ರೈತನನ್ನೇ ಮರೆಯುತ್ತಿದೆ ದೇಶ!

March 29, 2019 ⊄   By: ನಾಗರಾಜ.ಜಿ. ನಾಗಸಂದ್ರ

ಭಾರತವು ಕೃಷಿ ಪ್ರಧಾನ ದೇಶ. ಬಹಳ ಇತ್ತೀಚಿನ ವರೆಗೂ ಶೇಕಡಾ 70 ರಷ್ಟು ಜನ ಸಂಖ್ಯೆ ಕೃಷಿಯನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ಕೈಗಾರಿಕೆಗಳ ಹಾಗೂ ಸೇವಾ ಕ್ಷೇತ್ರಗಳ ಬೆಳವಣಿಗೆ ಕೃಷಿ ಅವಲಂಬನೆಯನ್ನು ಕಡಿಮೆ ಮಾಡಿದೆ. ಇದು ದೇಶದ ಅಭಿವೃದ್ಧಿಯ ವಿಷಯದಲ್ಲಿ ಒಂದು ಉತ್ತಮ ಬೆಳವಣೆಗೆಯಾಗಿದೆ. ಈ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಹೆಚ್ಚಿನ ಆಸಕ್ತಿವಹಿಸುತ್ತಿರುವ ನಮ್ಮ ಸರ್ಕಾರಗಳು ಅದೇಕೊ ಕೃಷಿಯ ಬಗ್ಗೆ ಅನಾಧಾರ ತೋರುತ್ತಿರುವುದು ಮಾತ್ರ ವಿಪರ್ಯಾಸ. ರೈತ ದೇಶದ ಬೆನ್ನೆಲುಬು ಎಂಬ ಸರ್ಕಾರಗಳು ಅವರ ಬೆನ್ನಿಗೆ ನಿಲ್ಲುತ್ತಿರುವುದು ಮಾತ್ರ ವಿರಳವಾಗಿದೆ. ಸರ್ಕಾರ ಪ್ರತಿ ಮುಂಗಡ ಪತ್ರಗಳಲ್ಲೂ ಈ ಕ್ಷೇತ್ರಕ್ಕೆ ನಿಗಧಿ ಪಡಿಸುತ್ತಿರುವ ಹಣದ ಪ್ರಮಾಣ ಹೆಚ್ಚುತ್ತಿದೆ. ಆದರೆ ಅದು ಕುಸಿಯುತ್ತಿರುವ ಕೃಷಿಕ್ಷೇತ್ರಕ್ಕೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದಂತಾಗುತ್ತಿದೆ. ಕೇಂದ್ರ ಸರ್ಕಾರವು 2016-17ನೇ ಸಾಲಿನ ಮುಂಗಡ ಪತ್ರದಲ್ಲಿ ಈ ಕ್ಷೇತ್ರಕ್ಕೆ 13,74,203 ಕೋಟಿ ರೂಗಳನ್ನು ಕಾಯ್ದಿರಿಸಿತ್ತು. ಅದೇ ಕ್ಷೇತ್ರಕ್ಕೆ 2018-19ನೇ ಸಾಲಿನಲ್ಲಿ 17,25,738 ಕೋಟಿ ರೂಗಳನ್ನು ತೆಗೆದಿರಿಸಲಾಗಿದೆ. ಇಲ್ಲಿ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಹಣದ ಪ್ರಮಾಣ ಹೆಚ್ಚುತ್ತಿದ್ದರೂ ಕೃಷಿ ಕ್ಷೇತ್ರ ಕ್ಷೀಣಿಸುತ್ತಿದೆ. ಹಾಗಾದರೆ ಅಲ್ಲಿ ಆಗುತ್ತಿರುವುದಾದರೂ ಏನು? ಎಂಬ ಪ್ರಶ್ನೆ ಮೂಡುತ್ತದೆ.

ಸರ್ಕಾರ ಕೃಷಿ ಕ್ಷೇತ್ರದಲ್ಲಿನ ಮೂಲ ಸಮಸ್ಯೆಗಳನ್ನು ಅರಿಯುವಲ್ಲಿ ಸಫಲವಾಗಿಲ್ಲ. ಈ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಿದರೆ ಮಾತ್ರ ಅದರ ಉಳಿವು ಸಾಧ್ಯ. ಮೊದಲನೆಯದಾಗಿ ಕೃಷಿಯನ್ನು ಉದ್ಯಮವನ್ನಾಗಿ ಪರಿಗಣಿಸಬೇಕಾಗಿದೆ. ಅದರೊಂದಿಗೆ ಕೃಷಿಗೆ ಹಾಗೂ ಕೃಷಿಕನಿಗೆ ಅಗತ್ಯತೆಗಳನ್ನು ಗುರುತಿಸುವ ಮೂಲಕ ಈ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅನುಸರಿಸಿ ಸೌಲಭ್ಯಗಲನ್ನು ಒದಗಿಸಬೇಕಾಗಿದೆ. ಆ ಮೂಲಕ ಕೃಷಿಯನ್ನು ಉಳಿಸಬೇಕಾಗಿದೆ.

ಸ್ವಾತಂತ್ರ್ಯ ಬಂದ ಆರಂಭದಲ್ಲಿ ಶೇ 80 ರಷ್ಟಿದ್ದ ಕೃಷಿಕರ ಸಂಖ್ಯೆ ಈಗ ಶೇಕಡ 58 ರಷ್ಟು ಕೃಷಿಕರನ್ನು ಮಾತ್ರ ಹೊಂದಿದೆ. ವರ್ಷದಿಂದ ವರ್ಷಕ್ಕೆ ಕೃಷಿಕರ ಸಂಖ್ಯೆ ಕುಸಿಯುತ್ತಲೇ ಸಾಗಿದೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಆಹಾರ ಸ್ವಾವಲಂಬಿಯಾಗಿರುವ ಭಾರತ ಮತ್ತೊಮ್ಮೆ ಇತರ ದೇಶಗಳ ಮುಂದೆ ಕೈಚಾಚಬೇಕಾದೀತು. ಇಷ್ಟು ಪ್ರಮಾಣದ ಜನ ಕೃಷಿಯನ್ನು ಅವಲಂಬಿಸಿದ್ದರೂ ಈ ಕ್ಷೇತ್ರದಿಂದ ಬರುತ್ತಿರುವ ಆದಾಯ ಮಾತ್ರ ಶೇಕಡ 17.2ರಷ್ಟು. ಇದಕ್ಕೆ ಈ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳೆ ಕಾರಣ. ಈ ಕ್ಷೇತ್ರದಿಂದ ಬರುತ್ತಿರುವ ಆದಾಯ ಕಡಿಮೆಯಾಗಿರುವುದರಿಂದಲೇ ಈ ಕ್ಷೇತ್ರದ ಬಗ್ಗೆ ಉಪೇಕ್ಷೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಕೃಷಿ ಕ್ಷೇತ್ರ ಅವಸಾನದ ಕಡೆ ಸಾಗಿದಲ್ಲಿ ನಿತ್ಯಬಳಕೆಯ ಆಹಾರಕ್ಕಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗುತ್ತದೆ.

ಅಂಕಿ ಅಂಶಗಳ ಪ್ರಕಾರ ಶೇಕಡ 17.2ರಷ್ಟು ಮಾತ್ರ ದೇಶಾದಯ ಕೊಡುತ್ತಿದ್ದರು ದೇಶ ಸ್ವಾವಲಂಬನೆ ಇದರಿಂದ ಮಾತ್ರ ಸಾಧ್ಯ. ಕೃಷಿ ಕ್ಷೇತ್ರದ ಹಿನ್ನಡೆ ಇದೊಂದು ಅಪಾಯಕರ ಬೆಳವಣಿಗೆ. ಇಂತಹ ಸನ್ನಿವೇಶವೊಂದು ಎದುರಾದಲ್ಲಿ ಮತ್ತೊಮ್ಮೆ ಪರೋಕ್ಷವಾಗಿ ಪರಕೀಯರ ಆಡಳಿತಕ್ಕೆ ಸಿಲುಕಿದಂತೆಯೇ ಸರಿ. ಆಹಾರಕ್ಕಾಗಿ ಇತರೆ ದೇಶಗಳನ್ನು ಅವಲಂಬಿಸಿದರೆ, ಯುದ್ಧ, ಬರಗಾಲ, ಭೂಕಂಪ ಅತಿವೃಷ್ಟಿಗಳಂತಹ ಸನ್ನಿವೇಶಗಳಲ್ಲಿ ಆಹಾರಕ್ಕಾಗಿ ಕೈಚಾಚಬೇಕಾಗುತ್ತದೆ. ಇಂತಹ ಯಾವುದೇ ಕಾರಣದಿಂದ ವಿಶ್ವ ಸಂಸ್ಥೆಯು ಆರ್ಥಿಕ ದಿಗ್ಭಂಧನ ವಿಧಿಸಿದಲ್ಲಿ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ. ಜಗತ್ತಿನ ಯಾವುದೆ ರಾಷ್ಟ್ರವು ಇಷ್ಟೊಂದು ಅಗಾಧ ಪ್ರಮಾಣದ ಜನಸಂಖ್ಯೆಗೆ ಆಹಾರ ಒದಗಿಸುವುದು ಅಸಾಧ್ಯವಾದ ಮಾತು. ಆದ್ದರಿಂದಲೇ ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳಲ್ಲೊಂದಾದ ಆಹಾರದಲ್ಲಿ ದೇಶ ಸ್ವಾವಲಂಬಿಯಾಗಿರಬೇಕು. ಅಂತಹ ಸ್ವಾವಲಂಬಿ ದೇಶಗಳು ಮಾತ್ರ ಸ್ವತಂತ್ರವಾಗಿ ವರ್ತಿಸಬಲ್ಲವು. ಆಹಾರಕ್ಕಾಗಿ ಇತರೆ ದೇಶಗಳನ್ನು ಅವಲಂಬಿಸಿರುವ ದೇಶ ಎಂದಿಗೂ ಆ ದೇಶಗಳ ಅಣತಿಗೆ ತಲೆ ಭಾಗಲೇಬೇಕು. ಇದಕ್ಕೆ ತಾಜಾ ಉದಾಹರಣೆಯೆಂದರೆ ರಷ್ಯಾದೇಶ. ವೈಜ್ಞಾನಿಕವಾಗಿ ಎಷ್ಟೆ ಮುಂದುವರೆದಿದ್ದರೂ ತಾನೊಂದು ಪ್ರಬಲ ರಾಷ್ಟ್ರವೆಂದು ತೋರಿಸಿಕೊಳ್ಳಲು ಹೆಣಗಾಡುತ್ತಿದೆ. ಆದ್ದರಿಂದ ಕೈಗಾರಿಕೆಗಳಿಂದ ಆಗುವ ಅಭಿವೃದ್ಧಿಗಿಂತ ಕೃಷಿ ಅಭಿವೃದ್ಧಿ ದೇಶವನ್ನು ಸ್ವಾವಲಂಬಿಯಾನ್ನಾಗಿಸುವುದು ಎಂಬುದು ಸತ್ಯ.

ತೈಲ ರಾಷ್ಟ್ರವಾದ ಇರಾಕ್ ಶ್ರೀಮಂತಿಕೆಯಲ್ಲಿ ಕಡಿಮೆಯಿಲ್ಲ. ತೈಲ ಉತ್ಪನ್ನಗಳ ಉತ್ಪಾದನೆಯ ಮೂಂಚೂಣಿಯಲ್ಲಿರುವ ಈ ರಾಷ್ಟ್ರ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಭಂದನದಿಂದ ಅಕ್ಷರಶಹ ನಲುಗಿದೆ. ಆ ದೇಶ ಎಷ್ಟೆ ಶ್ರೀಮಂತಿಕೆ ಹೊಂದಿದ್ದರು ಆಹಾರ ಪದಾರ್ಥಗಳಿಗಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗಿರುವುದೆ ಕಾರಣ. ಅಂತಹ ಸನ್ನಿವೇಶ ನಮ್ಮ ದೇಶಕ್ಕೆ ಎದುರಾಗಬಾರದೆಂದರೆ ಭಾರತದ ಕೃಷಿ ಅಭಿವೃದ್ದಿ ಆಗಲೇಬೇಕಾಗಿದೆ.

ಹಾಗಾದರೆ ದೇಶದ ಕೃಷಿಕ್ಷೇತ್ರ ಬಲಪಡಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮೊದಲು ಅರಿಯಬೇಕಿದೆ. ದೇಶದ ಬಹುತೇಕ ಕೃಷಿ ಭೂಮಿ ಮಾನ್ಸೂನ್ ಮಾರುತಗಳೊಂದಿಗೆ ಬೆಸೆದುಕೊಂಡಿದೆ. ಮಳೆ ಬಂದರೆ ಬೆಳೆ ಇಲ್ಲವಾದರೆ ಬರ ಬಂದೆರಗುತ್ತದೆ. ಇಂತಹ ಸ್ಥಿತಿಯಲ್ಲಿರುವ ಕೃಷಿ ಸಹಜವಾಗಿಯೇ ಮಳೆಯ ಏರುಪೇರಿನಿಂದ ಸೊರಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ನದಿ ಜೋಡಣೆಯಂತಹ ದಿಟ್ಟ ಕ್ರಮದಿಂದ ಮಾತ್ರ ಪರಿಹಾರ ಸಾಧ್ಯ. ರೈತರಿಗೆ ನೀರಾವರಿಯ ಖಾತರಿ ನೀಡಿದಲ್ಲಿ ಈ ಕ್ಷೇತ್ರ ತನ್ನ ತಾನೆ ಮಹತ್ವ ಪಡೆಯುತ್ತದೆ. ಇಲ್ಲವಾದಲ್ಲಿ ಕೃಷಿಕರಿಗೆ ಮಳೆಗಾಲದಲ್ಲಿ ಮಾತ್ರ ಕೆಲಸವಿದ್ದು ಉಳಿದಂತೆ ನಿರುದ್ಯೋಗಿಯಾಗಿರುತ್ತಾನೆ. ಇಂತಹ ಅರೆ ಉದ್ಯೋಗವನ್ನು ತೊಲಗಿಸಲು ವರ್ಷ ಪೂರ್ತಿ ನೀರಿನ ಸೌಲಭ್ಯ ದೊರೆತಲ್ಲಿ ರೈತ ಪೂರ್ಣ ಉದ್ಯೋಗಿಯಾಗುತ್ತಾನೆ. ಆದ್ದರಿಂದ ನಿರುದ್ಯೋಗ ಕಡಿಮೆಯಾಗುತ್ತದೆ. ಅದರೊಂದಿಗೆ ದೇಶದ ಆದಾಯವು ಹೆಚ್ಚುತ್ತದೆ.ಇನ್ನು ರೈತರನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಅನಿರ್ಧಷ್ಟ ಬೆಲೆಗಳು ಕೃಷಿಕ ಮಳೆಯ ಅಭಾವ, ಬೆಳೆಗಳಿಗೆ ತಗಲುವ ರೋಗಗಳು, ಕೃಷಿಕಾರ್ಮಿಕರ ಕೊರತೆಗಳ ನಡುವೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಹೈರಾಣಾಗಿಸಿವೆ. ತನ್ನ ಸರ್ವಸ್ವವನ್ನು ಬಳಸಿ ಬೆಳೆದ ಫಸಲನ್ನು ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೆ ರಸ್ತೆಗೆ ಎಸೆಯುವ ಸ್ಥಿತಿ ಎದುರಾದರೆ ಆತನ ಶ್ರಮಕ್ಕೆ ಫಲವೇನು? ತನ್ನ ಸರ್ವಸ್ವವನ್ನು ಕಳೆದುಕೊಂಡು ಆತ ಕೃಷಿಯನ್ನೆ ತ್ಯಜಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಂದು ಕೃಷಿ ಉತ್ಪನ್ನಕ್ಕೂ ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು. ನಿಗಧಿ ಪಡಿಸಿದ ಬೆಲೆಗಿಂತ ಕಡಿಮೆಯಾದಾಗ ಅಂತಹ ಪದಾರ್ಥಗಳಿಗೆ ಸರ್ಕಾರವೇ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಇಂತಹ ಆದಾಯದ ಖಾತರಿ ರೈತರಿಗಿದ್ದರೆ ಇನ್ನು ಹೆಚ್ಚು ಕೃಷಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ಆಹಾರ ಉತ್ಪಾದನೆ ಹೆಚ್ಚಿ ದೇಶ ಸ್ವಾಲಂಬಿಯಾಗುತ್ತದೆ.

ಕೃಷಿ ಕ್ಷೇತ್ರವನ್ನು ಕಾಡುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಬೆಳೆಗಳಿಗೆ ಬರುವ ರೋಗಗಳು ಹಾಗೂ ಕಳಪೆ ಗುಣಮಟ್ಟದ ಬೀಜಗಳು. ಉತ್ತಮ ಗುಣಮಟ್ಟದ ಬೀಜ ಸರಬರಾಜು ಮಾಡಲು ಸರ್ಕಾರವೇ ಮುಂದಾಗಬೇಕು. ಈಗಾಗಲೆ ಈ ನಿಟ್ಟಿನಲ್ಲಿ ಕ್ರಮಗಳು ಕೈಗೊಂಡಿದ್ದರೂ ಕೆಲವೊಂದು ಲೊಪಗಳು ಇಣುಕುತ್ತಲೇಯಿವೆ. ಈ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಗಳು ಆದಲ್ಲಿ ಮಾತ್ರ ರೈತರಿಗೆ ಉತ್ತಮ ಫಸಲು ಬರಲು ಸಾಧ್ಯ. ಆದರಿಂದ ಆತ ಕೃಷಿ ಕಾಯದಲ್ಲಿ ಹೆಚ್ಚಿಗೆ ತೊಡಗಿಕೊಳ್ಳುತ್ತಾನೆ. ಇನ್ನು ಬೆಳೆಗಳಿಗೆ ತಗಲುವ ರೋಗಗಳಿಗೆ ಔಷಧೋಪಚಾರದ ಬಗ್ಗೆ ಸರ್ಕಾರ ಸೂಕ್ತ ಮಾಹಿತಿ ನೀಡಬೇಕಿದೆ. ರೋಗಗಳಿಂದ ಮುಕ್ತವಾದಾಗ ಹೆಚ್ಚಿನ ಫಸಲು ಬಂದು ಕೃಷಿ ಆಕರ್ಷಕ ಕ್ಷೇತ್ರವಾಗುತ್ತದೆ.ಕೃಷಿ ಕ್ಷೇತ್ರ ಎದುರಿಸುತ್ತಿರುವ ಮತ್ತೊಂದು ಸವಾಲೆಂದರೆ ಕಾರ್ಮಿಕರ ಕೊರತೆ. ನಮ್ಮಲ್ಲಿ ಯಂತ್ರೋಪಕರಣಗಳ ಬಳಕೆ ಕಡಿಮೆ. ಆದ್ದರಿಂದ ಎಲ್ಲ ಕೆಲಸಗಳಿಗೂ ಮಾನವ ಶಕ್ತಿಯನ್ನೆ ಬಳಸಬೇಕಿದೆ. ಇತ್ತೀಚೆಗೆ ಕೃಷಿಗೆ ಮಾನವ ಸಂಪನ್ಮೂಲ ಕೊರತೆಯಾಗಿದೆ. ಇಂತಹ ಸಮಸ್ಯೆ ಪರಿಹರಿಸಲು ಸರ್ಕಾರಗಳು ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬೆಲೆಯಲ್ಲಿ ರೈತರಿಗೆ ಸಿಗುವಂತಹ ಕಾರ್ಯ ಮಾಡಬೇಕಿದೆ. ಅದರೊಂದಿಗೆ ಭಾರತದ ಬಹುತೇಕ ರೈತರು ಸಣ್ಣ ಕೃಷಿಕರಿಗೆ ಅನುಕೂಲವಾಗುವಂತಾಗಿಸಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಈ ಕ್ಷೇತ್ರಕ್ಕೆ ಕಾಯಕಲ್ಪ ನೀಡಬೇಕಿದೆ.ಕೃಷಿ ಕ್ಷೇತ್ರದಲ್ಲಿ ದೇಶ ಸ್ವಾಲಂಬಿಯಾಗಬೇಕಾದಲ್ಲಿ ಮೊದಲು ಆ ಕ್ಷೇತ್ರದ ಸಮಸ್ಯೆಗಳಾದ ನೀರಾವರಿ, ವೈಜ್ಞಾನಿಕ ಬೆಲೆ ಪದ್ಧತಿ, ಉತ್ತಮ ಗುಣಮಟ್ಟದ ಬೀಜ, ಔಷಧಗಳ ಸರಬರಾಜು, ಹಾಗು ಕೃಷಿ ಯಂತ್ರೋಪಕರಣಗಳನ್ನು ಒದಗಿಸಿದಲ್ಲಿ ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಿ ದೇಶದ ಆಹಾರ ಸ್ವಾವಲಂಬನೆ ಸಾಧ್ಯ. ಜೀವಿಗಳ ಪ್ರಾಥಮಿಕ ಅಗತ್ಯಗಳಲ್ಲೊಂದಾದ ಆಹಾರ ಸ್ವಾವಲಂಬನೆಯಾದಲ್ಲಿ ಮಾತ್ರ ದೇಶ ಬಲಿಷ್ಠವಾಗಿ ರೂಪುಗೊಳ್ಳುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನೀಟ್ಟಿನಲ್ಲಿ ಸಾಗುವ ಮೂಲಕ ಸದೃಢ ಹಾಗೂ ಸ್ವಾವಲಂಬಿ ಭಾರತ ನಿರ್ಮಿಸಬೇಕಿದೆ.
Share This :
  •  
  •  

Readers Comments (0) 

COMMENT

Characters Remaining : 1000