ಗಂಗೆಯ ಮಡಿಲು ಸೇರಿದ ಸಾನಂದ ಸ್ವಾಮೀಜಿ

October 11, 2018 ⊄   By: Hasiru Suddimane

ಗಂಗೆಯ ಉಳಿವಿಗಾಗಿ ಸತತ 113 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀ ಜ್ಞಾನಸ್ವರೂಪ ಸಾನಂದ ಸ್ವಾಮೀಜಿ ಹೃಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸ್ವಾಮೀಜಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿ ಬಳಿಕ ಸನ್ಯಾಸ ಸ್ವೀಕರಿಸಿದ್ದರು, ತಮ್ಮ ಇಡೀ ಜೀವನವನ್ನು ನದಿ ರಕ್ಷಣೆಗಾಗಿಯೇ ಮುಡಿಪಾಗಿಟ್ಟಿದ್ದರು. ಗಂಗೆಯ ಸ್ವಾಭಾವಿಕ ಹರಿವಿಗೆ ಅಡ್ಡಿಯುಂಟು ಮಾಡುತ್ತಿದ್ದ ಯೋಜನೆಗಳ ಹಾಗೂ ಕ್ರಮಗಳನ್ನು ವಿರೋಧಿಸಿ ಜೂನ್ 22ರಿಂದಲೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ವಾಮೀಜಿಯ ಆರೋಗ್ಯ ಗಂಭೀರ ಸ್ಥಿತಿ ತಲುಪಿತ್ತು.


ಇಡೀ ದೇಶದ ಪರಿಸರ ತಜ್ಞರು ಯಾರ ಮುಂದೆ ನಡು ಬಗ್ಗಿಸಿ ನಿಲ್ಲುತ್ತಿದ್ದರೋ, ಯಾರು ಗಂಗೆಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಿದ್ದಾರೊ, ಅಂಥ ಪವಿತ್ರ ದೇವನದಿಯ ಸಂರಕ್ಷಣೆಗಾಗಿಯೇ ತಮ್ಮ 80ರ ಇಳಿವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿದ್ದರೋ ಅಂಥ ಮಹಾನ್ ಚೇತನ, ಜ್ಞಾನಸ್ವರೂಪ ಸ್ವಾನಂದ ಸ್ವಾಮೀಜಿ ಸ್ವತಃ ನಿರಶನ ಕುಳಿತು 113 ದಿನಗಳಾಗಿದ್ದವು. ನಿನ್ನೆ (10, ಅಕ್ಟೋಬರ್ 2018)ಯಿಂದ ನೀರನ್ನೂ ತ್ಯಜಿಸಿದ್ದರು. ಕೊನೆಗೂ ಅವರ ಹೋರಾಟಕ್ಕೆ ಸಿಕ್ಕ ಫಲ ಬಂಧನ, ಮೊಕದ್ದಮೆ, ಕೊನೆಗೆ ಪ್ರಾಣ ತ್ಯಾಗ. ಅಷ್ಟು ದಿನಗಳ ನಿರಾಹಾರದ ನಂತರವೂ ಅದೇ ಅಭೋದ ನಗುವಿನೊಂದಿಗೆ, ಆದರೆ ಅಷ್ಟೇ ದೃಡ ಮನಸ್ಸಿನೊಂದಿಗೆ ಹಠಕ್ಕೆ ಬಿದ್ದು ಇಹಲೋಕ ತ್ಯಜಿಸಿಬಿಟ್ಟರು.
ಇದು ಎರಡನೇ ಬಾರಿ ಹೀಗಾಗುತ್ತಿರುವುದು. 2011ರ ಜೂನ್ 13 ರಂದು ಸತತ 115 ದಿನ ಉಪವಾಸ ಕುಳಿತ ಬಳಿಕ ಹರಿದ್ವಾರದ ಸನ್ಯಾಸಿ ಸ್ವಾಮಿ ನಿಗಮಾನಂದರು ಇಹಲೋಕ ತ್ಯಜಿಸಿದ್ದರು.

ಸಾನಂದ ಸ್ವಾಮೀಜಿ ಪರಿಚಯ
ಜಿ.ಡಿ. ಅಗರ್‌ವಾಲ್ ಜನಿಸಿದ್ದು 1932ರಲ್ಲಿ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಕಂಧ್ಲಾ ಎಂಬಲ್ಲಿ. ಅದು ಸಾಮಾನ್ಯ ಕೃಷಿಕ ಕುಟುಂಬ. ಅಲ್ಲಿಯೇ ಆರಂಭಿಕ ಶಿಕ್ಷಣ. ನಂತರ ರೂರ್ಕೀ ವಿಶ್ವವಿದ್ಯಾಲಯದಲ್ಲಿ (ಈಗಿನ ಐಐಟಿ ರೂರ್ಕೀ) ಸಿವಿಲ್ ಎಂಜಿನಿಯರಿಂಗ್ ಪದವಿ. ದಿಸೈನಿಂಗ್ ಎಂಜಿನಿಯರ್ ಆಗಿ ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ವೃತ್ತಿ ಆರಂಭ. ಜ್ಞಾನದ ಹಸಿವಿಗೆ ವಿರಾಮವೆಲ್ಲಿ? ಅಮೆರಿಕದ ಬರ್ಕ್ಲಿಯಲ್ಲಿನ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪಿಎಚ್.ಡಿ. ಗಳಿಕೆ. ಆಗಲೇ ವಿಶ್ವಮಾನ್ಯ ಪರಿಸರ ಎಂಜಿನಿಯರ್ ಎನಿಸಿದ್ದು. ಐಐಟಿ ಕಾನ್ಪುರದಲ್ಲಿ ಪ್ರಾಧ್ಯಾಪಕ ಹುದ್ದೆ ಕೈಬೀಸಿ ಕರೆಯಿತು. ವಿಭಾಗ ಮುಖ್ಯಸ್ಥರಾಗಿ ಹಾಗೂ ಡೀನ್ ಆಗಿಯೂ ಸೇವೆ ಸಲ್ಲಿಸಿದರು. ಅತ್ಯಂತ ಪ್ರಭಾವೀ ವೈಜ್ಞಾನಿಕ ಲೇಖನಗಳು ಸರಣಿಯಾಗಿ ಹರಿದು ಬಂದವು. ಹತ್ತಾರು ಮಂದಿಗೆ ಸ್ನಾತಕೋತ್ತರ ಹಾಗೂ ಪಿಎಚ್.ಡಿ.ಗಳಿಗೆ ಮಾರ್ಗದರ್ಶಕರಾದರು. ಜೀವನದ ಅತಿ ಮುಖ್ಯ ಘಟ್ಟ ತಲುಪಿದ್ದರು ಅಗರ್‌ವಾಲ್‌ಜಿ. ಭಾರತ ಸರ್ಕಾರದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿ (ಸೆಂಟ್ರಲ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್-ಸಿಪಿಸಿಬಿ) ಯ ಮೊದಲ ಸದಸ್ಯ-ಕಾರ್ಯದರ್ಶಿಯಾದರು. ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ರಕ್ಷಣೆಯ ಕಾಯ್ದೆ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ನಿರಂತರ ಹೋರಾಟ
ಮನೇರಿ ಭಾಲಿಯ ಕೆಳ ಪ್ರದೇಶಗಳಲ್ಲಿ ಭಾಗೀರಥಿಯೇ ಕಣ್ಮರೆಯಾಗಿದ್ದನ್ನು ಕಂಡು 2008ರ ರಾಮನವಮಿಯ ದಿನ ‘ಉಳಿದ ನನ್ನ ಜೀವಿತ ಗಂಗೆಗೇ ಸಮರ್ಪಿತ’ ಎಂದು ಘೋಷಿಸಿದ ಅಗರವಾಲರು ಸಂನ್ಯಾಸ ಸ್ವೀಕರಿಸಿದ್ದರು. ವೈಜ್ಞಾನಿಕ ವಿಮರ್ಶೆಗಳಲ್ಲಿ ಸಿದ್ಧಹಸ್ತರಾದ ಸ್ವಾಮೀಜಿ, ಈ ದೇಶದ ಅಧ್ಯಾತ್ಮಿಕ ಸೊಬಗಿಗೆ ಶರಣಾಗಿ ಅಂದಿನಿಂದ ಗಂಗಾ ತಪಸ್ಯ ಕೈಗೊಂಡಿದ್ದರು.
ಇದಕ್ಕೂ ಮೊದಲು ಮಧ್ಯಪ್ರದೇಶದ ಅಮರಕಂಟಕ್ ಗಂಗೆಯ ರಕ್ಷಣೆಗಾಗಿ ಆಗ್ರಹಿಸಿ ಜನವರಿ 26, 2011ರಲ್ಲೂ ತಮ್ಮ ನಿರಶನ ಆರಂಭಿಸಿದ್ದರು. ಕೇದಾರದಲ್ಲಿ ಜಲ ಪ್ರಳಯ ಸಂಭವಿಸುವ 3 ದಿನ ಮುಂಚೆ(ಜೂನ್ 13, 2013)ಯಷ್ಟೇ ಮತ್ತೊಮ್ಮೆ ಇದೇ ಕಾರಣಕ್ಕೆ ನಿರಶನ ಕುಳಿತಿದ್ದರು. ಈ ಬಾರಿ ಮನೇರಿ ಭಾಲಿ ಯೋಜನೆಯ ದುಷ್ಪರಿಣಾಮ, ಉತ್ತರಾಖಾಂಡ್‌ನ ಗಣಿಗಾರಿಕೆಯ ಅಪಾಯ ಎರಡೂ ಗಂಗೆಗೆ ತಂದಿತ್ತ ದುಸ್ಥಿತಿಯ ವಿರುದ್ಧ ಸ್ವಾಮೀಜಿ ನಿರಶನ ಕುಳಿತಿದ್ದರು. ಗಂಗೆಯ ಮಡಿಲಲ್ಲಿ ಕೈಗೆತ್ತಿಕೊಂಡಿರುವ ಜಲ ವಿದ್ಯುತ್ ಯೋಜನೆ ಹಾಗೂ ಆಣೆಕಟ್ಟುಗಳಿಂದಾಗಿ 50 ಕಿಮೀಗೂ ಹೆಚ್ಚು ದೂರ ಗಂಗೆ ಗುಪ್ತಗಾಮಿನಿಯಾಗಿ ಹೋಗುವ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದರು. ಗಂಗೆಯ ರಕ್ಷಣೆಗಾಗಿ ಈ ದೇಶದಲ್ಲಿ ಪ್ರತ್ಯೇಕ ನೀತಿಯೊಂದರ ಅಗತ್ಯವಿದೆ ಎಂಬುದು ಸಾನಂದ ಸ್ವಾಮೀಜಿಯವರ ಈಗಿನ ಪ್ರತಿಪಾದನೆಯಾಗಿತ್ತು. ಇದಕ್ಕಾಗಿ ಅವರು ಹೋರಾಡುತ್ತಲೇ ಬಂದಿದ್ದರು.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಚಹಾದ ಗುಣಮಟ್ಟ ಹೆಚ್ಚಳಕ್ಕೆ ಕೃತಕ ಬುದ್ಧಿಮತ್ತೆ
ಚಹಾದ ಗುಣಮಟ್ಟ ಹೆಚ್ಚಳಕ್ಕೆ ಕೃತಕ ಬುದ್ಧಿಮತ್ತೆ
May 16, 2019

ಚಹಾದ ಗುಣಮಟ್ಟವನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಆಧರಿಸಿದ ತಂತ್ರಜ್ಞಾನವನ್ನು ಬಳಸಲು ಚಹಾ ಸಂಶೋಧನಾ ಸಂಸ್ಥೆ(ಟಿಆರ್ ಎ) ಮುಂದಾಗಿದೆ.