ಗಂಗೆಗಾಗಿ ಸಂತರಾದ ಜ್ಞಾನದ ‘ಆಗರ’ವಾಲರು

March 10, 2018 ⊄   By: ರಾಧಾಕೃಷ್ಣ ಭಡ್ತಿ

ಗಂಗೆಯ ರಕ್ಷಣೆಗಾಗಿ ವಿಜ್ಞಾನಿ ಸಂತ ಸ್ವಾಮಿ ಜ್ಞಾನ್ ಸ್ವರೂಪ್ ಸನಂದ್ ಮತ್ತೆ ಉಪವಾಸ ಕುಳಿಯುವ ಸೂಚನೆ ನೀಡಿದ್ದಾರೆ. ಕೇಂದ್ರ ಸರಕಾರ ನಮಾಮಿ ಗಂಗಾ ಯೋಜನೆ ಜಾರಿಗೆ ತಂದರೂ ತೃಪ್ತಿದಾಯಕ ಕೆಲಸಗಳು ಆಗಿಲ್ಲ. ಅಲ್ಲದೆ ಜಲ ವಿದ್ಯುತ್ ಯೋಜನೆಗಳ ಹೆಸರಲ್ಲಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದು ಗಂಗೆಯ ಒಡಲನ್ನು ಸಂಪೂರ್ಣ ಬರಿದು ಮಾಡಲಿದೆ. ಈ ಬಗ್ಗೆ ಸ್ವಾಮಿಜಿ ಪ್ರಧಾನಿಗೂ ಪತ್ರ ಬರೆದಿದ್ದು, ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಈ
ಹಿನ್ನೆಲೆಯಲ್ಲಿ ಅಪರೂಪದ ಜಲ ಸಂತನ ಕುರಿತಾದ ರಾಧಾಕೃಷ್ಣ ಭಡ್ತಿ ಅವರ ಲೇಖನ ಇಲ್ಲಿದೆ.

ಅಲ್ಲೊಂದು ಸಾತ್ವಿಕ ಕೋಪ, ಸತ್ಕಾರ್ಯಕ್ಕಾಗಿನ ಹಠ, ಪರಿಸರದ ಬಗೆಗಿನ ಅಪಾರ ಕಳಕಳಿ, ಸಂಶೋಧನಾತ್ಮಕ ದೃಷ್ಟಿಕೋನ, ಅಗಾಧ ಅಧ್ಯಯನ, ಶುದ್ಧ ವೈಜ್ಞಾನಿಕ ಚಿಂತನೆ, ಕಟು ವಾಸ್ತವದ ಅರಿವು, ತುಂಬಿ ಬರುವ ಭಾವೋತ್ಕಟತೆಯ ಉದ್ದೀಪನ, ಸಮರ್ಥ ನಾಯಕತ್ವದ ಸ್ವರೂಪ, ಧಿಮಂತ ವ್ಯಕ್ತಿತ್ವದಲ್ಲಿ ಮಿಳಿತಗೊಂಡ ತಾಳ್ಮೆ, ರಾಷ್ಟ್ರ ಜೀವನ ಸಂಯೋಜನೆಯ ತುಡಿತ, ತಾಯ ಮಡಿಲನ್ನು ಶುಚಿಗೊಳಿಸಿ ಸಂರಕ್ಷಿಸುವ ತಪಸ್ಸು, ಸರಳ ಬದುಕಿನಲ್ಲಡಗಿದ ವರ್ಚಸ್ಸು, ಪ್ರತಿಫಲಾಪೇಕ್ಷೆ ಇಲ್ಲದ ಸೇವೆ, ತೀವ್ರ ವೈರಾಗ್ಯದ ಸಾಧನೆ...

ಬಹುಶಃ ದೈವತ್ವ, ಪರಮಹಂಸ ಪದವಿಗೆ ಇದಕ್ಕಿಂತ ಅರ್ಹತೆ ಬೇರೆ ಬೇಕಿಲ್ಲವೇನೋ? ಅವರು ಬ್ರಹ್ಮರ್ಷಿ. ಆ ಚೇತನಕ್ಕೀಗ ಕೇವಲ ಎಂಬತ್ತಾರು ವಯಸ್ಸು. ಸನ್ಯಾಸದ ವ್ಯಾಖ್ಯಾನವನ್ನೇ ಬದಲಿಸಿದ ಶಕ್ತಿ ಅದು. ಆತ್ಮ ಸಾಕ್ಷಾತ್ಕಾರವನ್ನೂ ಮೀರಿದ ಹಂಬಲವದು. ಗ್ರಾಹಸ್ಥ, ವಾನಪ್ರಸ್ಥವನ್ನು ದಾಟಿ ಒಂದು ವರ್ಷದ ಹಿಂದಷ್ಟೇ ಸನ್ಯಾಸಕ್ಕೆ ಏರಿದವರು. ಇದು ಕೇವಲ ಮುಗ್ಧ ನಂಬಿಕೆಯಲ್ಲ. ಅಧ್ಯಾತ್ಮದ ಹಸಿವೆಂಬುದಕ್ಕಿಂತಲೂ ವೈಯಕ್ತಿಕವನ್ನೂ ಮೀರಿದ ಸಮುಷ್ಟಿಯ ಚಿಂತನೆಯ ಗುರಿ ಇದೆ. ತಪಶ್ಚರ್ಯೆಗೆ ಭಗೀರಥನೇ ಮಾದರಿ, ಭಾಗೀರಥಿಯೇ ಪ್ರೇರಣೆ, ಅವಳದ್ದೇ ಪ್ರತಿಮೆ. ರಾಷ್ಟ್ರದ ಸಾಂಸ್ಕೃತಿಕ ಜೀವನಾಡಿಯನ್ನು ಉದ್ದೀಪಿಸಿ, ಅದರ ಪುನರುತ್ಥಾನದ ನಿಟ್ಟಿನಲ್ಲಿ ಇಡೀ ಸಮಾಜವನ್ನು ಒಗ್ಗೂಡಿಸುವ, ಎಲ್ಲ ವಿಸ್ಮತಿಗಳನ್ನು ಸರಿಸಿ ಜಾಗೃತ ಪ್ರಜ್ಞೆಯನ್ನು ಮೂಡಿಸುವ ಅನೂಹ್ಯ ಹಂಬಲ ಆ ಸ್ವಾಮೀಜಿಯ ತಪಸ್ಸಿಗೆ. ಅದಕ್ಕಾಗಿ ಉಪವಾಸ, ವನವಾಸ ಯಾವುದನ್ನೂ ಲೆಕ್ಕಿಸದೇ ಜೀವಿತವನ್ನೇ ಮುಡಿಪಾಗಿಟ್ಟ ನಿಷ್ಕಲ್ಮಶ ಮನಸ್ಸದು. ಅಲ್ಲಿ ಇನಿತೂ ಆಡಂಬರವಿಲ್ಲ. ತಾನೆಂಬ ಅಹಮಿಕೆಯ ತಾಣದಲ್ಲಿ ತನ್ನದೇ ಎಂಬ ಕರ್ತವ್ಯಪ್ರೀತಿ. ಅದು ಮೋಹವಲ್ಲ. ಆಗ್ರಹ ಹೌದಾದರೂ ಆಕ್ರೋಶದ ಲೇಪನವಿಲ್ಲ. ಇಂಥ ಪಕ್ವ ಮನಸ್ಸಿನ ಪರಿಪೂರ್ಣ ಚಿಂತನೆಯ ನಡೆಗೆ ಬಗ್ಗದವರಾರು? ಹೀಗಾಗಿಯೇ ಗಂಗಾತೀರದಲ್ಲಿ ಆ ವಯೋವೃದ್ಧ, ಜ್ಞಾನವೃದ್ಧ ಸನ್ಯಾಸಿ ಉಪವಾಸಕ್ಕೆ ಕುಳಿತಾಗ ಸ್ವತಃ ಪ್ರಧಾನಿ ಕಚೇರಿಯೇ ಅಲ್ಲಿ ಬಂದು ನಡು ಬಗ್ಗಿಸಿ ನಿಂತಿತು.

ಉಪವಾಸದ ಶಕ್ತಿಯನ್ನು ಆಧುನಿಕ ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಗಾಂಧೀಜಿಯವರ ಪಕ್ಕಾ ಅನುಯಾಯಿಯವರು. ಭ್ರಷ್ಟಾಚಾರದ ವಿರುದ್ಧ ಇಡೀ ದೇಶವನ್ನು ಇತ್ತೀಚೆಗೆ ಬೆಸೆದಿದ್ದ ಅಣಾ ಹಜಾರೆಯವರ ಆಂದೋಲನಕ್ಕೆ ಚಾಲನೆ ದೊರೆಯುವ ಸಾಕಷ್ಟು ಮೊದಲೇ ಸರಕಾರಕ್ಕೆ ಉಪವಾಸದ ಬಿಸಿಯನ್ನು ತಟ್ಟಿಸಿದವರು. ಸರಳ ಬದುಕು, ನಿಸ್ವಾರ್ಥ ಮನಸು. ಉದ್ದೇಶ ಶುದ್ಧತೆ. ಪ್ರಚಾರ ಮತ್ತು ಪ್ರಭುತ್ವದ ಹಂಬಲ ಎರಡೂ ಇಲ್ಲ. ಸತತ 37 ದಿನಗಳ ನಿರಾಹಾರದ ನಂತರವೂ ಅದೇ ಅಭೋದ ನಗುವಿನೊಂದಿಗೆ, ಆದರೆ ಅಷ್ಟೇ ದೃಢವಾಗಿ ವಿಷಯವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ಇವತ್ತು ದೇಶದ ಬಹುತೇಕ ಪರಿಸರ ಪ್ರಿಯರು, ಕಾರ್ಯಕರ್ತರು ಈ ಗುರುವಿನ ಪದತಲದಲ್ಲಿ ವಿನೀತವಾಗಿ ನಿಲ್ಲುತ್ತದೆ ಎಂದರೆ ಅದು ಕಾವಿಯ ಧರಿಸಿದ್ದಾರೆ ಎಂಬ ಒಂದೇ ಕಾರಣಕ್ಕಲ್ಲ. ಅವರ ವೈರಾಗ್ಯದ ಪರಾಕಾಷ್ಠೆಗೆ ಅಲ್ಲ. ಆಧುನಿಕತೆಗೆ ಬೆನ್ನು ತಿರುಗಿಸಿ ಅಧ್ಯಾತ್ಮ ಮಾರ್ಗದಲ್ಲಿ ಶಾಂತಿಯನ್ನರಸಿ ಅಲ್ಲ. ಬದಲಾಗಿ ಹೋರಾಟಕ್ಕೊಂದು ಮಾರ್ಗದರ್ಶನ ಬಯಸಿ, ಅನ್ವೇಷಣೆಗೊಂದು ಅಣತಿಯನ್ನು ಅಪೇಕ್ಷಿಸಿ, ತುಂಬಿದ ಜ್ಞಾನ ಭಂಡಾರದಿಂದ ಒಂದಷ್ಟು ಬಳುವಳಿಯನ್ನು ಬೇಡಿ... ಆ ಸನ್ಯಾಸಿಯ ಒಂದೇ ಒಂದು ಕರೆಗೆ ಬಂದು ನಿಲ್ಲುವ ಅಪೂರ್ವ, ಬೃಹತ್ ಪಡೆಯೇ ದೇಶಾದ್ಯಂತ ಇಂದು ನಿರ್ಮಾಣವಾಗಿದೆ. ಬೆರಳು ತೋರಿದೆಡೆಗೆ ಹೋಗಿ ನಿಂತು ಬೆವರು ಸುರಿಸಿ ದುಡಿಯುವ ಕಾರ್ಯಕರ್ತರ ಸಮೂಹವಿದೆ. ತಂತಮ್ಮ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದ ನೀರಗಾಂಧಿ ರಾಜೇಂದ್ರ ಸಿಂಗ್, ಹಿಮಾಲಯದ ಪ್ರಾಕೃತಿಕ ಸಂಶೋಧಕ ಡಾ. ರವಿ ಛೋಪ್ರಾ, ಡೌನ್ಟು ಅರ್ಥ್ನ ಮುಖ್ಯಸ್ಥೆ ಸುನೀತಾ ನಾರಾಯಣ್, ದುರ್ಬಲರ ಸೇವೆಗೆ ನಿಂತ ಧನುರಾಯ್, ಸಿಎಸ್ಇ ಸಂಸ್ಥಾಪಕ ಡಾ. ಅನಿಲ್ ಅಗರ್ವಾಲ್ ಹೀಗೆ ಅವರ ಶಿಷ್ಯ ಪಡೆಯಲ್ಲಿನ ಖ್ಯಾತನಾಮರನ್ನು ಪರಿಗಣಿಸಿದರೆ ಆ ವೃದ್ಧ ಸನ್ಯಾಸಿಯ ತಾಕತ್ತು ಅರಿವಾಗಬಹುದು.

ಅವರು ಜ್ಞಾನಸ್ವರೂಪ ಸಾನಂದ ಸ್ವಾಮೀಜಿ. ಅನ್ವರ್ಥ ನಾಮ. ಒಂದು ವರ್ಷದ ಹಿಂದಷ್ಟೇ ಅವರನ್ನು ದೇಶ ಪ್ರೊ.ಜಿ.ಡಿ. ಅಗರವಾಲ್ ಎಂದು ಗುರುತಿಸುತ್ತಿತ್ತು. ಅವತ್ತಿಗೂ ಅದೇ ಗೌರವ, ಇಂದೂ ಅದೇ ಭಕ್ತಿ. ಅಂದು ಖಾದಿಯಲ್ಲಿ ಸನ್ಯಾಸಿಯಂತಿದ್ದರು, ಇಂದು ಖಾವಿಯಲ್ಲಿ ಸಂತರಾಗಿದ್ದಾರೆ. ಮಧ್ಯಪ್ರದೇಶದ ಚಿತ್ರಕೂಟದ ಅವರ ನಿವಾಸವೆಂದರೆ ಅಂದಿಗೂ ಇಂದಿಗೂ ಆಶ್ರಮವೇ. ಸರಳರೇಖೆಯಂತೆಯೇ ಬದುಕುತ್ತಿದ್ದು. ತಾವೇ ತಮ್ಮ ಕೊಠಡಿಯ ಕಸ ಗುಡಿಸಿಕೊಳ್ಳುತ್ತ. ತಮ್ಮ ಬಟ್ಟೆಯನ್ನು ತಶವೇ ಒಗೆದು ಒಣಹಾಕಿಕೊಳ್ಳುತ್ತ, ತಮಗಾಗಿ ತಾವೇ ಆಹಾರ ಸಿದ್ಧಪಡಿಸಿಕೊಳ್ಳುತ್ತ, ತಮಗಾಗಿ ತಾವೇ ಖಾದಿಯನ್ನು ನೇಯ್ದುಕೊಳ್ಳುತ್ತ ಸಮಾಜ ಹಿತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದವರು. ಸೈಕಲ್ ಹತ್ತಿ ಹೊರಟರೆ ಅಲ್ಲೊಂದು ಚಳವಳಿ ಹುಟ್ಟಿಕೊಳ್ಳುತ್ತಿತ್ತು. ಬಸ್ನಲ್ಲಿ, ರೈಲಿನಲ್ಲಿ ಬಂದಿಳಿದರೆ ಬೃಹತ್ ಆಂದೋಲನ ರೂಪುಗೊಳ್ಳುತ್ತಿತ್ತು. ಉಪವಾಸ ಕುಳಿತುಬಿಟ್ಟರೆ ಆಳುವವರಿಗೆ ಉಸಿರು ಕಟ್ಟಲಾರಂಭಿಸುತ್ತಿತ್ತು. ಅವತ್ತಿನಿಂದ ಇವತ್ತಿನವರೆಗೆ ಎರಡೂ ವಿಭಿನ್ನ ಆಶ್ರಮದಲ್ಲಿ ಬೆಸೆದುಕೊಂಡು ಬಂದ, ಸಾತತ್ಯ ಪಡೆದ ಏಕೈಕ ಸಂಗತಿ ಮಾತೆ ಗಂಗೆಯ ರಕ್ಷಣೆ. ಮಾತೂ ಅದರದ್ದೇ ಮತವೂ ಗಂಗೆಯೇ. ಮಹತ್ವಾಕಾಂಕ್ಷೆ ಎಂಬುದೊಂದಿದ್ದರೆ ಅದು ದೇವನದಿಯ ಸ್ವರೂಪ ಶ್ರೀಮಂತಿಕೆಯ ಉಳಿವು. ಇಡೀ ದೇಶವನ್ನು ಎಲ್ಲ ವೈರುಧ್ಯ, ವೈವಿಧ್ಯವನ್ನು ಮೀರಿ ಬೆಸೆಯಬಲ್ಲ ಏಕೈಕ ಶಕ್ತಿ ಇದ್ದರೆ ಅದು ಗಂಗೆ ಮಾತ್ರ. ಅದುಳಿಯದೇ ಈ ದೇಶ ಉಳಿಯಲಾರದು. ದೇಶದ ಸಂಸ್ಕೃತಿ, ಬದುಕು ಉಳಿಯಲಾರದು. ಅದಕ್ಕಾಗಿ ಸಾತ್ವಿಕ ಸಮರವನ್ನು ಸಾರಿ, ಉಪವಾಸದ ಅಸ್ತ್ರವನ್ನು ಹೂಡಿ ನಿಂತಿರುವ ಸನ್ಯಾಸಿಯವರು. ಸರ್ವಸಂಗ ಪರಿತ್ಯಾಗಿಯಾಗಿ ನಿಂತಿರುವ ಅವರದ್ದೀಗ ಬೃಹತ್ ಕುಟುಂಬ. ಅದು ಗಂಗಾ ಪ್ರೇಮಿಗಳ, ಆ ಮಾತೆಯ ಮಕ್ಕಳ ಕುಟುಂಬ ಈಗ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿಯವರ ಹೆಗಲಿಗೆ ನಿಂತಿದೆ. ಇಷ್ಟೆಲ್ಲಾ ಭಾವುಕ ವ್ಯಕ್ತಿ ವೈರಾಗ್ಯದ ನಟ್ಟ ನಡುವಿನ ದ್ವೀಪದಲ್ಲಿ ಹೋಗಿ ನಿಮತು ಜ್ಞಾನ ದೀವಿಗೆಯನ್ನು
ಎತ್ತಿ ಹಿಡಿದಿದ್ದಾರೆ. ಇದ್ದೂ ಇಲ್ಲದಂತಿರುವುದು ಅಂದರೆ ಇದಲ್ಲವೇ? ಬುದ್ಧಿ-ಭಾವಗಳ ಸಂಗಮವಾಗಿ ನಿಂತಿರುವ ಈ ಯತಿಯ ಹಿನ್ನೆಲೆ ಇನ್ನಷ್ಟು ಅಸಕ್ತಿದಾಯಕ.

ಅವರೊಬ್ಬ ಸಾಮಾನ್ಯ ಮನುಷ್ಯನಾಗಿರಲಿಲ್ಲ. ಕೇವಲ ನೌಕರನಾಗಿದ್ದುಕೊಂಡು ಜೀವಿಸಿದ್ದವರಲ್ಲ. ಬೀದಿಯಲ್ಲಿ ನಿಂತು ಘೋಷಣೆ ಕೂಗುತ್ತ ಕಳೆದುಹೋಗುವ ಚಳವಳಿಗಾರನಾಗಿರಲಿಲ್ಲ. ಇಡೀ ದೇಶವೇ ಗೌರವಿಸುವಂಥ ಉನ್ನತ ಹುದ್ದೆಯಲ್ಲಿದ್ದು, ತಮ್ಮ ವ್ಯಕ್ತಿತ್ವ ಮತ್ತು ಜ್ಞಾನ ಎರಡರಿಂದಲೂ ಮೌಲ್ಯಯುತರೆನಸಿಕೊಂಡವರು. ಜಿ.ಡಿ. ಅಗರ್ವಾಲ್ ಜನಿಸಿದ್ದು 1932ರಲ್ಲಿ ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಕಂಧ್ಲಾ ಎಂಬಲ್ಲಿ. ಅದು ಸಾಮಾನ್ಯ ಕೃಷಿಕ ಕುಟುಂಬ. ಅಲ್ಲಿಯೇ ಆರಂಭಿಕ ಶಿಕ್ಷಣ. ನಂತರ ರೂರ್ಕೀ ವಿಶ್ವವಿದ್ಯಾಲಯದಲ್ಲಿ (ಈಗಿನ ಐಐಟಿ ರೂರ್ಕೀ) ಸಿವಿಲ್ ಎಂಜಿನಿಯರಿಂಗ್ ಪದವಿ. ದಿಸೈನಿಂಗ್ ಎಂಜಿನಿಯರ್ ಆಗಿ ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ವೃತ್ತಿ ಆರಂಭ. ಜ್ಞಾನದ ಹಸಿವಿಗೆ ವಿರಾಮವೆಲ್ಲಿ? ಅಮೆರಿಕದ ಬರ್ಕ್ಲಿಯಲ್ಲಿನ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪಿ.ಎಚ್.ಡಿ. ಗಳಿಕೆ. ಆಗಲೇ ವಿಶ್ವಮಾನ್ಯ ಪರಿಸರ ಎಂಜಿನಿಯರ್ ಎನಿಸಿದ್ದು. ಐಐಟಿ ಕಾನ್ಪುರದಲ್ಲಿ ಪ್ರಾಧ್ಯಾಪಕ ಹುದ್ದೆ ಕೈಬೀಸಿ ಕರೆಯಿತು. ವಿಭಾಗ ಮುಖ್ಯಸ್ಥರಾಗಿ ಹಾಗೂ ಡೀನ್ ಆಗಿಯೂ ಸೇವೆ ಸಲ್ಲಿಸಿದರು. ಅತ್ಯಂತ ಪ್ರಭಾವೀ ವೈಜ್ಞಾನಿಕ ಲೇಖನಗಳು ಸರಣಿಯಾಗಿ ಹರಿದು ಬಂದವು. ಹತ್ತಾರು ಮಂದಿಗೆ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ.ಗಳಿಗೆ ಮಾರ್ಗದರ್ಶಕರಾದರು. ಇದೇ ಅವಧಿಯಲ್ಲಿ ರಾಜೇಂದ್ರ ಸಿಂಗ್, ಅನಿಲ್ ಅಗರ್ವಾಲ್, ರವಿ ಛೋಪ್ರಾರಂಥ ಸಾಮಾಜಿಕ ಕ್ರಾಂತಿಕಾರಿಗಳಿಗೂ ಸ್ಫೂರ್ತಿಯಾದರು. ಜೀವನದ ಅತಿ ಮುಖ್ಯ ಘಟ್ಟ ತಲುಪಿದ್ದರು ಅಗರ್ವಾಲ್ಜಿ. ಭಾರತ ಸರ್ಕಾರದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿ (ಸೆಂಟ್ರಲ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್-ಸಿಪಿಸಿಬಿ) ಯ ಮೊದಲ ಸದಸ್ಯ-ಕಾರ್ಯದರ್ಶಿಯಾದರು. ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ರಕ್ಷಣೆಯ ಕಾಯ್ದೆ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.ಅಗರವಾಲರಿಂದ ಪ್ರಭಾವಿತರಾಗಿರುವ ಐಐಎಂಬಿಯ ಸಂಶೋಧನಾ ವಿದ್ಯಾರ್ಥಿ ಡಾ.ವಿ. ಶ್ರೀನಿಧಿ ಅವರ ಬಗ್ಗೆ ಲೇಖನವೊಂದರಲ್ಲಿ ಬರೆಯುತ್ತಾರೆ- ಸಂಶೋಧಕರೂ ಗೌರವಿಸುವ ವಿಜ್ಞಾನಿಯಾಗಿ, ವಿದ್ಯಾರ್ಥಿಗಳು ಮೆಚ್ಚುವ ಶಿಕ್ಷಕನಾಗಿ, ಸಾಮಾಜಿಕ ಕಾರ್ಯಕರ್ತರಿಗೆ ಚೈತನ್ಯ ತುಂಬುವ ಮಾರ್ಗದರ್ಶಕರಾಗಿ, ಸರ್ಕಾರವು ಆಹ್ವಾನಿಸುವ ತಜ್ಞರಾಗಿ ಜಗತ್ತಿಗೇ ಕಂಡ ಅಗರ್ವಾಲರು, ಅಂತರಂಗದಲ್ಲಿ ಪ್ರಕೃತಿಮಾತೆಯ ಸೇವೆಗಾಗಿ ಹಪಹಪಿಸುತ್ತಿದ್ದರು. ಸನಾತನ ಧರ್ಮದಲ್ಲಿ ಸದಾಸಕ್ತರಾಗಿ, ಭಾರತೀಯ ಸಂಸ್ಕೃತಿಯ ರಕ್ಷಣೆಯಲ್ಲಿ ಬದ್ಧಮನಸ್ಕರಾಗಿದ್ದ ಅಗರ್ವಾಲರು ಅನೇಕ ಪರಿಸರ ರಕ್ಷಣೆ ಸಂಬಂಧಿ ಕಾರ್ಯಗಳಲ್ಲಿ ತಮ್ಮ ಆಧುನಿಕ ವಿದ್ಯೆಯನ್ನು ತಮ್ಮ ಅಗಾಧ ಶಿಷ್ಯಸಂಪತ್ತನ್ನು ಬಳಸತೊಡಗಿದ್ದರು... ಇಡೀ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವ ಸಾಲುಗಳಿವು.

ಹೀಗಿದ್ದ ಅವರವಾಲರು ಸನ್ಯಾಸ ಸ್ವೀಕರಸಲೂ ಬಲವಾದ ಕಾರಣವಿದೆ. ಅದು 2007ರ ಒಂದು ದಿನ. ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಲುದ್ದೇಶಿಸಿದ್ದ ಅಣೆಕಟ್ಟೊಂದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಪ್ರಿಯಾ ಪಟೇಲ್ ಎಂಬುವವರು ಎಂ.ಸಿ. ಮೆಹ್ತಾರನ್ನು ಕಾಣಲು ಬಂದಿದ್ದರು. ಅಗರ್ವಾಲರೂ ಜತೆಗಿದ್ದರು. ಗಂಗಾ ಮಾತೆಯ ಒಡಲು ಬರಿದಾಗುತ್ತಿದ್ದದನ್ನು ಕಣ್ಣಾರೆ ಕಾಣಲು ಹೊರಟಿತು ಆ ತಂಡ. ಸ್ಥಳ ತಲುಪಿದಾಗ ಅಗರವಾಲರಿಗೆ ನಂಬಲಾಗಲಿಲ್ಲ. ಅಲ್ಲಿನ ದೃಶ್ಯ ದಿಗ್ಭ್ರಮೆ ಹುಟ್ಟಿಸಿತ್ತು. ಮೂವತ್ತು ವರ್ಷಗಳ ಹಿಂದೆ ಮನೇರಿ ಭಾಲಿ ಯೋಜನೆ ಶುರುವಾಗಿದ್ದಾಗ ಅಲ್ಲಿ ಹೋಗಿದ್ದರವರು. ಇದೀಗ ಮನೇರಿ ಭಾಲಿಯ ಕೆಳ ಪ್ರದೇಶಗಳಲ್ಲಿ ಭಾಗೀರಥಿಯೇ ಕಣ್ಮರೆಯಾಗಿದ್ದಳು! ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ನದಿಯ ಸಮಗ್ರ ನೀರನ್ನು ಕಾಲುವೆಗಳ ಮೂಲಕ ಬೇರೆಡೆ ಸ್ಥಳಾಂತರಿಸಲಾಗುತ್ತಿತ್ತು. ಅಗರ್ವಾಲಜಿ ಮನಸ್ಸು ಕದಡಿ ಹೋಯಿತು. ಅಂದೇ ಒಳಗುದಿ ಮನದಲ್ಲಿ ಆರಂಭವಾಯಿತು. ಮಾತೆ ಗಂಗೆಗಾಗಿ ತಾವೇನಾದರೂ ಮಾಡಿಯೇ ತೀರಬೇಕೆಂದು ಸಂಕಲ್ಪಿಸಿದರು. ಯೋಚನೆಗಳು ಸುರುರಳಿಸುರುಳಿಯಾಗಿ ತಿರುಗತೊಡಗಿತ್ತು ಮನದಲ್ಲಿ. 2008ರ ರಾಮನವಮಿಯ ದಿನ ಅದಕ್ಕೊಂದು ಸ್ಪಷ್ಟ ಸ್ವರೂಪ ಸಿಕ್ಕಿತ್ತು. ಅಂದು ಘೋಷಿಸಿಯೇಬಿಟ್ಟರು: ‘ಉಳಿದ ನನ್ನ ಜೀವಿತ ಗಂಗೆಗೇ ಸಮರ್ಪಿತ’. ವೈಜ್ಞಾನಿಕ ವಿಮರ್ಶೆಗಳಲ್ಲಿ ಸಿದ್ಧಹಸ್ತರಾದ ಸ್ವಾಮೀಜಿ, ಈ ದೇಶದ ಅಧ್ಯಾತ್ಮಿಕ ಸೊಬಗಿಗೆ ತಾವಾಗಿಯೇ ಶರಣಾದರು. ಗುರಿಯೆಡೆಗೆ ಸ್ವತಃ ಗುರುವಾಗಿ ಹೊರಟಿದ್ದರು ಅಗರವಾಲರು.

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos