ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-1

May 11, 2018 ⊄   By: ಆನಂದ ಜೋಶಿ

ಕಾಮನ್ ಇಂಪೀರಿಯಲ್ (Common Imperial)
ವೈಜ್ಞಾನಿಕ ಹೆಸರು - ಚೆರಿತ್ರ ಫ್ರೆಜ

ಇದು ಬ್ಲೂಸ್ ಜಾತಿಯ ಚಿಟ್ಟೆ. ಇವುಗಳು ಬಲು ಸುಂದರವಾದ ಸಾಮಾನ್ಯ ಗಾತ್ರದ ಚಿಟ್ಟೆಗಳು. ಈ ಚಿಟ್ಟೆಗಳು ಭಾರತ, ಶ್ರೀಲಂಕಾ, ಮಲೇಷಿಯಾ ಹಾಗು ಮಯನ್ಮಾರ್ ದೇಶಗಳಲ್ಲಿ ಕಂಡುಬರುತ್ತವೆ. ಈ ಚಿಟ್ಟೆಗಳನ್ನು ನಗರ ಪ್ರದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ಇವುಗಳನ್ನು ನೋಡಬೇಕೆಂದರೆ ಮಲೆನಾಡಿನ ಕಾಡುಗಳಿಗೇ ಹೋಗಬೇಕು. ಈ ಚಿಟ್ಟೆಗಳು ಬಹಳ ವೇಗವಾಗಿ ಹಾರುತ್ತವೆ. ಇವುಗಳ ರೆಕ್ಕೆಯ ಅಗಲ ಸುಮಾರು ೨೮-೪೨ಮಿಲಿ ಮೀಟರ್ ನಷ್ಟಿರುತ್ತದೆ. ಇವುಗಳ ರೆಕ್ಕೆಯ ಕೆಳಭಾಗವು ಬಿಳಿ ಬಣ್ಣದಿಂದ ಕೂಡಿರುತ್ತದೆ ಹಾಗು ರೆಕ್ಕೆಯ ಮೇಲ್ಭಾಗವು ನೀಲೀ ಮಿಶ್ರಿತ ಕಂದು ಬಣ್ಣವನ್ನು ಹೊಂದಿರುತ್ತದೆ. ಕೆಳಭಾಗದ ರೆಕ್ಕೆಯ ಹಿಂಬದಿಯಲ್ಲಿ ಕಪ್ಪು ಪಟ್ಟೆಗಳಿದ್ದು, ಹಿಂಬದಿಯ ಅಂಚಿನಲ್ಲಿ ಕಣ್ಣುಗಳಂತೆ ಕಾಣುವ ೨ ಕಪ್ಪು ಚುಕ್ಕೆಗಳು ಮತ್ತು ಅವುಗಳ ಮಧ್ಯದಲ್ಲಿ ಒಂದು ಸಣ್ಣ ಗಾತ್ರದ ಕಪ್ಪು ಚುಕ್ಕೆಯನ್ನು ನಾವು ಕಾಣಬಹುದು. ಈ ಚಿಟ್ಟೆಗಳಿಗೆ ಅವುಗಳ ದೇಹದಷ್ಟೆ ಉದ್ದವಾದ ೨ ಬಾಲಗಳಿರುತ್ತವೆ. ದಾಂಡೇಲಿ ಅರಣ್ಯ ಪ್ರದೇಶದಲ್ಲಿರುವ ಸಾತೊಡ್ಡಿ ಜಲಪಾತದ ಬಳಿ ಈ ಚಿಟ್ಟೆಯನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ.
ವಿಶೇಷ ಮಾಹಿತಿ: ಇವುಗಳ ಕೆಳಭಾಗದ ರೆಕ್ಕೆಯಲ್ಲಿರುವ ೨ ಕಪ್ಪು ಚುಕ್ಕೆಗಳು ಇವುಗಳ ಕಣ್ಣಿನಂತೆ ಹಾಗು ಬಾಲಗಳು ಮೀಸೆಯಂತೆ ಕಾಣುತ್ತವೆ. ಈ ಚಿಟ್ಟೆಗಳನ್ನು ತಿನ್ನಲು ಬರುವ ಪ್ರಾಣಿಗಳಿಗೆ ಗೊಂದಲ ಉಂಟಾಗಿ, ತಲೆಯ ಬದಲಾಗಿ ಇವುಗಳ ಬಾಲವನ್ನು ಕಚ್ಚುತ್ತವೆ. ತಕ್ಷಣ ಈ ಚಿಟ್ಟೆಗಳು ಅಂಥಹ ಪ್ರಾಣಿಗಳಿಂದ ಸುಲಭವಾಗಿ ತಪ್ಪಿಸಿಕೊಂಡು ಹಾರಿ ಹೋಗುತ್ತವೆ. ಇದು ಪ್ರಕೃತಿಯೇ ಇವುಗಳಿಗೆ ಕೊಟ್ಟಿರುವ ವರ.ಕಾಮನ್ ಕ್ರೋ (Common crow)
ವೈಜ್ಞಾನಿಕ ಹೆಸರು - ಯುಪ್ಲೊಯ ಕೊರ್
ಇವುಗಳು ದಕ್ಷಿಣ ಆಫ್ರಿಕಾ ಖಂಡದಲ್ಲಿ ಮತ್ತು ಏಶಿಯಾ ಖಂಡದಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ.ಇವುಗಳು ನಿಂಫಲಿಡೆ ಜಾತಿಗೆ ಸೇರಿವೆ.ಈ ಚಿಟ್ಟೆಗಳ ರೆಕ್ಕೆಯೆ ಬಣ್ಣ ಕಪ್ಪಾಗಿದ್ದು,ಅಂಚಿನಲ್ಲಿ ಬಿಳಿ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ.ಇವುಗಳ ಮೀಸೆ ,ತಲೆ,ಎದೆ ಮತ್ತು ಹೊಟ್ಟೆಯ ಭಾಗಗಳು ಕಂದು ಬಣ್ಣದಿಂದ ಕೂಡಿರುತ್ತವೆ.ಈ ಚಿಟ್ಟೆಗಳನ್ನು ಶ್ರೀಲಂಕಾ,ಭಾರತ,ಮಯನ್ಮಾರ್ ಹಾಗು ಆಸ್ಟ್ರೇಲಿಯಾ ದೇಶಗಳಲ್ಲೂ ನೋಡಬಹುದು.ಇವುಗಳು ತಮ್ಮ ಮೊಟ್ಟೆಗಳನ್ನು ಗಿಡದ ಎಲೆಗಳ ಬದಿಯಲ್ಲಿಡುತ್ತವೆ.ಈ ಮೊಟ್ಟೆಗಳು ಕೊಳವೆ ಆಕಾರವಾಗಿದ್ದು,ಬಿಳಿ ಬಣ್ಣದಿಂದ ಕೂಡಿರುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಮರಿಹುಳುಗಳು ಕೊಳವೆಯಾಕಾರವಾಗಿದ್ದು ,ಇವುಗಳ ಮೈ ಮೇಲೆ ಕಪ್ಪು,ಬಿಳಿ ಮತ್ತು ಕಂದು ಬಣ್ಣಗಳ ಪಟ್ಟೆಗಳಿರುತ್ತವೆ.ಮರಿಹುಳುಗಳ ದೇಹದ ಮೇಲ್ಭಾಗದಲ್ಲಿ ೪ ಜೋಡಿ ಮುಳ್ಳಿನಂತಹ ಅಂಗವಿರುವುದನ್ನು ನಾವು ಗಮನಿಸಬಹುದು. ಮಂಗಳೂರಿನಲ್ಲಿರುವ ಪಿಳಿಕುಳದ ಹತ್ತಿರ ಈ ಚಿಟ್ಟೆಯ ಚಿತ್ರವನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ.

ವಿಶೇಷ ಮಾಹಿತಿ: ಈ ಚಿಟ್ಟೆಯನ್ನು ತಿನ್ನಲೆಂದು ಪ್ರಾಣಿಗಳು ಇದನ್ನು ಬಾಯಲ್ಲಿ ಹಿಡಿದ ಕೂಡಲೆ, ಈ ಚಿಟ್ಟೆಯು ಸತ್ತಂತೆ ನಟಿಸಿ ತಮ್ಮ ದೇಹದಿಂದ ದ್ರವವನ್ನು ಬಿಡುತ್ತದೆ.ಇದರಿಂದ ಆ ಪ್ರಾಣಿಗಳಿಗೆ ವಾಂತಿ ಬರುವಂತಾಗಿ ಈ ಚಿಟ್ಟೆಯನ್ನು ಬಿಟ್ಟುಬಿಡುತ್ತವೆ. ಹೀಗೆ ಈ ಚಿಟ್ಟೆಗಳು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳುತ್ತವೆ.ಟಾವ್ನಿ ಕೊಸ್ಟರ್ (Twany coaster)
ವೈಜ್ಞಾನಿಕ ಹೆಸರು - ಅಕ್ರಾಯಿ ಟರ್ಪ್ಸಿಕೊರೆ

ಈ ಚಿಟ್ಟೆಯು ನಿಂಫಲಿಡೆ ಜಾತಿಗೆ ಸೇರಿದೆ. ಇವುಗಳು ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ಮತ್ತು ಸಣ್ಣ ಸಣ್ಣ ಗಿಡಗಳಿರುವ ಜಾಗಗಳಾಲ್ಲಿ ಕಾಣಸಿಗುತ್ತವೆ. ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಇವು ಕಂಡುಬರುತ್ತವೆ. ಇದರ ಮೀಸೆ ಮತ್ತು ಎದೆ ಕಪ್ಪು ಬಣ್ಣವನ್ನು ಹೊಂದಿದೆ. ಇದರ ಎದೆಯ ಮೇಲೆ ಬಿಳಿ ಚುಕ್ಕೆಗಳಿರುತ್ತವೆ. ಕೇಸರಿ ಬಣ್ಣದಿಂದ ಕೂಡಿರುವ ಇದರ ಹೊಟ್ಟೆಯ ಮೇಲೆ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಇದರ ರೆಕ್ಕೆಯ ಉದ್ದಳತೆ ೫೩-೬೪ ಮಿಲಿ ಮೀಟರ್. ಇದರ ರೆಕ್ಕೆಯು ಕೇಸರಿ ಬಣ್ಣ ಹೊಂದಿದ್ದು ಅಲ್ಲಲ್ಲಿ ಸಣ್ಣ ಕಪ್ಪು ಚುಕ್ಕೆಗಳಿರುತ್ತವೆ. ಈ ಚಿಟ್ಟೆಗಳನ್ನು ನಾವು ಸಾಮಾನ್ಯವಾಗಿ ಮಳೆಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ವೈರಿಗಳು ಈ ಚಿಟ್ಟೆಯನ್ನು ಹಿಡಿದ ಕೂಡಲೆ ಈ ಚಿಟ್ಟೆಯು ತನ್ನ ದೇಹದಿಂದ ಹಳದಿ ಬಣ್ಣದ ಎಣ್ಣೆಯಂಥಹ ದ್ರವವನ್ನು ಹೊರಸೂಸುತ್ತದೆ. ಈ ದ್ರವದ ವಾಸನೆಯಿಂದ ಆ ವೈರಿಗಳು ಇದನ್ನು ಬಿಟ್ಟು ಹೋಗುತ್ತವೆ. ಈ ಚಿತ್ರವನ್ನು ಸೆರೆ ಹಿಡಿದದ್ದು ಕನಕಪುರ ರಸ್ತೆಯ ಬಳಿ ಇರುವ ಪಿರಮಿಡ್ ವ್ಯಾಲಿಯಲ್ಲಿ.
ವಿಶೇಷ ಮಾಹಿತಿ: ಚಿಟ್ಟೆಗಳು ತಮ್ಮ ಪಾದದ ಸಹಾಯದಿಂದ ಆಹಾರದ ರುಚಿಯನ್ನು ಸವಿಯುತ್ತವೆ.ಬ್ಯಾಂಡೆಡ್ ಬ್ಲೂ ಪಿರ್ರೆಟ್ (Banded Blue Pierrot)
ವೈಜ್ಞಾನಿಕ ಹೆಸರು - ಡಿಸ್ಕೊಲಂಪ ಎಥಿಆನ್

ಬ್ಯಾಂಡೆಡ್ ಬ್ಲೂ ಪಿರ್ರೆಟ್ ಒಂದು ಪುಟ್ಟದಾದ ಚಿಟ್ಟೆ. ಈ ಚಿಟ್ಟೆಯ ರೆಕ್ಕೆಯ ಅಗಲ ೨೦-೨೫ ಮಿಲಿ ಮೀಟರ್. ಇದು ಬ್ಲೂಸ್ ಜಾತಿಗೆ ಸೇರಿದ ಚಿಟ್ಟೆ. ಈ ಬ್ಯಾಂಡೆಡ್ ಬ್ಲೂ ಪಿರ್ರೆಟ್ ನ ಕೆಳಭಾಗದ ರೆಕ್ಕೆಯು ಬಣ್ಣ ಬಿಳಿ ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಕಪ್ಪು ಬಣ್ಣ ಹೊಂದಿರುತ್ತದೆ. ಇದರ ಮೀಸೆ ಕಪ್ಪಾಗಿರುತ್ತದೆ. ಇದರ ಎದೆ ಮತ್ತು ಹೊಟ್ಟೆಯ ಮೇಲ್ಭಾಗಗಳು ಕಪ್ಪು ಬಣ್ಣ ಮತ್ತು ಕೆಳಭಾಗವು ಬಿಳಿ ಬಣ್ಣವನ್ನು ಹೊಂದಿದೆ. ಈ ಬ್ಯಾಂಡೆಡ್ ಬ್ಲೂ ಪಿರ್ರೆಟ್ ಚಿಟ್ಟೆಗೆ ಬಹಳ ಚಿಕ್ಕದಾದ ಕಪ್ಪು ಬಾಲವೂ ಇರುತ್ತದೆ. ಈ ಚಂದದ ಪುಟ್ಟ ಚಿಟ್ಟೆಯನ್ನು ಭಾರತ, ಶ್ರೀಲಂಕಾ, ಮಯನ್ಮಾರ್, ಮಲೇಶಿಯಾ, ಸಿಂಗಾಪೊರ್, ಇಂಡೊನೇಷಿಯಾ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ನೋಡಬಹುದು. ಇವುಗಳು ಸಾಮಾನ್ಯವಾಗಿ ಮಲೆನಾಡಿನಲ್ಲಿ ವಾಸಿಸುತ್ತವೆ. ಇವು ನೆಲಕ್ಕೆ ಹತ್ತಿರವಾಗಿ ಹಾರುತ್ತವೆ. ಕಾಡಗಳಲ್ಲಿ, ನದಿ, ಕೆರೆಗಳ ದಂಡೆಯ ಬಳಿ ಇವುಗಳನ್ನು ನಾವು ಬಹಳಷ್ಟು ಸಂಖ್ಯೆಯಲ್ಲಿ ನೋಡಬಹುದು. ಈ ಚಿಟ್ಟೆಯ ಮರಿ ಹುಳುಗಳು ಹಸಿರು ಬಣ್ಣ ಹೊಂದಿದ್ದು ಅದರ ಮೈ ಮೇಲೆ ಬಿಳಿ ಬಣ್ಣದ ಕೂದಲಿರುತ್ತವೆ. ಈ ಮರಿಹುಳು ಖರಜೂರ ಗಿಡದ ಎಳೆಯ ಕಾಂಡವನ್ನು ತಿಂದು ಗಿಡಕ್ಕೆ ತೊಂದರೆ ಕೊಡುತ್ತದೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಶಿವಮೊಗ್ಗದಲ್ಲಿರುವ ಸಕ್ರೆಬಯಲು ಆನೆ ಕ್ಯಾಂಪನ ಬಳಿಯಲ್ಲಿ.
ವಿಶೇಷ ಮಹಿತಿ: ಈ ಬ್ಲೂಸ್ ಜಾತಿಗೆ ಸೇರಿದ ಕೆಲವು ಮರಿಹುಳುಗಳು ವೈರಿಗಳಿಂದ ರಕ್ಷಣೆ ಪಡೆಯಲು ಇರುವೆಗಳ ಜೊತೆ ವಾಸ ಮಾಡುತ್ತವೆ.ಈ ಮರಿಹುಳುಗಳ ಹಿಂದಿನ ಒಂದು ಅಂಗದಿಂದ ಸಿಹಿಯಾದ ನೀರಿನ ಹನಿಗಳನ್ನು ಬಿಡುತ್ತವೆ. ಈ ಸಿಹಿಯಾದ ಹನಿಗಳನ್ನು ಇರುವೆ ತಿನ್ನುತ್ತದೆ.ಇರುವೆಗಳು ಈ ಮರಿಹುಳುಗಳನ್ನು ಅದರ ಶತ್ರುಗಳಿಂದ ಕಾಪಾಡುತ್ತವೆ. ಹೀಗೆ ಇರುವೆ ಮತ್ತು ಮರಿಹುಳು ಒಂದಕ್ಕೊಂದು ಸಹಾಯ ಮಾಡಿಕೊಂಡಿರುತ್ತವೆ.ಕಾಮನ್ ಸೈಲರ್ (Common sailor)
ವೈಜ್ಞಾನಿಕ ಹೆಸರು - ನೆಪ್ಟಿಸ್ ಹೈಲಸ್

ಇದು ನೈಂಫಲಿಡ್ ಜಾತಿಗೆ ಸೇರುವ ಚಿಟ್ಟೆ. ಈ ಕಾಮನ್ ಸೈಲರ್ ಚಿಟ್ಟೆಯನ್ನು ನಾವು ದಕ್ಷಿಣ ಏಷಿಯಾದ ಎಲ್ಲಾ ದೇಶಗಳ್ಲಲ್ಲಿ ಕಾಣಬಹುದು. ಭಾರತ, ಶ್ರಿಲಂಕ ಮತ್ತು ಮಯನ್ಮಾರ್ ದೇಶಗಳಲ್ಲಿ ಕಾಮನ್ ಸೈಲರ್ ಚಿಟ್ಟೆಗಳು ಸಾಮಾನ್ಯ ಕಂಡುಬರುತ್ತವೆ.ಇದರ ರೆಕ್ಕೆಯ ಮೇಲ್ಭಾಗ ಕಪ್ಪು ಬಣ್ಣವಾಗಿದ್ದು ಅಲ್ಲಲ್ಲಿ ಬಿಳಿ ಬಣ್ಣ ಹೊಂದಿರುತ್ತದೆ. ಇದರ ರೆಕ್ಕೆಯ ಕೆಳಭಾಗ ಚಿನ್ನದ ಬಣ್ಣ ಹೊಂದಿದ್ದು, ಮೇಲ್ಭಾಗದ ರೆಕ್ಕೆಯಂತೆಯೆ ಅಲ್ಲಲ್ಲಿ ಬಿಳಿ ಬಣ್ಣವಿರುತ್ತದೆ.ಈ ಚಿಟ್ಟೆಯ ರೆಕ್ಕೆಯ ಅಳತೆ ಸುಮಾರು ೫೦-೬೦ mm. ಇದರ ಮೀಸೆ, ತಲೆ,ಎದೆ ಮತ್ತು ಹೊಟ್ಟೆ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆ ಮತ್ತು ಎದೆಯ ಕೆಳ ಭಾಗ ಮಬ್ಬಾದ ಬಿಳಿ ಬಣ್ಣವನ್ನು ಹೊಂದಿದೆ. ಈ ಕಾಮನ್ ಸೈಲರ್ ಚಿಟ್ಟೆಗಳನ್ನು ನಾವು ಸಾಮಾನ್ಯವಾಗಿ ಹೂಗಳ ಮೇಲೆ ಮತ್ತು ಒದ್ದೆ ಇರುವ ನೆಲದ ಮೇಲೆ ಕಾಣಬಹುದು. ಈ ಫೋಟೊ ಕ್ಲಿಕ್ಕಿಸುವಾಗ ಈ ಚಿಟ್ಟೆಯು ಒದ್ದೆ ನೆಲದ ಮೇಲೆ ಕುಳಿತಿತ್ತು. ಈ ಫೋಟೊ ಕ್ಲಿಕ್ಕಿಸಿದ್ದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ನೈಸ್ ಜಂಕ್ಷನ್ ಹತ್ತಿರ.
ಈ ಚಿಟ್ಟೆಯ ವೈಚಿತ್ರ್ಯವೆನೆಂದರೆ ಇದರ ರೆಕ್ಕೆಯ ಬಡಿತ ಬಹಳ ಕಡಿಮೆ ಇದ್ದು, ಹಾರಾಡುವಾಗ ಇದರ ರೆಕ್ಕಯು ಸಮತವವಾಗಿರುತ್ತದೆ.

ವಿಶೇಷ ಮಾಹಿತಿ: ನೈಂಫಲಿಡ್ ಜಾತಿಗೆ ಸೇರುವ ಗಂಡು ಚಿಟ್ಟೆಗಳು ಜಗಳಗಂಟರಾಗಿದ್ದು, ತಮ್ಮ ತಮ್ಮ ಪ್ರಾಂತ್ಯಗಳನ್ನು ಕಾಪಾಡಿಕೊಳ್ಳಲು ಹೊಡೆದಾಡುತ್ತವೆ.

Share This :
  •  
  •  

Readers Comments (0) 

COMMENT

Characters Remaining : 1000