ಅಲರ್ಟ್ ಅಲರ್ಟ್:ಸಿಡಿಲು-ಗುಡುಗು ಮುನ್ಸೂಚನೆಗೆ ಆ್ಯಪ್

April 12, 2018 ⊄   By: Hasiru Suddimane

ಮಳೆಯೊಡನೆ ಗುಡುಗು-ಸಿಡಲು-ಮಿಂಚು ಬಂದಾಗ ಆಕಸ್ಮಿಕವಾಗಿ ಸಾವು-ನೋವಿಗೆ ಕಾರಣವಾಗುತ್ತಿದೆ. ಮಳೆಯ ಮುನ್ಸೂಚನೆಯಂತೆ ಸಿಡಿಲಿನ ಮುನ್ಸೂಚನೆಯೂ ರಾಜ್ಯದ ಜನತೆಗಿನ್ನು ಕೈಬೆರಳ ತುದಿಯಲ್ಲೇ ಸಿಗಲಿದೆ. ಸಾಕಷ್ಟು ಪ್ರಾಣ ಹಾನಿಗೆ ಕಾರಣವಾಗುವ ಸಿಡಿಲಿನ ಅವಘಡ ತಡೆಯಲು ಕಂದಾಯ ಇಲಾಖೆ ಸಹಯೋಗದಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ ಎನ್ ಡಿಎಂಸಿ) ಹೊಸ ಮೊಬೈಲ್ ಆ್ಯಪ್ ಆವಿಷ್ಕರಿಸಿದೆ. ಶುಕ್ರವಾರ (ಏ.12ಕ್ಕೆ) ಸಂಜೆ ವಿಧಾನಸೌಧದಲ್ಲಿ ‘ಸಿಡಿಲು’ ಹೆಸರಿನ ಈ ಮೊಬೈಲ್ ಆ್ಯಪ್ ಉದ್ಘಾಟನೆಯಾಗಲಿದೆ.

ರಾಜ್ಯದ 10-12 ಜಾಗದಲ್ಲಿ ಸಿಡಿಲು ಮುನ್ಸೂಚನೆ ಸೆನ್ಸರ್ ಅಳವಡಿಕೆಯಾಗಿದೆ. ಸಿಡಿಲಿನಬ್ಬರ ಪ್ರಾರಂಭವಾಗುವ ಅರ್ಧದಿಂದ ಒಂದು ಗಂಟೆ ಮುಂಚಿತವಾಗಿ ಮಾಹಿತಿ ಕೆಎಸ್ ಎನ್ ಡಿಎಂಸಿಗೆ ತಲುಪಲಿದೆ. ನಂತರದಲ್ಲಿ ಮಾಹಿತಿಯನ್ನು ಆ್ಯಪ್ ಗೆ ಅಪ್ ಲೋಡ್ ಮಾಡಲಾಗುತ್ತಿದೆ.

ಜಿಪಿಎಸ್ ಮೂಲಕ ಆ್ಯಪ್ ಬಳಕೆದಾರರು ಇರುವ ಪ್ರದೇಶ ಗುರುತಿಸಿ ಆ್ಯಪ್ ಸಿಡಿಲಿನ ಮುನ್ಸೂಚನೆ ನೀಡುತ್ತಿದೆ. ಇದಕ್ಕಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ನಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ನಂತರ ಬರುವ ಒನ್ ಟೈಂ ಪಾಸ್ ವರ್ಡ್ (ಒಟಿಪಿ) ಬಳಸಿ ಲಾಗ್ ಇನ್ ಆಗಬೇಕು. ಮುಂದೆ ಆ್ಯಪ್ ಸ್ವತಃ ಮೊಬೈಲ್ ಇರುವ ಸ್ಥಳಕ್ಕೆ ಅನುಗುಣವಾಗಿ ಎಚ್ಚರಿಕೆ ಸಂದೇಶ ನೀಡುತ್ತದೆ.

ಮುಂಜಾಗ್ರತಾ ಕ್ರಮ, ಸಿಡಿಲು ಬಡಿದು ತೀವ್ರ ಅಸ್ವಸ್ಥರಾದವರಿಗೆ ಅನುಸರಿಸಬೇಕಾದ ವೈದ್ಯಕೀಯ ಕ್ರಮಗಳನ್ನೂ ಆ್ಯಪ್ ನಲ್ಲಿ ಅಳವಡಿಸಲಾಗಿದೆ. ಸಿಡಿಲಿನಿಂದಾಗಿ ಹೆಚ್ಚು ಗ್ರಾಮೀಣ ಜನರೇ ಮೃತಪಡುತ್ತಾರೆ. ಈ ಹಿನ್ನೆಲೆಯಲ್ಲಿ ಪಂಚಾಯತಿ ಮಟ್ಟಕ್ಕೆ ಪಿಡಿಒ ಮೂಲಕ ಆ್ಯಪ್ ಮಾಹಿತಿ ತಲುಪಿಸಲಾಗುವುದು. ರೈತ ಮಿತ್ರದಲ್ಲಿ ನೋಂದಣಿಯಾಗಿರುವ ರೈತ ಮೊಬೈಲ್ ಸಂಖ್ಯೆಗಳಿಗೂ ಎಚ್ಚರಿಕೆ ಸಂದೇಶ ಕಳುಹಿಸುವ ಚಿಂತನೆಯನ್ನು ಕೆಎಸ್ ಎನ್ ಡಿಎಂಸಿ ಹೊಂದಿದೆ.

ಸಾವಿನ ಸಂಖ್ಯೆ ಹೆಚ್ಚಳ
ಪ್ರತಿ ವರ್ಷ ರಾಜ್ಯದಲ್ಲಿ ಗುಡುಗು, ಸಿಡಿಲಿನ ದಾಳಿಗೆ ಕನಿಷ್ಠ 70ರಿಂದ 80 ಮಂದಿ ಸಾಯುತ್ತಿದ್ದಾರೆ. ಪ್ರತಿವರ್ಷ ಭಾರತದಲ್ಲಿ ಸುಮಾರು 1755 ಮಂದಿ ಸಿಡಿಲಿನಿಂದಾಗಿ ಮರಣ ಹೊಂದುತ್ತಿದ್ದಾರೆ. ಇದು ಪ್ರಾಕೃತಿಕ ವಿಕೋಪಗಳ ಸಂಖ್ಯೆಗಿಂತ ಹೆಚ್ಚು. 1967ರಿಂದ 2012ರ ಅವಧಿಯಲ್ಲಿ, ಪ್ರಾಕೃತಿಕ ವಿಕೋಪದಲ್ಲಿ ಸತ್ತವರ ಸಂಖ್ಯೆಯ ಶೇ.39ರಷ್ಟು ಗುಡುಗು-ಸಿಡಿಲು ಪಾಲಾಗಿದೆ. 2013ರಲ್ಲಿ 2,833 ಮಂದಿ, 2014ರಲ್ಲಿ 2,582 ಮಂದಿ ಸಿಡಿಲಿಗೆ ಸತ್ತಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಹೇಳುತ್ತದೆ. ಈ ಸಾವು-ನೋವು ಕಡಿಮೆಗೊಳಿಸುವ ಉದ್ದೇಶದಿಂದ ಮೊಬೈಲ್ ಆ್ಯಪ್ ತರಲಾಗುತ್ತಿದೆ.

45 ನಿಮಿಷ ಮುನ್ನ ಎಚ್ಚರಿಕೆ
ಆ್ಯಪ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಸೆನ್ಸರ್ ಸ್ಟೇಷನ್ನಿಂದ ಮಳೆಯ, ಸಿಡಿಲು-ಗುಡುಗು ಬಗ್ಗೆ ಮುನ್ಸೂಚನೆ ಬರುತ್ತದೆ. ಸಾಮಾನ್ಯವಾಗಿ 30ರಿಂದ 45 ನಿಮಿಷ ಮೊದಲೇ ಈ ಬಗ್ಗೆ ಮುನ್ಸೂಚನೆ ಬರುವುದರಿಂದ ಅವಘಡಗಳನ್ನು ತಪ್ಪಿಸಲು ಸಾಧ್ಯ. ಸಂಬಂಧಪಟ್ಟ ಪ್ರದೇಶದ ರೈತರಿಗೆ ಮುನ್ಸೂಚನೆ ನೀಡಿ ಅಲ್ಲಿಂದ ತೆರವು ಮಾಡುವಂತೆ ಸೂಚನೆ ನೀಡಲಾಗುತ್ತದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.