ಸಂತನ ತಪಸ್ಸಿಗೆ ದೇವನೇ ಒಲಿದಾನು; ಆದರೆ ಸರಕಾರ?

August 18, 2018 ⊄   By: ರಾಧಾಕೃಷ್ಣ ಭಡ್ತಿ

ಭಾಷಣಗಳನ್ನು ಮಾಡುತ್ತಲೇ ಬಂದಿದ್ದೇವೆ. ಭರವಸೆಗಳ ಮಹಾಪೂರವನ್ನು ಹರಿಸುತ್ತಲೇ ಇದ್ದೇವೆ. ಸರಕಾರಗಳು ಬದಲಾದಂತೆಲ್ಲ ಯೋಜನೆಗಳ ಹೆಸರೂ ಬದಲಾಗುತ್ತಿವೆ. ಆದರೆ ದೇವನದಿ ಗಂಗೆಯ ಸ್ವರೂಪ ಮಾತ್ರ ಬದಲಾಗುವುದಿಲ್ಲ. ಬದಲಿಗೆ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಒಂದಿಲ್ಲೊಂದು ರೀತಿಯಲ್ಲಿ ಮತ್ತೆ ಗಂಗೆಯ ಹರಿವನ್ನು ತುಂಡರಿಸುವ ಯೋಜನೆಗಳು ತಲೆ ಎತ್ತುತ್ತಲೇ ಇರುತ್ತವೆ. ಮೈಯಲ್ಲಾ ಕಣ್ಣಾಗಿಸಿಕೊಂಡು ಗಂಗೆಯನ್ನು ಇಂಥ ಬೃಹತ್ ಯೋಜನೆಗಳ ಲಾಬಿಯಿಂದ ರಕ್ಷಿಸುವುದು ಹೇಗೆಂಬುದೇ ತಿಳಿಯ ದಾಗಿದೆ. ಹೊರಗಿನ ವೈರಿಗಳಾದರೆ ಸೈನ್ಯವನ್ನು ನೇಮಿಸಬಹುದು. ಯುದ್ಧ ಸಾರಿ ದರೆ, ದಂಡೆತ್ತಿ ಬಂದರೆ ನಾವೂ ಖಾಡಾಖಾಡಿ ಹೋರಾಡಬಹುದು. ದೇಶ ದೊಳಗಿನವರು ದಂಗೆದ್ದರೆ ಬಲಪ್ರಯೋಗಿಸಿ ಹತ್ತಿಕ್ಕಬಹುದು. ಆದರೆ ದೇಶ ಕ್ಕೇನೋ ಮಹದುಪಕಾರ ಮಾಡಿಬಿಡುತ್ತೇವೆಂಬ ಹೆಸರಿನಲ್ಲಿ ಯೋಜನೆ ಗಳನ್ನು ರೂಪಿಸಿ ಕೊಳ್ಳೆ ಹೊಡೆಯುವ ‘ಸಂಪನ್ನ ಫಟಿಂಗ’ರನ್ನು ನೀವಾಳಿಸುವುದು ಹೇಗೆ?

ಹಾಗೂ ಗಂಗೆಯನ್ನು ಉಳಿಸಿಕೊಳ್ಳಲು ಪ್ರತಿಭಟನೆ, ಹೋರಾಟ, ವಿರೋಧ ಕ್ಕಿಳಿದರೆ ಅಂಥವರನ್ನು ಸರಕಾರ ನಡೆಸಿಕೊಳ್ಳುವ ರೀತಿ ರೇಜಿಗೆ ಹುಟ್ಟಿಸುತ್ತದೆ. ಗಂಗೆಗಾಗಿ ಜೀವ ಅರ್ಪಿಸಿದ ಶ್ರೀ ನಿಗಮಾನಂದರನ್ನು ಉಳಿಸಿಕೊಳ್ಳದ, ಸಂತ ನಾಗೇಶ್ವರರನ್ನು ಇನ್ನಿಲ್ಲದಾಗಿಸಿದ ನಮ್ಮನ್ನಾಳುವ ಕೃತಘ್ನ ಮಂದಿ ಇದೀಗ ಗಂಗೆ ಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಿರುವ, ಗಂಗಾ ತಟದಲ್ಲಿರುವ ಐತಿಹಾಸಿಕ ಧಾರಿ ದೇವಿ ವಿಸ್ಥಾಪನೆಯ ವಿರುದ್ಧ ಐವತ್ತು ದಿನಗಳಿಂದ ನಿರಶನ ತಪಸ್ಸನ್ನು ಆಚರಿಸಿದ, ಗಂಗಾ ತಪಸ್ಯೆಯೇ ಜೀವನ ಪರಮೋಚ್ಚ ಆರಾಧನೆ ಎಂಬ ನಿರ್ಧಾ ರಕ್ಕೆ ಬಂದಿರುವ ಜ್ಞಾನಸ್ವರೂಪ ಸಾನಂದ ಸ್ವಾಮೀಜಿ(ಪ್ರೊ.ಜಿ.ಡಿ. ಅಗರವಾಲ್) ಅವರನ್ನೂ ಅಂಥದೇ ನಿರ್ಲಕ್ಷ್ಯದಿಂದ ನೋಡುತ್ತಿದೆ. ಈಗ್ಗೆ ಮೂರ್ನಾಲ್ಕು ವರ್ಷಗಳ ಹಿಂದೊಮ್ಮೆ ಗಂಗೆಗಾಗಿ ನಿರಶನ ಕುಳಿತಿದ್ದ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ೩೦೯ ಎ ಅಡಿ ಆತ್ಮಹತ್ಯೆ ಯತ್ನದ ಮೊಕದ್ದಮೆಯನ್ನು ದಾಖಲಿಸಿತ್ತು.
ಅವರು ಮನಸ್ಸು ಮಾಡಿದ್ದಿದ್ದರೆ ಅವರಿಗಿರುವ ಪದವಿಗಳು, ವಿದ್ವತ್ತು, ಜನ ಬೆಂಬಲ, ಅಧಿಕಾರಗಳನ್ನು ಬಳಸಿಕೊಂಡು ಇನ್ನಿಲ್ಲದಂತೆ ಐಶಾರಾಮಿ ಬದುಕು ನಡೆಸಬಹುದಿತ್ತು. ಅದೂ ಬೇಡ ನೆಮ್ಮದಿಯಾಗಿ ಒಡಾಡಿಕೊಂಡು, ಕುಟುಂಬ- ಬಂಧುಗಳ ತೆ ಹಾಯಾಗಿರಬಹುದಿತ್ತು. ಒಂದೊಮ್ಮೆ ಸಂನ್ಯಾಸದ ಇಚ್ಛೆಯೇ ಇದ್ದರೂ ಅಧ್ಯಾತ್ಮದ ಬದುಕಲ್ಲಿ ವಿಹರಿಸಬಹುದಾಗಿತ್ತು.
ಎಲ್ಲವನ್ನೂ ನಿರಾಕರಿಸಿ ೮೫ರ ಈ ಇಳಿವಯಸ್ಸಲ್ಲಿ ಗಂಗೆಗಾಗಿ ತಮ್ಮ ಜೀವ ಸಮರ್ಪಿಸಿಕೊಂಡಿದ್ದಾರೆ. ದೇವನದಿಯ ಸಂರಕ್ಷಣೆಗಾಗಿ ಮಾಡು ಇಲ್ಲವೆ ಮಡಿ ಎಂಬ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ನಮ್ಮ ಸರ್ಕಾರಗಳು ಈಗ ಗಂಗೆಯ ಪಾವಿತ್ರ್ಯ ಮರಳಿ ತರಲು ಏನು ಮಾಡುತ್ತವೋ ಇಲ್ಲವೋ, ಜನ ಎಚ್ಚೆತ್ತುಕೊಂಡು ನದಿಯ ಮಾಲಿನ್ಯ ತಡೆಯುತ್ತಾರೋ ಇಲ್ಲವೋ. ಆದರೆ ಈ ಗಂಗಾಪುತ್ರ ಮಾತ್ರ ಮಾತ್ರ ಗಂಗೆಯ ತಟ ಮತ್ತು ಗಂಗಾ ಆಂದೋಲನ, ಹೋರಾಟಗಾರರು, ಸರಕಾರ, ಮಾಧ್ಯಮ ಎಲ್ಲದರಿಂದ ದೂರವಿದ್ದು, ನಿರಶನ ನಡೆಸುತ್ತಲೇ ಇದ್ದಾರೆ.
ಅದು ಹೋರಾಟವಲ್ಲ. ಗಂಗೆಗಾಗಿ ತಪಸ್ಸು. ಗಂಗಾ ಮಡಿಲಲ್ಲಿ ಜನಿಸಿದ ಆ ಮಾತೆಯ ಪ್ರತಿ ಮಕ್ಕಳೂ ಮಾಡಬೇಗಿರುವ ತಪಸ್ಸು. ಬಹುಶಃ ಇದಕ್ಕಾಗಿಯೇ ಸ್ವಾಮಿ ಸಾನಂದರು ಯಾರಿಗೂ ಕಷ್ಟ ಕೊಡದೆ ತಾವೇ ಅದನ್ನು ಅನುಭವಿಸುವಲ್ಲಿ ಮಗ್ನರಾಗಿದ್ದಾರೆ. ಇದೇ ಸತ್ಯಾಗ್ರಹದ ನಿಜವಾದ ಪರಿಭಾಷೆ. ಇದು ಪುರಾತನ ಭಾರತೀಯ ಸಂಸ್ಕೃತಿಯ ಮಾರ್ಗವೂ ಹೌದು, ಗಾಂಧೀ ಮಾರ್ಗವೂ ಹೌದು. ಆಳುವವರು, ಆಡಿಕೊಳ್ಳುವವರು ಇದನ್ನು ಮೂರ್ಖತನ ಎನ್ನಬಹುದು, ಆದರೆ, ಇದು ಒಬ್ಬ ತಾಯಿಗಾಗಿ ಪುತ್ರ ಮಾಡುತ್ತಿರುವ ಬಲಿದಾನದ ಹೆಜ್ಜೆ ಎಂಬುದು ಮಾತ್ರ ಸತ್ಯ. ಏನಾಗುತ್ತದೋ, ಇಲ್ಲವೋ; ಗಂಗೆ ಮತ್ತೆ ಶುದ್ಧಗೊಳ್ಳುತ್ತಾಳೋ ಇಲ್ಲವೋ, ಆಕೆ ಮೇಲಿನ ದೌರ್ಜನ್ಯ ನಿಲ್ಲುತ್ತದೋ ಇಲ್ಲವೋ ಆದರೆ ಸ್ವಾಮೀಜಿ ಈ ತಪಸ್ಸನ್ನು ಭವಿಷ್ಯ ಎಂದೆಂದಿಗೂ ಗೌರವದೊಂದಿಗೆ ನೆನಪಿಸಿಕೊಳ್ಳುತ್ತದೆ.

ಹಾಗೆಂದು ಸ್ವಾಮಿ ಸಾನಂದರ ಗಂಗೆಗಾಗಿನ ಇಂಥ ನಿರಶನ ಇದೇ ಮೊದಲೇನೂ ಅಲ್ಲ. ಇದಕ್ಕೆ ಮುಂಚೆಯೂ ಅವರು ಅನೇಕ ಬಾರಿ ಹೀಗೆ ಉಪವಾಸ ಕುಳಿತು ಸಾವಿನ ದವಡೆಗೆ ಸಿಲುಕಿ ವಾಪಸು ಬಂದಿದ್ದಾರೆ. ಅವರ ಯಾವ ಪ್ರಯತ್ನಗಳನ್ನೂ ಕೇವಲವಾಗಿ ನೋಡುವುದು ಯಾರಿಗೂ ಸಾಧ್ಯವಾಗು ವುದೇ ಇಲ್ಲ. ಸ್ವತಃ ಸರಕಾರಕ್ಕೂ. ಉತ್ತರಕಾಶಿಯ ಮೇಲೆ ಮೂರು ಅಣೆಕಟ್ಟು ಗಳನ್ನು ಕಟ್ಟುವ ಯೋಜನೆ ರದ್ದುಗೊಳಿಸುವಲ್ಲಿ ಅವರು ತೋರಿದ ಬದ್ಧತೆಯ ನ್ನಂತೂ ಯಾರೂ ಕಡೆಗಣಿಸುವಂತಿಲ್ಲ. ಅವರ ಉಪವಾಸ ಮತ್ತು ಬದ್ಧತೆಯ ಮಹತ್ವವೇ ಅಂಥದು.

ಆದರೆ, ಸ್ವಾಮಿ ಸಾನಂದರು ಉಪವಾಸಕ್ಕೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ದಿರುವುದು ಇದು ಮೊದಲನೇ ಬಾರಿ. ರಾಜಕೀಯ ನಾಯಕರ ಕಡೆಯಿಂದ ಲಾಗಲೀ, ಸಮಾಜದಿಂದಾಗಲಿ, ಗಂಗೆ ಹೆಸರಿನಲ್ಲಿ ಹೆಸರು ಮಾಡಿಕೊಳ್ಳುತ್ತಿರುವ ಹಲವು ಸಂಘಟನೆಗಳಾಗಲೀ, ರಾಜಕೀಯ ಪಕ್ಷಗಳಾಗಲೀ ಇನ್ನೂ ಈ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. ಸ್ವತಃ ಗಂಗಾ ಪುತ್ರ ಎಂದು ಕರೆದುಕೊಳ್ಳುತ್ತಿರುವ ಪ್ರಧಾನಿ ಮೋದಿಯವರೂ ಈ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಗಂಗಾ ಆಂದೋಲನದ ಸಿಪಾಯಿಗಳು ಎಂದೇ ಕರೆದುಕೊಂಡಿರುವ ಶಂಕರಾಚಾರ್ಯ ಸ್ವಾಮಿ ಸ್ವರೂಪಾ ನಂದ ಸರಸ್ವತಿ, ಉಮಾಭಾರತಿ, ಸ್ವಾಮಿ ರಾಮ್ದೇವ್, ಆಚಾರ್ಯ ಜಿತೇಂದ್ರ, ಸ್ವಾಮಿ ಚಿನ್ಮಯಾನಂದರವರೆಗೆ ಯಾರೊಬ್ಬರೂ. ನಿರಶನ ಕುಳಿತು ಒಂದೂವರೆ ತಿಂಗಳಾಗಿದ್ದರೂ ಯಾವ ಗಂಗಾಪರ ಸಂಘಟನೆಗಳೂ ಇದುವರೆಗೆ ಸಾನಂದರನ್ನು ಭೇಟಿ ಮಾಡುವ ಮನಸ್ಸು ಮಾಡಿಲ್ಲ. ಸುದ್ದಿಯ ಹಸಿವಿರುವ ಯಾವ ಮಾಧ್ಯಮಗಳೂ ಈ ವಿಷಯದಲ್ಲಿ ತಿರುಗಿ ನೋಡಿಲ್ಲ. ಇದು ಅಚ್ಚರಿ ಅಲ್ಲವೇ?

ಗಂಗೆ, ಭಾಗೀರಥಿ, ಅಲಕಾನಂದ, ಮಂದಾಕಿನಿ ಮುಂತಾದ ಹಲವು ನದೀ ತೀರಗಳಲ್ಲಿ ನಡೆಯುತ್ತಿರುವ ಹಲವು ಪರಿಯೋಜನೆಗಳನ್ನು ನಿಲ್ಲಿಸಬೇಕೆಂಬುದು ಸಾನಂದರ ಬೇಡಿಕೆ. ಗಂಗಾ ಮತ್ತು ಅದನ್ನು ಕೂಡುವ ಇತರ ನದಿಗಳ ನೀರನ್ನು ಕಲುಷಿತಗೊಳಿಸುವ ಚರ್ಮ ಮತ್ತು ಪೇಪರ್ ಕೈಗಾರಿಕೆಗಳನ್ನು ನದೀತೀರದಿಂದ ೫೦ ಕಿಮೀ ದೂರದಲ್ಲಿಡಬೇಕು ಎಂಬುದು ಈ ಬೇಡಿಕೆಯ ಸ್ಪಷ್ಟ ರೂಪ. ನದೀ ತೀರದಲ್ಲಿ ಸ್ನಾನ ಮಾಡುವ ಬಗ್ಗೆಯೂ ಈ ಬೇಡಿಕೆಯಲ್ಲಿ ನಿಯಮಾವಳಿಗಳಿದ್ದವು. ಆದರೆ ಅದೆಲ್ಲವೂ ಇಲ್ಲಿಯವರೆ ಗಂತೂ ಈಡೇರಿಲ್ಲ. ಅದಕ್ಕಾಗಿಯೇ ಸ್ವಾಮಿ ಸಾನಂದರ ಹೊಸ ಹೋರಾಟ ಶುರುವಾಗಿರುವುದು.
ಈ ನಿರಶನದ ಹಿಂದೆ ಸ್ವಾಮಿ ಸಾನಂದರ ನೋವಿದೆ. ಸರ್ಕಾರ ಕಳೆದ ವರ್ಷ ಕ್ರಮದ ಭರವಸೆ ನೀಡಿತ್ತು. ಅದರಲ್ಲೂ ಮುಖ್ಯವಾಗಿ ಲೋಹಾರಿಂಗ್-ಪಾಲ್ ಸೇರಿ ದಂತೆ ಭಾಗೀರಥಿ ನದಿಗೆ ರೂಪಿಸಿರುವ ಜಲವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸುತ್ತಲೇ ಬರಲಾಗುತ್ತಿದೆ. ಅಲಕಾನಂದೆಗೂ ಇಂಥದ್ದೇ ಯೋಜನೆ ಗಳ ಭಾರ ಕಾಡುತ್ತಿದೆ. ಆದರೆ ಈವರೆಗೆ ಯೋಜನೆಯನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಲಿಖಿತ ರೂಪದ ಭರವಸೆ ನೀಡದೇ ಸರಕಾರ ನುಣುಚಿಕೊಂಡಿದೆ. ಭರವಸೆ ಯನ್ನೂ ಸರ್ಕಾರ ಈಡೇರಿಸಿರಲಿಲ್ಲ. ಇದನ್ನು ಖಂಡಿಸಿ, ಸಂತ ಸಾನಂದರನ್ನು ಬೆಂಬಲಿಸಿ ಕಳೆದ ಜುಲೈ ೨೦ರಂದು ದಿಲ್ಲಿಯ ರಾಜಘಾಟ್ನಲ್ಲಿ ದೇಶದ ಎಲ್ಲ ಪ್ರಮುಖ ಪರಿಸರ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು, ಮುಖಂಡರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಋಷಿಕೇಶದಿಂದ ದಿಲ್ಲಿಯವರೆಗೆ ಯಾತ್ರೆಯನ್ನೂ ನಡೆಸ ಲಾಗಿದೆ. ಡಾ.ರಾಜೆಂದ್ರ ಸಿಂಗ್, ಪ್ರೊ. ವಿಕ್ರಮ್ ಸೊನಿ, ಶಾರದಾ ಯಾದವ್ ಅವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಹಿರಿಯ ನಾಯಕರಿಗೆ ಮನವಿಯನ್ನೂ ಸಲ್ಲಿಸಲಾಗಿದೆ.ಈ ಹಿಂದೆ ಗಂಗೆಯ ಉಪನದಿ ಅಲಕಾನಂದೆಗೆ ಉತ್ತರಾಖಂಡದ ರುದ್ರಪ್ರಯಾಗದ ಬಳಿ ಕಟ್ಟಲಾಗು ತ್ತಿರುವ ಅಣೆಕಟ್ಟಿನಿಂದ ಅಲ್ಲಿನ ಐತಿಹಾಸಿಕ ಧಾರಿ ದೇವಿ ಕ್ಷೇತ್ರ ಮುಳುಗಡೆಯ ಭೀತಿಯನ್ನು ಎದರಿಸುತ್ತಿತ್ತು. ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೇವಿ ಮೂರ್ತಿಯನ್ನು ಸ್ಥಳಾಂತರಿಸಿತ್ತು. ಇದನ್ನು ವಿರೋಧಿಸಿ ಹಾಗೂ ಅಣೆಕಟ್ಟುಗಳ ಸರಣಿ ಯಿಂದ ಹಿಮಾಲಯ ಭಾಗದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯುವ ಉದ್ದೇಶದಿಂದ ಸ್ವಾಮೀಜಿ ತಮ್ಮ ಗಂಗಾ ತಪಸ್ಯ ಆರಂಭಿಸಿದ್ದರು. ಅವರ ಪ್ರತಿಭಟನೆ ನಡುವೆಯೂ ಧಾರೀ ದೇವಿಯನ್ನು ಸ್ಥಳಾಂತರಿಸಲಾ ಗಿತ್ತು. ಇದರ ವಿರುದ್ಧ ಪ್ರಕೃತಿ, ದೈವಿ ಶಕ್ತಿಯ ಮುನಿಸೋ ಎಂಬಂತೆ ಕೇದಾರದಲ್ಲಿ ಮರುದಿನವೇ ಬೃಹತ್ ಪ್ರವಾಹ ಕಾಣಿಸಿ ಲಕ್ಷಾಂತರ ಜೀವ ಹಾನಿಯಾಗಿದೆ.
ಭಾಗೀರಥಿಯ ಸ್ಥಿತಿಯನ್ನು ಕಂಡು ಬಂದ ಮನಸ್ಸಿ ನೊಳಗೆ ನಿರಂತರ ಇದೇ ಚಿಂತನೆಗಳ ಕುದಿ ಮರಳು. ಬಹುಶಃ ಪ್ರಿಯಾ ಪಟೇಲ್ ಎಂಬುವವರು ಭಾಗೀರಥಿ ಅಣೆಕಟ್ಟು ವಿರೋಧಿಸಿ ಕಾನೂನು ಹೋರಾಟಕ್ಕೆ ಇಳಿ ಯದೇ ಇದ್ದಿದ್ದರೆ ಜಿ.ಡಿ. ಅಗರ್ವಾಲರು ಇವತ್ತು ಕಾವಿ ತೊಡುವ ಪ್ರಮೇಯ ಬರುತ್ತಿರಲಿಲ್ಲವೇನೋ. ಹಗೆಂದು ಅದಕ್ಕೂ ಮುನ್ನ ಅವರು ಪರಿಸರ ಹೋರಟದಿಂದ ದೂರ ಉಳಿದಿದ್ದರು ಎಂದೇನಲ್ಲ. ಅವರ ಪರಿಸರ ಪರ ಹೋರಾಟಕ್ಕೆ ಸಾಕಷ್ಟು ಸುದೀರ್ಘ ಇತಿಹಾಸವೇ ಇದೆ. ಅದರೆ ಇದೀಗ ಅಂಥ ಹೋರಾಟಕ್ಕೆ ಭಾರತೀಯ ಸಾಂಸ್ಕೃತಿಕ ನೆಲೆಯಲ್ಲಿಷ್ಟು ಅಧಿಕೃತತೆ.

೨೦೦೭ರ ಒಂದು ದಿನ ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಬಯಸಲಾಗಿದ್ದ ಅಣೆಕಟ್ಟೊಂದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಪ್ರಿಯಾ ಪಟೇಲ್ ಎಂಬುವವರು ಎಂ.ಸಿ. ಮೆಹ್ತಾರನ್ನು ಕಾಣಲು ಬಂದಿದ್ದಾಗ ಅಗರ್ವಾಲರೂ ಅವರ ಜೊತೆ ಇದ್ದರು.
ಎಲ್ಲರೂ ಈ ಅಣೆಕಟ್ಟು ಮೊದಲಾದ ಯೋಜನೆಗಳು ಗಂಗಾಮಾತೆಯನ್ನು ಬರಿದು ಮಾಡುತ್ತಿರುವ ಬಗೆ ಕಾಣಲು ಹೋದರು. ಅಲ್ಲಿನ ದೃಶ್ಯವನ್ನು ಅಗರ್ವಾಲರಿಗೆ ನಂಬಲಾಗಲಿಲ್ಲ. ಮೂವತ್ತು ವರ್ಷಗಳ ಹಿಂದೆ ಮನೇರಿ ಭಾಲಿ ಯೋಜನೆ ಶುರುವಾಗಿದ್ದಾಗ ಅಲ್ಲಿ ಹೋಗಿದ್ದ ಅಗರ್ವಾಲರು, ಈಗ ಈ ದೃಶ್ಯವನ್ನು ನೋಡಿ ದಿಗ್ಭ್ರಾಂತರಾದರು. ಮನೇರಿ ಭಾಲಿಯ ಕೆಳ ಪ್ರದೇಶಗಳಲ್ಲಿ ಭಾಗೀರಥಿಯೇ ಕಣ್ಮರೆಯಾಗಿದ್ದಳು! ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ನದಿಯ ಸಮಗ್ರ ನೀರನ್ನು ಕಾಲುವೆಗಳ ಮೂಲಕ ಬೇರೆಡೆ ಸ್ಥಳಾಂತರಿಸುತ್ತಿರು ವುದನ್ನು ನೋಡಿ ಅಗರ್ವಾಲರ ಮನಸ್ಸು ಕದಡಿತು.ಬಹಳ ದಿನಗಳ ಕಾಲ ಯೋಚಿಸಿ, ೨೦೦೮ ರ ರಾಮನ ವಮಿಯಂದು ಅವರೊಂದು ದೃಢ ಸಂಕಲ್ಪ ಮಾಡಿ ದರು; ಉಳಿದ ನನ್ನ ಜೀವನವೆಲ್ಲವೂ ಗಂಗೆಗಾಗಿಯೇ ಸಮರ್ಪಿತ. ಗಂಗೆ ಒಂದು ಪರಿಸರದ ಸಂಗತಿಯಲ್ಲ. ಅದೊಂದು ದೈವೀ ಶಕ್ತಿ. ಅದು ನನ್ನ ವ್ಯಕ್ತಿತ್ವದ ಗುರುತು. ಅದು ನನ್ನ ನಂಬಿಕೆ. ಆಕೆ ನನ್ನ ತಾಯಿ. ಎಲ್ಲೆಡೆಯೂ ಗಂಗೆಯ ಹರಿವು ಕ್ಷೀಣಿಸುತ್ತಿದೆ. ಎಲ್ಲ ಕಾರ್ಖಾನೆಗಳ ತ್ಯಾಜ್ಯಗಳಿಂದ ಹಿಡಿದು ನಗರಗಳ ಮಲ ಮೂತ್ರಗಳೂ ಗಂಗೆ ಸೇರುತ್ತಿವೆ. ಗಂಗೆಯ ಅವಿಚ್ಛಿನ್ನ ಪ್ರವಾಹಕ್ಕೆ ಅಡೆ ತಡೆಗಳನ್ನು ಕಟ್ಟುತ್ತಿದ್ದೇವೆ. ದೇವನದಿಗೂ ಆಧುನಿಕ ಜಗತ್ತು ಲಗ್ಗೆಯಿಡುತ್ತಿದೆ. ನನ್ನ ತಾಯಿಯ ರಕ್ತವನ್ನು ಹೀರುವುದನ್ನು ನೋಡುತ್ತಾ ನಾನು ಸುಮ್ಮನಿರಲಾರೆ. ಇದು ಕಷ್ಟವೆನಿಸಿದರೂ ನನಗೊಂದು ಸೌಭಾಗ್ಯವಿದೆ. ಎನ್ನುತ್ತಾ ಬಹಳ ದಿನಗಳ ಆತ್ಮವಿಮರ್ಶೆಯ ನಂತರ ಅಗರ್ವಾಲರು ಒಂದು ಗಟ್ಟಿ ತೀರ್ಮಾನಕ್ಕೆ ಬಂದರು. ಗಂಗಾಮಾತೆಗಾಗಿ ತನ್ನ ಸರ್ವಸ್ವವನ್ನು ತ್ಯಜಿಸುವ ಪಣ ತೊಟ್ಟರು. ಗಂಗೆಯನ್ನು ಉಳಿಸಲು ಜೀವವನ್ನೂ ಅಡ ವಿಡಲು ಸಜ್ಜಾದರು. ಗಂಗೋತ್ರಿ ಮತ್ತು ಉತ್ತರಕಾಶಿಯ ನಡುವಿನ ಭಾರೀ ಪ್ರಮಾಣದ ಯೋಜನೆಗಳನ್ನು ಕೈಬಿಡು ವುದಿಲ್ಲವಾದರೆ ಆಮರಣಾಂತ ಉಪವಾಸ ಮಾಡುವು ದಾಗಿ ಘೋಷಿಸಿ ಬಿಟ್ಟರು - ೨೦೦೮ ರ ಜೂನ್ ತಿಂಗಳು.ಏಳು ದಿನಗಳ ಉಪವಾಸಕ್ಕೆ ಸ್ಪಂದಿಸಿದ ಉತ್ತರಾ ಖಂಡ್ ರಾಜ್ಯ ಸರ್ಕಾರ ಭೈರೊಘಾಟಿ ಮತ್ತಿ ಪಾಲಾ ಮನೇರಿ ಯೋಜನೆಗಳನ್ನು ಕೈಬಿಟ್ಟಿತು. ಕೇಂದ್ರ ಸರ್ಕಾರ ಲೊಹಾರಿನಾಗ್-ಪಾಲ್ ಯೋಜನೆ ಸಾಧಕ- ಬಾಧಕ ಗಳನ್ನು ವಿಮರ್ಶಿಸಲು ಸಮಿತಿಯೊಂದನ್ನು ರಚಿಸಿ ೩ ತಿಂಗಳ ಕಾಲಾವಕಾಶ ಕೊಟ್ಟಿತು. ಇವುಗಳಿಂದ ತಮ್ಮ ಉಪವಾಸ ಕೈಬಿಟ್ಟ ಅಗರ್ವಾಲರು ಮೂರು ತಿಂಗಳು ಕಾದರು. ಏನೂ ಆಗಲಿಲ್ಲ. ಬೇಸತ್ತ ಅಗರ್ವಾಲರು ಮತ್ತೆ ಆಮರಣಾಂತ ಉಪವಾಸ ಕೈಗೊಂಡರು. ಈ ಬಾರಿ ಕೇಂದ್ರ ಸರ್ಕಾರದ್ದೂ ದಪ್ಪ ಚರ್ಮವಾಗಿತ್ತು. ಒಂದು ದಿನವಲ್ಲ. ಎರಡು ದಿನವಲ್ಲ. ವಾರ, ತಿಂಗಳು. ಕೊನೆಗೆ ೩೭ ದಿನಗಳ ನಂತರ, ಪ್ರಧಾನಿ ಕಚೇರಿಯ ಮಧ್ಯಸ್ಥಿಕೆ ಯಿಂದ ಕೇಂದ್ರ ಸರ್ಕಾರದ ವಿದ್ಯುತ್ ಮಂತ್ರಾಲಯ ಲೊಹಾರಿನಾಗ್-ಪಾಲ ಯೋಜನೆ ಕೈಬಿಡುವ ಆದೇಶ ಹೊರಡಿಸಿತು. ೩೮ನೇ ದಿನ ಅಗರ್ವಾಲರು ಉಪವಾಸ ಕೈಬಿಟ್ಟರು.
ಅಂದಿನಿಂದ ಇಂದಿನವರೆಗೂ ಮಾತು ಕೊಟ್ಟು ಮತ್ತೆ ಮುರಿಯುವ ಸರ್ಕಾರದ ವಿರುದ್ಧ ಅಗರ್ವಾಲರ ಉಪವಾಸದ ತಪಸ್ಸುಗಳೂ ನಡೆದೇ ಇವೆ. ಮೂರು ಭಾರೀ ಯೋಜನೆಗಳನ್ನು ಗಂಗೋತ್ರಿ ಮತ್ತು ಉತ್ತರಕಾಶಿಯ ನಡುವಿನಲ್ಲಿ ನಿಲ್ಲಿಸಲಾಯಿತು. ಅಲ್ಲದೇ ಈ ಪ್ರದೇಶವನ್ನು ಸೂಕ್ಷ್ಮ ಪರಿಸರದ ತಾಣ ಎಂದೂ ಸರ್ಕಾರ ಘೋಷಿಸಿತು. ಗಂಗೆಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿತು. ಅಷ್ಟರಲ್ಲೇ ಗಂಗಾ ಮಾತೆಯ ಪರಿಚಾರಕರಾಗಿ, ಪರಿವ್ರಾಜಕರಾಗುವ ದೀಕ್ಷೆ ತೊಟ್ಟರು. ಜಗದ್ಗುರು ಶ್ರೀ ಶಂಕರಾಚಾರ್ಯ ದ್ವಾರಕಾಸಂಸ್ಥಾನ ಹಾಗೂ ಜ್ಯೋತಿಷ್ಪೀಠದ ಅಧೀಶ್ವರರಾದ ಸ್ವಾಮೀ ಸ್ವರೂಪಾನಂದ ಸರಸ್ವತಿಗಳ ಶಿಷ್ಯರಾದ ಸ್ವಾಮೀ ಅವಿಮುಕ್ತೇಶ್ವರಾನಂದ ಸರಸ್ವತಿಗಳಿಂದ ಸಂನ್ಯಾಸ ಪಡೆದು ಸ್ವಾಮೀ ಜ್ಞಾನಸ್ವರೂಪ ಸಾನಂದರಾದರು. ಗಂಗೆಯ ಪರಿಶುದ್ಧಿಗಾಗಿ ಹಗಲು ರಾತ್ರಿ ಗಂಗೆಯ ತಪಸ್ಸಿನಲ್ಲೇ ಮುಂದುವರೆಯುತ್ತಿದ್ದಾರೆ.
ವೈಜ್ಞಾನಿಕ ವಿಮರ್ಶೆಗಳಲ್ಲಿ ಸಿದ್ಧಹಸ್ತರಾದ ಸ್ವಾಮೀಜಿ, ಈ ದೇಶದ ಆಧ್ಯಾತ್ಮಿಕ ಸೊಬಗಿಗೆ ತಾವಾಗಿಯೇ ಶರಣಾದವರು. ಗಂಗೆಯ ಭವಿಷ್ಯವನ್ನು ಯಾವುದೋ ಒಂದು ತಜ್ಞ ಸಮಿತಿಯೋ, ಸರ್ಕಾರವೋ, ಒತ್ತಡ ಹೇರುವ ಸಮುದಾಯಗಳೋ ಮಾಡಿದರೆ ಸಾಲದು. ಅದು ಧರ್ಮಾಚಾರ್ಯರ ಒಪ್ಪಿಗೆಯಂತೆ ನಡೆಯ ಬೇಕು. ಇದೊಂದು ಬರಿಯ ನೀರಿನ ನದಿಯಲ್ಲ. ಇದು ನಮ್ಮ ನಿಮ್ಮೆಲ್ಲರ ಭಾಗ್ಯದೇವತೆ ಎನ್ನುತ್ತಾ ತಪಸ್ಸಿನಲ್ಲಿ ಮುಂದುವರೆದಿದ್ದಾರೆ ಸ್ವಾಮೀಜಿ. ಎಲ್ಲ ಬಿಟ್ಟ ಸನ್ಯಾಸಿಯೂ ಬಿಡಬಾರದ್ದು ಈ ತಪಸ್ಸು. ತಾಯಿಯ ಕರುಳ ಕುಡಿಯೊಂದು ನಡೆಸುತ್ತಿರುವ ತಪಸ್ಸು ಇದು.
ಇಂದಿಗೂ ಸ್ವಾಮಿ ಜ್ಞಾನಸ್ವರೂಪ ಸಾನಂದರದು ಇದೇ ನಿಲುವು. ಆದರೆ ಅವರ ಪರವಾಗಿ ನಾವು ತಳೆದಿರುವ ನಿಲುವೇನು? ಗಂಗೆಯನ್ನು ಉಳಿಸುವ ಕೆಲಸ ಆಗಲಿ. ಆ ಮೂಲಕ ಗಂಗಾಪುತ್ರನ
ಪ್ರಾಣವನ್ನೂ. ಇದು ಕೇವಲ ಒಬ್ಬ ಪುತ್ರನ ಪ್ರಶ್ನೆ ಅಲ್ಲ. ಪ್ರಶ್ನೆ, ನಮ್ಮ ನೈತಿಕತೆಯದ್ದು ಎಂಬುದು ಅರಿವಾದರೊಳಿತು..?


Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.

Photos

ರೆಕ್ಕೆ ಇದ್ದರೆ ಸಾಕೆ...

Videos