ಚಿಗುರಿನಲ್ಲೇ ಕೃಷಿ ಪಾಠ!!

January 31, 2018 ⊄   By: Hasiru Suddimane

ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆ ಜತೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಅನೇಕ ಶಾಲೆಗಳು ನಡೆಸುತ್ತಾ ಬಂದಿದ್ದಾರೆ. ಇದರಿಂದ ವ್ಯವಸಾಯ, ಬೇಸಾಯ, ತೋಟಗಾರಿಕೆಗಳ ಬಗ್ಗೆ ಬಾಲ್ಯದಿಂದಲೇ ಮಕ್ಕಳಿಗೆ ತಿಳಿಸಿ ಹೇಳುವುದರಿಂದ ರೈತರ ಸಮಸ್ಯೆಗಳು, ತರಕಾರಿ, ಹಣ್ಣು, ಕೃಷಿ ವಿಧಾನದ ಬಗ್ಗೆ ನೇರವಾಗಿ ತಿಳಿಯುವುದಕ್ಕೆ ಸಾಧ್ಯವಾಗುತ್ತಿದೆ. ಇಂತಹ ಕಾರ್ಯವನ್ನು ಪ್ರಾಥಮಿಕ ಹಂತದಿಂದಲೇ ಪ್ರಾಯೋಗಿಕವಾಗಿ ನೀಡುತ್ತಿದೆ ಚೆನ್ನಪಟ್ಟಣದ ಬಾಲು ಪಬ್ಲಿಕ್ ಶಾಲೆ.

ಕೃಷಿ ವಿಧಾನಗಳ ಬಗ್ಗೆ ಸಮಗ್ರವಾಗಿ ಕಲಿಯುವ ಅವಕಾಶ ಮಕ್ಕಳಿಗೆ ಪದವಿ ಹಂತದಲ್ಲಿ ಸಿಗುತ್ತದೆ. ಆದರೆ ಈ ಶಾಲೆಯು ಮಕ್ಕಳನ್ನು ಸ್ವತಃ ಸಾವಯವ ಕೃಷಿಯಲ್ಲಿ ತೊಡಗಿಸುವ ಮೂಲಕ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಜೊತೆಗೆ ಮಕ್ಕಳಿಗೆ ಸೊಪ್ಪು, ತರಕಾರಿ ಎಲ್ಲಿಂದ, ಹೇಗೆ ಬರುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲು ಮುಂದಾಗಿದೆ.

ಶಾಲೆಯ ಮೇಲ್ಭಾಗದ ತಾರಸಿಯಲ್ಲಿ ಸೊಪ್ಪು, ತರಕಾರಿಗಳನ್ನು ಸಂಪೂರ್ಣ ಸಾವಯವ ವಿಧಾನದ ಮೂಲಕ, ಮಕ್ಕಳಿಂದಲೇ ಬೆಳೆಸಲಾಗುತ್ತಿದೆ. ಅವರಿಂದಲೇ ಕಟಾವು ಮಾಡಿಸಿ, ಆ ಫಸಲನ್ನು ಆಯಾ ಮಕ್ಕಳಿಗೇ ನೀಡಿ ಅಡುಗೆ ತಯಾರಿಸಿಕೊಂಡು ಬಂದು ಶಾಲೆಯಲ್ಲಿ ಸವಿಯುವ ಅವಕಾಶವನ್ನು ಶಾಲೆ ನೀಡಿದೆ. ಇಲ್ಲಿ ಕೇವಲ ಸೊಪ್ಪು, ತರಕಾರಿಗಳನ್ನು ಅಡುಗೆಗೆ ಬಳಸುವುದಷ್ಟೇ ಅಲ್ಲ. ಅವುಗಳನ್ನು ಸಾವಯವ ವಿಧಾನದಲ್ಲಿ ಬೆಳೆಸುವುದು ಹೇಗೆ ಎಂಬುದನ್ನು ಮಕ್ಕಳು ಸ್ವತಃ ಕಲಿಯುತ್ತಿದ್ದಾರೆ.

ಕೃಷಿ ವಿಭಾಗ: ಕೃಷಿ ತರಗತಿಗಾಗಿಯೇ ಶಾಲೆಯಲ್ಲಿ ಪ್ರತ್ಯೇಕವಾಗಿ ಒಂದು ವಿಭಾಗವನ್ನು ನಿರ್ಮಿಸಲಾಗಿದೆ. ಅದಕ್ಕೆ ಸಾವಯವ ಕೃಷಿ ವಿಭಾಗ ಎಂದು ನಾಮಕರಣ ಮಾಡಲಾಗಿದೆ. ಸೊಪ್ಪು, ತರಕಾರಿ ಬೆಳೆಯಲು ಅಗತ್ಯವಿರುವ ಬಾಕ್ಸ್ ಗಳು, ಸಾವಯವ ಗೊಬ್ಬರ, ನೀರುಣಿಸಲು, ಕಳೆ ತೆಗೆಯಲು ಪರಿಕರಗಳನ್ನು ಬಳಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ಮಕ್ಕಳಿಗೆ ಹಾಕಿರುವ ಬೆಳೆಯನ್ನು ಪೋಷಿಸುವ ಜವಾಬ್ದಾರಿ ಹೊರಿಸಲಾಗಿದೆ ಎಂದು ಇದರ ಉಸ್ತುವಾರಿ ಹೊತ್ತಿರುವ ಶಾಲೆಯ ಸಂಪರ್ಕ ಅಧಿಕಾರಿ ಬಾಲಕೃಷ್ಣ ತಿಳಿಸುತ್ತಾರೆ.

ಸರ್ಕಾರೇತರ ಸಂಸ್ಥೆಯೊಂದಕ್ಕೆ ಬೆಳೆಯ ಪ್ರತಿ ಹಂತವನ್ನೂ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವನ್ನು ವಹಿಸಲಾಗಿದೆ. ಈ ಸಂಸ್ಥೆಯ ಪದಾಧಿಕಾರಿಗಳು ಪ್ರತಿ ಹಂತವನ್ನು ಮಕ್ಕಳಿಗೆ ತೋಟದಲ್ಲಿಯೇ ತಿಳಿಸಿಕೊಡುತ್ತಾರೆ. ಪ್ರತಿದಿನ ಬೆಳಿಗ್ಗೆ ಶಾಲೆಗೆ ಬಂದ ತಕ್ಷಣ ಮಕ್ಕಳು ತೋಟಕ್ಕೆ ಭೇಟಿ ನೀಡಿ ನೀರು ಹಾಕುವುದು ಸೇರಿದಂತೆ ಗಿಡಗಳ ಬೆಳವಣಿಗೆ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಪ್ರತಿ ತರಗತಿಯಲ್ಲಿ ಕೃಷಿ ವಿಭಾಗಕ್ಕಾಗಿ ಪ್ರತ್ಯೇಕ ಸಮಯ ಮೀಸಲಿರಿಸಲಾಗಿದೆ ಎಂದು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಬಾನಾ ಬೇಗಂ ತಿಳಿಸುತ್ತಾರೆ.
ಸಾವಯವ ಬಗ್ಗೆ ಅರಿವು: ರೈತರು ರಾಸಾಯನಿಕ ಕೃಷಿಗೆ ಹೆಚ್ಚು ವಾಲಿಕೊಂಡಿರುವ ಈ ದಿನಗಳಲ್ಲಿ ಮಕ್ಕಳಿಗೆ ಸಾವಯವ ಕೃಷಿಯ ಬಗ್ಗೆ ತಿಳಿಸಿಕೊಟ್ಟು ಅವರಲ್ಲಿ ಸಾವಯವ ಉತ್ಪನ್ನಗಳನ್ನು ಬಳಕೆ ಬಗ್ಗೆ ಅರಿವು ಮೂಡಿಸುವುದು ಶಾಲೆಯ ಇನ್ನೊಂದು ಉದ್ದೇಶ ಎನ್ನುತ್ತಾರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮೆಹರ್ ಸುಲ್ತಾನ ತಿಳಿಸುತ್ತಾರೆ.

ಮಕ್ಕಳಿಗೆ ರಾಸಾಯನಿಕ ಗೊಬ್ಬರ ಬಳಸಿ ಬೆಳೆದ ಬೆಳೆಗಳು ಹಾಗೂ ಸಾವಯವ ರೀತಿಯಲ್ಲಿ ಬೆಳೆದ ಬೆಳೆಗಳ ನಡುವಿನ ವ್ಯತ್ಯಾಸ ತಿಳಿಸಿಕೊಡಲಾಗುತ್ತಿದೆ. ರಾಸಾಯನಿಕ ಬಳಸಿ ಬೆಳೆದ ಬೆಳೆಗಳು ದೇಹಕ್ಕೆ ಯಾವ ರೀತಿಯಲ್ಲಿ ಮಾರಕವಾಗುತ್ತವೆ. ಸಾವಯವ ವಿಧಾನದಲ್ಲಿ ಬೆಳೆದ ಬೆಳೆಗಳನ್ನು ಬಳಸಿದರೆ ಎಷ್ಟು ಅನುಕೂಲ ಎಂಬುದನ್ನು ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡುತ್ತಿದ್ದಾರೆ ಎಂದು ಅವರು ವಿವರಿಸುತ್ತಾರೆ.

ರೈತರು ಕೃಷಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳು, ಬೆಳೆಗಳಿಗೆ ಬರುವ ರೋಗಗಳು, ಅದನ್ನು ನಿಯಂತ್ರಣ ಮಾಡುವ ಬಗ್ಗೆ, ಪ್ರಮುಖವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣಗಳನ್ನೂ ಇಲ್ಲಿ ತಿಳಿಸಿಕೊಡಲಾಗುತ್ತಿದೆ ಎಂದು ಶಾಲೆಯ ಶಿಕ್ಷಕ ಅಕ್ಕೂರು ರಮೇಶ್ ಹೇಳುತ್ತಾರೆ.

ಚಿಕ್ಕ ಮಕ್ಕಳಿಗೆ ಸೊಪ್ಪು, ತರಕಾರಿ ಬೆಳೆಗಳನ್ನು ಬೆಳೆಯುವ ಬಗೆಯನ್ನು ಪ್ರಾಯೋಗಿಕವಾಗಿ ಹೇಳಿಕೊಡುತ್ತಿರುವ ಶಾಲೆ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ. ಇಂತಹ ವಿನೂತನ ಕಾರ್ಯಕ್ರಮಗಳನ್ನು ಎಲ್ಲ ಶಾಲೆಗಳೂ ಅಳವಡಿಸಿಕೊಂಡರೆ ಎಲ್ಲ ಮಕ್ಕಳಿಗೂ ಕೃಷಿ ಬಗ್ಗೆ ಪ್ರಾಥಮಿಕ ಹಂತದಲ್ಲಿ ತಿಳಿದುಕೊಳ್ಳಲು ಅವಕಾಶ ಸಿಗಲಿದೆ ಎಂಬುದು ಶಾಲೆಯ ಪೋಷಕರ ಅಭಿಪ್ರಾಯವಾಗಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.