ಮನೆಗೆ ತರಕಾರಿ ನೀವೆ ಬೆಳೆದುಕೊಳ್ಳಿ!!

June 15, 2019 ⊄   By: ರಾಧಾಕೃಷ್ಣ ಭಡ್ತಿ

ಕೃಷಿ ಇಲ್ಲದೇ ಮನುಷ್ಯ ಬದುಕಲು ಸಾಧ್ಯವೇ ಇಲ್ಲ. ಏಕೆಂದರೆ ನಮ್ಮ ಆಹಾರದ ಮೂಲವೇ ಕೃಷಿ. ಪ್ರತಿಯೊಬ್ಬರೂ ಕೃಷಿಕರೇ ಆಗಬೇಕು. ಹೀಗೆ ಹೇಳಿದಾಗ ಮೂಲಭೂತವಾಗಿ ಏಳುವ ಪ್ರಶ್ನೆ ‘ಕೃಷಿಗೆ ಜಾಗ ಬೇಕಲ್ಲ?, ನಾವಿರೋದು ನಗರದಲ್ಲಿ, ಇಲ್ಲಿ ಪುಟ್ಟ ನಿವೇಶದಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ನಮಗೆ ಕೃಷಿಯ ಅವಕಾಶವೇ ಇಲ್ಲವಲ್ಲ?’ ಎಂಬುದು. ಹೌದು ಕೃಷಿಗೆ ಜಾಗ ಬೇಕೇ ಬೇಕು. ಆದರೆ, ಅಂಥ ಜಾಗ ವಿಸ್ತಾರವಾಗಿಯೇ ಇರಬೇಕೆಂದೂ ಇಲ್ಲ. ಬಹುತೇಕರ ಮನಸ್ಸಿನಲ್ಲಿ ಜಮೀನು ಇದ್ದರೆ ಮಾತ್ರ ಕೃಷಿಕರಾಗಲು ಸಾಧ್ಯ ಎಂಬ ಭ್ರಮೆ ಇರುತ್ತದೆ. ಇದರ ಹೊರತಾಗಿ, ನಿಮ್ಮಲ್ಲಿ ಒಂದಷ್ಟು ಕ್ರಿಯಾಶೀಲತೆ, ಬದ್ಧತೆ ಇದ್ದರೆ ಇರುವಷ್ಟೇ ಜಾಗದಲ್ಲಿ ಪುಟ್ಟ ಕೈತೋಟದ ಕೃಷಿಯನ್ನೂ ಮಾಡಬಹುದು. ಇದಕ್ಕೊಂದು ಸ್ಪಷ್ಟ ನಿದರ್ಶನ ನಗರಗಳಲ್ಲಿನ ತಾರಸಿ ತೋಟ. ನಗರೀಕರಣದ ಯುಗದಲ್ಲಿ ಕೃಷಿ ಭೂಮಿಗಳು ಮಾಯವಾಗುತ್ತಿರುವುದರ ಜತೆಗೆ ಲಂಬ ಕೃಷಿ, ಕುಂಡ ಕೃಷಿಗಳು ಜನಪ್ರಿಯಗೊಳ್ಳುತ್ತಿವೆ.

ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿಯಂಥ ನಗರಗಳಲ್ಲಿ ಹಸಿರು ಸಂಪತ್ತನ್ನು ಹುಡುಕಾಡಬೇಕಾದ ಸ್ಥಿತಿಯಿದೆ. ಜತೆಗೆ ವಿಪರೀತ ತಾಪಮಾನ, ವಾಯುಮಾಲಿನ್ಯ, ಪರಿಸರ ಸಂಬಂಧಿ ಸಮಸ್ಯೆಗಳು ಉಲ್ಭಣಿಸುತ್ತಿದೆ. ಈ ಸಮಸ್ಯೆಗೆ ಪರಿಹಾರಗಳಲ್ಲೊಂದು ತಾರಸಿ ತೋಟ. ಬೆಂಗಳೂರಿನಂಥ ನಗರದಲ್ಲಿ ಇಂದು ಸಾವಿರಾರು ಮಂದಿ ತಾರಸಿ ತೋಟದ ಮೊರೆಹೋಗಿದ್ದಾರೆ.

ಬೆಂಗಳೂರಿನಲ್ಲಿ ಸ್ವಂತ ಮನೆಯ ಕನಸು ಎಲ್ಲರದ್ದೂ ಆಗಿರುತ್ತದೆ. ಹಾಗೆಯೇ ಸ್ವಂಥ ಕೈತೋಟದ ಕನಸನ್ನೂ ಕಾಣಬೇಕಿದೆ. ಮನೆಯ ಮುಂದೆ ಕೈತೋಟ ನಿರ್ಮಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿದ್ದಲ್ಲಿ ಮನೆಯ ಮಾಳಿಗೆ (ತಾರಸಿ) ಮೇಲೆ ಹೇಗೂ ಜಾಗ ಇದ್ದೇ ಇರುತ್ತದೆ. ಇದರಿಂದ ಮನೆಯೂ ತಂಪಾಗಿರುತ್ತದೆ, ಮನೆಯ ಸಾವಯವ ತ್ಯಾಜ್ಯದ ನಿರ್ವಹಣೆಯೂ ಆಗುತ್ತದೆ. ಜತೆಗೆ ಅಂದದ ತೋಟ ನಿರ್ಮಿಸಿಕೊಂಡು ಮನೆಗೆ ಬೇಕಾದ ಸಾವಯವ ಹಣ್ಣು- ತರಕಾರಿಗಳನ್ನೂ ಬೆಳೆದುಕೊಳ್ಳಬಹುದು. ದೈನಂದಿನ ಅಡುಗೆಗೆ ಬೇಕಾದ ವಿವಿಧ ರೀತಿ ತರಕಾರಿ, ಆಯ್ದ ಹಣ್ಣಿನ ಬೆಳೆಗಳು, ಸೊಪ್ಪುಗಳಿಂದ ಹಿಡಿದು ಅನಾರೋಗ್ಯದ ಸಂದರ್ಭದಲ್ಲಿ ಮನೆಮದ್ದಿಗೆ ಬಳಸುವ ಗಿಡಮೂಲಿಕೆಗಳನ್ನು ಕೈ ತೋಟದಲ್ಲಿ ಬೆಳೆದುಕೊಳ್ಳಬಹುದು.

ವಿಶೇಷವೆಂದರೆ, ತೋಟಗಾರಿಕೆ ಇಲಾಖೆ ಇಂಥ ತಾರಸಿ ತೋಟಗಳಿಗೆ ಬೆಂಬಲ, ನೆರವನ್ನೂ ನೀಡುತ್ತದೆ. ಈಗಾಗಲೇ ತೋಟಗಾರಿಕಾ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಸಂಘ ಸಂಸ್ಥೆಗಳು ಶಾಲೆಗಳು, ಅಂಗನವಾಡಿಗಳಿಗೆ ತೆರಳಿ ತಾರಸಿ ತೋಟದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ತಾರಸಿ ತೋಟಕ್ಕೆ ಕೈಗೆಟಕುವ ಬೆಲೆಯ ಕಿಟ್ಗಳನ್ನೂ ವಿತರಿಸುತ್ತಾರೆ. ಬಯೋಮಿಕ್ಸ್, ತರಕಾರಿ ಸಸಿಗಳು, ತರಕಾರಿ ಬೀಜಗಳನ್ನೂ ನೀಡಲಾಗುತ್ತಿದೆ.
ಪುಟ್ಟ ಖಾಸಗಿ ತಾರಸಿ ತೋಟ ಮತ್ತು ಕೈತೋಟ ನಿರ್ಮಾಣಕ್ಕೆ ಕನಿಷ್ಠ ೫೦ ಸಾವಿರ ವೆಚ್ಚ ತಗುಲುತ್ತದೆ. ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವೂ ಸಿಗುತ್ತದೆ.ತಾರಸಿ ತೋಟ, ಒಂದಷ್ಟು ಟಿಪ್ಸ್
-ಮನೆಯ ತಾರಸಿಯನ್ನು ಅನಗತ್ಯ ವಸ್ತುಗಳು, ಹಳೆಯ ವಸ್ತುಗಳ ಗೋಡಾನ್ ಆಗದಂತೆ ನೋಡಿಕೊಳ್ಳಿ.
-ಒಂದಷ್ಟು ಕುಂಡಗಳಿಗೆ ಅಲ್ಲಿ ಜಾಗ ಮಾಡಿ.
- ಮನೆಯ ಹಳೆಯ ಪಾತ್ರೆ, ತುಂಡಾದ ಪೈಪು, ಪ್ಲಾಸ್ಟಿಕ್ ಬಾಲ್ಡಿ(ಬಕೆಟ್), ಹಳೆಯ/ಹರಿದ ಜೀನ್ಸ್ ಪ್ಯಾಂಟ್, ಹಳೆಯ ಟಯರು ಇತ್ಯಾದಿ ಎಲ್ಲದರಲ್ಲೂ ಮಣ್ಣು ತುಂಬಿ ಗುಡಗಳನ್ನು ಬೆಳೆಸಬಹುದು.
- ತಾರಸಿಯ ಪ್ಯಾರಾಪಿಟ್ ವಾಲ್ಗೆ ಸಮಾನಾಂತರವಾಗಿ ಪುಟ್ಟ ಕಟ್ಟೆ ಕಟ್ಟಿಕೊಂಡು ಅದರಲ್ಲಿ ಮಣ್ಣು ತುಂಬಿಸಿ ಗಿಡಗಳನ್ನು ಬೆಳೆಸಬಹುದು.
-ಮನೆಯಲ್ಲಿ ಪಾತ್ರೆ-ಬಟ್ಟೆ ತೊಳೆದ ನೀರು ಒಳಚರಂಡಿಗೆ ಹೋಗಿ ಸೇರದಂತೆ ತಡೆದು ಸಂಗ್ರಹಿಸಿಕೊಳ್ಳಿ, ಇದೇ ಗಿಡಗಳಿಗೆ ಸಾಕಾದೀತು.
-ತರಕಾರಿ ಸಿಪ್ಪೆ, ಹಣ್ಣಿನ ಉಳಿಕೆ ಭಾಗ, ಮಿಕ್ಕಿದ ಅನ್ನ- ಸಾಂಬಾರ್ ಇತ್ಯಾದಿ ಸಾವಯವ ತ್ಯಾಜ್ಯವನ್ನು ಹೊರ ಚೆಲ್ಲದೇ ಸಂಗ್ರಹಿಸಿಕೊಂಡು ಗೊಬ್ಬರವಾಗಿ ಪರಿವರ್ತಿಸಬಹುದು.
-ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಬಯೋಮಿಕ್ಸ್ ಅನ್ನೂ ಬಳಸಬಹುದು.
-ಸಾಮಿಲ್ಗಳಲ್ಲಿ ಸಿಗುವ ಮರದ ಹೊಟ್ಟು, ತೆಂಗಿನ ನಾರಿನ ಪುಡಿಯನ್ನು ಮಣ್ಣಿನ ಜತೆ ಬೆರೆಸಿ ಬಳಸುವುದರಿಂದ ಗಿಡಗಳೂ ಹುಲುಸಾಗುತ್ತದೆ. ತಾರಸಿಗೆ ಭಾರವೂ ಕಡಿಮೆಯಾಗುತ್ತದೆ.
-ದಿನದಲ್ಲಿ ಬೆಳಗ್ಗೆ ಮತ್ತು ಸಂಜೆ ಅರ್ಧ ಗಂಟೆಗಳ ಕಾಲ ಮನೆ ಮಂದಿಯೆಲ್ಲಾ ತಾರಸಿಯಲ್ಲಿ ಕಳೆಯುವುದನ್ನು ರೂಢಿಸಿಕೊಳ್ಳಿ

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.

Photos

ರೆಕ್ಕೆ ಇದ್ದರೆ ಸಾಕೇ...

Videos