ಆರ್ಕಿಡ್ (ಸೀತಾಳೆ) ಸಸ್ಯಗಳ ವೈಜ್ಞಾನಿಕ ಕಿರುಪರಿಚಯ

March 29, 2019 ⊄   By: - ಡಾ.ವಿನಾಯಕ ಉಪಾಧ್ಯ/ ಡಾ.ಸಂದೀಪ ಆರ್ ಪೈ.

ಇಂಟ್ರೋ: ವಿವಿಧ ಆರ್ಕಿಡ್ ಗಳನ್ನು ಹಳ್ಳಿ ವೈದ್ಯ ಪದ್ಧತಿಯಲ್ಲಿ ಮಾತ್ರವಲ್ಲದೆ ಆರ್ಯುವೇದ, ಸಿದ್ಧೌಷದ, ಯುನಾನಿ ಪದ್ಧತಿಗಳಲ್ಲಿ ಕೂಡ ಅನೇಕ ರೋಗಗಳ ನಿವಾರಣೆಗಾಗಿ ಬಳಸುತ್ತಾರೆ.


ಕಾಡು ನೆಲದ ಹಾದಿಗಳಲ್ಲಿ, ಮರಗಳ ರೆಂಬೆ ಕೊಂಬೆಗಳ ನಡುಗಳಲ್ಲಿ ಬಣ್ಣ ಬಣ್ಣದ, ವಿವಿಧ ಆಕಾರಗಳ ಹೂವುಗಳನ್ನು ಅರಳಿಸಿ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡುವ, ಕನ್ನಡದಲ್ಲಿ ಸೀತಾಳೆ ಎಂಬ ಹೆಸರಿನಿಂದ ಗುರುತಿಸ್ಪಡುವ ಆರ್ಕಿಡ್ ಸಸ್ಯಗಳು ಇಂದಿನ ದಿನಮಾನಗಳಲ್ಲಿ ಸರಿಸುಮಾರಾಗಿ ಎಲ್ಲರಿಗೂ ಚಿರಪರಿಚಿತ. ಆರ್ಥಿಕ ಕೃಷಿಯ ಬೆಳೆಯಾಗಿ ಬೆಳೆಯುವ ವಿವಿಧ ರೀತಿಯ ಆರ್ಕಿಡ್ ಹೂವುಗಳನ್ನು ಆಕರ್ಷಕ ಹೂವಿನ ಗುಚ್ಛಗಳನ್ನು ತಯಾರಿಸಲು ಮತ್ತು ಸಮಾರಂಭಗಳ ಅಲಂಕಾರದಲ್ಲಿ ಬಳಸುತ್ತಾರೆ, ಅಲ್ಲದೆ ಬಹುತೇಕರು ಇಷ್ಟಪಡುವ ವೆನಿಲಾ ಐಸಕ್ರೀಮ್ ನ ಮುಖ್ಯ ಸ್ರೋತವಾದ ವೆನಿಲ್ಲಾ ಗಿಡ/ಬಳ್ಳಿಯೂ ಕೂಡ ಆರ್ಕಿಡ್. ಆದುದರಿಂದ ಆರ್ಕಿಡ್ ಗಳನ್ನು ನೋಡದವರು ಅಥವಾ ಅದರ ಸವಿಯನ್ನು ಸವಿಯದವರು ಇಲ್ಲವೆನ್ನಬಹುದು. ಆರ್ಕಿಡ್ಗಳಲ್ಲಿ ಪ್ರಾಕೃತಿಕವಾಗಿ ಕಾಡಿನಲ್ಲಿ ಬೆಳೆಯುವ ಆರ್ಕಿಡ್ ಗಳು ಮತ್ತು ತೋಟಗಾರಿಕಾ ಬೆಳೆಯಾಗಿ ಬೆಳೆಸುವ ಆರ್ಕಿಡ್ ಗಳು ಎಂಬ 2 ಮುಖ್ಯ ವಿಭಾಗಳಲ್ಲಿ ಗುರುತಿಸಬಹುದು.

ರಾಮಾಯಣದ ಪುರಾಣಕಥೆಗಳ ಜತೆಗೆ ನಮ್ಮ ಜನಪದರು ಈ ಆರ್ಕಿಡ್ ಸಸ್ಯಗಳನ್ನು ಜೋಡಿಸುತ್ತಾರೆ. ಸೀತೆಯು ವನವಾಸದ ಸಂದರ್ಭದಲ್ಲಿ ಆರ್ಕಿಡ್ ಹೂವುಗಳಿಂದ ಕೇಶಾಲಂಕಾರ ಮಾಡಿಕೊಳ್ಳುತ್ತಿದ್ದರಿಂದ ಸೀತಾಳೆ, ಸೀತೆದಂಡೆ ಅಥವಾ ಸೀತಾಮುಡಿ ಎಂಬ ಸಾಮಾನ್ಯ ಹೆಸರಿನಿಂದ ಆರ್ಕಿಡ್ ಸಸ್ಯಗಳನ್ನು ಜನರು ಕರೆಯುತ್ತಾರೆ. ಅಲ್ಲದೇ ಸೀತೆಯ ತವರು ಮನೆಗೆ ಮತ್ತು ಗಂಡನ ಮನೆಗೆ ಹೋಗುವಾಗಿನ ಕಥೆಯೂ ಸೀತಾಮುಡಿಯ ಜೊತೆಯಲ್ಲಿ ಪ್ರಚಲಿತದಲ್ಲಿದೆ. ಹಾಗೆಯೆ ದ್ರೌಪದಿ ಪಾಂಡವರ ವನವಾಸದಲ್ಲಿ ಉಪಯೋಗಿಸಿದಳೆಂದು ದ್ರೌಪದಿ ದಂಡೆ ಎಂಬ ಹೆಸರಿನ ಆರ್ಕಿಡನ್ನು ವಹಾಭಾರತ ಪುರಾಣಕಥೆಗಳ ಜತೆಗೆ ಗುರುತಿಸುತ್ತಾರೆ. ಆದರೆ ಇವುಗಳ ಬಗ್ಗೆ ನಿಖರವಾದ ಸಾಕ್ಷಿಸಹಿತ ಮಾಹಿತಿಯನ್ನು ನೀಡುವುದು ಕಷ್ಟಸಾಧ್ಯವಾದ ಮಾತು.

ಜಗತ್ತಿನೆಲ್ಲೆಡೆ ವೈಜ್ಞಾನಿಕವಾಗಿ ಈ ಗುಂಪಿನ ಸಸ್ಯಗಳನ್ನು ಆರ್ಕಿಡ್ ಗಳು ಎಂದು ಕರೆಯುತ್ತಾರೆ. ಆರ್ಕಿಡ್ ಎಂಬ ಹೆಸರು ಗ್ರೀಕ್ ಮೂಲದ ಆರ್ಕಿಯೋಸ್/ ಆರ್ಚಿಸ್ ಎಂಬ ಪದದಿಂದ ಉತ್ಪತ್ತಿಯಾಗಿದೆ. ಆರ್ಚಿಸ್ ಎಂದರೆ ವೃಷಣ ಎಂದು ಅರ್ಥ. ಆರ್ಚಿಸ್ ಜಾತಿಗೆ ಸೇರಿದ ನೆಲವಾಸಿ ಆರ್ಕಿಡ್ ಸಸ್ಯಗಳ ಗಡ್ಡೆಗಳು ವೃಷಣದ ಆಕಾರವನ್ನು ಹೋಲುವುದರಿಂದ ಈ ಸಸ್ಯಗಳಿಗೆ ಆರ್ಕಿಡ್ ಎಂಬ ಹೆಸರಿನಿಂದ ಕರೆದಿದ್ದಾರೆ. ಈ ಸಸ್ಯಗಳ ಕುಟುಂಬಕ್ಕೆ ಆರ್ಕಿಡೇಸಿ ಎಂದು ಹೆಸರನ್ನು ಇಡಲಾಗಿದೆ ಹಾಗಾಗಿ ಈ ಕುಟುಂಬದ ಅಡಿಯಲ್ಲಿ ಗುರುತಿಸ್ಪಡುವ ಎಲ್ಲಾ ಸಸ್ಯಗಳನ್ನು ಸಾಮಾನ್ಯವಾಗಿ ಆರ್ಕಿಡ್ಗಳು ಎಂಬ ಹೆಸರಿನಿಂದ ಕರೆಯುತ್ತಾರೆ. ಜಗತ್ತಿನ ಹೂಬಿಡುವ ಎಲ್ಲಾ ಸಸ್ಯಗಳ ಕುಟುಂಬಗಳಲ್ಲಿ ಎರಡನೇ ಅತಿ ಹೆಚ್ಚು ಪ್ರಬೇಧಗಳನ್ನು ಆರ್ಕಿಡೇಸಿ ಕುಟುಂಬವು ಹೊಂದಿದೆ. ಆರ್ಕಿಡೇಸಿ ಕುಟುಂಬದಲ್ಲಿ ಇಲ್ಲಿಯ ತನಕ ಸುಮಾರು 900 ಜಾತಿಯ 30,000 ಅಂಗೀಕರಿಸಿದ ಪ್ರಬೇಧಗಳನ್ನು ಜಗತ್ತಿನ ಬೇರೆ ಬೇರೆ ಪ್ರದೇಶಗಳಿಂದ ಪತ್ತೆಹಚ್ಚಿ ಹೆಸರಿಸಲಾಗಿದೆ. ಹಾಗೇಯೇ ಭಾರತದಲ್ಲಿ ಸುಮಾರು 1309 ಪ್ರಬೇಧಗಳನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ 175 ಪ್ರಾಕೃತಿಕವಾಗಿ ಬೆಳೆಯುವ ಆರ್ಕಿಡ್ ಗಳನ್ನು ಪಟ್ಟಿಮಾಡಿದ್ದಾರೆ. ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 100, ಹಾಸನ, ಕೊಡಗು, ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 90 ಕ್ಕೂ ಮೇಲ್ಪಟ್ಟ ವಿವಿಧ ಪ್ರಬೇಧಗಳ ಆರ್ಕಿಡ್ ಗಳು ಕಾಣಸಿಗುತ್ತವೆ. ಹೀಗೆ ಮಲೆನಾಡ ಜಿಲ್ಲೆಗಳಿಂದ ಹಿಡಿದು ಒಣ ಬಯಲುಸೀಮೆಯ ಎಲ್ಲಾ ಜಿಲ್ಲೆಗಳಲ್ಲಿ ಒಂದಲ್ಲ ಒಂದು ಆರ್ಕಿಡ್ ಪ್ರಬೇಧವು ಕಂಡುಬರುತ್ತದೆ. ಆದರೆ ಮಳೆ ಹೆಚ್ಚಿರುವ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಹೆಚ್ಚಾಗಿ ಇವು ಕಂಡುಬರುತ್ತವೆ.

ಹೂಬಿಡುವ ಸಸ್ಯ ಪ್ರಬೇಧಗಳಲ್ಲಿ ಆರ್ಕಿಡ್ ಗಳದ್ದು ವಿಭಿನ್ನ ಲೋಕ. ಈ ಕುಟುಂಬದ ಸಸ್ಯಗಳನ್ನು ಜೈವಿಕವಾಗಿ ಅಭಿವೃದ್ಧಿಹೊಂದಿದ ಪಟ್ಟಿಯಲ್ಲಿ ಸೇರಿಸಿದ್ದಾರೆ, ಏಕೆಂದರೆ ಈ ಸಸ್ಯಗಳು ಬೇರೆ ಬೇರೆ ಪರಿಸರಕ್ಕನುಗುಣವಾಗಿ ಮಾರ್ಪಾಟುಗಳನ್ನು ಹೊಂದಿ ಬೆಳೆಯುತ್ತವೆ ಮತ್ತು ಪರಾಗ ಕ್ರಿಯೆಯ ಮೂಲಕ ಸಂತಾನೋತ್ಪತ್ತಿಯನ್ನು ನಡೆಸಲು ತನ್ನ ಹೂವುಗಳಲ್ಲಿ ಆಶ್ಚರ್ಯವೆನಿಸುವ ಮಾರ್ಪಾಟುಗಳನ್ನು ಕಾಲಾಂತರದಲ್ಲಿ ಮಾಡಿಕೊಂಡಿವೆ ಅಥವಾ ಹೊಂದಿವೆ. ಈ ಕಾರಣದಿಂದಾಗಿಯೇ ಆರ್ಕಿಡ್ ಗಳು ಎಲ್ಲ ವರ್ಗಗಳ ಜನರ ಚಿತ್ತವನ್ನು ತನ್ನತ್ತ ಸೆಳೆಯುತ್ತವೆ.

ನಮ್ಮ ಕರ್ನಾಟಕದ ಕಾಡುಗಳಲ್ಲಿ ತರತರಹದ ಆರ್ಕಿಡ್ ಗಳನ್ನು ನೋಡಬಹುದು. ಈ ಸಸ್ಯಗಳನ್ನು ಹೂಬಿಡುವ ಕಾಲಕ್ಕೆ ಅನುಗುಣವಾಗಿ ಹಾಗೂ ಬೆಳೆಯುವ ಪರಿಸರಕ್ಕನುಗುಣವಾಗಿ ಎರಡು ಭಿನ್ನ ವಿಧಗಳಲ್ಲಿ ವಿಂಗಡಿಸಬಹುದು. ಬೆಳೆಯುವ ಪರಿಸರಕ್ಕನುಗುಣವಾಗಿ ಸಾವಯವ ಅಥವಾ ಕೊಳೆಯುವ ಪದಾರ್ಥಗಳ ಮೇಲೆ ಬೆಳೆಯುವ (ಪರಾವಲಂಬಿ), ನೆಲದ ಮೇಲೆ ಬೆಳೆಯುವ (ನೆಲವಾಸಿ/ಭೂಸಸ್ಯಕ), ಮತ್ತು ಮರಗಳ ಮೇಲೆ ಬೆಳೆಯುವ (ಅಪ್ಪು ಬೇರುಗಳನ್ನು ಹೊಂದಿರುವ) ಆರ್ಕಿಡ್ಗಳು ಎಂದು ಗುರುತಿಸಬಹುದು.

ಸಾವಯವ ಪದಾರ್ಥಗಳ ಮೇಲೆ ಅವಲಂಬಿತವಾಗಿ ಬೆಳೆಯುವ ಆರ್ಕಿಡ್ ಗಳಲ್ಲಿ ತಾವೇ ಆಹಾರ ಉತ್ಪಾದಿಸಲು ಬೇಕಾಗುವ ಪತ್ರಹರಿತ್ತು ಹೊಂದಿರುವ ಎಲೆಗಳು ಇರುವುದಿಲ್ಲ ಮತ್ತು ಇವು ಸಾಮಾನ್ಯವಾಗಿ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಥವಾ ನೆರಳು ಮತ್ತು ತಂಪಿನಿಂದ ಕೂಡಿರುವ ಸಸ್ಯಗಳ ಅಡಿಯಲ್ಲಿ ಕಂಡುಬರುತ್ತವೆ (ಎಪಿಪೊಜಿಯಂ).ಸ್ವಾವಲಂಬಿಗಳಾದ ನೆಲವಾಸಿ ಆರ್ಕಿಡ್ ಗಳು ಹುಲ್ಲುಗಾವಲಿನಲ್ಲಿ ಹಾಗೂ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ (ಹೆಬನೆರಿಯ, ನರ್ವಿಲಿಯ,). ಇವು ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಳೆದು ಹೂವರಳಿಸಿ, ತಮ್ಮ ಜೀವನಚಕ್ರವನ್ನು ಪೂರ್ತಿಗೊಳಿಸಿ ಚಳಿಗಾಲದ ಕೊನೆ ಮತ್ತು ಬೇಸಿಗೆಕಾಲದಲ್ಲಿ ಮಾಯವಾಗುತ್ತವೆ. ನೆಲವಾಸಿ ಆರ್ಕಿಡ್ ಗಳಲ್ಲಿ ಹೆಚ್ಚಿನವು ನೆಲದೊಳಗಿನ ಗಡ್ಡೆಗಳನ್ನು ಹೊಂದಿರುತ್ತವೆ, ಆದುದರಿಂದ ಇವು ಮಳೆಗಾಲದ ಆರಂಭದಲ್ಲಿ ನೆಲದೊಳಗಿಂದ ಹೊರಬಂದು ಬೆಳೆಯತೊಡಗುತ್ತವೆ. ಕಾಡಿನ ಜೀವಿಗಳಾದ ಕಾಡುಹಂದಿ, ಮೊಲ, ಮುಂತಾದವು ನೆಲವಾಸಿ ಆರ್ಕಿಡ್ ಗಳ ಗಡ್ಡೆಗಳನ್ನು ಆಹಾರವಾಗಿ ತಿನ್ನುತ್ತವೆ.

ಮರಗಳ ಮೇಲೆ ಬೆಳೆಯುವ ಅಪ್ಪು ಆರ್ಕಿಡ್ ಗಳು ಮರ ಅಥವಾ ಗಿಡಗಳ ರೆಂಬೆ ಕೊಂಬೆಗಳ ಮೇಲೆ/ಸಂದಿನಲ್ಲಿ ಅಂಟಿಕೊಡು ಬೆಳೆಯುವುದರಿಂದ ಇವುಗಳಿಗೆ ಅಪ್ಪುಆರ್ಕಿಡ್ ಗಳು ಎಂದು ಹೆಸರಿಸಲಾಗಿದೆ. ಇವು ತಮ್ಮ ಆಹಾರವನ್ನು ತಾವೆ ತಯಾರಿಸಿಕೊಳ್ಳಬಲ್ಲ ಸ್ವತಂತ್ರ ಜೀವಿಗಳಾದರೂ ಸಹ ಈ ಆರ್ಕಿಡ್ ಗಳಿಗೆ ಮಣ್ಣಿನ ಅವಶ್ಯಕತೆ ಇಲ್ಲ. ಇವುಗಳು ನೀರು ಮತ್ತು ಪೋಷಕಾಂಶಗಳ ಪೂರೈಕೆಗಾಗಿ ವಿಶಿಷ್ಟ ತೂಗಾಡುವ ಬೇರುಗಳನ್ನು ಹೊಂದಿವೆ. ಈ ಬೇರುಗಳಲ್ಲಿ ವೆಲಾಮೆನ್ ಎಂಬ ಅಂಗಾಶವಿದ್ದು ಇದು ವಾತಾವರಣದ ಗಾಳಿಯಲ್ಲಿನ ತೇವಾಂಶದಿಂದ ನೀರನ್ನು ಮತ್ತು ತನಗೆ ಬೇಕಾದ ಪೋಷಕಾಂಶಗಳನ್ನು ಹೀರಿಕೊಂಡು ಎಲೆಗಳ ಸಹಾಯದಿಂದ ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಅಲ್ಲದೆ ಅಪ್ಪು ಬೇರುಗಳ ಸಹಾಯದಿಂದ ಆರ್ಕಿಡ್ ಗಳು ಮರಗಳಿಗೆ ಅಂಟಿಕೊಂಡು ಬೆಳೆಯುತ್ತವೆ.ವರ್ಷದ ಎಲ್ಲಾ ಋತುಗಳಲ್ಲಿ ಒಂದಲ್ಲಾ ಒಂದು ಜಾತಿಯ ಅಥವಾ ಪ್ರಬೇಧದ ಆರ್ಕಿಡ್ ಸಸ್ಯವು ಹೂವುಗಳನ್ನು ಹೊಂದಿರುತ್ತವೆ ಆದುದರಿಂದ ಇವುಗಳನ್ನು ಬೇಸಿಗೆ ಕಾಲ, ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಹೂವು ಬಿಡುವ ಗಿಡಗಳೆಂದು ವರ್ಗೀಕರಿಸಬಹುದು. ಆದುದರಿಂದ ಆರ್ಕಿಡ್ ಗಳ ಬಗ್ಗೆ ಆಸಕ್ತಿ ಹೊಂದಿದವರು ವರ್ಷದ ಎಲ್ಲಾ ಋತುಗಳಲ್ಲಿ ಈ ಸಸ್ಯಗಳ ವೀಕ್ಷಣೆ ಮತ್ತು ಅಧ್ಯಯನ ಮಾಡಬಹುದು. ಆರ್ಕಿಡ್ ಸಸ್ಯಗಳ ಹೂವುಗಳು ಕೆಲವೆ ಮಿಲಿ ಮೀಟರುಗಳಿಂದ ಹಿಡಿದು ಹಲವು ಸೆಂಟಿಮೀಟರುಗಳವರೆಗೆ ವಿವಿಧ ರೀತಿಯ ಆಕೃತಿಗಳಲ್ಲಿ ಕಾಣಸಿಗುತ್ತವೆ, ಉದಾ. ಹೂವಿನ ಮೇಲೆ ಕುಳಿತಿರುವ ದುಂಬಿ/ಕೀಟ, ಮೀನಿನ ಆಕಾರ, ಕಥಕ್ಕಳಿ ವೇಷಧರಿಸಿದ ಮನುಷ್ಯ, ಹಕ್ಕಿ, ಜೇಡ, ಅಕ್ಟೋಪಸ್, ಪಾತರಗಿತ್ತಿ, ಮುಂತಾದವು. ಈ ಹೂವುಗಳು ತರಹೇವಾರಿ ಬಣ್ಣಗಳಲ್ಲಿ (ಬಿಳಿ, ಕೇಸರಿ, ಹಸಿರು, ಕಪ್ಪು, ಹಳದಿ, ನೀಲಿ) ಮತ್ತು ಬಣ್ಣದ ವಿನ್ಯಾಸಗಳಲ್ಲಿಯೂ ಕೂಡ ಲಭ್ಯವಿವೆ.

ವಿವಿಧ ಆರ್ಕಿಡ್ ಗಳನ್ನು ಹಳ್ಳಿ ವೈದ್ಯ ಪದ್ಧತಿಯಲ್ಲಿ ಮಾತ್ರವಲ್ಲದೆ ಆರ್ಯುವೇದ, ಸಿದ್ಧೌಷಧ, ಯುನಾನಿ ಪದ್ಧತಿಗಳಲ್ಲಿ ಕೂಡ ಅನೇಕ ರೋಗಗಳ ನಿವಾರಣೆಗಾಗಿ ಬಳಸುತ್ತಾರೆ. ಹೆಬನೇರಿಯ ಜಾತಿಯ ವಿವಿಧ ಪ್ರಬೇಧಗಳ ನೆಲ ಆರ್ಕಿಡ್ಗಳ ಗಡ್ಡೆಗಳನ್ನು ಜ್ವರ, ತಲೆಸುತ್ತುವಿಕೆ ಮತ್ತು ರಕ್ತದೋಷ ನಿವಾರಣೆಗಾಗಿ ಉಪಯೋಗಿಸುತ್ತಾರೆ. ಅಲ್ಲದೆ ಹೆಬನೇರಿಯ ಕ್ರಿನಿಫೆರ ಮತ್ತು ಹೆಬನೇರಿಯ ಲಾಂಗಿಕಾರ್ನಿಕ್ಯುಲಾಟ ಎಂಬ ನೆಲ ಆರ್ಕಿಡ್ ಗಳ ಗಡ್ಡೆಗಳ ಲೇಪವನ್ನು ತಲೆನೋವು ಮತ್ತು ಊತ ನಿವಾರಕವಾಗಿ ಬಳಸುತ್ತಾರೆ. ಹಾವಿನಮೂತಿ ಗಡ್ಡೆ ಎಂದು ಕನ್ನಡದಲ್ಲಿ ಕರೆಯಲ್ಪಡುವ ಯುಲೋಫಿಯ ನುಡಾ ಆರ್ಕಿಡ್ನ ಗಡ್ಡೆಯನ್ನು ಕೆಡುಕು ಹುಣ್ಣು ಮತ್ತು ಹುಳಗಳ ನಿವಾರಣೆಯಲ್ಲಿ ಉಪಯೋಗಿಸುತ್ತಾರೆ. ಡೆಂಡ್ರೋಬಿಯಮ್ ಒವೆಟಮ್ ಸಸ್ಯದ ಹುಸಿಗಡ್ಡೆಯ ರಸವನ್ನು ಅರೆದು ಹೊಟ್ಟೆನೋವಿಗೆ ಉಪಯೋಗಿಸುತ್ತಾರೆ. ವ್ಯಾಂಡ ಜಾತಿಯ (ವ್ಯಾಂಡ ಟೆಸೆಲ್ಲಾಟ) ಅಪ್ಪು ಆರ್ಕಿಡ್ ನ ಎಲೆ ಮತ್ತು ಬೇರುಗಳನ್ನು ಜ್ವರ, ಊತ, ಡೈಸೆಪ್ಸಿಯಾ, ಕಿವಿಯ ತೊಂದರೆಗಳು, ಮೂಲವ್ಯಾಧಿ ಹಾಗೂ ನರ ಸಂಬಂಧಿ ರೋಗಗಳಿಗೆ ಬಳಸುತ್ತಾರೆ. ಕಲ್ಲು ಹೊಂಬಾಳೆಯ (ಬಲ್ಬೊಫಿಲ್ಲಮ್ ಪ್ರಬೇಧ) ಕಂದವನ್ನು ಪುರುಷರ ನರದೌರ್ಬಲ್ಯವನ್ನು ಗುಣಪಡಿಸಲು ಹಳ್ಳಿ ವೈದ್ಯ ಪದ್ಧತಿಯಲ್ಲಿ ಉಪಯೋಗಿಸುತ್ತಾರೆ. ಹೀಗೆ ಚೆಂದದ ಹೂವುಗಳಲ್ಲದೆ ಕೆಲವೊಂದು ಕಾಡು ಆರ್ಕಿಡ್ ಗಳನ್ನು ಔಷಧಿಯಾಗಿ ಬೇರೆ ರೋಗಗಳನ್ನು ಗುಣ ಪಡಿಸಲು ಉಪಯೋಗಿಸುತ್ತಾರೆ. ರಾಮನಗರ ಜಿಲ್ಲೆಯ ಒಂದು ಜನಾಂಗವು ಕಲ್ಲು ಹೊಂಬಾಳೆ ಆರ್ಕಿಡ್ ನ್ನು ಪೂಜಿಸುತ್ತಾರೆ ಮತ್ತು ವಾಮವಿದ್ಯೆಗಳಲ್ಲಿ (ಮಾಟಮಂತ್ರ) ಉಪಯೋಗಿಸುತ್ತಾರೆಂಬ ಮಾಹಿತಿ ಇದೆ. ಅದೇ ರೀತಿ ಆಹಾರವಾಗಿಯೂ ಕೂಡ ಆರ್ಕಿಡ್ ಗಳ ಗಡ್ಡೆಯನ್ನು ಉಪಯೋಗಿಸುತ್ತಾರೆ. ಇವಿಷ್ಟೇ ಅಲ್ಲದೇ ಆರ್ಕಿಡ್ ಗಳ ಇರುವಿಕೆಯು ವಾತಾವರಣದ ಶುದ್ಧತೆಯ ಪರಿಮಾಣವಾಗಿ ಕೂಡ ಚಾಲ್ತಿಯಲ್ಲಿದೆ.ಕಾಡಿನ ಆರ್ಕಿಡ್ ಗಳನ್ನು ಹುಡುಕಿ ಅವುಗಳ ಅಧ್ಯಯನ ನಡೆಸುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ. ನಮ್ಮ ಕನ್ನಡ ಭಾಷೆಯಲ್ಲಿ ಪ್ರಕಟವಾಗಿರುವ ಡಾ. ಮಾಗಡಿ ಆರ್. ಗುರುದೇವ ಅವರು ಬರೆದಿರುವ ಕರ್ನಾಟಕದ ಆರ್ಕಿಡ್ (ಸೀತಾಳೆ) ಸಸ್ಯಗಳ ಸಚಿತ್ರ ಕೈಪಿಡಿಯು ಆರ್ಕಿಡ್ ಅಧ್ಯಯನಾಸಕ್ತರಿಗೆ ಉಪಯುಕ್ತ ಗ್ರಂಥವಾಗಿದೆ. ಅಲ್ಲದೇ ಈಗಿನ ಆಧುನಿಕ ಕಾಲದಲ್ಲಿ ಆರ್ಕಿಡ್ ಗಳ ಅಧ್ಯಯನ ನಡೆಸಲು ಸಾಮಾಜಿಕ ಜಾಲತಾಣಗಳನ್ನೂ ಕೂಡ ಆಸಕ್ತರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. ಫೇಸ್ ಬುಕ್ ಮತ್ತು ವಾಟ್ಸಪ್ ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತರು ವಿವಿಧ ಗುಂಪುಗಳನ್ನು ರಚಿಸಿಕೊಂಡು ಸಕ್ರಿಯ ಅಧ್ಯಯನ, ಸಂರಕ್ಷಣೆ ಹಾಗೂ ಆರ್ಕಿಡ್ ಕೃಷಿಯಲ್ಲಿ ತೊಡಗಿವೆ. ಈ ಗುಂಪುಗಳಲ್ಲಿ ಆರ್ಕಿಡ್ ಗಳ ಗುರುತಿಸುವಿಕೆ, ಬೆಳವಣಿಗೆ, ಹಾಗೂ ಸಂರಕ್ಷಣೆಯ ಬಗ್ಗೆ ಅರ್ಥಪೂರ್ಣ ಅಧ್ಯಯನ ಚರ್ಚೆಗಳು ನಡೆಯುತ್ತವೆ. ಈ ಗುಂಪುಗಳಲ್ಲಿ ಸಸ್ಯಶಾಸ್ತ್ರಜ್ಞರಿಂದ ಹಿಡಿದು ಹಳ್ಳಿಯ ಆಸಕ್ತ ರೈತರವರೆಗೆ ವಿವಿಧ ವೃತ್ತಿ ಮತ್ತು ಪ್ರವೃತ್ತಿಗಳ ವ್ಯಕ್ತಿಗಳು ಇರುತ್ತಾರೆ. ಇವುಗಳಲ್ಲಿ ಕೆಲವೊಂದು ಗುಂಪುಗಳು ವಾರದ ಕೊನೆಯಲ್ಲಿ ವಿವಿಧ ಕಾಡುಗಳಲ್ಲಿ ಆರ್ಕಿಡ್ಗಾಗಿ ನಡಿಗೆಯನ್ನು ಆಯೋಜಿಸುತ್ತಿವೆ. ಆಸಕ್ತರು ಸೇರಿಕೊಂಡು ವಿವಿಧ ಪ್ರದೇಶಗಳಲ್ಲಿನ ಪ್ರಾಕೃತಿಕ ಆರ್ಕಿಡ್ ಗಳ ಪಟ್ಟಿಯನ್ನು ಕೂಡ ತಯಾರು ಮಾಡುವಲ್ಲಿ ನಿರತರಾಗಿದ್ದಾರೆ. ಹಲವು ರೈತರು ಕೂಡಿ ಗುಂಪುಗಳನ್ನು ರಚಿಸಿಕೊಂಡು ವಿವಿಧ ರೀತಿಯ ಆರ್ಕಿಡ್ ಬೆಳೆಗಳ ಆರ್ಕಿಡ್ ಕೃಷಿ ಸಂಬಂಧಿತ ತರಬೇತಿಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಅನೇಕ ರೀತಿಯಲ್ಲಿ ಆರ್ಕಿಡ್ ಗಳ ಉಳಿವಿಗಾಗಿ ಈ ಗುಂಪುಗಳು ತಮ್ಮ ಅಳಿಲು ಸೇವೆಯಲ್ಲಿ ನಿರತವಾಗಿವೆ.
ಇತ್ತೀಚಿನ ದಿನಮಾನಗಳಲ್ಲಿ ಪ್ರಕೃತಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪದ ಕಾರಣದಿಂದ ಕಾಡುಗಳ ವಿನಾಶ ಹೆಚ್ಚಿದಂತೆಲ್ಲಾ ಆರ್ಕಿಡ್ಸಗಳು ವಿರಳವಾಗುತ್ತ ನಡೆದಿವೆ. ಮೊದಲು ಹಳ್ಳಿಗಳ ಮನೆಯಂಗಳದ ಮರಗಳ ಮೇಲೆ ಕಾಣಸಿಗುತ್ತಿದ ಸೀತಾಳೆಗಳು/ ಅಪ್ಪು ಆರ್ಕಿಡ್ ಗಳು ಈಗ ಮಾಯವಾಗುತ್ತ ಕಾಡಿನ ಒಳಗಡೆ ಮಾತ್ರ ಸಿಗುತ್ತಿವೆ. ಹೀಗೆ ಮುಂದುವರಿದಲ್ಲಿ ಆರ್ಕಿಡ್ ಗಳನ್ನು ಮುಂದಿನ ಪೀಳಿಗೆಗಳು ಚಿತ್ರಗಳಲ್ಲಿ ಮಾತ್ರ ನೋಡುವಂತಾದೀತು? ಆದುದರಿಂದ ಆರ್ಕಿಡ್ ಗಳ ಸಂರಕ್ಷಣೆಯ ಬಗೆಗೆ ತುರ್ತಾದ ಗಮನವನ್ನು ಹರಿಸಬೇಕಾಗಿದೆ. ಪ್ರಕೃತಿದತ್ತ ಆರ್ಕಿಡ್ ಗಳ ಸಂರಕ್ಷಣೆ ನೈಸರ್ಗಿಕ ಕಾಡುಗಳ ಉಳಿವಿನಿಂದ ಮಾತ್ರ ಸಾಧ್ಯ.

ಕಾರಣಾಂತರದಿಂದ ಕಾಡಿನ ಅಂಚಿನ ಮರಗಳು ಉರುಳಿಬಿದ್ದಾಗ ಅವುಗಳ ಮೇಲೆ ಬೆಳೆದಿರುವ ಈ ಸಸ್ಯಗಳನ್ನು ತಂದು ಮನೆಯಂಗಳದಲ್ಲಿ (ಮರಗಳ ಮೇಲೆ ಅಥವಾ ಕುಂಡಗಳಲ್ಲಿ) ಬೆಳೆಸುವುದರ ಮೂಲಕ ಪ್ರತಿಯೊಬ್ಬರೂ ಕೂಡ ಆರ್ಕಿಡ್ ಸಸ್ಯಗಳ ಸಂರಕ್ಷಣೆಯಲ್ಲಿ ತಮ್ಮ ಕಿಂಚಿತ್ ಕೊಡುಗೆಯನ್ನು ನೀಡಬಹುದು.
ಈ ಮೂಲಕವಾದರೂ ಚೆಂದದ ಆರ್ಕಿಡ್ ಗಳ ಸಂರಕ್ಷಣೆಗೆ ನಾವೆಲ್ಲರೂ ಅಳಿಲಸೇವೆ ಸಲ್ಲಿಸೋಣವೇ?!

Share This :
 •  
 •  

Readers Comments (3) 

 • Denniscoomy


  18/04/2019
  2ктпн1000ква Ктп типа Сэндвич Ктп 10/25/0.23ква Ктп 10/10/0, КТП КОМПЛЕКТНЫЕ ТРАНСФОРМАТОРНЫЕ ПОДСТАНЦИИ москва, Производство ктп москва и многое другое на: http://sviloguzov.ru/ - Здесь есть то, что Вам нужно!
  Array" />
  Characters Remaining : 1000

 • Matthewgop


  19/05/2019
  Прогоны Xrumer
  Продвижение сайтов. Большой ссылочный взрыв на ваш страх и риск за.
  Вы можете потерять сайт.

  Почта: support@Xrumer.pro
  Array" />
  Characters Remaining : 1000

 • Avalancheicc


  03/06/2019
  удалите,пожалуйста! .
  Array" />
  Characters Remaining : 1000

 • COMMENT

  Characters Remaining : 1000

  Latest Blogs