ಓಡುವ ಹನಿಯನ್ನು ಪ್ರೀತಿಯಿಂದ ಮೈದಡವಿ

June 01, 2017 ⊄   By: ರಾಧಾಕೃಷ್ಣ ಭಡ್ತಿ

ಆಕೆ ಚಂಚಲೆ. ಸಂಯಮದ ಕಟ್ಟೆಯನ್ನು ನುಚ್ಚು ನೂರು ಮಾಡಿ ಕಂಡಕಂಡಲ್ಲೆಲ್ಲಾ ಹುಚ್ಚೆದ್ದು ನುಗ್ಗುವುದಷ್ಟೇ ಗೊತ್ತಾಕೆಗೆ. ಬಯಕೆಗಳ ಬೇಲಿಯನ್ನು ಜಿಗಿದು, ಬರುವ ಅಡ್ಡಿಗಳ ನಿವಾಳಿಸಿಕೊಂಡು ಬಿಗುಮಾನಬಿಟ್ಟು ಬಿಡುಬೀಸಾಗಿ ನಡೆಯುವ ಆಕೆಯನ್ನು ತಡೆಯುವವರಾದರೂ ಯಾರಿದ್ದಾರೆ? ಅಷ್ಟಕ್ಕೂ ಆಕೆ ಹೋರಟಿರುವುದಾದರೂ ಎಲ್ಲಿಗೆ? ಹರವಾದ ಎದೆಯ ಚೆಲ್ಲಿ, ನೀಳ ತೋಳುಗಳ ಮುಂಚಾಚಿ, ಬರ ಸೆಳೆದಪ್ಪಿ ಬಸಿರತುಂಬಿಸಲು ಕಾತರಿಸುತ್ತಿರುವ ಆ ಇನಿಯನ ಸೇರಲು ಇಷ್ಟೂ ತವಕಿಸದಿದ್ದರೆ ಹೆಣ್ಣಾಗಿ ಅದು ತನಗೆ ಅಪಮಾನವೆಂದು ನಿರ್ಧರಿಸಿದವಳಾಕೆ. ಅದು ಪೂರ್ವ ನಿರ್ಧರಿತ ಸಂಯೋಗ. ಆತನಿಗಾಗಿಯೇ, ಆತನ ಸಾನ್ನಿಧ್ಯದಲ್ಲೇ ಆವಿರ್ಭವಿಸಿದವಳು ಅವಳು. ಭ್ರೂಣ ಕಟ್ಟುವ ಮೊದಲೇ ಬರೆದಿಟ್ಟಾಗಿದೆ, ಹುಟ್ಟಿದ ಮರುಗಳಿಗೆಯಲ್ಲೇ ಬೆಳೆದು, ಮೈ ಸಿರಿಯುಕ್ಕಿಸಿಕೊಂಡು ಭರದಿ ಮುನ್ನುಗ್ಗುವ ಆಕೆಯ ಆಸೆಗಳು ತಣಿಯುವುದು ಆ ಶರಧಿಯ ಸಾಮೀಪ್ಯದಲ್ಲೇ. ಕೊರಳ ಕೊಂಕಿಸಿ, ಇರುಳ ಅಣಕಿಸಿ, ಚೆಲುವ ಬೀರಿ, ಒಲವ ತೋರಿ, ಓರಗೆಯ ಗೆಳತಿಯರ ಬೆಡಗು ಭಿನ್ನಾಣಗಳೆಲ್ಲವನ್ನೂ ಸೆಳೆದು ತನ್ನೊಳಗೇ ಇಂಗಿಸಿಕೊಂಡ ಆಕೆ ವಾರಿಧಿಯ ಸೇರಹೊರಟಳೆಂದರೆ ಅಲ್ಲಿ ಲಜ್ಜೆಗೆಲ್ಲಿಯ ಸ್ಥಾನ?

ಮಳೆ ದಿನಗಳ ಆರಂಭಕ್ಕೆ ಮುನ್ನುಡಿಯಾಗಿ ನೀಲಾಗಸದಲ್ಲಿ ಕರಿ ಮೋಡಗಳು ಕಟ್ಟ ತೊಡಗಿದ್ದಾಗಲೇ ಕಲ್ಪನೆಯ ನವಿಲುಗಳು ಗರಿಬಿಚ್ಚುತ್ತವೆ. ಪರಿಸರದ ಸಿರಿ ಸೊಬಗು ಇಮ್ಮಡಿಸಿ, ಆಗ ತಾನೇ ನೆರೆದ ಕನ್ನಿಕೆಯಂತೆ ಮೈದುಂಬಿಕೊಳ್ಳಲು ಇನ್ನು ಹೆಚ್ಚು ದಿನಗಳಿಲ್ಲ. ಮನಸ್ಸು ಬೆಚ್ಚಗಾಗತೊಡಗಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ ಇವೆಲ್ಲ ಕೇವಲ ಭಾವ ಸಾಗರದ ಬಣ್ಣನೆಗಳಾಗಿಯೇ ಉಳಿದು ಹೋಗಿಬಿಟ್ಟರೆ ಏನು ಬಂತು ಪ್ರಯೋಜನ? ದಿನದಿಂದ ದಿನಕ್ಕೆ ಕರುನಾಡ ನೆಲ ಬರಡಾಗುತ್ತಿದೆ. ನೆಲೆ ಕಣ್ಮರೆಯಾಗುತ್ತಿದೆ. ಸೆಲೆ ಬತ್ತಿಹೋಗುತ್ತಿದೆ. ಹಸಿರು ಹಾಸಿದ ಹಸಿ ಮೈಯ್ಯಂತಿದ್ದ ನಮ್ಮ ಭೂಮಿ ಇಂದು ಕೃಷವಾಗಿ ತುಪ್ಪಳದ ಬಿರುಕು ತೋರುತ್ತಿದೆ. ಕರುನಾಡಿನ ವೈವಿಧ್ಯಕ್ಕೆ ಕರುಬುತ್ತಿದ್ದ ದಿನಗಳು ಕಣ್ಮರೆಯಾಗಿ ಅದ್ಯಾವುದೋ ಕಾಲವಾಗಿಬಿಟ್ಟಿದೆ.

ಇಪ್ಪತ್ತನೆಯ ಶತಮಾನದ ಕೊನೆಯ ದಶಕದಲ್ಲೇ ಹೀಗೊಂದು ಆತಂಕದ ಬೀಜಾಂಕುರ ನಮ್ಮ ನಡುವೆ ಆಗಿತ್ತು. ಜೀವ ವೈವಿಧ್ಯ, ನೀರ ಸಮೃದ್ಧಿ, ನೆಲದ ವೈಶಿಷ್ಟ್ಯ, ಹಸಿರ ಔನ್ನತ್ಯಗಳೆಲ್ಲವನ್ನೂ ಕಳಕೊಂಡು ಕರ್ನಾಟಕವೆಂಬುದು ದೇಶದ ಎರಡನೆ ಅತಿದೊಡ್ಡ ಮರುಭೂಮಿಯಾಗಿ ಪರಿವರ್ತನೆಯಾಗುತ್ತಿರುವ ವಾಸ್ತವ ನಮ್ಮೆದುರು ತೆರೆದುಕೊಂಡು ಹದಿನೈದು ವರ್ಷಗಳೇ ಕಳೆದುಹೋಗಿವೆ. ಹೀಗಿದ್ದೂ ಸನ್ನಿವೇಶದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮನೋಭಾವದಲ್ಲಿ ಯಾವ ವ್ಯತ್ಯಾಸವೂ ಇಣುಕಿಲ್ಲ. ಸ್ವಾರ್ಥದಲ್ಲಿ ಕೊಂಚವೂ ಕುಸಿತ ಕಂಡು ಬಂದಿಲ್ಲ. ಪರಿಸರದ ದುರ್ಬಳಕೆಯಲ್ಲಿ ಇನಿತೂ ಇತಿಮಿತಿಗಳು ನಿಲುಕಿಲ್ಲ. ಪರಿಣಾಮ ಕರ್ನಾಟಕ ಇಷ್ಟರಲ್ಲೇ ಮರುಭೂಮಿಯಲ್ಲಿ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡರೂ ಅಚ್ಚರಿಯಿಲ್ಲ.

ಸೋಜಿಗವೆನಿಸುತ್ತದೆ. ನಿಜ. ಕರ್ನಾಟಕವೆಂಬ ಹಸಿ ನೆಲ ಅದು ಹೇಗೆ ಮರುಭೂಮಿಯಾದೀತು? ಕಣ್ಣೆದುರು ಇಷ್ಟೆಲ್ಲ ಹಸಿರು ರಾಶಿ ನಿಂತಿದೆ. ಹಸಿ ನೆಲ ಹರವಿ ನಿಂತಿದೆ. ಪ್ರತಿ ವರ್ಷ ಈಪಾಟಿ ಮಳೆ ಸುರಿಯುತ್ತಲೇ ಇದೆ. ಕರಾವಳಿಯ ಸಮುದ್ರ ತೀರದಲ್ಲಿ ಬಿಟ್ಟರೆ, ನದಿ ದಂಡೆಗಳನ್ನು ಹೊರತುಪಡಿಸಿದರೆ ಇನ್ನೆಲ್ಲೂ ಮರಳ ರಾಶಿಯೇ ಕಾಣುತ್ತಿಲ್ಲ. ಹೀಗಿದ್ದೂ ಕರ್ನಾಟಕ ಎರಡನೇ ಅತಿ ದೊಡ್ಡ ಮರುಭೂಮಿಯೆಂದರೆ ನಂಬುವುದು ಹೇಗೆ? ಸಂಶಯ ಸಹಜವಾದದ್ದೇ. ಆದರೆ, ವಾಸ್ತವವನ್ನು ಗಮನಿಸಿದರೆ ಇದನ್ನು ಒಪ್ಪದೇ ವಿಧಿಯಿಲ್ಲ.

ಎಲ್ಲಕ್ಕಿಂತ ಮೊದಲು ಮರುಭೂಮಿಯೆಂದರೆ ಕೇವಲ ಮರಳ ರಾಶಿಯೆಂಬ ಭ್ರಮೆಯಿಂದ ಕಳಚಿಕೊಂಡರೆ ಮುಂದಿನದನ್ನು ಅರ್ಥ ಮಾಡಿಕೊಳ್ಳಲು ಸುಲಭವಾದೀತು. ಏಕೆಂದರೆ ಈವರೆಗಿನ ನಮ್ಮ ಕಲ್ಪನೆಯಲ್ಲಿ ಮರುಭೂಮಿಯೆಂದರೆ ನಮ್ಮ ಪಾಲಿಗೆ ದೂರದ ಗುಜರಾತ್, ರಾಜಸ್ಥಾನ...ಹೆಚ್ಚೆಂದರೆ ಮಧ್ಯಪ್ರದೇಶದ ಕೆಲ ಭಾಗಗಳು ಇವಿಷ್ಟೇ. ಇದರ ಹೊರತಾಗಿ ಮರಳುಗಾಡು ಇರಲು ಸಾಧ್ಯವೇ ಇಲ್ಲ. ಬೇಕಿದ್ದರೆ ನಮ್ಮದು ಒಣ ಭೂಮಿಯೆಂಬುದನ್ನು ಒಪ್ಪಿಕೊಳ್ಳುತ್ತಿದ್ದೆವು. ಆದರೆ ಈ ಮರೂಭೂಮಿ ಪಟ್ಟ ಹೇಗೆ ಬಂತು?ಇರಲಿ ಅದನ್ನು ಬದಿಗಿಡೋಣ. ನಮ್ಮ ರಾಜ್ಯದಲ್ಲಿ ೧೯೪೦ರ ಬಳಿಕ ಅರಣ್ಯ ನಾಶ ಆವರೆಗಿನ ನಾಶಕ್ಕಿಂತ ಮೂರರಷ್ಟು ಹೆಚ್ಚಿನ ವೇಗವನ್ನು ಪಡೆದುಕೊಂಡಿದೆ ಎನ್ನುತ್ತದೆ ಸರಕಾರಿ ಅಂಕಿ ಅಂಶಗಳು. ದಿನದಿಂದ ದಿನಕ್ಕೆ ನಮ್ಮ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅರಣ್ಯಗಳ ನಾಶವೆಂಬುದು ಮರೂಭೂಮಿಯ ಪ್ರಥಮ ಲಕ್ಷಣಗಳಲ್ಲಿ ಒಂದು. ಹಸಿರು ಕಣ್ಮರೆಯಾದ ಬಳಿಕವೇ ಅಲ್ಲಿ ಉಳಿದೆಲ್ಲ ಅಪಸವ್ಯಗಳು ವಿಜೃಂಭಿಸಲಾರಂಭಿಸುವುದು. ದುರಂತವೆಂದರೆ ಆದ ತಪ್ಪನ್ನು ಸರಿಪಡಿಸುವ ಭರದಲ್ಲಿ ನಾವು ಮಾಡಿದ್ದು ಮತ್ತೊಂದು ಘೋರ ತಪ್ಪನ್ನೇ. ಅರಣ್ಯವೆಂದರೆ ಅದು ಕೇವಲ ಒಂದುಷ್ಟು ಮರಗಳ ಸಾಲಲ್ಲ. ಅದು ವೈವಿಧ್ಯದ ಖನಿ. ಹಾಗೆಂದ ಮಾತ್ರಕ್ಕೆ ಸಸ್ಯ ವೈವಿಧ್ಯ ಮಾತ್ರವೇ ಎಂದೂ ಅಲ್ಲ. ಜೀವ ಮತ್ತು ಪಾರಿಸಾರಿಕ ವೈವಿಧ್ಯಗಳೆರಡನ್ನೂ ಒಳಗೊಂಡ ಜಲ, ಖನಿಜಗಳ ಸಮೃದ್ಧ ಸಂಪನ್ಮೂಲದ ಆಗರವನ್ನೇ ನಾವು ಅರಣ್ಯವೆಂದು ಗುರುತಿಸಿದ್ದೆವು. ಆದರೆ, ಈ ಸತ್ಯವನ್ನು ಅರಗಿಸಿಕೊಳ್ಳಲಾಗದ ಮನೋಭಾವ ಕೃತಕ ಅರಣ್ಯ ಸೃಷ್ಟಿಗೆ ಮುಂದಾಗಿ ಮಾಡಿದ್ದು ‘ಹಸಿರು ಮರುಭೂಮಿ’ಯನ್ನು. ಹೌದು ನೆಡು ತೋಪುಗಳ ಹೆಸರಿನಲ್ಲಿ ಕೇವಲ ಅಕೇಷಿಯಾದಂಥ ಏಕ ಜಾತೀಯ, ಶೀಘ್ರ ಬೆಳೆಯುವ ಸಸ್ಯಗಳನ್ನು ಬೆಳೆಸಲಾಯಿತೇ ವಿನಃ ಅಲ್ಲಿನ ಸಂಪನ್ಮೂಲಗಳ ಮರುಸೃಷ್ಟಿ ಅಥವಾ ಸಂರಕ್ಷಣೆ ಆಗಲೇ ಇಲ್ಲ. ಪರಿಣಾಮ ಮರುಭೂಮಿಯಾಗಿ ನಮ್ಮ ನೆಲೆ ಪರಿವರ್ತನೆಯಾಗುವುದು ನಿಲ್ಲಲೇ ಇಲ್ಲ.
ಅಷ್ಟೇ ಆಗಿದ್ದರೆ ಹೇಗೋ ನಿಭಾಯಿಸಬಹುದಿತ್ತು. ಆದರೆ ಅದು ಹಾಗಾಗಲಿಲ್ಲ. ಅದೇ ಅರಣ್ಯ ಭೂಮಿಯನ್ನು ಬಗೆದು ಗಣಿಗಾರಿಕೆಗೆ ಮುಂದಾದೆವು. ಸಾವಯವ ಶ್ರೀಮಂತಿಕೆಯಿಂದ ಮೆರೆಯುತ್ತಿದ್ದ ನೆಲದ ಮೇಲೆ ಗಣಿ ಧೂಳು ಆಕ್ರಮಣ ನಡೆಸಿತು. ಆಳಕ್ಕೆ ಇಳಿದಂತೆಲ್ಲ ಇದರ ವ್ಯಾಪ್ತಿ ವಿಸ್ತರಿಸುತ್ತಾ ಹೋಯಿತು. ಹಾಗೆ ಧೂಳು ಮುಚ್ಚಿಕೊಂಡ ಸ್ಥಳದಲ್ಲೆಲ್ಲಾ ಹುಲ್ಲೂ ಚಿಗುರತಲಾರದ ಸ್ಥಿತಿ ನಿರ್ಮಾಣಗೊಂಡಿತು. ಕರ್ನಾಟಕದ ನೆಲದಲ್ಲಿ ಎರಡನೇ ರೀತಿಯ ಮರುಭೂಮಿ ಸೃಷ್ಟಿಯಾಗಿದ್ದು ಆಗಲೆ.

ಅಷ್ಟರಲ್ಲಾಗಲೇ ಹಸಿರು ಕ್ರಾಂತಿಯ ಭ್ರಮೆಯಲ್ಲಿ ನಾವು ತೇಲತೊಡಗಿದೆವು. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ನಗರಗಳ ಬೇಡಿಕೆಗಳ ಪೂರೈಕೆಗೆ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸುವುದೇ ಪರಿಹಾರ ಎಂಬ ಹುಸಿ ವಾದಕ್ಕೆ ಪುಷ್ಟಿದೊರೆಯಿತು.ಅಳಿದುಳಿದ ಅರಣ್ಯವೂ ಕೃಷಿಭೂಮಿಯಾಗಿ ಪರಿವರ್ತನೆಗೊಳ್ಳತೊಡಗಿದಂತೆ ನೀರಿನ ಬೇಡಿಕೆಯೂ ಹೆಚ್ಚಿತು. ಕುಡಿಯುವ ನೀರಿಗೇ ತತ್ವಾರ ಎಂಬ ಪರಿಸ್ಥಿತಿಯಲ್ಲಿ ಒಂದೆಡೆ ಬೃಹತ್ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳತೊಡಗಿದರೆ, ಇನ್ನೊಂದೆಡೆ ಅಂತರ್ಜಲಕ್ಕೆ ಕನ್ನ ಕೊರೆಯುವ ಕಾಯಕ ಅವ್ಯಾಹತವಾಯಿತು. ಮರುಭೂಮಿಯ ಎರಡನೇ ದೊಡ್ಡ ಲಕ್ಷಣ ಅಂತರ್ಜಲದ ಕೊರತೆ. ಮೂರನೇಯದ್ದು ಭೂಮಿಯಲ್ಲಿನ ಪೋಷಕಾಂಶಗಳ ನಾಶ. ಇವೆರಡೂ ಒಟ್ಟೊಟ್ಟಿಗೇ ಆದದ್ದು ಈ ಹಂತದಲ್ಲಿ. ಬೋರ್‌ವೆಲ್‌ಗಳಿಂದ ಅಂತರ್ಜಲದ ನಾಶವಾದರೆ, ಬೃಹತ್ ನೀರಾವರಿ ಯೋಜನೆಗಳು ಮತ್ತೆ ಅರಣ್ಯ ಭೂಮಿಯನ್ನು ಕಬಳಿಸಿ ಸುತ್ತಲಿನ ಕೃಷಿ ಭೂಮಿಯನ್ನು ಜೌಗು ತಾಣವಾಗಿ ಪರಿವರ್ತಿಸಿತು. ಅಣೆಕಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳು ತನ್ನ ಸಾರ-ಸತ್ವ ಕಳೆದುಕೊಂಡು ನಿಸ್ಸಾರವಾಯಿತು.
ಒಟ್ಟಾರೆ ರಾಜ್ಯದ ಎಲ್ಲ ನಿಸರ್ಗ ಸಂಪನ್ಮೂಲಗಳೂ ನಮ್ಮ ಸ್ವಾರ್ಥಕ್ಕೆ ಬಳಕೆಯಾಗಿ, ಬಲಿಯಾಗತೊಡಗಿದಾಗಲೇ ಏರುಪೇರು ಆರಂಭವಾಗಿದ್ದು. ಅಭಿವೃದ್ಧಿಯ ಮಾನದಂಡ ಏನಾಗಬೇಕಿತ್ತೋ ಅದು ಸರಿದು ದಾರಿಬಿಟ್ಟುಕೊಟ್ಟಿದೆ. ಆ ಸ್ಥಳವನ್ನು ಆಕ್ರಮಿಸಿಕೊಂಡಿದ್ದು ನಮ್ಮ ಹಪಾಹಪಿತನ ಮಾತ್ರ. ಹೀಗಾಗಿ ನಿಸರ್ಗ, ನೀರು, ಗಾಳಿ ಇವೆಲ್ಲವುಗಳ ಬಗೆಗೆ ನಮಗಿದ್ದ ಭಾವನಾತ್ಮಕ ಸಂಬಂಧದ ಸಲೆಯನ್ನು ಬಲವಂತವಾಗಿ ಬತ್ತಿಸಿಕೊಂಡು ಬರಡಾಗಿದ್ದೇವೆ. ಮನ ಮರುಭೂಮಿಯಾದ ಮರುಗಳಿಗೆಯೇ ನೆಲ ಒಣಗಲು ತೊಡಗಿದ್ದು ನಮ್ಮ ಗಮನಕ್ಕೆ ಬರಲೇ ಇಲ್ಲ. ಪ್ರಗತಿಗಾಮಿ ಪ್ರವೃತ್ತಿಯಡಿ ಸಂಸ್ಕೃತಿ, ಸಂಪ್ರದಾಯಗಳು ಅರ್ಥ ಕಳೆದುಕೊಂಡುಬಿಟ್ಟವು. ಮಳೆ ಎಂಬುದು ಕೇವಲ ನೀರಸ ಪ್ರಕ್ರಿಯೆಯಾಗಿ ತೋರತೊಡಗಿದಾಗ ಅದರ ಮಹತ್ವ ಕಳೆದುಹೋಯಿತು. ಅದರ ಪಾವಿತ್ರ್ಯ ಕುಂಠಿತಗೊಂಡಿದ್ದೇ ಅದರ ಬಗೆಗಿನ ಆದರಕ್ಕೂ ಧಕ್ಕೆ ತಂದಿತು.
ಇವೆಲ್ಲವನ್ನೂ ಬದಿಗಿಟ್ಟು ಒಮ್ಮೆ ನೋಡಿ. ಮತ್ತೆ ಮಳೆಗಾಲ ಆರಂಭಗೊಳ್ಳುತ್ತಿದೆ. ಅದನ್ನೊಮ್ಮೆ ಪ್ರೀತಿಯಿಂದ ನಿರುಕಿಸಿ. ಭುವಿಯ ಮೇಲೆ ಬಿದ್ದೋಡುವ ಹನಿಹನಿಗಳಿಗೆ ಬೊಗಸೆಯೊಡ್ಡಿ ಗುಟುಕರಿಸಿ. ನಿಸರ್ಗ ಜೀವನದ ಸವಿಯ ಅರಿವಾದೀತು. ಮೊದಲ ಹನಿಯ ಸ್ಪರ್ಶಕ್ಕೆ ಸ್ಪಂದಿಸುವ ಮಣ್ಣಿನ ವಾಸನೆಯನ್ನೊಮ್ಮೆ ಆಘ್ರಾಣಿಸಿ. ಮನ ಪುಳಕಿತಗೊಂಡು ಸಕಾರಾತ್ಮಕ ಚಿಂತನೆ ಮೂಡುತ್ತದೆ. ನೆನೆದ ನೆಲವನ್ನು ಮೀಟಿ ಹೊರಹೊಮ್ಮುವ ಚಿಗುರನ್ನು ಅದರಷ್ಟಕ್ಕೆ ಅದೇ ಬೆಳೆಯಲು ಬಿಟ್ಟು ನೋಡಿ, ಮುಂದೊಂದು ದಿನ ನಿಮಗೇ ನೆರಳಾಗಿ ನಿಂತೀತು. ಹರಿದು ನದಿ, ಸಮುದ್ರದೆಡೆಗೆ ಓಡುವ ಹನಿಯನ್ನು ಪ್ರೀತಿಯಿಂದ ಮೈದಡವಿ ಅಂಗಳದಲ್ಲೇ ಆಶ್ರಯ ಕೊಟ್ಟು ನೋಡಿ. ನಂದನವನ ಚಿಗುರೀತು. ಹುಸಿ ದಾಹವನ್ನು ನಿಯಂತ್ರಿಸಿಕೊಂಡು ಭುವಿಯ ಒಡಲನ್ನು ಬಗೆಯುವುದ ನಿಲ್ಲಿಸುವ ಸಂಯಮ ತೋರಿ ಕರ್ನಾಟಕ ಮತ್ತೆ ಮೊದಲ ವೈಭವಕ್ಕೆ ಮರಳೀತು...

ಸೆಲೆ: ಒಣ ಅಂಕಿ ಅಂಶಗಳಲ್ಲಿ, ಸೋಗಲಾಡಿತನದ ಭಾಷಣಗಳಲ್ಲಿ, ಅಭಿವೃದ್ಧಿಯ ಹುಸಿ ಪರಿಕಲ್ಪನೆಗಳಲ್ಲಿ ಯಾವ ಸಾಧನೆಯೂ ಅಗಲಿಕ್ಕಿಲ್ಲ. ಮಗುವಿನ ಮುಗ್ಧತೆಯೊಂದಿಗೆ, ನಿಸ್ವಾರ್ಥ ಪ್ರೀತಿಯಲ್ಲಿ ನಿಸರ್ಗದ ತೋಳ್ತೆಕ್ಕೆಗೆ ಜಾರಿದರೆ ಸ್ವರ್ಗ ಕೈಗೆಟಕುತ್ತದೆ.Karnataka

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು

Videos