ಸೂಪರ್ ಬಗ್ ಗಳ ಕಾಟ ಅಸದಳ

June 13, 2019 ⊄   By: Hasiru Suddimane

ಆಹಾರದಲ್ಲಿ ಜೀವಿರೋಧಕಗಳ ಶೇಷಾಂಶ ಹೆಚ್ಚುತ್ತಿದೆ. ಇದರಿಂದ ರೋಗವೊಂದರ ಉಪಶಮನಕ್ಕೆ ಜೀವಿರೋಧಕ ನೀಡಿದರೂ, ನಿಯಂತ್ರಣ ಇಲ್ಲವೇ ಗುಣಪಡಿಸುವಿಕೆ ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಸ್ವಯಂ ವೈದ್ಯರು ಹೆಚ್ಚು ಇರುವುದರಿಂದ, ಜಗತ್ತಿನ ಅತ್ಯಂತ ಹೆಚ್ಚು ಜೀವಿರೋಧಕ ಬಳಸುವ ದೇಶವಾಗಿದೆ. ಅತಿ ಬಳಕೆ ಹಾಗೂ ದುರ್ಬಳಕೆ ಸಾಂಕ್ರಾಮಿಕವಾಗಿದೆ. ಇದರಿಂದ ಯಾವುದೇ ಜೀವಿರೋಧಕಕ್ಕೆ ಸೊಪ್ಪು ಹಾಕದ "ಸೂಪರ್ ಬಗ್’ ಗಳು ಹೆಚ್ಚಿವೆ. ರೋಗಗಳನ್ನು ಗುಣಪಡಿಸುವುದು ದಿನೇದಿನೆ ಕಠಿಣವಾಗುತ್ತಿದೆ
.
ಬ್ಯಾಕ್ಟೀರಿಯಾಗಳಿಂದ ಆಗುವ ಸೋಂಕನ್ನು ಗುಣ ಪಡಿಸಲು ಹಾಗೂ ತಡೆಯಲು ಆಂಟಿಬಯಾಟಿಕ್ಗಳನ್ನು ಬಳಸಲಾಗುತ್ತದೆ. ಇವು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಇಲ್ಲವೇ ಬೆಳವಣಿಗೆಯನ್ನು ತಡೆಯುವ ಮೂಲಕ ಕಾರ್ಯ ನಿರ್ವಹಿಸುತ್ತವೆ. ಕಾಲಕ್ರಮೇಣ ಬ್ಯಾಕ್ಟೀರಿಯಾಗಳು ಜೀವಿರೋಧಕಗಳಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುತ್ತವೆ. ಇದರಿಂದ ರೋಗ ಉಪಶಮನ ನಿಧಾನವಾಗುತ್ತದೆ ಮತ್ತು ಮರಣದ ಸಾಧ್ಯತೆಗಳು ಹೆಚ್ಚುತ್ತವೆ. ಔಷಧ ಕಾರ್ಖಾನೆಗಳು ತ್ಯಾಜ್ಯವನ್ನು ನದಿಗಳಿಗೆ-ಜಲಮೂಲಗಳಿಗೆ ಹರಿಸುವುದು ಹಾಗೂ ಪಶುಸಂಗೋಪನೆಯಲ್ಲಿ ಜೀವಿರೋಧಕಗಳ ಅತಿ ಬಳಕೆಯಿಂದಾಗಿ, ಸೂಪರ್ ಬಗ್ ಗಳು ಸೃಷ್ಟಿಯಾಗಿವೆ.

ಕೋಳಿ ಸಾಕಣೆ ಕ್ಷೇತ್ರದಲ್ಲಿ ಜೀವಿರೋಧಕಗಳ ಬಳಕೆ ಹೆಚ್ಚಿದ್ದು, ಇದರಿಂದ ಮಾಂಸ ಹಾಗೂ ಮೊಟ್ಟೆಗಳಲ್ಲಿ ಜೀವಿರೋಧಕದ ಶೇಷಾಂಶ ಪತ್ತೆಯಾಗಿದೆ. ಪಶು ಆಹಾರದಲ್ಲಿ ಜೀವಿರೋಧಕಗಳ ಅತಿ ಬಳಕೆ ಇದಕ್ಕೆ ಕಾರಣ ಎಂದು ಆಕ್ಟಾ ಸೈಂಟಿಫಿಕ್ ಮೈಕ್ರೋ ಬಯಾಲಜಿ ವರದಿ ಮಾಡಿದೆ.

ಇದರ ತಡೆಗೆ ಮಾರ್ಗವಿದೆ: ಮೊದಲಿಗೆ,

1. ವೈದ್ಯರ ಸಲಹೆ ಇಲ್ಲದೆ ನಮಗಿಷ್ಟ ಬಂದಂತೆ ಜೀವಿರೋಧಕಗಳ ಬಳಕೆ ಕೂಡದು
2. ವೈದ್ಯರು ಐದು ದಿನ ಜೀವಿರೋಧಕ ಬಳಕೆ ಮಾಡಬೇಕು ಎಂದಿದ್ದಲ್ಲಿ, ಕಾಯಿಲೆ ಗುಣವಾಯಿತು ಎಂದು ಅರ್ಧದಲ್ಲೇ ನಿಲ್ಲಿಸಿಬಿಡಬಾರದು. ಇದರಿಂದ ಹೆಚ್ಚು ಹಾನಿಯಾಗಲಿದೆ
3. ಇಬ್ಬರು ವ್ಯಕ್ತಿಗಳಲ್ಲಿ ರೋಗದ ಚಿನ್ಹೆ ಒಂದೇ ರೀತಿ ಇದೆ ಎಂದಾದಲ್ಲಿ ಅವರು ಬಳಸುತ್ತಿರುವ ಜೀವಿರೋಧಕ ಇಲ್ಲವೇ ಬಳಸಿ ಉಳಿದುಕೊಂಡ ಔಷಧ ಬಳಸಕೂಡದು. ಅದೇ ರೀತಿ ಸ್ವಯಂ ವೈದ್ಯ ಕೂಡದು
4. ಜೀವಿರೋಧಕಗಳ ಶೇಷಾಂಶ ಇಲ್ಲದೆ ಇರುವ ಆಹಾರ ಸೇವಿಸಿ. ಅತಿ ಹೆಚ್ಚು ಉಷ್ಣತೆಯಲ್ಲಿ ಮಾಶವನ್ನು ಬೇಯಿಸಿದಾಗ, ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಆದರೆ, ಉಷ್ಣತೆ ಜೀವಿರೋಧಕಗಳನ್ನು ಛಿದ್ರಗೊಳಿಸುವುದಿಲ್ಲ.
5. ಆಹಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ಮಾನದಂಡಗಳನ್ನು ಅನುಸರಿಸಬೇಕು: ಹಸಿ ಹಾಗೂ ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿಡಿ. ಆಹಾರವನ್ನು ಚನ್ನಾಗಿ ಬೇಯಿಸಿ ಮತ್ತು ಶುದ್ಧ ನೀರು-ಪಾತ್ರಗಳು ಹಾಗೂ ಕಚ್ಚಾ ವಸ್ತುಗಳನ್ನು ಬಳಸಿ.


ಮೊದಲಿಗೆ, ಪ್ರಾಣಿಗಳಲ್ಲಿ ಜೀವಿರೋಧಕವನ್ನು ಬೆಳವಣಿಗೆ ಉತ್ತೇಜಕವಾಗಿ ಬಳಸುವುದನ್ನು ತಡೆಯಬೇಕು. ಭಾರತ ಮೈಕ್ರೋಬಿಯಲ್ ಪ್ರತಿರೋಧಕತೆ ಕ್ರಿಯಾಯೋಜನೆ(ಎಎಂಆರ್)ಯನ್ನು ರೂಪಿಸಿದ್ದರೂ, ಈವರೆಗೆ ಯಾವುದೇ ಕೆಲಸ ನಡೆದಿಲ್ಲ. ಕೊಲಿಸ್ಟೀನ್ ದುರ್ಬಳಕೆಯಾಗುತ್ತಿದೆ ಎನ್ನುವುದು ಗೊತ್ತಿದ್ದರೂ, ತಡೆಯುವ ಪ್ರಯತ್ನವೂ ನಡೆದಿಲ್ಲ.
ತಾವು ಸೇವಿಸುವ ಆಹಾರದಲ್ಲಿ ಜೀವಿರೋಧಕ ಇದೆಯೇ ಎನ್ನುವುದನ್ನು ಪತ್ತೆ ಹಚ್ಚುವುದು ಗ್ರಾಹಕರಿಗೆ ಸಾಧ್ಯವಿಲ್ಲ. ಆದರೆ, ಕೋಳಿ/ಕುರಿ/ಮೇಕೆ ಸಾಕಣೆದಾರರು ಅನಗತ್ಯವಾಗಿ ಜೀವಿರೋಧಕ ಬಳಕೆ ನಿಲ್ಲಿಸಬೇಕು. ಇದಕ್ಕಾಗಿ, ಪಶು ವೈದ್ಯರ ದೇಖರೇಖೆಯಲ್ಲಿ ಜೀವಿರೋಧಕ ಕೊಡಬೇಕು. ಆರೋಗ್ಯವಂತ ಪಶುಗಳಿಗೆ ರೋಗ ಬಾರದಂತೆ ತಡೆಯಲು ಇಲ್ಲವೇ ಬೆಳವಣಿಗೆಯನ್ನು ಉತ್ತೇಜಿಸಲು ಜೀವಿರೋಧಕಗಳನ್ನು ನೀಡಬಾರದು. ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ವ್ಯಾಕ್ಸೀನ್ ಹಾಕಿಸಿದರೆ, ರೋಗದ ಸಾಧ್ಯತೆ ಕಡಿಮೆಯಾಗುತ್ತದೆ. ಸಸ್ಯ ಇಲ್ಲವೇ ಪ್ರಾಣಿ ಮೂಲಗಳಿಂದ ಆಹಾರ ಉತ್ಪಾದನೆ-ಸಂಸ್ಕರಣೆ ವೇಳೆ ಉತ್ತಮ ತಯಾರಿಕೆ ವಿಧಾನ(ಜಿಎಂಪಿ)ಗಳನ್ನು ಬಳಸಬೇಕು ಮತ್ತು ಸಾಕು ಪ್ರಾಣಿಗಳಿರುವ ಕೊಟ್ಟಿಗೆ-ರೊಪ್ಪವನ್ನು ಶುಚಿಯಾಗಿರಿಸಿ ಕೊಳ್ಳುವ ಮೂಲಕ ಸೋಂಕು ಹರಡದಂತೆ ನೋಡಿಕೊಳ್ಳಬೇಕು.
ಮಾಂಸ-ಮೊಟ್ಟೆ ಇತ್ಯಾದಿ ಕೊನೆಗೆ ಸೇರುವುದು ಮನುಷ್ಯನ ಹೊಟ್ಟೆಯನ್ನು. ಪ್ರಾಣಿಗಳಲ್ಲಿ ಜೀವಿರೋಧಕಗಳ ಬಳಕೆಯನ್ನು ತಡೆಯದಿದ್ದರೆ, ಅದು ಮನುಷ್ಯನಲ್ಲೂ ಜೀವಿರೋಧಕ ಪ್ರತಿರೋಧಕತೆಗೆ ಕಾರಣವಾಗುತ್ತದೆ. ಇದು ಒಳ್ಳೆಯ ಪರಿಸ್ಥಿತಿಯಲ್ಲ.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.