ಅವಧೂತನ ಜತೆ ಒಂದು ದಿನ!

April 11, 2018 ⊄   By: ಚಿನ್ನಸ್ವಾಮಿ ವಡ್ಡಗೆರೆ

ಕುರಿ ಕಾಯುತ್ತಲೇ ಬೆಟ್ಟದ ತಪ್ಪಲಲ್ಲಿ ಕೆರೆ ಕಟ್ಟಿ, ಪಶು-ಪಕ್ಷಿಗಳಿಗೆ ನೀರುಣಿಸಿದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರಿಗೆ ಮುರುಘಾಮಠ ನೀಡುವ ಬಸವಶ್ರೀ ಪ್ರಶಸ್ತಿ ಲಭಿಸಿದೆ. ಕಾಮೆಗೌಡರ ಜಲಕಾಯಕವನ್ನು ‘ಹಸಿರುವಾಸಿ’ಯು ಬಹಳ ಹಿಂದೆಯೇ ಪರಿಚಯಿಸಿತ್ತು. ಈ ಹಿನ್ನೆಲೆಯಲ್ಲಿ ಕಾಮೇಗೌಡರ ಕುರಿತಾಗಿ ‘ಹಸಿರುವಾಸಿ’ಯಲ್ಲಿ ಪ್ರಕಟಗೊಂಡ ಬರಹ ಇಲ್ಲಿದೆ.

ಸರ್ವ ಋತುವಿನಲ್ಲೂ ಬತ್ತದ ಅಕ್ಷಯ ಬಟ್ಟಲು,ಪೂರ್ವಿ ಕಟ್ಟೆ, ಕೃಷ್ಣನ ಕಟ್ಟೆ, ಪೂಜಾ ಕಟ್ಟೆ. ನೀರು ತುಂಬಿದ ತಿಂಗಳಿಗೆ ಬರಿದಾಗುವ ದಾರಿದ್ರ್ಯ ಕಟ್ಟೆ. ಇದು ಸೀನಿಯರ್ ಕೆರೆ, ಇದು ಜೂನಿಯರ್ ಕಟ್ಟೆ.... ಹೀಗೆ ತಾವು ನಾಲ್ಕು ದಶಕಗಳಿಂದ ಕಟ್ಟಿದ ಹೊಸದಾಗಿ ಕಟ್ಟುತ್ತಿರುವ ಕೆರೆಕಟ್ಟೆಗಳನ್ನು ತೋರಿಸುತ್ತಾ ಕೆರೆಕಟ್ಟೆ ಕಟ್ಟಿದ ಕಥೆಗಳನ್ನು ಹೇಳುತ್ತಾ ಹೋದರು ಬೆಟ್ಟದ ಜೀವ ಕಾಮೇಗೌಡ.
ಕುಂದನ ಪರ್ವತ ಎಂಬ ಆ ಬೆಟ್ಟವನ್ನು ಏರುತ್ತಾ ಇಳಿಯುತ್ತಾ ಕಾಮೇಗೌಡರು ಕೆರೆಕಟ್ಟೆ ಕಟ್ಟುವಾಗ ಪಟ್ಟಪಾಡನ್ನು,ಅನುಭವಿಸಿದ ವನವಾಸವನ್ನು ಕೇಳಿಸಿಕೊಳ್ಳುತ್ತಾ ನಾವು ನಡೆದೆ ನಡೆದೆವು.
ಮೈಸೂರಿನ ಖಾಸಗಿ ಸಂಘ ಸಂಸ್ಥೆಯೊಂದು ಪ್ರತಿವರ್ಷದಂತೆ ಈ ವರ್ಷವೂ ಇಬ್ಬರು ವ್ಯಕ್ತಿಗಳಿಗೆ ನೀಡುವ ನಗದು ಪುರಸ್ಕಾರ ಮತ್ತು ಸನ್ಮಾನಕ್ಕಾಗಿ ಕಾಮೇಗೌಡರನ್ನೂ ಪರಿಗಣಿಸಿತ್ತು. ಅದಕ್ಕಾಗಿ ಅವರನ್ನು ಕಂಡು ಮಾತನಾಡಿ ಕೊಂಡುಬರಲು ಜಯರಾಮ ಪಾಟೀಲರು ಬಂದರು. ಗೆಳೆಯ ಶಿವಾಜಿರಾವ್ ಜಾದವ್, ರಾಜೇಶ್ ಮತ್ತು ರಜನಿ ಪಾಟೀಲ್ ಅವರೊಂದಿಗೆ ನಾನೂ ಕುಂದನಬೆಟ್ಟಕ್ಕೆ ಹೋದೆ. ಮಹಾತ್ಮನೊಬ್ಬನನ್ನು ಮತ್ತೊಮ್ಮೆ ಆತನ ಕರ್ಮಭೂಮಿಯಲ್ಲೆ ಕಂಡ ಧನ್ಯತಾಭಾವ ನನ್ನದಾಯಿತು.ಮಳವಳ್ಳಿಯಿಂದ ಕೊಳ್ಳೇಗಾಲದ ಮಾರ್ಗವಾಗಿ ಹೋಗುವಾಗ ೯ ಕಿ.ಮೀ ದೂರದಲ್ಲಿರುವ ದಾಸನದೊಡ್ಡಿಯಲ್ಲಿರುವ ಕಾಮೇಗೌಡರ ಮನೆ ತಲುಪಿದಾಗ ಮಧ್ಯಾಹ್ನ ೧೧.೩೦ ಗಂಟೆಯಾಗಿತ್ತು.
ಗಾಂಧಿ ಮಹಾತ್ಮನಂತೆ ಕೈಯಲ್ಲಿ ಕೋಲು ಹಿಡಿದು ಪುಟ್ಟ ಮನೆಯಿಂದ ಹೊರಬಂದ ಕಾಮೇಗೌಡನೆಂಬ ಹಿರಿಯ ಜೀವ ಮನೆಯ ಎದುರೇ ಕಾಣುವ ಕುಂದನಬೆಟ್ಟವೆಂಬ ಕರ್ಮಭೂಮಿಗೆ ನಮ್ಮನ್ನು ಕರೆದುಕೊಂಡುಹೋಯಿತು.
ಕಾಮೇಗೌಡನೆಂದರೆ ವ್ಯಕ್ತಿಯಲ್ಲ ಕುಂದನ ಬೆಟ್ಟದ ಅವಧೂತ. ವನ್ಯಪ್ರಾಣಿ ಪಕ್ಷಿಗಳ ಹಿತಕಾಯಲೆಂದೇ ಹುಟ್ಟಿಬಂದ ಸಂತ. ಮನೆ, ಮಡದಿ, ಮಕ್ಕಳು, ಸಂಸಾರವೆಂಬ ಸಾಗರವನ್ನು ದಾಟಿ, ಲೌಕಿಕವನ್ನು ಮೀರಿ ಕಾಡುಪ್ರಾಣಿಗಳಿಗೆ ಆಶ್ರಯನೀಡಿದ ಫಕೀರ. ಕೂಡಿಟ್ಟ ಹಣ, ಅದು ಸಾಲದಿದ್ದರೆ ಸಾಕಿದ ಕುರಿಗಳನ್ನು ಮಾರಿ ಸರಕಾರಿ ಜಾಗದಲ್ಲಿ ಕೆರೆಕಟ್ಟೆ ಕಟ್ಟಿದ ಬೆಟ್ಟದ ಜೀವ. ಮೊಮ್ಮಕ್ಕಳ ಹೆಸರಿನಲ್ಲಿ ಒಂದೊಂದು ಕಟ್ಟೆ,ಅದಕ್ಕೊಂದು ಚೆಂದದ ಹೆಸರು.ಬಂದವರು ಪರಿಸರ ಹಾಳುಮಾಡದೆ ಭಕ್ತಿಯಿಂದ ನಡೆದುಕೊಳ್ಳಲಿ ಎಂಬ ಉದ್ದೇಶದಿಂದ ಕಟ್ಟೆಯ ಸನಿಹದಲ್ಲೆ ಮಾದೇಶ್ವರ,ನಂಜುಂಡೇಶ್ವರ,ಬೀರೇಶ್ವರ,ಸಿದ್ದಪ್ಪಾಜಿ,ಮಂಟೇಸ್ವಾಮಿ ಎಂಬ ಕಲ್ಲುದೇವರುಗಳ ಪ್ರತಿಷ್ಠಾಪನೆ. ಕೆರೆಕಟ್ಟೆ ನೋಡಬಂದವರು ಕುಳಿತುಕೊಳ್ಳಲು ಸೋಪಾನ ಕಟ್ಟೆ. ದನಕರುಗಳು ನೀರು ಕುಡಿದು ಮೈತುರಿಸಿಕೊಳ್ಳಲು ನೆಟ್ಟಕಲ್ಲು. ಬೆಟ್ಟಕ್ಕೆ ಹಸಿರು ಹೊದಿಸಲು ಮರಗಿಡಗಳ ಲಾಲನೆಪಾಲನೆ. ಒಬ್ಬ ವ್ಯಕ್ತಿ ತನ್ನ ಇಡೀ ಬದುಕನ್ನು ಹೀಗೆ ಬೆಟ್ಟಕ್ಕೆ ಜೀವನೀಡಲು ಕೊಟ್ಟ ಪರಿ ಕಂಡು ನಾವು ಬೆರಗಾದೆವು.ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ ಬಡವರ ಭಿನ್ನಪವ ಯಾರು ಕೇಳುವರು ಎಂಬ ಕುಮಾರವ್ಯಾಸನ ವಾಣಿಯಂತೆ ಕಾಮೇಗೌಡರಿಗೂ ದುರುಳರು,ಭ್ರಷ್ಟರು, ಕಿಡಿಗೇಡಿಗಳು ತೊಂದರೆ ಕೊಡುತ್ತಲೇ ಬಂದಿದ್ದಾರೆ. ಕೊಲೆ ಬೆದರಿಕೆ, ಹಲ್ಲೆ, ಅಪಮಾನಗಳಾಗಿವೆ. ಅದ್ಯಾವುದನ್ನೂ ಲೆಕ್ಕಿಸದೆ ಇಳಿಗಾಲದಲ್ಲೂ ಅವರು ತಮ್ಮ ಕಾಯಕವನ್ನು ವ್ರತದಂತೆ, ಧ್ಯಾನದಂತೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಚಿತ್ರಗಳು ಬೆಟ್ಟದ ಜೀವ, ಅವಧೂತ ಕಾಮೇಗೌಡನ ಕತೆ ಹೇಳುತ್ತವೆ.

ಯಾತ್ರೆ,ಪಾರ್ಟಿ, ಕೂಗಾಟ, ಕಿರುಚಾಟದ ಆಚೆಗೂ ಒಂದು ಜೀವನವಿದೆ. ಖುಷಿ ಇದೆ. ಮೋದಿ, ಸಿದ್ದ ರಾಮಯ್ಯ, ಕಾಂಗ್ರೇಸು, ಬಿಜೆಪಿ, ದೇಶಭಕ್ತಿ, ಎಡ, ಬಲದಾಚೆಗೂ ಒಂದು ಬದುಕಿದೆ. ಅದು ತನ್ನಷ್ಟಕ್ಕೆ ತಾನು ಹೂವಿನಂತೆ ಅರಳುತ್ತಿದೆ. ಅದನ್ನು ಕಾಣುವ ಕಣ್ಣುಗಳು, ಮನಸ್ಸುಗಳು ಬೇಕು.ಅಂತಹ ಮನಸ್ಸುಗಳನ್ನು ಕನಸುಗಳನ್ನು ಕಟ್ಟೋಣ ಎಂಬ ಸದಾಶಯದೊಂದಿಗೆ ಈ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos