ಗರುಡ ಪಕ್ಷಿಯ ಪ್ರಾಣ ಉಳಿಸಿದ ಪಕ್ಷಿಪ್ರೇಮಿ

March 13, 2018 ⊄   By: Hasiru Suddimane

ಮಾರ್ಚ್ 12 ಸಮಯವೂ 12 ಆಗಿತ್ತು. ಬಳ್ಳಾರಿ ಹಾಗೂ ಹೆಬ್ಬಾಳ ಮಾರ್ಗದ ಸ್ಯಾಂಕಿ ರಸ್ತೆಯಲ್ಲಿರುವ ಕಾವೇರಿ ಚಿತ್ರ ಮಂದಿರ ಬಳಿ ಗರುಡ ಪಕ್ಷಿಯನ್ನು ಕೈಯಲ್ಲಿ ಹಿಡಿದು ಟೀ ಕುಡಿಯುತ್ತಿದ್ದ ವ್ಯಕ್ತಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ದಾರಿಹೋಕರು ಆತನನ್ನೇ ದುರುಗುಟ್ಟಿ ನೋಡುತ್ತಿದ್ದರು. ತನಗೆ ಏನಾಗಿದೆ ಎಂದೇ ತಿಳಿಯದೇ ಆ ವ್ಯಕ್ತಿಯ ಕೈಯಲ್ಲಿ ಸಿಲುಕಿದ್ದ ಗರುಡ ಪಕ್ಷಿ ಪಿಳಿ ಪಿಳಿ ಎಂದು ಎಲ್ಲರನ್ನು ನೋಡುತ್ತ ಗಾಬರಿಗೊಂಡಿತ್ತು. ಅಲ್ಲೇ ಇದ್ದ ನಾನು ಒಮ್ಮೆ ಗಾಭರಿಯಾಯಿತು. ಇದೇನು ಈತ ಈ ಪಕ್ಷಿಯನ್ನು ಹೀಗೆ ಹಿಡಿದು ನಿಂತಿದ್ದಾನಲ್ಲ ಏನಾಗಿರಬಹುದು ಎಂದು ಆತನನ್ನು ಮಾತನಾಡಿಸಿದೆ.

ಬಿಸಿಲು ನೆತ್ತಿ ಸುಡುತ್ತಿತ್ತು. ಮೆಜೆಸ್ಟಿಕ್ ಬಳಿ ಬಿಸಿಲಿನ ಬೇಗೆಯಿಂದ ತಂತಿಗೆ ಸಿಲುಕಿ ನಿತ್ರಾಣಗೊಂಡು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಗರುಡ ಪಕ್ಷಿಯನ್ನು ದೊಡ್ಡ ಬಳ್ಳಾಪುರದ ಪಕ್ಷಿ ಪ್ರೇಮಿ ಶಿವಕುಮಾರ್ ನೀರುಣಿಸಿ ಸಂತೈಸಿ ವಾಹನ ಸಂಚಾರ ಕಡಿಮೆ ಇರುವ ಜಾಗದಲ್ಲಿ ಸ್ವಲ್ಪ ಗಿಡ-ಮರವಿರುವ ಪ್ರದೇಶದ ಹತ್ತಿರ ಅದು ಚೇತರಿಸಿಕೊಂಡ ಮೇಲೆ ಬಿಡುವುದಾಗಿ ಆ ಪಕ್ಷಿ ಪ್ರೇಮಿ ಶಿವಕುಮಾರ್ ಹೇಳಿ ಪಕ್ಷಿಯನ್ನು ಹಿಡಿದು ನಡೆದು ಹೋದ.

ದಯವಿಲ್ಲದ ಧರ್ಮ ಯಾವುದಯ್ಯ, ದಯೆಯೇ ಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ, ದಯವೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣರ ವಚನದ ಸಾಲುಗಳ ಮೂಲಾರ್ಥ. ದೊಡ್ಡ ಬಳ್ಳಾಪುರದ ಪಕ್ಷಿ ಪ್ರೇಮಿ ಶಿವಕುಮಾರ್ ಅವರನ್ನು ನೋಡಿ ಈ ಸಾಲುಗಳು ನೆನಪಿಗೆ ಬಂದವು.

ಆತನ ಕಾಳಜಿ ನೋಡಿ ನನಗೆ ಮರುಕ ಉಂಟಾಯಿತು. ನೆರೆದಿದ್ದ ಜನರೆಲ್ಲ ಸಂತಸ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಗೆ ನೀಡುವಂತೆ ಸಲಹೆ ನೀಡಿ ನಾನು ಕೂಡ ಕೆಲಸದ ದಾರಿ ಹಿಡಿದೆ. ಬೇಸಿಗೆ ಶುರುವಾಯಿತೆಂದರೆ ಬಿಸಿಲ ಬೇಗೆಗೆ ಸಕಲ ಜೀವಿಗಳೆಲ್ಲ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಏಪ್ರಿಲ್, ಮೇ ವೇಳೆಗೆ ಬಿಸಿಲಿನ ಕಾವು ಹೆಚ್ಚಾಗಲಿದೆ. ದಯವಿಟ್ಟು ನಿಮ್ಮ ಮನೆಯ ಮೇಲೆ ಮಡಿಕೆ ಅಥವಾ ಬಟ್ಟಲುಗಳಲ್ಲಿ ನೀರನ್ನು ಇಡಿ. ಪಕ್ಷಿ, ಪ್ರಾಣಿ ಸಂಕುಲದ ಉಳುವಿಗಾಗಿ ಅವುಗಳ ರಕ್ಷಣೆಗಾಗಿ ನಾವು ಕೂಡ ಜಾಗೃತರಾಗೋಣ. ನಮ್ಮ ಮುಂದಿನ ಪೀಳಿಗೆಯವರಿಗೂ ಪಕ್ಷಿ, ಪ್ರಾಣಿ ನೋಡುವ ಭಾಗ್ಯ ಸಿಗಲಿ.

ಗರುಡ ಪಕ್ಷಿಯ ಬಗ್ಗೆ …

ಸುಮಾರು 48 ಸೆಂ.ಮೀ. ಉದ್ದದ ಸುಂದರವಾದ ಹಕ್ಕಿಯಿದು. ತಲೆ, ಕುತ್ತಿಗೆ, ಎದೆ, ಮತ್ತು ಬೆನ್ನಿನ ಮುಂಭಾಗಗಳು ಬಿಳುಪು. ದೇಹದ ಉಳಿದ ಭಾಗ ಕೆಂಪು ಮಿಶ್ರಿತವಾದ ಕಂದು. ಈ ಕೆಂಪು ಮಿಶ್ರಿತ ಕಂದು ಬಣ್ಣವೇ ಇದಕ್ಕೆ ಇಂಗ್ಲಿಷ್ ಹೆಸರಿನ ಪೂರ್ವಪದ ಬ್ರಾಹ್ಮಿನಿಯನ್ನು ತಂದುಕೊಟ್ಟಿದೆ. ನಮ್ಮಲ್ಲಿ ಬ್ರಾಹ್ಮಣಿ ಮೈನಾ, ಬ್ರಾಹ್ಮಿಣಿ ಬಾತುವೂ ಇವೆ. ಹೊರನೋಟಕ್ಕೆ ಗಂಡು ಹೆಣ್ಣುಗಳು ಒಂದೇ ಬಗೆ.ಗರುಡ ಸಾಮಾನ್ಯವಾಗಿ ನದಿ, ಕೊಳ, ಝರಿ, ಸಮುದ್ರ ತೀರ, ನೀರು ತುಂಬಿದ ಗದ್ದೆಗಳು, ಬಂದರು, ಅಣೆಕಟ್ಟುಗಳಿರುವ ಪ್ರದೇಶಗಳಲ್ಲಿ ಒಂಟೊಂಟಿಯಾಗಿ ಕಂಡು ಬರುತ್ತವೆ. ಹದ್ದಿನ ಕೊಕ್ಕಿನಂತೆ ಇದರ ಕೊಕ್ಕೂ ಬಲವಾಗಿದ್ದು ಬಾಗಿದೆ. ಅಂಚು ಬಲು ಹರಿತ. ಕೊಕ್ಕಿನ ಬಣ್ಣ ನಸುನೀಲಿ. ಮೇಲುಕೊಕ್ಕಿನ ಬುಡಭಾಗದಲ್ಲಿ ಸೆರೆ ಎಂಬ ಹಳದಿ ಬಣ್ಣದ ರಚನೆಯಿದೆ.ಇದರ ಬಳಿ ಅಗಲ ಹಾಗೂ ದುಂಡಗಿನ ಮೂಗಿನ ಹೊಳ್ಳೆಗಳಿವೆ. ಕಣ್ಣಿನ ವರ್ಣಪಟಲ ಕಂದು ಅಥವಾ ಹಳದಿಮಿಶ್ರಿತವಾದ ಕಂದು ಬಣ್ಣದ್ದು. ದೃಷ್ಟಿ ಬಲು ಸೂಕ್ಷ್ಮ. ರೆಕ್ಕೆಗಳು ಅತ್ಯಂತ ಬಲಯುತವಾಗಿದ್ದು ತುಂಬ ಉದ್ದವಾಗಿ ಬಾಲದ ತುದಿಯವರೆಗೂ ಚಾಚಿವೆ. ಹರಡಿದಾಗ ಒಂದೊಂದು ರೆಕ್ಕೆಯೂ 38-39 ಸೆಂಮೀ ಅಗಲವಿರುತ್ತದೆ. ಬಾಲ ಕೂಡ ಉದ್ದ ಮತ್ತು ದುಂಡು.ಕಾಲು ಮತ್ತು ಪಾದಗಳು ಬೂದು ಮಿಶ್ರಿತ ಇಲ್ಲವೆ ಹಸಿರು ಮಿಶ್ರಿತವಾದ ಹಳದಿಬಣ್ಣದಿಂದ ಕೂಡಿವೆ. ಕಾಲಿನ ಮೇಲ್ಭಾಗ ಗರಿಗಳಿಂದ ಮುಚ್ಚಿದ್ದು ತಳಭಾಗ ಬೋಳಾಗಿದೆ. ತಳಭಾಗದಲ್ಲೂ ಮತ್ತು ಬೆರಳುಗಳ ಮೇಲೂ ಶಲ್ಕೆಗಳಿವೆ. ಉಗುರುಗಳು ಕಪ್ಪು; ಬೇಟೆ ಹಿಡಿಯಲು ಅನುಕೂಲವಾಗುವಂತೆ ಬಾಗಿವೆ, ಬಲಯುತವಾಗಿವೆ. ಅಂಗಾಲಿನಲ್ಲಿ ಮುಳ್ಳುಮಯವಾದ ಸಣ್ಣಸಣ್ಣ ಶಲ್ಕೆಗಳಿವೆ. ಗರುಡಪಕ್ಷಿಯ ಧ್ವನಿ ತೀಕ್ಷ್ಣವಾದ ಸಿಳ್ಳಿನಂತಿದೆ.

ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.