ಈ ನದಿಗೆ ಐದು ಬಣ್ಣಗಳು!

August 06, 2018 ⊄   By: ಜೀವರಾಜ್‍ ಭಟ್

ನೀರಿಗೆ ಬಣ್ಣವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದರೂ ಇಲ್ಲೊಂದು ನದಿ ಕಾಮನ ಬಿಲ್ಲಿನಂತೆ ಹಲವು ಬಣ್ಣಗಳಿಂದ ಕಂಗೊಳಿಸುತ್ತದೆ. ಈ ನದಿಯ ಸೌಂದರ್ಯಕ್ಕೆ ಎಂಥವರಾದರೂ ಮನಸೋಲಲೇ ಬೇಕು. ಸ್ವರ್ಗದಿಂದಲೇ ಇಳಿದು ಬಂದಿದೆಯೇನೋ ಎಂಬತೆ ಭಾಸವಾಗುತ್ತದೆ. ಅಂದಹಾಗೆ ಈ ನದಿಯ ಹೆಸರು ಕಾನೋ ಕ್ರಿಸ್ಟಲ್ಸ್. ಇದು ಕೊಲಂಬಿಯಾ ದೇಶದ ಒಂದು ನದಿ. ಸೆರ್ರಾನಿಯಾ ಡಿ ಲಾ ಮಾಕಾರೆನಿಯಾ ಎಂಬ ಪ್ರಾಂತ್ಯದಲ್ಲಿ ಹರಿಯುತ್ತದೆ. ಇದನ್ನು ಐದು ಬಣ್ಣಗಳ ನದಿ ಎಂದೇ ಕರೆಯಲಾಗುತ್ತದೆ. ದ್ರವ ಕಾಮನಬಿಲ್ಲು ಅಂತಲೂ ಕರೆಸಿಕೊಂಡಿದೆ. ಈ ಕಾರಣಕ್ಕಾಗಿ ಕಾನೋ ಕ್ರಿಸ್ಟಲ್ಸ್ ಜಗತ್ತಿನ ಅತ್ಯಂತ ಸುಂದರ ನದಿ ಎನಿಸಿಕೊಂಡಿದೆ.

ಐದು ಬಣ್ಣಗಳಿರಲು ಏನು ಕಾರಣ?
ಈ ನದಿ ಜೂನ್ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ವರ್ಣರಂಚಿತವಾಗಿ ಕಂಗೊಳಿಸುತ್ತದೆ. ಏಕೆಂದರೆ, ಈ ನದಿಯ ತಳ ಕಲ್ಲು ಬಂಡೆಗಳಿಂದ ಆವೃತ್ತವಾಗಿದೆ. ಅವುಗಳ ಮೇಲೆ ಬೆಳೆಯುವ ಮೆಕಾರೆನಿಯಾ ಕ್ಲಾವಿಗೆರಾ ಎಂಬ ಸಸ್ಯದಿಂದಾಗಿ ನದಿಯ ನೀರು ಕೂಡ ಕೆಂಪು ಬಣ್ಣದಿಂದ ಕಾಣಿಸುತ್ತದೆ. ಅಲ್ಲದೆ, ನದಿಯ ನೀರು ಹಳದಿ, ಹಸಿರು, ನೀಲಿ, ಕಪ್ಪು ಬಣ್ಣಗಳಿಂದ ಕೂಡಿದೆಯೇನೋ ಎಂಬತೆ ತೋರುತ್ತದೆ. ಇದರ ಹಿಂದೆಯೂ ಒಂದು ವೈಜ್ಞಾನಿಕ ಪ್ರಕ್ರಿಯೆ ಇದೆ. ಜೂನ್ ಬಳಿಕ ನದಿಯಲ್ಲಿ ನೀರು ಕಡಿಮೆ ಆಗುವುದರಿಂದ ಸೂರ್ಯನ ಕಿರಣ ತಳದಲ್ಲಿರುವ ಕಲ್ಲು ಬಂಡೆಗಳನ್ನು ಬಿಸಿಯಾಗಿಸುತ್ತದೆ. ಹೀಗಾಗಿ ಬಂಡೆಗಳ ಮೇಲೆ ಬೆಳೆದ ಪಾಚಿಗಿಡಗಳು ಹೂವು ಅರಳಿಸುತ್ತವೆ. ಮೆಕಾರೆನಿಯಾ ಕ್ಲಾವಿಗೆರಾ ಸಸ್ಯದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಅವುಗಳ ಜತೆಗೆ ಬಂಡೆಗಳ ಮೇಲೆ ಬೆಳೆದ ಹಸಿರು ಪಾಚಿಗಳು, ತಳದಲ್ಲಿರುವ ಹಳದಿ ಬಣ್ಣದ ಮರಳು ದಿಣ್ಣೆಗಳು, ಬಿಸಿಲಿನಿಂದ ನೀಲಿ ಬಣ್ಣದಿಂದ ಕಾಣುವ ನೀರು, ನದಿಯಲ್ಲಿ ಬೆಳೆದಿರುವ ಗಿಡಗಂಟಿಗಳ ನೆರಳು ಸೇರಿಕೊಂಡು ನದಿ ಬಣ್ಣ ಬಣ್ಣದಿಂದ ಕಾಣುವಂತೆ ಮಾಡುತ್ತದೆ. ದೂರದಿಂದ ನೋಡಿದರೆ, ಕಾಮನ ಬಿಲ್ಲು ನೆಲದ ಮೇಲೆ ಬಿದ್ದುಕೊಂಡಂತೆ ಭಾಸವಾಗುತ್ತದೆ. ನವೆಂಬರ್ ತಿಂಗಳು ಮುಗಿಯುತ್ತಿದ್ದಂತೆ ನದಿಯಲ್ಲಿ ನೀರು ಖಾಲಿಯಾಗಿ ಪಾಚಿಗಳು ಒಣಗಲು ಆರಂಭಿಸುತ್ತದೆ. ಬಳಿಕ ಪಾಚಿಗಳು ನೇರಳೆ ಬಣ್ಣಕ್ಕೆ ತಿರುತ್ತದೆ. ಈ ನದಿ ಒಟ್ಟು 62 ಮೈಲಿ ಉದ್ದವಿದೆ.ಬೇಸಿಗೆಯಲ್ಲಿ ಬಣ್ಣ ಕಳೆದುಕೊಳ್ಳುತ್ತದೆ
ಇವಿಷ್ಟೇ ಈ ನದಿಯ ವಿಶೇಷತೆಗಳಲ್ಲ. ಈ ಬೇಸಿಗೆಯಲ್ಲಿ ಈ ನದಿ ರಭಸವಾಗಿ ಹರಿಯುತ್ತದೆ. ಅಲ್ಲಲ್ಲಿ ಜಲಪಾತಗಳಿಂದ ಧುಮ್ಮಿಕ್ಕುತ್ತದೆ. ನದಿಯ ತಳ ಸಂಪೂರ್ಣವಾಗಿ ಕಲ್ಲು ಬಂಡೆಗಳಿಂದ ಆವೃತ್ತವಾಗಿರುವುದರಿಂದ ನೈಸರ್ಗಿಕ ಈಜುಕೊಳಗಳನ್ನು ನಿರ್ಮಿಸಿಕೊಟ್ಟಿದೆ. ಕೆಲೆವಡೆ ಈ ನದಿ ಬಹಳಷ್ಟು ಆಳವಾಗಿದೆ. ಅಲ್ಲಿಗೆ ಸೂರ್ಯನ ಬೆಳಕು ತಲುಪುವುದೇ ಇಲ್ಲ. ಹೀಗಾಗಿ ಆ ಪ್ರದೇಶ ಕಪ್ಪು ಕಲೆಯಂತೆ ಕಾಣುತ್ತದೆ. ಆದರೆ, ಬೇಸಿಗೆಯ ಅಂತ್ಯದ ವೇಳೆಗೆ ಈ ನದಿ ತನ್ನೆಲ್ಲಾ ಬಣ್ಣವನ್ನು ಕಳೆದುಕೊಂಡು ವರ್ಣ ರಹಿತವಾಗಿ ಕಾಣಿಸುತ್ತದೆ.

ಜಲಚರಗಳೇ ಇಲ್ಲ
ಇಷ್ಟೊಂದು ಆಕರ್ಷಕವಾಗಿದ್ದರೂ, ನದಿಯಲ್ಲಿ ಒಂದೇ ಒಂದು ಜಲಚರಗಳು ಕಾಣಸಿಗುವುದಿಲಲ್ಲ. ಇದಕ್ಕೆ ಕಾರಣ ನದಿಯ ತಳ ಕಲ್ಲಿನಿಂದ ಆವೃತ್ತವಾಗಿರುವುದು. ಕಲ್ಲು ಬಂಡೆ ಬಿಸಿಲಿಗೆ ಕಾದು ನೀರನ್ನು ಬಿಸಿ ಮಾಡುವುದರಿಂದ ಮತ್ತು ಪೌಷ್ಟಿಕಾಂಶ ಕೊರತೆಯಿಂದಾಗಿ ಜಲಚರಗಳು ನೀರಿನಲ್ಲಿ ಬದುಕಲು ಸಾಧ್ಯವಾಗುವುದಿಲ್ಲ.

ದುರ್ಗಮ ಹಾದಿ
ಕಾನೋ ಕ್ರಿಸ್ಟಲ್ಸ್ ನದಿ ದುರ್ಗಮ ಪ್ರದೇಶದಲ್ಲಿದೆ. ಹೀಗಾಗಿ ಈ ನದಿಯ ವೀಕ್ಷಣೆಗೆ ತೆರಳುವುದು ಅಷ್ಟು ಸುಲಭವಲ್ಲ. ಹೋಗುವುದಕ್ಕೆ ಸರಿಯಾದ ರಸ್ತೆಗಳಿಲ್ಲ. ಸಾಹಸಿ ಪ್ರವಾಸಿಗರು ಹತ್ತಿರದ ಲಾ ಮಾಕಾರೆನಿಯಾ ಪಟ್ಟಣಕ್ಕೆ ತೆರಳಿ ಅಲ್ಲಿಂದ ಸೆರ್ರಾನಿಯಾ ಡಿ ಲಾ ಮಾಕಾರೆನಿಯಾದಲ್ಲಿರುವ ಈ ನದಿಗೆ ಚಾರಣ ಕೈಗೊಳ್ಳಬಹುದು.Share This :
  •  
  •  

Readers Comments (0) 

COMMENT

Characters Remaining : 1000