ಬನ್ನೇರುಘಟ್ಟ ಉಳಿಸಿಕೊಳ್ಳಲು ಉಗ್ರ ಹೋರಾಟ ಅನಿವಾರ್ಯವಾದೀತು !

April 16, 2018 ⊄   By: ರಾಧಾಕೃಷ್ಣ ಎಸ್ ಭಡ್ತಿ

ನಿಜಕ್ಕೂ ನಮಗೆ ಬುದ್ಧಿ ಬರುವುದೇ ಇಲ್ಲ. ದೇಶದ ಅತ್ಯಪರೂಪದ, ಅಪೂರ್ವ ವನ್ಯಜೀವಿ ತಾಣ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನೂ ನಾಶ ಮಾಡಲು ಹೊರಟಿದ್ದೇವೆ. ಬನ್ನೇರುಘಟ್ಟದ ಸುರಕ್ಷತಾ ವಲಯದಲ್ಲಿರುವ ರಾಗಿಹಳ್ಳಿ ಬಳಿ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಿರುವುದಕ್ಕಿಂತ ಬೇಜವಾಬ್ದಾರಿತನ ಇನ್ನೊಂದಿಲ್ಲ.
ಬೆಂಗಳೂರಿನ ದಕ್ಷಿಣಭಾಗದಲ್ಲಿ ಸುಮಾರು ೨೨ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದು. ೨೫,೦೦೦ಎಕರೆ (೧೦೪.೨೭ಕಿಮೀ)ಗಳ ಈ ಅಪರೂಪದ ವನ್ಯಜೀವಿಗಳ ಉದ್ಯಾನ ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳ. ಇಂಥ ಅಪರೂಪದ ನೈಸರ್ಗಿಕ ಸಂಪತ್ತಿನ ನಾಶಕ್ಕಿಂಥ ಮೂರ್ಖತನ ಮತ್ತೊಂದಿಲ್ಲ.
ಗಣಿಗಾರಿಕೆ ಬಹಿರಂಗ ಹೋರಾಟಕ್ಕೆ ಇಳಿದಿರುವ ವೃಕ್ಷಾ ಪ್ರತಿಷ್ಠಾನದ ಪ್ರಕಾರ, ಇಲ್ಲಿ ಕಲ್ಲು ಪುಡಿಮಾಡುವ ಘಟಕ ಆರಂಭಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸುವಾಗ ಮಾಲೀಕರು ಅರಣ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಕಾಡು ಇಲ್ಲ ಎಂದು ಅವರು ತಿಳಿಸಿದ್ದರು. ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆಯೇ ಈ ಘಟಕಕ್ಕೆ ಅನುಮತಿ ನೀಡಿದ್ದಾರೆ. ಆಯಕಟ್ಟಿನ ಸ್ಥಳದಲ್ಲಿ ಕುಳಿತು ಅರಣ್ಯ ಸಂರಕ್ಷಣೆಗೆಂದೇ ನೇಮಕಗೊಂಡಿರುವ, ಇದಕ್ಕಾಗಿ ತಿಂಗಳಿಗೆ ಸರಿಯಾಗಿ ಸಂಬಳ ಎಣಿಸುವ ಅಧಿಕಾರಿಗಳ ಇಂಥ ಬೇಜವಾಬ್ದಾರಿತನ ಅಕ್ಷಮ್ಯ. ಈ ಕ್ವಾರಿಯ ಸುತ್ತಲೂ ರಾಷ್ಟ್ರೀಯ ಉದ್ಯಾನ ಪ್ರದೇಶ ಆವರಿಸಿದೆ. ಇನ್ನೂ ವಿಶೇಷವೆಂದರೆ ಆನೆ ಕಾರಿಡಾರ್ನ ಪಕ್ಕದಲ್ಲೇ ಇದೆ. ಅಕ್ಷಾಂಶ- ರೇಖಾಂಶ ಆಧರಿಸಿ ಪರಿಶೀಲಿಸಿದಾಗ ಈ ಪ್ರದೇಶವು ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದಲ್ಲೇ ಬರುತ್ತದೆ.
ಕಲ್ಲು ಗಣಿಗಾರಿಕೆ ಎಂದ ಮೇಲೆ ಭಾರೀ ವಾಹನಗಳ ಸಂಚಾರ ಸಹಜ. ಹಗಲು-ರಾತ್ರಿ ಎನ್ನದೇ ಸಂಚರಿಸುವ ಇಂಥ ವಾಹನಗಳಿಂದ ವನ್ಯಜೀವಿಗಳಿಗೆ ಅಪಾಯ ಬಂದೇ ಬರುತ್ತದೆ ಎಂಬ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ, ನಮ್ಮನ್ನಾಳುವ ಮಂದಿಗೆ ಇಲ್ಲವೇ. ಇನ್ನು ಕ್ವಾರಿಯಿಂದ ಉಂಟಾಗುವ ಮಾಲಿನ್ಯದಿಂದ ಜನಜೀವನಕ್ಕೂ ಧಕ್ಕೆ ಬರುತ್ತದೆ. ಬನ್ನೇರುಘಟ್ಟ ವನ್ಯಜೀವಿ ವಲಯ ಹಾಗೂ ಹಾರೋಹಳ್ಳಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಒಟ್ಟು ಮೂರು ಕಡೆ ಕಲ್ಲುಗಣಿಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಇದರಲ್ಲಿ ಎರಡು ಗಣಿಗಳಿಗೆ ೨೦ ವರ್ಷಗಳ ಅವಧಿಗೆ ೨೦೦೬-೦೭ನೇ ಸಾಲಿನಲ್ಲೇ ಅನುಮತಿ ನೀಡಲಾಗಿದೆ. ರಾಗಿಹಳ್ಳಿಯ ಘಟಕಕ್ಕೆ ೨೦೧೩ರಲ್ಲಿ ಅನುಮತಿ ಕೊಡಲಾಗಿದೆ.
ಹಾರೋಹಳ್ಳಿ- ಆನೇಕಲ್ ಸಂಪರ್ಕ ರಸ್ತೆಯ ಪ್ರಸ್ತಾಪವೂ ಇದರೊಂದಿಗೆ ಜತೆಗೂಡಿದೆ. ಇದು ಆನೆ ಕಾರಿಡಾರ್ ಅನ್ನೇ ವಿಭಜಿಸುತ್ತದೆ. ಇದನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವ ಸಿದ್ಧವಾಗಿದೆ. ಈ ಕಾಮಗಾರಿಗೆ ರಾಷ್ಟ್ರಿಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ವಿಚಾರವನ್ನು ಮಂಡಳಿಯ ಗಮನಕ್ಕೇ ತಂದಿಲ್ಲ. ಈ ರಸ್ತೆಯನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಿದರೆ ವನ್ಯಜೀವಿಗಳು ಮತ್ತಷ್ಟು ಅಪಾಯಕ್ಕೆ ಸಿಲುಕಲಿವೆ. ಈ ಪ್ರದೇಶದಲ್ಲಿ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ರಾಷ್ಟ್ರೀಯ ಉದ್ಯಾನದಿಂದ ೧೦ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಈ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮುಂದುವರಿಸಲು ಕಡ್ಡಾಯವಾಗಿ ಅವಕಾಶ ನೀಡಬಾರದು. ಮಾತ್ರವಲ್ಲ ವನ್ಯ ಜೀವಿಗಳ ಸಹಜ ಬದುಕಿಗೆ ಅಡ್ಡಿ ಮಾಡಲಿರುವ ಉದ್ದೇಶಿತ ರಸ್ತೆ ನಿರ್ಮಾಣವನ್ನೂ ಕೈಬಿಡಲೇಬೇಕು. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು ಬನ್ನೇರುಘಟ್ಟ ಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸರಾಸಕ್ತ ಸಮುದಾಯ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ.

Share This :
  •  
  •