ಆಲಿಕಲ್ಲು ಮಳೆ, ತಿಪ್ಪೆ ಸೇರಿದ ದ್ರಾಕ್ಷಿ: 450 ಕೋಟಿ ನಷ್ಟ

April 09, 2018 ⊄   By: Hasiru Suddimane

ಬೆಳೆದ ಬೆಳೆ ಕೈ ಸೇರುವ ಸಮಯ ಬಂದೆ ಬಿಟ್ಟಿತ್ತು. ರೈತನ ಮುಖದಲ್ಲಿ ಹರುಷ, ಆದರೆ ಅಕಾಲಿಕ ಮಳೆ ದ್ರಾಕ್ಷಿ ಬೆಳೆಗಾರರಲ್ಲಿ ಹುಳಿ ಹಿಂಡಿದೆ. ವಿದೇಶಿ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆದು ಹೈಟೆಕ್ ಸಾಲ ತೀರಿಸಿ ನೆಮ್ಮದಿ ಜೀವನದ ಕನಸು ಕಾಣುತ್ತಿದ್ದ ಬೆಳೆಗಾರರಿಗೆ ಮಳೆ ಅಂತೂ ಕಲ್ಲು ಹಾಕಿದೆ.

ಇತ್ತೀಚೆಗೆ ಮಳೆಯ ಜೊತೆ ಆಲಿಕಲ್ಲು ಸರಿಯಾದ ಹೊಡೆತ ಕೊಟ್ಟಿದೆ. ಶನಿವಾರ ಸಂಜೆ ಸುರಿದ ಆಲಿಕಲ್ಲು ಮಳೆ ಬೆಳೆಗಾರರನ್ನು ಕಂಗಾಲು ಮಾಡಿದೆ. ಗಿಡದಲ್ಲಿದ್ದ ಹಾಗೂ ಒಣದ್ರಾಕ್ಷಿ ತಯಾರಿಕೆಗೆ ಶೆಡ್ ನಲ್ಲಿದ್ದ ಜಿಲ್ಲೆಯ 480 ಟನ್ ದ್ರಾಕ್ಷಿ ಹಾಳಾಗಿದ್ದು, 450 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯ ತಿಕೋಟಾ ತಾಲೂಕು ದ್ರಾಕ್ಷಿ ಕಣಜ. ಇಲ್ಲಿನ ತಾಜಾ ಹಾಗೂ ಒಣ ದ್ರಾಕ್ಷಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಇದೆ. ದುಬೈ ಸೇರಿದಂತೆ ವಿದೇಶಗಳಿಗೆ ರಫ್ತಾಗುತ್ತದೆ. ಈ ಸಲ ದ್ರಾಕ್ಷಿ ಋುತುಮಾನ ತಡವಾಗಿದ್ದರಿಂದ ಸದ್ಯ ಕೊಯ್ಲಿಗೆ ಬಂದಿದ್ದ ಅಪಾರ ಪ್ರಮಾಣದ ದ್ರಾಕ್ಷಿ ಆಲಿಕಲ್ಲು ಹೊಡೆತಕ್ಕೆ ನೆಲಕಚ್ಚಿದೆ.

ತಿಕೋಟಾ, ತಾಜಪುರ, ಬಾಬಾನಗರ, ಬಿಜ್ಜರಗಿ, ಸೋಮದೇವರ ಹಟ್ಟಿ ಭಾಗದಲ್ಲಿ ಕೊಯ್ಲಿಗೆ ಬಂದಿದ್ದ ಅಂದಾಜು 150 ಎಕರೆಯಲ್ಲಿ ಸೂಪರ್ ಸೋನಕಾ ತಳಿಯ ದ್ರಾಕ್ಷಿ ಗೊಂಚಲು ಆಲಿಕಲ್ಲು ಬಿದ್ದಿದ್ದರಿಂದ ನೆಲಕ್ಕೆ ಉರುಳಿದೆ. ಈ ತಳಿ ವಿದೇಶಗಳಲ್ಲಿ ಬೇಡಿಕೆ ಇರುವ ಕಾರಣಕ್ಕೆ ಸಾಕಷ್ಟು ರೈತರು ಬೆಳೆದಿದ್ದರು. ಇದಕ್ಕೆ ಸ್ಥಳೀಯವಾಗಿ ಪ್ರತಿ ಕೆಜಿಗೆ 60-70 ರೂ. ದರವಿದೆ. ಇನ್ನೇನು ಮಾರುಕಟ್ಟೆಗೆ ಹೋಗಬೇಕೆನ್ನುವಷ್ಟರಲ್ಲಿ ನೆಲಕಚ್ಚಿದ್ದರಿಂದ ರೈತ ಕಂಗಾಲಾಗಿದ್ದಾನೆ. ಪ್ರತಿ ಎಕರೆಗೆ 12ರಿಂದ 13 ಟನ್ ಫಸಲು ಬರಲಿದ್ದು , ಅಕಾಲಿಕ ಮಳೆಯಿಂದ 150 ಎಕರೆಯಲ್ಲಿದ್ದ ಅಂದಾಜು 180 ರಿಂದ 200 ಟನ್ ತಾಜಾ ದ್ರಾಕ್ಷಿ ಹಾಳಾಗಿದೆ. ಅದು ಉಪಯೋಗಕ್ಕೆ ಬಾರದ್ದರಿಂದ ರೈತರು ಗೊಬ್ಬರಕ್ಕೆಂದು ತಿಪ್ಪೆಗೆ ಸುರಿಯುವಂತಾಗಿದೆ.
ಒಣದ್ರಾಕ್ಷಿಯೂ ಹಾಳು :

ಬಾಬಾನಗರ, ಬಿಜ್ಜರಗಿ, ಕಳ್ಳಕವಟಗಿ, ಜಾಲಗೇರಿ ಭಾಗದಲ್ಲಿ ಒಣ ದ್ರಾಕ್ಷಿ ತಯಾರಿಕೆ ಹಂತದಲ್ಲಿದ್ದ ದ್ರಾಕ್ಷಿ ಕೂಡ ಹಾಳಾಗಿದೆ. ಥಾಮ್ಸನ್ ಸೀಡ್ಲೆಸ್ ತಳಿಯ ದ್ರಾಕ್ಷಿಯನ್ನು ಒಣ ದ್ರಾಕ್ಷಿ ತಯಾರಿಕೆಗೆಂದು ರೈತರು ಶೆಡ್ಗಳಲ್ಲಿ ಒಣಗಿಸುತ್ತಿದ್ದರು. ಆದರೆ ಬಿರುಗಾಳಿ, ಆಲಿಕಲ್ಲು ಮಿಶ್ರತ ಮಳೆಯಿಂದ ನೆರಳು ಪರದೆ, ಪ್ಲಾಸ್ಟಿಕ್ ಹೊದಿಕೆ ಹಾರಿಹೋಗಿದ್ದು, ನೀರಿನಂಶದಿಂದ ಕಪ್ಪು ಬಣ್ಣಕ್ಕೆ ತಿರುಗಿದೆ. ಒಣದ್ರಾಕ್ಷಿ ತಯಾರಿಕೆ ಪ್ರಕ್ರಿಯೆಯಲ್ಲಿದ್ದ ಅಂದಾಜು 150-170 ಟನ್ ದ್ರಾಕ್ಷಿ ಗುಣಮಟ್ಟ ಕಳೆದುಕೊಂಡಿದೆ.

ಜಿಲ್ಲೆಯಲ್ಲಿ 2008ರಿಂದ ಈ ವರೆಗೆ ದ್ರಾಕ್ಷಿ ಋುತುಮಾನದಲ್ಲಿ 4 ಬಾರಿ ಅಕಾಲಿಕ ಮಳೆ ಸುರಿದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಧಾವಿಸಬೇಕು. ಬೆಳೆಸಾಲ, ಬಡ್ಡಿ ಮನ್ನಾ ಮಾಡಬೇಕೆಂದು ಬೆಳೆಗಾರರು ಅನೇಕ ಸಲ ಸರಕಾರಗಳಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಈಗ ಮತ್ತೆ ಆಲಿಕಲ್ಲು ಮಳೆ ದ್ರಾಕ್ಷಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಸರಕಾರದ ಪರಿಹಾರ ನೀಡದೇ ಬೇರೆ ದಾರಿ ಇಲ್ಲ ಎಂದು ರೈತರು ಕಣ್ಣೀರಿಟ್ಟಿದ್ದಾರೆ.

ಗಾಳಿ, ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ದ್ರಾಕ್ಷಿ ಹಾನಿಯಾಗಿದೆ. ನಮ್ಮ ಜಮೀನಿನಲ್ಲಿದ್ದ 20 ಟನ್ ರಫ್ತು ಗುಣಮಟ್ಟದ ತಾಜಾ ದ್ರಾಕ್ಷಿ ಮಾರುಕಟ್ಟೆಗೆ ಹೋಗಿದೆ. ಉಳಿದ 80 ಟನ್ ದ್ರಾಕ್ಷಿಗೆ 55 ರೂ. ಕೆಜಿ ದರದಂತೆ ಮಾರಲು ಒಪ್ಪಂದವಾಗಿತ್ತು. ಅಕಾಲಿಕ ಮಳೆಯಿಂದ ಹಣ್ಣು ನೆಲಕ್ಕುರುಳಿದೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.
-ಬಬನ್ ಭುಜಗೊಂಡ ಪಾಟೀಲ, ದ್ರಾಕ್ಷಿ ಬೆಳೆಗಾರ, ತಿಕೋಟಾ

ವಿದೇಶಕ್ಕೆ ರಫ್ತು ಮಾಡಲು ದ್ರಾಕ್ಷಿ ಕಟಾವು ಆರಂಭಿಸಲಾಗಿತ್ತು. 1 ಕಂಟೇನರ್ ದ್ರಾಕ್ಷಿ ಕಳುಹಿಸಲಾಗಿತ್ತು. ಆದರೆ ಶನಿವಾರ ಸಂಜೆ ಬಿರುಗಾಳಿ, ಆಲಿಕಲ್ಲು ಮಳೆ ಸುರಿದು ಗಿಡದಲ್ಲಿದ್ದ ಶೇ.90ರಷ್ಟು ದ್ರಾಕ್ಷಿ ಹಣ್ಣು ಒಡೆದು ಕೊಳೆಯಲಾರಾಂಭಿಸಿದೆ.
-ರಾಜಕುಮಾರ ಬನಪ್ಪ ಮೇತ್ರಿ, ರೈತ

ರೈತರು ಹೈಟೆಕ್ ಸಾಲ ಮಾಡಿ ದ್ರಾಕ್ಷಿ ಬೆಳೆದು ಮಾರುಕಟ್ಟೆಗೆ ಕಳುಹಿಸುವ ಹಂತದಲ್ಲಿ ಅಕಾಲಿಕ ಆಲಿಕಲ್ಲು ಮಳೆ ಸುರಿದು ತುಂಬಾ ಹಾನಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ನೆರವಿಗೆ ತಕ್ಷಣ ಧಾವಿಸಬೇಕು.
-ಅಭಯಕುಮಾರ ನಾಂದ್ರೇಕರ, ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ

• ಅಂದಾಜು 480 ಟನ್ ದ್ರಾಕ್ಷಿಗೆ ಹಾನಿ
• 450 ಕೋಟಿ ರೂ. ನಷ್ಟ
• ವಿದೇಶಕ್ಕೆ ಹೋಗುವ ಬದಲು ತಿಪ್ಪೆಗೆ


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.