ಗಂಗೆಯ ಇತಿಹಾಸ, ಜಲವಿದ್ಯುತ್ ಮತ್ತು ವಿಕಾಸ -ಭಾಗ -1

October 11, 2018 ⊄   By: ಡಾ. ಶ್ರೀನಿಧಿ. ವಿ

ಹಿಂದೀ ಮೂಲ: ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮೀಜಿ
ಕನ್ನಡಕ್ಕೆ: ಡಾ. ಶ್ರೀನಿಧಿ. ವಿ

ಗಂಗೆಯ ಸ್ವಾಭಾವಿಕ ಹರಿವಿಗೆ ಧಕ್ಕೆ ತರುತ್ತಿರುವ ಆಧುನಿಕ ಯೋಜನೆಗಳ ವಿರುದ್ಧ, ಗಂಗೆಯ ಮೇಲೆ ಆಗುತ್ತಿರುವ ದೌರ್ಜನ್ಯದಿಂದ ಅತೀವ ಹಾನಿಯಿಂದ ಮನನೊಂದು, ತ್ರಿಪಥಾ-ಗಂಗೆಯ (ಭಾಗೀರಥೀ- ಮಂದಾಕಿನೀ- ಅಲಕನಂದಾ) ಉಳಿವಿಗಾಗಿ ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮೀಜಿ (ಪೂರ್ವಾಶ್ರಮದಲ್ಲಿ ಐಐಟಿ ಕಾನ್ಪುರದ ಪ್ರೋಫೆಸರ್, ಕೇಂದ್ರೀಯ ಪ್ರದೂಷಣ ಮಂಡಳಿಯ ಮೊದಲ ಸದಸ್ಯ ಕಾರ್ಯದರ್ಶಿ, ಪ್ರಸಿದ್ಧ ವಿಜ್ಞಾನಿ ಪ್ರೋಫೆಸರ್ ಜಿ.ಡಿ. ಅಗ್ರವಾಲ್)ನಿರಶನ ಕುಳಿತಿದ್ದಾರೆ. ಸ್ವಾಮೀಜಿಯವರು ತಮ್ಮ ತಪಸ್ಸಿನ ಅನಿವಾರ್ಯವನ್ನು ಎಚ್ಚರಿಸುವ ಎರಡು (ಫೆ. ೨೪ ಹಾಗೂ ಜೂ.೧೩) ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದಾರೆ. ನಂತರ ಮೂರನೇ ಪತ್ರವನ್ನೂ ಆಗಸ್ಟ್ ೫ರಂದು ತಮ್ಮ ಭೇಟಿಗೆ ಬಂದಿದ್ದ ಕೇಂದ್ರ ಸಚಿವೆ ಸಾಧ್ವೀ ಉಮಾಭಾರತಿಯವರ ಮೂಲಕ ರವಾನಿಸಿದ್ದಾರೆ. ಕಳೆದ ಭಾಗೀರಥೀ ಜಯಂತಿಯಿಂದ ( ಜೂನ್ ೨೨)ಹರಿದ್ವಾರದ ಮಾತೃಸದನದಲ್ಲಿ ನಿರಂತರ ಉಪವಾಸದ ತಪಸ್ಸಿನಲ್ಲಿದ್ದಾರೆ. ಬೆಂಗಳೂರಿನ ಪೂರ್ಣಪ್ರಮತಿ ಶಾಲೆಯ ಕೆಲ ಮಕ್ಕಳು ಹಾಗೂ ಅಧ್ಯಾಪಕರು ಸ್ವಾಮೀಜಿಯವರನ್ನು ಅವರ ಉಪವಾಸದ ೫೦ನೇ ದಿನ ಭೇಟಿ ಮಾಡಿದಾಗ, ಅವರು ಇತ್ತೀಚೆಗೆ ಸ್ವತಃ ಬರೆದ ಲೇಖನಗಳೆರಡರ ಪ್ರತಿಯನ್ನು ಒದಗಿಸಿದ್ದಾರೆ. ಇವು ಗಂಗಾಮಾತೆಯನ್ನು ಆದರಿಸುವ ಜನರಿಗೆ ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆಯನ್ನು ಬಡಿದೆಬ್ಬಿಸುವ ಕರೆ. ಈ ಲೇಖನಗಳ ಯಥಾವತ್ ಕನ್ನಡ ಅವತರಣಿಕೆಯನ್ನು ಇಲ್ಲಿ ನೀಡಲಾಗಿದೆ.
-------೦-------
ಅ ೧: ಮೊಟ್ಟ ಮೊದಲನೆಯದಾಗಿ, ಗಂಗೆ ಒಂದು ಧಾರೆ. ಯಾವುದೇ ಧಾರೆಯ ಅತಿಮುಖ್ಯ ಗುಣ ಹರಿವು. ಹರಿವಿಲ್ಲದಿದ್ದರೆ ಅದು ಧಾರೆಯಲ್ಲ; ಕೆರೆಯೋ, ಸರೋವರವೋ, ಹೊಂಡವೋ ಅಥವಾ ಇನ್ನೇನೋ ಇರಬಹುದು; ಆದರೆ ಧಾರೆಯಲ್ಲ. ತೆಹ್ರಿ ಅಣೆಕಟ್ಟಿನ ಹಿಂಬದಿಯ ೫೦-೬೦ಕಿಮೀ, ಶ್ರೀನಗರ-ಅಲಕನಂದಾ ಅಣೆಕಟ್ಟಿನ ಹಿಂಬದಿಯ ೧೦-೧೫ಕಿಮೀ, ಮನೇರಿ ಅಣೆಕಟ್ಟಿನ ಹಿಂಬದಿಯ ೨-೩ಕಿಮೀ ಅಥವಾ ಉತ್ತರಕಾಶಿ ಮತ್ತು ವಿಷ್ಣುಪ್ರಯಾಗ ತಡೆಗೋಡೆಗಳ ಹಿಂಬದಿಯ ಒಂದೆರಡು ಕಿಮೀ ಕೂಡ - ಇವುಗಳನ್ನು ಇಂದು ಧಾರೆ ಎನ್ನಲೂ ಆಗದು, ಗಂಗೆಯೆನ್ನಲೂ ಆಗದು.
*
ಅ ೨: ಹಿಮಾಲಯ ಪರ್ವತದ ಹಿಮನದಿಗಳಿಂದ (ಗ್ಲೇಷಿಯರ್ಗಳಿಂದ) ಹಾಗೂ ಪರ್ವತದಿಂದಿಳಿವ ಜಲಪಾತಗಳಿಂದ ತುಂಬುವ ನೀರಾದ್ದರಿಂದ ಗಂಗೆಯ ಧಾರೆಗಳು ಸಾರ್ವಕಾಲಿಕ; ಸ್ವಾಭಾವಿಕವಾಗಿಯೇ ವರ್ಷಪೂರ್ತಿ ಹರಿಯುತ್ತವೆ; ಯಾವುದೋ ಒಂದು ಋತುವಿನಲ್ಲೋ, ಮಳೆಗಾಲದಲ್ಲೊ ಅಲ್ಲ. ಸೂಕ್ತ ಮುನ್ಸೂಚನೆಯೊಂದಿಗೆ ಮಳೆ, ಬಿಸಿಲು, ಹಿಮಪಾತ ಇವುಗಳನ್ನು ಆಧರಿಸಿ, ಈ ಧಾರೆಗಳಲ್ಲಿನ ಪ್ರವಾಹ ಕೆಲವೊಮ್ಮೆ ಹಿಗ್ಗುತ್ತದೆ; ಕೆಲವೊಮ್ಮೆ ತಗ್ಗುತ್ತದೆ. ದಿಢೀರನೆ ಅಲ್ಲ; ಅದರಲ್ಲೂ ಮುಖ್ಯವಾಗಿ ಮನುಷ್ಯರ ಬಯಕೆ ಅಥವಾ ಅತಿಯಾಸೆಯಿಂದಂತೂ ಅಲ್ಲವೇ ಅಲ್ಲ (ಇಂದು ಜಲವಿದ್ಯುತ್ಯೋಜನೆಗಳಿಂದ ಆಗಿಂದಾಗ್ಗೆ ಆಗುತ್ತಲೇ ಇರುವಂತೆ.)
*
ಅ೩: ಬೆಟ್ಟದ ಝರಿಗಳು, ನದಿಗಳು, ನಾಲೆಗಳು, ಹಳ್ಳಗಳು - ಈ ಎಲ್ಲ ಪ್ರಾಕೃತಿಕ ಜಲಧಾರೆಗಳಲ್ಲಿ ಒಂದು ವಿಶೇಷ ಗುಣವಿದೆ. ಅದೇನೆಂದರೆ, ಮೇಲಿನ ವಾಯುಮಂಡಲದೊಂದಿಗೆ ಹಾಗೂ ಮೂರು ದಿಶೆಗಳಲ್ಲಿ ಭೂಮಿಯೊಂದಿಗೆ (ಕೆಳಗಿನ ನದಿಯ ಪಾತ್ರ, ಹಾಗೂ ಇಬ್ಬದಿಯಲ್ಲಿ ನದಿಯ ದಡಗಳು) ಸದಾ ಸಂಪರ್ಕದಲ್ಲಿರುವುದು. ಹಾಗಾಗಿ ಈ ನೀರಿಗೂ ಹಾಗೂ ಈ ನಾಲ್ಕು ದಿಕ್ಕಿನ ಪದಾರ್ಥಗಳಿಗೂ ಪರಸ್ಪರ ಗುಣಗಳ ವಿನಿಮಯವಾಗುತ್ತಿರುತ್ತದೆ. ಕೆಲವೆಡೆ ನದಿಯ ಪಾತ್ರದ ಕೆಳಗಿನಿಂದ ಅಥವಾ ಪಕ್ಕದ ದಡಗಳಿಂದ ನೀರು ಬಂದು ನದಿಯನ್ನು ಸೇರುತ್ತದೆ; ಇನ್ನೂ ಕೆಲವೆಡೆ ನದಿಯ ನೀರು ಪಾತ್ರದೊಳಕ್ಕೆ ಇಂಗುತ್ತದೆ ಅಥವಾ ದಡಗಳಿಗೆ ಪಸರಿಸುತ್ತದೆ. ಕೆಲವೊಮ್ಮೆ ನದಿಯ ಪಾತ್ರದ ಅಥವಾ ದಡಗಳಲ್ಲಿನ ಮಣ್ಣಿನ ಕಣಗಳು ಬೇರ್ಪಟ್ಟು ಧಾರೆಯಲ್ಲಿ ಸೇರುತ್ತವೆ; ಕೆಲವೊಮ್ಮೆ ಧಾರೆಯಿಂದು ಬೇರ್ಪಟ್ಟು ಪಾತ್ರದಲ್ಲಿ ಅಥವಾ ದಡದಲ್ಲಿ ನಿಲ್ಲುತ್ತವೆ. ಕೆಲವೊಮ್ಮೆ ಗಾಳಿಯಲ್ಲಿನ ಆಕ್ಸಿಜನ್, ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಸಲ್ಫರ್ ಆಕ್ಸೈಡ್ ಮೊದಲಾದ ಅನಿಲಗಳು ನೀರಿನಲ್ಲಿ ಕರಗುತ್ತವೆ; ಹಾಗೆಯೇ ಜಲಚರಜೀವಿಗಳು ಹೊರಬಿಡುವ ಅನಿಲಗಳು ಜಲಧಾರೆಗಳಿಂದ ಹೊರಬಂದು ಗಾಳಿಯಲ್ಲಿ ತೇಲಿಹೋಗುತ್ತವೆ. ಒಂದು ವೇಳೆ ನದಿಗೊಂದು ಚಾವಣಿ ಹಾಕಿ ನದಿ ಹಾಗೂ ವಾಯುಮಂಡಲದ ಸಂಪರ್ಕ ಕಳೆದರೆ, ಅಥವಾ ನದೀ ಪಾತ್ರವನ್ನು ಕಾಂಕ್ರೀಟಿನ ನೆಲವನ್ನಾಗಿಸುವ ಮೂಲಕ ಅಥವಾ ಇಬ್ಬದಿಗಳಲ್ಲಿ ಕಾಂಕ್ರೀಟಿನ ಗೋಡೆಕಟ್ಟುವ ಮೂಲಕ ನದಿಗೂ ಭೂಮಿಗೂ ಸಂಪರ್ಕ ಕಳೆದರೆ, ಆಗ ಅದು ಪ್ರಾಕೃತಿಕ ನದಿಯೇ ಆಗಲಾರದು. ಪ್ರಾಕೃತಿಕ ನದಿಯ ಈ ಆವಶ್ಯಕ ಗುಣಗಳನ್ನು ಆಂಗ್ಲಭಾಷೆಯಲ್ಲಿ open to air, bed connectivity lateral ಮತ್ತು connectivity ಎಂದು ಕರೆಯುತ್ತಾರೆ.
*
ಅ ೪: ಮೇಲೆ ಹೇಳಿದ ಎಲ್ಲ ಗುಣಗಳು, ಸದಾ ಹರಿವ ಸಮುಚಿತ ಪ್ರವಾಹ (ವೇಗ ಮತ್ತು ಪ್ರಮಾಣ ಎರಡೂ ದೃಷ್ಟಿಗಳಿಂದ) ಹಾಗೂ ಭೂಮಿಯ ಮೂರೂ ದಿಶೆಗಳೊಂದಿಗೆ (ಪಾತ್ರ ಹಾಗೂ ದಡಗಳು) ಸಂಪರ್ಕ, ಇವುಗಳೊಂದಿಗೆ ಅವಿಚ್ಛಿನ್ನವಾದ ಹರಿವಿನ ಮಾರ್ಗದ ನಿಯಮವೂ (Longitudinal connectivity) ಸೇರಿದರೆ, ಆಗ ಅಂತಹ ಜಲಧಾರೆಯನ್ನು ನಾವು ಅವಿರಳ ಎಂದು ಕರೆಯುತ್ತೇವೆ. ತಾತ್ತ್ವಿಕವಾಗಲೀ, ವಾಸ್ತವಿಕವಾಗಲೀ ಈ ಎಲ್ಲ ನಿಯಮಗಳು ಕೈಗೂಡುವುದು ಮಾನವನ ಕೈವಾಡ ಇಲ್ಲದ ನದಿಯಲ್ಲಿ ಮಾತ್ರ ಎಂಬುದು ಸ್ಪಷ್ಟ. ವ್ಯಾವಹಾರಿಕವಾಗಿ ಚಿಕ್ಕ-ಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುವುದು ಎಂಬುದೇನೋ ನಿಜ- ಉದಾಹರಣೆಗೆ ಸೇತುವೆ ನಿರ್ಮಾದಲ್ಲಿ ಮಾಡುವಂತೆ.
*
ಅ೫: ಎಲ್ಲ ಮಾನವ- ನಾಗರಿಕತೆಗಳು ನದಿ ಕಣಿವೆಗಳಲ್ಲಿಯೇ ಹುಟ್ಟಿದ್ದು, ಬೆಳೆದದ್ದು ಎಂದು ಎಲ್ಲರೂ ತಿಳಿದೇ ಇದ್ದಾರೆ. ಈ ಹುಟ್ಟಿಗೆ, ಪೋಷಣೆಗೆ ಕಾರಣ ಬರಿಯ ನೀರಲ್ಲ; ಅಷ್ಟೇ ಮುಖ್ಯವಾದದ್ದು ಫಲವತ್ತಾದ ಮಣ್ಣಿನ ಹುಟ್ಟು, ವಿನಿಮಯ ಮತ್ತು ಹೊಸತನವೂ ಆಗಿತ್ತು. ಇವಾವೂ ಸಹ ನದಿಯ ನಿರಂತರ ಹರಿವಿಲ್ಲದೇ ಸಾಧ್ಯವೇ ಇಲ್ಲ.ಅಂತರ್ಜಲದ ಮಟ್ಟವನ್ನು ಕಾಪಾಡಿಕೊಂಡು, ಮಳೆಯಿಲ್ಲದ ಮಾಸಗಳಲ್ಲಿ ಕುಡಿಯುವುದಕ್ಕಾಗಿ ಹಾಗೂ ಗದ್ದೆಗಳ ನೀರಾವರಿಗಾಗಿ ನೀರೊದಗಿಸುವುದು ಸಹ ನಿರಂತರ ಹರಿವಿಲ್ಲದೇ ಅಸಂಭವ. ಹರಿವಿನ ಅತ್ಯಂತ ಹೆಚ್ಚಿನ ಆವಶ್ಯಕತೆಯಂತೂ ಬಗೆಬಗೆಯ ಜಲಚರಜೀವಿಗಳಿಗಿದೆ; ಹಿಲಸಾ ಮೀನುಗಳಿರಬಹುದು ಅಥವಾ ಡಾಲ್ಫಿನ್, ಘಡಿಯಾಲ, ಆಮೆ, ಬ್ಯಾಕ್ಟೀರಿಯಾ ಅಥವಾ ಕ್ರಿಮಿಯನ್ನು ತಿನ್ನುವ ಕಪ್ಪೆಗಳು!
*
ಅ ೬: ಗಂಗೆಯು ಮೊದಲ ದೃಷ್ಟಿಯಲ್ಲಿ ಒಂದು ನೈಸರ್ಗಿಕ ಜಲಧಾರೆ; ಒಂದು ನದಿ (ಅ-೧ ರಲ್ಲಿಹೇಳಿದಂತೆ); ಅ೧ ರಿಂದ ಅ೫ ರವರೆಗೆ ತಿಳಿಸಿದ ಈ ಎಲ್ಲ ಗುಣಗಳು ಬೇರೆಲ್ಲ ನದಿಗಳಿಗೂ ಸಂಬಂಧಿಸಿದ್ದು, ಹಾಗಾಗಿ ಗಂಗೆಗೂ ಸಂಬಂಧಿಸಿವೆ. ಆಯಾ ನದಿಗೆ, ಆಯಾಕಾಲದಲ್ಲಿ ಹಾಗೂ ಆಯಾ ಸ್ಥಳದಲ್ಲಿ ಅವಶ್ಯಕವಾದ ಪರ್ಯಾವರಣೀಯ ಪ್ರವಾಹ ಎಲ್ಲ ನದಿಗಳಲ್ಲೂ ಆಯಾ ಕಾಲದಲ್ಲಿ ಹಾಗೂ ಆಯಾ ಸ್ಥಳದಲ್ಲಿ ಇರಲೇಬೇಕು. ಜತೆಗೆ bed connectivity, longitudinal laternal connectivity ಹಾಗೂ open to ಮೊದಲಾದ ಅವಿರಳತೆಯ ಎಲ್ಲ ನಿಯಮಗಳೂ (ಚಿಕ್ಕ-ಪುಟ್ಟಹೊಂದಾಣಿಕೆಗಳೊಂದಿಗೆ) ಈಡೇರಬೇಕು. ಆದರೆ, ಗಂಗೆಯ ವಿಷಯದಲ್ಲೂ ಸಹ ಇಷ್ಟು ಮಾತ್ರ, ಅಂದರೆ ಅವಿರಳತೆಯ ನಿಯಮಗಳು ಮಾತ್ರ ಈಡೇರುವುದು ಸಾಕೇ? ಇಲ್ಲ! ಇಲ್ಲ!
*
ಅ೭: ನಮ್ಮ ಪ್ರಾಚೀನ ಸಂಸ್ಕೃತಿಗಳಲ್ಲಿ (ಭಾರತದಲ್ಲಿ ಜನ್ಮತಾಳಿದ ಹಿಂದೂ, ಬೌದ್ಧ, ಜೈನ, ದ್ರಾವಿಡ, ಬುಡಕಟ್ಟು, ಮೊದಲಾದ ಎಲ್ಲ) ಗಂಗೆಗೆ ಅತ್ಯಂತ ವಿಶೇಷ ಹಾಗೂ ಬೇರೆಲ್ಲ ನದಿಗಳಿಗಿಂತ ಎತ್ತರದ ಸ್ಥಾನ ಕೊಡಲಾಗಿದೆ: ರಾಮಾಯಣ ಹಾಗೂ ಭಗೀರಥ ರಾಜನ ಕಥೆಗಳ ಮೂಲಕ ಗಂಗೆಯನ್ನು ಪಾಪ-ನಾಶಕ ಹಾಗೂ ಮೋಕ್ಷ-ದಾಯಕ ಎನ್ನುವ ಮೂಲಕ; ನಮ್ಮ ಹಿರಿಯ ದೇವತೆಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನೂ ಅವಳೊಂದಿಗೆ ಜೋಡಿಸುವುದರ ಮೂಲಕ; ಧಾರೆಗಳಲ್ಲಿ ನಾನು ಜಾಹ್ನವೀ ಎಂದು ಗೀತೆಯಲ್ಲಿ ಶ್ರೀಕೃಷ್ಣನ ಮಾತಿನ ಮೂಲಕ; ರೋಗ, ಶೋಕ, ತಾಪ ಹಾಗೂ ಪಾಪಗಳನ್ನು ಕಳೆವ ಧಾರೆಯೆಂದು ಆದಿಶಂಕರರು ಹೇಳುವ ಮೂಲಕ; ಪುರಾಣಗಳಲ್ಲಂತೂ ಸೀಮೆಯಿಲ್ಲದಷ್ಟು ಕಥೆಗಳಿವೆ. ಕೆಲವಡೆ ಗಂಗೆಯನ್ನು ದೇವತೆಯಾಗಿಸಿ, ಕೆಲವೆಡೆ ಮಾನುಷಳಾಗಿಸಿ ಚಿತ್ರಿಸಲಾಗಿದೆ. ಯಾವುದೇ ಸಂಸ್ಕೃತ ಪಂಡಿತರನ್ನು ಗಂಗೆಯ ಮಹತ್ತ್ವದ ಬಗ್ಗೆ ಕೇಳಿದರೆ, ಅವರು ಅನೇಕ ಶ್ಲೋಕಗಳನ್ನು ಹೇಳಿಯಾರು; ಪುರಾಣದ ಕಥೆಗಳನ್ನು ಕೇಳಿಸಿಯಾರು; ಆಧಾರವೇನು ಎಂದರೆ, ಶಾಸ್ತ್ರದ ಮಾತು ಹೇಳಿಯಾರು. ನನಗೆ ಶಾಸ್ತ್ರಗಳ ಬಗ್ಗೆ ನಂಬಿಕೆಯಿದೆ; ಆದರೆ ಶಾಸ್ತ್ರದ ಹೆಸರಿನಲ್ಲಿ ನಡೆವ ಢೋಂಗಿತನದಲ್ಲಿಲ್ಲ. ಗಂಗೆ, ಆಕೆಯ ನೀರು, ಅವಳಿಂದ ತರಲ್ಪಟ್ಟ ಮಣ್ಣು, ನೆಲದಲ್ಲೇ ನಿಲ್ಲುವ ಹೂಳು ಮತ್ತು ತೇಲುವ ನೆರೆ ಮಣ್ಣು, ಜಲಚರಗಳ ವೈಶಿಷ್ಟ್ಯಗಳು - ಇವುಗಳನ್ನೆಲ್ಲ ನಮ್ಮ ಪೂರ್ವಜರು ಅವರ ಅನುಭವದಲ್ಲಿ ತಿಳಿದರು, ಹುಡುಕಿದರು, ವರ್ಷಗಟ್ಟಲೆ ಗಮನಿಸಿದರು. ಹಾಗೂ ತಿಳಿವಳಿಕೆಯಿಲ್ಲದ ಹಾಗೂ ಅನುಭವವಿಲ್ಲದ ತಮ್ಮ ಮುಂದಿನ ಪೀಳಿಗೆಗಳಿಗೆ ಈ ಗಂಗೆಯನ್ನು ನಮಗೊದಗಿರುವ ವಿಶೇಷ ವರದಾನವೆಂದು ಆದರಿಸಿ, ಸಂರಕ್ಷಿಸಲು ತಿಳಿಸಿದರು. ಆದರೆ, ಕೆಲವು ಸ್ವಾರ್ಥ ಪರರು ಗಂಗೆಯನ್ನೊಂದು ಪೌರಾಣಿಕ ಪಾತ್ರವಾಗಿಸಿಬಿಟ್ಟರು. ಹೋಗಲಿ, ಈ ಮೂಢತೆ ಹಾಗೂ ಢೋಂಗೀತನದಿಂದಲಾದರೂ ಗಂಗಾಮಾತೆಯು ಮಾನವನ ಕೈವಾಡದಿಂದ ತಪ್ಪಿಸಿಕೊಂಡು ಬದುಕಿದಳು- ಹತ್ತೊಂಬನೇ ಶತಮಾನದಲ್ಲಿ ಸರ್ಕಾರವೇ ಕೈಗೊಂಡ ಕಾಮಗಾರಿಗಳ ತನಕ. ಅಷ್ಟೇ ಅಲ್ಲ, ಹಿಲಸಾ ಮೀನು, ಗಾಂಗೇಯ ಡಾಲ್ಫಿನ್, ಬೇರೆಯ ಗಾಂಗೇಯ ಜಲಚರಗಳು, ಗಂಗೆಯ ಮಣ್ಣು, ಹೂಳು, ನೆರೆಮಣ್ಣು, ಸವಳು, ಗಂಗಾಜಲದ ಕೊಳೆರೋಧಕ ಸಾಮರ್ಥ್ಯ, ಮಾಲಿನ್ಯ ಪರಿಹಾರಕ ಶಕ್ತಿ, ರೋಗ ನಾಶಕ ಗುಣಗಳನ್ನು ನಮ್ಮ ಪೂರ್ವಜರು ಅವರ ದೀರ್ಘ ಅನುಭವದಿಂದ ತಾನೇ ತಿಳಿದಿರಬೇಕು? ನನಗಂತೂ ಈ ಎಲ್ಲವನ್ನೂ ನನ್ನ ತಂದೆ ಮತ್ತು ಅಜ್ಜಿ ಹೇಳಿಕೊಟ್ಟದ್ದು; ಅವರಂತೂ ವಿಜ್ಞಾನ ಓದಿರಲಿಲ್ಲ, ಶಾಸ್ತ್ರದ ಬಗ್ಗೆ ನಂಬಿಕೆ ಇಟ್ಟವರಲ್ಲ.
ಗಂಗಾಜಲ, ಆಕೆಯ ಮಣ್ಣು, ಹೂಳು, ಸವಳು, ನೆರೆಮಣ್ಣು (ಅಲ್ಲದೇ ಮರಳು, ಕಲ್ಲು, ಬಂಡೆಗಳು ಸಹ - ಇವುಗಳಿಂದ ತಾನೇ ಮಣ್ಣು, ಹೂಳು ಮೊದರಾದವುಗಳ ಸೃಷ್ಟಿಯಾಗುವುದು?) - ಇವುಗಳ ವಿಶ್ಲೇಷಣೆ ಮತ್ತು ಅಧ್ಯಯನಗಳೇ ಇವತ್ತು ಸಂಶೋಧಕರ ಕರ್ತವ್ಯ. ಹಾಗೆ ಮಾಡಿ ಇವುಗಳ ಗುಣಗಳನ್ನು ಉಳಿಸಿ-ಬೆಳೆಸುವ ಬಗೆಗಳನ್ನು, ಪರಿಮಾಣವನ್ನು ಅಳೆವ ಮಾಪನಗಳನ್ನು ಹಾಗೂ ಈ ಗುಣಗಳ ವೈಜ್ಞಾನಿಕ ಕಾರಣಗಳನ್ನು ತಿಳಿಯಲು ಪ್ರಯತ್ನಿಸಬೇಕು, ಪ್ರೇರಿಸಬೇಕು, ಅವಶ್ಯಕತೆ ಬಿದ್ದರೆ ಆದೇಶಿಬೇಕು - ಇದೆಲ್ಲವೂ ನಮ್ಮ ಮುಖಂಡರ ಹಾಗೂ ಸರಕಾರಗಳ ಕರ್ತವ್ಯ. ಇಂತಹ ಸಂಶೋಧನೆಗಳು ಅವಶ್ಯಕ ಮಟ್ಟದಲ್ಲಿ ನಡೆಯುತ್ತಿವೆಯೇ? ನಡೆಯುತ್ತಿಲ್ಲವಾದರೆ, ಅದಕ್ಕೆ ಕಾರಣವೇನು? ಅದಾಗದ ತನಕ, ಗಂಗೆಯನ್ನೂ ಒಂದು ಸಾಮಾನ್ಯ ನದಿಯಂತೆ ಕಂಡು, ಅಭಿವೃದ್ಧಿಯಯ ರಥಚ ಚಕ್ರದಲ್ಲಿ ಅವಳನೂ ್ನಸಿಲುಕಿಸಿ ಸಾಯಿಸುವುದೇ?ಅರೇ, ಎಂತಹ ಮಹಾನ್ ಸರಕಾರ!
*ಅ೮: ಮೇಲಿನ ಚರ್ಚೆಯಿಂದ ಈಕೆಳಕಂಡ ವಿಷಯಗಳು ಸ್ಪಷ್ಟವಾಗುತ್ತವೆ-
ಕ. ಗಂಗಾ ಜಲ ಸಾಮಾನ್ಯ ಜಲದಂತಲ್ಲ - ಅದರಲ್ಲಿ ಅದ್ಭುತವಾದ ಅಸದೃಶವಾದ ಕೊಳೆ-ರೋಧಕ, ರೋಗನಾಶಕ, ಸ್ವಾಸ್ಥ್ಯವರ್ಧಕ, ಮಾಲಿನ್ಯ ಪರಿಹಾರಕ ಶಕ್ತಿಗಳಿವೆ - ಅವುಗಳನ್ನು ಕಾಪಿಡಬೇಕು.
ಖ. ಈ ಗುಣಗಳಿಗೆ ನದಿಯಲ್ಲಿ ಬೆರೆತಿರುವ ಕಣಗಳೇ ಕಾರಣ. ನದಿಯ ಹರಿವಿಗೆ ಉಪಟಳ ಮಾಡಿದರೆ, ಈ ಕಣಗಳು ಅಲ್ಲೇ ಕೆಳಗೆ ಹೂತುಬಿಡುತ್ತವೆ (ಉದಾಹರಣೆಗೆ, ಅಣೆಕಟ್ಟು ಅಥವಾ ತಡೆಗೋಡಿಗಳಿಂದ ನಿಲ್ಲಿಸಿದಾಗ) ಅಥವಾ ನಾಶವಾಗುತ್ತವೆ (ಉದಾಹರಣೆಗೆ ಟರ್ಬೈನ್ ಮೂಲಕ ಹರಿಸಿದಾಗ)

ಗ. ಗಂಗಾಜಲದ ವಿಶೇಷ ಗುಣಗಳನ್ನು ಕಾಪಾಡಲು ಅದರಲ್ಲಿ ಅವಿರಳವಾದ ಹರಿವು ಇರಲೇಬೇಕು.
ಘ. ಗಂಗೆಯಲ್ಲಿನ ಜಲಚರಜೀವಿಗಳ ರಕ್ಷಣೆಗಾಗಿಯೂ ಅವಿರಳತೆಯ ನಿಯಮ ಅತ್ಯಾವಶ್ಯಕ.

ಙ. ಗಂಗೆಯಲ್ಲಿನ ವಿಶೇಷ ಗುಣದಿಂದ ಕೂಡಿದ ನೀರು ಸ್ವಲ್ಪ ಪ್ರಮಾಣದಲ್ಲಾದರೂ ಗಂಗಾಸಾಗರದ ತನಕ ಹರಿಯಲೇಬೇಕು; ಮತ್ತು ಜಲಚರಗಳ ರಕ್ಷಣೆಯೂ ಆಗಬೇಕು; ಅದಕ್ಕಾಗಿ ಗಂಗೆಯ ಎಲ್ಲ ಸ್ಥಳಗಳಲ್ಲೂ ಕನಿಷ್ಠಮಟ್ಟದ ಪರ್ಯಾವರಣೀಯ ಹರಿವನ್ನು ಕಾಯ್ದಿರಸಬೇಕಾದದ್ದು ಅತ್ಯಂತ ಅವಶ್ಯಕ.ಚ. ಗಂಗಾಜಲದಲ್ಲಿನ ಗುಣವನ್ನು ಅರಿಯಲು, ಬೇರೆ ಸಾಮಾನ ್ಯಜಲದ ಗುಣಗಳನ್ನು ಅರಿಯಲು ಬಳಸುವ pH (acidity), DO (Dissolved Oxygen), BOD(Bilolgical Oxygen Demand), TDS (Total Dissolved Solids), FC (Free Chlorine), TC (Total Chlorine) ಇತ್ಯಾದಿ ಮಾಪನಗಳು ಸಾಲುವುದಿಲ್ಲ; ಅಥವಾ ಕೇಂದ್ರೀಯ ಪ್ರದೂಷಣ ಮಂಡಳಿ, (Bureau of Indian Standards), EPA (United States Environmental Protection Agency) ಅಥವಾ WHO (World Health Organization) ಇಂತಹ ಸಂಸ್ಥೆಗಳ ಮಾಪನಗಳನ್ನೂ ಗಂಗೆಯಲ್ಲಿ ಅಳವಡಿಸಿದರೆ ಸಾಲುವುದಿಲ್ಲ RO (Reverse Osmosis), UV (ULTRA Violet) ಮೊದಲಾದ ಆಧುನಿಕ ತಂತ್ರಜ್ಞಾನದಿಂದ ಸಂಸ್ಕರಿಸಿದ ಜಲ ಸಹ ಗಂಗಾ ಜಲವಾಗಲೀ ಅದಕ್ಕೆ ಸಮಾನವಾಗಲೀ ಆಗಲಾರದು. ಗಂಗಾಜಲದ ಗುಣಗಳನ್ನು ಅಳೆಯಲು ನಾವು ಹೊಸ ಅಳತೆಗೋಲುಗಳನ್ನು ಮತ್ತು ಉಪಕರಣಗಳನ್ನು ಕಂಡುಕೊಳ್ಳಬೇಕು. ನೆನಪಿರಲಿ - ನಿರ್ಮಲವಾದ ನೀರು ಗಂಗೆಯ ನೀರಾಗಲಾರದು. ಗಂಗಾಜಲದ ಗುಣಗಳು ಬರಿಯ ನಿರ್ಮಲತೆಗಿಂತ ತುಂಬಾ ವಿಭಿನ್ನ ಮತ್ತು ತುಂಬಾ ಮೇಲ್ಮಟ್ಟದ್ದು.

ಛ. ಇದರ ಅರ್ಥ ನೈರ್ಮಲ್ಯದ ಅವಶ್ಯಕತೆಯೇ ಇಲ್ಲವೆಂದಲ್ಲ; ಯಾಕೆಂದರೆ ಗಂಗೆಗೆ ಸೇರುವ ಮಾಲಿನ್ಯವು ಗಂಗೆಯಲ್ಲಿನ ಸ್ವಾಭಾವಿಕ ಗುಣದ ಮೇಲೆ ದುಷ್ಪ್ರಭಾವ ಬೀರಬಲ್ಲುದು. ಆದರೆ ಮುಖ್ಯವಾಗಿ ಬೇಕಾಗಿರುವುದು, ಹರಸಾಹಸ ಮಾಡಿ ಗಂಗೆಯ ಸ್ವಾಭಾವಿಕ ಗುಣಗಳ ಮೌಲ್ಯಮಾಪನ ಹಾಗೂ ಅವುಗಳ ರಕ್ಷಣೆ.

(ಬ) ಜಲವಿದ್ಯುತ್ ಮತ್ತು ವಿಕಾಸ

ಬ೧: ಯಾವುದೇ ಕ್ರಿಯೆಯು ಶಕ್ತಿಯಿಲ್ಲದೇ ಆಗಲಾರದು; ಅದು ಜೈವಿಕ ಕ್ರಿಯೆಯಿರಬಹುದು, ಭೌತಿಕವಿರಬಹುದು; ರಾಸಾಯನಿಕವಿರಬಹುದು ಅಥವಾ ಪ್ರಾಕೃತಿಕವಿರಬಹುದು. ಹಾಗೆಯೇ ನಮ್ಮ ಭೂಮಿಯ ಮೇಲೆ ಇರುವ ಶಕ್ತಿಯ ಏಕಮಾತ್ರ ಆಕರ ಸೂರ್ಯ (ಎಲ್ಲ ಪದಾರ್ಥಗಳ ಮೂಲಶಕ್ತಿ ಸೂರ್ಯನೇ; ಏಕೆಂದರೆ ಈ ಭೂಮಿಯೂ ಸೂರ್ಯನಿಂದ ಬೇರ್ಪಟ್ಟ ಒಂದು ತುಣುಕೇ ತಾನೇ!). ಸೂರ್ಯನಿಂದ ದೊರೆತ ಈ ಶಕ್ತಿ ಒಂದೆಡೆ ಎಲ್ಲಾ ಘನ ಹಾಗೂ ದ್ರವ ಪದಾರ್ಥಗಳಲ್ಲಿ ರಾಸಾಯನಿಕ ಶಕ್ತಿಯ ರೂಪದಲ್ಲಿ, ಹಾಗೆಯೇ ಭೂಗರ್ಭದಲ್ಲಿ ಜಛಿಟ-ಠಿಛ್ಟಿಞಚ್ಝ ಶಕ್ತಿಯ ರೂಪದಲ್ಲಿ ಹುದುಗಿದೆ; ಇನ್ನೊಂದೆಡೆ ಸೂರ್ಯನ ಕಿರಣಗಳ ಮೂಲಕ ಬೆಳಕು ಮತ್ತು ಶಾಖದ ರೂಪದಲ್ಲಿ; ಅಷ್ಟೇ ಅಲ್ಲ ಗಾಳಿಯ ಬೀಸುವಿಕೆಯಿಂದ ದೊರೆಯುವ ಪವನ ಶಕ್ತಿ, ಸಮುದ್ರದ ತರಂಗಗಳಲ್ಲಿ ಹಾಗೂ ಏರಿಳಿತಗಳಲ್ಲಿ ತುಂಬಿದ; ಅಥವಾ ಗಿಡ-ಮರಗಳಲ್ಲಿ ಸೇರಿದ ರಾಸಾಯನಿಕ ಶಕ್ತಿಯೂ ಸಹ ಮೂಲತಃ ಸೂರ್ಯನ ಶಕ್ತಿಯೇ. ಎತ್ತರದ ಬೆಟ್ಟಗಳಿಂದ ವೇಗವಾಗಿ ಕೆಳ ಧುಮುಕುವ ನೀರಿನಲ್ಲಿ ಅಥವಾ ಜಲಪಾತಗಳಲ್ಲಿ ಇರುವ ಭೌತಿಕ ಶಕ್ತಿಯೂ (static ಅಥವಾ potential energy + ವೇಗದಿಂದ ಲಭಿಸಿದ dynamic energy) ಸಹ ಮೂಲತಃ ಸೂರ್ಯನ ಶಕ್ತಿಯೇ. ಟರ್ಬೈನ್ ಜನರೇಟರ್ಗಳ ಮೂಲಕ ಈ ಶಕ್ತಿಯನ್ನು ಸಂಗ್ರಹಿಸಿ ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವುದನ್ನೇ ಜಲ-ವಿದ್ಯುತ್ ಉತ್ಪಾದನೆ ಎನ್ನಲಾಗುವುದು.ಬ೨: ಜೀವನದ ಉದ್ದೇಶವೇ ಕ್ರಿಯಾಶೀಲರಾಗಿರುವುದು. ಸೃಷ್ಟಿಯಲ್ಲಿ ಜೀವನದ ಹುಟ್ಟಿನಿಂದಲೇ ಪ್ರತಿಯೊಂದು ಜೀವವೂ ತನ್ನೆಲ್ಲ ಸ್ವಾಭಾವಿಕ ಹಾಗೂಆವಶ್ಯಕ ಕ್ರಿಯೆಗಳನ್ನು ತನ್ನ ದೇಹದಲ್ಲೇ ಇರುವ ರಾಸಾಯನಿಕ ಶಕ್ತಿಯಿಂದಲೇ ನಡೆಸುತ್ತಿತ್ತು; ಈ ರಾಸಾಯನಿಕ ಶಕ್ತಿಯು ದ್ಯುತಿ-ಸಂಶ್ಲೇಷಣ ಕ್ರಿಯೆಯಿಂದಲೋ ಅಥವಾ ತಿಂದ ಆಹಾರದ ಆಕ್ಸಿಡೇಷನ್ನಿನ ಮೂಲಕವೋ ಅಥವಾ ಇನ್ನಾವುದೋ ರಾಸಾಯನಿಕ ಕ್ರಿಯೆಯಿಂದಲೋ ದೊರೆಯುತ್ತಿತ್ತು. ಅತ್ಯಂತ ಚಿಕ್ಕ ಜೀವಾಣುಗಳಿಂದಾರಂಭಿಸಿ, ಮನುಷ್ಯನೂ ಸೇರಿದ ದೊಡ್ಡ ದೊಡ್ಡ ಪಶುಪಕ್ಷಿಗಳ ತನಕ ಯಾವ ಜೀವರಿಗೂ ಈ ರಾಸಾಯನಿಕ ಶಕ್ತಿಗಳನ್ನು ಹೊರತುಪಡಿಸಿ ಬೇರಾವುದೇ ಶಕ್ತಿಯ ಅವಶ್ಯಕತೆಯಿರಲಿಲ್ಲ. ಎಲ್ಲ ಜೀವಿಗಳು ತಮ್ಮೆಲ್ಲ ಕ್ರಿಯೆಗಳನ್ನು ದ್ಯುತಿ-ಸಂಶ್ಲೇಷಣೆಯಿಂದ ಅಥವಾ ಊಟದಿಂದ ದೊರೆತ ಶಾರೀರಕ ಶಕ್ತಿಯಿಂದಲೇ ತಾವೇ ನಡೆಸುಕೊಳ್ಳುತ್ತಿದ್ದವು. ಇರುವೆಗಳು, ಜೇನು ಹುಳಗಳು ಹಾಗೂ ಶೈಶವಾವಸ್ಥೆಯ ಪ್ರಾಣಿಗಳನ್ನು ಹೊರತುಪಡಿಸಿ, ಹೆಚ್ಚಿನ ಜೀವಿಗಳಲಿ ್ಲಸಹಯೋಗದ ಅವಶ್ಯಕತೆಯೂ ಇರಲಿಲ್ಲ. ಆದರೆ, ಮಾನವ ಜಾತಿಯಂತೂ ಬಹಳ ಬುದ್ಧಿಯುಳ್ಳದ್ದು.

ಶ್ರಮವನ್ನು ತಪ್ಪಿಸಿಕೊಳ್ಳುವ ಬಗೆಗಳನ್ನು ಕಾಣದಿದ್ದರೆ ಅದೆಂಥ ಬುದ್ಧಿ? ಹಾಗಾಗಿ ಶರೀರ ಶ್ರಮದಿಂದ ತಪ್ಪಿಸಿಕೊಳ್ಳಲು ಪಶುಗಳ ಹಾಗೂ ಆಳುಗಳ ದೇಹ ಬಲದ ಶಕ್ತಿಯನ್ನು ಬಳಸಲು ಆರಂಭಿಸಲಾಯಿತು. ನಾಗರಿಕತೆಯು ಬೆಳೆದಂತೆ, ಸ್ವಂತ ಶರೀರ ಬಲದಂತೆ ಪಶು ಬಲವನ್ನು ಉಪಯೋಗಿಸುವುದೂ ಹೇಯವೆನಿಸತೊಡಗಿತು. ಜತೆಗೆ, ದಿನಕಳೆದಂತೆ ಶಕ್ತಿಯ ಅವಶ್ಯಕತೆಯೂ ಎರಡೆರಡು ಪಟ್ಟಾಗಿ ಬೆಳೆಯಲಾರಂಭಿಸಿತು, ರಾತ್ರಿ ಕಳೆದಂತೆ ನಾಲ್ಕು ಪಟ್ಟಾಯಿತು ! ವಾಹನಗಳು, ದೀಪಗಳು, ಪಂಖಗಳು, ಅಷ್ಟೇ ಅಲ್ಲ, ಎಸಿ, ಮಿಕ್ಸಿ, ಓವೆನ್, ಫ್ರಿಜ್, ವಾಷಿಂಗ್ಮಿಷನ್, ವ್ಯಾಕ್ಯೂಮ್ ಕ್ಲೀನರ್, ಹಾಗೂ ಥರಾವರಿ ಕಾರ್ಖಾನೆ ಉತ್ಪನ್ನಗಳು! ಎಷ್ಟೆಷ್ಟು ಹೆಚ್ಚೆಚ್ಚು ನಾಗರಿಕರೋ, ಅಷ್ಟಷ್ಟು ಹೆಚ್ಚಿನ ಶಕ್ತಿಯ ಬಳಕೆ. ಆದರೂ ತೃಪ್ತಿಯಿಲ್ಲ. ಇನ್ನೂ ಬೇಕು, ಮತ್ತೂ ಬೇಕು! ಹೀಗಿರುವಾಗ ಬೆಟ್ಟಗಳಿಂದ ಹರಿವ ನೀರಿನಲ್ಲಿನ ಜಲವಿದ್ಯುತ್ತಿನ ಮೇಲೆ ಅತಿಯಾಸೆಯ ಕಣ್ಣು ಹೇಗೆ ತಾನೇ ಬೀಳದು?

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.

Photos

ರೆಕ್ಕೆ ಇದ್ದರೆ ಸಾಕೆ...

Videos