ಬೆಳ್ಳಿ ಕೂದಲು

July 30, 2018 ⊄   By: SEEMA HEGDE

ನೀಳವಾದ ದಪ್ಪ ಕಡು ಕಪ್ಪು ಕೇಶರಾಶಿ ಹೊಂದುವುದು ಎಲ್ಲಾ ಹೆಣ್ಮಕ್ಕಳ ಗುರಿ. ಆ ಗುರಿಗೆ ಅಡ್ಡ ಕಾಲು ಹಾಕುವ ಬಿಳಿ ಕೂದಲು ಕಂಡಿದ್ದೇ ಆಕಾಶ ಭೂಮಿ ಒಂದು ಮಾಡೋ ಆಕ್ರಂದನ ಅವರದು. ಈ ಹೆಣ್ಮಕ್ಳು ಏನನ್ನಾದರೂ ಸಹಿಸಿಯಾರು, ‘ಪಿಂಪಲ್’ ಮತ್ತು ‘ಗ್ರೇ ಹೇರ್’ ಅನ್ನು ಬಿಟ್ಟು.

ಲೇಡೀಸ್ ಅಂಡ್ ಜೆಂಟ್ಲ್ ಮೆನ್, ಕೊಂಚ ಸಮಾಧಾನ. ನೀವೇನೇ ಉಪಚಾರ ಮಾಡಿದರೂ ಕೂದಲು ಬೆಳ್ಳಗಾಗುವುದನ್ನು ಬ್ರಹ್ಮನಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕೂದಲು ಬೆಳ್ಳಗಾಗುವಿಕೆಗೆ ವಯಸ್ಸು, ಸಮಯದ ಹಂಗಿಲ್ಲ. ಕೆಲವರಿಗೆ ಹರೆಯದಲ್ಲಿ ಬಿಳಿಯಾದರೆ ಕೆಲವರಿಗೆ ಮುದಿಯಾದರೂ ಕೂದಲು ಕಪ್ಪೇ! ಕಾರಣ ವಂಶವಾಹಿಗಳು. ಕೂದಲು ವರ್ಣಹೀನವಾಗುವುದನ್ನು ನಿಯಂತ್ರಿಸುವ ಈ ವಂಶವಾಹಿಗಳು ಅಥವಾ ಜೀನ್ಸ್ ನಮ್ಮ ಅಜ್ಜಿ ತಾತರ ಕೊಡುಗೆ. ಹಾಗಾಗಿ ನಿಮ್ಮ ಅಜ್ಜ ಅಜ್ಜಿಯರಿಗೆ ಮೊದಲ ಬಾರಿ ಬಿಳಿ ಕೂದಲು ಕಂಡ ವಯಸ್ಸಿನಲ್ಲಿಯೇ ನಿಮಗೂ ಕಾಣಬಹುದು. ಹಾಗಂತ ಅವರನ್ನು ದೂಷಿಸಿ ಪ್ರಯೋಜನವಿಲ್ಲ, ಯಾಕೆಂದರೆ ಅದು ಅವರ ಅಜ್ಜಿ ಅಜ್ಜಂದಿರ ಬಳುವಳಿ.
ಕೂದಲು ನಿರ್ಜೀವ ವಸ್ತು. “ಕೆರಾಟಿನ್”(keratin) ಎಂಬ ಪ್ರೊಟೀನ್ ನಿಂದ ಮಾಡಲ್ಪಟ್ಟ ಹಲವು ಎಳೆಗಳ(strand) ಸಂಕೀರ್ಣ ನಾರು(fibre) ಕೂದಲು.ನಿಮ್ಮ ಉಗುರು ಕೂಡ ಇದೇ ಬಣ್ಣ ರಹಿತ ಕೆರಾಟಿನ್ ನಿಂದ ಆಗಿವೆ. ನೆತ್ತಿಯ ಮೇಲ್ಭಾಗದಲ್ಲಿ ಕಂಡು ಬರುವ ಕೂದಲ ಬುಡ ನೆತ್ತಿಯ ಒಳಗಿನಿಂದ ಜನಿಸುತ್ತದೆ. ಕೂದಲ ಬುಡದಲ್ಲಿನ ಆ ಕುಳಿಯನ್ನು “ಫಾಲಿಕಲ್” (follicle) ಎಂದು ಕರೆಯಲಾಗುತ್ತದೆ. ಈ ಫಾಲಿಕಲ್ ಹಳೆ ಕೂದಲನ್ನು ಪೋಷಿಸುವ ಬೇರೂ ಹೌದು, ಹೊಸ ಕೂದಲನ್ನು ಹುಟ್ಟಿಸುವ ಫ್ಯಾಕ್ಟರಿಯೂ ಹೌದು. ಈ ಫಾಲಿಕಲ್ ನಲ್ಲಿ ಬಣ್ಣ ಉತ್ಪಾದಿಸುವ ‘ಮೆಲನೋಸೈಟ್’ ಎಂಬ ಕೋಶಗಳಿವೆ. ಅವು “ಮೆಲನಿನ್” ಎಂಬ ವರ್ಣ ವನ್ನು ಉತ್ಪಾದಿಸುತ್ತವೆ. ಕೆರಾಟಿನ್ ಒಂದಿಗೆ ಸೇರುವ ಮೆಲನಿನ್ ಬಣ್ಣ ಬಣ್ಣದ ಕೂದಲಿಗೆ ಕಾರಣವಾಗುತ್ತದೆ. ಇದೇ ಮೆಲನಿನ್ ಕಣ್ಣಿನ ಬಣ್ಣ ಮತ್ತು ಮೈ ಬಣ್ಣವನ್ನೂ ನಿರ್ಧರಿಸುತ್ತದೆ.ಮೆಲನಿನ್ ನಲ್ಲಿ ಎರಡು ವಿಧ. ಯು-ಮೆಲನಿನ್ ಕಪ್ಪು ಕಂದು ಬಣ್ಣಗಳನ್ನು ಹೆಚ್ಚಿಸಿದರೆ ಫೆಯೋ-ಮೆಲನಿನ್ ಕೆಂಚು ಮತ್ತು ಹೊಂಬಣ್ಣವನ್ನು ಬಲಗೊಳಿಸುತ್ತವೆ. ಈ ಎರಡು ಮೆಲನಿನ್ ಗಳ ಅನುಪಾತದ ಪ್ರಮಾಣ ಕಪ್ಪು, ಕಂದು(ಸಾಮಾನ್ಯವಾಗಿ ಏಶಿಯನ್ನರು), ಕೆಂಚು, ಹಳದಿ, (ಯುರೋಪೀಯನ್ನರು) ಕೂದಲ ಬಣ್ಣವನ್ನು ತೀರ್ಮಾನಿಸುತ್ತವೆ.

ವಯಸ್ಸಾದಂತೆ ಬಣ್ಣ ಉತ್ಪಾದಿಸುವ ಮೆಲನೋಸೈಟ್ ಗಳು ಸಾಯುತ್ತವೆ. ಅವುಗಳ ಸಂಖ್ಯೆ ಕ್ಷೀಣವಾದಂತೆ ಕೂದಲು ವರ್ಣ ರಹಿತ ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತವೆ.
ಈಗಲಂತೂ ಬಿಡಿ. ಬಿಳಿ ಕೂದಲನ್ನು ಕಪ್ಪಾಗಿಸುವ ಹೇರ್ ಡೈ ಗಳು ಲಭ್ಯವಿವೆ.ನೆತ್ತಿಯ ಮೇಲೆ ಕಾಣುವ ಕೂದಲು ಮೆತ್ತನೆಯ ಫೈಬರ್ ಗಳಿಂದ (ಇದನ್ನು cortex ಎನ್ನುತ್ತಾರೆ) ಮಾರ್ಪಾಡಾಗಿದ್ದು, ನಿರ್ಜೀವ ಸಿಪ್ಪೆಯಿಂದ (cuticle) ಸುತ್ತುವರೆದಿದೆ. ಇದೆ ಕಾರ್ಟೆಕ್ಸ್ ನಲ್ಲಿ ಕೆರಾಟಿನ್ ನ ವಾಸ. ತಾತ್ಕಾಲಿಕ ಹೇರ್ ಡೈ ಗಳು ಪೇ0ಟ್ ಮಾಡಿದಂತೆ ಕ್ಯೂಟಿಕಲ್ ಪದರದಲ್ಲಿ ಅಂಟಿಕೊಂಡು ಕೂದಲನ್ನು ರಂಗಾಗಿಸಿದರೆ ಶಾಶ್ವತ ಡೈ ಗಳು ಕ್ಯೂಟಿಕಲ್ ಬೇಧಿಸಿ ಒಳಗಿನ ಕೆರಾಟಿನ್ ಜೊತೆಗೂಡಿ ಖಾಯಂ ಆಗಿ ಕೂದಲ ಬಣ್ಣವನ್ನು ಬದಲಿಸುತ್ತವೆ. ಎಲ್ಲರ ನೆಚ್ಚಿನ ಸಸ್ಯ ಜನ್ಯ “ಮದರಂಗಿ”ಯಲ್ಲಿ ‘ಲಾವಸೊನ್’ (lawsone) ಎನ್ನುವ ಸಕ್ರಿಯ ಪದಾರ್ಥವಿದ್ದು ಅದು ಕೆರಾಟಿನ್ ಒಡಗೂಡಿ ಕೂದಲನ್ನು ಕೆಂಪಾಗಿಸುತ್ತದೆ.

ಪಾಶ್ಚಿಮಾತ್ಯರ ಪ್ರಕಾರ “grey hair is wisdom”. ಬಿಳಿ ಕೂದಲು ಏರು ವಯಸ್ಸಿನ ಜ್ಞಾನದ ಸಂಕೇತವಂತೆ. ಆದ್ದರಿಂದ ಬಿಳಿ ಕೂದಲನ್ನು ಘನತೆಯಿಂದ ಧರಿಸಿ. ಹಾಗಂತ 20ರ ಎಳವೆಯಲ್ಲೆ ಬೆಳ್ಳಗಾದರೆ ಏನು ಕಥೆ! ವಿಜ್ಞಾನಿಗಳು ಒತ್ತಡ ಹೇರುವ ಆಧುನಿಕ ಜೀವನಶೈಲಿ ಕೂದಲ ಆರೋಗ್ಯದ ಮೇಲೆ ಬೀಳುವ ಪರಿಣಾಮವನ್ನೂ ಇತ್ತೀಚಿಗೆ ಅಭ್ಯಸಿಸುತ್ತಿದ್ದಾರೆ. ಅವರ ಉತ್ತರ ಏನೇ ಇರಲಿ, ಒತ್ತಡವನ್ನು ಬದಿಗಿರಸಿ ಪೌಷ್ಟಿಕ ಆಹಾರ ಸೇವನೆಯಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳಿತು.
(ಮಾಹಿತಿ ಸೆಲೆ-ಸೈಂಟಿಫಿಕ್ ಅಮೇರಿಕನ್ ನಿಯತಕಾಲಿಕೆ)Share This :
  •  
  •  

Readers Comments (0) 

COMMENT

Characters Remaining : 1000