ಅಂಟುವಾಳ ಅಂಟಿದ ಕೊಳೆ ತೊಳೆವ ಕಾಯಿ

May 12, 2018 ⊄   By: - ಶೋಭಾ ರಾವ್

ಇಂಟ್ರೋ: ಹತ್ತು ನಿಮಿಷ ಮುಳುಗಿ ಸ್ನಾನ ಮಾಡಿದ ಗೆಜ್ಜೆಯನ್ನು ಎತ್ತಿ ಹಳೆಯ ಬ್ರಷ್ನಿಂದ ಉಜ್ಜಿದರೆ ಸಾಕು ಕೊಳೆಯನ್ನು ಕಳೆದುಕೊಂಡು ಹೊಸತಂತೆ ಫಳಫಳನೆ ಮಿನುಗಿ ನಗುತಿತ್ತು, ಆ ಬೆಳಕು ಸುತ್ತೆಲ್ಲಾ ಚೆಲ್ಲಾಡಿ ಮುಖದಲ್ಲೂ ಪ್ರತಿಫಲಿಸುತ್ತಿತ್ತು. ಈ ಕಂದು ಬಣ್ಣದ ಪುಟ್ಟ ಕಾಯಿಯ ಒಡಲಿನಲ್ಲಿ ಅದೆಂಥಾ ಶಕ್ತಿ ಅನ್ನೋ ಅಚ್ಚರಿ ಕಣ್ಣಲ್ಲಿ ಮೂಡಿ ಮರೆಯಾಗುತಿತ್ತು. ಇನ್ನೊಬ್ಬರನ್ನು ಕೊಳೆಯನ್ನು ತೊಳೆದು ಬೆಳಕು ತುಂಬುವುದು ಅಷ್ಟು ಸುಲಭವಾ?

ಹೇಗಿದ್ರೂ ರಜೆ ಇವತ್ತು ಮೊದ್ಲು ಆ ಗೆಜ್ಜೆ ಬಿಚ್ಚಿ ತೊಳಿ, ಜಗತ್ತಿನ ಎಲ್ಲಾ ಗಲೀಜು ಅದರಲ್ಲೇ ಇರೋ ಹಾಗಿದೆ ಅಂತ ಅಜ್ಜಿ ಅಂಟುವಾಳ ಕಾಯಿಯನ್ನು ಎದುರಿಗಿಟ್ಟು ಗದರಿಸುತ್ತಾ ಒಳಗೆ ಹೋದರೆ ನಾನು ತದೇಕಚಿತ್ತಳಾಗಿ ಕಾಲಿನ ಗೆಜ್ಜೆಯನ್ನೂ, ಪಕ್ಕದಲ್ಲಿದ್ದ ಅಂಟುವಾಳ ಕಾಯನ್ನೂ ದಿಟ್ಟಿಸುತ್ತಾ ಕೂರುತಿದ್ದೆ. ಹೆಜ್ಜೆಯಿಟ್ಟ ಕ್ಷಣದಲ್ಲೆಲ್ಲಾ ಘಲ್ ಘಲ್ ಎನ್ನುತ್ತಾ ಹಿಂಬಾಲಿಸುವ ಅದೆಂದರೆ ಪ್ರೀತಿ, ಸಾಂಗತ್ಯ ಕೊಡುವ ಅದರ ಬಗ್ಗೆ ಅಪ್ಯಾಯತೆ. ಸದ್ದಿಲ್ಲದ ಬದುಕು ಕಲ್ಪಿಸಿಕೊಳ್ಳುವುದಾದರೂ ಹೇಗೆ?

ಹಾಗೆ ಮೈ ಮರೆತು ಕಳೆದು ಹೋಗುವವಳನ್ನ ಬಚ್ಚಲಲ್ಲಿ ಬಿಸಿ ನೀರಿದೆ ನೋಡು ಅನ್ನೋ ಅವಳ ಧ್ವನಿ ಅಡುಗೆ ಮನೆಯಿಂದ ತೂರಿ ಬಂದು ಬಡಿದು ಎಬ್ಬಿಸುತಿತ್ತು. ಎದ್ದು ಅಲ್ಲೇ ಅಂಗಳದ ಮೂಲೆಯಲ್ಲಿ ಬಿದ್ದಿರುತಿದ್ದ ಕಲ್ಲನ್ನು ಎತ್ತಿಕೊಂಡು ಆ ಅಂಟುವಾಳ ಕಾಯಿಯನ್ನು ಜಜ್ಜಿ ಅದನ್ನು ಬೊಗಸೆಯಲ್ಲಿ ಎತ್ತಿಕೊಂಡು ಬಂದು ಬಟ್ಟಲಿನಲ್ಲಿ ಹಾಕಿ ಬಿಸಿ ನೀರಿನ ಅಭಿಷೇಕ ಮಾಡಿದರೆ ಅದು ನಾಚಿ ಕರಗಿ ನೊರೆಯಿಂದ ಮೈ ಮುಚ್ಚಿಕೊಳ್ಳುತಿತ್ತು. ಹಾಗೆ ನೊರೆ ಬಿಡುತಿದ್ದ ಅದರಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಗೆಜ್ಜೆಯನ್ನು ಮುಳುಗಿಸಿದರೆ ಜಗತ್ತಿಗೆ ನಿಶಬ್ಧ ಆವರಿಸಿತೇನೋ ಅನ್ನೋ ಭಾವ ಕಾಡುತಿತ್ತು. ಶಬ್ದಗಳನ್ನ ಎದುರಿಸಬಹುದು ಈ ನಿಶಬ್ದ ಉಹೂ ಉಸಿರುಗಟ್ಟಿಸುತ್ತೆ. ವಿಪರಿತ ದೃಢತೆ ಬೇಡುತ್ತೆ. ಹಾಗಾಗಿ ಆ ನಿಶಬ್ಧ ಎದುರಿಸುವ ಧೈರ್ಯವಿಲ್ಲದೇ ಹಳೆಯ ಬ್ರಷ್ ಅರಸಿ ಹೊರಡುತಿದ್ದೆ.

ಹತ್ತು ನಿಮಿಷ ಮುಳುಗಿ ಸ್ನಾನ ಮಾಡಿದ ಗೆಜ್ಜೆಯನ್ನು ಎತ್ತಿ ಹಳೆಯ ಬ್ರಷ್ನಿಂದ ಉಜ್ಜಿದರೆ ಸಾಕು ಕೊಳೆಯನ್ನು ಕಳೆದುಕೊಂಡು ಹೊಸತಂತೆ ಫಳಫಳನೆ ಮಿನುಗಿ ನಗುತಿತ್ತು, ಆ ಬೆಳಕು ಸುತ್ತೆಲ್ಲಾ ಚೆಲ್ಲಾಡಿ ಮುಖದಲ್ಲೂ ಪ್ರತಿಫಲಿಸುತ್ತಿತ್ತು. ಈ ಕಂದು ಬಣ್ಣದ ಪುಟ್ಟ ಕಾಯಿಯ ಒಡಲಿನಲ್ಲಿ ಅದೆಂಥಾ ಶಕ್ತಿ ಅನ್ನೋ ಅಚ್ಚರಿ ಕಣ್ಣಲ್ಲಿ ಮೂಡಿ ಮರೆಯಾಗುತಿತ್ತು. ಇನ್ನೊಬ್ಬರನ್ನು ಕೊಳೆಯನ್ನು ತೊಳೆದು ಬೆಳಕು ತುಂಬುವುದು ಅಷ್ಟು ಸುಲಭವಾ? ರೂಪ ಚಿಕ್ಕದಾದ ಮಾತ್ರಕ್ಕೆ ಶಕ್ತಿಯೂ ಸೀಮಿತವಾಗಿರಬೇಕು ಅನ್ನೋ ರೂಲ್ ಇಲ್ಲಾ ಅದು ನಿನ್ನ ಅಂತಸತ್ವಕ್ಕೆ ಬಿಟ್ಟ ವಿಷ್ಯ ಅನ್ನೋದನ್ನ ಪಿಸುಗುಡುತಿತ್ತಾ... ಗೆಜ್ಜೆಯ ಘಲ್ ಸದ್ದಿನಲ್ಲಿ ಕೇಳಲೇ ಇಲ್ಲಾ ಆಗ.

ಕಾಡಿನಲ್ಲಿ ತನ್ನಷ್ಟಕ್ಕೆ ತಾನು ಬೆಳೆದು ರೆಂಬೆಯ ತುಂಬಾ ಗೊಂಚಲು ಗೊಂಚಲು ಕಾಯಿ ಬಿಡುತಿದ್ದ ಈ ಮರ ಒಂಥರಾ ವನಸುಮದಂತೆ. ಕಾಯಿ ಚಿಕ್ಕದಾದರೂ ಉಪಯೋಗ ಮಾತ್ರ ಬಹಳ. ಸೋಪುಗಳ ಬಳಕೆ ವ್ಯಾಪಕವಾಗಿ ಶುರುವಾಗುವ ಮುನ್ನ ಇದು ಹಳ್ಳಿಯ ಪ್ರತಿಮನೆಯಲ್ಲೂ ಮುಖ್ಯ ಸ್ಥಾನ ಪಡೆದಿತ್ತು. ಅದನ್ನು ಜಜ್ಜಿ ಸಿಪ್ಪೆ ಬಿಡಿಸಿ ಬಿಸಿಲಲ್ಲಿ ಒಣಗಿಸಿ ಡಬ್ಬಿಯೊಳಗೆ ಹಾಕಿ ಮುಚ್ಚಿಟ್ಟರೆ ವರ್ಷಗಳು ಕಳೆದರೂ ಅದು ಮಾತ್ರ ತನ್ನ ಶಕ್ತಿ ಕಳೆದುಕೊಳ್ಳುತ್ತಿರಲಿಲ್ಲ, ಕೊಳೆಯನ್ನು ಮಾತ್ರ ತೊಳೆಯುತಿತ್ತು. ಅಡಿಕೆಯನ್ನು ಒಣಗಿಸಿ ಬಿಸಿಲಿಗೆ ಬೆನ್ನಾದ ತಟ್ಟಿಗೆ ಸಾಂಗತ್ಯ ನೀಡಿ ಅದರ ಜೊತೆ ತಾನೂ ಒಣಗುತ್ತಿತ್ತು. ಮಾತಿಗೆ ಧ್ವನಿಯಾಗುತಿತ್ತು.

ಅಂಟುವಾಳ ಕಾಯಿಯನ್ನು ಜಜ್ಜಿ ಅದರ ಪುಡಿಯನ್ನು ಒಲೆಯ ಬೂದಿ ಅಥವಾ ಉಮ್ಮಿಯನ್ನು ಸುಟ್ಟು ತಯಾರಿಸಿದ ಬೂದಿಯ ಜೊತೆಗೆ ಸೇರಿಸಿಕೊಂಡು ಪಾತ್ರೆ ತೊಳೆದರೆ ಒಲೆಯ ಊರಿಗೆ ಸುಟ್ಟು ಬಣ್ಣ ಬದಲಿಸಿಕೊಂಡ ಕಪ್ಪಾದ ಪಾತ್ರೆಗಳು ಫಳಫಳನೆ ಹೊಳೆಯುತ್ತಿದ್ದವು. ಹಾಗೆ ಹೋಗುತಿದ್ದ ನೀರು ಬಸಳೆಯ ಗಿಡಕ್ಕೋ, ತೊಂಡೆಯ ಬಳ್ಳಿಯ ಬುಡಕ್ಕೋ, ಇಲ್ಲಾ ತೆಂಗಿನ ಮರಕ್ಕೋ ಹರಿಯುತಿತ್ತು. ಯಾವುದೇ ರಾಸಾಯನಿಕಗಳಿಂದ ಮುಕ್ತವಾದ ಅದು ಸೇರಿದ ಜಾಗವನ್ನೂ ಕಲುಷಿತಗೊಳಿಸದೆ, ಅಸ್ತಿತ್ವವನ್ನು ಕಳೆದುಕೊಂಡರೂ ಇನ್ನೊಬ್ಬರ ಅಸ್ತಿತ್ವ ಪ್ರಭಾವಿಸದೆ ಇರುವ ಪಾಠ ಕಲಿಸುತಿತ್ತಾ....

ಸೀಗೆಪುಡಿಯ ಅಭಾವವಿದ್ದಾಗ ತಲೆಯ ಎಣ್ಣೆಯನ್ನು ಹೊಡೆದೋಡಿಸಲು ಮತ್ತಿದೇ ಅಂಟುವಾಳ ಸಹಾಯ ಮಾಡುತಿತ್ತು. ಅದನ್ನು ನೀರಲ್ಲಿ ನೆನಸಿ ಚೆನ್ನಾಗಿ ಹಿಸುಕಿದರೆ ಬಿಡುತ್ತಿದ್ದ ಬೆಳ್ಳಗಿನ ನೊರೆ ಕಪ್ಪಗಿನ ಕೊಳೆಯನ್ನು ತೊಳೆದು ಕೂದಲಿಗೆ ರೇಷ್ಮೆಯ ನುಣುಪನ್ನೂ, ಮಿರುಗುವ ಹೊಳಪನ್ನೂ ಕೊಡುತ್ತಿತ್ತು. ಹಾನಿಕಾರಕ ರಾಸಯನಿಕವಿಲ್ಲದ ಇದು ಚರ್ಮಕ್ಕೆ ಸುರಕ್ಷಿತವಾಗಿತ್ತು. ದೇವರ ಪಾತ್ರೆಗಳನ್ನು, ವಿಗ್ರಹಗಳನ್ನೂ ಇದರ ನೀರಲ್ಲಿ ಮುಳುಗಿಸಿ ಇಟ್ಟು ಕೆಲಕಾಲ ಬಿಟ್ಟು ತೊಳೆದರೆ ತನ್ನ ಮಂಕು ಕಳೆದುಕೊಂಡು ಹೊಸತರಂತೆ ಕಂಗೊಳಿಸುವ ಹಾಗೆ ಮಾಡುತಿತ್ತು.ಇನ್ನು ಫಂಕ್ಷನ್ ಹೋಗುವ ಸಮಯದಲ್ಲಂತೂ ಇದರ ಸಹಾಯ ವರ್ಣಿಸಲು ಪದಗಳೇ ಸಾಲದು. ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಕಪ್ಪಾದ ಆಭರಣಗಳು ತಮ್ಮ ಬಣ್ಣ ವಾಪಸ್ ಪಡೆದುಕೊಂಡು ಮಿನುಗಿ ಆ ಬೆಳಕು ಇತರರ ಕಣ್ಣುಗಳಲ್ಲಿ ಅಸೂಯೆಯಾಗಿ ಪ್ರತಿಫಲಿಸುವ ಹಾಗೆ ಮಾಡುವುದರಲ್ಲಿ ಇದರ ಶ್ರಮ ತುಂಬಾ ದೊಡ್ಡದು. ರೇಷ್ಮೆಯ ಸೀರೆಯನ್ನು ಒಗೆಯಲು ಧೈರ್ಯ ಕೊಡುತಿದ್ದದ್ದೂ ಇದೇ ಅಂಟುವಾಳ ಕಾಯಿ. ಯಾವುದೇ ಹಾನಿಯಾಗದಂತೆ ಕೊಳೆಯನ್ನು ತೆಗೆಯುವುದು ಮಾತ್ರವಲ್ಲ ಬೆಳಕು ತುಂಬುತ್ತೇನೆ ಅನ್ನೋ ಆತ್ಮವಿಶ್ವಾಸ, ಅಂತಶಕ್ತಿ, ನಂಬಿಕೆ ಅಂಟುವಾಳ ಕಾಯಿಗಲ್ಲದೆ ಇನ್ಯಾರಿಗೆ ಕೊಡಲು ಸಾಧ್ಯ.ಕಾಲ ಚಕ್ರ ಉರುಳುತ್ತಾ, ಬದುಕನ್ನ ಸುಲಭವಾಗಿಸಿಕೊಳ್ಳುತ್ತಾ ಹೋದ ಮನುಷ್ಯನಿಗೆ ಸಹಜತೆ ಕಷ್ಟವೆನಿಸಿದೆ. ಅನೈಸರ್ಗಿಕ ವಿಧಾನವಾದರೂ ಪರವಾಗಿಲ್ಲ ಸರಳವಾಗಿರಬೇಕು ಅನ್ನಿಸಿದೆ. ಹಾಗಾಗಿ ಅಂಟುವಾಳದ ಜಾಗವನ್ನು ಸೋಪು, ಶಾಂಪೂ ಇನ್ಯಾವುದೋ ರಾಸಾಯನಿಕ ಆವರಿಸಿಕೊಂಡಿದೆ. ಮನೆಯ ಮುಂದಿನ ಚಪ್ಪರ, ಅದರ ಮೇಲೆ ಬೆನ್ನೊರಿಗಿಸಿ ಕುಳಿತ ತಟ್ಟಿ ಮಾಯವಾಗಿ ಅಂಟುವಾಳ ತನ್ನ ಸಾಂಗತ್ಯ ಕಳೆದುಕೊಂಡಿದೆ. ಉಪಯೋಗವಿಲ್ಲದ ಮೇಲೆ ಊರಿನ ಹಂಗೇಕೆ ಎಂದು ವನಸುಮವಾಗಿ ಎಲ್ಲೋ ಕಾಡಿನ ನಡುವೆ ಮರೆಯಾಗಿ ಊರಿನ ಬಂಧ ಕಳೆದುಕೊಳ್ಳುತ್ತಿದೆ.ಅಮ್ಮಾ ನಂಗೆ ಶಾಂಪೂ ಇಷ್ಟವಿಲ್ಲ ಅನ್ನುವ ಮಗಳ ದನಿಗೆ ಕಿವಿಯಾದವಳಿಗೆ ಮತ್ತಿಯನ್ನು ಬಹಳ ದಿನ ಸಂರಕ್ಷಿಸಿಡಲು ಅಸಹಾಯಕತೆಗೆ ಒಳಗಾದವಳಿಗೆ ಗ್ರಂಧಿಗೆ ಅಂಗಡಿಯಲ್ಲಿ ಈಗಲೂ ಅಂಟುವಾಳ ಸಿಗುತ್ತೆ ಅನ್ನೋ ಮಾತು ಅಪ್ಯಾಯಮಾನವಾಗಿ ಕೇಳಿಸಿತ್ತು. ನೋಡೋಣ ಈ ಸಲ ಯಾರಿಗಾದರೂ ಹೇಳಿ ಕುಯ್ಯಿಸಿ ಒಣಗಿಸಿಡ್ತೀನಿ ಅಂತ ಊರಿಗೆ ಹೋದಾಗ ಸಿಕ್ಕ ಆಶ್ವಾಸನೆ ಕಳೆದುಕೊಂಡ ನಿಧಿ ದೊರಕಿದ ಹಾಗಾಗಿತ್ತು. ಬಂದವಳೇ ಬಾಲ್ಕನಿಯ ಜಾಗವನ್ನು ತೊಳೆದು ಶುಭ್ರಗೊಳಿಸಿ ಇಟ್ಟಿದ್ದೇನೆ. ಅಂಟುವಾಳ ಕಾಯಿಯನ್ನು ಒಣಗಿಸಲು, ಕಾಫಿ ಹೀರುತ್ತಾ ಅದರ ಜೊತೆ ಮಾತಾಡಲು...
ಪರಿಶ್ರಮವಿಲ್ಲದ ಬದುಕು ಕಳೆದುಕೊಳ್ಳುವುದು
ಮಾತ್ರ ಲೆಕ್ಕವಿಡಲಾರದಷ್ಟು ಅನ್ನೋದನ್ನ
ಭ್ರಮೆ ತೊಳೆದ ಅಂಟುವಾಳ ಹೇಳುತ್ತಿದೆ.
ಅರ್ಥವಾದ ಮನಸ್ಸು ಮಿನುಗುವುದು ಅಹಿಯ ಕಣ್ಣುಗಳಲ್ಲಿ ಕಾಣುತ್ತಿದೆ.Share This :
  •  
  •  

Readers Comments (0) 

COMMENT

Characters Remaining : 1000