ರಾಜಕೀಯ ಪ್ರತಿಭಟನೆಗಳಿಂದ ಮಹದಾಯಿ ನೀರು ಸಿಗದು

February 02, 2018 ⊄   By: ರಾಧಾಕೃಷ್ಣ ಭಡ್ತಿ

ಇದನ್ನೇ ರಾಜಕೀಯ ಎನ್ನುವುದು. ಪರಸ್ಪರ ಪಕ್ಷಗಳ ಕಚೇರಿ ಎದರು ಪ್ರತಿಭಟನೆ, ಪ್ರದರ್ಶನಗಳನ್ನು ನಡೆಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿದ್ದರೆ, ಈ ರಾಜಕೀಯದ ಮಂದಿ ಇಷ್ಟು ದಿನ ಎಲ್ಲವನ್ನೂ ಮುಚ್ಚಿಕೊಂಡು ಕುಳಿತದ್ದಾದರೂ ಏಕೆ? ಸ್ವತಃ ರಾಜ್ಯದ ಜಲಸಂಪನ್ಮೂಲ ಸಚಿವರೇ ಪ್ರತಿಭಟನಾಕಾರರ ಜತೆಗೆ ಧರಣಿ ಕುಳಿತು ತಮ್ಮ ಬೆಂಬಲವನ್ನು ಪ್ರದರ್ಶಿಸಿದರು. ಮಾಜಿ ಮುಖ್ಯಮಂತ್ರಿ ಲಕ್ಷಾಂತರ ರೈತರೆದುರು ‘ಸಿಹಿ ಸುದ್ದಿ ಕೊಡುತ್ತೇನೆ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಾಲ್ಕು ದಶಕಗಳ ಇತಿಹಾಸವನ್ನು ಬರೆದಿರುವ ಮಹದಾಯಿ ವಿವಾದ ಇದ್ದಕ್ಕಿದ್ದಂತೆ ಚುನಾವಣೆಯ ಹೊಸಸ್ತಿಲಿನಲ್ಲಿ ಹೊಸ, ಹೊಸ ಮಜಲುಗಳನ್ನು ಪಡೆದುಕೊಂಡುಬಿಟ್ಟಿದೆ. ಇಡೀ ರಾಜ್ಯ, ಅದರಲ್ಲೂ ಉತ್ತರ ಕರ್ನಾಟಕ ಭಾಗ ಮತ್ತೆ ಹೊತ್ತಿ ಉರಿಯುವಂತಾಗಿದೆ. ಮಹಾನ್ ಪುರುಷಾರ್ಥ ಸಾಧಿಸಿದವರಂತೆ ನಮ್ಮ ನಾಯಕರು ಒಂಚೂರೂ ನಾಚಿಕೆ, ಮಾನ-ಮರ್ಯಾದೆಗಳಿಲ್ಲದೇ ಬೀಗುತ್ತಿದ್ದಾರೆ. ರಾಜಕೀಯಕ್ಕೆ ನೀರಾದರೇನು, ನೀರಾ ಆದರೇನು? ತಂತಮ್ಮ ಲಾಭದ ಹವಣಿಕೆಯಷ್ಟೇ ಮುಖ್ಯ. ರೈತರಿಗೆ ನೀರು ಸಿಗುತ್ತದೋ ಬಿಡುತ್ತದೋ. ಈ ಬಿಸಿಯಲ್ಲಿ ರಾಜಕೀಯದ ಬೇಳೆಯಂತೂ ಬೇಯುತ್ತದೆ.

ವಿವಾದಗಳನ್ನೇ ಹಾಸಿ ಹೊದ್ದುಕೊಂಡು ಕುಳಿತಿರುವ ಮಹದಾಯಿಯ ಒಟ್ಟು ನೀರಿನ ಲಭ್ಯತೆಯಲ್ಲಿ ಕರ್ನಾಟದ ಕೊಡುಗೆ ಅತಿ ದೊಡ್ಡದಿದ್ದರೂ ನದಿ ಕಣಿವೆ ಪ್ರದೇಶದಲ್ಲಿ ಯಾವುದೇ ನೀರಾವರಿ ಅಥವಾ ಜಲ ವಿದ್ಯುತ್ ಯೋಜನೆಗಳನ್ನು ಈವರೆಗೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಸಹ್ಯಾದ್ರಿ ಬೆಟ್ಟಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಮಹದಾಯಿ ಅತಿ ದೊಡ್ಡದು. ಇದರ ಒಟ್ಟು ಜಲಾನಯನ ಪ್ರದೇಶ 2032 ಚ.ಕಿ.ಮೀ. ಅದರಲ್ಲಿ ಕರ್ನಾಟಕದಲ್ಲಿ 375 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀ ಹಾಗೂ ಗೋವಾದ 1580 ಚ.ಕಿ.ಮೀ ಸೇರಿದೆ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ಈ ನದಿಯಲ್ಲಿ 180 ರಿಂದ 220 ಟಿಎಂಸಿ ನೀರು ಲಭ್ಯವಿದೆ. ಈ ಪೈಕಿ ಕರ್ನಾಟಕದ ಕೊಡುಗೆ 45 ಟಿಎಂಸಿ.

ಭಾರತದ ಪಶ್ಚಿಮ ಕರಾವಳಿಯೆಂದರೆ ಪಶ್ಚಿಮಘಟ್ಟಗಳ ಸಾಲು. 30 ರಿಂದ 65 ಕಿ.ಮೀ ತಪತಿ ನದಿಯ ಮುಖದಿಂದ ನೀಲಗಿರಿಯಾಚೆ ಕನ್ಯಾಕುಮಾರಿಯವರೆಗೆ ಉದ್ದವಾಗಿ ಹಬ್ಬಿಕೊಂಡಿರುವ ಪರ್ವತಾವಳಿಯು ಹಲವು ಜಲಮೂಲಗಳ ತಾಣ. ಸಹ್ಯಾದ್ರಿ ಶ್ರೇಣಿಯ ಕರ್ನಾಟಕದ ಗಡಿ ಆರಂಭವಾಗುವುದು ಬೆಳಗಾವಿ ಜಿಲ್ಲೆಯ ಖಾನಾಪುರದಿಂದಲೇ. ಅಲ್ಲಿಂದ ಕೊಡಗಿನ ದಕ್ಷಿಣ ಅಂಚಿನ ಬ್ರಹ್ಮಗಿರಿಯ ಸಾಲುಗಳವರೆಗೆ ಇದು ಹಬ್ಬಿಕೊಂಡಿದೆ. ಸರಿ ಸುಮಾರು 350 ಕಿ.ಮೀ. ಅಗಲಕ್ಕೆ ಹಬ್ಬಿ ನಿಂತಿರುವ ಇಲ್ಲಿ 20ಕ್ಕೂ ಹೆಚ್ಚು ನದಿಗಳು ಉಗಮಿಸುತ್ತವೆ. ಈ ಪೈಕಿ ನಾಲ್ಕು ನದಿಗಳು ಕೇರಳ ಹಾಗೂ ಗೋವಾ ಗಡಿ ಪ್ರವೇಶಿಸಿ ಅಲ್ಲಿ ಅರಬ್ಬೀ ಸಮುದ್ರ ಸೇರುತ್ತವೆ. ಪಶ್ಚಿಮ ವಾಹಿನಿಯ ಈ ನದಿಗಳಲ್ಲಿ ಒಂದು ಅಂದಾಜಿನ ಪ್ರಕಾರ 1998 ಟಿ.ಎಂ.ಸಿ ನೀರು ಹರಿದು ಯಾವುದೇ ನೀರಾವರಿ ಅಥವಾ ಇನ್ನಾವುದೇ ಮಹತ್ವದ ಪ್ರಯೋಜನ ಪಡೆಯದೆ ಅರಬ್ಬೀ ಸಮುದ್ರ ಸೇರುತ್ತವೆ. ರಾಜ್ಯದ ಒಟ್ಟು ನೀರಿನಲ್ಲಿ ಲಭ್ಯತೆ 3438 ಟಿ.ಎಂ.ಸಿ. ಅಂದರೆ ಸುಮಾರು ಶೇ.60 ರಷ್ಟು ನೀರು ಪಶ್ಚಿಮ ವಾಹಿನಿಗಳಲ್ಲಿ ಹರಿದು ಸಮುದ್ರ ಸೇರುತ್ತವೆನ್ನುವುದು ವಾಸ್ತವ. ಇದರಲ್ಲಿ ಮಹಾದಾಯಿ ನೀರಿನ ಪ್ರಮಾಣವೇ ಹತ್ತನೇ ಒಂದರಷ್ಟು. ಈ ಮಹಾದಾಯಿಗೆ ಸೇರುವ ಉಪನದಿ, ಹಳ್ಳಗಳ ಸಂಖ್ಯೆ ದೊಡ್ಡದು. ಕರ್ನಾಟಕದಲ್ಲಿ ಬಂಡೂರ ನಾಲ, ಕೊಟ್ಟೆ, ಸರಳ ನದಿ, ಬಯಲನಾಡು, ಹಲ್ತಾರ ಹಳ್ಳ, ಕಳಸಾ ಹಳ್ಳ, ಕಾರಂಜೋಳ ನದಿ ಹಾಗೂ ದೂದ್ಸಾಗರ ಪ್ರಮುಖ ಉಪನದಿಗಳು. ಹೀಗೆ ಸಮುದ್ರ ಸೇರು ನೀರನ್ನು ಪುನಃ ಕರ್ನಾಟಕದತ್ತ ತಿರುಗಿಸಿದರೆ ಉತ್ತರ ಕರ್ನಾಟಕದ ಬಾಯಾರಿಕೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತದೆ ಎಂಬುದು ಬಹು ಹಿಂದಿನ ವಾದ. ಅದಕ್ಕಾಗಿಯೇ ರೂಪುಗೊಂಡದ್ದು ಕಳಸಾ-ಬಂಡೂರಿ ಯೋಜನೆ. ದ್ಯಾವ ಗಳಿಗೆಯಲ್ಲಿ ಯೋಜನೆ ಹುಟ್ಟಿಕೊಂಡಿತೋ ಆ ಕ್ಷಣದಲ್ಲೇ ರಾಜಕೀಯ ಪ್ರೇರಿತ, ಪ್ರೇಷಿತ ವಿವಾದವೂ ಜನ್ಮ ತಾಳಿತು. ಮಹದಾಯಿಯಲ್ಲಿ ಅದೆಷ್ಟು ನೀರು ಹರಿದಿದೆಯೋ, ಆದರೆ ರಾಜಕೀಯ ನಾಯಕರ ಭರವಸೆಯ ಮಹಾಪೂರವಂತೂ ಹರಿತ್ತಲೇ ಇದೆ.

ನಮ್ಮ ಕಾವೇರಿಯಂತೆಯೇ ಮಹದಾಯಿ ವಿವಾದಕ್ಕೂ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಒಂದು ನೂರಾ ಒಂಬತ್ತು ವರ್ಷಗಳಿಗೂ ಹಿಂದೆ, 1908 ರಲ್ಲಿ ಮುಂಬೈ ಸರಕಾರ ಮಲಪ್ರಭಾ ನದಿ ನೀರಿನ ಯೋಜನೆಯ ಸಮೀಕ್ಷೆ ನಡೆಸಿತ್ತು. ಆದರೆ ಕೆಲಸ ಆರಂಭವಾಗಲಿಲ್ಲ. ಅದು ಆರಂಭವಾದದ್ದು 1961ರಲ್ಲಿ. ಸದರ ಫಲವೇ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಳವಳ್ಳಿ ಗ್ರಾಮದ ‘ನವಿಲು ತೀರ್ಥ’. 1972 ಕ್ಕೆ ಅದಕ್ಕೆ ಅಡ್ಡಲಾಗಿ ೫ ಲಕ್ಷ ಎಕರೆಗೆ ನೀರುಣಿಸುವ ಮಹತ್ವಾಕಾಂಕ್ಷಿ ‘ರೇಣುಕಾ ಸಾಗರ’ವನ್ನು ನಿರ್ಮಿಸಲಾಯಿತಾದರೂ ನೀರಿನ ಲಭ್ಯತೆಯ ಕೊರತೆಯಿಂದ ಉದ್ದೇಶ ಈಡೇರಲಿಲ್ಲ. ಇದೀಗ ಮಹದಾಯಿಯ ಹೆಚ್ಚುವರಿ ನೀರನ್ನು ಈ ರೇಣುಕಾ ಸಾಗರಕ್ಕೆ ಹರಿಸಿಬೇಕೆಂಬುದು ನಮ್ಮ ಬೇಡಿಕೆ. ಏಕೆಂದರೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಸುತ್ತಮುತ್ತಲ ರೈತರ ಜಮೀನುಗಳಲ್ಲದೇ ಸುಮಾರು 10 ಲಕ್ಷ ಜನವಸತಿ ಹೊಂದಿರುವ ಹುಬ್ಬಳ್ಳಿ-ಧಾರವಾಡ ನಗರವೂ ಕುಡಿಯುವ ನೀರಿಗಾಗಿ ಮಲಪ್ರಭಾ ನದಿಯನ್ನೇ ಅವಲಂಬಿಸಿವೆ.

1978ರಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ರ್ಆ.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಮಹಾದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಒಪ್ಪಿಗೆಯನ್ನೂ ನೀಡಿತ್ತು.

ಮಹದಾಯಿ ವಿವಿಧೋದ್ದೇಶ ಯೋಜನೆಯದ್ದು ಇನ್ನೊಂದು ವಿವಾದದ ಮಜಲು. ನಮ್ಮ ಮಹದಾಯಿ ಗೋವಾದಲ್ಲಿ ‘ಮಾಂಡೋವಿ’ ಆಗುತ್ತಾಳೆ. ಜಲವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಇದರಲ್ಲಿ ಮಲಪ್ರಭಾ ನದಿ ಕಣಿವೆಗೆ 9 ಟಿಎಂಸಿ ನೀರನ್ನು ಸಾಗಿಸಲು 1988 ರಲ್ಲಿ ಉದ್ದೇಶಿಸಲಾಗಿತ್ತು. ಇದರನ್ವಯ 4 ಟಿಎಂಸಿಗೆ ಕರ್ನಾಟಕ ವಿದ್ಯುತ್ ನಿಗಮ ಯೋಜನೆ ತಯಾರಿಸಿ ವಿದ್ಯುತ್ ಪ್ರಾಧೀಕಾರದ ಅನುಮೋದನೆಗೆ ಕಳಿಸಬೇಕಾತ್ತು. ಆದರೆ ಈವರೆಗೆ ಯಾವುದೇ ಪ್ರಗತಿ ಇದರಲ್ಲೂ ಆಗಿಲ್ಲ.
ಇನ್ನು ಕಳಸಾ ಯೋಜನೆ ಸಮೀಕ್ಷೆ ನಡೆದಾಗಲೆ ಗೋವಾ ವಿರೋಧಿಸಿತು. ಹೀಗಾಗಿ ಕಳಸಾ ಯೋಜನೆಯಲ್ಲಿಯೇ ಗೋವಾ ಪ್ರದೇಶ ಸೇರಿದಂತೆ ಅಣೆಕಟ್ಟು ಪ್ರದೇಶ ಬದಲಾಯಿಸಿ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕಾಯಿತು. ಬದಲಾದ ೨೩.೯೩ ಕೋಟಿ ರೂ. ವೆಚ್ಚದ ಮಹಾದಾಯಿ ತಿರುವು ಯೋಜನೆಯ ಮೊದಲ ಹಂತಕ್ಕೆ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಆದರೆ ಮುಂದುವರಿಯಲಿಲ್ಲ. ಇದನ್ನು ಹೊರತುಪಡಿಸಿ, ಮಹಾದಾಯಿಗೆ ಸೇರುವ ಹಳ್ಳಗಳನ್ನಷ್ಟೇ ಬಳಸಿಕೊಂಡು ಮಲಪ್ರಭೆಗೆ ನೀರು ಹರಿಸಲು ಬಂಡೂರ ನಾಲಾ ಯೋಜನೆ ರೂಪುಗೊಂಡಿತ್ತು. ಬಂಡೂರಾ ನಾಲಾ, ಸಿಂಗಾರ ನಾಲಾ, ನೆರ್ಸೆ ನಾಲಾಗಳಲ್ಲಿ ಲಭ್ಯ ನೀರನ್ನು ಮಲಪ್ರಭೆಗೆ ತಿರುಗಿಸಲು ಆಗಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಅಧ್ಯಯನ ನಡೆಸಲಾಯಿತು. ಬಂಡೂರಾ ನಾಲಾ, ಪೋಟ್ಲಿ ನಾಲಾ ಹಾಗೂ ಸಿಂಗಾರಾ ನಾಲಾಗಳಿಂದ 4 ಟಿಎಂಸಿ ನೀರು ವರ್ಗಾಯಿಸಲು ಅವಕಾಶ ಇತ್ತ್ತು. ಕೊನೆಗೆ ಬಂಡೂರಾ ನಾಲಕ್ಕೆ ಒಂದೇ ಅಣೆಕಟ್ಟು ಕಟ್ಟುಲು ಯೋಜಿಸಿ 49.20 ಕೋಟಿ ರೂ ವೆಚ್ಚಕ್ಕೆ ಅಂದಾಜಿಸಲಾಯಿತು.

ಅವತ್ತು ರಾಜಕೀಯ ಇಚ್ಛಾಶಕ್ತಿ ಕೊರತೆ ಹಾಗೂ ನಿರಾಸಕ್ತಿಯಿಂದಾಗಿ ೯ ಟಿಎಂಸಿ ನೀರನ್ನು ಬಳಸಿಕೊಳ್ಳದೇ ಇಡೀ ಯೋಜನೆ ನನೆಗುದಿಗೆ ಬಿದ್ದಿತು. ಅಲ್ಲಿಂದ ನಂತರ ವಿವಾದಗಳೇ ಬೆನ್ನತ್ತಿ1998ರಿಂದ ಈವರೆಗೂ ಮಹಾದಾಯಿಯ ಯಾವ ಯೋಜನೆಯಿಂದಲೂ ನಮಗೆ ಲಾಭ ಪಡೆಯಲು ಸಾಧ್ಯವಾಗುತ್ತಲೇ ಇಲ್ಲ. ಮಹಾದಾಯಿ ನೀರನ್ನು ಮಲಪ್ರಭ ಕಣಿವೆಗೆ ವರ್ಗಾಯಿಸಲು ಮೊದಲಿಂದಲೂ ಗೋವಾ ವಿರೋಧಿಸುತ್ತಿದೆ. ಮಹಾದಾಯಿ ಒಂದು ನೀರಿನ ಕೊರತೆ ಕಣಿವೆಯ ಪ್ರದೇಶ, ಮಹಾದಾಯಿ ನೀರನ್ನು ಬೇರೆಡೆ ಹರಿಸಿದರೆ, ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮವಾಗಿ ಜೀವಸಂಕುಲಕ್ಕೆ ಅಪಾಯವಾಗಲಿದೆ ಎಂಬುದು ಗೋವಾದ ವಾದ. ಹೀಗಾಗಿ ಗೋವಾದ ಪಾಲ್ಗೊಳ್ಳುವಿಕೆ ಇಲ್ಲದೆ ನಮ್ಮ ಗಡಿ ಪ್ರದೇಶದಲ್ಲಿಯೇ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ನಿರ್ಧರಿಸಲಾಯಿತು. ಅದಕ್ಕಾಗಿ ಕಳಸಾ ಯೋಜನೆಯ ಮೂಲ ಸ್ವರೂಪದಲ್ಲಿ ಬದಲಾವಣೆ ಮಾಡಿ ಕಳಸಾ ನಾಲಕ್ಕೆ ಒಂದು ಅಣೆಕಟ್ಟೆ ಹಾಗೂ ಅದರ ಉಪಹಳ್ಳ ಹಲ್ ತಾರಾ ನಾಲಕ್ಕೆ ಒಂದು ಅಣೆಕಟ್ಟೆ ಕಟ್ಟಿ ಹಲ್ತಾರಾ ನೀರನ್ನು ಕಳಸಾ ಜಲಾಶಯಕ್ಕೆ ಸಾಗಿಸಿ ಅಲ್ಲಿಂದ ಮಲಪ್ರಭಾ ಕಣಿವೆಗೆ ಸಾಗಿಸುವ ವಿವರವಾದ ಯೋಜನೆ ಸಿದ್ಧಪಡಿಸಲಾಯಿತು. ಈ ನಡುವೆ ಬಂಡೂರು ನಾಲಾ ಯೋಜನೆಯೂ ರೂಪುಗೊಂಡಿತ್ತು.

ಇಲ್ಲಿ ಪಾರಿಸಾರಿಕ ಅಥವಾ ವೈಜ್ಞಾನಿಕ ಸಂಗತಿಗಳಿಗಿಂತ ಎರಡೂ ರಾಜ್ಯಗಳ ಪ್ರತಿಷ್ಠೆ ಹಾಗೂ ರಾಜಕೀಯ ಕಾರಣಗಳೇ ಮೇಲುಗೈ ಪಡೆದಿವೆ. ಜನರ ಭಾವನೆಗಳನ್ನು ಉದ್ರೇಕಿಸಿ ರಾಜಕೀಯ ಪಕ್ಷಗಳು ಆಟವಾಡುತ್ತಿವೆ. ಒಂದೆಡೆ ಗೋವಾದ ಧುರೀಣರಿಗೆ ಈ ಯೋಜನೆಗಳಿಂದ ಯಾವುದೇ ದುಷ್ಪರಿಣಾಮವಾಗುವುದಿಲ್ಲವೆಂದು ವಿಶ್ವಾಸ ಇದ್ದರು ಸಹ ಸ್ಥಳೀಯ ರಾಜಕೀಯ ಹಾಗೂ ಪರಿಸರವಾದಿಗಳ ಬೆದರಿಕೆ ಎದುರಿಸುವುದು ಕಠಿಣವಾಗಿದ್ದಿತು. ಇತ್ತ ಉತ್ತರ ಕರ್ನಾಟಕದ ವೋಟ್ ಬ್ಯಾಂಕ್ ಕಳೆದುಕೊಳ್ಳಲು ಇಚ್ಛಿಸದ ಮಂದಿ ವಿವಾದವನ್ನು ಜೀವಂತವಾಗಿಯೇ ಇಡುತ್ತಾರೆ. ಆದ್ದರಿಂದ ಕಳಸಾ-ಬಂಡೂರಿ ನಾಲಾ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ.

ಹಾಗೆ ನೋಡಿದರೆ, ಕೋಟ್ಯಂತರ ರೂ.ಗಳ ಯೋಜನೆಗಳಿಲ್ಲದೆಯೂ ಉತ್ತರ ಕರ್ನಾಟಕದ ನೀರಿನ ಬವಣೆಯನ್ನು ನೀಗಿಸುವ ಹಲವು ಮಾರ್ಗಗಳಿವೆ. ಅಲ್ಲಿನ ಬಹುತೇಕ ಕೆರೆಗಳು ಸಾಸರ್ನ ಸ್ವರೂಪ ಪಡೆದುಕೊಂಡು ದಶಕಗಳೇ ಸಂದಿವೆ. ಅವುಗಳ ಪುನರುಜ್ಜೀವನದಂಥ ಕಾರ್ಯ ನಮ್ಮ ಯಾವ ರಾಜಕೀಯ ಪಕ್ಷಗಳಿಗೂ ಆದ್ಯತೆಯೇ ಆಘಿಲ್ಲ. ಬದಲಿಗೆ, ಹೆದ್ದಾರಿ- ಬಸ್ ನಿಲ್ದಾಣದಂಥ ಯೋಜನೆಗಳಿಗೆ ಕೆರೆಗಳ ಆಹುತಿ ಅವ್ಯಾಹತವಾಗಿ ಮುಂದುವರಿದಿದೆ. ಹುಬ್ಬಳ್ಳಿ- ಧಾರವಾಡ ಹೆದ್ದಾರಿಗೆ ಬೃಹತ್ ಮೂರು ಕೆರೆಗಳು ಬಲಿಯಾಗಿವೆ. ಉದ್ದೇಪೂರ್ವಕವಾಗಿಯೇ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿನ ಪೂರೈಕೆಯ ಸಮಸ್ಯೆಯನ್ನು ವೈಭವೀಕರಿಸಲಾಗುತ್ತಿದೆ. ಅದಿಲ್ಲದಿದ್ದರೆ 900 ದಿನಗಳಿಗೂ ಹೆಚ್ಚುಕಾಲ ಹುಬ್ಬಳ್ಳಿಯಲ್ಲಿ ರೈತರು ಧರಣಿ ನಡೆಸಿದಾಗ ಇಲ್ಲದ ಕಾಳಜಿ, ಇದೀಗ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡಕ್ಕೂ ಮೂಡಿಬಿಟ್ಟಿದೆ. ನಮ್ಮ ಯೋಜನಾ ಆಯುಕ್ತ ಎಮ್.ಕೆ.ಶರ್ಮಾ ನದಿ ನೀರಿನ ಹಂಚಿಕೆಗೆ ಅಂತಿಮವಾಗಿ ತೀರ್ಮಾನಿಸಿದಾಗ 7.56 ಟಿ.ಎಂ.ಸಿ. ನೀರನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ ಎಂದಿದ್ದರು. ಆಗಲೇ ಮೂರು ರಾಜ್ಯಗಳು ತಮ್ಮಲ್ಲಿಯ ಅಂಕಿ-ಅಂಶಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ನದಿ ಕಣಿವೆ ಸಂಘಟನೆ ಮಾಡಿಕೊಳ್ಳಬಹುದಿತ್ತು. ಆದರೆ ಈವರೆಗೂಈ ಅದು ಆಗಿಲ್ಲ. ನೀರು ವ್ಯರ್ಥವಾಗಿ ಸಮುದ್ರಪಾಲಾಗುವುದು ಬೇಡ ಎಂಬ ಕಾರಣಕ್ಕೆ ಮಹದಾಯಿ ರಾಜ್ಯಗಳ ಪ್ರತಿನಿಧಿಗಳು ಮೇಲಿಂದ ಮೇಲೆ ಸಭೆ ನಡೆಸಿ ವಿಷಯಗಳನ್ನು ಸಮಾಲೋಚಿಸಬೇಕೆಂದು ಸೂಚಿಸಿದ್ದರೂ ಸಭೆ ನಡೆಸಲು ರಾಜಕೀಯ ಪಕ್ಷಗಳು ಬಿಟ್ಟಿಲ್ಲ.

ತಂತ್ರಜ್ಞರು, ಅಧಿಕಾರಿಗಳ ಅಭಿಪ್ರಾಯ ಇದಾಗಿದ್ದರೆ ರಾಜಕೀಯದ ಅಭಿಪ್ರಾಯವೇ ಬೇರೆಯಾಗಿತ್ತು. ಯೋಜನೆಗಳಿಗೆ ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಒಪ್ಪಿಗೆಯನ್ನು ವಿಳಂಬಗೊಳಿಸುತ್ತಾ ಸಾಗಿದ್ದೂ ನಿಜ. ಸರಕಾರಗಳು ಮನಸ್ಸು ಮಾಡಿದ್ದರೆ ಯಾವತ್ತೋ ಇಲಾಖೆಗಳ ಸಮ್ಮತಿಯೂ ಸಿಕ್ಕಿರುತ್ತಿತ್ತು. ಕೇವಲ ಹಠ ಮತ್ತು ಭಾವನಾತ್ಮಕತೆಯನ್ನು ಕೆರಳಿಸುವುದಷ್ಟೇ ರಾಜಕೀಯ ಮುಖಂಡರ ಉದ್ದೇಶವಾಗಿದೆ ಎಂಬುದು ಇದರಿಂದ ಸ್ಪಷ್ಟ.ಏತನ್ಮಧ್ಯೆ ಕರ್ನಾಟಕ ಸರ್ಕಾರ ಕೇಂದ್ರದ ಸಲಹೆಯಂತೆ ಮಹದಾಯಿ ನದಿ ಕಣಿವೆ ಜಲಸಂಪತ್ತಿನ ಸಮೀಕ್ಷೆ ಮಾಡಲು ನಾಗಪುರದ ನೀರಿ (National environmental engineerin research institute) ಸಂಸ್ಥೆಯಿಂದ ಅಧ್ಯಯನ ಮಾಡಿಸಿತು. ಅದರ ವರದಿಯಲ್ಲಿ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಎನ್ನುವ ಅಭಿಪ್ರಾಯ ಧೃಡಪಟ್ಟಿತು. ಆದರೂ ಗೋವಾ ಅದನ್ನು ಒಪ್ಪಿಕೊಳ್ಳಲಿಲ್ಲ. ಮುಂದೆ, National institure of oceanography ಮೂಲಕ ನಡೆದ ಅಧ್ಯಯವೂ ನೀರಿ ಸಂಸ್ಥೆಯ ವರದಿಯನ್ನು ಅಕ್ಷರಶಃ ಅನುಮೋದಿಸಿತು. ಕೊನೆಗೂ ಕರ್ನಾಟಕ ತನ್ನ ಗಡಿಯಲ್ಲಿ, ಗೋವಾದ ಮೇಲೆ ಏನು ಪರಿಣಾಮವಾಗದಂತೆ ಮಹದಾಯಿ ಕಣಿವೆಯಿಂದ 7.56 ಟಿ.ಎಂ.ಸಿ ನೀರು ವರ್ಗಾಯಿಸುವ ಕಳಸಾ ಮತ್ತು ಬಂಡೂರಾ ನಾಲಾ ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ 2002ರಲ್ಲಿ ಷರತ್ತುಬದ್ಧ ತಾತ್ವಿಕ ಒಪ್ಪಿಗೆ ನೀಡಿತು. ಆದರೆ, ಮತ್ತೆ ರಾಜಕೀಯ ಮೇಲಾಟ ನಡೆದು, ಅಂದಿನ ಕೇಂದ್ರದ ಬಿಜೆಪಿ ಸರಕಾರ ಪುನಃ ಗೋವಾದಲ್ಲಿದ್ದ ತನ್ನದೇ ಪಕ್ಷದ ಸರಕಾರದ ಹಿತರಕ್ಷಣೆಗಾಗಿ ತನ್ನದೇ ತೀರ್ಮಾನವನ್ನು ಅದೇ ವರ್ಷ ಸೆಪ್ಟೆಂಬರ್ 19ರಂದು ನೆನೆಗುದಿಯಲ್ಲಿ ಇಟ್ಟಿತು.
ನಂತರದ ಹಲವು ಸಭೆಗಳ ಪ್ರಹಸನದ ಜಲವಿವಾದ ಕಾಯ್ದೆ-1953ರ 3ನೇ ಕಲಮಿನನ್ವಯ ಮಹಾದಾಯಿ ಜಲವಿವಾದವನ್ನು ಇತ್ಯರ್ಥಪಡಿಸಲು ನ್ಯಾಯಾಧೀಕರಣ ರಚನೆ ಮಾಡಲು ಗೋವಾ, ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿತು. ಕಳಸಾ-ಬಂಡೂರು ನಾಲಾ ಯೋಜನೆಯನ್ನು ಕಾರ್ಯಗತಗೊಳಿಸದಿರಲು ಸುಪ್ರೀಂ ಕೋರ್ಟಿನ ಮೊರೆ ಹೊಕ್ಕಿತು. ಈವರೆಗೆ ಅದರ ತಡೆಯಾಜ್ಞೆ ತೆರವಾಗಿಸಲು ನಮ್ಮ ರಾಜಕೀಯ ಪಕ್ಷಗಳಿಂದ ಸಾಧ್ಯವಾಗಿಲ್ಲ.

ಇವೆಲ್ಲದರ ನಡುವೆಯೇ ಬೆಳಗಾವಿಯ ಜಿಲ್ಲೆಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು 2006ರ ಸೆಪ್ಟೆಂಬರ್ನಲ್ಲಿ ಭೂಮಿ ಪೂಜೆ ಮಾಡಲಾಯಿತು. 2006ರ ನವೆಂಬರ್ನಲ್ಲಿ ಗೋವಾ ಸರ್ಕಾರ ಈ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. 2010ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧೀಕರಣವನ್ನು ನೇಮಕ ಮಾಡಲಾಯಿತು. 2014ರಲ್ಲಿ ನ್ಯಾಯಾಧೀಕರಣದ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 2015ರ ಜೂನ್ನಿಂದ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ 1970ರಿಂದ 2010ರವರೆಗೆ ಮಾತುಕತೆಗಳು ನಡೆದಿವೆ. ಕೇಂದ್ರ ಸರ್ಕಾರ, ಸಿಡಬ್ಲ್ಯುಸಿ, ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿಗಳು (ಎನ್ಡಬ್ಲ್ಯುಡಿಎ) ನಡೆಸಿದ ಯತ್ನ ವಿಫಲವಾದ ನಂತರವೇ ನ್ಯಾಯಮಂಡಳಿ ರಚಿಸಲಾಗಿದೆ.ಇಡೀ ಮಹಾದಾಯಿ ವಿವಾದದ ನಾಲ್ಕು ದಶಕಗಳ ಹೋರಾಟದ ಇತಿಹಾಸವನ್ನು ಅವಲೋಕಿಸಿದಾಗ ಪಕ್ಷವಾರು ರಾಜಕೀಯವಷ್ಟೇ ಕಾಣುತ್ತದೆಯೇ ಹೊರತಾಗಿ ವಿವಾದವನ್ನು ಬಗೆಹರಿಸುವ ದಿಸೆಯಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುವ ರಾಜಕೀಯ ಇಚ್ಛಾಶಕ್ತಿ ಕಂಡೇ ಇಲ್ಲ. ಯಾವುದೇ ಜಲವಿವಾದ ಇತ್ಯರ್ಥಗೊಳ್ಳಲು ನ್ಯಾಯಾಧೀಕರಣವೊಂದೇ ಅಂತಿಮ ಅಸ್ತ್ರ ಎಂಬುದು ನಿಜವಾದರೂ, ಈಗಾಗಲೇ ತಾತ್ವಿಕ ಒಪ್ಪಿಗೆ ಪಡೆದಿರುವ ಕಳಸಾ-ಬಂಡೂರು ನಾಲಾದ 7.56 ಟಿ.ಎಂ.ಸಿ ಅಡಿ ನೀರಿನ ತಿರುವು ಯೋಜನೆ ಕೈಗೊಳ್ಳಲು ಕರ್ನಾಟಕಕ್ಕೆ ಅನುಮತಿ ನೀಡಿ ಉಳಿದ ನೀರಿನ ಹಂಚಿಕೆಗೆ ನ್ಯಾಯಾಧೀಕರಣ ರಚನೆಗೆ ಕರ್ನಾಟಕ ಸರಕಾರ ಕೋರಿಕೆ ಸಲ್ಲಿಸಬೇಕಿತ್ತು. ಕೇಂದ್ರ ಸರಕಾರವು ನ್ಯಾಯಾಧೀಕರಣ ರಚನೆಗೆ ತೀರ್ಮಾನ ಘೋಷಣೆ ಮಾಡಿದ ತಕ್ಷಣ ಪ್ರತಿಭಟನೆಯ ಜೊತೆಗೆ ರಾಜ್ಯದಿಂದ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಬೇಕಿತ್ತು. ಆದರೆ, ಅಂಥವು ನೆಪಕ್ಕಷ್ಟೇ ನಡೆದವು. ರಾಜ್ಯದ ಹಿಂದಿನ ಬಿಜೆಪಿ ಸರಕಾರವಾಗಲೀ ಇಂದಿನ ಕಾಂಗ್ರೆಸ್ ಸರಕಾರವಾಗಲಿ ನೈಜ ಉಪಕ್ರಮಗಳನ್ನು ಕೈಗೊಂಡೇ ಇಲ್ಲ. ವಿಧಾನಮಂಡಲ ಅಧಿವೇಶಗಳಲ್ಲೂ ಗಂಭೀರ ಚರ್ಚೆ ನಡೆದಿಲ್ಲ. ಬದಲಿಗೆ ಪರಸ್ಪರ ಕೆಸರೆರೆಚಾಟ ಮುಂದುವರಿದಿದೆ. ಇದರಿಂದ ಬಹುವರ್ಷಗಳಿಂದ ನನೆಗುದಿಗೆ ಬಿದ್ದ ಯೋಜನೆಗೆ ಚಾಲನೆ ದೊರೆಯದೇ ಅನವಶ್ಯಕವಾಗಿ ಸಮಯ ವ್ಯರ್ಥ ಆಗುತ್ತಿದೆ.

ಪ್ರತಿಭಟನೆ, ರಾಜಕೀಯಗಳಿಂದ ಯಾವುದೇ ವಿವಾದಗಳು ಅಂತ್ಯ ಕಾಣಲು ಸಾದ್ಯವೇ ಇಲ್ಲ. ಇಂಥ ವ್ಯಾಜ್ಯ ಬಗೆಹರಿಸಬೇಕಾದರೆ ಅದಕ್ಕೆ ಕಾನೂನು ಸೂತ್ರ ಅಗತ್ಯ. ಇದಕ್ಕೆ ‘ಇಕ್ವಿಟೆಬಲ್ ಅಪೋರ್ಷನ್ಮೆಂಟ್’ ಎಂದು ಕರೆಯುತ್ತಾರೆ. ತಜ್ಞರ ಪ್ರಕಾರ ಈ ಸೂತ್ರವು ಅಂತಾರಾಷ್ಟ್ರೀಯ ಮಟ್ಟದ ವಿವಾದದ ಸಂದರ್ಭವೂ ಬಳಕೆಯಾಗಿತ್ತು. ಅಮೆರಿಕದ ಸುಪ್ರೀಂ ಕೋರ್ಟ್ ಸಹ ಈ ಸೂತ್ರವನ್ನು ಅನುಸರಿಸಿ ವಿವಾದ ಬಗೆಹರಿಸಿದೆ. ಮಾತುಕತೆ ಮೂಲಕವೇ ವ್ಯಾಜ್ಯ ಬಗೆಹರಿಸಿಕೊಳ್ಳಬೇಕಾದರೆ ರಾಜಕೀಯ ಸೂತ್ರ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಜಲ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೇಂದ್ರ ಸರ್ಕಾರ ಇಡೀ ಕುಟುಂಬದ ಮುಖ್ಯಸ್ಥನಾಗಿ ಮಧ್ಯಸ್ಥಿಕೆ ವಹಿಸುವ ಅಧಿಕಾರ ಹೊಂದಿದೆ. ಕೇಂದ್ರದ ಮಧ್ಯಸ್ಥಿಕೆಗೆ ಆಯಾ ರಾಜ್ಯಗಳ ಒಪ್ಪಿಗೆ ಅಗತ್ಯ. ಅದನ್ನು ಹೇರುವುದು ಅಸಾಧ್ಯ ಎಂಬ ರಾಜ್ಯದ ವಕೀಲರ ವಾದ ಸಮರ್ಥನೀಯವಾಗಿದೆ.ಅನುಮಾಣವೇ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಅನ್ಯಾಯವಾದಾಗ ಪ್ರತಿಭಟನೆ ಸಹಜ.ಆದರೆ, ನಾವು ಈಗ ಪ್ರತಿಭಟಿಸುತ್ತಿರುವ ರೀತಿ ಸರಿಯೇ ಎಂಬುದನ್ನು ಪ್ರಶ್ನಿಸಿಕೊಳ್ಳಲೇಬೇಕು. ಕಳೆದೊಂದು ವರ್ಷದಿಂದ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೂ ಈಗಿನ ರಾಜಕೀಯ ಪ್ರೇರಿತ ಪ್ರತಿಭಟನೆಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ನಡೆಯುತ್ತಿರುವ ಪ್ರತಿಭಟನೆಯಿಂದ ನಮಗೆ ಖಂಡಿತವಾಗಿಯೂ ನ್ಯಾಯ ಸಿಗುವ ಸಾಧ್ಯತೆ ಕಡಿಮೆ. ಮಹಾದಾಯಿ ನದಿ ನೀರಿಗಾಗಿ ಬೇಡಿಕೆ ಇಟ್ಟು ನಾವು ಈಗ ನಡೆಸುತ್ತಿರುವ ಹೋರಾಟಕ್ಕೆ ಸ್ಪಷ್ಟತೆಯೇ ಇಲ್ಲ. ರೈತರಲ್ಲಿರುವ ಪ್ರಖರತೆಯೂ ಇಲ್ಲ. ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಮಲಪ್ರಭಾ ನದಿಗೆ 1973-74ರಲ್ಲಿ ಅಣೆಕಟ್ಟು ಕಟ್ಟಿದ ನಂತರ ಇದುವರೆಗೆ ಮೂರು ಅಥವಾ ನಾಲ್ಕು ಸಾರಿ ಮಾತ್ರ ಅದು ತುಂಬಿದೆ. ಅದರ ಸಾಮರ್ಥ್ಯ 34.34ಟಿಎಂಸಿ ಅಡಿ. ಕಳೆದ ಅಕ್ಟೋಬನರ್ಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಸಮಯದಲ್ಲಿ ಜಲಾಶಯದಲ್ಲಿ ಇದ್ದ ನೀರಿನ ಪ್ರಮಾಣ ಕೇವಲ 11.42 ಟಿಎಂಸಿ ಅಡಿ. ಕಳೆದ ನಾಲ್ಕು ದಶಕಗಳಲ್ಲಿ ಒಟ್ಟು ಸಾಮರ್ಥ್ಯದ ಸರಾಸರಿ ಶೇಕಡಾ ೫೦ರಷ್ಟು ಪ್ರಮಾಣದಲ್ಲಿ ಮಾತ್ರ ಜಲಾಶಯಕ್ಕೆ ನೀರು ಬಂದಿದೆ. ಕೆಲವು ಸಾರಿ ಅಷ್ಟು ನೀರೂ ಹರಿದು ಬಂದಿಲ್ಲ. ಅಂದರೆ ಒಟ್ಟು ಈ ಯೋಜನೆಯೇ ಒಂದು ರೀತಿಯಲ್ಲಿ ನಿರರ್ಥಕವಾದುದು.

ಈಗ ಅದೇ ಮಲಪ್ರಭೆ ಚರಂಡಿ ನೀರಿಗಿಂತ ಕೆಟ್ಟದಾಗಿ ಹರಿಯುತ್ತಿದ್ದಾಳೆ. ನಮ್ಮ ಬೃಹತ್ ನೀರಾವರಿ ಯೋಜನೆಗಳು ಹೇಗೆ ನಮ್ಮ ನದಿ ಹರಿವನ್ನು ಹಾಳುಗೆಡವುತ್ತವೆ ಎಂಬುದಕ್ಕೆ ನವಿಲುತೀರ್ಥದ ಬಳಿ ನಿರ್ಮಿಸಿರುವ ಜಲಾಶಯಕ್ಕಿಂತ ಕೆಟ್ಟ ನಿದರ್ಶನ ಇನ್ನೊಂದು ಇರಲು ಸಾಧ್ಯವಿಲ್ಲ.
ಅದು ಮುಖ್ಯವಾಗಿ ನೀರಾವರಿ ಉದ್ದೇಶಕ್ಕೆ ನಿರ್ಮಿಸಿದ ಜಲಾಶಯವಾದರೂ ಅದರಿಂದ ಹುಬ್ಬಳ್ಳಿ-ಧಾರವಾಡದಂಥ ದೈತ್ಯ ನಗರಗಳ ಕುಡಿಯುವ ನೀರಿಗೂ ಅದೇ ಜಲಾಶಯದ ನೀರು ಆಧಾರವಾಗಿದೆ. ದಂಡೆಯಲ್ಲಿ ಇರುವ ಇತರ ಊರುಗಳಿಗೂ ಕುಡಿಯಲು ಸಹಜವಾಗಿಯೇ ನದಿಯಲ್ಲಿನ ಚೂರು ಪಾರು ನೀರೇ ಬೇಕಾಗುತ್ತದೆ. ಹೀಗೆ ಜಲಾಶಯದಲ್ಲಿನ ನೀರು ಕುಡಿಯುವ ಉದ್ದೇಶಕ್ಕೆ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳಿಗೆ ಬಳಕೆಯಾಗುತ್ತಿರುವುದರಿಂದ ರೈತರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಇಂಥ ಸಂದರ್ಭದಲ್ಲಿ ಹುಟ್ಟಿಕೊಂಡುದು ಕಳಸಾ ಬಂಡೂರಿ ನಾಲಾ ಯೋಜನೆ.

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು

Videos