ತೊಗರಿ ಖರೀದಿ ಸ್ಥಗಿತ ರಾಶಿಯಾಗೆ ಉಳಿದ ತೊಗರಿ

February 09, 2018 ⊄   By: Hasiru Suddimane

ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿದಿದ್ದು, ಸರಕಾರದ ಖರೀದಿ ಕೇಂದ್ರಗಳು ಬಂದ್ ಆಗಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೆಲವೆಡೆ ತೊಗರಿ ರಾಶಿಯಾಗಿ ಮಾರಾಟವಾಗಿದ್ದರೆ, ಮಾರಾಟವಾಗದೇ ಇರುವ ತೊಗರಿ ಭಾರಿ ಪ್ರಮಾಣದಲ್ಲಿದೆ. ಇನ್ನೂ ಕೆಲವೆಡೆ ರಾಶಿಯಾಗುತ್ತಿದೆ. ಈ ರೈತರು ತೊಗರಿ ಮಾರುಕಟ್ಟೆಗೆ ತರುವ ಮುನ್ನವೇ ಖರೀದಿ ಕೇಂದ್ರ ಬಂದ್ ಆಗಿರುವುದು ಗಾಬರಿ ಹೆಚ್ಚಾಗಿದೆ.

ತೊಗರಿ ಕಣಜ ಕಲಬುರಗಿಯಲ್ಲಿ ಈಗ ಆತಂಕ ಹೆಚ್ಚಾಗಿದೆ. ಭಾರಿ ಪ್ರಮಾಣದ ತೊಗರಿ ಖರೀದಿ ಬಾಕಿ ಇರುವಾಗಲೇ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಅಡಿ ತೊಗರಿ ಖರೀದಿಸುವುದನ್ನು ಸರಕಾರ ಸ್ಥಗಿತಗೊಳಿಸಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ಪಾತಾಳಕ್ಕಿಳಿದ ದರ

ಜಿಲ್ಲೆಯಲ್ಲಿ 2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 3.28 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆಯಾಗಿದೆ. ಇದರ ಪ್ರಕಾರ 35ರಿಂದ 40 ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆ ನಿರೀಕ್ಷಿಸಲಾಗಿದೆ. ಬೆಳೆ ಮಾರುಕಟ್ಟೆಗೆ ಬರುವ ಮುನ್ನವೇ ತೊಗರಿ ಬೆಲೆ ಪಾತಾಳಕ್ಕೆ ಇಳಿದಿದೆ. ಮಾರುಕಟ್ಟೆಯಲ್ಲಿ ಈಗ ಕ್ವಿಂಟಾಲ್ ತೊಗರಿಗೆ 3 -4 ಸಾವಿರ ರೂ.ಗಳಿದೆ. ಇದರಿಂದ ರೈತರಿಗೆ ಅನ್ಯಾಯ ಆಗುತ್ತಿರುವುದನ್ನ ಮನಗಂಡು ಬೆಲೆ ಸ್ಥಿರೀಕರಣಕ್ಕಾಗಿ ಕ್ವಿಂಟಾಲ್ ತೊಗರಿಗೆ ಕೇಂದ್ರ ಸರಕಾರದ 5450 ರೂ, ರಾಜ್ಯದ ಪ್ರೋತ್ಸಾಹ ಧನ 550 ರೂ. ಸೇರಿ ಒಟ್ಟು 6 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.

ಖರೀದಿ ಸ್ಥಗಿತ ಯಾಕೆ?

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ 2017ರ ಡಿಸೆಂಬರ್ 12ರಿಂದ 90 ದಿನಗಳವರೆಗೆ ಖರೀದಿಸಲು ಸರಕಾರ ಅನುಮತಿ ನೀಡಿತ್ತು. ಆದರೆ ಇದನ್ನು 16,57,500 ಮೆಟ್ರಿಕ್ ಟನ್ ತೊಗರಿ ಖರೀದಿಸುವ ಮಿತಿ ವಿಧಿಸಲಾಗಿತ್ತು. ಈಗ ಈ ಮಿತಿ ತಲುಪಿದ್ದರಿಂದ ಖರೀದಿ ಸ್ಥಗಿತಗೊಳಿಸಲಾಗಿದೆ. ಮಿತಿ ವಿಸ್ತರಿಸುವಂತೆ ಎಲ್ಲೆಡೆ ರೈತರಿಂದ ಒತ್ತಡ ಕೇಳಿ ರುತ್ತಿದೆ. ಕಲಬುರಗಿ, ವಿಜಯಪುರ, ಯಾದಗರಿ, ಬಾಗಲಕೋಟೆ, ಬೀದರ್, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಿಗದಿತ ಪ್ರಮಾಣದ ತೊಗರಿ ಖರೀದಿ ಮಾಡಿದ್ದರಿಂದ ಈಗ ಖರೀದಿ ಕೇಂದ್ರಗಳನ್ನು ಮುಚ್ಚಲಾಗಿದೆ.

ಕೇಂದ್ರ ಸರಕಾರ 16,57,500 ಕ್ವಿಂಟಾಲ್ ತೊಗರಿ ಮಾತ್ರ ಖರೀದಿಸುವಂತೆ ಮಿತಿ ಹೇರಿತ್ತು. ಇದು ಮಿತಿ ಈಗ ತಲುಪಿದ್ದರಿಂದ ತೊಗರಿ ಖರೀದಿ ತಾತ್ಕಾಲಿಕ ಸ್ಥಗತಿಗೊಳಿಸಲಾಗಿದ್ದು, ಬಾಕಿ ಉಳಿದಿರುವ ತೊಗರಿ ಖರೀದಿಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಒತ್ತಡ ಹೇರಲಾಗಿದೆ.
-ಡಾ. ಶರಣಪ್ರಕಾಶ್ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ, ಕಲಬುರಗಿ

ತೊಗರಿ ಖರೀದಿ ಕೇಂದ್ರ ಸ್ಥಗಿತ ವಿರೋಧಿಸಿ ರೈತರಿಂದ ಬೃಹತ್ ಪ್ರತಿಭಟನೆ

ತೊಗರಿ ಖರೀದಿ ಕೇಂದ್ರ ಗುರುವಾರದಿಂದ ಖರೀದಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿರುವದನ್ನು ಖಂಡಿಸಿ ರೈತಾಪಿ ಜನರು ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ಶಹಾಪುರ-ವಿಜಯಪುರ ಮುಖ್ಯ ರಸ್ತೆ ತಡೆದು, ಟೈರ್ಗಳಿಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದರು.

ಸಾಕಷ್ಟು ರೈತರು ಇನ್ನು ತೊಗರಿ ನೀಡುವವರಿದ್ದು, ಇಂತಹ ಸಂದರ್ಭದಲ್ಲಿ ಏಕಾಏಕಿ ಖರೀದಿ ನಿಲ್ಲಿಸಿದರೆ, ತೊಗರಿ ಬೆಳೆದ ರೈತಾಪಿ ಜನರಿಗೆ ಅನ್ಯಾಯವಾಗಲಿದೆ. ಕಾರಣ ಇನ್ನೊಂದು ವಾರಗಳ ಕಾಲ ತೊಗರಿ ಖರೀದಿಗೆ ಅವಕಾಶ ಕಲ್ಪಿಸಿದರೂ ಸಮಸ್ಯೆ ನಿವಾರಣೆಯಾಗುವುದು ಕಷ್ಟ ಸಾಧ್ಯವಿದೆ. ಕಾರಣ ಸರ್ವ ರೈತರ ತೊಗರಿ ತೆಗೆದುಕೊಳ್ಳವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ಆನ್ ಲೈನ್ನಲ್ಲಿ ಎಂಟ್ರಿಯಾದ ರೈತರಿಗೆ ರಸೀದಿ ನೀಡಿರುವದಿಲ್ಲ. ಕೂಡಲೇ ರಸೀದಿ ನೀಡುವ ಮೂಲಕ ರೈತರಿಗೆ ಖಾತ್ರಿ ಪಡಿಸಬೇಕು ಎಂದರು.
ರೈತಾಪಿ ಜನರು ರಸ್ತೆಗಿಳಿದು ನೂರಾರು ಟ್ರಾಕ್ಟರ್, ಎತ್ತಿನ ಬಂಡಿಗಳನ್ನು ರಸ್ತೆಗೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಸೋಮಶೇಖರ ಅರಳಗುಂಡಿಗಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆಗ ರೈತರು ಪ್ರತಿಭಟನೆ ವಾಪಸ್ ಪಡೆದರು.

ಇದೇ ಸಂದರ್ಭದಲ್ಲಿ ಪ್ರತಿಭಟನೆಗಾರರು ಇನ್ನೆರಡು ದಿನದಲ್ಲಿ ಸಮರ್ಪಕ ವ್ಯವಸ್ಥೆಗೊಳಿಸದಿದ್ದಲ್ಲಿ ತಹಸೀಲ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಗೌತಮ ಕುಲಕರ್ಣಿ, ಶಿವಪ್ಪಗೌಡ ಪೋ.ಪಾಟೀಲ್, ಅಡಿವೆಪ್ಪ ದೊಡ್ಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.