ನಾವು ನಮ್ಮ ದೇಹದಲ್ಲಿಯೇ ಅತಿಥಿ!

April 07, 2018 ⊄   By: -ಕೆ. ಸಿ. ರಘು

ಆರೋಗ್ಯ ಮಾನವನ ಹಕ್ಕು, ಯಾರೊಬ್ಬರೂ ಸಹ ಅವಶ್ಯಕ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗದ ಕಾರಣ ಖಾಯಿಲೆಗೆ ಒಳಗಾಗಬಾರದು ಅಥವಾ ಸಾಯಬಾರದು.' ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 7 ನ್ನು 'ವಿಶ್ವ ಆರೋಗ್ಯ ದಿನ'ವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಬಾರಿಗೆ 'ಸಾರ್ವತ್ರಿಕ ಆರೋಗ್ಯ ರಕ್ಷಣೆ-ಎಲ್ಲರಿಗೂ, ಎಲ್ಲಾಕಡೆ'(Universal Health Coverage: Everyone, Everywhere ) ಎಂಬ ಧ್ಯೇಯವಾಕ್ಯದೊಂದಿಗೆ ಈ ದಿನ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ ಹಸಿರುವಾಸಿ ಸಂಚಿಕೆಯಲ್ಲಿ ಪ್ರಕಟಿಸಿರುವ -ಕೆ. ಸಿ. ರಘು ಅವರ ವಿಶೇಷ ಲೇಖನ

ವೈದ್ಯ ಲೋಕದ ಹೆಗ್ಗಳಿಕೆಯ ಬತ್ತಳಿಕೆಯಲ್ಲಿ ಲಸಿಕೆಗಳಿಗೆ ಮೊದಲ ಸ್ಥಾನವಿದ್ದರೆ, ಆ್ಯಂಟಿಬಯಾಟಿಕ್ಗಳಿಗೆ ಎರಡನೆ ಸ್ಥಾನ. ಆದರೆ ಇಂದು ರೋಗಣುಗಳು ಇದೇ ಆ್ಯಂಟಿಬಯಾಟಿಕ್ಗಳಿಗೆ ಒಗ್ಗಿ ಅವುಗಳ ವಿರುದ್ಧ ನಾವು ಪ್ರಯೋಗಿಸುವ ಈ ಆಯುಧಗಳನ್ನು ನುಚ್ಚುನೂರು ಮಾಡುತ್ತಿವೆ. ಬತ್ತಳಿಕೆಯಲ್ಲಿರುವ ಎಲ್ಲ ಮಟ್ಟದ ಆ್ಯಂಟಿಬಯಾಟಿಕ್ಗಳ ವಿರುದ್ಧವೂ ನಿರೋಧಕ ಶಕ್ತಿಯನ್ನು ಬಲ ಪಡಿಸಿಕೊಂಡು, ಔಷಧವನ್ನೇ ಜೀರ್ಣಿಸಿಕೊಂಡು ಬದುಕಲು ಕಲಿತಿವೆ. ಮುಂದೆ...?

ಸೋಂಕು ರೋಗದ ಕಾಲ ಮುಗಿಯಿತು, ಇನ್ನು ಏನಿದ್ದರೂ ಜೀವನ ಶೈಲಿಯ ಸಿಸ್ಟೆಮಿಕ್ ರೋಗಗಳನ್ನು ತಡೆಯುವುದು ಮತ್ತು ನಿಯಂತ್ರಿಸುವತ್ತ ಗಮನ ಕೊಡುವುದು ಎಂಬ ಪ್ರತಿಪಾದನೆಯಲ್ಲಿ ವೈದ್ಯ ಲೋಕ ನಿರತರಾಗಿದೆ. ಇದೇ ಸಂದರ್ಭದಲ್ಲಿ ಮತ್ತೆ ತಲೆ ಎತ್ತಿ ನಿಂತಿವೆ ಹಳೆಯ ರೋಗಗಳು!

ಸುಮಾರು ೧೦೦ ವರ್ಷಗಳ ಹಿಂದೆ ಅಲೆಕ್ಸಾಂಡರ್ ಪ್ಲೆಮಿಂಗ್ ಪೆನ್ಸಿಲಿನ್ ಎಂಬಾತ ಆ್ಯಂಟಿಬಯಾಟಿಕ್ ಔಷಧವನ್ನು ಕಂಡುಹಿಡಿದ. ಇದನ್ನು ಇನ್ನೂ ಹೆಚ್ಚು ಸೂಕ್ತವಾಗಿ ಹೇಳುವುದಾದರೆ ಆ್ಯಂಟಿಬಯಾಟಿಕ್ಗಳನ್ನು ಕಂಡುಕೊಂಡ ಆತ ಅವುಗಳನ್ನು ಸೋಂಕು ರೋಗಗಳ ವಿರುದ್ಧದ ವಿಜಯಕ್ಕೆ ಅತ್ಯುತ್ತಮ ಸಾಧನವೆಂದು ಘೋಷಿಸಿದವರಲ್ಲಿ ಪೆನ್ಸಿಲಿನ್ ಮೊದಲಿಗ. ಅನಂತರ ಕಳೆದ ೧೦೦ ವರ್ಷಗಳಲ್ಲಿ ಆ್ಯಂಟಿಬಯಾಟಿಕ್ಗಳಿಂದ ಕೋಟ್ಯಂತರ ಜನರನ್ನು ಬದುಕಿಸಲಾಗಿದೆ ಎನ್ನುತ್ತಾರೆ. ಇದು ಸತ್ಯವೂ ಇರಬಹುದು. ಯುದ್ಧದಲ್ಲಿ ಗಾಯಗೊಂಡವರಿಂದ ಹಿಡಿದು, ಶಸ್ತ್ರ ಚಿಕಿತ್ಸೆಯ ಗಾಯ ಸರಿಯಾಗಿ ವಾಸಿಯಾಗಲು, ಸೋಂಕು ರೋಗಗಳ ನಿವಾರಣೆಯಾಗಲು ಪರಿಣಾಮಕಾರಿಯಾಗಿ ಇದನ್ನು ಬಳಸಲಾಗಿದೆ. ವೈದ್ಯ ಲೋಕದ ಹೆಗ್ಗಳಿಕೆಯ ಬತ್ತಳಿಕೆಯಲ್ಲಿ ಲಸಿಕೆಗಳಿಗೆ ಮೊದಲ ಸ್ಥಾನವಿದ್ದರೆ, ಆ್ಯಂಟಿಬಯಾಟಿಕ್ಗಳಿಗೆ ಎರಡನೆ ಸ್ಥಾನ. ಆದರೆ ಇಂದು ರೋಗಣುಗಳು ಇದೇ ಆ್ಯಂಟಿಬಯಾಟಿಕ್ಗಳಿಗೆ ಒಗ್ಗಿ ಅವುಗಳ ವಿರುದ್ಧ ನಾವು ಪ್ರಯೋಗಿಸುವ ಈ ಆಯುಧಗಳನ್ನು ನುಚ್ಚುನೂರು ಮಾಡುತ್ತಿವೆ. ಬತ್ತಳಿಕೆಯಲ್ಲಿರುವ ಎಲ್ಲ ಮಟ್ಟದ ಆ್ಯಂಟಿಬಯಾಟಿಕ್ಗಳ ವಿರುದ್ಧವೂ ನಿರೋಧಕ ಶಕ್ತಿಯನ್ನು ಬಲ ಪಡಿಸಿಕೊಂಡು, ಔಷಧವನ್ನೇ ಜೀರ್ಣಿಸಿಕೊಂಡು ಬದುಕಲು ಕಲಿತಿವೆ. ಈ ರೀತಿ ಆ್ಯಂಟಿಬಯಾಟಿಕ್ಗಳ ಔಷಧ ಗುಣವನ್ನು ನಿರ್ವೀರ್ಯಗೊಳಿಸಿ ಬೆಳೆದಿರುವ ಸೂಕ್ಷ್ಮ ರೋಗಾಣುಗಳ ಪ್ರಕ್ರಿಯೆಯನ್ನು ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್ ಎನ್ನುತ್ತಾರೆ.

ಇಷ್ಟು ಪ್ರಬಲವಾಗಿ ನಮ್ಮ ಔಷಧಗಳ ವಿರುದ್ಧ ಈ ರೋಗಾಣುಗಳು ಹೊರಹೊಮ್ಮಲು ಕೆಲವು ಮುಖ್ಯ ಕಾರಣಗಳಿವೆ. ಮೊದಲನೆಯದು ನಾವುಗಳು ಸಾಮಾನ್ಯವಾಗಿ ಭಾವಿಸುವ ಹಾಗೆ ಸೂಕ್ಷ್ಮ ಜೀವಜಗತ್ತು (microbial world) ನಮ್ಮ ಶತ್ರುವಲ್ಲ. ಶೇ.೯೯ರಷ್ಟು ನಮ್ಮ ಮಿತ್ರರೇ. ನಮ್ಮ ಕೃಷಿಯಲ್ಲಿನ ಆಹಾರ ಉತ್ಪಾದನೆಗೆ, ಆಹಾರ ಸಂಸ್ಕರಣೆಗೆ, ರೋಗ ನಿರೋಧಕ ಶಕ್ತಿಗೆ ವಿಟಮಿನ್ಗಳ ಉತ್ಪಾದನೆಗೆ ಈ ರೀತಿ ಇಡೀ ಸಜೀವ ಪ್ರಕ್ರಿಯೆಯ ಎಲ್ಲ ಹಂತದಲ್ಲೂ ಸೂಕ್ಷ್ಮ ಜೀವಜಗತ್ತಿನ ಕೊಂಡಿ ಇದ್ದೇ ಇದೆ. ಆಕಾಶದಲ್ಲಿರುವ ಸಾರಜನಕವನ್ನು ಮಣ್ಣಿಗಿಳಿಸುವಲ್ಲಿ ಮಿಂಚು ಹೇಗೆ ಸಹಾಯಕವಾಗುತ್ತದೆಯೋ, ಹಾಗೆಯೇ ಮಣ್ಣಿನಲ್ಲಿಯೇ ಕುಳಿತು ಆಕಾಶದಲ್ಲಿನ ಸಾರಜನಕವನ್ನು ಗಿಡದ ಬೇರಿಗೆ ಒದಗಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ತನ್ನೊಳಗಡೆ ಅಡಗಿಸಿಕೊಂಡಿದೆ ಈ ಸೂಕ್ಷ್ಮ ಜೀವಿಗಳು. ಅ As a matter of fact the world is a microbial ministration ಅಷ್ಟೇ ಏನು ನಮ್ಮ ದೇಹವನ್ನೇ ಗಮನಿಸಿದರೆ ಇರುವ ಒಟ್ಟು ೧೦೦ ಟ್ರಿಲಿಯನ್ ಜೀವಕೋಶಗಳಲ್ಲಿ ೯೦ ಟ್ರಿಲಿಯನ್ ಜೀವಕೋಶಗಳು ನಮ್ಮವಲ್ಲ. ಅದು ಬ್ಯಾಕ್ಟೀರಿಯಗಳಿಗೆ ಸಂಬಂಧಿಸಿದ್ದು. ಮನುಷ್ಯನ ದೇಹದಲ್ಲೇ ಮನುಷ್ಯನ ಗುಣಾಣುಗಳು (genes) ಸುಮಾರು ೨೫ ಸಾವಿರವಾದರೆ, ಬ್ಯಾಕ್ಟೀರಿಯಗಳ ಗುಣಾಣುಗಳು ಕೋಟಿಗೂ ಮೀರಿದ್ದು. ಹಾಗಾಗಿ ಇಂದು ಜೀವಶಾಸ್ತ್ರದಲ್ಲಿ ‘ನಾವು ನಮ್ಮ ದೇಹದಲ್ಲಿಯೇ ಅತಿಥಿ’ ಎನ್ನುತ್ತದೆ ಜೀವ ಶಾಸ್ತ್ರ.

ಪುರಾತನ ವ್ಯವಸ್ಥೆ
ನಮ್ಮ ದೇಹ ಕೇವಲ ನಾವಲ್ಲ, ಅದೊಂದು ಕೋಟಿ ಜೀವಜಗತ್ತಿನ ಪ್ರಕೃತಿ ವ್ಯವಸ್ಥೆ. Human body is an eco-system and superorganism. ನಮ್ಮ ದೇಹದ ಗುಣಾಣುಗಳಿಗೂ, ಸೂಕ್ಷ್ಮಜೀವಿಗಳ ಗುಣಾಣುಗಳಿಗೂ ಒಟ್ಟಾಗಿ ಬದುಕುವ ಒಡಂಬಡಿಕೆ ಲಕ್ಷಾಂತರ ವರ್ಷ ಹಳೆಯದು. ನಮ್ಮ ಜೀವಕೋಶದೊಳಗಿನ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಮೈಟೋಕಾಂಡ್ರಿಯ ಕೂಡ ನಾವು ಈ ಸೂಕ್ಷ್ಮ ಜೀವ ಜಗತ್ತಿನಿಂದ ಬಳುವಳಿಯಾಗಿ ಪಡೆದಿದ್ದು ಎನ್ನುತ್ತಾರೆ ಜೀವ ವಿಜ್ಞಾನಿಗಳು. ನಾವು ಈ ಸೂಕ್ಷ್ಮ ಜೀವಜಗತ್ತಿನ ವಿರುದ್ಧ ಸಾರಾಸಗಟಾಗಿ ಶತ್ರುವೆಂದು ಪರಿಗಣಿಸಿ ನಮ್ಮ ಮೈಮೇಲೆ, ಭೂತಾಯಿಯ ಮೈಮೇಲೆ ನಾವು ಬಳಸುವ ಸೋಪು, ಶಾಂಪುವಿನಿಂದ ಹಿಡಿದು, ಹಲ್ಲುಜ್ಜುವ ಪೇಸ್ಟಿನಲ್ಲಿಯೂ ಆ್ಯಂಟಿಬಯಾಟಿಕ್ ಬಳಸಿಕೊಂಡು ಆರೋಗ್ಯವಾಗಿರಬಹುದು ಎಂದು ಅಂದುಕೊಂಡಿದ್ದೇವೆ. ಇಂದು ಆಯುರ್ವೇದ ಟೂತ್ಪೇಸ್ಟ್ ಮತ್ತು ಸೌಂದರ್ಯವರ್ಧಕ ಸಾಧನಗಳಲ್ಲಿಯೂ ಟ್ರೈಕ್ಲೋಸಾನ್ ಎಂಬ ಆ್ಯಂಟಿಬಯಾಟಿಕ್ ಬಳಕೆಯಾಗುತ್ತದೆ. ಇನ್ನೊಂದೆಡೆ ನಮ್ಮ ದೇಹದಲ್ಲಿಯೇ ಸೂಕ್ಷ್ಮ ಜೀವಜಗತ್ತು ಸರಿಯಾಗಿದ್ದಲ್ಲಿ ಮಾತ್ರ ನಮಗೆ ಆರೋಗ್ಯದ ವಿಮೆ ಇದ್ದಂತೆ ಎನ್ನುತ್ತಿದ್ದಾರೆ. ಮಗು ಹುಟ್ಟುವಾಗ ಪ್ರಾಕೃತಿಕವಾಗಿ ಹುಟ್ಟಿದರೆ ತಾಯಿಯಿಂದ ಬಳುವಳಿಯಾಗಿ ಪಡೆಯುವ ಸೂಕ್ಷ್ಮ ಜೀವಜಗತ್ತು ಮಗುವಿನ ಕರುಳನ್ನು ಸೇರಿ ಜೀವನ ಪೂರ್ತಿ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಸಿಸೇರಿಯನ್ ಮೂಲಕ ಹುಟ್ಟುವ ಮಕ್ಕಳಿಗೆ ಈ ಕಾರಣಗಳಿಂದ ಈ ರೋಗ ನಿರೋಧಕ ಶಕ್ತಿಯನ್ನು ಪಡೆಯುವ ಅವಕಾಶ ತಪ್ಪಿದಂತಾಗಿ ಅನೇಕ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಈಗ ಅಮೆರಿಕದ ಕೆಲವು ಆಸ್ಪತ್ರೆಗಳಲ್ಲಿ ತಾಯಿಯ ಜನ್ಮಸ್ಥಳದಿಂದ ಈ ಸೂಕ್ಷ್ಮ ಜೀವಿಗಳನ್ನು ತೆಗೆದು ಈ ಸಿಸೇರಿಯನ್ ಮೂಲಕ ಹುಟ್ಟಿದ ಮಗುವಿನ ಮೈಮೇಲೆ ಲೇಪಿಸಲು ಆರಂಭಿಸಿದ್ದಾರೆ. ಅಲ್ಲದೆ ಕ್ಲಾಟೀಡಿಯಮ್ ಡೆಫಿಸಲಿ ಎಂಬ ಸೋಂಕು ರೋಗ ಹೊಟ್ಟೆಗೆ ತಗುಲಿದಾಗ, ಆ್ಯಂಟಿಬಯಾಟಿಕ್ಗಳು ಕೆಲಸ ಮಾಡದೆ ಈಗ ಅತೀ ಹೆಚ್ಚು ಪರಿಣಾಮಕಾರಿ ಔಷಧ ಎಂದು ಗುರುತಿಸಲಾಗಿರುವುದು ಆರೋಗ್ಯವಂತ ಮನುಷ್ಯನ ಮಲದಲ್ಲಿರುವ ಸೂಕ್ಷ್ಮ ಜೀವಿಗಳನ್ನು ಈ ಖಾಯಿಲೆಗೆ ಬಿದ್ದವರ ಹೊಟ್ಟೆಗೆ ವರ್ಗಾಯಿಸುಲಾಗುತ್ತಿದೆ. ಇದನ್ನು ಸ್ಟೂಲ್ ಟ್ರಾನ್ಸ್ಪ್ಲಾನ್ಟ್ ಮತ್ತು ಫೀಕಲ್ ಥೆರಪಿ ಎನ್ನುತ್ತಾರೆ.

ಫೈಟೋಬಯೋಮ್ ತಂತ್ರಜ್ಞಾನ
ಕೃಷಿ ಕ್ಷೇತ್ರದಲ್ಲಿ ಕುಲಾಂತರಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಕಂಪನಿಗಳೇ ಈಗ ಫೈಟೋಬಯೋಮ್ ಎನ್ನುವ ತಂತ್ರಜ್ಞಾನದತ್ತ ಮುಖ ಮಾಡಿವೆ. ಸೈನ್ಟಿಫಿಕ್ ಅಮೆರಿಕನ್ ವರದಿಯ ಪ್ರಕಾರ ಒಂದು ಗಿಡ ಆರೋಗ್ಯವಾಗಿ ಫಲಭರಿತವಾಗಿರಲು ಅದರ ಮಣ್ಣು ಮತ್ತು ಆಕಾಶದಲ್ಲಿನ ಸೂಕ್ಷ್ಮ ಜೀವಜಗತ್ತಿನೊಡನೆ ಸಂಬಂಧ, ಕೀಟ ಜೀವಜಗತ್ತಿನ ಸಂಬಂಧ, ಪ್ರಾಣಿ ಜೀವಜಗತ್ತಿನ ಸಂಬಂಧ ಎಲ್ಲವನ್ನೂ ಪರಿಗಣಿಸಿ ವ್ಯವಹರಿಸುವುದೇ ಫೈಟೋಬಯೋಮ್ ತಂತ್ರಜ್ಞಾನ. ಕೇವಲ ಕೀಟಕ್ಕೆ ಕೀಟನಾಶಕ, ಶಿಲೀಂದ್ರಕ್ಕೆ ಶಿಲೀಂದ್ರನಾಶಕ, ಕಳೆಗೆ ಕಳೆನಾಶಕ ಕೊಡುವುದು ತಂತ್ರಜ್ಞಾನದ ಕೊರತೆ ಮತ್ತು ಅಪರಿಪೂರ್ಣತೆಯನ್ನು ತೋರಿಸುತ್ತದೆ. ಈಗ ರೈತರ ಪಾಡು ಪೆಸ್ಟಿಸೈಡ್, ಫಂಗಿಸೈಡ್, ವೀಡಿಸೈಡ್, ಹರ್ಬಿಸೈಡ್ ಬಳಸಿ ಬಳಸಿ ಕೊನೆಗೆ ಸ್ಯೂಸೈಡ್ ಸ್ಥಿತಿಗೆ ಹೋಗುವ ದುರುಂತ ನಮ್ಮ ಕಣ್ಣೆದುರಿಗಿದೆ. ಮಾರ್ಕ್ ಟ್ವೈನ್ ಹೇಳಿದಂತೆ ಕೈಯಲ್ಲಿ ಸುತ್ತಿಗೆ ಇರುವವನಿಗೆ ಜಗತ್ತು ಮೊಳೆಯಂತೆ ಕಾಣುತ್ತದೆ ಎನ್ನುವಂತೆ ಈ ಔಷಧದ ಹಿಂದೆ ಬಿದ್ದಿರುವವರಿಗೆ ಜಗತ್ತು ಒಂದು ಸಮಸ್ಯೆಯಾಗಿಯೇ ಕಾಣುತ್ತದೆ.ಮೀನು, ಕೋಳಿ ಕೊಬ್ಬಿಸೋ ಅಪಾಯ
ಈ ರೀತಿ ತಂತ್ರಜ್ಞಾನ ಬಳಸುತ್ತ ನಾವು ಇಂದು ಔಷಧ ಕಂಪನಿಗಳು ತಯಾರಿಸುವ ಶೇ. ೮೦ರಷ್ಟು ಆ್ಯಂಟಿಬಯಾಟಿಕ್ಗಳನ್ನು ಕೋಳಿ, ಹಂದಿ, ಮೀನು, ಜೇನು, ಹಣ್ಣು ಮತ್ತು ತರಕಾರಿಗಳಿಗೂ ಕಾಯಿಲೆಯನ್ನು ತಡೆಗಟ್ಟಲು ಮತ್ತು ತೂಕ ಹೆಚ್ಚಿಸಲು ಬಳಸುತ್ತಿದ್ದೇವೆ. ಆ್ಯಂಟಿಬಯಾಟಿಕ್ಗಳ ಉಪಯೋಗವಾಗಬೇಕಾಗಿದ್ದು ಕೆಲವು ಸೋಂಕು ರೋಗಗಳ ಚಿಕಿತ್ಸೆಗಾಗಿಯೇ ಹೊರತು ಕಾಯಿಲೆ ಬರಬಾರದೆಂದು ತೆಗೆದುಕೊಳ್ಳುವಂತಹ ಔಷಧವಲ್ಲ. ಆದರೆ ಇಂದು ಮಾಂಸ ಮತ್ತು ಮೊಟ್ಟೆ ಉದ್ಯಮದಲ್ಲಿ ಇವುಗಳನ್ನು ಕರೆಯುವುದೇ ಗ್ರೋತ್ ಪ್ರಮೋಟರ್ ಎಂದು. ಅಂದರೆ ತೂಕ ಹೆಚ್ಚಿಸುವುದಕ್ಕಾಗಿ ಎನ್ನುವುದೇ ಅರ್ಥವಾಗಿದೆ. ಇತ್ತೀಚೆಗೆ ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಡೈನಮಿಕ್ಸ್, ಎಕಾನಮಿಕ್ಸ್ ಅಂಡ್ ಪಾಲಿಸಿ ಎಂಬ ಸಂಸ್ಥೆ ಪಂಜಾಬ್ನ ೧೮ ಕೋಳಿ ಫಾರಂಗಳಲ್ಲಿ ೫೩೦ ಒಂದು ಅಧ್ಯಯನ ನಡೆಸಿದೆ. ಅದರ ಪ್ರಕಾರ ಅಲ್ಲಿ ಎಲ್ಲ ವರ್ಗದ ಆ್ಯಂಟಿಬಯಾಟಿಕ್ಗಳನ್ನೂ ತೂಕ ಹೆಚ್ಚಿಸಲು ಬಳಸಲಾಗುತ್ತಿದೆ. ಒಂದು ಟನ್ ಮೇವಿಗೆ ಒಂದು ಕೇಜಿ ಆ್ಯಂಟಿಬಯಾಟಿಕ್ಗಳನ್ನು ಬೆರೆಸಿ ಪ್ರಾಣಿಗಳಿಗೆ ತಿನ್ನಿಸುತ್ತಿದ್ದಾರೆ. ಹರಿತವಾದ ಆ್ಯಂಟಿಬಯಾಟಿಕ್ಗಳ ವಿರುದ್ಧವೂ ಅಲ್ಲಿನ ರೋಗಾಣುಗಳು ಒಗ್ಗಿಕೊಂಡಿರುವ ಬಗ್ಗೆ ವರದಿಯಾಗಿದೆ. ಅಂದರೆ ಆ ಕೋಳಿಗಳಲ್ಲಿ ಈ ಆ್ಯಂಟಿಬಯಾಟಿಕ್ಗಳನ್ನು ಕತ್ತರಿಸಿ ತುಂಡರಿಸುವಂತಹ ಕಿಣ್ವಗಳನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿವೆ. ಅಂದರೆ ಆ ಫಾರಂನ ಕೋಳಿ ಅಥವಾ ಮೊಟ್ಟೆ ಅಥವಾ ಅವುಗಳ ಹಿಕ್ಕೆ ಉಪಯೋಗಿಸಿ ಬೆಳೆದ ಹಣ್ಣು ತರಕಾರಿಗಳಲ್ಲಿ ಈ ಸೂಪರ್ಬಗ್ಸ್ ಇದ್ದು ಅವುಗಳ ಸೇವನೆಯಿಂದ ನಮ್ಮ ದೇಹದೊಳಗೂ ಆ್ಯಂಟಿಬಯಾಟಿಕ್ ಕೆಲಸ ಮಾಡದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಇದಾಗಲೇ ಸುಮಾರು ಶೇ.೧೦ರಷ್ಟು ಕ್ಷಯರೋಗಿಗಳಲ್ಲಿ ನಾವು ಕೊಡುವ ಆ್ಯಂಟಿಬಯಾಟಿಕ್ ಕೆಲಸ ಮಾಡದೆ ಲಕ್ಷಾಂತರ ಜನ ಸಾವಿಗೀಡಾಗುತ್ತಿದ್ದಾರೆ.
ಭಾರತದ ಕೋರಮಂಡಲ್ ಕರಾವಳಿ ಪ್ರದೇಶದಲ್ಲಿ ಅತಿ ಹೆಚ್ಚು ಶೀಗಡಿ ಮೀನು ಬೆಳೆಯುತ್ತಿದ್ದಾರೆ. ಅಲ್ಲಿ ಸಹ ರೋಗ ಬಾರದಂತೆ ಮತ್ತು ತೂಕ ಹೆಚ್ಚುವಂತೆ ಕೊಲಿಸ್ಟಿನ್ನಂತಹ ಆ್ಯಂಟಿಬಯಾಟಿಕ್ಗಳ ಉಪಯೋಗ ಮಾಡಲಾಗುತ್ತಿದೆ. ಇದು ಕೇವಲ ಮಾಂಸ, ಮೊಟ್ಟೆ ತಯಾರಿಕೆಯಲ್ಲಿ ಮಾತ್ರ ಕಂಡುಬರುವಂಥದ್ದಲ್ಲ. ದಾಳಿಂಬೆ ಮತ್ತು ಜೇನು ಸಾಕಣೆಯಲ್ಲೂ ಬಳಕೆಯಾಗುತ್ತಿವೆ. ಇತ್ತೀಚಿನ ಅಧ್ಯಯನದ ಪ್ರಕಾರ ಆ್ಯಂಟಿಬಯಾಟಿಕ್ ವಿರುದ್ಧ ಈ ಸೂಕ್ಷ್ಮಜೀವಿಗಳು ಅಳವಡಿಸಿಕೊಂಡಿರುವ ಈ ಗುಣಾಣುಗಳು ((antibiotic resistant genes))ಅಂಟಾರ್ಟಿಕದಲ್ಲಿಯೂ ಕಂಡುಬಂದಿವೆ. ಇದಕ್ಕೆ ಕಾರಣ ಸೂಕ್ಷ್ಮ ಜೀವಜಗತ್ತು ತನ್ನ ಬದುಕಿಗೆ ಕುತ್ತು ಕಂಡಲ್ಲಿ ಅದರ ವಿರುದ್ಧ ಪರಿಹಾರ ಕಂಡುಕೊಂಡು ಆ ಪರಿಹಾರವನ್ನು ತನ್ನ ಮಕ್ಕಳಿಗೆ ಬಳುವಳಿ ಕೊಡುವುದು ಮಾತ್ರವಲ್ಲದೆ, ತನ್ನ ಸುತ್ತಲಿನ ಜೀವಜಗತ್ತಿಗೂ ಈ ಜ್ಞಾನವಿಜ್ಞಾನವನ್ನು ಹರಿದು ಹಂಚುತ್ತದೆ. This is known as horizontal transmission of information.

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos