ಬೀರಮ್ಮನೆಂಬ ಬದುಕ ಬಳ್ಳಿ!

October 04, 2018 ⊄   By: -ಪ್ರಶಾಂತ ನಾಯಕ ಕರ್ಕಿ

ಇಂಟ್ರೋ: ಹಳೆ ಸಾಮಾನು ಮಾರೋರು ಮನೆಬಾಗಿಲಿಗೆ ಬಂದಾಗಲೆಲ್ಲ ನಿನ್ನ ತೋರಿಸಿ ತಮಾಷೆ ಮಾಡೋ ಬುದ್ಧಿ ಇನ್ನೂ ಬಿಡದ ನನಗೆ ನಿನ್ನ ಮೈ ಮುದುರುಗಳಲ್ಲಿ ಬದುಕಿನ ಸಾಕ್ಷಾತ್ಕಾರ ಕಾಣುತ್ತದೆ.

ಒಂಬತ್ತೋ, ಹತ್ತೋ ವರ್ಷಕ್ಕೆ ಆಡೋ ಹುಡುಗಿಯನ್ನ ತಂದು ಮದುವೆ ಮಾಡಿದರಂತೆ.
‘ಅವರು ಸತ್ರು’ ಅಂತ ನೀನಿಗಲೂ ನಿನ್ನ ಅಪ್ಪನ ಮನೆಯವರನ್ನು ಬಯ್ಯೋವಾಗ ಥೇಟು ಒಲ್ಲದ ಮದುವೆ ಆದ ಇಪ್ಪತ್ತರ ಹುಡುಗಿ ಅನಿಸುತ್ತಿ.
ಅಸಂಖ್ಯ ಚರ್ಮದ ಮುದುರುಗಳಿದ್ದರೂ ನಿನ್ನ ಹರಿದ ಕಿವಿಹಾಲೆಯ ಮುಟ್ಟಿ ನಿನ್ನ ವಯಸ್ಸನ್ನು confirm ಮಾಡಿಕೊಳ್ಳುತ್ತೇನೆ.
ಅಲ್ಲೇ ಕೊರಳಿನ ಕಾಸಿದಾರ ಕಾಣಿಸುತ್ತೆ. ಮೂರು ತಲೆಮಾರಿನ ಬಳ್ಳಿ ಕರುಳಾಗಿ ಕುತ್ತಿಗೆಗೆ ಬಿದ್ದಿದೆ ಅನಿಸುತ್ತೆ. ಸುಮ್ಮನೆ ಸ್ಪರ್ಶಿಸಿ ಪುಳಕಿತನಾಗುತ್ತೇನೆ.
ಸಾಗರ ತಾಲೂಕಿನ ಹೊಸಂತಿಯಿಂದ ಘಟ್ಟದ ಕೆಳಗೆ ನಡೆದು ಬಂದ ಹಾಲುಗಲ್ಲದ ಗಟ್ಟಿಗಿತ್ತಿ, ನಿನ್ನದು ದಿಬ್ಬಣವೇನೆ ಮಾರಾಯ್ತಿ...!? ಮೂರೋ ನಾಲ್ಕೊ ಕರಗಿಸಿಕೊಂಡೆ, ನಾಲ್ಕು ಹೆತ್ತೆ.. ಘಟ್ಟಕ್ಕೆ ದುಡಿಯಲು ಹೋದ ಗಂಡ ಹೊಟ್ಟೆಕಚ್ಚಣನ ನೆವದಿಂದಲೇ ಸತ್ತು ಹೋದನಂತೆ; ಅವನ ಹೆಣ ಸಿಗದೆ ಹುಲ್ಲುಕಟ್ಟು ತಂದು ಸುಟ್ಟು ಹಾಕಿದ ಬದುಕಿನ ಬೂದಿಯ ಹಣೆಗೆ ಶಾಶ್ವತ ಹಚ್ಚೆ ಹಾಕಿಸಿಕೊಂಡ ನೀನು, ನಿನ್ನ ಕಥೆ ಬರಿಯ ಅಂಗಾಲಿಗೆ ಮೇಲ್ಮುಖವಾಗಿ ಸುರಿದ ದಬ್ಬಣವಲ್ಲವಾ!?

ಒಡೆಯರ ಮನೆಯಲ್ಲಿ ಕೊಳಗಗಟ್ಟಲೇ ಭತ್ತ ಉಸಿರುಗಟ್ಟಿ ಮೆರೆದು ಅಂಗೈ ಮೇಲೆ ತಂಗಳನ್ನ ತಂದು ಹೆತ್ತ ಮಕ್ಕಳ ಹೊರೆದ, ಗಂಡಸಿಗೆ ಆಗದ ಬದುಕನ್ನ ಒಬ್ಬಂಟಿಯಾಗಿ ಪೊರೆದ ಬಿರುಗತ್ತಿಯ ಬೀರು ನಿನ್ನ ಕಥೆ ಯಾವ ರಾಣಿಗೆ ಕಮ್ಮಿ ಹೇಳು!? ನಿನ್ನ ಬೆಳ್ಳಿ ಕೂದಲಿನ ಕೀರಿಟಕ್ಕೆ ಬದುಕ ಸಾಮ್ರಾಜ್ಯ ಗೆದ್ದ ಹರಳಿನ ಕುರುಹಿದೆ!
ಮನೆಯ ಜ್ವರಕ್ಕೆಲ್ಲಾ ನಿನ್ನ ಕೈ ಬೆರಳಿನ ಸಂದಿಯಿಂದ ಜಾರಿದ ಅನ್ನದ ಅಗಳೆ ಔಷಧ!
ಸಂಸ್ಕಾರಕ್ಕೆ, ಸಂಪ್ರದಾಯಕ್ಕೆ , ಹಬ್ಬಕ್ಕೆ, ಕಬ್ಬಕ್ಕೆ, ಹೀನಕ್ಕೆ, ಹಾನಿಗೆ ನೀನೆ ದಾರಿ ದಡ!
ಬಲಗಣ್ಣಿಗೆ ಹೂವು ಬಿದ್ದು ಏನು ಕಾಣದು ಅನ್ನೋ ಮುದುಕಿಯೇ ನಿನ್ನ ಎದೆಯಲ್ಲಿ ಎಷ್ಟು ಹೂ ಬಿತ್ತು ಬೆಳೆದೆಯೇ!
ನಿನ್ನ ಅನುಭವಕ್ಕೆ, ನೀ ಬದುಕನ್ನ ದಾಟಿದ ರೀತಿ ಯಾವ ಅಧ್ಯಾತ್ಮ ಕ್ಕೆ ಸಿಕ್ಕಿತೆ!?

ಅದರ ಅರ್ಧವಾದರೂ ನನಗೆ ಈ ಬದುಕಿನಲಿ ದಕ್ಕಿದರೆ ಸಾರ್ಥಕವಾಯಿತು ಅಂದುಕೊಳ್ಳುತ್ತೇನೆ!
ಹಳೆ ಸಾಮಾನು ಮಾರೋರು ಮನೆಬಾಗಿಲಿಗೆ ಬಂದಾಗಲೆಲ್ಲ ನಿನ್ನ ತೋರಿಸಿ ತಮಾಷೆ ಮಾಡೋ ಬುದ್ಧಿ ಇನ್ನೂ ಬಿಡದ ನನಗೆ ನಿನ್ನ ಮೈ ಮುದುರುಗಳಲ್ಲಿ ಬದುಕಿನ ಸಾಕ್ಷಾತ್ಕಾರ ಕಾಣುತ್ತದೆ.
ನಿನ್ನದೆ ಬಳ್ಳಿಯ ಕಾಯಿ ನಾನು! ಅದಕ್ಕೆ ನಿನಗೆ ಜೋತು ಬೀಳುತ್ತೇನೆ. ಹಂಡೆ ಒಲೆ ಮುಂದೆ ನೀನು ಚಳಿ ಕಾಯಿಸೋವಾಗ ನಿನ್ನ ಬಿಳಚು ಅಂಗಾಲ ಜೊತೆ ಆಟವಾಡುತ್ತೇನೆ.
ಬಿಸಿಲು ಕಾಯೋವಾಗ ತಬ್ಬಿ ಮುದ್ದುಮಾಡುತ್ತೇನೆ. ಕಣ್ತುಂಬಿಕೊಳ್ಳುತ್ತದೆ. ಮೇಲೆ ನೋಡಿದರೆ ನಿನ್ನಷ್ಟೆ ಅನಕ್ಷರಸ್ಥ ಆಕಾಶಕ್ಕೆ ಸೂರ್ಯನೆಂಬ ಹೆಬ್ಬಟ್ಟು!
ಅದು ನಿನ್ನ ಹರಿವು..ಅದಕ್ಕೆ ಹರಡಿರೋ ಬಿಳಿ ಕೂದಲು ಬಾಚಿ ಅಂಬಡೆ ಕಟ್ಟಿ ನಿನ್ನ ಹಣೆಗೊಂದು ಹೂ ಮುತ್ತನಿಡುತ್ತೇನೆ.
ಮತ್ತು ನಿನ್ನ ಪಕ್ಕದಲ್ಲೇ ನಿನ್ನ ಹಾಸಿಗೆಯ ಮೇಲೆ ಕೂತು ನಿನ್ನ ಚರ್ಮದ ತರಕು ಸ್ಪರ್ಶಿಸುತ್ತಾ, ಅಮೃತಾಂಜನ ಮಿಕ್ಸ್ ಆಗಿ ಬರೋ ನಿನ್ನ ಮೈಯ ಘಮಕ್ಕೆ ಇದಿಷ್ಟನ್ನು ಗೀಚುತ್ತೇನೆ! I Love You ಬೀರಮ್ಮ! I love You.Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ವಿಷಯದ ಆಯ್ಕೆ ನಿಮಗೆ ಬಿಟ್ಟಿದ್ದು
ವಿಷಯದ ಆಯ್ಕೆ ನಿಮಗೆ ಬಿಟ್ಟಿದ್ದು
October 15, 2018

ಕೃಷಿ, ವಿಜ್ಞಾನ, ನೀರು, ಪರಿಸರದ ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿಯಬೇಕೆ? ಹಾಗಾದರೆ ಈ ಬಾರಿಯ ಹಸಿರುವಾಸಿಯಲ್ಲಿ ವಿವಿಧ ರೀತಿಯ ರಸದೌತಣ ನಿಮಗಾಗಿ ತಪ್ಪದೇ ಓದಿ…

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos

ಸಿಂಹದ ಬೇಟೆ
October 04, 2018