ದೈನಂದಿನ ಭರತ-ಇಳಿತದ ಸಮಯವನ್ನು ದಾಖಲಿಸುತ್ತಿರಬೇಕು. ಯಾಕೆಂದರೆ, ಸಾಗರದ ನೀರು ಇಳಿಯುವ ಸಂದರ್ಭದಲ್ಲಿ ಮಾತ್ರ ಅಳಿವೆಗಳಲ್ಲಿ ಮರಳು ಮತ್ತು ಕೆಸರಿನಿಂದ ಕೂಡಿದ ಸಣ್ಣ-ಸಣ್ಣ ದಿಬ್ಬಗಳು ನೀರಿನಿಂದ ಮೇಲ್ಮುಖವಾಗಿ ಗೋಚರಿಸುತ್ತವೆ. ಇಲ್ಲಿ ಮೀನುಗಳು, ಮೃದ್ವಂಗಿಗಳು, ಏಡಿಗಳು, ಶಂಖದಂತಹ ಚಿಪ್ಪುಗಳುಳ್ಳ ಇನ್ನೂ ಅನೇಕ ಕಡಲಜೀವಿಗಳು ಹೇರಳವಾಗಿ ಜೀವಿಸುತ್ತವೆ. ಇವೇ ಗೊರವಗಳ ಆಹಾರದ ಮೂಲ. ಇಂಥ ಸಮುದ್ರ ಜೀವಿಗಳನ್ನು ತಿನ್ನಲೆಂದೇ ಪ್ರತೀ ವರುಷ ಚಳಿಗಾಲದಲ್ಲಿ ಸಹಸ್ರಾರು ಹಕ್ಕಿಗಳು ಸಾರಗದಾಚೆಯ ಊರಿನಿಂದ ನಮ್ಮೂರಿಗೆ ವಲಸೆ ಬರುತ್ತವೆ.

ಹಕ್ಕಿಗಳ ಈ ವಲಸೆ ಪ್ರಕ್ರಿಯೆ ತೀರಾ ವಿಭಿನ್ನವೂ, ಕುತೂಹಲಭರಿತವೂ ಆಗಿರುತ್ತದೆ. ಸೈಬೀರಿಯಾದಂತಹ ವಿಪರೀತ ಚಳಿಪ್ರದೇಶದಿಂದ ಬದುಕುಳಿಯಲು ವಲಸೆ ಬರಲೇಬೇಕಾದ ಅನಿವಾರ್ಯ ಅವಕ್ಕಿವೆ. ಸಹಸ್ರಾರು ಕಿಲೋಮೀಟರ್ ದೂರವನ್ನು ಕೆಲವೇ ದಿನಗಳಲ್ಲಿ ನಿರಂತರವಾಗಿ ಕ್ರಮಿಸಿಬರುವ ವಲಸೆ ಹಕ್ಕಿಗಳೂ ನಮ್ಮಲ್ಲಿವೆ. ಹದ್ದು, ಗಿಡುಗಗಳ ಪಾಲಿನ ಆಹಾರವಾಗದೆ ಬದುಕುಳಿದ ಮರಿ-ಮಕ್ಕಳೊಡನೆ ಅವು ನಮ್ಮೂರು ಬಂದು ಸೇರುವ ಘಟನೆಯೇ ಬಹಳ ರೋಚಕ. ಅವಕ್ಕೆ ಯಾರು ದಾರಿ ತೋರುವವರೋ ಆ ದೇವರೇ ಬಲ್ಲ.ಏಡಿಗೊರವ ಒಂದು ಈ ತರಹದ ವಲಸೆ ಹಕ್ಕಿಯಾಗಿದ್ದು, ಭಾರತದಲ್ಲಿ ಹೆಚ್ಚಾಗಿ ಚಳಿಗಾಲದಲ್ಲಿ ಕಾಣಸಿಗುತ್ತದೆ. ಗೊರವ ಪ್ರಬೇಧದಲ್ಲಿ ಗುರುತಿಸಲ್ಪಡುವ ಈ ಹಕ್ಕಿ, ಉದ್ದನೆಯ ಬೂದು ಕಾಲುಗಳನ್ನು, ದಪ್ಪನೆಯ ಕಪ್ಪು ಕೊಕ್ಕನ್ನು ಹೊಂದಿರುತ್ತವೆ. ಇದರ ನೀಳ ಕಾಯದಲ್ಲಿ ಮೂಡಿರುವ ಕಪ್ಪು-ಬಿಳಿ ಪುಕ್ಕಗಳು ಇತರ ಗೊರವಗಳಿಂತ ವಿಭಿನ್ನವಾಗಿ ಗುರುತಿಸಲು ಸಹಾಯಕವಾಗಿದೆ. ಆದರೂ ಇವು ಸಹಸ್ರಾರು ಸಂಖ್ಯೆಯಲ್ಲಿ ವಲಸೆ ಬರುವ ಇತರೇ ಗೊರವಗಳ ಮಧ್ಯೆ ಸೇರಿಕೊಂಡರೆ, ಸೂಕ್ಷ್ಮವಾಗಿ ಗಮನಿಸದೆ ವಿನಹ ಗುರುತಿಸುವುದು ಅಸಾಧ್ಯದ ಮಾತೇ ಸರಿ. ಇದರ ದಪ್ಪನೆಯ ಗಟ್ಟಿಯಾದ ಕೊಕ್ಕು ಇಡೀ ಏಡಿಯನ್ನು ಸುಲಭದಲ್ಲಿ ಹೆಕ್ಕಿ ತುಂಡುಮಾಡಿ ತಿನ್ನಲು ಸಹಾಯಮಾಡುತ್ತದೆ. ಈ ಹಕ್ಕಿಯಲ್ಲಿ ಹೆಣ್ಣು-ಗಂಡು ಎರಡೂ ಒಂದೇ ತರಹ ಕಾಣಿಸುತ್ತವೆ.ಮಧ್ಯಪ್ರಾಚ್ಯದ ಮೂಲ

ಇವು ಮಧ್ಯಪ್ರಾಚ್ಯ ದೇಶಗಳಲ್ಲಿ ಏಪ್ರಿಲ್-ಜುಲೈ ಸಮಯದ ನಡುವೆ ಸಂತಾನೋತ್ಪತ್ತಿ ಮುಗಿಸಿ, ಉಳಿದ ಸಮಯವನ್ನು ಹೆಚ್ಚಾಗಿ ಹಿಂದೂ ಮಹಾಸಾಗರದ ಕರಾವಳಿ ಪ್ರದೇಶದಲ್ಲಿ ಕಳೆಯುತ್ತವೆ. ನೆರೆಯ ರಾಜ್ಯಗಳಲ್ಲಿ ಅಪರೂಪಕ್ಕೊಮ್ಮೆ ಕಾಣಸಿಕ್ಕಿದ್ದರೂ, ಕರ್ನಾಟಕದಲ್ಲಿ ಇದಕ್ಕೂ ಮೊದಲು ಈ ಹಕ್ಕಿ ಎಲ್ಲಿಯೂ ಕಾಣಿಸಿದ ದಾಖಲೆಗಳಿಲ್ಲ. ಹಿಂದೆಂದೂ ನೋಡಿರದ ಈ ಹಕ್ಕಿ ಹೇಗಿರುತ್ತದೆ? ಯಾಕೆ ನಮ್ಮಲ್ಲಿ ತುಂಬ ಏಡಿಗಳಿದ್ದರೂ ಬರುವುದಿಲ್ಲ? ಅಕಸ್ಮಾತ್ ಬಂದಿರಬಹುದೇ ಎಂದು ಅದೆಷ್ಟೊ ಬಾರಿ ನಾನು ಉಳಿದ ಗೊರವಗಳ ಮಧ್ಯೆ ಹುಡುಕಿದ್ದೆ. ಈ ಸಲ ಅಪರೂಪವೋ, ಅಚ್ಚರಿಯೋ ಅಥವಾ ನಮ್ಮ ಅದೃಷ್ಟವೋ ಎಂಬಂತೆ ಪಕ್ಷಿವೀಕ್ಷಕರಿಗೆ ಮಂಗಳೂರಿನ ಮುಲ್ಕಿಯ ಸಮೀಪದ ಚಿತ್ರಾಪು ಎಂಬ ಸುಂದರ ಪರಿಸರದಲ್ಲಿ ಎಕಾಂಗಿಯಾಗಿ ಈ ಹಕ್ಕಿ ಕಾಣಸಿಕ್ಕಿದೆ. ನಾವು ಏಡಿಗೊರವನನ್ನು ನೋಡಬೇಕೆಂಬ ಹಂಬಲದಿಂದ ಅಲ್ಲಿ ಸುಮಾರು ಮೂರು ತಾಸು ಕಷ್ಟಪಟ್ಟು ಹುಡುಕಿ, ಗುರುತಿಸಿ ಅಮೂಲ್ಯವಾದ ಚಿತ್ರಗಳನ್ನು ದಾಖಲಿಸಿಕೊಂಡೆವು.ನಾವೆಲ್ಲ ಕುರು-ಕುರು ಎಣ್ಣೆ ತಿಂಡಿಗಳನ್ನು ಎಷ್ಟು ಸಲೀಸಾಗಿ ತಿನ್ನುತ್ತೇವೆಯೋ ಹಾಗೆ ಈ ಹಕ್ಕಿಗಳು ಏಡಿಗಳನ್ನು ಮರಳಿನಿಂದ ಹೆಕ್ಕಿ, ಕುಕ್ಕಿ-ಕುಕ್ಕಿ ತಿನ್ನುತ್ತವೆ. ಅವಕ್ಕೆ ಏಡಿಗಾಗಿ ತುಂಬ ಹುಡುಕುವ ಪ್ರಮೇಯ ಇಲ್ಲಿರದು. ನಿಮಿಷಕ್ಕೆ ಐದೋ, ಆರೋ ಹೀಗೆ ಸುಮಾರು ಏಡಿಗಳನ್ನು ನಮ್ಮೆದುರೇ ಅದು ನುಂಗಿತ್ತು. ಅಪರೂಪಕ್ಕೆ ನಮ್ಮೂರಿಗೆ ಬಂದಿರುವ ಈ ಅತಿಥಿಗೆ, ಚಳಿಗಾಲವನ್ನು ಖುಷಿಯಾಗಿ ಇಲ್ಲೆ ಕಳೆಯಲಿ ಎಂದು ನಾವೆಲ್ಲರು ಶುಭ ಹಾರೈಸೋಣವೇ?

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.

Photos

ರೆಕ್ಕೆ ಇದ್ದರೆ ಸಾಕೇ...

Videos