Hasiruvasi magazine is a repository of knowledge and information. Subscribe Now. Subscribe

ಟೆಸ್ಟ್ ಟ್ಯೂಬ್ 'ಸಿಂಹ'ದ ಮರಿಗಳಿವು
ಮಕ್ಕಳಿಲ್ಲದವರಿಗೆ ಕೃತಕ ಗರ್ಭಧಾರಣೆಯ ಮೂಲಕ ಮಗು ಪಡೆಯುವ ಬಗ್ಗೆ ನೀವು ಕೇಳಿದ್ದೀರಿ. ಇದೇ ಮಾದರಿಯಲ್ಲಿ ಪ್ರಾಣಿಗಳಿಗು ಸಹ ಕೃತಕ ಗರ್ಭಧಾರಣೆ ಮಾಡಿಸಿ ಮರಿ ಜನಿಸಿರುವ ಬಗ್ಗೆ ನೀವು ಕೇಳಿದ್ದೀರಾ?
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿರುವ ಸಂರಕ್ಷಿತಾರಣ್ಯದಲ್ಲಿ ಎರಡು ಮುದ್ದಾದ ಸಿಂಹದ ಮರಿಗಳು ಜನಿಸಿವೆ. ಇವು ನೋಡುವುದಕ್ಕೆ ಬಲು ಮುದ್ದು. ಇವು ಅಂತಿಂತ ಸಿಂಹದ ಮರಿಗಳಲ್ಲ ವಿಶ್ವದಲ್ಲೇ ಕೃತಕ ಗರ್ಭಧಾರಣೆ ಮೂಲಕ ಜನಿಸಿರೋ ಮೊಟ್ಟ ಮೊದಲ ಸಿಂಹದ ಮರಿಗಳಿವು. ಹೆಣ್ಣು ಆಫ್ರಿಕನ್ ಸಿಂಹಗಳ ಸಂತಾನೋತ್ಪತ್ತಿಯ ಬಗ್ಗೆ ಸಂಶೋಧನೆ ನಡೆಸುತ್ತಿರೋ ಪ್ರಿಟೋರಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಮರಿಗಳ ಜನನಕ್ಕೆ ಶ್ರಮಿಸಿದ್ದರು. ಕಳೆದ ಆಗಸ್ಟ್ 25ರಂದು ಒಂದು ಹೆಣ್ಣು ಹಾಗೂ ಒಂದು ಗಂಡು ಮರಿ ಜನಿಸಿದ್ದು ಮರಿಗಳು ಆರೋಗ್ಯವಾಗಿವೆ ಎಂದು ಪ್ರಿಟೋರಿಯಾ ವಿಶ್ವವಿದ್ಯಾಲಯದ ಮ್ಯಾಮಲ್ ರಿಸರ್ಚ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಆ್ಯಂಡ್ರಿ ಗ್ಯಾನ್ಸ್ವಿನ್ತ್ ಹೇಳಿದ್ದಾರೆ. ಆಂಡ್ರಿ ಅವರ ತಂಡ ಈ ಸಿಂಹದ ಮರಿಗಳ ಸಂತಾನಕ್ಕಾಗಿ 18 ತಿಂಗಳ ಕಾಲ ಪ್ರಯೋಗ ನಡೆಸಿತ್ತು.
ನಾವು ಆರೋಗ್ಯವಾಗಿದ್ದ ಸಿಂಹದಿಂದ ವೀರ್ಯ ಸಂಗ್ರಹಿಸಿದ್ದೆವು. ನಂತರ ಸಿಂಹಿಣಿಯ ಹಾರ್ಮೋನ್ ಮಟ್ಟ ಸೂಕ್ತವಾಗಿದೆ ಎಂದೆನಿಸಿದಾಗ ಕೃತಕ ಗರ್ಭಧಾರಣೆ ಮಾಡಲಾಯಿತು. ನಮ್ಮ ಅದೃಷ್ಟಕ್ಕೆ ಅದು ಯಶಸ್ವಿಯೂ ಆಯಿತು. ಇದಕ್ಕಾಗಿ ಸಾಕಷ್ಟು ಯತ್ನಗಳನ್ನ ಮಾಡಬೇಕಾಯಿತು. ಆದ್ರೆ, ಹೆಚ್ಚೇನೂ ಕಷ್ಟವಾಗಲಿಲ್ಲ ಎಂದು ಆ್ಯಂಡ್ರಿ ಹೇಳಿದ್ದಾರೆ. ಇನ್ನು ಈ ವಿಧಾನವನ್ನು ಮುಂದೆಯೂ ಬಳಸಬಹುದಾಗಿದೆ. ಈ ತಂತ್ರದಿಂದ ಅಳಿವಿನಂಚಿನಲ್ಲಿರುವ ಸಿಂಹಗಳನ್ನು ರಕ್ಷಿಸಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ ಎಂದು ಅವರು ಹೇಳಿದ್ದಾರೆ.
26 ಆಫ್ರಿಕನ್ ದೇಶಗಳಲ್ಲಿ ಸಿಂಹಗಳು ಅಳಿವಿನಂಚಿನಲ್ಲಿದ್ದು, ಕಳೆದ ಎರಡು ದಶಕಗಳಲ್ಲಿ ಸಿಂಹಗಳ ಸಂಖ್ಯೆ 43% ಕುಸಿದಿದೆ. ಸದ್ಯ ಸುಮಾರು 20 ಸಾವಿರ ಸಿಂಹಗಳು ಮಾತ್ರ ಬದುಕುಳಿದಿವೆ ಎಂದು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ನ ವರದಿ ಹೇಳುತ್ತದೆ. ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಸಿಂಹಗಳ ಸಂತತಿಯೇ ನಶಿಸಿಹೋಗುತ್ತದೆ ಎಂದು ಆ್ಯಂಡ್ರಿ ಹೇಳಿದ್ದಾರೆ.
COMMENT
Photos

Readers Comments (0)