ಕೃಷಿಯ ಅಕ್ರಮ ತಡೆಗೆ ಇದು ಸಕಾಲ!

February 08, 2018 ⊄   By: ರಾಧಾಕೃಷ್ಣ ಭಡ್ತಿ

ನಾಡಿನಲ್ಲಿ ನಮಗೆ ನಾವೇ ಮರುಭೂಮಿಯನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ಕರ್ನಾಟಕ ಮರುಭೂಮಿಯಾಗುತ್ತಿದೆ. ಬಹಳಷ್ಟು ಜನರಿಗೆ ಮರುಭೂಮಿಯ ಬಗ್ಗೆ ತುಂಬಾ ತಪ್ಪು ಕಲ್ಪನೆಗಳಿವೆ. ನೀರೆಲ್ಲ ಆರಿ, ಕೇವಲ ಮರಳು ರಾಶಿರಾಶಿಯಾಗಿ ಬಿದ್ದಿರುವ ಪ್ರದೇಶವಷ್ಟೇ ಮರುಭೂಮಿ ಎಂದುಕೊಂಡಿದ್ದೇವೆ. ಇದಕ್ಕಿಂತ ಭಿನ್ನವಾದ ‘ಮರಳುಕಾಡನ್ನು’ ನಾವೇ ನಮ್ಮ ಕೈಯಾರೆ, ನಮ್ಮ ನೆಲದಲ್ಲೇ ಸೃಷ್ಟಿಸಿಕೊಳ್ಳುತ್ತೇವೆ. ಇದು ನಿಜವಾಗಿ ಮರಳು-ಕಾಡು. ಏಕೆಂದರೆ ಇಲ್ಲೆಲ್ಲ ಮೊದಲು ಕಾಡಿತ್ತು. ಈಗ ಬರಡಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಪಶ್ಚಿಮಘಟ್ಟ ಪ್ರದೇಶದ ದಟ್ಟಾರಣ್ಯ ಭಾಗದಲ್ಲಿ ಕಾಡನ್ನು ಕಡಿದು ವ್ಯವಸಾಯಕ್ಕೆ ಬಳಸಲಾಗುತ್ತಿದೆ. ದಟ್ಟ ಅರಣ್ಯವಿದ್ದ ಜಾಗದಲ್ಲಿ ಹುಲುಸಾದ ಬೆಳೆ ಬರುತ್ತದೆ ಎಂಬುದು ಇದಕ್ಕೆ ಪ್ರೇರಣೆ. ಹಿಂದೆಲ್ಲ ಇದಕ್ಕೆ ಕುಮರಿ ಬೇಸಾಯ ಎನ್ನುತ್ತಿದ್ದರು. ಒಂದೆಡರಡು ವರ್ಷ ಅರಣ್ಯ ಭೂಮಿಯಲ್ಲಿ ಬೆಳೆ ತೆಗೆದು ನಂತರ ಅಲ್ಲಿಂದ ಮತ್ತೆ ಬೇರೆಡೆಗೆ ವಲಸೆ ಹೋಗುವುದು. ಮಳೆ ಆಧಾರಿತ ಬೆಳೆಯಾದ್ದರಿಂದ ನೀರಿನ ಸಮಸ್ಯೆ ಇಲ್ಲ. ಇನ್ನು ಹಲವಾರು ವರ್ಷಗಳಿಂದ ಮರಗಳ ಎಲೆ ಉದುರಿ ಅಲ್ಲಿ ಗೊಬ್ಬರ ತನ್ನಿಂದ ತಾನೇ ನಿರ್ಮಾಣವಾಗಿರುತ್ತದೆ. ಹೀಗಾಗಿ ಗೊಬ್ಬರದ ಹಂಗೂ ಇಲ್ಲ. ಆದರೆ ಮೊದಲೆರಡು ವರ್ಷಗಳಷ್ಟೇ ಈ ಫಲವತ್ತತೆ ಆ ಭೂಮಿಯಲ್ಲಿರುವುದು. ಏಕೆಂದರೆ ಅರಣ್ಯದ ಮಣ್ಣಿಗೆ ಸೇರುವ ಎಲೆ ತೊಗಟೆ ಇತ್ಯಾದಿ ಸಾವಯವ ಭಾಗ ಕೊಳೆತು ಮೇಲ್ಪದರದ ಮಣ್ಣಿಗೆ ಮಾತ್ರ ಸೇರಿರುತ್ತದೆ. ಮರಗಳನ್ನು ಕಡಿದು ಕೃಷಿಯಲ್ಲಿ ತೊಡಗುವುದರಿಂದ ಸೂರ್ಯನ ಶಾಖಕ್ಕೆ ತೆರೆದುಕೊಳ್ಳುವ ಮುಚ್ಚಿಗೆಯಂತಿದ್ದ ಈ ಮೇಲ್ಪದರ ಕೆಲವೇ ವರ್ಷಗಳಲ್ಲಿ ಬರಡಾಗಿ ಮಾರ್ಪಡುತ್ತದೆ. ಒಂದೆರಡು ಅಡಿಗಳಷ್ಟೇ ಇರುವ ಸಾವಯವ ಭಾಗ ಖಾಲಿಯಾಗುತ್ತಿದ್ದಂತೆ ಅಲ್ಲಿ ಬೇರಾವುದೇ ಬೆಳೆ ಬೆಳೆಯಲಾಗುವುದಿಲ್ಲ. ಕೊನೆಗೆ ಅದು ಗೊಚ್ಚು ಮಣ್ಣಿನ ಭೂಮಿಯಾಗಿ ಪರಿವರ್ತನೆಯಾಗುತ್ತದೆ. ಮತ್ತೆ ಸಾರ ನಿರ್ಮಾಣವಾಗಲು ಮರಗಳೇ ಇರುವುದಿಲ್ಲ. ಜತೆಗೆ ಸೂರ್ಯನ ಬಿಸಿಲಿನ ಝಳ ನೇರವಾಗಿ ಭೂಮಿಗೆ ಬೀಳುವುದರಿಂದ ತೇವಾಂಶವೂ ಬಲುಬೇಗ ಆವಿಯಾಗಿ ಸುಟ್ಟು ಕರಕಲಾಗುವ ಭೂಮಿ ಬಂಜೆಯಾಗಿ ಪರಿವರ್ತನೆಯಾಗುತ್ತದೆ. ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿ ಈಗಾಗಲೇ ಸಾವಿರಾರು ಎಕರೆ ಪ್ರದೇಶ ಒಂದೋ ಬಯಲು ಇಲ್ಲವೇ ಬೋಳು ಗುಡ್ಡವಾಗಿ ಮಾರ್ಪಟ್ಟಿದೆ. ಒಂದು ಕಾಲದಲ್ಲಿ ಇಲ್ಲೆಲ್ಲ ದಟ್ಟ ಅರಣ್ಯ ಇತ್ತು. ಕೃಷಿಗಾಗಿ ಅರಣ್ಯ ಕಡಿದ ಪರಿಣಾಮ ಮಣ್ಣು ಬರಡಾದದ್ದು ಮಾತ್ರವಲ್ಲ, ನೀರೂ ನೆಲ ಬಿಟ್ಟು ಆಳಕ್ಕಿಳಿದಿದೆ. ಅಂತರ್ಜಲ ಆವಿಯಾಗುತ್ತಿದೆ. ಇತ್ತ ರಾಗಿ, ಜೋಳ ಬೆಳೆಯುವವರನ್ನು ಕೇಳುವವರೇ ದಿಕ್ಕಿಲ್ಲ. ತೀರಾ ಕಡಿಮೆ ನೀರು ಕೇಳುವ ನವಣೆ, ಸಜ್ಜೆಗಳಂಥ ಕಿರು ಧಾನ್ಯಗಳು ನಾಡಿನಿಂದಲೇ ಕಣ್ಮರೆಯಾಗಿವೆ. ಒಂದು ಕಾಲದ ರಾಜ್ಯದ ಮುಖ್ಯ ಆಹಾರ ಧಾನ್ಯಗಳೆನಿಸಿದ ರಾಗಿ, ಜೋಳದ ಜಾಗವನ್ನು ಗೋಧಿ, ಭತ್ತ, ಕಬ್ಬು ಆಕ್ರಮಿಸಿಕೊಂಡಿವೆ. ಎಂಥಾ ಬರ ಪರಿಸ್ಥಿತಿಯಲ್ಲೂ ಉಳಿಯಬಲ್ಲ ಕಿರು ಧಾನ್ಯಗಳು ಹೆಸರಿಗೂ ಉಳಿಯದೇ ಹೋಗಿವೆ. ಅಮೆರಿಕನ್ ಲಾಬಿಯ ಪರಿಣಾಮ ಗೋಧಿ ಬಲವಂತವಾಗಿ ಹೇರಿಕೆಯಾಗಿ ಅನಿವಾರ್ಯವಾಗಿ ನಾವು ಆಹಾರ ಸ್ವಾವಲಂಬನೆಯನ್ನು ಕಳಕೊಳ್ಳುವಂತಾಗಿದೆ. ಇದಕ್ಕಾಗಿ ಹೆಚ್ಚಿನ ಹಣಕ್ಕೆ ಗೋಧಿಯನ್ನು ನಾವು ಖರೀದಿಸುವಂತಾಗಿದೆ. ಇದಕ್ಕಾಗಿ ನೀರಾವರಿಯನ್ನು ಕಲ್ಪಿಸಲೇಬೇಕೆಂದು, ಆಹಾರ ಉತ್ಪಾದನೆ ಹೆಚ್ಚಳದ ಹೆಸರಿನಲ್ಲಿ ಮತ್ತಷ್ಟು ಬೃಹತ್ ನಿರಾವರಿ ಯೋಜನೆಯನ್ನು ರೂಪಿಸುತ್ತಲೇ ಹೋಗುತ್ತಿದ್ದೇವೆ. ಅದಕ್ಕಾಗಿ ಇನ್ನಷ್ಟು ಕೃಷಿ ಭೂಮಿ, ಅರಣ್ಯ, ಜನವಸತಿ ಪ್ರದೇಶಗಳು ಮುಳುಗಡೆಯಾಗುತ್ತಲೇ ಇವೆ.

ನಾವು ಮಾಡುತ್ತಿರುವ ಇಂಥ ಅಕ್ರಮ ಕೃಷಿಯ ಬಗ್ಗೆ ಮತ್ತೊಮ್ಮೆ ಯೋಚಿಸಲು ಇದು ಸಕಾಲ.

Share This :
  •  
  •  

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು