ರಾಜ್ಯದಲ್ಲಿ ಬರಕ್ಕೂ ಮುನ್ನ ಮಾನವತೆಯ ಕ್ಷಾಮ!

January 22, 2018 ⊄   By: ರಾಧಾಕೃಷ್ಣ ಭಡ್ತಿ

ಏಡ್ಸ್ ಹೇಗೆ ಬರುತ್ತದೆ? ಇವತ್ತು ತೀರಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಲ್ಲೂ ಉತ್ತರ ಸಿದ್ಧವಿರುತ್ತದೆ. ಬಹು ಸಂಗಾತಿಗಳೊಂದಿಗಿನ ಲೈಂಗಿಕ ಸಂಪರ್ಕದಿಂದ ಹರಡುವ ರೋಗ ಇದು. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಇಂಧು ಮನುಕುಲವನ್ನು ಬಿಟ್ಟೂ ಬಿಡದೇ ಕಂಗೇಡಿಸಿರುವ ಏಡ್ಸ್ ಹೆಮ್ಮಾರಿ ಹೆಗಲೇರುತ್ತದೆ ಎಂಬ ಬಗ್ಗೆ ವ್ಯಾಪಕ ಪ್ರಚಾರಾಂದೋಲನ ನಡೆದಿದ್ದು, ಬಹುತೇಕ ಅನಕ್ಷರಸ್ಥರಲ್ಲೂ ಈ ಬಗ್ಗೆ ಅರಿವು ಮೂಡುವಂತಾಗಿದೆ. ಇದನ್ನು ಬಿಟ್ಟರೆ ಸೋಂಕಿರುವ ಸೂಜಿ, ಬ್ಲೇಡ್ ಬಳಕೆಯಿಂದ ಅಥವಾ ಸೋಕಿತ ವ್ಯಕ್ತಿಯ ರಕ್ತ ಯಾವುದೇ ರೀತಿಯಲ್ಲಿ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಪ್ರವೇಶಿಸುವುದರಿಂದ ಎಚ್ಐವಿ ಸಾಧ್ಯತೆಗಳಿವೆ.

ಇದು ಗೊತ್ತಿದ್ದದ್ದೇ ಬಿಡಿ. ಆದರೆ ಕೋಕಾ ಕೋಲಾ, ಪೆಪ್ಸಿ ಮತ್ತಿತರ ತಂಪು ಪಾನೀಯಗಳನ್ನು ಕುಡಿಯುವುದರಿಂದ ಏಡ್ಸ್ ಬರುತ್ತದೆಯೇ?! ಹಾಗೊಂದು ಎಸ್ಸೆಮ್ಮೆಸ್ ಇದೀಗ ವಿಶ್ವಾದ್ಯಂತ ಹರಿದಾಡುತ್ತಿದೆ. ಬೆಳಗಾಗೆದ್ದರೆ ನಿಮ್ಮ ಇನ್ಬಾಕ್ಸ್ಗೆ ಬಂದು ಬೀಳುತ್ತಿರುವ, ಅಲ್ಲಿಂದ ನಿಮ್ಮ ಆಪ್ತರ ಮೊಬೈಲ್ಗಳಿಗೂ ಸೋಂಕನ್ನು ಹಬ್ಬಿಸುತ್ತಿರುವ ಈ ಸಂದೇಶ ಒಂದು ಕ್ಷಣ ಎಲ್ಲರನ್ನೂ ದಂಗುಬಡಿಸುತ್ತಿರುವುದಂತೂ ನಿಜ. ‘ಪೆಪ್ಸಿ ಬಾಟಲಿಯಲ್ಲಿ ಎಚ್ಐವಿ ಸೋಂಕಿನ ರಕ್ತವನ್ನು ಬೆರೆಸಲಾಗಿದೆ. ಆದ್ದರಿಂದ ಪಾನೀಯವನ್ನು ಕುಡಿಯಬೇಡಿ’ ಎಂಬುದು ಅದರ ಸಾರಾಂಶ.

ಇಂಥದ್ದೊಂದು ಸಂದೇಶ ಅದೆಲ್ಲಿಂದ ಹುಟ್ಟಿತೋ, ಯಾರು ಕಾರಣರೋ, ಯಾಕಾಗಿ ಇಂಥ ಸಂದೇಶಗಳು ಹರಿದಾಡುತ್ತಿದೆ...? ಇತ್ಯಾದಿ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿಲ್ಲ. ಆದರೆ, ತಂಪು ಪಾನೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರನೊಬ್ಬ ಎಚ್ಐವಿ ಪೀಡಿತನಾಗಿದ್ದು ಆ ಕಂಪನಿಯ ಎಲ್ಲ ಉತ್ಪನ್ನಗಳಲ್ಲಿ ತನ್ನ ಸೋಂಕಾಣುವನ್ನು ಬೆರೆಸಿ ಬಿಟ್ಟಿದ್ದಾನಂತೆ. ಹೀಗಾಗಿ ಆ ಸಂದರ್ಭದಲ್ಲಿ ಬಾಟ್ಲಿಂಗ್ ಆದ ಎಲ್ಲ ತಂಪು ಪಾನೀಯದಲ್ಲೂ ಸೋಂಕಾಣು ಇದ್ದು, ಯಾವುದೇ ಬಾಟಲಿಯ ಮೂಲ ಅದು ನಿಮ್ಮ ದೇಹವನ್ನು ಪ್ರವೇಶಿಸಬಹುದು ಎಂಬ ಎಚ್ಚರಿಕೆಯನ್ನು ಈ ಎಸ್ಸೆಮ್ಮೆಸ್ ರವಾನಿಸಿ ಬಿಡುತ್ತಿದೆ.

ಕಂಪನಿ ಇದನ್ನು ನಿರಾಕರಿಸಿದ್ದು, ಇದೊಂದು ದುರುದ್ದೇಶಪೂರಿತ ಸಂದೇಶ ಎಂಬುದನ್ನು ಸ್ಪಷ್ಟಪಡಿಸಿದೆ. ಇದೊಂದು ಸಾಮಾನ್ಯ ಜ್ಞಾನ; ನಾವು ಸೇವಿಸುವ ಆಹಾರ, ಕುಡಿಯುವ ನೀರಿನ ಮೂಲಕ ಎಚ್ಐವಿ ಸೋಂಕು ಹರಡುವುದು ಸಾಧ್ಯವೇ ಇಲ್ಲ. ಈ ದೃಷ್ಟಿಯಿಂದ ಇದು ಖಂಡಿತಾ ದುರುದೇಶಪೂರಿತ, ಅಥವಾ ವ್ಯಂಗ್ಯದ ಉದ್ದೇಶಕ್ಕೆ ಕಳಿಸುತ್ತಿರುವ ಅವೈಜ್ಞಾನಿಕ ಸಂದೇಶ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅಸಲಿ ಸಂಗತಿ ಏನೆಂದರೆ ಈ ತಂಪು ಪಾನೀಯಗಳನ್ನು ಕುಡಿದು ಮನೆಗೆ ಹೋದರೆ ನಿಮ್ಮ ಮನೆಯೊಡತಿ ಕೈಗೆ ಪೊರಕೆ ಎತ್ತಿಕೊಳ್ಳದಿದ್ದರೆ ನಿಮ್ಮ ಪುಣ್ಯ! ನೀವು ಕುಡಿದು ಮನೆಗೆ ಬಂದಿದ್ದೀರೆಂದು ಆಕೆ ಅಂದುಕೊಳ್ಳುವ ಎಲ್ಲ ಸಾಧ್ಯತೆ ಇದೆ. ಏಕೆಂದರೆ ಪೆಪ್ಸಿ ಯಂಥ ಪಾನೀಯದಲ್ಲಿ ಆಲ್ಕೋಹಾಲ್ ಅಂಶವಿದೆ!
ಹಾಗೊಂದು ವೈಜ್ಞಾನಿಕ ಅಧ್ಯಯನವೊಂದು ಸಾರುತ್ತಿದೆ. ಇದು ಮಾತ್ರ ನೂರಕ್ಕೆ ನೂರು ನಿಜ ಎಂದು ಪುಷ್ಟೀಕರಿಸಿರುವ Daily Mail ಈ ಸಂಬಂಧ ಮಹತ್ವಪೂರ್ಣ ವರದಿಯೊಂದನ್ನು ಪ್ರಕಟಿಸಿದ್ದು, ಬಹುತೇಕ ಎಲ್ಲ ವಿದೇಶಿ ತಂಪು ಪಾನೀಯದಲ್ಲೂ ಆಲ್ಕೋಹಾಲಿಕ್ ಅಂಶವಿರುತ್ತದೆ ಎಂದು ಹೇಳಲಾಗಿದೆ. ಈ ಅಧ್ಯಯನದ ಪ್ರಕಾರ ಕೋಕಾ ಕೋಲಾ ಮತ್ತು ಪೆಪ್ಸಿಯಲ್ಲಿ ಅಲ್ಪ ಪ್ರಮಾಣದ, ಹಾಗೆಂದು ಗಣನೆಗೆ ಸಿಗುವಷ್ಟು ಮಟ್ಟಿಗಿನ ಆಲ್ಕೋಹಾಲ್ ಇರುವುದು ದೃಢಪಟ್ಟಿದೆ. ಈವರೆಗೆ ಬೆಳೆಗಳಿಗೆ ಉತ್ತಮ ಕೀಟನಾಶಕವಾಗಿ ಬಳಕೆಯಾಗುತ್ತದೆ ಎಂದು ಕೇಳಿದ್ದ, ಕೆಲವೆಡೆ ಹಾಗೊಂದು ಪ್ರಯೋಗಕ್ಕೂ ಒಳಗಾಗಿದ್ದ ಈ ವಿದೇಶಿ ತಂಪು ಪಾನಿಯಗಳು ಇನ್ನು ನಿದ್ದೆಕೊಡದೇ ರಾತ್ರಿಯೆಲ್ಲಾ ರಚ್ಚೆ ಹಿಡಿದು ಕೂಗುವ ಹಾಲುಗಲ್ಲದ ಹಸುಳೆಗಳ ಸಂಸ್ಯೆಗೆ ಔಷಧವೂ ಆಗಿ ಬಳಕೆಯಾದರೂ ಅಚ್ಚರಿಯಿಲ್ಲ. ಒಂದೊಮ್ಮೆ ನಿಮ್ಮ ಮಕ್ಕಳು ಸಣ್ಣಪುಟ್ಟ ನೋವಿಗೆ ತುತ್ತಾಗಿದ್ದರೆ, ತುಂಬಾ ಬಳಲಿದ್ದರೆ ಬೇರೇನೂ ತಲೆಕೆಡಿಸಿಕೊಳ್ಳಬೇಕಿಲ್ಲ. ಒಂದು ಬಾಟಲಿ ಪೆಪ್ಸಿ ಕುಡಿಸಿ ಮಲಗಿಸಿಬಿಡಿ. ಆಲ್ಕೊಹಾಲಿಕ್ ಅಂಶ ಅದರಲ್ಲಿರುವುದರಿಂದ ಮಕ್ಕಳ ನೋವು ನಿವಾರಕವಾಗಿಯೂ ಅದು ಕೆಲಸ ಮಾಡಬಲ್ಲುದು!

ಇದೆಲ್ಲವೂ ವ್ಯಂಗ್ಯದ ಪರಮಾವಧಿ ಎಂದೆನ್ನಿಸಿದರೂ, ಇವತ್ತು ಸರ್ವತ್ರ ಬಳಕೆಗೆ ಒಳಗಾಗಿರುವ, ಅದರಲ್ಲೂ ಯುವ ಜನತೆಯ ಫೇವರೆಟ್ ಎಂದೆನಿಸಿರುವ ಈ ಪಾನೀಯಗಳು ಸಂಪೂರ್ಣ ಆರೋಗ್ಯಕಾರಿಯಲ್ಲ ಎಂಬುದಕ್ಕೆ ಮತ್ತೆ ಪುರಾವೆಗಳು ಬೇಕಿಲ್ಲ. ಮೊದಲಿಂದಲೂ ಈ ಬಗ್ಗೆ ಇದ್ದ ಗುಲ್ಲಿಗೆ ಈಗ ಇನ್ನೊಂದು ಸಾಕ್ಷಿ ಅದರಲ್ಲಿನ ಆಲ್ಕೋಹಾಲಿಕ್ ಅಂಶದ ವರದಿ. ಪ್ಯಾರೀಸ್ನ ರಾಷ್ಟ್ರೀಯ ಬಳಕೆದಾರರ ಸಂಸ್ಥೆ ಈ ಸಂಬಂಧ ಅಧ್ಯಯನ ನಡೆಸಿದೆ. ಅದು ಪ್ರಕಟಿಸಿರುವ ಸುದೀರ್ಘ ವರದಿಯಲ್ಲಿ ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ ಅರ್ಧದಷ್ಟು ಪಾನೀಯಗಳಲ್ಲಿ ಆಲ್ಕೋಹಾಲ್ ಇದೆ ಎಂದು ಸಾರಿದೆ. ಬಳಕೆದಾರರಲ್ಲಿ ರುಚಿಯ ಗೀಳು ಹಚ್ಚಿ, ಅದಕ್ಕೆ ದಾಸ್ಯರಾಗುವಂತೆ ಮಾಡುವ ತಂತ್ರಗಾರಿಕೆಯ ಭಾಗವಾಗಿ ಇದು ಕಂಡರೆ ಅಚ್ಚರಿಯಿಲ್ಲ. ಆಲ್ಕೋಹಾಲ್ನಂಥ ಮತ್ತು ಬರಿಸುವ ಅಂಶವನ್ನು ತಂಪು ಪಾನೀಯಗಳಲ್ಲಿ ಸೇರಿಸುವುದರಿಂದಾಗಿ ಉದ್ದೀಪನೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದರಿಂದ ಒಮ್ಮೆ ಕುಡಿದ ಬಳಕೆದಾರ ಮತ್ತೆ ಮತ್ತೆ ಇಂಥ ತಂಪು ಪಾನೀಯದತ್ತ ಆಕರ್ಷಿತನಾಗುವುದರಲ್ಲಿ ಸಂಶಯವಿಲ್ಲ. ಮಾತ್ರವಲ್ಲ ಪಾನೀಯಕ್ಕೊಂದು ವಿಚಿತ್ರ ರುಚಿಯನ್ನು ಅದು ಕಟ್ಟಿಕೊಡುವುದರಿಂದ, ಮಕ್ಕಳು ಮತ್ತು ಯುವ ಜನತೆಯನ್ನು ಇದು ಹೆಚ್ಚು ತನ್ನೆಡೆಗೆ ಸೆಳೆಯುತ್ತದೆ.ದುರದೃಷ್ಟಕರ ಸಂಗತಿಯೆಂದರೆ, ಅಮೆರಿಕದಂಥ ರಾಷ್ಟ್ರಗಳಲ್ಲಿಸರಬರಾಜಾಗುತ್ತಿರುವ ಇದೇ ಕಂಪನಿಯ ಪಾನೀಯಗಳಲ್ಲಿ ಆಲ್ಕೋಹಾಲ್ ಇಲ್ಲ.. ಭಾರತದಂಥ ರಾಷ್ಟ್ರದ ಮಾರುಕಟ್ಟೆಗೆ ಸರಬರಾಜಾಗುತ್ತಿರುವ ಪಾನೀಯಗಳಲ್ಲಿ ಮಾತ್ರ ಆಲ್ಕೊಹಾಲ್ ಇದೆ. ಹೇಗೂ ಇರಲಿ, ಅತಿಯಾದರೆ ಅಮೃತವೂ ವಿಷವಂತೆ. ಪಾನೀಯಗಳ ಮಾತು ಹಾಗಿರಲಿ, ಕುಡಿಯುವ ನೀರೇ ಇಂದು ವಿಷವಾಗಿ ಕಾಡುತ್ತಿದೆ. ಒಂದೆಡೆ ಬೆಂಗಳೂರಿನಂಥ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಕುಡಿಯುವ ನೀರು ಪೂರೈಕೆಯೇ ಮಹಾನ್ ಸವಾಲು. ಇಲ್ಲೀಗ ತೊಟ್ಟು ನೀರಿಗೂ ಹಾಹಾಕಾರ ಏರ್ಪಟ್ಟಿರುವ ಸಂದರ್ಭದಲ್ಲಿ, ಮಳೆರಾಯನೂ ಮುನಿಸಿಕೊಂಡು ರಾಜ್ಯದಿಂದ ಕಾಲ್ಗೆಯುತ್ತಿದ್ದಾನೆ. ಹೀಗಾಗಿ ಬೆಂಗಳೂರಿನಿಂದ ಹೊರಗೂ ಇದೇ ಪರಿಸ್ಥಿತಿ. ಬರ ಸನ್ನಿವೇಶದಲ್ಲಿ ಎಲ್ಲೆಡೆ ಕುಡಿಯುವ ನೀರು ಸಹ ವಿಷವಾಗಿ ಪರಿವರ್ತಿತವಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿದಿನ 500 ದಶಲಕ್ಷ ಲೀಟರ್ ನೀರಿನ ಕೊರತೆ ಕಾಡುತ್ತಿದೆ ಎಂಬುದು ಅಂಕಿಅಂಶ ಮಾತ್ರ. ನೈಜ ಸನ್ನಿವೇಶ ಅದಕ್ಕಿಂತ ಭೀಕರವಾಗಿದೆ. ರಾಜಧಾನಿಯ ಪರಿಸ್ಥಿತಿಯೇ ಹೀಗಾದರೆ ಅಲ್ಲೆಲ್ಲೋ ಕೊಪ್ಪಳದಲ್ಲಿ ಕಲುಷಿತ ನೀರು ಕುಡಿದು ಮಗುವೊಂದು ಮೃತಪಟ್ಟ ಘಟನೆ ಭವಿಷ್ಯದ ದಿಕ್ಸೂಚಿಯಾಗಿ ಕಾಣುತ್ತಿದೆ. ಇದು ನಿರ್ಲಕ್ಷಿಸುವ ಸಂಗತಿಯೇ ಅಲ್ಲ. ಏಕೆಂದರೆ ಮನುಷ್ಯನಿಗೆ ನೀರಿನ ಅನಿವಾರ್ಯತೆ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ.

ನೀರು ಜೀವಜಲ. ಪಾಶ್ಚಾತ್ಯ ದೇಶಗಳ ಅಥವಾ ವಿಶ್ವಸಂಸ್ಥೆಯ ಮಾನದಂಡದ ಪ್ರಕಾರ ಪ್ರತಿಯೊಬ್ಬನಿಗೆ ದಿನಕ್ಕೆ ಕನಿಷ್ಠ 3.7 ಲೀಟರ್ ಕುಡಿಯುವ ನೀರು ಬೇಕೇಬೇಕು. ಹೆಣ್ಣುಮಕ್ಕಳಿಗೆ ಈ ಪ್ರಮಾಣ ತುಸುವೇ ಕಡಿಮೆ ಇರಬಹುದು. ನಮ್ಮ ಆಹಾರದಲ್ಲಿ ನೀರಿನಂಶ ಇದ್ದೇ ಇರುತ್ತದೆಯಾದ್ದರಿಂದ ಈ ಪ್ರಮಾಣದಲ್ಲಿ ತುಸು ಹೆಚ್ಚೂ ಕಡಿಮೆ ಆದರೂ ಅದು ಸಹ್ಯ. ಆದರೆ ನೀರಿನ ಪ್ರಮಾಣದ ಗಮನಾರ್ಹ ಹೆಚ್ಚು ಕಡಿಮೆ ಎರಡೂ ಅಪಾಯಕಾರಿಯೇ. ಅಂತೆಯೇ ನೀರಿನಲ್ಲಿರಬೇಕಾದ ಖನಿಜಗಳಲ್ಲಿನ ಪ್ರಮಾಣ ಹೆಚ್ಚುಕಡಿಮೆಯಾದರೂ ತೊಂದರೆ ತಪ್ಪಿದ್ದಲ್ಲ. ಇಂಥ ಸನ್ನಿವೇಶವನ್ನೇ ನೀರಿನ ಕಂಪನಿಗಳು, ವಿದೇಶಿ ತಂಪು ಪಾನೀಯದಂಥ ಕಂಪನಿಗಳವರು ದುರ್ಬಳಕೆ ಮಾಡಿಕೊಳ್ಳುವುದು. ಕಂಪನಿಗಳ ಇಂಥ ತಂತ್ರಕ್ಕೆ ನಾವು ಸುಲಭದ ತುತ್ತಾಗುತ್ತೇವೆ.ಇದು ಎಷ್ಟರ ಮಟ್ಟಿಗೆ ಎಂದರೆ ಶುದ್ಧ ನೀರಿನ ನಂಬಿಕೆಯಲ್ಲಿ ನಾವು ಬಾಟಲಿಯಲ್ಲಿ ತುಂಬಿಕೊಟ್ಟಿದ್ದನ್ನೆಲ್ಲಾ ಕುಡಿಯುತ್ತಿದ್ದೇವೆ. ನೀರಿನ ಕೊರತೆ ಮತ್ತು ಅಶುದ್ಧತೆ ಎರಡೂ ಕಾರಣಗಳಿಂದಾಗಿ ಇಂಥ ಮನಸ್ಥಿತಿಗೆ ನಾವು ಬಂದು ಮುಟ್ಟಿದ್ದೇವೆ. ಎಷ್ಟೋ ವೇಳೆ, ಕೊಳವೆ ಬಾವಿಯಿಂದ ನೇರವಾಗಿ ಬಾಟಲಿಗಳಲ್ಲಿ ನೀರು ತುಂಬಿಸಿ ಮಾರಾಟ ಮಾಡಿದ ಉದಾಹರಣೆಗಳಿಗೂ ಕೊರತೆ ಇಲ್ಲ. ಇಂಥ ದುಷ್ಕೃತ್ಯಗಳ ಹಿನ್ನೆಲೆಯಲ್ಲಿಯೇ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿ, ಬಾಟಲಿ ನೀರಿಗೆ ಐಎಸ್ಐ ಮುದ್ರೆಯನ್ನು ಕಡ್ಡಾಯಗೊಳಿಸಿದೆ.
ಇಂಥದ್ದೇ ಪ್ರಹಾರ ನ್ಯಾಯಾಲಯದಿಂದ ಬೆಂಗಳೂರಿನಂಥ ನಗರಗಳಲ್ಲಿನ ಟ್ಯಾಂಕರ್ ಮಾಲೀಕರ ಮೇಲೂ ಆಗಬೇಕಿದೆ. ಇತ್ತೀಚೆಗೆ ವಕ್ಕರಿಸಿರುವ ಹೊಸ ಹೆಮ್ಮಾರಿ ಟ್ಯಾಂಕರ್ ಲಾಭಿಯದ್ದು ಬಾಟಲಿ ನೀರಿನ ಕಂಪನಿಗಳಿಗಿಂತಲೂ ಮೀರಿದ ವಂಚನೆ. ಪರಿಸ್ಥಿತಿಯ ದುರ್ಲಾಭಪಡಕೊಳ್ಳುತ್ತಿರುವವರಲ್ಲಿ ಇವರು ಅಗ್ರಗಣ್ಯರು. ಬೆಂಗಳೂರನಲ್ಲಿ, ಅದರಲ್ಲೂ ಹೊಸ ಬಡವಾಣೆಗಳಲ್ಲಿ ಮಿತಿಮೀರಿರುವ ನೀರಿನ ಕೊರತೆಯ ಪರಿಣಾಮ ಜನತೆಗೆ ಇಂಥ ಅವಲಂಬನೆ ಅನಿವಾರ್ಯ. ಇದನ್ನು ಮನಗಂಡಿರುವ ಟ್ಯಾಂಕರ್ ಮಾಲೀಕರು ಎಲ್ಲೆಂದರಲ್ಲಿ ಸುಲಭದಲ್ಲಿ ಸಿಗುವ ನೀರನ್ನು ತುಂಬಿಸಿಕೊಂಡು ಬಂದು ಸರಬರಾಜು ಮಾಡುತ್ತಿದ್ದಾರೆ. ಎಷ್ಟೋ ವೇಳೆ, ಕಾರ್ಖಾನೆಗಳ ತ್ಯಾಜ್ಯ ಹರಿಯುವ ಕೆರೆ, ಬೆಂಗಳೂರಿನ ಕೊಳಚೆ ಹರಿಯುವ, ಒಳಚರಂಡಿ ಸಂಪರ್ಕಿಸುವ ತಾಣಗಳ ಪಕ್ಕದಲ್ಲೇ ಕೊಳವೆ ಬಾವಿ ಕೊರೆಯಿಸಿ ಅಲ್ಲಿಂದ ನೀರೆತ್ತಿ ತಂದು ಪೂರೈಸಲಾಗುತ್ತದೆ. ಇಂಥ ಪ್ರದೇಶದಲ್ಲಿ ನೀರು ಸುಲಭದಲ್ಲಿ ಸಿಗುತ್ತದೆ ಮತ್ತು ಅಷ್ಟು ಸುಲಭದಲ್ಲಿ ಕೊಳವೆ ಬಾವಿ ಬತ್ತುವುದಿಲ್ಲ ಎಂಬುದು ಇದರ ಹಿಂದಿನ ತಂತ್ರ. ಆದರೆ ಅಂಥ ನೀರು ಖಂಡಿತಾ ಕುಡಿಯಲು ಯೋಗ್ಯವಾಗಿರುವುದಿಲ್ಲ.

ಇನ್ನೊಂದು ಸಮಸ್ಯೆ, ನೀರಿನ ಟ್ಯಾಂಕರ್ಗಳ ಬೆಲೆಯದ್ದು. ಸಾಮಾನ್ಯವಾಗಿ ಒಂದು ಟ್ಯಾಂಕರ್ ನೀರೆಂದರೆ ಸಣ್ಣದಿದ್ದರೆ 3 ಸಾವಿರ ಲೀಟರ್, ದೊಡ್ಡದಾದರೆ 6 ಸಾವಿರ ಲೀಟರ್. ಇದರ ಬೆಲೆ ಸರ್ವೇ ಸಾಮಾನ್ಯ 250 ರಿಂದ 300 ರು. ಈಗಿನ ಬರ ಸನ್ನಿವೇಶದಲ್ಲಿ ಅದರ ಬೆಲೆ 600ರಿಂದ ಸಾವಿರ ರು.ಗಳವರೆಗೆ ಏರಿದೆ ಎಂದರೆ ಅವರ ಸುಲಿಗೆಯ ಪರಾಕಾಷ್ಠೆ ಅರ್ಥವಾಗಬಹುದು. ಇಷ್ಟಾದರೂ ನೀರು ಸಮಯಕ್ಕೆ ನೀರು ಸಿಗುತ್ತಿಲ್ಲ. ಸುಲಭದಲ್ಲಿ ಪೂರೈಸಿದರೆ ದರ ಹೆಚ್ಚಿಸಲಾಗುವುದಿಲ್ಲ ಎಂಬ ಕಾರಣಕ್ಕೆ ಸ್ವತಃ ಟ್ಯಾಂಕರ್ ಲಾಬಿಯೇ ನಿಂತು ಕ್ಷಾಮವನ್ನು ಸೃಷ್ಟಿಸುತ್ತಿದೆ! ಅಂದರೆ ನೀರಿದ್ದೂ ಅದನ್ನು ಅಡಗಿಸಿಟ್ಟು, ಕಾಳ ಸಂತೆಯಲ್ಲಿ ಮನಬಂದ ಬೆಲೆಗೆ ಮಾರುವ ಕುತಂತ್ರ ಎಗ್ಗಿಲ್ಲದೇ ಸಾಗಿದೆ. ಹೀಗಾಗಿ ಬರಬೀಳುವ ಮುನ್ನವೇ ರಾಜ್ಯವನ್ನು ಕ್ಷಾಮ ಕಾಡುತ್ತಿದೆ. ಇದ್ಯಾವುದರ ಪರಿವೆಯಿಲ್ಲದೇ ರಾಜ್ಯದಲ್ಲಿ ರಾಜಕೀಯ ದೊಂಬರಾಟ ದಿನಕ್ಕೊಂದರಂತೆ ಬೀದಿಯಲ್ಲಿ ನಿರಂತರ ಸಾಗುತ್ತಿದೆ. ಅಧಿಕಾರ ವರ್ಗ ಹೇಳು, ಕೇಳುವವರಿಲ್ಲದೇ ನೆಮ್ಮದಿಯಾಗಿ ಮಲಗಿದೆ. ರಾಜ್ಯದ ಜನತೆಯನ್ನು ದೇವರೇ ಕಾಪಾಡಬೇಕು!
Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು

Videos