ಆದಾಯ ಹೆಚ್ಚಿಸಬೇಡಿ, ಖರ್ಚು ಕಡಿತಗೊಳಿಸಿ

October 11, 2018 ⊄   By: ರಾಧಾಕೃಷ್ಣ ಎಸ್. ಭಡ್ತಿ

ಮಹಾತ್ಮ ಗಾಂಧೀಜಿಯವರ ನೂರೈವತ್ತನೇ ಜನ್ಮ ದಿನದ ಮರುದಿನವೇ ಭಾರತಕ್ಕೆ ಅಂತಾರಾಷ್ಟ್ರೀಯ ಪರಿಸರ ಪ್ರಶಸ್ತಿ ದೊರಕಿದೆ. ವಿಶ್ವಸಂಸ್ಥೆಯ ಅತ್ಯುನ್ನತ ಗೌರವವಾದ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪುರಸ್ಕಾರ ವನ್ನು ಪ್ರಧಾನಿ ನರೇಂದ್ರ ಮೋದಿಗೆ ಹೊಸದಿಲ್ಲಿಯಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಪ್ರದಾನ ಮಾಡಿದ್ದಾರೆ.
ಕೃಷಿ ಪ್ರಧಾನ ದೇಶವೊಂದರ ಅಭಿವೃದ್ಧಿ ಎಂಬುದು ಪರಿಸರದಿಂದ ಹೊರತಾಗಿ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ಭಾರತದಂತ ಹಳ್ಳಿಗಳ ದೇಶದ ಜೀವನ ಮತ್ತು ಸಂಸ್ಕೃತಿಯೇ ಪರಿಸರ ಆಧಾರಿತ. ಇವತ್ತು ನಿಸರ್ಗ ಮತ್ತು ಹಳ್ಳಿಗಳನ್ನು ನಿರ್ಲಕ್ಷಿಸಿದ ಪರಿಣಾಮವೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಇದಕ್ಕಾಗಿಯೇ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಪುನರ್ ಸ್ಥಾಪನೆಯನ್ನು ಪ್ರತಿಪಾದಿಸಿದ್ದರು. ಅವರ ನೂರೈವತ್ತನೇ ಜನ್ಮ ದಿನದ ಸಂದರ್ಭದಲ್ಲೂ ನಾವಿಂದಿಗೂ ಗ್ರಾಮ ಸ್ವರಾಜ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಸರ್ಗ ಮತ್ತು ವಿಪತ್ತುಗಳೆರಡೂ ಬದುಕು ಮತ್ತು ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿವೆ. ಪರಿಸರದ ಬಗೆಗಿನ ಕಾಳಜಿಯ ಸಂಸ್ಕೃತಿಯ ಭಾಗವಾಗದ ಹೊರತೂ ವಿಪತ್ತನ್ನು ನಾವು ದೂರವಿಡಲಾಗದು. ಕೃಷಿ, ವಸತಿ, ಆಹಾರ, ಔದ್ಯಮಿಕ ನೀತಿಗಳೆಲ್ಲವೂ ಹುಸಿ ಆರ್ಥಿಕತೆಯನ್ನು ಪ್ರತಿಪಾದಿ ಸುತ್ತಿವೆಯೇ ಹೊರತು ಯಾವ ಹಂತದಲ್ಲೂ ನಮ್ಮ ಸರಕಾರಗಳು ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತು ನೀಡು ತ್ತಿಲ್ಲ. ಕೃಷಿಯ ವಿಚಾರವನ್ನೇ ತೆಗೆದುಕೊಂಡರೆ, ನಮ್ಮ ಗಮನವೆಲ್ಲ ಆಹಾರ ಉತ್ಪಾದನೆಯ ಹೆಚ್ಚಳದತ್ತಲೇ ವಿನಾ ಮಣ್ಣಿನ ಆರೋಗ್ಯ ರಕ್ಷಣೆಯ ಬಗೆಗಾಗಲೀ ಶುದ್ಧ ನೀರಿನ ಸಂಗ್ರಹದ ಬಗೆಗಾಗಲೀ ಒಂದೇ ಒಂದು ಕಾರ್ಯಕ್ರಮವೂ ಇಲ್ಲ. ಆಥವಾ ಇರುವ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನವಿಲ್ಲ. ಕೇವಲ ಅದರ ಬಗ್ಗೆ ಭಾಷಣ ಬಿಗಿಯುತ್ತಿದ್ದೇವಷ್ಟೆ. ಕೃಷಿ ಉತ್ಪಾದಕತೆಯ ಹೆಸರಿನಲ್ಲಿ ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸಿ ತಂದು ಸುರಿಯುತ್ತಿರುವ ಎಲ್ಲ ಸಿಂಥೆಟಿಕ್ ಫರ್ಟಿಲೈಸರ್ಗಳೂ ಇಂಚಿಂಚಾಗಿ ಮಣ್ಣನ್ನು ಸಾಯಿಸುತ್ತಿವೆ. ಲ್ಯಾಬ್ನ ರಸ ಗೊಬ್ಬರ, ಕ್ರಿಮಿನಾಶಕ, ಕೃತಕ ನ್ಯೂಟ್ರಿಯಂಟ್ಗಳೆಲ್ಲದರ ಗುರಿ ನಾವು ಸಸ್ಯವೇ ಹೊರತು ಮಣ್ಣಿನ ಆರೋಗ್ಯವಲ್ಲ. ಮಣ್ಣಿನ ಆರೋಗ್ಯ ನಿರ್ಧಾರವಾಗುವುದು ರೈತನ ಹೊಲದಲ್ಲಿ ಅಸ್ತಿತ್ವಕ್ಕೆ ಬರಬಲ್ಲ ಪ್ರಯೋಗಾಲಯದಲ್ಲೇ ಹೊರತು ಏರ್ಕಂಡೀಷನ್ಡ್ ಕೊಠಡಿಯಲ್ಲಿನ, ಬಿಳಿ ಏಪ್ರಾನ್ಗಳನ್ನು ತೊಟ್ಟ ಅಚ್ಚ ಬಿಳಿಯ ಕೈಗಳಿಂದ ಅಲ್ಲ. ರೈತನ ಸಬಲೀಕರಣದ ಹೆಸರಿನಲ್ಲಿ ನಾವು ಇಂಥ ಒಳಸುರಿಗಳಿಂದ ಆತನನ್ನು ಜೂಜಿಗೆ ಹಚ್ಚಿ ಹೊರಬರಲಾಗದ ದಾಸ್ಯಕ್ಕೆ ದೂಡುತ್ತಿದ್ದೇವೆ. ಹಸುರು ಕ್ರಾಂತಿಯ ಹೆಸರಿನಲ್ಲಿ ಬಂದು ಯಂತ್ರ-ರಸಗೊಬ್ಬರಗಳು ಈ ದೇಶದ ಆಹಾರ ಸಾರ್ವಭೌಮತ್ವನ್ನಷ್ಟೇ ಅಲ್ಲ, ಕೃಷಿ-ಕೃಷಿಕನ ಸ್ವಾವಲಂಬನೆಯನ್ನೂ ಕಿತ್ತುಕೊಂಡಿದೆ. ರೈತನ ಅಭಿವೃದ್ಧಿ ಕ್ರಮಗಳ ಹೆಸರಿನಲ್ಲಿ ನಮ್ಮ ಸರಕಾರ ಘೋಷಿಸುವ ಸಾಲ- ಸಬ್ಸಿಡಿಗಳಂಥ ಯೋಜನೆಗಳು ಇದೇ ಕಾರಣಕ್ಕೆ ವ್ಯರ್ಥ-ಬೂಟಾಟಿಕೆಯ ಉಪಕ್ರಮಗಳೆನಿಸುತ್ತಿರುವುದು. ಚಿಕ್ಕ ಉದಾಹರಣೆಯೆಂದರೆ, ಸರಕಾರ ಬೆಳೆಗೆ ಎಷ್ಟೇ ಬೆಂಬಲ ಬೆಲೆ ಘೋಷಿಸಿದರೂ ಡೀಸೆಲ್ ಬೆಲೆ ಏರುತ್ತಿದ್ದಂತೆಯೇ ಉತ್ಪಾದನಾ ವೆಚ್ಚ ಸಹಜವಾಗಿ ಏರುತ್ತದೆ. ಹೀಗಾಗಿ ರೈತ ಮತ್ತೆ ಸಾಲ ಮಾಡುವಂತಾಗುತ್ತದೆ. ಹಾಗಿದ್ದರೆ ರೈತನ ಆದಾಯ ಹೆಚ್ಚಿಸುವುದು ಪರಿಹಾರವಲ್ಲ. ಆತನ ಖರ್ಚು ಕಡಿಮೆ ಮಾಡುವುದೊಂದೇ ಇದಕ್ಕಿರುವ ಪರಿಹಾರ. ಹಾಗಾಗಲು ಕೃಷಿಯ ಎಲ್ಲ ಅಗತ್ಯಗಳೂ ರೈತನಿಗೆ ಯಾವುದೇ ಖರ್ಚಿಲ್ಲದೇ ಸ್ಥಳೀಯವಾಗೇ ದೊರಕಬೇಕು. ಹಾಗಾಗಬೇಕಾದರೆ ಕೃಷಿ ಜಮೀನಿನ ಸುತ್ತಮುತ್ತಲ ನೀರು-ಕಾಡು- ಮಣ್ಣು ಸೇರಿದಂತೆ ಒಟ್ಟಾರೆ ಪರಿಸರ ಸಮೃದ್ಧವಾಗಿ ಉಳಿಯಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ. ಕೃಷಿ ಉಳಿಯುತ್ತದೆ. ಕೃಷಿ ಉಳಿದರೆ ಹಳ್ಳಿಗಳು ಉಳಿಯುತ್ತವೆ. ಆರೋಗ್ಯಕರ, ಶ್ರೀಮಂತ ಹಳ್ಳಿಗಳಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆಯೇ ವಿನಃ ಹುಚ್ಚು ಓಟಕ್ಕೆ ಬಿದ್ದು ಬೆಳೆಯುತ್ತಿರುವ ನಗರಗಳಿಂದ, ಅಲ್ಲಿನ ಕೈಗಾರಿಕೆಗಳು ವಾರ್ಷಿಕವಾಗಿ ಬಿಂಬಿಸುತ್ತಿರುವ ಹುಸಿ ಆರ್ಥಿಕತೆಯಿಂದಲ್ಲ. ಹಳ್ಳಿಗಳ ಬದುಕಿನ ವೆಚ್ಚ ಕಡಿಮೆಯಾಗಬೇಕು. ಹಾಗಾಗಬೇಕಾದರೆ ಅಲ್ಲಿನ ಪರಿಸರದಿಂದ ಕೃಷಿ ಮತ್ತು ಬದುಕಿಗೆ ಬೇಕಾದ ಅಗತ್ಯಗಳು ಹಿಂದಿನಂತೆ ಖರ್ಚಿಲ್ಲದೇ ಅನಾಯಾಸವಾಗಿ ದೊರಕಬೇಕು. ಹಾಗೆ ದೊರಕಬೇಕೆಂದರೆ ಹಿಂದಿನಂತೆ ಹಳ್ಳಿಗಳಲ್ಲಿ ಸಮೃದ್ಧ ಪರಿಸರದ ಪುನರ್ ಸ್ಥಾಪನೆಯಾಗಬೇಕು. ಸರಕಾರಗಳು ಉತ್ಪಾದಕತೆ, ತಲಾದಾಯದ ಅಂಕಿ-ಸಂಖ್ಯೆಗಳ ಮಾತನಾ ಡುವ ಬದಲಿಗೆ ನಿಸರ್ಗ-ಮಣ್ಣು-ನೀರಿನ ಆರೋಗ್ಯದ ಬಗೆಗೆ ಮಾತನಾಡ ತೊಡಗಿದ ದಿನ ಗ್ರಾಮ ಸ್ವರಾಜ್ಯದ ಪುನರ್ ಸ್ಥಾಪನೆ ಆಗುತ್ತದೆ. ಮಣ್ಣು- ನೀರನ್ನು ನಿರ್ಲಕ್ಷಿಸಿದ್ದರ ಫಲವನ್ನು ಇಂದು ಕೃಷಿ ಕಾಣುತ್ತಿದೆ. ಕೃಷಿಯನ್ನು ಅಲಕ್ಷಿಸಿದ ಪರಿಣಾಮವನ್ನು ಇಂದು ಹಳ್ಳಿ ಅನುಭವಿಸುತ್ತಿದೆ. ಹಳ್ಳಿಗಳ ನಿರ್ಲಕ್ಷ್ಯದ ಕಹಿಯನ್ನು ಇಂದು ದೇಶ ಉಣ್ಣುತ್ತಿದೆ. ಇದನ್ನು ಸರಿಪಡಿಸು ವುದೇ ನೈಜ ಅಭಿವೃದ್ಧಿ.

Share This :
  •  
  •  

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.

Photos

ರೆಕ್ಕೆ ಇದ್ದರೆ ಸಾಕೆ...

Latest Blogs