ಗೂಡು ನೋಡು ಬಾರೆ ನನ್ನಾಕೆ..!

February 09, 2018 ⊄   By: Hasiru Suddimane

ಪ್ರಕೃತಿಯ ವಿಸ್ಮಯವೇ ಸುಂದರ. ಪಕ್ಷಿಗಳ ಅಪರೂಪವಾದ ಬದುಕು ನೋಡಿದರೆ ಯಾರಿಗೂ ಸಾಟಿಇಲ್ಲದ ಹಾಗೆ ಬಾಳ್ವೆ ನಡೆಸುತ್ತವೆ. ಅವುಗಳ ಗೂಡು ನಿರ್ಮಾಣವೇ ಅಚ್ಚರಿ ಮೂಡಿಸುತ್ತದೆ. ಜಗತ್ತಿನಲ್ಲಿ 10 ಸಾವಿರಕ್ಕೂ ಹೆಚ್ಚು ವಿವಿಧ ವರ್ಗದ ಪಕ್ಷಿಗಳಿವೆ. ಆದರೆ ಒಂದು ಹಕ್ಕಿ ಕಟ್ಟಿದಂತೆ ಇನ್ನೊಂದು ಹಕ್ಕಿ ಗೂಡನ್ನು ಕಟ್ಟುವುದಿಲ್ಲ. ಆ ಗೂಡುಗಳು 10 ಸಾವಿರ ಬಗೆಯ ಗೂಡುಗಳಾಗಿರುತ್ತವೆ. ಹಲವು ಬಗೆಯ ವಸ್ತುಗಳಿಂದ ವೈವಿಧ್ಯಮಯವಾಗಿ ಗೂಡನ್ನು ಕಟ್ಟುತ್ತವೆ. ಪಕ್ಷಿ ಶಾಸ್ತ್ರಜ್ಞರು ಗೂಡನ್ನೂ ನೋಡಿಯೇ ಅದು ಇಂತಹ ಪಕ್ಷಿಯೆಂದು ಹೇಳಿಬಿಡುತ್ತಾರೆ.

ಸುಂದರವಾಗಿ ಗೂಡು ಕಟ್ಟುವ ಪಕ್ಷಿಗಳಲ್ಲಿ ಗೀಜುಗವು ಒಂದು. ಗುಬ್ಬಿಯ ರೀತಿಯಲ್ಲೇ ಇರುವ ಈ ಹಕ್ಕಿ 15 ಸೆಂ.ಮೀ ಇರುತ್ತದೆ. ಗೂಡು ಕಟ್ಟುವಲ್ಲಿ ಗೀಜುಗನಿಗಿರುವ ಸೃಜನಶೀಲತೆಗೆ ನಾವು ತಲೆಬಾಗಲೇ ಬೇಕು. ತನ್ನ ಸಂಗಾತಿಯನ್ನು ಆಕರ್ಶಿಸಲು ಗೂಡು ಕಟ್ಟುವ ಈ ಪಕ್ಷಿಗಳು ತನ್ನದಾದ ಒಂದು ಪುಟ್ಟ ಸಂಸಾರ ನಡೆಸಲು ಪುಟ್ಟ ಗೂಡನ್ನು ಕಟ್ಟುತ್ತವೆ. ತನ್ನ ಮರಿಗಳಿಗೆ ಭವಿಷ್ಯವನ್ನು ನೀಡುವ ಯೋಜನೆ ಹೊಂದಿರುತ್ತದೆ. ಧೃಡವಾಗಿ ಕಟ್ಟಲು ಒಂದೊಂದು ಎಳೆಯೂ ಕಲಾತ್ಮಕವಾಗಿ ಬಿಗಿದು ಕೊಳ್ಳುತ್ತದೆ. ತನ್ನ ಕೊಕ್ಕಿನ ಚುಂಚಿನಲ್ಲಿ ಸಟಸಟನೆ ನೇಯುವ ಇದರ ಕಸೂತಿ ಕೆಲಸ ಯಾವುದೇ ಯಂತ್ರಕ್ಕೂ ಕಡಿಮೆ ಇಲ್ಲ ಎನ್ನುವ ಹಾಗೆ ಇರುತ್ತದೆ. ಹಾಗಾಗಿ ಈ ಹಕ್ಕಿಗೆ ನೇಕಾರ ಹಕ್ಕಿ ಎಂದು ಸಹ ಕರೆಯುತ್ತಾರೆ.
ಇದರ ಗೂಡು 30 ರಿಂದ 60 ಸೆ.ಮೀನಷ್ಟು ಉದ್ದವಿರುತ್ತದೆ. ಸಂಘ ಜೀವನ ನಡೆಸುತ್ತವೆ ಈ ಹಕ್ಕಿಗಳು.

ಗೀಜುಗನ ಕಾಲೊನಿ
ಸಾಮಾನ್ಯವಾಗಿ ಭತ್ತದ ತೆನೆ ಕಟ್ಟುವ ಸಮಯದಲ್ಲಿ ಚಿವ್.ಚಿವ್.ಚಿ…ಚಿವ್ ಎಂದು ಹಾಡಿಕೊಂಡು ಗಂಡು ಹಕ್ಕಿಗಳು ಒಟ್ಟಾಗಿ ಗೂಡು ಕಟ್ಟುತ್ತವೆ. ಜೌಗು ಪ್ರದೇಶ, ಕೃಷಿ ಭೂಮಿಗಳ ಸುತ್ತಮುತ್ತ ಜಾಲಿ-ಮುಳ್ಳುಕೊಂಬೆ, ತಾಳೆಮರದ ಎಲೆಗಳಿಗೆ ಜೋಕಾಲಿಯಂತೆ ಗೂಡುಗಳು ತೇಲಾಡುತ್ತಿರುತ್ತವೆ. ಜೊಂಡು ಹುಲ್ಲು, ತೆಂಗಿನನಾರು ಮುಂತಾದ ಕಸಕಡ್ಡಿಗಳನ್ನು ಹುಡುಕಿ ಎರಡು ಅಂತಸ್ತಿನ ಈ ಗೂಡು ಎಂಥಾ ಬಿಸಿಲು ಮಳೆಗೂ ಜಗ್ಗದೇ ಮರದ ಕೊಂಬೆಗಳಿಗೆ ಗಟ್ಟಿಯಾಗಿ ಹಿಡಿದಿರುತ್ತದೆ. ಒಂದೇ ಮರಕ್ಕೆ ಹತ್ತಾರು ಗೂಡುಗಳು ನೇತಾಡುತ್ತಾ ಅಲ್ಲಿ ಗೀಜಗನ ಕಾಲೋನಿಯೇ ನಿರ್ಮಾಣವಾಗಿರುತ್ತದೆ.

ಗೂಡುಗಳು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತುಬಿದ್ದಿರುತ್ತದೆ. ಹಾಗಾಗಿ ಕೆಳಗಿನಿಂದಲೇ ಗೂಡನ್ನು ಪ್ರವೇಶಿಸಬೇಕು. ಪ್ರವೇಶ ದ್ವಾರ ಕಿರಿದಾಗಿರುತ್ತದೆ. ಹಾವುಗಳಿಂದ ಮರಿಗಳನ್ನು ರಕ್ಷಣೆ ಮಾಡುವ ಸಲುವಾಗಿ ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಗೂಡು ಕಟ್ಟುತ್ತವೆ. ಹಸಿರಾದ ಎಳೆಗಳಿಂದ ನಿರ್ಮಾಣ ಮಾಡುತ್ತದೆ. ಅವು ಒಣಗಿದ ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಒಂದೊಂದೇ ತನ್ನ ಚುಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿ ತಂದು ಪರೀಕ್ಷಿಸಿದ ನಂತರವೇ ಗೂಡಿಗೆ ಸೇರಿಸುತ್ತದೆ. ಗಂಡು ಹಕ್ಕಿ ಗೂಡನ್ನು ಅರ್ಧನಿರ್ಮಿಸಿದ ನಂತರ ಗೂಡಿನ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದು ವೇಳೆ ಗೂಡು ಸಂಗಾತಿಗೆ ಇಷ್ಟವಾಗದಿದ್ದರೆ ಪುನಃ ಹೊಸದಾಗಿ ಗೂಡನ್ನು ಹೆಣೆಯುತ್ತದೆ. ಗೂಡು ಹೆಣ್ಣು ಹಕ್ಕಿಗೆ ಇಷ್ಟವಾದರೆ ಅದನ್ನು ಮುಂದುವರಿಸುತ್ತದೆ. ಗೂಡು ಅರ್ಧವಾಗಿದ್ದಾಗಲೇ ಹೆಣ್ಣು ಹಕ್ಕಿ ಗೂಡನ್ನು ಪ್ರವೇಶಿಸಿ ಮೊಟ್ಟೆಗಳನ್ನು ಇಡುತ್ತದೆ. ನಂತರ ಗಂಡು ಹಕ್ಕಿ ಗೂಡನ್ನು ಪ್ರವೇಶಿಸದ ಹಾಗೆ ಕೆಳಗಿನ ಬಾಯಿಯವರೆಗೆ ಗೂಡನ್ನು ಮುಚ್ಚಿಬಿಡುತ್ತದೆ. ವಿಚಿತ್ರವೆಂದರೆ ಗಂಡುಹಕ್ಕಿ ಗೂಡನ್ನು ಹೆಣೆದ ನಂತರ ಅದನ್ನು ಮರಿಗಳ ಪೋಷಣೆಗೆ ಮೀಸಲಿಟ್ಟು ತನಗಾಗಿ ಇನ್ನೊಂದು ಗೂಡನ್ನು ಹೆಣೆದುಕೊಳ್ಳುತ್ತದೆ. ಬಾಣಂತಿ ಮತ್ತು ಮರಿಗಳಿಗೆ ಆಹಾರವನ್ನು ಕಚ್ಚಿಕೊಂಡು ಬಂದು ಹೊರಗಿನಿಂದ ನೀಡುವ ಕೆಲಸವನ್ನಷ್ಟೇ ಮಾಡುತ್ತದೆ. ಗೂಡಿನಲ್ಲಿ ಮರಿಗಳನ್ನು ಬೆಳೆಸಲು ಪ್ರತ್ಯೇಕ ಕೋಣೆಯನ್ನೇ ನಿರ್ಮಿಸುತ್ತದೆ. ಕೆಲವೊಮ್ಮೆ ಗೂಡನ್ನು ಗಟ್ಟುಮುಟ್ಟುಗೊಳಿಸುವ ಸಲುವಾಗಿ ಒದ್ದೆ ಮಣ್ಣುಗಳನ್ನು ತಂದು ಅಂಟಿಸುತ್ತದೆ. ಎಲ್ಲಾ ಕಾಲಕ್ಕೂ ಹವಾನಿಂತ್ರಿತ ವ್ಯವಸ್ಥೆ ಇದರ ಗೂಡಿನಲ್ಲಿರುತ್ತದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.