ಮತ್ತೆ ಧ್ವನಿ ಕಳಕೊಂಡ ರಾಜ್ಯದ ರೈತರು

March 05, 2018 ⊄   By: ರಾಧಾಕೃಷ್ಣ ಭಡ್ತಿ

ಅವರೊಬ್ಬ ನಿಸ್ಸೀಮ ಹೋರಾಟಗಾರ. ರಾಜ್ಯದ ರೈತರ ಸಮಸ್ಯೆಗಳಿಗಾಗಿ ಬಾರ್ಕೋಲಿಗೂ ಬೆನ್ನು ಒಡ್ಡಿದವರು. ರೈತರ ವಿಚಾರ ಬಂದಾಗ ದೇಶ ಭಾಷೆಗಳ ಭೇದವಿಲ್ಲದೇ ಜಗತ್ತಿನ ಎಲ್ಲ ರೈತರನ್ನೂ ಒಂದೇ ದೃಷ್ಟಿಯಲ್ಲಿ ಕಂಡವರು. ಅವರು ಹಿಂದೊಮ್ಮೆ ಶಿವಮೊಗ್ಗದ ಸರ್ಕೀಟ್ ಹೌಸ್ನಲ್ಲಿ ನಾವು ನಾಲ್ಕಾರು ಪತ್ರಕರ್ತರ ಜತೆ ಹರಟೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಹೇಳಿದ್ದು ನನಗಿನ್ನೂ ನೆನಪಿದೆ. ರೈತರಲ್ಲಿ ನಮ್ಮೂರು, ನಿಮ್ಮೂರು, ಕರ್ನಾಟಕದ ರೈತ, ಮಹಾರಾಷ್ಟ್ರದ ರೈತ, ಬೊಲಿವಿಯಾದ ರೈತ ಎಂಬುದಿಲ್ಲವೇ ಇಲ್ಲ. ರೈತ ಎನ್ನುವುದು ಜಗತ್ತಿನಲ್ಲಿ ಒಂದೇ ಜಾತಿ. ರೈತರ ಸ್ಥಿತಿ ಬಹುತೇಕ ಎಲ್ಲ ಕಡೆ ಒಂದೇ. ಬಂಡವಾಳಶಾಹಿಗಳು, ಬಹುರಾಷ್ಟ್ರೀಯ ಕಂಪನಿಗಳು ಎಲ್ಲೆಡೆ ರೈತರನ್ನು ಶೋಷಿಸುತ್ತಲೇ ಇವೆ. ಅಮೆರಿಕದಲ್ಲಿ ವಿರೋಧ ಹೆಚ್ಚಿದರೆ, ಇಂಥ ಕಂಪನಿಗಳು ಇಲ್ಲಿನ ಸರಕಾರಗಳ ಮೇಲೆ ಒತ್ತಡ ತಂದು ಭಾರತಕ್ಕೆ ತಮ್ಮ ಉತ್ಪನ್ನಗಳನ್ನು ಸ್ಥಳಾಂತರಿಸುತ್ತವಷ್ಟೆ. ಜರ್ಮನಿಯಲ್ಲೂ ರೈತನನ್ನು ಶೋಷಿಸಲಾಗುತ್ತಿದೆ. ಇಸ್ರೇಲ್ನ ರೈತನೂ ಸಂಕಷ್ಟದಲ್ಲಿ ಇದ್ದಾನೆ. ಅಲ್ಲಿನ ರಾಜಕೀಯ ಅನಿಶ್ಚಿತತೆ ರೈತರ ಬದುಕನ್ನು ತೂಗುಯ್ಯಾಲೆಯಾಗಿಸಿಕೊಂಡೇ ಬಂದಿದೆ. ಭಾರತದಲ್ಲಂತೂ ರಾಜ್ಯಗಳ ಭೇದವಿಲ್ಲದೇ ರೈತರನ್ನು ಶೋಷಿಸಲಾಗುತ್ತಿದೆ...

ಮೇಲಿನ ಅವರ ಮಾತುಗಳು ರೈತ ಸಮುದಾಯದ ಕುರಿತ ಅವರ ವಿಶ್ವವ್ಯಾಪಿ ಅಧ್ಯಯನದ ಪ್ರತೀಕವಾಗಿತ್ತು. ಹಾಗೆ ನೋಡಿದರೆ ಅವರು ಮೊತ್ತಮೊದಲು ನನಗೆ ಪರಿಚಿತರಾದದ್ದು ಇಪ್ಪತ್ತು ವರ್ಷಗಳ ಹಿಂದೆ. ಶಿವಮೊಗ್ಗದಲ್ಲಿ ನಡೆದ ರೈತರ ಪಾದಯಾತ್ರೆಯ ಸಂದರ್ಭದಲ್ಲಿ ಶಿವಮೊಗ್ಗದವರೇ ಆದ ಗಂಗಾಧರ್ ಅವರು ಪುಟ್ಟಣ್ಣಯ್ಯನವರನ್ನು ಪರಿಚಯಿಸಿದ್ದರು. ನಂತರ ಬಹುತೇಕ ಕೃಷಿ ಶಿಬಿರಗಳು, ಗ್ರಾಮೀಣಾಭಿವೃದ್ಧಿ ವಿಚಾರ ಸಂಕಿರಣಗಳಲ್ಲಿ ವೇದಿಕೆ ಹಂಚಿಕೊಂಡಿದ್ದೆವು. ಇಂಥದ್ದೇ ಒಂದು ಸಭೆಯ ಭಾಷಣ ಸಂದರ್ಭದಲ್ಲಿ ‘ಹಸಿರೆಲ್ಲವೂ ಹಸನಲ್ಲ, ಹಸಿರು ಶಾಲು ಹೊದ್ದವರೆಲ್ಲ ರೈತರಲ್ಲ’ ಎಂಬ ನನ್ನ ಹೇಳಿಕೆ (ರೈತ ಸಂಘದ ಬಣಗಳ ತಿಕ್ಕಾಟದ ಕುರಿತು) ಪುಟ್ಟಣ್ಣಯ್ಯನವರನ್ನು ತುಸು ಮುಜುಗರಕ್ಕೆ ಈಡು ಮಾಡಿತ್ತು. ಅದನ್ನು ಅತ್ಯಂತ ಆರೋಗ್ಯಕಾರಿ ಧಾಟಿಯಲ್ಲೇ ಸ್ವೀಕರಿಸಿದ್ದ ಪುಟ್ಟಣ್ಣಯ್ಯನವರು ರೈತ ಸಂಘಟನೆ ಬಲಗೊಳ್ಳಬೇಕಾದ ಅಗತ್ಯದ ಬಗ್ಗೆ ಆತ್ಮವಿಮರ್ಶೆಯ ಮಾತನಾಡಿದ್ದರು. ರೈತರ ಬಗೆಗೆ ಅವರದ್ದು ನೈಜ ಕಾಳಜಿಯಾಗಿತ್ತೆಂಬುದಕ್ಕೆ ಇದು ಸಾಕ್ಷಿ. ನಂತರ ವೃತ್ತಿ ನಿಮಿತ್ತ ಬೆಂಗಳೂರಿಗೆ ಬಂದ ಬಳಿಕ ಗಂಗಾಧರ್ ಒಡನಾಟ ಬಿಟ್ಟು ಹೋಯಿತು. ಆದರೆ ಪುಟ್ಟಣ್ಣಯ್ಯನವರಿಗೆ ಹತ್ತಿರವಾದೆ.

ಆಗೊಂದು ಕಾಲದಲ್ಲಿ ಇಡೀ ರಾಜ್ಯದಲ್ಲಿ ಪ್ರೋ. ನಂಜುಡಸ್ವಾಮಿ ನೇತೃತ್ವದ ಬೃಹತ್ ರೈತ ಹೋರಾಟಗಾರರ ಪಡೆಯೇ ಇತ್ತು. ಕನಿಷ್ಠ ಐದಾರು ಮಂದಿಯಾದರೂ ರೈತರ ಪರ ದನಿ ಎತ್ತುವವರಿದ್ದರು. ರೈತರ ವಿರುದ್ಧ ಒಂದೇ ಒಂದು ನಿರ್ಣಯ ಕೈಗೊಳ್ಳಬೇಕಿದ್ದರೆ ಹತ್ತು ಬಾರಿ ಯೋಚಿಸುವ ಸ್ಥಿತಿ ಇತ್ತು. ಅಧಿಕಾರಿಗಳಂತೂ ರೈತ ಸಂಘದ ಹೆಸರು ಕೇಳಿದರೆ ನಡುಗುತ್ತಿದ್ದರು. ಪ್ರೋಫೆಸರ್ ಕಾಲಾನಂತರ ರೈತ ಸಂಘ ಚೂರು ಚೂರಾಯಿತು. ಕೊನೆಗೆ ಕೃಷಿಕರ ಪರವಾಗಿ ಶಾಸನ ಸಭೆಯಲ್ಲಿ ಉಳಿದಿದ್ದ ಒಂದೇ ಒಂದು ಧ್ವನಿಯೆಂದರೆ ಅದು ಪುಟ್ಟಣಯ್ಯನವರದ್ದಾಗಿತ್ತು. ಅದು ಕೂಡ ಇಂದು ಶಾಶ್ವತ ಮೌನಕ್ಕೆ ಶರಣಾಗಿದೆ. ಇದರೊಂದಿಗೆ ರಾಜ್ಯದ ರೈತರಿಗೆ ಧ್ವನಿ ಇಲ್ಲವಾಗಿದೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಕಸಬಾ ಹೋಬಳಿ ಕ್ಯಾತನಹಳ್ಳಿ ಗ್ರಾಮದ ರೈತ ಕುಟುಂಬದಿಂದಲೇ ಬಂದಿದ್ದ ಅವರು ರೈತ ನಾಯಕನಾಗಿ ಬೆಳೆದ ಪರಿ ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಜನಿಸಿದ್ದ ಅವರಿಗೆ ಗ್ರಾಮೀಣ ಬದುಕಿನ ಅಭಿವೃದ್ಧಿಯ ತುಡಿತ ಜನ್ಮತಃ ಬಂದದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಹಳ್ಳಿಗಾಡುಗಳಲ್ಲಿ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಬಡ ಮಹಿಳೆಯರು ಅನುಭವಿಸುತ್ತಿದ್ದ ಯಾತನಾಮಯ ಜೀವನವನ್ನು ಕಣ್ಣಾರೆ ಕಂಡಿದ್ದರು. ಪದವೀಧರರಾಗಿದ್ದರೂ ನೌಕರಿಗೆ ಎಡತಾಕದೇ ರೈತರ ಸಂಕಷ್ಟ ಪರಿಹಾರಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡ, ಕರ್ನಾಟಕ ರೈತ ಸಂಘ ಕಂಡ ಅಪರೂಪದ ಧೀಮಂತ ಹೋರಾಟಗಾರರವರು.
ಸಾಮಾನ್ಯ ರೈತ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶಿಸಿದ್ದ ಅವರು ರೈತ ಸಂಘದ ರಾಜ್ಯಾಧ್ಯಕ್ಷ ಹುದ್ದೆಯವರೆಗೆ ಪಕ್ಷಾಧಿಕಾರದ ಎಲ್ಲ ಸ್ತರಗಳನ್ನು ಕಂಡವರು. ಕೊನೆಯವರೆಗೂ ‘ಸರ್ವೋದಯ ಕರ್ನಾಟಕ ಪಕ್ಷ’ದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದವರು. ಅದು ೧೯೯೪ರ ಚುನಾವಣೆ, ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಆಗ ರಮೇಶ್ ಕುಮಾರ್ ವಿಧಾನಸಭಾಧ್ಯಕ್ಷರು. ನಾನಾಗ ಸಂಯುಕ್ತ ಕರ್ನಾಟಕದ ರಾಜಕೀಯ ವರದಿಗಾರ. ಅಧಿವೇಶನದ ವರದಿಗಾರಿಕೆಗೆ ಹೋಗಿದ್ದೆ. ತಮ್ಮ ಚೊಚ್ಚಲ ಅಧಿವೇಶನದಲ್ಲಿ ರೈತರ ಸಂಕಷ್ಟಗಳನ್ನು ಪುಟ್ಟಣ್ಣಯ್ಯ ಎಳೆಎಳೆಯಾಗಿ ಬಿಡಿಸಿಟ್ಟ ಪರಿಗೆ ಇಡೀ ಸದನ ಮೂಕ ವಿಸ್ಮಿತವಾಗಿತ್ತು. ಸ್ವತಃ ಸಭಾಧ್ಯಕ್ಷರು ಮುಕ್ತ ಕಂಠದಿಂದ ಪುಟ್ಟಣ್ಣಯ್ಯನವರನ್ನು ಶ್ಲಾಘಿಸಿದ್ದರು. ಇವತ್ತಿಗೂ ರಮೇಶಕುಮಾರ್ ಅಂದಿನ ಪುಟ್ಟಣ್ಣಯ್ಯನವರ ಭಾಷಣವನ್ನು ನೆನಪಿಸಿಕೊಳ್ಳುತ್ತಾರೆ. ಯಾವುದೇ ಹಳ್ಳಿಗಳಿಗೆ ಕಂದಾಯ ಅಧಿಕಾರಿಗಳು ಮುನ್ಸೂಚನೆ ಇಲ್ಲದೇ ಏಕಾಏಕಿ ರೈತರ ಮನೆಗಳನ್ನು ಜಪ್ತಿಮಾಡಲು ತೆರಳುವುದನ್ನು ನಿರ್ಬಂಧಿಸಿದ ಕೀರ್ತಿ ಪುಟ್ಟಣ್ಣಯ್ಯನವರಿಗೇ ಸಲ್ಲಬೇಕು.ರೈತರ ವಿಚಾರಕ್ಕೆ ಬಂಗಾರಪ್ಪನವರಿಂದ ಆರಂಭಿಸಿ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ರಾಜ್ಯವನ್ನಾಳಿದ ಎಲ್ಲ ಮುಖ್ಯಮಂತ್ರಿಗಳ ವಿರೋಧವನ್ನು ಕಟ್ಟಿಕೊಂಡೂ, ಎಲ್ಲರೊಂದಿಗೆ ಸೌಹಾರ್ದ ಸ್ನೇಹವನ್ನೂ ಕಾಯ್ದುಕೊಂಡಿದ್ದ ಮುತ್ಸದ್ಧಿ ಅವರಾಗಿದ್ದರು. ಬರೆದರೆ ಮುಗಿಯಲಾರದ ವ್ಯಕ್ತಿತ್ವ ಅವರದ್ದು. ಹೇಳಬೇಕಿದ್ದುದಿಷ್ಟೆ, ಪುಟ್ಟಣ್ಣ ನಿಮಗಾಗಿಯಲ್ಲದಿದ್ದರೂ ರಾಜ್ಯದ ದನಿ ಕಳಕೊಂಡ ರೈತ ಸಮುದಾಯಕ್ಕಾಗಿ ನೀವು ಇನ್ನೊಂದಿಷ್ಟು ದಿನ ನಮ್ಮೊಂದಿಗೆ ಇರಬೇಕಿತ್ತು. ಏಕಿಷ್ಟು ಅವಸರ ಮಾಡಿಬಿಟ್ಟಿರಿ?

Share This :
  •  
  •  

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Latest Blogs